Rangaswamy Mookanahalli Column: ಪಾದೋಪಚಾರ ಎಂಬ ಬಹುಕೋಟಿ ಉದ್ಯಮ !
ಇನ್ನು ಕಿವಿ, ಕಣ್ಣು, ಕಿಡ್ನಿ, ಮೂಗು, ಜಠರ, ಹೃದಯದ ಕಥೆ ಕೇಳುವುದೇ ಬೇಡ. ಅವಕ್ಕೆ ನಾವು ಇನ್ನಿಲ್ಲದ ಪ್ರಾಮುಖ್ಯವನ್ನು ನೀಡಿದ್ದೇವೆ, ನೀಡುತ್ತೇವೆ. ಅದರಲ್ಲಿ ತಪ್ಪೇನಿಲ್ಲ. ಏಕೆಂದರೆ, ಅವುಗಳ ಪೈಕಿ ಯಾವೊಂದು ಅಂಗ ಕೈಕೊಟ್ಟರೂ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಆದರೆ, ನಮ್ಮ ದೇಹ ದಲ್ಲಿನ ಒಂದು ವಿಷಯದ ಬಗ್ಗೆ ನಮ್ಮದು ದಿವ್ಯಮೌನ, ಇನ್ನಿಲ್ಲದ ಅಸಡ್ಡೆ
Source : Vishwavani Daily News Paper
ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
‘ಪೆಡಿಕ್ಯೂರ್’, ಅಂದರೆ ‘ಪಾದೋಪಚಾರ’ ಉದ್ಯಮಕ್ಕೆ ಅಗಾಧ ಮಾರುಕಟ್ಟೆಯಿದೆ! ಈಗ ನಾನು ಹೇಳುವ ಸಂಖ್ಯೆ ನಂಬುವುದಕ್ಕೆ ಸ್ವಲ್ಪ ಕಷ್ಟವಾಗಬಹುದು, ಆದರೆ ಇದು ಸತ್ಯ. ಕಾಲಿನ ಸೀಳು ಗಳನ್ನು ಹೋಗಲಾಡಿಸುವ ಕ್ರೀಮುಗಳ ವ್ಯಾಪಾರವು ಭಾರತದಲ್ಲಿ ವರ್ಷವೊಂದರಲ್ಲಿ 60-80 ಕೋಟಿ ರುಪಾಯಿ ವಹಿವಾಟು ನಡೆಸುತ್ತದೆ.
ನಮ್ಮ ದೇಹದಲ್ಲಿ ಅದೆಷ್ಟು ಅಂಗಗಳಿವೆ ನೋಡಿ, ಅವೆಲ್ಲವೂ ಸುಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ ರಷ್ಟೇ ನಾವು! ಯಾವೊಂದು ಅಂಗ ಸರಿಯಾಗಿ ಕೆಲಸ ಮಾಡದಿದ್ದರೂ ನಾವೊಂದು ‘ದೊಡ್ಡ ಸೊನ್ನೆ’! ಬೆರಳಿಗೆ ಸಣ್ಣ ಗಾಯವಾಗಿದ್ದರೂ ಸಾಕು, ಪ್ಯಾಂಟು-ಶರ್ಟಿನ ಗುಂಡಿಯನ್ನು ಸರಿಯಾಗಿ ಹಾಕಲೂ ಸಾಧ್ಯವಾಗುವುದಿಲ್ಲ.
ಇನ್ನು ಕಿವಿ, ಕಣ್ಣು, ಕಿಡ್ನಿ, ಮೂಗು, ಜಠರ, ಹೃದಯದ ಕಥೆ ಕೇಳುವುದೇ ಬೇಡ. ಅವಕ್ಕೆ ನಾವು ಇನ್ನಿಲ್ಲದ ಪ್ರಾಮುಖ್ಯವನ್ನು ನೀಡಿದ್ದೇವೆ, ನೀಡುತ್ತೇವೆ. ಅದರಲ್ಲಿ ತಪ್ಪೇನಿಲ್ಲ. ಏಕೆಂದರೆ, ಅವುಗಳ ಪೈಕಿ ಯಾವೊಂದು ಅಂಗ ಕೈಕೊಟ್ಟರೂ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಆದರೆ, ನಮ್ಮ ದೇಹ ದಲ್ಲಿನ ಒಂದು ವಿಷಯದ ಬಗ್ಗೆ ನಮ್ಮದು ದಿವ್ಯಮೌನ, ಇನ್ನಿಲ್ಲದ ಅಸಡ್ಡೆ.
ಅದನ್ನು ನಿರ್ಲಕ್ಷಿಸಿದಷ್ಟು ಇನ್ನಾವ ಭಾಗವನ್ನೂ ನಾವು ನಿರ್ಲಕ್ಷಿಸಿಲ್ಲ. ಜೀವವಿಲ್ಲದ ನಮ್ಮ ಕಾರನ್ನು, ಷೋರೂಮ್ ನವರು ಹೇಳಿದ ಸಮಯಕ್ಕೆ ಅಲ್ಲಿಗೆ ಬಿಡುತ್ತೇವೆ, ಹೊಸದಾಗಿ ಕಾಣುವಂತೆ ಅದನ್ನು ಮೇಂಟೇನ್ ಮಾಡುತ್ತೇವೆ. ತಪ್ಪಿಲ್ಲ ಬಿಡಿ. ಹಾಗೆಯೇ, ಅದಕ್ಕೆ ವಿಮೆ ಕೂಡ ಮಾಡಿಸುತ್ತೇವೆ, ಏಕೆಂದರೆ ಕಾರಿಗೆ ವಿಮೆ ಕಡ್ಡಾಯ!
ಜೀವವಿರುವ ಮನುಷ್ಯನಿಗೆ ವಿಮೆ ಕಡ್ಡಾಯವಿಲ್ಲ. ಜೀವವಿಲ್ಲದ ವಸ್ತುಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ನಾವು, ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಕಮ್ಮಿ; ಆ ಪರಿಪಾಠವನ್ನು ಆದ್ಯತೆಯ ಪಟ್ಟಿಯಲ್ಲಿ ಕೊನೆಗೆ ತಳ್ಳಿಬಿಡುತ್ತೇವೆ. ಏಕೆಂದರೆ, ಅದು ಕಡ್ಡಾಯವಲ್ಲ ನೋಡಿ! ಮೊದಲೇ ಹೇಳಿದಂತೆ, ನಮ್ಮ ಕಣ್ಣು, ಮೂಗು, ತಲೆ, ಹೃದಯ, ಕಿಡ್ನಿಗಳು ಇದ್ದುದರಲ್ಲಿ ಪ್ರಾಮುಖ್ಯ ವನ್ನು ಪಡೆಯುತ್ತವೆ.
ಕೈ, ಕೂದಲು, ಚರ್ಮ ಕೂಡ ‘ಪರವಾಗಿಲ್ಲ’ ಎನ್ನುವ ಅಟೆನ್ಷನ್ ಪಡೆದುಕೊಳ್ಳುತ್ತವೆ. ಕೈಗೆ ಕಡಗ, ಬ್ರೇಸ್‌ಲೆಟ್ ತೊಡಿಸುತ್ತೇವೆ. ಚಳಿಗಾಲದಲ್ಲಿ ಅದಕ್ಕೆ ಕ್ರೀಮು ಹಚ್ಚುತ್ತೇವೆ. ಆದರೆ, ನಮ್ಮನ್ನು ಎಲ್ಲೆಡೆ ಹೊತ್ತು ಓಡಾಡುವ ಕಾಲಿದೆಯಲ್ಲಾ, ಅದನ್ನು ಕಂಡಷ್ಟು ನಿಕೃಷ್ಟವಾಗಿ ನಾವು ದೇಹದ ಇನ್ನಾವ ಭಾಗವನ್ನೂ ಕಾಣುವುದಿಲ್ಲ.
ಕಾಲೆಂದರೆ ನಮಗೆ ಅಸಡ್ಡೆ. ನೀವೇ ಗಮನಿಸಿ ನೋಡಿ, ‘ಅವನು ನನಗೆ ಕೈಯಲ್ಲಿ ಹೊಡೆದ’ ಎಂದು ಕಂಪ್ಲೇಂಟ್ ಮಾಡುವವರು ವಿರಳ. ಆದರೆ, ಕಾಲಿನಲ್ಲಿ ಒದ್ದರೆ ಅಲ್ಲಿಗೆ ಮುಗಿಯಿತು. ‘ಅವನು ಕಾಲಿನಲ್ಲಿ ಒದ್ದ’ಎನ್ನುವುದು ದೊಡ್ಡ ಸುದ್ದಿಯಾಗುತ್ತದೆ. ಕಾಲಿನಲ್ಲಿ ಒದೆಸಿಕೊಳ್ಳುವುದು ಅವ ಮಾನ ಎನಿಸಿಕೊಳ್ಳುತ್ತದೆ.
ಯಾರಿಗಾದರೂ ಕೈ ತಾಗಿದರೆ ಹೆಚ್ಚೆಂದರೆ ನಾವು ‘ಸಾರಿ’ ಹೇಳಬಹುದು, ಅದೇ ಕಾಲು ತಾಗಿದರೆ ಅವ ರನ್ನು ಸ್ಪರ್ಶಿಸಿ ಕಣ್ಣಿಗೆ ಒತ್ತಿಕೊಳ್ಳುತ್ತೇವೆ. ಇತರರಿಗೆ ಕಾಲು ತಾಗಿದರೆ ಅದೇಕೆ ಅಷ್ಟೊಂದು ಮರ್ಯಾದೆ ನೀಡಿ ಗೌರವಿಸಬೇಕು? ಇದರರ್ಥ, ಕಾಲಿನಲ್ಲಿ ಒದೆಯಬೇಕು ಎಂದಲ್ಲ, ಆದರೆ ಅರಿ ವಿಲ್ಲದೆ ಕಾಲು ತಾಗಿದರೂ ನಾವು ಅದನ್ನು ಅಷ್ಟೊಂದು ದೊಡ್ಡದು ಮಾಡುವುದೇಕೆ? ಕಾಲು
ಎಂದರೆ ನಮಗೇಕೆ ಇಷ್ಟೊಂದು ಅಸಡ್ಡೆ? ಬೇರೆಯವರನ್ನು ಕಾಲಿನಿಂದ ಒದೆಯುವುದು, ಸ್ಪರ್ಶಿಸು ವುದು ದೊಡ್ಡದಾಯ್ತು.
‘ನಮ್ಮ ಒಂದು ಕಾಲಿನಿಂದ ಇನ್ನೊಂದು ಕಾಲನ್ನು ಸ್ಪರ್ಶಿಸುವಂತಿಲ್ಲ’ ಎನ್ನುವ ಹಿರಿಯರ ಮಾತನ್ನು ಕೇಳಿದ್ದೇನೆ. ಒಂದು ಕಾಲಿನಿಂದ ಇನ್ನೊಂದು ಕಾಲನ್ನು ತಿಕ್ಕುವುದು, ಸ್ವಚ್ಛಮಾಡುವುದು ಕೂಡ ಮಾಡಬಾರದಂತೆ! ಕೈಯಿಂದ ಕಾಲನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎನ್ನುತ್ತಾರೆ. ಇವೆಲ್ಲವೂ ಯಾವುದೋ ಒಂದು ನಿಖರ ಕಾರಣವಿಟ್ಟುಕೊಂಡು ನಮ್ಮ ಹಿರಿಯರು ಮಾಡಿರುವಂಥ ನಿಯಮ ಗಳು.
ಊರೆಲ್ಲಾ ಸುತ್ತಾಡುವುದರಿಂದ ಕಾಲಿನ ಸ್ವಚ್ಛತೆ ಕಡಿಮೆ ಎನ್ನುವ ಕಾರಣಕ್ಕೆ ಕಾಲನ್ನು ಕಡೆಗಣಿಸ ಲಾಗಿದೆಯೇ? ಕಾಲನ್ನು ನಾವು ಅಷ್ಟೊಂದು ಕೀಳಾಗಿ ಕಾಣುತ್ತೇವೆ ಅಂದ ಮೇಲೆ, ನಮ್ಮ ಮನೆಯ ಹಿರಿಯರ ಮತ್ತು ಗುರುಗಳ ಕಾಲಿಗೆ ನಮಸ್ಕರಿಸುವಂತೆ ಹೇಳುವುದೇಕೆ? ಪಾದಸ್ಪರ್ಶ ಮಾಡಿ ನಮಸ್ಕರಿಸುವುದು ಅದೇಕೆ ಹಿಂದೂ ಸಂಪ್ರದಾಯವಾಗಿದೆ? ಜಿಜ್ಞಾಸೆ ಶುರುವಾಗುವುದೇ ಇಲ್ಲಿಂದ! ಬದುಕಿನ ಒಂದು ಕಡೆ ನಾವು ಕಾಲನ್ನು, ‘ಕಾಲ ಕೆಳಗಿನ ಕಸ’ಕ್ಕಿಂತ ಕೀಳಾಗಿ ಕಾಣುತ್ತೇವೆ.
ಅದೇ ಬದುಕಿನಲ್ಲಿ ಅದೇ ಕಾಲಿಗೆ ಗೌರವವನ್ನೂ ನೀಡುತ್ತೇವೆ. ವ್ಯಕ್ತಿಯೊಬ್ಬರ ಕಾಲು ಮುಟ್ಟಿ ನಮಸ್ಕರಿಸುವುದು ಅವರಿಗೆ ನೀಡುವ ಅತ್ಯುನ್ನತ ಗೌರವ ಎಂದೇ ಭಾವಿಸಲಾಗುತ್ತದೆ. ಕಾಲು ‘ವಿಶೇಷ’ ಎನ್ನುವ ಕಾರಣಕ್ಕೆ ಅವರಿಗೆ ನಮಸ್ಕರಿಸುತ್ತೇವೆಯೋ ಅಥವಾ ವ್ಯಕ್ತಿಯ ನಿಕೃಷ್ಟ ಪಾದಕ್ಕೆ ನಮಸ್ಕರಿಸುವ ಮೂಲಕ ‘ನೋಡಿ, ನಿಮ್ಮ ದೇಹದ ನಿಕೃಷ್ಟ ಭಾಗಕ್ಕೆ ನಾನು ಇಷ್ಟು ಗೌರವ ಕೊಡುತ್ತಿದ್ದೇನೆ ಅಂದ ಮೇಲೆ, ನಿಮಗೆ ಇನ್ನೂ ಹೆಚ್ಚಿನ ಗೌರವ ನೀಡುತ್ತಿದ್ದೇನೆ’ ಎನ್ನುವ ಸಂದೇಶ ರವಾನಿಸುತ್ತಿದ್ದೇವೆಯೋ ಎನ್ನುವ ಗೊಂದಲ ಉಂಟಾಗುತ್ತದೆ.
ಈ ಗೊಂದಲ ಸೃಷ್ಟಿಯಾಗಲು ಕಾರಣ ‘ತಲೆ’. ಹೌದು, ಮನುಷ್ಯನ ದೇಹದಲ್ಲಿ ತಲೆಯನ್ನು ‘ಅತ್ಯಂತ ಪ್ರಮುಖ’ ಎಂದು ಭಾವಿಸಲಾಗಿದೆ. ಇಂಥ ಶ್ರೇಷ್ಠ ತಲೆಯನ್ನು ಇನ್ನೊಬ್ಬ ವ್ಯಕ್ತಿಯ ನಿಕೃಷ್ಟ ಪಾದಕ್ಕೆ ಎರಗಿಸುವ ಮೂಲಕ ನಾವು ಹೇಳಲು ಹೊರಟಿದ್ದೇನು? ಎನ್ನುವುದಷ್ಟೇ ನನ್ನ ಪ್ರಶ್ನೆ. ಉಳಿದಂತೆ, ಮತ್ತೊಬ್ಬರಿಗೆ ತಲೆಬಾಗುವುದು, ಪಾದ ಸ್ಪರ್ಶಿಸಿ ನಮಸ್ಕರಿಸುವುದು ತಪ್ಪು ಎನ್ನುವುದು ನನ್ನ ಮಾತಿನ ಅರ್ಥವಲ್ಲ.
ನಾನು ಕೂಡ ಗುರು-ಹಿರಿಯರ ಕಾಲಿಗೆ ಎರಗಿದ್ದೇನೆ. ಮನಸ್ಸಿನಲ್ಲಿ ಸಹಜವಾಗಿ ಹುಟ್ಟಿದ ಪ್ರಶ್ನೆ ಯನ್ನು ನಿಮ್ಮೊಂದಿಗೆ ಹಂಚಿಕೊಂಡೆ, ಅಷ್ಟೇ. ನಮ್ಮಲ್ಲಿ ಬಹುತೇಕರಿಗೆ ಕಾಲು ತಮ್ಮ ದೇಹದ ಭಾಗವೇ ಅಲ್ಲ, ಅದರಲ್ಲೂ ಭಾರತೀಯರಲ್ಲಿ ಕಾಲು ಎನ್ನುವುದು ಕಾಲಿನ ಕೆಳಗಿನ ಕಸಕ್ಕಿಂತ ಕಡೆ! ಅದು ಸೀಳಿ ಛಿದ್ರವಾಗಿರುತ್ತದೆ. ಕೆಲವರ ಕಾಲನ್ನು ನೋಡಲು ಕೂಡ ಆಗದು, ಆ ಮಟ್ಟಿಗೆ ಅದನ್ನು ಕಡೆಗಣಿಸಿರುತ್ತಾರೆ.
ಅಲ್ಲಾ, ಅದಿಲ್ಲದೆ ನಾವಿಲ್ಲ ಎನ್ನುವ ಸಣ್ಣ ತಿಳಿವಳಿಕೆಯೂ ಬೇಡವೇ? ಒಂದು ಕೀಬೋರ್ಡ್‌ನಲ್ಲಿ ಎಲ್ಲಾ ಅಕ್ಷರಗಳನ್ನು ಸರಿಯಾಗಿ ಟೈಪ್ ಮಾಡಲು ಸಾಧ್ಯವಾದರೆ ಮಾತ್ರವೇ ಅದು ಪರಿಪೂರ್ಣ; ಒಂದಕ್ಷರ ಸರಿಯಾಗಿ ಟೈಪ್ ಆಗುತ್ತಿಲ್ಲ ಎಂದರೂ ಅದು ನಿರೀಕ್ಷಿತ ಫಲಿತಾಂಶವನ್ನು ಕೊಡುವು ದಿಲ್ಲ.
ಇದೇಕೆ ನಮಗೆ ಅರ್ಥವಾಗುವುದಿಲ್ಲ? ಕಾಲಿನ ಬಗ್ಗೆ ಈ ಮಟ್ಟದ ಅಸಡ್ಡೆಯನ್ನು ನಮ್ಮಲ್ಲಿ ನಮ್ಮ ಪೂರ್ವಜರು ಅದೇಕೆ ಬಿತ್ತಿದರು ಎನ್ನುವುದು ನನ್ನನ್ನು ಬಹಳವಾಗಿ ಕಾಡುವ ಪ್ರಶ್ನೆ. ಅಣ್ಣ ಶ್ರೀರಾಮಚಂದ್ರ ಕಾಡಿಗೆ ಹೊರಟಾಗ ತಮ್ಮ ಭರತನು ಅವನ ಪಾದುಕೆಗಳನ್ನು ಪಡೆದುಕೊಂಡು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ಮಾಡಿದ ಎನ್ನುವ ಕಥೆಯೂ ನಮ್ಮಲ್ಲೇ ಇದೆ!
ಒಂದೆಡೆ ಅದಕ್ಕೆ ಇನ್ನಿಲ್ಲದ ಗೌರವ ನೀಡುವ ಸಂಸ್ಕಾರ, ಇನ್ನೊಂದೆಡೆ ಅದೇ ಕಾಲನ್ನು ಉದಾಸೀನ ಮಾಡುವ ವಿರೋಧಾಭಾಸ ಏಕೆ ಮತ್ತು ಹೇಗೆ ಶುರುವಾಯ್ತು ಎನ್ನುವ ಸಹಜ ಕುತೂಹಲ ನನ್ನದು. ಪಾಶ್ಚಾತ್ಯರು ಮಾತ್ರ ಇದರಲ್ಲಿ ನಮಗಿಂತ ಭಿನ್ನ. ಅವರಿಗೆ ಕೈ, ಕಾಲು, ಮೂಗು, ಮುಖ ಎಲ್ಲವೂ ಒಂದೇ. ಕಾಲಿಗೆ ಕೂಡ ಅಕ್ಕರಾಸ್ಥೆಯಿಂದ ಕ್ರೀಮುಗಳನ್ನು ಹಚ್ಚಿ ಮಗುವಿನಂತೆ ಆರೈಕೆ ಮಾಡುತ್ತಾರೆ.
ಇಲ್ಲಿದ್ದಾಗ ನನ್ನ ಕಾಲು ಕೂಡ ಇಲ್ಲಿನ ಬಹುತೇಕರಂತೆ ಛಿದ್ರವಾಗಿತ್ತು. ಅದರಲ್ಲಿ ಅವಮಾನ ಎನ್ನುವಂಥದ್ದೇನಿದೆ? ಅದು ನಮಗೆ ಸಾಮಾನ್ಯ, ಸಹಜ. ನಾವಿರುವುದೇ ಹೀಗೆ ಅಲ್ವಾ? ಕೆಲಸದ ಸಲುವಾಗಿ ದುಬೈ, ನಂತರ ಬಾರ್ಸಿಲೋನಾ ತಲುಪಿದ ಮೇಲೆ ಕೂಡ ಕಾಲಿನ ಆರೈಕೆ ಅಷ್ಟಕ್ಕಷ್ಟೇ. ಆದರೆ ದಿನದ ಮುಕ್ಕಾಲು ಪಾಲು ಶೂಸ್ ಧರಿಸಿರುತ್ತಿದ್ದ ಕಾರಣ ಕಾಲು, ಅಂಗೈನಷ್ಟು ಮೃದು ವಾಯ್ತು!
ಅಯ್ಯೋ ಇದೇನಪ್ಪ, ನನ್ನ ಕಾಲು, ಪಾದ ಇಷ್ಟು ಚೆನ್ನಾಗಿದೆ ಎಂದು ಕಾಲಿನ ಮೇಲೆ ಮೋಹ ಬೆಳೆಯುವಷ್ಟು ಚಂದವಾಯ್ತು. ನನ್ನ ಪಾಲಿಗೆ, ಕಾಲನ್ನು ಅತೀವವಾಗಿ ಪ್ರೀತಿಸಿ, ಅದರ ಬೆರಳು ಗಳನ್ನು ಕೂಡ ಮೃದುವಾಗಿ ಸವರಿ ಅದಕ್ಕೆ ಕ್ರೀಮು ಹಚ್ಚಿ ಆರೈಕೆ ಮಾಡುತ್ತಿದ್ದ ಪ್ರಥಮ ಭಾರತೀಯ ನನ್ನ ತಮ್ಮ ಲಕ್ಷ್ಮೀಕಾಂತ. ಅವನು ಇಂದಿಗೂ ಕಾಲನ್ನು ಕೈಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ.
ಪಾಶ್ಚಾತ್ಯರು ಮಾತ್ರ ಹೆಣ್ಣು-ಗಂಡಿನ ಭೇದವಿಲ್ಲದೆ ಪಾದಗಳ ಆರೈಕೆಯಲ್ಲಿ ಸಹಜವಾಗಿ ತೊಡಗಿಸಿ ಕೊಳ್ಳುತ್ತಾರೆ. ಕಳೆದ 9 ವರ್ಷದಲ್ಲಿ ನಾನು ಬಹುಪಾಲು ಭಾರತೀಯನಾಗಿದ್ದೇನೆ. ಮೊನ್ನೆ ನನ್ನ ಕಾಲು ನೋಡಿ ರಮ್ಯ, “ಅಲ್ಲ ಕಣೋ, ಅದೆಷ್ಟು ಚಂದವಿತ್ತು ನಿನ್ನ ಪಾದ! ‘ನೀನು ಪಾದ ಸರಿಯಾಗಿ ಇಟ್ಟುಕೊಂಡಿಲ್ಲ’ ಎಂದು ನನ್ನನ್ನು ಬೈಯುತ್ತಿದ್ದ ನೀನು ಅದೇಕೆ ಇಷ್ಟರಮಟ್ಟಿಗೆ ನಿನ್ನ ಪಾದ ವನ್ನು ಕಡೆಗಣಿಸಿದ್ದೀಯ?" ಎಂದಳು.
ಎಲ್ಲವೂ ಸರಿಯಿದ್ದಾಗ ನಾವು ಯಾವುದಕ್ಕೂ ಬೆಲೆ ಕೊಡುವುದಿಲ್ಲ. ಅದರಲ್ಲೂ ಕಾಲಿನ ಬಗ್ಗೆ ಅದೇನೋ ತಾತ್ಸಾರ. ಕಾಲು ನಮಗೆ ಅಷ್ಟೊಂದು ದೊಡ್ಡ ವಿಷಯ ಅಲ್ಲವೇ ಅಲ್ಲ. ಯಾವಾಗ ಕಾಲು ‘ಕೈಕೊಡಲು’ ಶುರುಮಾಡುತ್ತೆ ನೋಡಿ, ಆಗ ಅದರ ಬೆಲೆ ಗೊತ್ತಾಗುತ್ತೆ.
‘ಪೆಡಿಕ್ಯೂರ್’, ಅಂದರೆ ‘ಪಾದೋಪಚಾರ’ ಉದ್ಯಮವು ನೂರಾರು ಕೋಟಿ ಮಾರುಕಟ್ಟೆ ಹೊಂದಿದೆ! ಈಗ ನಾನು ಹೇಳುವ ಸಂಖ್ಯೆ ನಂಬುವುದಕ್ಕೆ ಸ್ವಲ್ಪ ಕಷ್ಟವಾಗಬಹುದು, ಆದರೆ ಇದು ಸತ್ಯ. ಪಾದ ಗಳ ಉಪಚಾರ ಮಾಡುವುದು ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಕಾಲಿಗೆ ನಾವು ಹೆಚ್ಚಿನ ಗಮನ ಕೊಡುವುದಿಲ್ಲ ಎನ್ನುವ ವಾಸ್ತವತೆಯ ನಡುವೆ ಈ ಸಂಖ್ಯೆಗಳು ಅಚ್ಚರಿ ಹುಟ್ಟಿಸುತ್ತವೆ.
‘ಒಂದು ಭಾರತದಲ್ಲಿ ಹತ್ತು ಭಾರತವನ್ನು ಕಾಣಬಹುದು’ ಎಂಬ ಮಾತನ್ನು ನಾವಿಲ್ಲಿ ಪ್ರತ್ಯಕ್ಷ ಕಾಣಬಹುದು. ಕಾಲಿನ ಸೀಳುಗಳನ್ನು ಹೋಗಲಾಡಿಸುವ ಕ್ರೀಮುಗಳ ವ್ಯಾಪಾರವು ಭಾರತದಲ್ಲಿ ವರ್ಷವೊಂದರಲ್ಲಿ 60-80 ಕೋಟಿ ರುಪಾಯಿ ವಹಿವಾಟು ನಡೆಸುತ್ತದೆ. ಉಗುರುಗಳ ಮಾಲೀಶು, ನೈಲ್ ಆರ್ಟ್, ಪಾದಗಳ ಮಸಾಜು ಇತ್ಯಾದಿ ಸೇವೆಗಳ ಮಾರುಕಟ್ಟೆಯು 2023ರಲ್ಲಿ 4612 ಕೋಟಿ ರುಪಾಯಿಯಷ್ಟು ವಹಿವಾಟನ್ನು ನಡೆಸಿದೆ.
2025ರ ಅಂತ್ಯದ ವೇಳೆಗೆ ಇದು ದುಪ್ಪಟ್ಟಾಗುತ್ತದೆ ಎನ್ನುವ ಸಂಭಾವ್ಯತೆಯ ಲೆಕ್ಕಾಚಾರವನ್ನು ಅಂಕಿ-ಸಂಖ್ಯೆಗಳು ಹೇಳುತ್ತಿವೆ. ಜಾಗತಿಕವಾಗಿ ಇದು 2023ರಲ್ಲಿ 1 ಲಕ್ಷ ಕೋಟಿ ರುಪಾಯಿಯನ್ನು
ಮೀರಿಸಿದೆ. 2032ರವರೆಗೆ ಈ ಉದ್ಯಮವು ವಾರ್ಷಿಕವಾಗಿ 8 ಪ್ರತಿಶತ ಅಭಿವೃದ್ಧಿಯನ್ನು ಕಾಣಲಿದೆ ಎನ್ನುವುದು ಕೂಡ ಗಮನಿಸಬೇಕಾದ ಅಂಶ. ಇಷ್ಟೆಲ್ಲಾ ಕಥೆ ಹೇಳುತ್ತಿರುವುದೇಕೆ ಎಂದರೆ, ನಮ್ಮ ಬಳಿ ಇದ್ದಾಗ ನಮಗೆ ಯಾವುದರ ಮೌಲ್ಯವೂ ತಿಳಿಯುವುದಿಲ್ಲ. ಎಲ್ಲವೂ ಸರಿಯಿದ್ದಾಗ ಅವರಿವ ರನ್ನು, ಸಮಾಜವನ್ನು, ವ್ಯವಸ್ಥೆಯನ್ನು ಹಳಿಯುತ್ತ ಸಮಯ ಕಳೆಯುತ್ತೇವೆ. ಅಲ್ಲಾ ನೀವೇ ಹೇಳಿ, ಯಾರಿಗೆ ಎಷ್ಟು ಸಮಯ ಉಳಿದಿದೆ ಎಂಬುದು ಗೊತ್ತಾ? ಇರುವ ಸಮಯವನ್ನು ಸರಿಯಾಗಿ ವ್ಯಯಿಸೋಣ.
ಕಾಲಿಗೂ ಸ್ವಲ್ಪ ಗೌರವ ನೀಡೋಣ. ಅಷ್ಟಕ್ಕೂ, ಅದು ನಮ್ಮದೇ ದೇಹದ ಭಾಗ, ಅದನ್ನೂ ಪ್ರೀತಿ ಯಿಂದ ಕಾಣೋಣ. ಅದು ಮುನಿಸಿಕೊಳ್ಳುವ ಮುನ್ನವೇ ಮುದ್ದಿಸೋಣ. ಏಕೆಂದರೆ, ಈ ‘ಪಾದೋ ಪಚಾರದ ಬಿಸಿನೆಸ್’ ಅನ್ನು ನೀವು, 5-10 ಲಕ್ಷ ಬಂಡವಾಳ ಹಾಕಿ ಸಣ್ಣ ಜಾಗದಲ್ಲಿ ಶುರುಮಾಡಿ ಬಿಡಬಹುದು. ಉಗುರುಗಳನ್ನು, ಕಾಲಿನ ತ್ವಚೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವ ಒಂದು ದೊಡ್ಡ ವರ್ಗ ಭಾರತದಲ್ಲಿ ಉದಯವಾಗಿದೆ. ಹೀಗಾಗಿ ‘ಕಾಲು’ ಅಂತ ಹೀಗಳೆಯುವ ಮುನ್ನ ಯೋಚನೆ ಮಾಡಿ. ಪಾದೋಪಚಾರ ಇಂದಿಗೆ ಲಕ್ಷಾಂತರ ಜನರ ಅನ್ನಕ್ಕೆ ದಾರಿಯಾಗಿದೆ.
ಇದನ್ನೂ ಓದಿ: Rangaswamy Mookanahalli Column: ಬದಲಾದ ಮೌಲ್ಯ, ಬದಲಾದ ಶಿಕ್ಷಣ !