ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಜೆನ್-ಝಿ: ಡಿಜಿಟಲ್‌ ತಲೆಮಾರಿನ ಅನನ್ಯ ಯುವಶಕ್ತಿ

ಇವರನ್ನು ಡಿಜಿಟಲ್ ಯುಗದಲ್ಲಿ ಬೆಳೆದ, ಇಂಟರ್ನೆಟ್, ಸ್ಮಾರ್ಟ್ʼಫೋನ್ ಮತ್ತು ಸಾಮಾ ಜಿಕ ಮಾಧ್ಯಮಗಳೊಂದಿಗೆ ಸಹಜವಾಗಿ ಮೇಳೈಸಿದ ಮೊದಲ ಪೀಳಿಗೆ ಎಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಹತೆ ಮತ್ತು ತಂತ್ರಜ್ಞಾನ ಕೌಶಲಗಳನ್ನು ಹೊಂದಿರುವುದರಿಂದ ಇವರು ವೈಯಕ್ತಿಕ ಮೌಲ್ಯಗಳಿಗೆ ಒತ್ತು ನೀಡುವ ಮತ್ತು ಕೆಲಸ-ಜೀವನ ಸಮತೋಲನದ ಮೇಲೆ ಗಮನವಿರುವ ಪ್ರಮುಖ ಲಕ್ಷಣಗಳವುಳ್ಳವರಾಗಿದ್ದಾರೆ.

ಸ್ವಯಂಪ್ರಕಾಶ

ಪ್ರಕಾಶ ಹೆಗಡೆ

ಮೆಟ್ರೋ ರೈಲಿನಲ್ಲಿ ಪಯಣಿಸುತ್ತಿದ್ದ ಯುವಕರೀರ್ವರ ಸಂಭಾಷಣೆ ಇಂತಿತ್ತು: “ಲಡಾಕ್ ಟೂರ್‌ಗೆ ಲೀವ್ ಸ್ಯಾಂಕ್ಷನ್ ಆಗಿತ್ತು ಕಣೋ! ಏರ್‌ಪೋರ್ಟ್‌ನಲ್ಲಿದ್ದಾಗ ಮ್ಯಾನೇಜರ್‌ರಿಂದ ಕಾಲ್ ಬಂತು- ಅರ್ಜೆಂಟಾಗಿ ಆಫೀಸ್‌ಗೆ ಬಾ ಅಂತ. ಮೈಯೆ ಉರ್ದ್ಹೋಯ್ತು. ಖಾರವಾಗಿ ಹೇಳ್ದೆ- ಬರಕ್ಕಾಗಲ್ಲ ಅಂತ". ಇದು ಇಂದಿನ ಜೆನ್-ಝಿ ತಲೆಮಾರಿನವರ ಮನಃಸ್ಥಿತಿಯ ಒಂದು ಸಣ್ಣ ಝಲಕ್.

ಸಂಭಾಷಣೆ ಮುಂದುವರಿಯಿತು: “ಅಮೇಲೆ ಸ್ವಲ್ಪ ದಿನಕ್ಕೇ ಆಸ್ಟೆರಿಟಿ ಮೆಷರ್ ಅಂತ ಕಾರಣ ಕೊಟ್ಟು ಕೆಲಸದಿಂದ ತೆಗೆದುಹಾಕಿದ್ರು. ಒಳ್ಳೇದೇ ಆಯ್ತು. ಒಂದು ವಾರದ ಬೇರೊಂದು ಕೆಲ್ಸಾ ಸಿಕ್ತು". ಹಿಂದಿನ ತಲೆಮಾರಿನವರಲ್ಲಿ ಈ ರೀತಿಯ ಬಂಡಾಯದ ಮನೋಭಾವಗಳು ಅಂದು-ಇಂದು ಕಾಣಿಸುತ್ತಿದ್ದವು. ಆದರೆ ಈಗಿನ ಪೀಳಿಗೆಯ ನಿರ್ಲಕ್ಷ್ಯ ಮನೋಭಾವದ ಉದ್ಯೋಗಿ ವರ್ಗದವರು ತಮ್ಮದೇ ಆದ ತಾರ್ಕಿಕತೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.

ಹೀಗಾಗಿ, ಝೂಮರ್ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು ಕಾರ್ಪೋರೇಟ್ ಸಿಎಕ್ಸ್‌ಒ ಆಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಅನುಭವವನ್ನು ಹಂಚಿಕೊಳ್ಳೋಣವೆಂದೆನಿಸಿತು. ‘ಜೆನ್-ಝಿ’ ಅಥವಾ ‘ಝೂಮರ್’ ಎಂದು ಗುರುತಿಸಿಕೊಳ್ಳುವ ಈ ವರ್ಗದವರು, ಸಾಮಾನ್ಯ ವಾಗಿ 1997ರಿಂದ 2012ರ ನಡುವೆ ಜನಿಸಿದ ತಲೆಮಾರಿನವರು.

ಇವರನ್ನು ಡಿಜಿಟಲ್ ಯುಗದಲ್ಲಿ ಬೆಳೆದ, ಇಂಟರ್ನೆಟ್, ಸ್ಮಾರ್ಟ್ʼಫೋನ್ ಮತ್ತು ಸಾಮಾ ಜಿಕ ಮಾಧ್ಯಮಗಳೊಂದಿಗೆ ಸಹಜವಾಗಿ ಮೇಳೈಸಿದ ಮೊದಲ ಪೀಳಿಗೆ ಎಂದು ಪರಿಗಣಿಸ ಲಾಗುತ್ತದೆ. ವಿದ್ಯಾರ್ಹತೆ ಮತ್ತು ತಂತ್ರಜ್ಞಾನ ಕೌಶಲಗಳನ್ನು ಹೊಂದಿರುವುದರಿಂದ ಇವರು ವೈಯಕ್ತಿಕ ಮೌಲ್ಯಗಳಿಗೆ ಒತ್ತು ನೀಡುವ ಮತ್ತು ಕೆಲಸ-ಜೀವನ ಸಮತೋಲನದ ಮೇಲೆ ಗಮನವಿರುವ ಪ್ರಮುಖ ಲಕ್ಷಣಗಳವುಳ್ಳವರಾಗಿದ್ದಾರೆ.

ಜೆನ್-ಝಿ ತಲೆಮಾರಿನವರು ಅತ್ಯಂತ ಸೃಜನಶೀಲರಾಗಿದ್ದು, ಹೊಸ ಆಲೋಚನೆಗಳನ್ನು ತ್ವರಿತವಾಗಿ ಮುಂದಿರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಕೆಲಸದ ಸಮಯದಲ್ಲಿ ಫ್ಲೆಕ್ಸಿಬಿಲಿಟಿ ಮತ್ತು ಫಲಿತಾಂಶ ಆಧಾರಿತ ಕಾರ್ಯಪದ್ಧತಿಯನ್ನು ಮೆಚ್ಚುವ ಇವರು, ಚುರುಕುತನ ಮತ್ತು ಚೈತನ್ಯದಿಂದ ತಂಡಗಳಿಗೆ ಹೊಸ ಉತ್ಸಾಹವನ್ನು ನೀಡುತ್ತಾರೆ. ಬದಲಾವಣೆಗೆ ವೇಗವಾಗಿ ಹೊಂದಿಕೊಳ್ಳುವ ಇವರ ಗುಣವು ಸಂಸ್ಥೆಗಳ ನವೀನತೆ ಮತ್ತು ಬೆಳವಣಿಗೆಗೆ ಪ್ರಮುಖ ಚಾಲಕಶಕ್ತಿಯಾಗುತ್ತದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ‘ಝೂಮರ್’ ತಲೆಮಾರಿನವರು ಭಾರತದ ಕಾರ್ಪೊರೇಟ್ ವಲಯವನ್ನು ಹೊಸ ದಿಕ್ಕಿನಲ್ಲಿ ರೂಪಿಸುತ್ತಿದ್ದಾರೆ. ಪರಂಪರೆಯ ಹುದ್ದೆ-ಹಂತಗಳ ಪ್ರೊಮೊಷನ್‌ಗಿಂತ ಕೌಶಲಾಭಿವೃದ್ಧಿ, ಮಾನಸಿಕ ಆರೋಗ್ಯ ಮತ್ತು ವರ್ಕ್-ಲೈಫ್ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

2030ರ ವೇಳೆಗೆ ಉದ್ಯೋಗ ಕ್ಷೇತ್ರದ ಸುಮಾರು ಶೇ.40ರಷ್ಟು ಭಾಗವನ್ನು ಪ್ರತಿನಿಧಿಸಲಿರುವ ಈ ತಲೆಮಾರಿನವರು ಕಾರ್ಪೊರೇಟ್ ಜಗತ್ತಿನ ಅತಿ ಮುಖ್ಯ ಪಾಲುದಾರರಾಗಿರುತ್ತಾರೆ. ಸುಮಾರು ಶೇ.57ರಷ್ಟು ಉದ್ಯೋಗಿಗಳು ವೃತ್ತಿ ಬೆಳವಣಿಗೆಯನ್ನು ಕೇವಲ ವೇತನದೊಂದಿಗೆ ತುಲನೆ ಮಾಡದೇ ಕೌಶಲಾಭಿವೃದ್ಧಿ ಮತ್ತು ಮಾರ್ಗದರ್ಶನಗಳಿಗೆ ಹೊಂದಿಸಿಕೊಳ್ಳುತ್ತಾರೆ.

ಶೇ.80ಕ್ಕಿಂತ ಹೆಚ್ಚು ಮಂದಿ ವೃತ್ತಿ ಪ್ರಗತಿಯನ್ನು ಹೊಸ ಕೌಶಲಗಳ ಕಲಿಕೆ ಮತ್ತು ಮನ್ನಣೆ ಗೆ ಅಳತೆಗೋಲಾಗಿಸಿದ್ದಾರೆ. ಶೇ.34ರಷ್ಟು ಉದ್ಯೋಗಿಗಳು ಕೆಲಸ-ಜೀವನ ಸಮತೋಲನದ ಕೊರತೆಯೇ ವೃತ್ತಿ ಬಗೆಗಿನ ಅಸಮಾಧಾನಕ್ಕೆ ಕಾರಣವೆಂದು ತಿಳಿದುದರಿಂದ ‘ಬರ್ನೌಟ್ ಸಂಸ್ಕೃತಿ’ಯನ್ನು ಅವರು ತಿರಸ್ಕರಿಸುತ್ತಿರುವುದನ್ನು ಸೂಚಿಸುತ್ತದೆ.

ಶೇ.14ರಷ್ಟು ‘ಝೂಮರ್’ಗಳು ವೃತ್ತಿ ಬೆಳವಣಿಗೆಯಲ್ಲಿ ನಿಶ್ಚಲತೆ ಕಂಡರೆ ಒಂದು ವರ್ಷ ದೊಳಗೇ ತಮ್ಮ ಪ್ರಸ್ತುತ ಉದ್ಯೋಗವನ್ನು ತೊರೆಯಲು ಸಿದ್ಧರಿರುತ್ತಾರೆ. ಅನೇಕ ಜೆನ್-ಝಿಗಳು ತಮ್ಮ ಅತ್ಯಧಿಕ ಉತ್ಪಾದಕತೆ ಸಂಜೆ 6 ಗಂಟೆಯಿಂದ ರಾತ್ರಿ 3 ಗಂಟೆಯವರೆಗೆ ಎಂದು ತಿಳಿದಿದ್ದಾರೆ. ಇದರಿಂದ ಪರಂಪರೆಯ ‘9 ರಿಂದ 5ರವರೆಗಿನ’ ಕೆಲಸದ ವ್ಯವಸ್ಥೆಯ ಅಡಿಪಾಯವನ್ನೇ ಬದಲಾಯಿಸುವ ಪರಿಸ್ಥಿತಿ ಹಲವಾರು ಕಂಪನಿಗಳಲ್ಲಿ ಉಂಟಾಗಿದೆ.

ಭಾರತದಲ್ಲಿನ ಶೇ.26ರಷ್ಟು ಜೆನ್-ಝಿ ಯುವಕರು ಕಾಲೇಜಿನಲ್ಲಿದ್ದಾಗಲೇ ಕೆಲಸ ಮಾಡುತ್ತ ಸಾಕಷ್ಟು ಗಳಿಸುತ್ತಿದ್ದಾರೆ. ಸೈಡ್ ಹಾಸ್ಟಲ್‌ಗಳು, ಫ್ರೀಲಾನ್ಸಿಂಗ್ ಮತ್ತು ಕಂಟೆಂಟ್ ಸೃಷ್ಟಿ ಯನ್ನು ತಮ್ಮ ವೃತ್ತಿಪರ ಗುರುತಿನ ಭಾಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಐವರಲ್ಲಿ ಇಬ್ಬರು ‘ಝೂಮರ್’ಗಳು ತಾವು ‘ಇನ್ ಫ್ಲೂಯೆನ್ಸರ್’ ಅಂದರೆ ಇತರರ ಮೇಲೆ ಪ್ರಭಾವ ಬೀರುವವರು ಅಥವಾ ಮಾರ್ಗದರ್ಶಿಗಳು ಎಂದು ಅತಿಯಾದ ಅತ್ಮವಿಶ್ವಾಸ ದಿಂದ ಬೀಗುತ್ತಾರೆ. ಡೆಲಾಯಿಟ್ ಅಧ್ಯಯನದ ಪ್ರಕಾರ, ಜೆನ್-ಝಿ ತಲೆಮಾರಿನವರು ಕೆಲಸದ ಸ್ಥಳದಲ್ಲಿ ಪ್ರಾಮಾಣಿಕತೆಗೆ ಅತ್ಯಂತ ಮಹತ್ವ ನೀಡುತ್ತಾರೆ. ಅವರು ಕೇವಲ ಸಂಬಳ ಅಥವಾ ಹುದ್ದೆಗಾಗಿ ಕೆಲಸ ಮಾಡುವುದಕ್ಕಿಂತ, ಸಂಸ್ಥೆಯ ಮೌಲ್ಯಗಳು, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ತಮ್ಮ ವೈಯಕ್ತಿಕ ನಂಬಿಕೆಗಳಿಗೆ ಹೊಂದಿಕೊಳ್ಳು ತ್ತವೆಯೇ ಎಂಬುದನ್ನು ಗಮನಿಸುತ್ತಾರೆ.

ನಾಯಕತ್ವದಲ್ಲಿ ಪಾರದರ್ಶಕತೆ, ಮುಕ್ತ ಸಂವಹನ ಮತ್ತು ನಿಜವಾದ ಸಹಾನುಭೂತಿ ಇರಬೇಕೆಂದು ನಿರೀಕ್ಷಿಸುತ್ತಾರೆ. ಕೃತಕ ಅಥವಾ ಮೇಲುಮೇಲಿನ (ಅಂದರೆ ತೋರಿಕೆಯ) ದೃಷ್ಟಿಕೋನವನ್ನು ಅವರು ತಿರಸ್ಕರಿಸುವುದರಿಂದ, ಸಂಸ್ಥೆಗಳು ವಿಶ್ವಾಸಾರ್ಹ ಮತ್ತು ನೈಜ ಕಾರ್ಯಸಂಸ್ಕೃತಿಯನ್ನು ನಿರ್ಮಿಸುವ ಅಗತ್ಯತೆ ಹೆಚ್ಚುತ್ತಿದೆ.

ಇನ್ನೊಂದು ಅಧ್ಯಯನದ ಸಮೀಕ್ಷೆಗಳು ತೋರಿಸಿರುವಂತೆ, ಯುವ ಉದ್ಯೋಗಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ಆರೋಗ್ಯವನ್ನು ಯಶಸ್ಸಿನ ಪ್ರಮುಖ ಮಾನದಂಡವಾಗಿ ಪರಿಗಣಿಸುತ್ತಾರೆ. ಕೆಲವೊಮ್ಮೆ ಸಂಪತ್ತು, ಉದ್ಯೋಗ ಅಥವಾ ಸಾಮಾಜಿಕ ಸ್ಥಾನಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಆಶ್ಚರ್ಯವೆಂಬಂತೆ ಈ ತಲೆಮಾರಿನ ಅನೇಕ ಯುವಕರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವುದರಿಂದ ಮದ್ಯಪಾನವನ್ನು ನಿಯಂತ್ರಿತವಾಗಿ ಸೇವಿಸುವ ಪ್ರವೃತ್ತಿ ತೋರಿಸುತ್ತಿದ್ದಾರೆ.

ಮೇಲೆ ತಿಳಿಸಿದ್ದೆಲ್ಲವೂ ‘ಝೂಮರ್’ಗಳ ಸಕಾರಾತ್ಮಕ ಗುಣಲಕ್ಷಣಗಳು. ಈ ಪೀಳಿಗೆಯ ಇನ್ನೊಂದು ಮುಖವಿದೆ. ಅದೆಂದರೆ, ಕೆಲ ‘ಝೂಮರ್’ಗಳು ಸಾಮಾಜಿಕ ಮಾಧ್ಯಮ ಒತ್ತಡ, ಉದ್ಯೋಗದ ಅನಿಶ್ಚಿತತೆ, ಹವಾಮಾನ ಬದಲಾವಣೆ ಹಾಗೂ ಜಾಗತಿಕ ಅಸ್ಥಿರತೆಗಳ ಪರಿಣಾಮವಾಗಿ ‘ನಿಹಿಲಿಸಮ್’ ಎಂಬ ತತ್ವಕ್ಕೆ ಶರಣಾಗಿದ್ದಾರೆ.

ನಿಹಿಲಿಸಮ್ ಎಂದರೆ ಜೀವನಕ್ಕೆ ಅಂತಿಮ ಅರ್ಥವಿಲ್ಲ, ಪರಂಪರೆಯ ಮೌಲ್ಯಗಳು ಮತ್ತು ನಂಬಿಕೆಗಳಿಗೆ ಶಾಶ್ವತ ಆಧಾರವಿಲ್ಲ ಎಂಬ ಗ್ರಹಿಕೆ. ಆದುದರಿಂದಲೇ ಅನೇಕ ‘ಝೂಮರ್’ ಗಳು ಪಲಾಯನವಾದಕ್ಕೆ ಒಳ್ಳೆಯ ಮಾದರಿಗಳಾಗಿದ್ದಾರೆ.

ಜೆನ್-ಝಿ ತಲೆಮಾರಿನವರ ಗಮನದ ಅವಧಿ ಹಿಂದಿನ ತಲೆಮಾರಿನವರಿಗಿಂತ ವಿಭಿನ್ನ ವಾಗಿದೆ. ಡಿಜಿಟಲ್ ಮಾಧ್ಯಮಗಳು, ಸಣ್ಣ ವಿಡಿಯೋಗಳು ಮತ್ತು ತ್ವರಿತ ಮಾಹಿತಿಯ ಬಳಕೆಯಿಂದಾಗಿ ಅವರು ಚಿಕ್ಕ, ಸ್ಪಷ್ಟ ಮತ್ತು ದೃಶ್ಯಾಧಾರಿತ ವಿಷಯಗಳನ್ನು ಹೆಚ್ಚು ವೇಗವಾಗಿ ಗ್ರಹಿಸುತ್ತಾರೆ. ಓದುವಲ್ಲಿ ದೀರ್ಘ ಲೇಖನಗಳಿಗಿಂತ ಸಂಕ್ಷಿಪ್ತ ಬರಹಗಳು ಮತ್ತು ‘ಬುಲೆಟ್ ಪಾಯಿಂಟ್’ನಂತಿರುವ ಮಾಹಿತಿಯನ್ನು ಇಷ್ಟಪಡುತ್ತಾರೆ; ಬರವಣಿಗೆಯಲ್ಲಿ ಸರಳ, ನೇರ ಮತ್ತು ಸಂವಹನಾತ್ಮಕ ಶೈಲಿಯನ್ನು ಅನುಸರಿಸುತ್ತಾರೆ.

ಕೇಳುವಿಕೆಯಲ್ಲಿ ಕೂಡ ದೀರ್ಘ ಉಪನ್ಯಾಸಗಳಿಗಿಂತ ಪಾಡ್‌ಕಾಸ್ಟ್, ಕಿರು ವಿಡಿಯೋ ಅಥವಾ ಸಂವಾದಾತ್ಮಕ ಚರ್ಚೆಗಳಿಗೆ ಹೆಚ್ಚು ಒಲವು ತೋರುತ್ತಾರೆ. ಕೆಲವು ಕಂಪನಿಗಳಲ್ಲಿ ಜೆನ್-ಝಿ ಸಂಸ್ಕೃತಿಯವರ ಗಮನವನ್ನು ಕೆಲಸದೆಡೆಗೆ ವ್ಯಯಿಸುವುದೇ ಮುಖ್ಯ ಕಾರ್ಯ ವಾಗಿದೆ.

ಕಾರ್ಪೊರೇಟ್ ಉದ್ದೇಶಗಳೆಡೆಗೆ ಅವರ ಗಮನವನ್ನು ಹಿಡಿದಿಟ್ಟುಕೊಳ್ಳಲು ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳು, ಮ್ಯಾನೇಜ್ಮೆಂಟ್ ಪಾಠಗಳು ಅಥವಾ ಕೌನ್ಸೆಲಿಂಗ್ ಸೆಷನ್‌ಗಳನ್ನು ನಡೆಸುತ್ತಾರೆ.

ಅಮೆರಿಕದ ಸೇಪಿಯನ್ ಲ್ಯಾಬ್ಸ್ ಸಂಸ್ಥೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ 2025ರ ವರದಿಯು, ‘ಝೂಮರ್’ಗಳಲ್ಲಿ ಗಂಭೀರ ಮಾನಸಿಕ ಅಸ್ವಸ್ಥತೆಯ ಅಂಶವಿರುವುದನ್ನು ಬಹಿರಂಗಪಡಿಸುತ್ತದೆ. ಈ ವರದಿಯ ಪ್ರಕಾರ, ಭಾರತದಲ್ಲಿನ ಯುವಕರು ಮಾನಸಿಕ ಕ್ಷೇಮದ ಅಳತೆಗೋಲುಗಳಲ್ಲಿ 84 ದೇಶಗಳಲ್ಲಿ 60ನೇ ಸ್ಥಾನ ಪಡೆದಿದ್ದಾರೆ.

ಯುವಕರ ಮಾನಸಿಕ ಆರೋಗ್ಯ ಮಾನದಂಡ (MHQ) ಅಂಕಿ 33 ಮಾತ್ರವಾಗಿದ್ದು, ಹಿರಿಯ ಕಾರ್ಮಿಕರಿಗೆ ಹೋಲಿಸಿದರೆ ಅಗಾಧ ಅಂತರವಿರುವುದು ಸ್ಪಷ್ಟವಾಗಿದೆ. ಹಿರಿಯ ಕಾರ್ಮಿಕರು ಗಮನಾರ್ಹವಾಗಿ 96 ಅಂಕದ ಉತ್ತಮ ಮಾನಸಿಕ ಆರೋಗ್ಯ ಅಂಕಿಗಳನ್ನು ಪಡೆದು ಸಾಮಾನ್ಯ ಮಾನಸಿಕ ಕಾರ್ಯಕ್ಷಮತೆಗೆ ಹೊಂದಿಕೊಳ್ಳುವ ಮಟ್ಟದಲ್ಲಿದ್ದಾರೆ.

ಇದಕ್ಕೆ ಪರಿಹಾರವೆಂಬಂತೆ ಕಂಪನಿಗಳಲ್ಲಿ ಮನೋವೈದ್ಯರ ಬಳಕೆ ಸಾಮಾನ್ಯವಾಗಿವೆ. ಜೆನ್-ಝಿ ವರ್ಗದವರ ಇನ್ನೊಂದು ಋಣಾತ್ಮಕ ಗುಣಲಕ್ಷಣವೆಂದರೆ ಪರಿಣಾಮದ ಪರಿವೆ ಯೇ ಇಲ್ಲದೆ ಸಾಲ ಮಾಡುವುದು. ತಿಂಗಳಿಗೆ ಕೇವಲ 30-40 ಸಾವಿರ ದುಡಿಯುವವರು ಹಣಕಾಸು ಸಂಸ್ಥೆಗಳಿಂದ 40 ಲಕ್ಷ ರು.ವರೆಗೆ ಸಾಲಗಳನ್ನು ಪಡೆಯುತ್ತಿರುವುದು ವಿಷಾದದ ಬೆಳವಣಿಗೆ.

ಇವರಲ್ಲಿ ಅನೇಕರು ಈ ಸಾಲಗಳ ಇಎಂಐ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲಾಗದೆ, ‘ಡಿಫಾಲ್ಟರ್’ಗಳೆಂದು ಗುರುತಿಸಲ್ಪಟ್ಟು ತಮ್ಮ ಸಿಬಿಲ್ ಸ್ಕೋರನ್ನು ಕೆಂಪಾಗಿಸಿಕೊಳ್ಳುತ್ತಿದ್ದಾರೆ. ಸುಲಭವಾಗಿ ಲಭ್ಯವಾಗುವ ಸಾಲ ಸೌಲಭ್ಯಗಳು, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಆಡಂಬರದ ಜೀವನಶೈಲಿ ಮುಂತಾದವು ಯುವಕರ ಮೇಲೆ ದೊಡ್ಡ ಪ್ರಭಾವ ಬೀರುತ್ತಿವೆ.

ಸಾಮಾಜಿಕ ಮಾಧ್ಯಮಗಳು ಕೂಡ ಯುವಕರನ್ನು ನಿರ್ದಿಷ್ಟ ರೀತಿಯ ಜೀವನಶೈಲಿಯತ್ತ ಒಯ್ಯುತ್ತಿದ್ದು, ದುಬಾರಿ ಗ್ಯಾಜೆಟ್‌ಗಳು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ವೈಭವ ಯುತ ಪ್ರವಾಸಗಳು ಮಹತ್ವ ಪಡೆಯುತ್ತಿವೆ. ಜತೆಗೆ, ಜೆನ್-ಝಿ ಪೀಳಿಗೆಯವರ ಮಾನಸಿಕ ಅಂಶದಂತೆ ಕೆಲಸದ ಬಗೆಗಿನ ಸ್ವಲ್ಪ ನಿರ್ಲಕ್ಷ್ಯ ಧೋರಣೆ ಮತ್ತು ಖರ್ಚಿನ ಮೇಲಿನ ಅಜಾಗರೂಕತೆಯೂ ಈ ಪರಿಸ್ಥಿತಿಗೆ ಕಾರಣವಾಗುತ್ತಿವೆ.

ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಪ್ರತಿಭಟನೆಗಳು ಹಾಗೂ ರಾಜಕೀಯ ಚಳವಳಿ ಗಳಲ್ಲಿ ಜೆನ್-ಝಿ ಯುವಕರ ಭಾಗವಹಿಸುವಿಕೆ ಗಮನಾರ್ಹವಾಗಿದ್ದರೂ, ಅವುಗಳನ್ನು ಕೇವಲ ‘ಝೂಮರ್’ ತಲೆಮಾರಿನ ಕ್ರಾಂತಿ ಎನ್ನಲು ಸಾಧ್ಯವಿಲ್ಲ. ಡಿಜಿಟಲ್ ಸಂಪರ್ಕ ಮತ್ತು ಜಾಗತಿಕ ಅರಿವಿನಿಂದ ಜೆನ್-ಝಿ ತಮ್ಮ ಹಕ್ಕುಗಳು ಮತ್ತು ಭವಿಷ್ಯದ ಕುರಿತು ಹೆಚ್ಚು ಸ್ಪಷ್ಟತೆ ನೀಡಿದ್ದು, ಸರಕಾರಗಳ ನೀತಿಗಳು ಮತ್ತು ಆಡಳಿತ ಕ್ರಮಗಳನ್ನು ಪ್ರಶ್ನಿಸುವ ಧೈರ್ಯವನ್ನು ಒದಗಿಸಿ ಈ ವರ್ಗದವರೂ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ರೆನ್ನುವುದು ಸತ್ಯ.

ಈ ಚಳವಳಿಗಳ ಹಿಂದೆ ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಗಳು ಮತ್ತು ಆರ್ಥಿಕ-ಸಾಮಾಜಿಕ ಅಸಮಾಧಾನಗಳಂಥ ಅನೇಕ ಕಾರಣಗಳು ಕೆಲಸ ಮಾಡಿದ್ದವು. ಯುವಕರು ಸಾಮಾಜಿಕ ಮಾಧ್ಯಮಗಳ ಮೂಲಕ ವೇಗವಾಗಿ ಸಂಘಟಿತರಾಗಿ ತಮ್ಮ ಧ್ವನಿಯನ್ನು ವ್ಯಕ್ತಪಡಿಸಿದರೂ, ಚಳವಳಿಗಳ ದಿಕ್ಕು ಮತ್ತು ಪರಿಣಾಮವನ್ನು ನಿರ್ಧರಿಸುವಲ್ಲಿ ಇತರ ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳ ಪಾತ್ರವೂ ಮಹತ್ವದ್ದಾ ಗಿತ್ತು. ಆದ್ದರಿಂದ, ಈ ಘಟನೆಗಳನ್ನು ಜೆನ್-ಝಿಗಳ ಪ್ರಭಾವದ ಜತೆಗೆ ವಿಶಾಲವಾದ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು.

ಜೆನ್-ಝಿ ತಲೆಮಾರಿನವರು ಸಂವಹನದಲ್ಲಿ ವಿಶಿಷ್ಟವಾದ ‘ಜಾರ್ಗನ್’ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂಸ್ಕೃತಿಯ ಪ್ರಭಾವದಿಂದ- lit, vibe, ghosting, flex, slay, FOMO, YOLO, Coffee Badging, Career Cushioning, Digital Nomad, Mouse Jiggling, Boomerang Employment, Quiet Quitting ಮುಂತಾದ ಪದಗಳು ಅವರ ದೈನಂದಿನ ಭಾಷೆಯಲ್ಲಿ ಸಾಮಾನ್ಯವಾಗಿವೆ.

ಈ ಪದಗಳು ಕೇವಲ ಭಾಷೆಯಲ್ಲ, ಅವರ ಜೀವನಶೈಲಿ, ಭಾವನೆಗಳು ಮತ್ತು ಸಾಮಾಜಿಕ ಸಂವಹನದ ರೀತಿಯನ್ನೂ ಪ್ರತಿಬಿಂಬಿಸುತ್ತವೆ. ಹೀಗಾಗಿ, ‘ಝೂಮರ್’ ಸಂಸ್ಕೃತಿಯನ್ನು ನಿಭಾಯಿಸಲೆತ್ನಿಸುವವರೆಲ್ಲರೂ ಹೊಸ ಭಾಷಾಶೈಲಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಜೆನ್-ಝಿ ತಲೆಮಾರನ್ನು ಅರ್ಥಮಾಡಿಕೊಳ್ಳುವುದು ಇಂದಿನ ಕಾರ್ಪೊರೇಟ್ ಮತ್ತು ಸಾಮಾಜಿಕ ಪರಿಸರದಲ್ಲಿ ಬಹಳ ಮುಖ್ಯವಾಗಿದೆ. ಇವರು ಒಂದು ಕೈಯಲ್ಲಿ ಮೊಬೈಲ್, ಮತ್ತೊಂದು ಕೈಯಲ್ಲಿ ಕನಸುಗಳನ್ನು ಹಿಡಿದು ಬದುಕನ್ನು ನಡೆಸುವ ಪ್ರಯತ್ನದಲ್ಲಿದ್ದಾರೆ. ಜೆನ್-ಝಿಗಳ ಮನೋಭಾವ, ಆಸಕ್ತಿ ಮತ್ತು ಕೆಲಸದ ನಿರೀಕ್ಷೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಂಸ್ಥೆಗಳೇ ಭವಿಷ್ಯದ ಕಾರ್ಯಸ್ಥಳವನ್ನು ಯಶಸ್ವಿಯಾಗಿ ರೂಪಿಸ ಬಲ್ಲವು. ‌ಇದು ಸಮಾಜದ ಭವಿಷ್ಯದ ಸಂಸ್ಕೃತಿಯನ್ನು ಯಶಸ್ವಿಯಾಗಿ ರೂಪಿಸಲೂ ಅತ್ಯಂತ ಅಗತ್ಯವಾಗಿದೆ...

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)