ಅಶ್ವತ್ಥಕಟ್ಟೆ
‘ನನಗೆ ನೂರು ಜನ ಯುವಕರನ್ನು ಕೊಡಿ, ಈ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆ’ ಎನ್ನುವ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅದಕ್ಕೆ ಪೂರಕವಾಗಿ ಯುವಕರು ದೇಶ ಆಸ್ತಿ ಎನ್ನುವ ಮಾತನ್ನೇ ಸ್ವಾತಂತ್ರ್ಯ ಬಂದಾಗಿನಿಂದ ರಾಜಕಾರಣಿಗಳು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಅದೇ ಯುವಕರ ಸಹನೆಯ ಕಟ್ಟೆ ಒಡೆದರೆ ಏನಾಗುತ್ತದೆ ಎನ್ನುವುದಕ್ಕೆ ಕಳೆದ ಕೆಲ ವರ್ಷದಲ್ಲಿ ನೆರೆ ರಾಷ್ಟ್ರ ಶ್ರೀಲಂಕಾ, ನೇಪಾಳದಲ್ಲಿ ಜೆನ್ ಝೀ ಹೋರಾಟಗಳೇ ಸಾಕ್ಷಿ.
ಅದರಲ್ಲಿಯೂ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ 18ರಿಂದ 29ವರ್ಷದ ನಡುವಿನ ಮತದಾರರೇ ನಿರ್ಣಾಯಕ ಎನ್ನುವುದು ವಾಸ್ತವ. ಆದರೂ, ನೀಟ್ ವಿಷಯದಲ್ಲಿ ಯುವಕರ ಮನದ ಮಾತನ್ನು ಅರ್ಥೈಸಿಕೊಳ್ಳುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲವಾದವೇ ಎನ್ನುವ ಅನುಮಾನ ನೀಟ್ ಹೋರಾಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ಉದ್ಭವಿಸುತ್ತವೆ.
ಸುಪ್ರೀಂ ಕೋರ್ಟ್ ಸಿಜೆ ಸೂರ್ಯಕಾಂತ್ ಅವರು, ಕೆಲ ನಿರುದ್ಯೋಗಿ ಯುವಕರನ್ನು ‘ಜಿರಳೆ’ಗೆ ಹೋಲಿಸಿದ ಬಳಿಕ ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷದ ಹವಾ ಸಾಮಾಜಿಕ ಜಾಲತಾಣದಲ್ಲಿ ಜೋರಾಯಿತು. ಅದರಲ್ಲಿಯೂ ಜೆನ್ ಝೀ ಪೀಳಿಗೆಗೆ ಸಿಜೆಪಿಯ ನರೇಟಿವ್ ಇಷ್ಟವಾಯಿತು. ಮತವಾಗಿ ಈ ನರೇಟಿವ್ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎನ್ನುವುದಕ್ಕಿಂತ, ಇಂದಿನ ಟ್ರೆಂಡ್ ಆಗಿದ್ದು ವಾಸ್ತವ. ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಶುರುವಾಗುವ ಹಲವು ಅಭಿಯಾನದ ರೀತಿಯಲ್ಲಿಯೇ ಇದು ಸಹ ಒಂದಾಗಬಹುದು ಎಂದೇ ನಿರ್ಲಕ್ಷ್ಯ ತೋರಿದ ಪಕ್ಷಗಳು ಕೆಲವೇ ತಿಂಗಳಲ್ಲಿ ಇದರ ನೇರ ಹೊಡೆತ ತಿನ್ನಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದರೆ ತಪ್ಪಾಗುವು ದಿಲ್ಲ.
ಇದನ್ನೂ ಓದಿ: Ranjith H Ashwath Column: ‘ನೀಟಾ’ಗಿ ನಡೆಯಲಿಲ್ಲವೇ ಜಿರಳೆ ಹೋರಾಟ?
ಯುವಕರು 2013ರಿಂದಲೂ ನರೇಂದ್ರ ಮೋದಿ ಅವರೊಂದಿಗೆ ನಿಂತಿದ್ದರು. ರಾಹುಲ್ ಗಾಂಧಿ ಎಂಬ ‘ಯೂಥ್ ಫೇಸ್’ ಅನ್ನು ಕಾಂಗ್ರೆಸ್ ತೋರಿಸಿದರೂ, ನರೇಂದ್ರ ಮೋದಿ ಹಾಗೂ ಬಿಜೆಪಿ ಯೊಂದಿಗೆ ಶೇ.20ರಿಂದ 22ರಷ್ಟಿರುವ ಯುವ ಮತದಾರರು ನಿಂತಿದ್ದರು. ಆ ಕಾರಣಕ್ಕೆ, ಮೂರನೇ ಅವಧಿಗೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಆದರೆ ಜಿರಳೆ ಪಕ್ಷದ ವಿಷಯದಲ್ಲಿ ಬಿಜೆಪಿ ತೋರಿದ ಉದಾಸೀನ, ನೀಟ್ ಪೇಪರ್ ಲೀಕ್ ವಿಷಯದಲ್ಲಿ ಶುರುವಾದ ಪ್ರತಿಭಟನೆಯ ವಿಷಯದಲ್ಲಿನ ನಿರ್ಲಕ್ಷ್ಯ ಬಿಜೆಪಿಗೆ ಬಹುದೊಡ್ಡ ಹೊಡೆತ ಕೊಟ್ಟಿದ್ದು ಸುಳ್ಳಲ್ಲ. ಮೇಲ್ನೋಟಕ್ಕೆ ಈ ಅಭಿಯಾನ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ ಎನ್ನುವುದಾದರೂ, ಸೂಕ್ಷ್ಮವಾಗಿ ಗಮನಿಸಿದರೆ ಜೆನ್ ಝೀಗಳು ಕಾಂಗ್ರೆಸ್ ಅಥವಾ ಇನ್ಯಾವುದೇ ಪ್ರತಿಪಕ್ಷಗಳಿಗೂ ಬೆಂಬಲಿಸಿಲ್ಲ. ಇದಕ್ಕೆ ಪೂರಕವಾಗಿ ಸಿಜೆಪಿ ಹೋರಾಟದಲ್ಲಿ ಹಲವು ನಾಯಕರು ರಾಜಕೀಯ ಪಕ್ಷಗಳನ್ನು ವಿರೋಧಿಸಿದ್ದರು.
ಹಾಗೆ ನೋಡಿದರೆ, ಅಭಿಜಿತ್ ದೀಪ್ಕೆ ರಾತ್ರೋರಾತ್ರಿ ಆರಂಭಿಸಿದ ಈ ಜಿರಳೆ ಜನತಾ ಪಕ್ಷದ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೆಲವೇ ದಿನದಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್‌ಗಳನ್ನು ಪಡೆದರೂ, ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳು ಸಿಜೆಪಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸಿದಾಗಲೂ, ಬಿಜೆಪಿ ನಾಯಕರು ಹತ್ತರಲ್ಲಿ ಹನ್ನೊಂದನೇ ಹೋರಾಟ ಎನ್ನುವ ಭಾವನೆಯಲ್ಲಿಯೇ ನಿರ್ಲಕ್ಷ್ಯ ತೋರಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ 12-13 ವರ್ಷದಲ್ಲಿ ಕೇಂದ್ರದ ವಿರುದ್ಧ ಹತ್ತು ಹಲವು ಹೋರಾಟಗಳು ನಡೆದವು. ಸಿಎಎ, ರೈತರ ಹೋರಾಟ ಸೇರಿದಂತೆ ಅನೇಕರ ಪ್ರತಿಭಟನೆಗಳು ನಡೆದರೂ, ಯಾವುದೂ ಸರಕಾರಕ್ಕೆ ಬಿಸಿ ಮುಟ್ಟಿಸುವ ಹಂತಕ್ಕೆ ಹೋಗಲಿಲ್ಲ. ಕೃಷಿ ಬಿಲ್ ವಿರೋಧಿಸಿ ರೈತರು ನಡೆಸಿದ ಹೋರಾಟದ ವೇಳೆ ಗಲಭೆಗಳಾದರೂ, ಕೆಲವೇ ದಿನದಲ್ಲಿ ಇಡೀ ಹೋರಾಟವನ್ನು ನಿಯಂತ್ರಣಕ್ಕೆ ತೆಗೆದು ಕೊಳ್ಳುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು.
ಆ ಹೋರಾಟಗಳಿಗೆ ಹೋಲಿಸಿದರೆ, ಜಿರಳೆಗಳು ಆರಂಭಿಸಿದ್ದ ಈ ಹೋರಾಟದಲ್ಲಿ ನೇತೃತ್ವ ವಹಿಸುವ ನಾಯಕತ್ವವಿಲ್ಲವೆಂದು ಇಡೀ ಪ್ರತಿಭಟನೆಯನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿತ್ತು. ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಆರಂಭಿಸಿದರೂ, ಮೊದಲ ಎರಡು ವಾರ ಕೇಂದ್ರ ಸಚಿವರು ಹೋಗಲಿ, ಇಲಾಖೆಯ ಅಧಿಕಾರಿಗಳು ಕೂಡ ಅತ್ತ ತಲೆಹಾಕಲಿಲ್ಲ. ಯಾವಾಗ ವಾಂಗ್‌ಚುಕ್‌ರನ್ನು ಆಸ್ಪತ್ರೆಗೆ ದಾಖಲಿಸಲಾಯಿತೋ, ಆಗ ಪ್ರತಿಭಟನೆಯ ಕಾವು ಬಿಜೆಪಿ ನಾಯಕರ ತಾಕಲು ಶುರುವಾಗಿತ್ತು.
ಈ ಎಲ್ಲ ಘಟನೆಗಳ ಬಳಿಕವೇ ಜೆ.ಪಿ ನಡ್ಡಾ, ಜಿತೇಂದ್ರ ಕುಮಾರ್ ಸಂಧಾನ ಮಾತುಕತೆಗೆ ಮುಂದಾ ದರು. ಇನ್ನೊಂದೆಡೆ ಕಠಿಣ ಕಾನೂನಿನ ಪ್ರಸ್ತಾಪವನ್ನು ಇತರೆ ನಾಯಕರಿಂದ ಮುಂದಿಟ್ಟರು. ಇದ್ಯಾವುದಕ್ಕೂ ಬಗ್ಗದೇ ಪ್ರತಿಭಟನೆಯ ತೀವ್ರತೆ ಹೆಚ್ಚಿಸಿ, ಹಿಂಸಾತ್ಮಕವಾಗಿ ಇಡೀ ಹೋರಾಟ ತಿರುಗುವ ಆತಂಕ ಎದುರಾಗಿ, ದೇಶ ವಿರೋಧಿ ಹೇಳಿಕೆಗಳು ಬರಲು ಶುರುವಾಯಿತೋ ಆಗ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ದೇಶದ ಯುವಕರ ವಿಶ್ವಾಸ ಗಳಿಸಲು ಪ್ರಯತ್ನಿಸಿದರು. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಪ್ರತಿಭಟನೆಯ ಕಾವು ತಗ್ಗದೇ ಹೋದಾಗ ಅನಿವಾರ್ಯವಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಯನ್ನು ಪಡೆಯುವ ದಾರಿ ಕಂಡುಕೊಂಡು, ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ನಾಯಕರು ಮುಂದಾದರು.
ಜಿರಳೆಗಳ ಹೋರಾಟದ ವಿಷಯದಲ್ಲಿ ಬಿಜೆಪಿ ಮಾತ್ರವಲ್ಲದೇ, ಪ್ರತಿಪಕ್ಷ ಕಾಂಗ್ರೆಸ್ ಸಹ ಎಡವಿತು ಎಂದರೆ ತಪ್ಪಾಗುವುದಿಲ್ಲ. ನೀಟ್ ಅಕ್ರಮ ನಡೆದ ಬಳಿಕ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಂದ ಹಿಡಿದು ಎಲ್ಲರೂ ಇಡೀ ವಿಷಯವನ್ನು ರಾಜಕೀಯವಾಗಿ ನೋಡಿ, ಬಿಜೆಪಿ ವಿರುದ್ಧ ಹರಿಹಾಯ್ದರು ಹೊರತು, ಎಲ್ಲಿಯೂ ಯುವಕರನ್ನು ಜತೆಯಲ್ಲಿ ಕರೆದುಕೊಂಡು ಹೋರಾಟ ಮಾಡಬೇಕು ಎನ್ನುವ ಲೆಕ್ಕಾಚಾರವನ್ನು ಮಾಡಲೇ ಇಲ್ಲ. ಜಿರಳೆ ಪಕ್ಷ ಪ್ರತಿಭಟನೆ ಆರಂಭಿಸಿ ದಾಗಲೂ, ಅವರಿಗೆ ನೈತಿಕ ಬೆಂಬಲವನ್ನು ನೀಡುವ ಬಗ್ಗೆ ಕಾಂಗ್ರೆಸಿಗರು ಪ್ರಯತ್ನಿಸಲಿಲ್ಲ.
ಯಾವಾಗ ದೆಹಲಿಯ ಜಂತರ್ ಮಂತರ್‌ನಲ್ಲಿ ಲಾಠಿ ಚಾರ್ಜ್ ನಡೆಯಿತೋ, ಆಗಲೇ ಈ ಹೋರಾಟದ ತೀವ್ರತೆ ಕಾಂಗ್ರೆಸಿಗರಿಗೂ ಅರ್ಥವಾಯಿತು. ಇದಾಗುತ್ತಿದ್ದಂತೆ ಇಡೀ ಹೋರಾಟವನ್ನು ‘ಹೈಜಾಕ್’ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಪ್ರತಿಭಟನೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ಬಂಧನ ಸೇರಿದಂತೆ ಹಲವು ರೀತಿಯ ರಾಜಕೀಯ ಗಿಮಿಕ್‌ಗಳು ನಡೆದವು.
ಕಾಂಗ್ರೆಸ್ ಒತ್ತಡ ಎನ್ನುವುದಕ್ಕಿಂತ ಯುವಕರು ಸರಕಾರದ ವಿರುದ್ಧ ತಿರುಗಿ ಬೀಳುವುದು ಖಚಿತ ವಾಗುತ್ತಿದ್ದಂತೆ ಬಿಜೆಪಿ ನಾಯಕರು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದರು. ಇದಾಗು ತ್ತಿದ್ದಂತೆ, ಕಾಂಗ್ರೆಸಿಗರು ತಮ್ಮ ಹೋರಾಟದ ಗೆಲುವು ಎಂದು ಕ್ಲೇಮ್ ಮಾಡಿಕೊಳ್ಳಲು ಶುರುಮಾಡಿದರು. ಜತೆಜತೆಗೆ ದೆಹಲಿ ನಾಯಕರು ಸೇರಿದಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್‌ರಿಂದ ಹಿಡಿದು ಎಲ್ಲರೂ ರಾಹುಲ್ ಗಾಂಧಿ ಅವರಿಗೆ ಈ ಹೋರಾಟದ ಕ್ರೆಡಿಟ್ ನೀಡಲು ಪ್ರಯತ್ನಿಸಿದರು. ಆದರೆ ಯುವಕರು ಮಾತ್ರ ಈ ವಿಷಯದಲ್ಲಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳನ್ನು ನಂಬಿಲ್ಲ ಎನ್ನುವುದು ಸ್ಪಷ್ಟ.
ರಾಷ್ಟ್ರಾದ್ಯಂತ ನೀಟ್ ಪೇಪರ್ ಸೋರಿಕೆ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹೋರಾಟಗಳಾದ ಬಳಿಕ ತಡವಾಗಿಯಾದರೂ ಕಾಂಗ್ರೆಸ್ ನಾಯಕರು ಬೀದಿಗೆ ಇಳಿದು ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದರು. ಕಾಂಗ್ರೆಸಿಗರ ಆರೋಪಕ್ಕೆ ಬಿಜೆಪಿಗರು ಮೋದಿ, ಅಮಿತ್ ಶಾ ಹಾಗೂ ಧರ್ಮೇಂದ್ರ ಪ್ರಧಾನ್ ಅವರನ್ನು ಡಿಫೆಂಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಪ್ರತಿವರ್ಷ ಯುವಕರ ಜೀವನದೊಂದಿಗೆ ಆಟವಾಡುವ ಕೆಪಿಎಸ್‌ಸಿ ವಿರುದ್ಧ ಮಾತ್ರ ರಾಜ್ಯ ಬಿಜೆಪಿ ನಾಯಕರು ಚಕಾರವೆತ್ತಲಿಲ್ಲ. ಅದರಲ್ಲಿಯೂ ಕೆಪಿಎಸ್‌ಸಿ ಅಧ್ಯಕ್ಷರನ್ನೇ ವಜಾಗೊಳಿಸಿ ರಾಜ್ಯಪಾಲ ರು ಆದೇಶ ಹೊರಡಿಸಿ, ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿ ಎಂದು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದರೂ, ಈ ವಿಷಯವೇ ಗೊತ್ತಿಲ್ಲ ಎನ್ನುವಂತೆ ಬಿಜೆಪಿ ನಾಯಕರು ವರ್ತಿಸಿದರು.
ಯಾವುದೇ ಸರಕಾರ ಬಂದರೂ, ಕೆಪಿಎಸ್‌ಸಿಯಲ್ಲಿನ ಹಗರಣಗಳಿಗೆ ಕೊನೆಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಪಿಎಸ್‌ಸಿ ವಿರುದ್ಧ ಧ್ವನಿ ಎತ್ತಲು ಬಿಜೆಪಿಯಲ್ಲಿಯೂ ಕೆಲ ಸಮಸ್ಯೆಗಳಿದ್ದರೂ, ಪ್ರತಿಪಕ್ಷಕ್ಕೆ ಸಿಕ್ಕಿದ್ದ ಬಹುದೊಡ್ಡ ಅಸವನ್ನು ಕೈಚೆಲ್ಲಿತ್ತು. ಆದರೆ ನೀಟ್ ವಿವಾದವನ್ನು ಮುಂದಿಟ್ಟು ಕೊಂಡು ದೇಶಾದ್ಯಂತ ಯುವಕರು ಹೋರಾಡುತ್ತಿರುವ ಹೊತ್ತಿನಲ್ಲಿಯೇ ಬೆಳಕಿಗೆ ಬಂದ ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿಯ ನಕಲಿ ದಾಖಲೆಯ ಆರೋಪ, ಪಶುವೈದ್ಯಾಧಿಕಾರಿಗಳ ನೇಮಕಕ್ಕೆ 80 ಲಕ್ಷ ಡಿಮ್ಯಾಂಡ್ ಇಟ್ಟ ವಿಷಯವನ್ನು ಅಭ್ಯರ್ಥಿಗಳೇ ಬಿಜೆಪಿ ನಾಯಕರ ಕೈಕೊಟ್ಟರೂ, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದು ಎನ್ನುವ ಸಣ್ಣ ಆಲೋಚನೆಯನ್ನು ಬಿಜೆಪಿ ನಾಯಕರು ಮಾಡಲಿಲ್ಲ. ಯುವಕರ ಹಿತಾಸಕ್ತಿ ಹೋಗಲಿ, ದೇಶಾದ್ಯಂತ ನೀಟ್ ವಿಷಯದಲ್ಲಿ ಬಿಜೆಪಿ ಸರಕಾರಕ್ಕೆ ಆಗುತ್ತಿರುವ ಡ್ಯಾಮೇಜ್ ಅನ್ನು ತಗ್ಗಿಸಲು ಕರ್ನಾಟಕದಲ್ಲಿನ ಕೆಪಿಎಸ್‌ಸಿ ಹಗರಣದ ಬಗ್ಗೆ ಧ್ವನಿ ಎತ್ತಬೇಕು ಎನ್ನುವ ಸಣ್ಣ ಆಲೋಚನೆಯೂ ರಾಜ್ಯ ಬಿಜೆಪಿ ನಾಯಕರಿಗೆ ಬಾರದಿರುವುದು, ಇಂದಿನ ಕರ್ನಾಟಕ ಬಿಜೆಪಿ ಪರಿಸ್ಥಿತಿ ಯನ್ನು ತೋರಿಸುತ್ತದೆ.
ಕರ್ನಾಟಕದಲ್ಲಿನ ಕೆಪಿಎಸ್‌ಸಿ ಹಗರಣದ ಬಗ್ಗೆ ಧ್ವನಿ ಎತ್ತಿದರೆ, ಎಲ್ಲಿ ತಮ್ಮ ಬುಡಕ್ಕೆ ಬರುತ್ತದೆ ಯೋ ಎನ್ನುವ ಆತಂಕದಲ್ಲಿ ಬಿಜೆಪಿ ನಾಯಕರಿದ್ದಾರೆ. ಏಕೆಂದರೆ, ಶಿವಶಂಕರಪ್ಪ ಸಾಹುಕಾರ್ ಅವರು ನೇಮಕವಾಗಿದ್ದು 2021ರ ಅವಧಿಯಲ್ಲಿ. ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕವಾದ ಅಧ್ಯಕ್ಷ ಎನ್ನುವ ಕಾರಣಕ್ಕೆ, ಬಿಜೆಪಿ ವಿರುದ್ಧ ಆರೋಪ ಬರುತ್ತದೆ ಎಂದು ಬಿಜೆಪಿಗರು, ನಮ್ಮ ಸರಕಾರದ ಅವಧಿಯಲ್ಲಿ ಅಕ್ರಮ ನಡೆದಿರುವುದರಿಂದ ನಮ್ಮ ಬುಡಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಕಾಂಗ್ರೆಸಿಗರು ಮೌನಕ್ಕೆ ಶರಣಾಗಿದ್ದಾರೆ. ಕೆಪಿಎಸ್‌ಸಿ ವಿಷಯಕ್ಕೆ ಕೈಹಾಕಿದರೆ ನಮಗೆ ಡ್ಯಾಮೇಜ್ ಎನ್ನುವ ಕಾರಣಕ್ಕೆ, ರಾಜ್ಯದ ಯುವಕರಿಗೆ ಅನ್ಯಾಯವಾಗುತ್ತಿರುವುದು ತಿಳಿಯು ತ್ತಿದ್ದರೂ, ಎರಡೂ ಪಕ್ಷದವರು ‘ಮೌನ’ಕ್ಕೆ ಶರಣಾಗಿದ್ದಾರೆ.
ದೇಶದಲ್ಲಿ ಜಿರಳೆಗಳ ಹೋರಾಟ ಶುರುವಾಗುವ ಮೊದಲೇ, ಧಾರವಾಡದಲ್ಲಿ ಯುವಕರ ಪ್ರತಿಭಟನೆ ನಡೆದಿತ್ತು. ಸರಕಾರಿ ಕೆಲಸಗಳಿಗೆ ಅಧಿಸೂಚನೆ ಹೊರಡಿಸಿಲ್ಲ ಎನ್ನುವ ಕಾರಣಕ್ಕೆ ಹೋರಾಟ ಆರಂಭಿಸಿ, ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ವೇಳೆಗೆ ಹೈಕೋರ್ಟ್ ಮಧ್ಯಪ್ರವೇಶ ಹಾಗೂ ರಾಜಕೀಯ ನಾಯಕರ ಹೇಳಿಕೆಗಳಿಂದ ಇಡೀ ಹೋರಾಟ ‘ಸಪ್ಪೆ’ಯಾಗಿತ್ತು. ಇದೇ ರೀತಿ ದೇಶದ ಹಲವು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಯುವಕರು ಪ್ರತಿಭಟನೆಯ ಹಾದಿ ಹಿಡಿಯು ತ್ತಿರುವ ಹಲವು ನಿದರ್ಶನ ಗಳಿವೆ. ಆದರೆ ನೀಟ್ ವಿಷಯದಲ್ಲಿ ಜಿರಳೆ ನಾಯಕತ್ವ ವಹಿಸಿಕೊಂಡಿದ್ದ ರಿಂದ ಈ ಹೋರಾಟ ಮತ್ತೊಂದು ಸ್ತರಕ್ಕೆ ಹೋಗಿ, ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿತು ಎಂದರೆ ತಪ್ಪಾಗುವುದಿಲ್ಲ.
ಜಿರಳೆಗಳಿಂದ ಶುರುವಾದ ಈ ಹೋರಾಟ ತೀವ್ರ ಸ್ವರೂಪ ಪಡೆಯಲು ಹತ್ತು ಹಲವು ಕಾರಣಗಳಿರ ಬಹುದು. ಅದರಲ್ಲಿ ಬಿಜೆಪಿ ಆರೋಪಿಸುತ್ತಿರುವಂತೆ, ಶಾಂತಿ ಕದಡಲು ಎಡಪಂಥೀಯರ ಪ್ರಯತ್ನ, ರಾಜಕೀಯ ಮೈಲೇಜ್‌ಗಾಗಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಷಡ್ಯಂತ್ರವೆಲ್ಲವೂ ಸೇರಿ ಈ ಪ್ರಮಾಣ ದಲ್ಲಿ ಹೋರಾಟ ನಡೆದು, ಪ್ರಧಾನಿ ಆಪ್ತ ಪ್ರಧಾನ್ ರಾಜೀನಾಮೆಯವರೆಗೆ ಬಂದಿರಬಹುದು. ಆದರೆ ಪದೇಪದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳ ಬಗ್ಗೆ ಪಕ್ಷಾತೀತ ಆಕ್ರೋಶ ಕುದಿಯುತ್ತಿತ್ತು.
ಇಡೀ ಪ್ರಕರಣವನ್ನು ರಾಜಕೀಯ ಕನ್ನಡಿಯ ಆಚೆ ನೋಡಿದಾಗಲೂ, ಯುವಕರಲ್ಲಿನ ಆಕ್ರೋಶ ತಪ್ಪು ಎನ್ನಲು ಸಾಧ್ಯವಿಲ್ಲ. ಜಿರಳೆ ಪಕ್ಷದಿಂದ ಆರಂಭಗೊಂಡಾಗ ಈ ಪರಿಪ್ರಮಾಣದಲ್ಲಿ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತದೆ ಎನ್ನುವುದು ಸ್ವತಃ ಪ್ರತಿಭಟನೆ ಆರಂಭಿಸಿದವರಿಗೆ ತಿಳಿದಿರಲಿಲ್ಲ. ಆದರೆ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಅಸಹನೀಯ ಆಕ್ರೋಶ ಯುವಕರ ಮನಸ್ಸಿನಲ್ಲಂತೂ ಇತ್ತು. ಅದಕ್ಕೆ ವೇದಿಕೆಯಾಗಿ ಜಿರಳೆ ಪಾರ್ಟಿ ಕಾಣಿಸಿಕೊಂಡಿತ್ತು. ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ಈ ಎಲ್ಲ ಪ್ರತಿಭಟನೆ, ಗದ್ದಲ, ಗಲಾಟೆಗಳಿಗೆ ಬ್ರೇಕ್ ಹಾಕುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ಮುಂದಿನ ದಿನದಲ್ಲಿ ಪರೀಕ್ಷಾ ಅಕ್ರಮವನ್ನು ತಡೆಯಲು ಕಠಿಣ ಕಾನೂನು ಮಾತ್ರವಲ್ಲದೇ, ಅದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ಕೈತೊಳೆದುಕೊಳ್ಳುವ ಬದಲು, ಇಂತಹ ಅಕ್ರಮಗಳಿಗೆ ಶಾಶ್ವತ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ.
ಹಾಗೆ ನೋಡಿದರೆ ಕೇಂದ್ರ ಸರಕಾರವಷ್ಟೇ ಅಲ್ಲದೇ, ರಾಜ್ಯ ಸರಕಾರಗಳೂ ಈ ವಿಷಯದಲ್ಲಿ ಈಗಲೇ ಎಚ್ಚೆತ್ತುಕೊಳ್ಳುವ ಕೆಲಸವಾಗಬೇಕಿದೆ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವು ದಾದರೆ, ಕೆಪಿಎಸ್‌ಸಿಯಿಂದ ನಡೆಯುವ ನೇಮಕ ಪ್ರಕ್ರಿಯೆಗಳಲ್ಲಿ ವಿವಾದವಿಲ್ಲದೇ, ಪ್ರಕ್ರಿಯೆ ಮುಕ್ತಾಯವಾಗಿರುವ ಒಂದೇ ಒಂದು ಉದಾಹರಣೆಯಿಲ್ಲ. ಸ್ವತಃ ಕೆಪಿಎಸ್‌ಸಿ ಅಧ್ಯಕ್ಷರೇ ಅಕ್ರಮ ದಲ್ಲಿ ಶಾಮೀಲಾಗಿರುವ, ಅಧ್ಯಕ್ಷರ ಪುತ್ರಿಯೇ ನಕಲಿ ದಾಖಲೆಗಳನ್ನು ಸಲ್ಲಿಸಿ ಕೆಲಸ ಪಡೆಯುವ ಹಂತಕ್ಕೆ ಬಂದಿದೆ. ನೀಟ್ ವಿರುದ್ಧ ಯುವಕರ ಆಕ್ರೋಶವಿರುವಷ್ಟೇ, ಕರ್ನಾಟಕದ ಕೆಪಿಎಸ್‌ಸಿ ವಿರುದ್ಧವೂ ರಾಜ್ಯದ ಯುವಕರಲ್ಲಿದೆ. ಆದರೆ ಈ ಆಕ್ರೋಶಕ್ಕೆ ಜಿರಳೆ ಪಾರ್ಟಿ ರೀತಿಯ ಕಿಚ್ಚು ಹೊತ್ತದೇ ಇರುವುದರಿಂದ ಅಲ್ಲಲ್ಲಿ, ಸಣ್ಣ-ಪುಟ್ಟ ಪ್ರತಿಭಟನೆಯಲ್ಲಿ ಇತ್ಯರ್ಥವಾಗುತ್ತಿದೆ. ನೀಟ್ ದಂಗೆಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕದ ಕೆಪಿಎಸ್‌ಸಿ ಸೇರಿದಂತೆ ಪ್ರತಿಯೊಂದರ ‘ಶುದ್ಧೀಕರಣ’ಕ್ಕೆ ಆಯಾ ಸರಕಾರಗಳು ಕಠಿಣ ಕ್ರಮಕ್ಕೆ ಮುಂದಾಗ ಬೇಕಿದೆ. ಇಲ್ಲದೇ ಹೋದರೆ, ಯುವಕರ ಈ ಕಿಚ್ಚಿಗೆ ಇಂದಲ್ಲ, ನಾಳೆ ಪಕ್ಷಗಳು, ಸರಕಾರಗಳು ಆಹುತಿಯಾಗುವುದಂತೂ ಸುಳ್ಳಲ್ಲ.