ಸಂಗತ
ಗೋವಾ ಎಂಬ ಅದ್ಭುತ ಪ್ರವಾಸಿ ತಾಣದಲ್ಲಿ ಭ್ರಷ್ಟಾಚಾರ, ದುರಾಚಾರ ಹಾಗೂ ಸಾವಿನ ವ್ಯಾಪಾರಿಗಳ ಆಟಾಟೋಪವೇ ಆಡಳಿತ ನಡೆಸುತ್ತಿದೆ. ಡ್ರಗ್ಸ್ ಮಾಫಿಯಾ ಗೋವಾದಲ್ಲಿ ಅನಿಯಂತ್ರಿತವಾಗಿ ಬೆಳೆದಿದೆ. ಅಲ್ಲಿನ ಮೋಜಿನ ಸುಂದರ ರಾತ್ರಿಗಳ ಹಿಂದಿನ ಕಟು ಸತ್ಯಗಳೇ ಬೇರೆ ಇವೆ. ಇದಕ್ಕೆ ಕಡಿವಾಣ ಹಾಕುವವರು ಯಾರು?
ಪ್ರವಾಸಿಗರ ಸ್ವರ್ಗ ಗೋವಾ. ಜಾಗತಿಕ ಪ್ರವಾಸೋದ್ಯಮದಲ್ಲಿ ಅದಕ್ಕೊಂದು ಅದ್ಭುತ ವಾದ ಸ್ಥಾನವಿದೆ. ಚಳಿಗಾಲದ ಬಿಸಿಲಿನಲ್ಲಿ ಪ್ರವಾಸಿಗರು ಗೋವಾದ ಬೀಚುಗಳಲ್ಲಿ ಮಲಗಿ ಹಿತವಾದ ಸುಖ ಅನುಭವಿಸುವುದು ಹಾಗೂ ಅಲ್ಲಿನ ಮೋಜಿನ ರಾತ್ರಿಗಳಲ್ಲಿ ಪಾರ್ಟಿ ಮಾಡಿ ಸಂತೋಷ ಅನುಭವಿಸುವುದು ನಮಗೆಲ್ಲರಿಗೂ ಗೊತ್ತು. ಆದರೆ ಆ ಸುಂದರ ಮುಖವಾಡದ ಹಿಂದೊಂದು ಸಮಸ್ಯೆಯೂ ಇದೆ.
ಅದು ಬಹಳ ಜನರಿಗೆ ಗೊತ್ತಿಲ್ಲ. ಗೋವಾದ ಪ್ರಸಿದ್ಧ ನೈಟ್‌ಲೈಫ್ʼನ ಹಿಂದೆ ಕರಾಳ ದಂಧೆ ಗಳು ನಡೆಯುತ್ತವೆ. ಅಲ್ಲಿ ಭ್ರಷ್ಟಾಚಾರ, ಮಾದಕ ದ್ರವ್ಯಗಳ ವ್ಯಾಪಾರ, ದುರಾಚಾರ, ಮನುಷ್ಯನ ಜೀವಕ್ಕೆ ಬೆಲೆ ಕೊಡದ ಕಟುಕರ ದರ್ಬಾರೇ ಆಡಳಿತ ನಡೆಸುತ್ತದೆ.
ಅತ್ಯಂತ ಆಘಾತಕಾರಿ ಸಂಗತಿ ಏನೆಂದರೆ ಹೀಗೆ ದರ್ಬಾರು ನಡೆಸುವವರು ಸಾವಿನ ವ್ಯಾಪಾರಿಗಳಾಗಿದ್ದಾರೆ. ಅವರು ಜನರ ಜೀವದ ಸುರಕ್ಷತೆಗೆ ಯಾವ ಬೆಲೆಯನ್ನೂ ಕೊಡುವು ದಿಲ್ಲ. ಅವರು ನೋಡುವುದು ಹಣದ ಮುಖವನ್ನು ಮಾತ್ರ. ಸರ್ಕಾರ ಅಥವಾ ಆಡಳಿತ ಯಂತ್ರದ ತೆಕ್ಕೆಗೂ ಇವರು ಸಿಗುವುದಿಲ್ಲ. ಇವರನ್ನು ನೋಡಿ ಸ್ಥಳೀಯ ಆಡಳಿತವು ಗಾಂಧೀ ಜಿಯ ಮೂರು ಮಂಗಗಳಂತೆ ಕುಳಿತಿರುತ್ತದೆ.
ಆ ಮಂಗಗಳು ಸತ್ಯವನ್ನು ನೋಡುವುದಕ್ಕೆ ಇಷ್ಟಪಡುವುದಿಲ್ಲ, ಸತ್ಯವನ್ನು ಕೇಳುವುದಕ್ಕೆ ಬಯಸುವುದಿಲ್ಲ ಮತ್ತು ಸತ್ಯವನ್ನು ಮಾತನಾಡುವುದಕ್ಕಂತೂ ಬಿಲ್‌ಕುಲ್ ಸಿದ್ಧವಿಲ್ಲ. ಇತ್ತೀಚೆಗೆ ಗೋವಾದ ನೈಟ್‌ಕ್ಲಬ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಇಪ್ಪತ್ತೈದು ಜನರು ಸಾವನ್ನಪ್ಪಿದ ಘೋರ ಘಟನೆಗೂ ಈ ಮಂಗಗಳೇ ಕಾರಣ!
ಇದನ್ನೂ ಓದಿ: Dr Vijay Darda Column: ಮೋದಿ-ಪುಟಿನ್: ಯೇ ದೋಸ್ತಿ ಹಮ್ ನಹೀ ತೋಡೆಂಗೇ !
ಅಗ್ನಿ ದುರಂತದ ಬಗ್ಗೆ ವಿವರವಾಗಿ ಚರ್ಚಿಸುವುದಕ್ಕೂ ಮೊದಲು ಇನ್ನೊಂದು ವಿಷಯ ವನ್ನು ಗಮನಿಸಬೇಕು. ನಮ್ಮ ದೇಶದಲ್ಲಿ ಹಸಿರು ನ್ಯಾಯಾಧೀಕರಣ ಎಂಬ ನ್ಯಾಯಾಂಗ ವ್ಯವಸ್ಥೆಯೊಂದಿದೆ. ಅದಕ್ಕೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಮುಖ್ಯಸ್ಥ ರಾಗಿರುತ್ತಾರೆ.
ದೇಶದಲ್ಲಿ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ನಿಯಂತ್ರಿಸುವುದು ಅದರ ಜವಾಬ್ದಾರಿ. ನಮಗೆ ಗೊತ್ತಿರುವಂತೆ ಭಾರತದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಸರಕಾರಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲ. ಹೀಗಾಗಿ ಅಳಿದುಳಿದಿರುವ ಹಸಿರಿನ ರಕ್ಷಣೆಯ ಬಗ್ಗೆ ಅವು ತಲೆಕೆಡಿಸಿ ಕೊಳ್ಳುತ್ತಿಲ್ಲ.
ಹಾಗಿರುವಾಗ ಗುಣಮಟ್ಟದ ಪ್ರವಾಸೋದ್ಯಮವನ್ನು ನಾವು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ? ಪ್ರವಾಸೋದ್ಯಮಕ್ಕೆ ಒಂದು ದೇಶದ ಹಣೆಬರಹವನ್ನೇ ರೂಪಾಂತರಗೊಳಿಸುವ ಶಕ್ತಿಯಿದೆ. ಒಳ್ಳೆಯ ಉದಾಹರಣೆಯೆಂದರೆ ಸ್ಪೇನ್. ಅದರ ಆರ್ಥಿಕತೆ ಒಂದು ಕಾಲದಲ್ಲಿ ಸಂಪೂರ್ಣ ಕುಸಿದುಹೋಗಿತ್ತು. ಆದರೆ ಆ ದೇಶದ ಸರ್ಕಾರ ಹಟಕ್ಕೆ ಬಿದ್ದು ಪ್ರವಾಸೋ ದ್ಯಮದ ಮೂಲಕ ದೇಶವನ್ನು ಮರುನಿರ್ಮಾಣ ಮಾಡುವ ಸಂಕಲ್ಪ ಮಾಡಿತು. ಅದರಂತೆ ಸ್ಪೇನ್ ಇಂದು ಪ್ರವಾಸೋದ್ಯಮದಿಂದಲೇ ತನ್ನ ಭವಿಷ್ಯವನ್ನು ಕಟ್ಟಿಕೊಂಡಿದೆ.
ಆದರೆ ನಮ್ಮ ದೇಶದಲ್ಲಿ ಪ್ರವಾಸೋದ್ಯಮದ ಸ್ಥಿತಿ ಹೇಗಿದೆ? ಈ ಹಿಂದೆಯೇ ನಾನು ಅಂಕಣ ಗಳಲ್ಲಿ ಬರೆದಿದ್ದೆ. ನಮ್ಮ ದೇಶದಲ್ಲಿ ಎರಡು ರೀತಿಯ ಪ್ರವಾಸೋದ್ಯಮವಿದೆ. ಒಂದು, ದೇಸಿ ಪ್ರವಾಸೋದ್ಯಮ, ಇನ್ನೊಂದು ಅಂತಾರಾಷ್ಟ್ರೀಯ ಪ್ರವಾಸೋದ್ಯಮ. ವಿದೇಶಗಳಿಂದ ಇಲ್ಲಿಗೆ ಬರುವವರಲ್ಲಿ ಒಂದಷ್ಟು ಜನರು ಶ್ರೀಮಂತರಾಗಿದ್ದರೆ, ಇನ್ನುಳಿದವರು ತಮ್ಮಲ್ಲಿ ರುವ ಉಳಿತಾಯದ ಹಣವನ್ನು ಅಳೆದು ತೂಗಿ ಖರ್ಚು ಮಾಡುವ ಮಧ್ಯಮ ವರ್ಗದ ಪ್ರವಾಸಿಗರು.
ದುರದೃಷ್ಟವಶಾತ್ ಗೋವಾಕ್ಕೆ ಬರುವವರಲ್ಲಿ ಕಡಿಮೆ ಬಜೆಟ್ʼನ ಪ್ರವಾಸಿಗರೇ ಹೆಚ್ಚು. ಅವರಲ್ಲಿ ಅನೇಕರ ಕೈಯಲ್ಲಿ ವಾಪಸ್ ಹೋಗಲು ವಿಮಾನದ ಟಿಕೆಟ್‌ಗೂ ಹಣವಿರುವು ದಿಲ್ಲ. ಅಂತಹವರು ಇಲ್ಲೇ ತಲೆಮರೆಸಿಕೊಂಡು, ಜೀವನೋಪಾಯಕ್ಕಾಗಿ ಎಲ್ಲಾ ರೀತಿಯ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
ಗೋವಾದಲ್ಲಿ ನಡೆಯುತ್ತಿರುವುದೇ ಇದು. ನಾನು ಈ ವಿಷಯವನ್ನು ಸಂಸತ್ತಿನಲ್ಲೂ ಪ್ರಸ್ತಾ ಪಿಸಿದ್ದೆ. ಆದರೆ ಗೋವಾದ ಭೂಗತ ಲೋಕದ ಸಂಪರ್ಕಗಳು ಎಷ್ಟು ಪ್ರಭಾವಶಾಲಿ ಯಾಗಿವೆ ಅಂದರೆ, ಯಾರು ಏನೇ ಹೇಳಿದರೂ ಅಲ್ಲಿನ ತಳಮಟ್ಟದ ಚಟುವಟಿಕೆಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.
ಇನ್ನೊಂದು ಬಹಳ ಮುಖ್ಯವಾದ ವಿಷಯವಿದೆ. ವಿದೇಶಗಳಲ್ಲಿ ಬೀಚುಗಳ ಸಂರಕ್ಷಣೆಗೆ ತುಂಬಾ ಮಹತ್ವ ನೀಡುತ್ತಾರೆ. ಕರಾವಳಿಯ ಪರಿಸರವನ್ನು ಘಾಸಿಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಿಯಮಗಳು ಕಟ್ಟುನಿಟ್ಟಾಗಿರುತ್ತವೆ. ಶಿಕ್ಷೆಯೂ ಕಠಿಣ ವಾಗಿರು ತ್ತದೆ. ಆದರೆ ನಮ್ಮ ದೇಶದಲ್ಲಿ ನಡೆಯುತ್ತಿರುವುದೇನು? ಸಮುದ್ರದ ದಂಡೆಯಿಂದ 500 ಮೀಟರ್ ದೂರದವರೆಗೆ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂಬ ನಿಯಮ ನಮ್ಮಲ್ಲಿದೆ.
ಆದರೆ ವಾಸ್ತವದಲ್ಲಿ ಆ 500 ಮೀಟರಿನ ಒಳಗೇ ಎಲ್ಲಾ ರೀತಿಯ ಚಟುವಟಿಕೆಗಳೂ ನಡೆ ಯುತ್ತಿವೆ. ನಮ್ಮಲ್ಲಿರುವ ಕ್ಯಾಸಿನೋಗಳು ಯಾವ ಪರಿಸರ ಸಂಬಂಧಿ ನಿಯಮಗಳನ್ನೂ ಪಾಲಿಸುವುದಿಲ್ಲ. ಅದರಿಂದ ಸಮುದ್ರದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಸಮುದ್ರ ದಲ್ಲಿ ವಾಸಿಸುವ ಜೀವಿಗಳು ಅಪಾಯಕ್ಕೆ ಸಿಲುಕುತ್ತಿವೆ. ನಮ್ಮ ಕಣ್ಣಿಗೆ ಕಾಣದಂತೆ ಸಮುದ್ರ ದೊಳಗೆ ರೋಗಗಳು ಹರಡುತ್ತಿವೆ.
ಅಲ್ಲಿನ ವಿಶಿಷ್ಟ ಜೀವಜಂತುಗಳು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿವೆ. ಇದನ್ನೆಲ್ಲ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿಗಳನ್ನು ಸಲ್ಲಿಸಲಾಗಿದೆ. ಆದರೆ ಗೋವಾದ ಸರಕಾರ ಕ್ಯಾರೇ ಅನ್ನುತ್ತಿಲ್ಲ.
ಅಗ್ನಿ ದುರಂತ ಸಂಭವಿಸಿದ ಗೋವಾದ ನೈಟ್ ಕ್ಲಬ್ ಪಣಜಿಯಿಂದ 25 ಕಿ.ಮೀ. ದೂರ ದಲ್ಲಿದೆ. ಅದು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಅಕ್ರಮವಾಗಿ ನಿರ್ಮಾಣವಾಗಿರುವ ನೈಟ್‌ಕ್ಲಬ್. ಜನವಸತಿಯಿಂದ ದೂರವಿರುವ, ಬೆಟ್ಟಗುಡ್ಡದ ರೀತಿಯ ಪರಿಸರದಲ್ಲಿ ಏಕಾಂಗಿಯಾಗಿ ಅದು ತಲೆಯೆತ್ತಿತ್ತು. ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಕೂಡ ಇರಲಿಲ್ಲ. ಹೀಗಾಗಿ ಬೆಂಕಿ ಬಿದ್ದಾಗ ಅಗ್ನಿಶಾಮಕ ವಾಹನಗಳು ಕ್ಲಬ್‌ವರೆಗೆ ಹೋಗುವುದಕ್ಕೇ ಹರಸಾಹಸ ಮಾಡಬೇಕಾಯಿತು.
ನೈಟ್‌ಕ್ಲಬ್‌ನಲ್ಲಿ ಪ್ರವಾಸಿಗರು ಕುಣಿಯುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿತಲ್ಲವೆ? ಆಗ ಅವರೆಲ್ಲರೂ ಜೀವ ಉಳಿಸಿಕೊಳ್ಳಲು ನೆಲಮಹಡಿಗೆ ಓಡಿದ್ದರು. ಆದರೆ ಅಲ್ಲಿ ವಾತಾ ಯನ ವ್ಯವಸ್ಥೆಯೇ ಇರಲಿಲ್ಲ. ಹೊರಗಿನ ಗಾಳಿ ಒಳಗೆ ಬರುತ್ತಿರಲಿಲ್ಲ, ಒಳಗಿನ ಗಾಳಿ ಹೊರಗೆ ಹೋಗುತ್ತಿರಲಿಲ್ಲ. ಬೆಂಕಿಯಿಂದ ರಕ್ಷಿಸಿಕೊಳ್ಳಲು ಅಲ್ಲಿಗೆ ಓಡಿದವರಿಗೆ ಹೊಗೆ ಯಿಂದ ಉಸಿರುಗಟ್ಟಿತ್ತು.
ಆದರೆ ಅಲ್ಲಿಂದ ಹೊರಗೆ ಓಡಲು ಅವರಿಗೆ ದಾರಿ ಇರಲಿಲ್ಲ. ಎಲೆಕ್ಟ್ರಿಕ್ ಪಟಾಕಿಗಳ ಕಿಡಿ ಯಿಂದ ಮರದ ಛಾವಣಿಗೆ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ ಬೆಂಕಿ ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸಿತ್ತು. ಮರದ ಛಾವಣಿಯಿರುವ ಕ್ಲಬ್‌ನಲ್ಲಿ ಎಲೆಕ್ಟ್ರಿಕ್ ಪಟಾಕಿಗಳನ್ನು ಸಿಡಿಸುವ ದಡ್ಡತನದ ಕೆಲಸವನ್ನು ಯಾರಾದರೂ ಮಾಡುತ್ತಾರೆಯೇ? ಈ ಕ್ಲಬ್ ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂದು 2023ರಲ್ಲೇ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು.
ನಂತರ ಈ ಕ್ಲಬ್ ಅಕ್ರಮವಾಗಿ ತ್ಯಾಜ್ಯದ ನೀರನ್ನು ನದಿಗೆ ಹರಿಸುತ್ತಿದೆ ಎಂದು ಇನ್ನೊಂದು ದೂರು ಸಲ್ಲಿಕೆಯಾಗಿತ್ತು. 2024ರ ಜನವರಿಯಲ್ಲಿ ಅರ್ಪೋರಾ ಗ್ರಾಮ ಪಂಚಾಯತ್‌ನ ಅಧಿಕಾರಿಗಳು ಈ ಕ್ಲಬ್‌ನ ತಪಾಸಣೆ ನಡೆಸಿದ್ದರು. ನಂತರ ಮಾರ್ಚ್‌ನಲ್ಲಿ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಕ್ಲಬ್‌ನ ಮಾಲಿಕರಾದ ಗೌರವ್ ಮತ್ತು ಸೌರಭ್ ಲೂಥ್ರಾ ಆ ನೋಟಿಸ್‌ಗೆ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ.
ನಿಮ್ಮ ಕ್ಲಬ್ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂದು ಕಂದಾಯ ಅಽಕಾರಿಗಳೂ ನೋಟಿಸ್ ಜಾರಿಗೊಳಿಸಿದ್ದರು. ಗೋವಾ ಕರಾವಳಿ ನಿರ್ವಹಣೆ ಪ್ರಾಧಿಕಾರ ಕೂಡ ಇನ್ನೊಂದು ನೋಟಿಸ್ ನೀಡಿತ್ತು. ಆದರೆ ಲೂಥ್ರಾ ಸಹೋದರರು ಎಷ್ಟೊಂದು ಪ್ರಭಾವಿಗಳು ಅಂದರೆ, ಎಲ್ಲಾ ನೋಟಿಸುಗಳನ್ನೂ ಅವರು ಕಸದ ಬುಟ್ಟಿಗೆ ಎಸೆದಿದ್ದರು!
ವಾಸ್ತವ ಏನೆಂದರೆ, ರಾಜಕೀಯ ರಕ್ಷಣೆ ಹೊಂದಿರುವ ಪ್ರಭಾವಿಗಳಿಗೆ ಲೂಟಿ ಹೊಡೆಯಲು ಗೋವಾ ಪ್ರಶಸ್ತ ತಾಣವಾಗಿ ಬದಲಾಗಿದೆ. ದೇಶದ ಎಲ್ಲಾ ಕಡೆಯಿಂದ ಪ್ರಭಾವಿ ಲೂಟಿ ಕೋರರು ಗೋವಾಕ್ಕೆ ಹೋಗಿ ಬಿಸಿನೆಸ್ ಮಾಡುತ್ತಿದ್ದಾರೆ. ಲೂಥ್ರಾ ಸಹೋದರರು ದೆಹಲಿ ಮೂಲದವರು. ಅವರಿಗೆ ಗೋವಾದ ನೈಟ್‌ಕ್ಲಬ್ ಕೇವಲ ಹಣ ಮಾಡುವ ದಂಧೆಯಾಗಿತ್ತು.
ಅಲ್ಲಿ ಜನರು ಬದುಕುತ್ತಾರೋ ಸಾಯುತ್ತಾರೋ ಎಂಬುದು ಅವರಿಗೆ ಬೇಕಿರಲಿಲ್ಲ. ತಮ್ಮದೇ ನೈಟ್‌ಕ್ಲಬ್‌ನಲ್ಲಿ ಇಪ್ಪತ್ತೈದು ಜನರು ಸತ್ತು ಹೋದಾಗ ಅವರು ನಡೆದುಕೊಂಡ ರೀತಿಯೇ ಅದಕ್ಕೆ ಸಾಕ್ಷಿ. ಕ್ಲಬ್‌ಗೆ ಬೆಂಕಿ ಬಿದ್ದಿರುವ ಸುದ್ದಿ ಅವರಿಗೆ ತಡರಾತ್ರಿ 1.15ರ ಸುಮಾರಿಗೆ ತಲುಪಿತ್ತು.
ಅವರಲ್ಲಿ ಕಿಂಚಿತ್ತಾದರೂ ಮಾನವೀಯತೆ ಇದ್ದಿದ್ದರೆ ತಕ್ಷಣ ಗೋವಾಕ್ಕೆ ಧಾವಿಸಿ ಸಾಂತ್ವನ ಹೇಳುತ್ತಿದ್ದರು. ಆದರೆ ಅವರು ಮಾಡಿದ್ದೇನು? ತಾಪ್ ತೋಪ್ಡ್ ಟಿಕೆಟ್ ಬುಕ್ ಮಾಡಿ ಕೊಂಡು 5.30ರ ವಿಮಾನದಲ್ಲಿ ಥಾಯ್ಲೆಂಡ್‌ಗೆ ಹಾರಿಹೋದರು. ವಿದೇಶಕ್ಕೆ ಪಲಾಯನ ಮಾಡಿದರೂ ಈಗ ಅವರು ಅಲ್ಲಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಭಾರತಕ್ಕೆ ಅವರನ್ನು ಕರೆತಂದು ಇಲ್ಲಿನ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಎಂಬುದು ಬೇರೆ ವಿಷಯ.
ಲೂಥ್ರಾ ಸಹೋದರರ ಕತೆ ಹಾಗಿರಲಿ. ಗೋವಾದಲ್ಲಿ ನಡೆಯುತ್ತಿರುವ ಅಕ್ರಮ ಕ್ಯಾಸಿನೋ ಗಳು ಮತ್ತು ನೈಟ್‌ಕ್ಲಬ್ ಗಳಿಗೆ ಕಡಿವಾಣ ಹಾಕುವವರು ಯಾರು? ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುವ ಚಟುವಟಕೆಗಳನ್ನು ಯಾರು ನಿಯಂತ್ರಿಸುತ್ತಾರೆ? ಗೋವಾದಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರು.ಗಳ ಮಾದಕ ವಸ್ತುಗಳ ಮಾರಾಟ ಜಾಲವನ್ನು ಯಾರು ಮಟ್ಟಹಾಕುತ್ತಾರೆ? ಗೋವಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಯಾರು ಮರುಸ್ಥಾಪಿಸುತ್ತಾರೆ? 2013ರಲ್ಲಿ ಪ್ರಸಿದ್ಧ ಪತ್ರಕರ್ತ ತರುಣ್ ತೇಜಪಾಲ್ ಗೋವಾದಲ್ಲಿ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು.
ಆದರೆ ಅಂತಹ ಅದೆಷ್ಟೋ ಪ್ರಕರಣಗಳು ಗೋವಾದ ಬೀಚುಗಳ ಮರಳಿನಲ್ಲಿ ಸಮಾಧಿ ಯಾಗಿವೆ. ಡ್ರಗ್ಸ್ ದಂಧೆ ಗೋವಾದ ಪರಿಸ್ಥಿತಿಯನ್ನು ಇನ್ನಷ್ಟು ಭಯಂಕರವಾಗಿಸಿದೆ. 2018ರಲ್ಲಿ ಅಂದಿನ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಅವರು ಗೋವಾದಲ್ಲಿ ಡ್ರಗ್ಸ್ ಮಾಫಿಯಾ ಮಿತಿಮೀರಿ ಬೆಳೆದಿದೆ ಎಂಬುದನ್ನು ಒಪ್ಪಿಕೊಂಡಿದ್ದರು.
ಈ ವರ್ಷದ ಏಪ್ರಿಲ್‌ನಲ್ಲೇ ಗೋವಾದಲ್ಲಿ 23 ಕೋಟಿ ರೂ.ಗಳ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ಒಬ್ಬ ಜರ್ಮನ್ ಪ್ರಜೆಯನ್ನು ಬಂಧಿಸಲಾಗಿತ್ತು. ಮಾರ್ಚ್‌ನಲ್ಲಿ ಒಬ್ಬ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿತ್ತು. ಇವರೆಲ್ಲ ಮಾದಕ ದ್ರವ್ಯಗಳ ದಂಧೆಕೋರರು. ಇವರ ಬಂಧನವು ಗೋವಾದ ಮಾದಕ ಮಾಫಿಯಾದಲ್ಲಿ ತೃಣಸಮಾನ ಘಟನೆ.
ಎಲ್ಲಿ ಮಾದಕ ದ್ರವ್ಯಗಳ ಹಣ ಹರಿದಾಡುತ್ತದೆಯೋ ಅಲ್ಲಿ ಇನ್ನಿತರ ಸಮಾಜಬಾಹಿರ ಚಟುವಟಿಕೆಗಳು ಕೂಡ ಹೆಚ್ಚಾಗುತ್ತವೆ ಎಂಬುದನ್ನು ನೆನಪಿಡಬೇಕು. ಇಂದು ಗೋವಾ ದಲ್ಲಿ ಟ್ಯಾಕ್ಸಿ ಮಾಫಿಯಾ ಅಗಾಧವಾಗಿ ಬೆಳೆದಿದೆ. ದಕ್ಷಿಣ ಗೋವಾದಿಂದ ಮನೋಹರ ಪರ್ರಿಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕು ಅಂದರೆ ಟ್ಯಾಕ್ಸಿ ಆಪರೇಟರ್‌ಗಳು 5000 ರು. ಕೇಳುತ್ತಾರೆ!
ಸರ್ಕಾರಕ್ಕೆ ಇದರ ಬಗ್ಗೆಯೇನಾದರೂ ಮಾಹಿತಿ ಇದೆಯೇ? ಮುಗಿಸುವ ಮುನ್ನ ಕೆಲ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತೇನೆ. ಕೋವಿಡ್‌ಗೂ ಮೊದಲು 2019ರಲ್ಲಿ ಗೋವಾಕ್ಕೆ 90 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದರು. ಕಳೆದ ವರ್ಷ ಗೋವಾಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ ಕೇವಲ 15 ಲಕ್ಷ. ಏಕೆ? ನಾನೇನೂ ನೈಟ್ʼಕ್ಲಬ್‌ಗಳ ವಿರೋಧಿಯಲ್ಲ.
ಆದರೆ ನೈಟ್‌ಕ್ಲಬ್‌ಗಳು ಸುರಕ್ಷಿತವಾಗಿರಬೇಕು ಮತ್ತು ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಕಳಕಳಿಯಿಂದ ಹೇಳುತ್ತೇನೆ. ಅವು ನಿಯಮಗಳನ್ನು ಪಾಲಿಸಿ, ಸಕ್ರಮವಾಗಿ ಕಾರ್ಯನಿರ್ವಹಿಸಬೇಕು. ಅಲ್ಲಿಗೆ ಮರ್ಯಾದಸ್ಥರೂ ಹೋಗಿ ಸಂತೋಷ ಪಡುವಂತಿರಬೇಕು. ಈಗಿನ ಪರಿಸ್ಥಿತಿ ಹಾಗಿದೆಯೇ? ಗೋವಾ ನಿಜಕ್ಕೂ ಸಂಕಷ್ಟದಲ್ಲಿದೆ.