ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ಗುಡ್‌ ಬೈ ನಕ್ಸಲಿಸಂ, ಆರ್‌ಐಪಿ ಮಾವೋಯಿಸಂ

ಒಂದು ಕಾಲದಲ್ಲಿ ದೇಶದ ಭೌಗೋಳಿಕ ನಕ್ಷೆಯ ಮೇಲೆ ರಕ್ತಸಿಕ್ತ ಗೆರೆಯಂತೆ ಮೂಡಿದ್ದ ಮಾವೋವಾದದ ಸಿದ್ಧಾಂತ ಈಗ ಇತಿಹಾಸದ ಪುಟಗಳಲ್ಲಿ ಮರೆಯಾಗಿದೆ. ಈ ನಕ್ಸಲಿಸಂ ಭಾರತದ ಆಂತರಿಕ ಭದ್ರತೆಗೆ, ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ಅನುಷ್ಠಾನಕ್ಕೆ ಅತಿದೊಡ್ಡ ಶತ್ರುವಾಗಿತ್ತು.

ಮುಕ್ತಮುಕ್ತ

ರವೀ ಸಜಂಗದ್ದೆ

2026, ಮಾರ್ಚ್ 31ರಂದು ಭಾರತವು ನಕ್ಸಲ್ ಮುಕ್ತ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಘೋಷಿಸಿದ್ದಾರೆ. ದಶಕಗಳಿಂದ ದೇಶವನ್ನು ಕಾಡಿದ ಪಿಡುಗಿದು. ಮಾವೋವಾದದಿಂದ ದೇಶದ ವಿವಿಧೆಡೆಯ ದಟ್ಟ ಕಾಡಿನ ಸುತ್ತಮುತ್ತಲ ಪ್ರದೇಶ ದಲ್ಲಿ ಅಭಿವೃದ್ಧಿ ಮರೀಚಿಕೆ ಯಾಗಿ ಉಳಿದಿತ್ತು. ಅಲ್ಲಿನ ಜನರು ಮುಖ್ಯವಾಹಿನಿಗೆ ಬರಲು ನಕ್ಸಲಿಸಂ ಅಡ್ಡಿಯಾಗಿತ್ತು. ಈಗ ಎಲ್ಲವೂ ಅಂತ್ಯಗೊಂಡಿದೆ!

ಭಾರತವು ಉತ್ಕೃಷ್ಟ, ವಿಶಾಲ ಮತ್ತು ಸಮೃದ್ಧ ಅರಣ್ಯ ಸಂಪತ್ತನ್ನು ಹೊಂದಿದೆ. ನಮ್ಮಲ್ಲಿನ ಈ ದಟ್ಟ ಅರಣ್ಯಗಳ ಗರ್ಭದಲ್ಲಿ ಸ್ವಾತಂತ್ರ್ಯೋತ್ತರದ ದಶಕಗಳಿಂದ ಕೇಳಿ ಬರುತ್ತಿದ್ದ ಗುಂಡಿನ ಸದ್ದುಗಳು ಈಗ ಬಹುತೇಕ ಶಾಂತವಾಗಿವೆ!

ಒಂದು ಕಾಲದಲ್ಲಿ ದೇಶದ ಭೌಗೋಳಿಕ ನಕ್ಷೆಯ ಮೇಲೆ ರಕ್ತಸಿಕ್ತ ಗೆರೆಯಂತೆ ಮೂಡಿದ್ದ ಮಾವೋವಾದದ ಸಿದ್ಧಾಂತ ಈಗ ಇತಿಹಾಸದ ಪುಟಗಳಲ್ಲಿ ಮರೆಯಾಗಿದೆ. ಈ ನಕ್ಸಲಿಸಂ ಭಾರತದ ಆಂತರಿಕ ಭದ್ರತೆಗೆ, ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ಅನುಷ್ಠಾನಕ್ಕೆ ಅತಿದೊಡ್ಡ ಶತ್ರುವಾಗಿತ್ತು.

ಕೇಂದ್ರದ ದೃಢ ಸಂಕಲ್ಪ, ನಿರಂತರ ಹೋರಾಟ ಮತ್ತು ನಿರ್ದಾಕ್ಷಿಣ್ಯ‘ನಕ್ಸಲಿಸಂ ದಮನ ನೀತಿ’ಯ ಫಲಶ್ರುತಿಯಾಗಿ ಆ ಸಶಸ ದಂಗೆ ಸಂಪೂರ್ಣ ಮಣಿದು-ಅಳಿದು 2026ರ ಮಾರ್ಚ್ 31ಕ್ಕೆ ಭಾರತವೀಗ ‘ನಕ್ಸಲ್ ಮುಕ್ತ ದೇಶ’. 1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬಾರಿಯಲ್ಲಿ ಮೊಳಕೆಯೊಡೆದ ನಕ್ಸಲಿಸಂ ಹೆಸರಿನ ಸಶಸ್ತ್ರ ದಂಗೆಯು ಒಂದು ಕಾಲದಲ್ಲಿ ನೇಪಾಳದ ಪಶುಪತಿಯಿಂದ ಆಂಧ್ರದ ತಿರುಪತಿಯವರೆಗೆ ವ್ಯಾಪಿಸಿತ್ತು!

ಭೂವಿವಾದದ ಕಾರಣಕ್ಕೆ ರೈತನೊಬ್ಬನಿಗೆ ಸ್ಥಳೀಯ ಭೂಮಾಲೀಕ ಥಳಿಸಿದ ಕ್ಷುಲ್ಲಕ ಘಟನೆಯಿಂದ ಈ ಚಳುವಳಿ ಜನ್ಮ ತಾಳಿತು. ಕ್ರಮೇಣವಾಗಿ ಅದು ಛತ್ತೀಸ್‌ಗಢ, ಒಡಿಶಾ, ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳ ಸುಮಾರು 200ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿತು. ಈ ‘ಕೆಂಪು ನೆರಳು’ ಸಾವಿರಾರು ಅಮಾಯಕ-ನತದೃಷ್ಟ ಕುಟುಂಬಗಳ ಕಣ್ಣೀರನ್ನು ಆಪೋಶನ ತೆಗೆದುಕೊಂಡು ಹಲವರ ಬದುಕು ನರಕಸದೃಶ ವಾಯಿತು.

ನಕ್ಸಲಿಸಂ ಹಿಂಸಾಚಾರದಿಂದ ಭಾರತ ಅನುಭವಿಸಿದ ಕಷ್ಟ-ನಷ್ಟ ಅಪಾರ. ನಕ್ಸಲ್-ಸರಕಾರ-ಸ್ಥಳೀಯರ ನಡುವಿನ ಸಂಘರ್ಷದಲ್ಲಿ ಸುಮಾರು 15000ಕ್ಕೂ ಹೆಚ್ಚು ಅಮಾಯಕ ನಾಗರಿಕರು ಮತ್ತು 5000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣ ಕಳೆದು ಕೊಂಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಯು ದಶಕಗಳ ಕಾಲ ಬಹುತೇಕ ಮರೀಚಿಕೆಯಾಗಿ ಉಳಿದದ್ದು ನಿಜಕ್ಕೂ ಖೇದಕರ!

ಇದನ್ನೂ ಓದಿ: Ravi Sajangadde Column: ಕೇಂದ್ರದ ರಕ್ಷಣಾತ್ಮಕ ನಡೆ

ರೈಲ್ವೆ ಹಳಿಗಳು, ಮೊಬೈಲ್ ಟವರ್‌ಗಳು, ಶಾಲಾ ಕಟ್ಟಡಗಳು, ತಮ್ಮ ವಾಸ್ತವ್ಯ ಇರುವ ಹಳ್ಳಿಗಳಿಗೆ/ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆಗಳನ್ನು ಗುರಿ ಯಾಗಿಸಿಕೊಂಡು ನಕ್ಸಲರು ಸ್ಫೋಟಿಸಿ, ಧ್ವಂಸಗೊಳಿಸುತ್ತಿದ್ದರು. ನಾಗರಿಕ ಸಮಾಜದ ಈ ಎಲ್ಲಾ ವ್ಯವಸ್ಥೆಗಳು ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕುವ ಹುನ್ನಾರ ಮತ್ತು ಸ್ಥಳೀಯ‌ ರನ್ನು ತಮ್ಮ ಪರಿಧಿಯಿಂದ ವಿಮುಖಗೊಳಿಸುವ ಯೋಜನೆ ಎಂದು ನಂಬಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ಹನ್ನೆರಡು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಭದ್ರತಾ ಸಂಬಂಧಿತ ವೆಚ್ಚ (SRE), ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತು ಮೂಲಸೌಕರ್ಯ ರಕ್ಷಣೆ-ಅಭಿವೃದ್ಧಿಗಾಗಿ ವ್ಯಯಿಸಿವೆ. ನಕ್ಸಲರಿಂದ ವಶಪಡಿಸಿ ಕೊಳ್ಳಲಾದ ಶಸ್ತ್ರಾಸ್ತ್ರಗಳ ಪಟ್ಟಿಯಲ್ಲಿ ಸಾವಿರಾರು ಎಕೆ-47ಗಳು, ಇನ್ಸಾಸ್ ರೈಫಲ್‌ ಗಳು, ಅತ್ಯಾಧುನಿಕ ಐಇಡಿ ಸೋಟಕಗಳು ಮತ್ತು ಗ್ರೆನೇಡ್ ಲಾಂಚರ್‌ಗಳು ಇದ್ದವು ಎನ್ನುವ ಅಂಶ ಈ ಸಿದ್ಧಾಂತದ ಆಳ-ಅಗಲ-ಭೀಕರತೆಗೆ ಸಾಕ್ಷಿ.

2000ರಿಂದ 2020ರವರೆಗಿನ ಸಮಯದಲ್ಲಿ ದೇಶದಲ್ಲಿ ನಕ್ಸಲಿಸಂ ಉಚ್ಛ್ರಾಯ ಸ್ಥಿತಿಗೆ ತಲು ಪಿತ್ತು. ಒಂದು ಸಿದ್ಧಾಂತದ ಹೆಸರಿನಲ್ಲಿ ಅದೆಷ್ಟೋ ಜನರು ಹತರಾಗಿದ್ದಾರೆ, ಶಾಶ್ವತ ವಾಗಿ ಅಂಗವಿಕಲರಾಗಿದ್ದಾರೆ, ಬಂಧುಗಳನ್ನು ಕಳಕೊಂಡಿದ್ದಾರೆ!

ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಆಂಧ್ರದ ಭಾಗದಲ್ಲಿ ಪ್ರಭಾವಿಯಾಗಿದ್ದ ಟಿ.ಪರಮೇಶ್ವರಪ್ಪ 1990ರ ದಶಕದಲ್ಲಿ ನಕ್ಸಲರಿಂದ ಹತರಾದರು. ಮುಂದೆ ಆಂಧ್ರದ ದೃಗ್ಗಿ ಶ್ರೀನಿವಾಸ್ ರಾವ್ (2004) ಅವರನ್ನು ತನ್ನ ನಿವಾಸದ ಬಳಿಯೇ ನಕ್ಸಲರು ಗುಂಡಿಕ್ಕಿ ಕೊಂದರು. ತೆಲಂಗಾಣದ ಪ್ರಭಾವಿ ನಾಯಕ-ಶಾಸಕ ಸಿ.ನರಸಿಂಹ ರೆಡ್ಡಿಯವರನ್ನು (2005) ಹತ್ಯೆ ಮಾಡಲಾಯಿತು. 2013ರಲ್ಲಿ ನಡೆದ ಝೀರಮ್ ಘಾಟಿ ದಾಳಿಯು ಅತ್ಯಂತ ಭೀಕರ ವಾಗಿತ್ತು!

Naxalism

ಇಲ್ಲಿ ಮಹೇಂದ್ರ ಕರ್ಮ, ವಿದ್ಯಾಚರಣ್ ಶುಕ್ಲಾ ಮತ್ತು ನಂದಕುಮಾರ್ ಪಟೇಲ್ ಸೇರಿದಂತೆ ಛತ್ತೀಸ್ʼಗಢದ ಇಡೀ ಕಾಂಗ್ರೆಸ್ ನಾಯಕತ್ವವನ್ನೇ ಮಾವೋವಾದಿಗಳು ಬಲಿಪಡೆದು ಕೇಕೆ ಹಾಕಿದರು.

ನಕ್ಸಲ್ ಚಳುವಳಿ ತೀವ್ರವಾಗಿದ್ದ ರಾಜ್ಯಗಳ ಅನೇಕ ರಾಜಕೀಯ ಮುಖಂಡರು ಇವರ ದಾಳಿಗೆ ಬಲಿಯಾಗಿದ್ದಾರೆ. ಕರ್ನಾಟಕದ ಶೇಷಪ್ಪ ಮತ್ತು ಸವಿತಾ ಎಂಬುವರು ‘ನಕ್ಸಲರಿಗೆ ಮಾಹಿತಿ ನೀಡುತ್ತಿದ್ದಾರೆ’ ಎಂಬ ಸಂಶಯದ ಮೇಲೆ ಹತರಾದ ಸಾಮಾನ್ಯ ನಾಗರಿಕರು!

ಕರ್ನಾಟಕದಲ್ಲೂ ನಕ್ಸಲಿಸಂ ಚಟುವಟಿಕೆಗಳು 2000ದಲ್ಲಿ ಪಶ್ಚಿಮ ಘಟ್ಟಗಳ ಮಡಿಲಲ್ಲಿ ಅಂಬೆಗಾಲಿಟ್ಟವು! ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭೂಮಿ ಹಕ್ಕುಗಳ ಹೋರಾಟವನ್ನು ದಾಳವಾಗಿ ಬಳಸಿಕೊಂಡ ಮಾವೋವಾದಿಗಳು ‘ಮಲೆನಾಡು ತಮ್ಮ ನೆಲೆ’ ಎಂದು ಘೋಷಿಸಿಕೊಂಡರು. ಆರಂಭದಲ್ಲಿ ಇದು ರೈತರು ಮತ್ತು ಬುಡಕಟ್ಟು ಪ್ರದೇಶಗಳ ಜನರ ಪರವಾದ ಹೋರಾಟದಂತೆ ಕಂಡರೂ, ಅದು ಅತ್ಯಂತ ವೇಗವಾಗಿ ‘ಬಂದೂಕು ಹಿಡಿದು ಹೋರಾಡುವ ಉಗ್ರ ಮಾದರಿಯ ಸಿದ್ಧಾಂತ’ವಾಗಿ ರೂಪುಗೊಂಡಿತು.

2005ರಲ್ಲಿ ಕಾರ್ಕಳದ ಬಳಿ ನಡೆದ ಸಾಕೇತ್ ರಾಜನ್ (ಪ್ರೇಮ) ಎನ್ಕೌಂಟರ್ ಕರ್ನಾಟಕದ ನಕ್ಸಲ್ ಇತಿಹಾಸದಲ್ಲಿ ಪ್ರಮುಖ ಘಟನೆ-ತಿರುವು. ನಕ್ಸಲ್ ಚಳುವಳಿಯಲ್ಲಿ ಮಹಿಳೆಯರ ಸಂಖ್ಯೆಯೂ ಗಮನಾರ್ಹವಾಗಿತ್ತು! ಕವಿತಾ, ಶಾಂತಿ (ಪಾರ್ವತಿ), ಲಲಿತಾ ಮುಂತಾದ ಮಹಿಳಾ ಕಮಾಂಡರ್‌ಗಳು ಎನ್ಕೌಂಟರ್‌ನಲ್ಲಿ ಹತರಾದರು.

ಇತ್ತೀಚೆಗೆ ಮಲೆನಾಡಿನ ಭಾಗದಲ್ಲಿ ಶ್ರೀಮತಿ ಎಂಬ ಮಹಿಳಾ ನಕ್ಸಲ್ ಹತರಾದದ್ದು ಕರ್ನಾಟಕದಲ್ಲಿ ಸಂಘಟನೆಯ ಸಂವಹನ ಮತ್ತು ನೈತಿಕ ಸ್ಥೈರ್ಯವನ್ನು ಕುಗ್ಗಿಸಿತು. ಹಜೇಮಾ, ದಿನಕರನ್ ಮುಂತಾದ ತೀವ್ರಗಾಮಿ ನಾಯಕರ ನಿರ್ಮೂಲನೆ ಮತ್ತು ಸರ್ಕಾರದ ಪರಿಣಾಮಕಾರಿ ‘ನಕ್ಸಲ್ ಪುನರ್ವಸತಿ ನೀತಿ’ಯಿಂದಾಗಿ ಬಹುತೇಕ ರಾಜ್ಯಗಳು ಈಗ ನಕ್ಸಲ್ ಮುಕ್ತ.

ಕೇಂದ್ರ ಗೃಹ ಸಚಿವಾಲಯವು ನಕ್ಸಲಿಸಂ ಅನ್ನು ಬೇರುಸಹಿತ ಕಿತ್ತೊಗೆಯಲು ಮಾರ್ಚ್ 31, 2026 ಅಂತಿಮ ಗಡುವು ಎಂದು ಘೋಷಿಸಿತ್ತು. ಈ ಗಡುವು ಕೇವಲ ಘೋಷಣೆಯಾಗಿ ಉಳಿಯದೆ ಸತತವಾದ ಕೂಂಬಿಂಗ್, ಕಾರ್ಯಾಚರಣೆ, ವ್ಯೂಹಾತ್ಮಕ ಯೋಜನೆಗಳಿಂದಾಗಿ ನಕ್ಸಲರ ನೈತಿಕ ಸ್ಥೈರ್ಯ ಕುಗ್ಗಿಸುವ ನಿರಂತರ ಕಾರ್ಯಕ್ಷಮತೆಯು ಈಗಿನ ‘ನಕ್ಸಲ್ ಮುಕ್ತ ಹಂತ’ವನ್ನು ತಲುಪಲು ನೆರವಾಯಿತು.

ಗೃಹ ಸಚಿವ ಅಮಿತ್ ಶಾ ಅವರು ಮಾವೋವಾದಿಗಳಿಗೆ ‘ಶಸತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ, ಇಲ್ಲದಿದ್ದರೆ ಭದ್ರತಾ ಪಡೆಗಳ ನಿರ್ದಾಕ್ಷಿಣ್ಯ ಕ್ರಮವನ್ನು ಎದುರಿಸಿ’ ಎಂದು ತಿಂಗಳು ಗಳ ಹಿಂದೆ ಎಚ್ಚರಿಕೆ ನೀಡಿದ್ದರ ಪರಿಣಾಮ, ಸಾವಿಗೆ ಹೆದರಿದ ಹಲವಾರು ನಕ್ಸಲರು ಶರಣಾದರು. ಕೇಂದ್ರ ಸರ್ಕಾರ ರೂಪಿಸಿದ ‘ಸಮಾಧಾನ್’ (SAMADHAN) ಕಾರ್ಯತಂತ್ರವು ನಕ್ಸಲರ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಮೂಲಗಳನ್ನು ನಿವಾಳಿಸಿತು!

ಕೆಲ ದಿನಗಳ ಹಿಂದೆ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಪಾಪಾ ರಾವ್ ಮತ್ತು ಸುಕ್ರು ಹೆಸರಿನ ಭಯಾನಕ-ಹಿರಿಯ ಇಬ್ಬರು ಮಾವೋವಾದಿ ಕಮಾಂಡರ್‌ಗಳು, ಎಂಟು ಮಹಿಳಾ ಮಾವೋವಾದಿಗಳೊಂದಿಗೆ ಒಟ್ಟು 17 ನಕ್ಸಲರು ಸರ್ಕಾರಕ್ಕೆ ಶರಣಾದರು.

ಇದು ಭಾರತದಲ್ಲಿ ನಕ್ಸಲ್ ಸಿದ್ಧಾಂತಕ್ಕೆ ಹೊಡೆದ ಕೊನೆಯ ಮೊಳೆ! ಕಳೆದ ಹನ್ನೆರಡು ವರ್ಷಗಳಲ್ಲಿ 10000ಕ್ಕೂ ಹೆಚ್ಚು ಮತ್ತು ಕಳೆದ ಮೂರು ವರ್ಷಗಳಲ್ಲಿ 4839 ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದಾರೆ. 2025ರಲ್ಲಿ ದೇಶಾದ್ಯಂತ 2300 ಮಂದಿ ನಕ್ಸಲರು ಶರಣಾಗಿದ್ದಾರೆ. 2026ರ ಮೊದಲ ಮೂರು ತಿಂಗಳಲ್ಲಿ ಅಳಿದುಳಿದು ಬಾಕಿಯಾಗಿದ್ದ 650 ಮಾವೋವಾದಿಗಳು ‘ಶಸ್ತ್ರ ಸನ್ಯಾಸ’ ಪಡೆದು ಮುಖ್ಯವಾಹಿನಿಗೆ ಬಂದಿದ್ದಾರೆ. 2218 ನಕ್ಸಲಿ ಯರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಹಲವು ಎನ್ಕೌಂಟರ್‌ಗಳಲ್ಲಿ 706 ತೀವ್ರಗಾಮಿ ಗಳನ್ನು ಹೊಡೆದುರುಳಿಸಲಾಗಿದೆ. ನಕ್ಸಲಿಸಂನಿಂದ ದೇಶಾದ್ಯಂತ 20 ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಬಾಧಿತವಾಗಿತ್ತು!

ನಕ್ಸಲ್ ಪೀಡಿತ ಪ್ರದೇಶಗಳ ಸುಮಾರು 126 ಜಿಲ್ಲೆಗಳ ‘ಕೆಂಪು ಕಾರಿಡಾರ್’ ಪ್ರದೇಶಗಳು ಈಗ ಹಸಿರು, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿದ ‘ಅಭಿವೃದ್ಧಿ ಕಾರಿಡಾರ್’ಗಳಾಗಿ ಬದಲಾಗಿವೆ-ಬದಲಾಗುತ್ತಿವೆ!

ನಕ್ಸಲಿಸಂನಿಂದ ಭಾರತ ಮುಕ್ತವಾದ ಸಂದರ್ಭದಲ್ಲಿ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿ ಮಾತನಾಡುತ್ತಾ ‘ನಕ್ಸಲಿಸಂ ಭಾರತದ ಪ್ರಜಾಪ್ರಭುತ್ವದ ಮೇಲಿದ್ದ ಕಪ್ಪು ಚುಕ್ಕೆ. ಅದನ್ನು ತೊಡೆದು ಹಾಕುವುದು ಕೇವಲ ಭದ್ರತೆಯ ಪ್ರಶ್ನೆಯಲ್ಲ, ಬದಲಿಗೆ ಬುಡಕಟ್ಟು ಪ್ರದೇಶಗಳ ಹಳ್ಳಿಗಳಿಗೆ ಅಭಿವೃದ್ಧಿಯನ್ನು ತಲುಪಿಸುವ ನಮ್ಮ ಕರ್ತವ್ಯ ಯೋಜನೆಯ ಭಾಗ.

ಭಾರತವು ಈಗ ನಕ್ಸಲ್ ಪಿಡುಗಿನಿಂದ ಮುಕ್ತವಾಗಿದೆ’ ಎಂದು ಹೆಮ್ಮೆಯಿಂದ ಹೇಳಿದರು. ತೀವ್ರಗಾಮಿ ನಕ್ಸಲ್ ಚಟುವಟಿಕೆಗಳಿಗೆ ಹೆಸರಾಗಿದ್ದ ಛತ್ತೀಸ್‌ಗಢದ ನಾರಾಯಣಪುರ ಜಿಯ ಅಬುಜ್‌ಮದ್ ನಂತಹ ದಟ್ಟ-ದುರ್ಗಮ ಅರಣ್ಯ ಪ್ರದೇಶದಲ್ಲೂ ನಕ್ಸಲ್ ಬಾವುಟಗಳು, ನಕ್ಸಲ್ ಪರವಾದ ಘೋಷಣೆಗಳ ಬದಲಾಗಿ ಇಂದು ರಾಷ್ಟ್ರಧ್ವಜ ಹಾರಾಡುತ್ತಿರುವುದು, ರಾಷ್ಟ್ರಗೀತೆ ಅನುರಣಿಸುತ್ತಿರುವುದು ಮಾವೋವಾದವು ಭಾರತದಲ್ಲಿ ಸಂಪೂರ್ಣ ಸೋತು ಹೋಗಿ ನಾಗರಿಕತೆ ಮತ್ತು ಸಂವಿಧಾನಬದ್ಧ ಶಾಸನ ಮರುಸ್ಥಾಪನೆಯಾದ ಅದ್ಭುತ ವಿಜಯದ ಸಂಕೇತ!

ಈ ಪ್ರಚಂಡ ಯಶಸ್ಸಿನ ಹಿಂದೆ ಸಿಆರ್‌ಪಿಎಫ್, ಗ್ರೇಹೌಂಡ್ಸ್ ಮತ್ತು ಸ್ಥಳೀಯ ಪ್ರದೇಶಗಳ‌ ಪೋಲಿಸ್ ಪಡೆಗಳ ಅಪ್ರತಿಮ ತ್ಯಾಗ- ಶೌರ್ಯವಿದೆ. ಮಹಾರಾಷ್ಟ್ರದ ಗಡ್ಚಿರೋಲಿ ಮತ್ತು ಛತ್ತೀಸ್‌ಗಢದ ದಾಂತೇವಾಡದಂತಹ ತೀವ್ರ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ತಿಂಗಳುಗಳ ಕಾಲ ನಡೆದ ಸರಣಿ ಎನ್ಕೌಂಟರ್‌ಗಳು ನಕ್ಸಲ್ ಕೇಂದ್ರ ಸಮಿತಿಯ ಮಾನಸಿಕ ಸ್ಥೈರ್ಯ ಮತ್ತು ಬೆನ್ನೆಲುಬನ್ನೇ ಮುರಿದುವಲ್ಲ!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿನ ನಕ್ಸಲ್ ಕರ್ಮಕಾಂಡ ಮತ್ತು ಅವ್ಯವಸ್ಥೆ ಯನ್ನು ಸರಿಪಡಿಸಲು ಕೇವಲ ಬಂದೂಕಿನಿಂದ ಉತ್ತರಿಸದೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಸ್ತೆ, ಬ್ಯಾಂಕ್, ಶಾಲೆ, ಪಡಿತರ ವಿತರಣೆ ಮತ್ತಿತರ ಮೂಲಸೌಕರ್ಯಗಳನ್ನು ನಿರಂತರ ಒದಗಿಸುವ ಮೂಲಕ, ಕಾಲಕ್ರಮೇಣ ಸ್ಥಳೀಯರ ಮನ ಗೆದ್ದವು.

ಒಂದು ಕಾಲದಲ್ಲಿ ಕೇವಲ ನಕ್ಸಲರಿಗೆ ಮಾತ್ರ ಸಹಕರಿಸುತ್ತಿದ್ದ ಮನಸ್ಥಿತಿ ಮತ್ತು ಪರಿಸ್ಥಿತಿ ಯಿಂದ ವಿಮುಖರಾಗಿ ಅಲ್ಲಿನ ಜನರು ನಕ್ಸಲಿಸಂ ಹತ್ತಿಕ್ಕಲು ಸರ್ಕಾರಗಳಿಗೆ ನೆರವು ನೀಡಲು ಶುರು ಮಾಡಿದರು. ‘ಅಭಿವೃದ್ಧಿಯೇ ಅತ್ಯುತ್ತಮ ಅಸ್ತ್ರ’ ಎಂಬ ಮಂತ್ರ ಇಲ್ಲಿ ಜಯ ಕಂಡಿತು!

‘ಬಂದೂಕಿನ ನಳಿಕೆಯಿಂದ ಮಾತ್ರ ಕ್ರಾಂತಿ ಹುಟ್ಟುತ್ತದೆ’ ಎಂದು ನಂಬಿದವರು ಇಂದು ವಿದ್ಯುನ್ಮಾನ ಮತಯಂತ್ರದ (EVM) ಮಹತ್ವವನ್ನು ಅರಿತು ಮುಖ್ಯವಾಹಿನಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದಾರೆ. ನಕ್ಸಲಿಸಂ ಎಂಬ ಮಹಾಮಾರಿಗೆ ಮದ್ದು ಅರೆದು ಅದೀಗ ದೇಶಾದ್ಯಂತ ಶಮನವಾಗಿದೆ!

ಭಾರತದ ಸಂಪತ್ಭರಿತ ಅರಣ್ಯಗಳಲ್ಲಿ, ಅದರ ಅಂಚಿನ ಹಳ್ಳಿಗಳಲ್ಲಿ ಯಾವುದೋ ಸಿದ್ಧಾಂತಕ್ಕೆ ಕಟ್ಟುಬಿದ್ದು, ಭಯದ ನೆರಳಿನಡಿ, ದೇಶಹಿತಕ್ಕೆ ವಿಹಿತವಾದ ಮತ್ತು ಪ್ರಜಾ ಪ್ರಭುತ್ವ ವಿರೋಧಿ ಧೋರಣೆಗಳೊಂದಿಗೆ ಬದುಕು ತ್ತಿದ್ದ ಸಾವಿರಾರು ಜೀವಗಳು ಇಂದು ‘ಎಲ್ಲರೂ ಸಮಾನರು’ ಎನ್ನುವ ಪ್ರಜಾ ಪ್ರಭುತ್ವದ ಶ್ರೇಷ್ಠ ಸಿದ್ಧಾಂತ ದಡಿ ಗೌರವಯುತ ಬದುಕನ್ನು ಆರಂಭಿಸಿದ್ದಾರೆ. ಇದು ಸ್ವಸ್ಥ ಸಮಾಜದ ಸ್ಥಾಪನೆಯ ವಿಚಾರದಲ್ಲಿ ಭಾರತಕ್ಕೆ ದಕ್ಕಿದ ಅತಿದೊಡ್ಡ ಗೆಲುವು-ಗರಿಮೆ!

ಸಾಮಾನ್ಯವಾಗಿ ಸೂರ್ಯಾಸ್ತದ ವೇಳೆಯಲ್ಲಿ ಕೆಂಪು ಬಣ್ಣವು ನಿಧಾನವಾಗಿ ಮಾಯವಾಗಿ ಹೇಗೆ ಪ್ರಶಾಂತವಾದ ಕತ್ತಲು ಆವರಿಸಿ, ಮತ್ತೆ ಶುಭ್ರ ಮುಂಜಾವು ಮೂಡುತ್ತದೆಯೋ, ಅದೇ ರೀತಿ ಭಾರತದ ಭೌಗೋಳಿಕ ನಕ್ಷೆಯಲ್ಲಿ ದಶಕಗಳಿಂದ ಹಾಸುಹೊಕ್ಕಾಗಿದ್ದ ನಕ್ಸಲಿಸಂ ಸಿದ್ಧಾಂತ ಕೊನೆಗೂ ಅಳಿಸಿಹೋಗಿದೆ! ಸಾವಿರಾರು ಕುಟುಂಬಗಳ ಕಣ್ಣೀರು ಮತ್ತು ರಕ್ಷಣಾ ಪಡೆಗಳ ರಕ್ತ-ಜೀವ ಹಿಂಡಿ ಉಸಿರಾಡುತ್ತಿದ ಮಾವೋವಾದವು ಈಗ ಧೂಳೀಪಟವಾಗಿ ಮುಗಿದ ಅಧ್ಯಾಯ!

ಕ್ರೌರ್ಯದಿಂದ ಕೂಡಿದ ಸಿದ್ಧಾಂತವೊಂದು ಇತಿಹಾಸದ ಗೋರಿಯಲ್ಲಿ ಮುದುಡಿಕೊಂಡು ಮಲಗಿದೆ, ಮನುಕುಲಕ್ಕಂಟಿದ ಶಾಪ ತೊಲಗಿದೆ! ಇದು ಕೇಂದ್ರದ ಸಾಧನೆ ಮತ್ತು ದೇಶದ ಏಕತೆ, ಭವ್ಯತೆ, ಅವಿಚ್ಛಿನ್ನತೆಯ ದಿವ್ಯ ದ್ಯೋತಕ. ‘ಅಹಿಂಸಾ ಪರಮೋ ಧರ್ಮಃ’ ಎಂದು ಸಾರುವ ಶ್ರೇಷ್ಠ ಪರಂಪರೆ ನಮ್ಮದು! -ಗುಡ್ ಬೈ ನಕ್ಸಲಿಸಂ, ಆರ್‌ಐಪಿ ಮಾವೋಯಿಸಂ

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)