ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mohan Vishwa Column: ಗ್ರೇಟ್‌ ನಿಕೋಬಾರ್:‌ ಸಮುದ್ರಾಧಿಪತ್ಯದ ಮಹಾದ್ವಾರ

ಭಾರತದ ದೃಷ್ಟಿಯಿಂದ ಈ ಹೊಸ ಕಾರ್ಯತಂತ್ರದ ವಾಸ್ತವಿಕತೆಯನ್ನು ಅತ್ಯಂತ ಸ್ಪಷ್ಟವಾಗಿ ಪ್ರತಿಬಿಂಬಿಸುವ ಸ್ಥಳವೆಂದರೆ ‘ಗ್ರೇಟ್ ನಿಕೋಬಾರ್ ದ್ವೀಪ’. ಭಾರತದ ಮುಖ್ಯ ಭೂಭಾಗದಿಂದ ದೂರವಿರುವ ದ್ವೀಪವೆಂದು ಕಾಣಿಸಿಕೊಂಡರೂ, ಗ್ರೇಟ್ ನಿಕೋಬಾರ್ ಭಾರತಕ್ಕೆ ಅತ್ಯಂತ ಅಮೂಲ್ಯವಾದ ಕಾರ್ಯತಂತ್ರದ ಸ್ಥಳವಾಗಿದೆ. ಅದರ ಭೌಗೋಳಿಕ ಸ್ಥಾನ, ಆರ್ಥಿಕ ಸಾಮರ್ಥ್ಯ ಹಾಗೂ ರಕ್ಷಣಾತ್ಮಕ ಮಹತ್ವ ಎಲ್ಲವೂ ಸೇರಿ ಭಾರತದ ಸಮುದ್ರ ಭದ್ರತಾ ವ್ಯವಸ್ಥೆಯ ಕೇಂದ್ರ ಬಿಂದುವಾಗಿ ರೂಪುಗೊಳ್ಳುತ್ತಿದೆ.

ವೀಕೆಂಡ್‌ ವಿತ್‌ ಮೋಹನ್

ಇಪ್ಪತ್ತೊಂದನೆಯ ಶತಮಾನದಲ್ಲಿ ರಾಷ್ಟ್ರದ ಭದ್ರತೆ ಎನ್ನುವುದು ಕೇವಲ ಭೂ ಗಡಿಗಳ ರಕ್ಷಣೆ ಅಥವಾ ಗಡಿಭಾಗದ ಸೈನಿಕ ಬಲಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ ಮಾರ್ಗಗಳ ಮೇಲಿನ ಹಿಡಿತ, ಮಹತ್ವದ ಜಲಸಂಧಿಗಳ ನಿಯಂತ್ರಣ ಮತ್ತು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯತಂತ್ರದ ಸ್ಥಾನಮಾನ, ಒಂದು ರಾಷ್ಟ್ರದ ಜಾಗತಿಕ ಪ್ರಭಾವವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.

ಭಾರತದ ದೃಷ್ಟಿಯಿಂದ ಈ ಹೊಸ ಕಾರ್ಯತಂತ್ರದ ವಾಸ್ತವಿಕತೆಯನ್ನು ಅತ್ಯಂತ ಸ್ಪಷ್ಟ ವಾಗಿ ಪ್ರತಿಬಿಂಬಿಸುವ ಸ್ಥಳವೆಂದರೆ ‘ಗ್ರೇಟ್ ನಿಕೋಬಾರ್ ದ್ವೀಪ’. ಭಾರತದ ಮುಖ್ಯ ಭೂಭಾಗದಿಂದ ದೂರವಿರುವ ದ್ವೀಪವೆಂದು ಕಾಣಿಸಿಕೊಂಡರೂ, ಗ್ರೇಟ್ ನಿಕೋಬಾರ್ ಭಾರತಕ್ಕೆ ಅತ್ಯಂತ ಅಮೂಲ್ಯವಾದ ಕಾರ್ಯತಂತ್ರದ ಸ್ಥಳವಾಗಿದೆ. ಅದರ ಭೌಗೋಳಿಕ ಸ್ಥಾನ, ಆರ್ಥಿಕ ಸಾಮರ್ಥ್ಯ ಹಾಗೂ ರಕ್ಷಣಾತ್ಮಕ ಮಹತ್ವ ಎಲ್ಲವೂ ಸೇರಿ ಭಾರತದ ಸಮುದ್ರ ಭದ್ರತಾ ವ್ಯವಸ್ಥೆಯ ಕೇಂದ್ರಬಿಂದುವಾಗಿ ರೂಪುಗೊಳ್ಳುತ್ತಿದೆ.

ಜತೆಗೆ, ಚೀನಾ, ಹಿಂದೂ ಮಹಾಸಾಗರದಲ್ಲಿ ತನ್ನ ನೆಲೆಯನ್ನು ವಿಸ್ತರಿಸುತ್ತಿರುವ ಕಾರ್ಯ ತಂತ್ರಕ್ಕೆ ಇದು ಪರಿಣಾಮಕಾರಿಯಾದ ಪ್ರತಿರೋಧವಾಗಿದೆ. ‘ಗ್ರೇಟ್ ನಿಕೋಬಾರ್’ನ ಮಹತ್ವ ಅದರ ಭೌಗೋಳಿಕ ಸ್ಥಾನದಲ್ಲಿದೆ. ಭಾರತದ ಮುಖ್ಯ ಭೂಭಾಗದಿಂದ ಸುಮಾರು 1400 ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪ ವಿಶ್ವದ ಅತ್ಯಂತ ಮಹತ್ವದ ಜಲಸಂಧಿ ಗಳಲ್ಲಿ ಒಂದಾದ ‘ಮಲಕ್ಕಾ ಜಲಸಂಧಿ’ ಸಮೀಪದಲ್ಲಿದೆ.

ಇಂಡೋನೇಷ್ಯಾದ ಗಡಿ ಪ್ರಾಂತ್ಯದಿಂದ ಕೇವಲ 165 ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರವನ್ನು ಸಂಪರ್ಕಿಸುವ ಪ್ರಮುಖ ಸಮುದ್ರ ಮಾರ್ಗದ ಮೇಲ್ವಿಚಾರಣೆಗೆ ಭಾರತಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಪ್ರತಿ ವರ್ಷ 94000ಕ್ಕೂ ಹೆಚ್ಚು ಹಡಗುಗಳು ಮಲಕ್ಕಾ ಜಲಸಂಧಿಯ ಮೂಲಕ ಸಂಚರಿಸು‌ ತ್ತವೆ.

ಇದಕ್ಕೂ ಓದಿ: Mohan Vishwa Column: ಗಾಮೀಣ ಹೃದಯದ ನಾಯಕ ಬಿಎಸ್‌ʼವೈ

ಜಾಗತಿಕ ವ್ಯಾಪಾರದ ಸುಮಾರು ಶೇ.25ರಿಂದ 30ರವರೆಗೆ ಹಾಗೂ ದಿನಕ್ಕೆ ಸುಮಾರು 16 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ಹೀಗಾಗಿ ಇದು ಕೇವಲ ಪ್ರಾದೇಶಿಕ ಜಲಮಾರ್ಗ ಮಾತ್ರವಲ್ಲ, ಜಾಗತಿಕ ಆರ್ಥಿಕತೆಯ ಜೀವನಾಡಿಯಾಗಿದೆ. ಈ ಮಾರ್ಗದ ಮೇಲೆ ಭಾರತಕ್ಕೆ ದೊರೆಯುವ ಮೇಲ್ವಿಚಾರಣಾ ಸಾಮರ್ಥ್ಯ ಅತ್ಯಂತ ಮಹತ್ವದ್ದು.

ಪೂರ್ವ ಏಷ್ಯಾದ ಒಟ್ಟಾರೆ ವ್ಯಾಪಾರದ ಸುಮಾರು ಶೇ.40ರಷ್ಟು ಈ ಮಾರ್ಗದ ಮೇಲೆ ಅವಲಂಬಿತವಾಗಿದೆ. ಈ ಪ್ರದೇಶದಲ್ಲಿ ಏನಾದರೂ ವ್ಯತ್ಯಯ ಉಂಟಾ ದರೆ ಜಾಗತಿಕ ತೈಲ ಸರಬರಾಜು, ಕೈಗಾರಿಕಾ ಸರಪಳಿ ಮತ್ತು ಅಂತಾರಾಷ್ಟ್ರೀಯ ಸಾಗಾಟ ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ. ‘ಗ್ರೇಟ್ ನಿಕೋಬಾರ್’ ಭಾರತಕ್ಕೆ ಕೇವಲ ರಕ್ಷಣಾತ್ಮಕ ಲಾಭವನ್ನಷ್ಟೇ ನೀಡುವುದಿಲ್ಲ, ಜಾಗತಿಕವಾಗಿ ರಾಜತಾಂತ್ರಿಕ ಹಾಗೂ ಆರ್ಥಿಕ ಲಾಭ ಗಳಿಗೂ ದಾರಿ ಮಾಡಿಕೊಡುತ್ತದೆ.

ಭಾರತದ ಸ್ವಾವಲಂಬಿ ಸಮುದ್ರಾಧಾರಿತ ವ್ಯಾಪಾರದ ಅವಲಂಬನೆ ‘ಗ್ರೇಟ್ ನಿಕೋಬಾರ್’ ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಸಮುದ್ರ ಭದ್ರತೆ ಭಾರತದ ಆರ್ಥಿಕ ಸ್ಥಿರತೆಗೆ ಅತ್ಯಗತ್ಯ. ‘ಗ್ರೇಟ್ ನಿಕೋಬಾರ್’ ಭಾರತಕ್ಕೆ ಸಾಗರ ಸಂಚಾರದ ಮೇಲ್ವಿಚಾರಣೆ, ನೌಕಾಪಡೆಯ ತ್ವರಿತ ನಿಯೋಜನೆ ಮತ್ತು ಜಲಾಂತರಗಾಮಿ ನಿಗಾವಳಿ ಹೆಚ್ಚಿಸಲು ನೆರವಾಗುತ್ತದೆ.

ಆಧುನಿಕ ಜಗತ್ತಿನ ನೌಕಾದಳ ಸ್ಪರ್ಧೆಯಲ್ಲಿ ಜಲಾಂತರಗಾಮಿ ನೌಕೆಗಳು, ಸಮುದ್ರದಡಿ ಯಲ್ಲಿ ಹರಡಿರುವ ಡಿಜಿಟಲ್ ಕೇಬಲ್ ಗಳು ಹಾಗೂ ಅವುಗಳ ರಕ್ಷಣೆ ಅತ್ಯಂತ ಮಹತ್ವ ಪಡೆದುಕೊಂಡಿವೆ. ಗ್ರೇಟ್ ನಿಕೋಬಾರ್ ಸುತ್ತಲಿನ ಸಮುದ್ರ ಪ್ರದೇಶಗಳು ಅತ್ಯಾಧುನಿಕ ಜಲಾಂತರ್ಗಾಮಿ ನಿಗಾವಳಿ ವ್ಯವಸ್ಥೆಗಳನ್ನು ಸ್ಥಾಪಿಸಲು ಸೂಕ್ತವಾಗಿವೆ. ಇದರಿಂದ ಭಾರತ ಶತ್ರು ಚಟುವಟಿಕೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚಿ ತನ್ನ ಸಮುದ್ರ ಮಾರ್ಗಗಳನ್ನು ಸುರಕ್ಷಿತವಾಗಿರಿಸಬಹುದು.

Screenshot_2

ಇದಲ್ಲದೆ, ಜಾಗತಿಕ ಡಿಜಿಟಲ್ ಸಂವಹನದ ಸುಮಾರು ಶೇ.95ರಷ್ಟು ಸಮುದ್ರ ದಡಿಯಲ್ಲಿ ಅಳವಡಿಸಿರುವ ಕೇಬಲ್‌ಗಳ ಮೂಲಕ ಸಾಗುತ್ತದೆ. ಏಷ್ಯಾ, ಯುರೋಪ್ ಹಾಗೂ ಮಧ್ಯ ಪ್ರಾಚ್ಯವನ್ನು ಸಂಪರ್ಕಿಸುವ ಪ್ರಮುಖ ಡಿಜಿಟಲ್ ಮಾರ್ಗಗಳು ಹಿಂದೂ ಮಹಾ ಸಾಗರದ ಮೂಲಕ ಹಾದು ಹೋಗುತ್ತವೆ. ಗ್ರೇಟ್ ನಿಕೋಬಾರ್ ಈ ಡಿಜಿಟಲ್ ಜೀವನಾಡಿಗಳ ಭದ್ರತೆಗೆ ಭಾರತಕ್ಕೆ ಪ್ರಮುಖ ಕಾರ್ಯತಂತ್ರದ ಸ್ಥಾನವನ್ನು ನೀಡುತ್ತದೆ.

‘ಗ್ರೇಟ್ ನಿಕೋಬಾರ್’ನ ಮಹತ್ವವನ್ನು ಚೀನಾದ ಅವಲಂಬನೆಯ ಬೆಳಕಿನಲ್ಲಿ ನೋಡಿ ದಾಗ ಅದು ಮತ್ತಷ್ಟು ಸ್ಪಷ್ಟವಾಗುತ್ತದೆ. ಚೀನಾ ದಿನಕ್ಕೆ 11 ಮಿಲಿಯನ್ ಬ್ಯಾರೆಲ್ ಗಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಸುಮಾರು ಶೇ.80ರಷ್ಟು ಮಲಕ್ಕಾ ಜಲಸಂಧಿಯ ಮೂಲಕವೇ ಸಾಗುತ್ತದೆ.

ಚೀನಾದ ಒಟ್ಟು ಸಮುದ್ರ ವ್ಯಾಪಾರದ ಸುಮಾರು ಶೇ.60ರಷ್ಟು ಈ ಮಾರ್ಗದ ಮೇಲೆ ಅವಲಂಬಿತವಾಗಿದೆ, ಸಂಘರ್ಷದ ಸಂದರ್ಭಗಳಲ್ಲಿ ಈ ಮಾರ್ಗದ ಮೇಲಿನ ಮೇಲ್ವಿಚಾರಣೆ ಅಥವಾ ಅಡಚಣೆ ಚೀನಾದ ಆರ್ಥಿಕತೆಗೆ ಗಂಭೀರವಾದ ಹೊಡೆತ ನೀಡಬಲ್ಲದು.

’Belt and Road Initiative’ ಯೋಜನೆಯಡಿ ಚೀನಾ ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹೂಡಿಕೆಯನ್ನು ಜಾಗತಿಕವಾಗಿ ಮಾಡಿದೆ. ಭಾರತದ ಸುತ್ತಮುತ್ತಲಿನ ದೇಶಗಳ ಪ್ರಮುಖ ಬಂದರುಗಳಲ್ಲಿ ಅದರ ಹೂಡಿಕೆಗಳನ್ನು ಕಾಣಬಹುದು.

ಶ್ರೀಲಂಕಾ ‘ಹಂಬಂತೋಟಾ’ ಬಂದರನ್ನು 99 ವರ್ಷಗಳ ಅವಧಿಗೆ ಚೀನಾಗೆ ನೀಡಿದೆ.ಇದಕ್ಕೆ ಭಾರತದ ಅತ್ಯಂತ ಪ್ರಬಲ ಉತ್ತರವೇ ‘ಗ್ರೇಟ್ ನಿಕೋಬಾರ್’, ಇಲ್ಲಿ ಬಲಿಷ್ಠ ಸೈನಿಕ ಹಾಗೂ ಲಾಜಿಸ್ಟಿಕ್ಸ್ ಮೂಲಸೌಕರ್ಯ ನಿರ್ಮಿಸುವ ಮೂಲಕ ಭಾರತ ಪೂರ್ವ ಹಿಂದೂ ಮಹಾ‌ ಸಾಗರದಲ್ಲಿ ಕಾರ್ಯತಂತ್ರದ ಸಮತೋಲನ ಕಾಯ್ದುಕೊಳ್ಳಬಹುದು.

ಗ್ರೇಟ್ ನಿಕೋಬಾರ್ ನ ಮತ್ತೊಂದು ಮಹತ್ವದ ಅಂಶವೆಂದರೆ ಪ್ರಕೃತಿ ವಿಕೋಪ ನಿರ್ವ ಹಣೆ. ಹಿಂದೂ ಮಹಾಸಾಗರ ಪ್ರದೇಶವು ಸುನಾಮಿ, ಚಂಡಮಾರುತ ಮತ್ತು ಭೂಕಂಪ ಗಳಿಗೆ ಒಳಪಡುವ ಪ್ರದೇಶವಾಗಿದೆ.

ಗ್ರೇಟ್ ನಿಕೋಬಾರ್ ಭಾರತಕ್ಕೆ ಮಾನವೀಯ ನೆರವು ಹಾಗೂ ವಿಪತ್ತು ನಿರ್ವಹಣಾ ಕೇಂದ್ರ ವಾಗಿ ಕಾರ್ಯನಿರ್ವಹಿಸಬಹುದು. ತುರ್ತು ಸಂದರ್ಭಗಳಲ್ಲಿ ಅಲ್ಲಿಂದ ರಕ್ಷಣಾ ಕಾರ್ಯಾ ಚರಣೆ, ವೈದ್ಯಕೀಯ ನೆರವು ಮತ್ತು ಸಾಮಗ್ರಿಗಳ ತ್ವರಿತ ಸಾಗಣೆ ಸಾಧ್ಯವಾಗುತ್ತದೆ.

ಭಾರತ ಗ್ರೇಟ್ ನಿಕೋಬಾರ್ ಅಭಿವೃದ್ಧಿಗೆ ರು.80000 ಕೋಟಿವರೆಗೆ ಹೂಡಿಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಕೈಗೊಂಡಿದೆ. ಇದರಲ್ಲಿ ವರ್ಷಕ್ಕೆ 14 ಮಿಲಿಯನ್ ’MTEU’ ಸಾಮರ್ಥ್ಯದ ಅಂತಾರಾಷ್ಟ್ರೀಯ ಕಂಟೈನರ್ ಟ್ರಾನ್‌ಶಿಪ್ ಮೆಂಟ್ ಟರ್ಮಿನಲ್ ನಿರ್ಮಾಣ ಪ್ರಮುಖವಾಗಿದೆ. ಪ್ರಸ್ತುತ ಭಾರತದ ಸುಮಾರು ಶೇ.75ರಷ್ಟು ಟ್ರಾನ್‌ಶಿಪ್‌ ಮೆಂಟ್ ಸರಕುಗಳು ಕೊಲಂಬೊ ಮತ್ತೊ ಸಿಂಗಪೂರ್ ಬಂದರುಗಳ ಮೂಲಕ ಮೂಲಕ ಸಾಗುತ್ತಿವೆ.

ಗ್ರೇಟ್ ನಿಕೋಬಾರ್ ಬಂದರು ನಿರ್ಮಾಣದಿಂದ ಈ ಅವಲಂಬನೆ ಕಡಿಮೆಯಾಗುತ್ತದೆ, ಇದಲ್ಲದೆ ವರ್ಷಕ್ಕೆ 40 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹಸಿರು ವಿಮಾನ ನಿಲ್ದಾಣ, 450 MVA ಸಾಮರ್ಥ್ಯದ ವಿದ್ಯುತ್ ಮೂಲಸೌಕರ್ಯ ಹಾಗೂ 16610 ಹೆಕ್ಟೇರ್ ಪ್ರದೇಶ ದಲ್ಲಿ ಮೂರುವರೆ ಲಕ್ಷ ಜನರ ಸಾಮರ್ಥ್ಯದ ಆಧುನಿಕ ನಗರದ ಅಭಿವೃದ್ಧಿ ಯೋಜನೆಗಳು ಇದರ ಭಾಗವಾಗಿವೆ.

ಇವು ದ್ವೀಪವನ್ನು ಸಮಗ್ರ ರಕ್ಷಣಾ, ವ್ಯಾಪಾರ ಹಾಗೂ ಲಾಜಿಸ್ಟಿಕ್ಸ್ ಕೇಂದ್ರವನ್ನಾಗಿ ರೂಪಿಸಲಿವೆ. ಗ್ರೇಟ್ ನಿಕೋಬಾರ್ ಭಾರತಕ್ಕೆ‌ ಕೇವಲ ಭದ್ರತಾ ಲಾಭವಲ್ಲ, ಬ್ಲೂ ಎಕಾನಮಿ ಬೆಳವಣಿಗೆಗೂ ಅವಕಾಶ ಒದಗಿಸುತ್ತದೆ. ಮೀನುಗಾರಿಕೆ, ಸಮುದ್ರ ಸಂಪತ್ತು, ಸಾಗರ ಆಧಾರಿತ ಕೈಗಾರಿಕೆಗಳು ಮತ್ತು ದಕ್ಷಿಣ ಪೂರ್ವ ಏಷ್ಯಾದೊಂದಿಗೆ ಆರ್ಥಿಕ ಸಂಪರ್ಕ ಹೆಚ್ಚಿಸಲು ಇದು ಪ್ರಮುಖ ವೇದಿಕೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತ ಹೊಂದಿರುವ ರಾಷ್ಟ್ರಗಳೇ ಭವಿಷ್ಯದ ಜಾಗತಿಕ ಶಕ್ತಿಗಳಾಗಲಿವೆ. ಹೀಗಾಗಿ ಗ್ರೇಟ್ ನಿಕೋಬಾರ್ ಕೇವಲ ಒಂದು ದ್ವೀಪ ವಲ್ಲ. ಅದು ಭಾರತದ ಪೂರ್ವ ಸಮುದ್ರದ ರಕ್ಷಾ ಕವಚ, ಇಂಡೋ-ಪೆಸಿಫಿಕ್‌ನಲ್ಲಿ ಭಾರತದ ಕಾರ್ಯತಂತ್ರದ ದ್ವಾರ, ಚೀನಾದ ಸಮುದ್ರ ವಿಸ್ತರಣೆಗೆ ಬಲಿಷ್ಠ ಪ್ರತಿರೋಧ ಹಾಗೂ ಭಾರತದ ಜಾಗತಿಕ ಸಮುದ್ರ ನಾಯಕತ್ವದ ಆಧಾರಸ್ತಂಭವಾಗಿದೆ.

ಗ್ರೇಟ್ ನಿಕೋಬಾರ್ ಅಭಿವೃದ್ಧಿ ಕೇವಲ ಮೂಲ ಸೌಕರ್ಯ ಯೋಜನೆ ಅಲ್ಲ; ಅದು ಭಾರತದ ದೀರ್ಘಕಾಲೀನ ರಾಷ್ಟ್ರೀಯ ಕಾರ್ಯತಂತ್ರದ ಅವಶ್ಯಕತೆ. ಈ ದ್ವೀಪವನ್ನು ಬಲಪಡಿಸುವ ಮೂಲಕ ಭಾರತ ತನ್ನ ವ್ಯಾಪಾರ ಮಾರ್ಗಗಳನ್ನು ಸುರಕ್ಷಿತಗೊಳಿಸುತ್ತದೆ, ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುತ್ತದೆ, ರಕ್ಷಣಾತ್ಮಕ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಜಾಗತಿಕ ಸಮುದ್ರ ಶಕ್ತಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ರಾಹುಲ್ ಗಾಂಧಿ ಗ್ರೇಟ್ ನಿಕೋಬಾರ್ ದ್ವೀಪಕ್ಕೆ ಭೇಟಿ ನೀಡಿ, ಭಾರತ ಸರಕಾರ ಕೈಗೊಂಡಿ ರುವ ಅಲ್ಲಿನ ಅಭಿವೃದ್ಧಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆಯೆಂಬ ಹೊಸ ಕ್ಯಾತೆ ತೆಗೆದಿದ್ದರು. ಮತ್ತದೇ ಹಳಸಲು ನಿರೂಪಣೆಯನ್ನು ಮುನ್ನೆಲೆಗೆ ತಂದು ಅದಾನಿ ಹೆಸರನ್ನು ಬಳಸಿ ರಾಜಕೀಯ ಮಾಡಿದರು. ಆದರೆ ಮಹತ್ವದ ವಿಷಯವೆಂದರೆ ಈ ಯೋಜನೆಯ ಮೇಲ್ವಿಚಾರಣೆ, ಉದ್ದೇಶ, ಸಾರ್ವಜನಿಕ ಸಮಾಲೋಚನೆ ಮತ್ತು ಮೌಲ್ಯ ಮಾಪನದ ವಿವರವಾದ ಪ್ರಕ್ರಿಯೆಯ ನಂತರ 2006ರಲ್ಲಿ (ಕಾಂಗ್ರೆಸ್ ಅಧಿಕಾರದ ಸಮಯ) ಪರಿಸರ ಇಲಾಖೆಯ ಅನುಮತಿಯನ್ನು ಪಡೆಯಿತು.

ಪರಿಸರ ಇಲಾಖೆಯ ಅನುಮತಿಯು ಗಾಳಿ, ನೀರು, ಶಬ್ದ, ತ್ಯಾಜ್ಯ ನಿರ್ವಹಣೆ, ಸಮುದ್ರ ಪರಿಸರ ವಿಜ್ಞಾನ, ಮಾನವ ಆರೋಗ್ಯ ಮತ್ತು ವಿಪತ್ತು ನಿರ್ವಹಣೆಯನ್ನು ಒಳಗೊಂಡ 42 ನಿರ್ದಿಷ್ಟ ಷರತ್ತುಗಳನ್ನು ಒಳಗೊಂಡಿದೆ. ‘ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ’, ‘ಸಲೀಂ ಅಲಿ ಸೆಂಟರ್ ಫಾರ್‌ ಆರ್ನಿಥಾಲಜಿ ಅಂಡ್ ನ್ಯಾಚುರಲ್ ಹಿಸ್ಟರಿ’, ‘ದಿ ವೈಲ್ಡ್ ಲೈಫ್‌ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’, ‘ಇಂಡಿಯನ್ ಇನ್‌ ಸ್ಟಿಟ್ಯೂಟ್ ಫಾರ್ ಸೈ’ ನಂತಹ ಸಂಸ್ಥೆಗಳು ಅಧ್ಯಯನಗಳನ್ನು ನಡೆಸಿ, ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ‌ ಯೋಜನೆಯು ಸರಿಯಾದ ಸುರಕ್ಷತೆಗಳೊಂದಿಗೆ ಮುಂದು ವರಿಯಬಹುದು ಎಂದು ಹೇಳಿದೆ.

ಭವಿಷ್ಯದಲ್ಲಿ ಗ್ರೇಟ್ ನಿಕೋಬಾರ್ ಭಾರತದ ಸಮುದ್ರ ಶಕ್ತಿ, ಕಾರ್ಯತಂತ್ರದ ದೂರದೃಷ್ಟಿ ಮತ್ತು ಜಾಗತಿಕ ಪ್ರಭಾವದ ಸಂಕೇತವಾಗಿ ನಿಲ್ಲಲಿದೆ. ಇದು ಕೇವಲ ಭಾರತದ ದಕ್ಷಿಣದ ಗಡಿಯಲ್ಲ, ಭಾರತದ ಸಮುದ್ರಾಽಪತ್ಯದ ಮಹಾದ್ವಾರವಾಗಿದೆ.

ಮೋಹನ್‌ ವಿಶ್ವ

View all posts by this author