ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಗುವಾಹಟಿಯ ನವಗ್ರಹ ದೇವಾಲಯ: ಬ್ರಹ್ಮನ ಅಧ್ಯಯನ ತಾಣ

ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳ ಶಕ್ತಿಯನ್ನು ನಿಯಂತ್ರಿಸಿ ಲೋಕಕಲ್ಯಾಣ ಮಾಡಲು, ಆತ ಒಂಬತ್ತು ಗ್ರಹಗಳ ಪ್ರತೀಕವಾಗಿ ಒಂಬತ್ತು ಶಿವಲಿಂಗಗಳನ್ನು ಸ್ವತಃ ಪ್ರತಿಷ್ಠಾಪಿಸಿದನು. ಬ್ರಹ್ಮನೇ ಇಲ್ಲಿ ಗ್ರಹ- ನಕ್ಷತ್ರಗಳ ಜ್ಯೋತಿಷ್ಯ ಅಧ್ಯಯನ ನಡೆಸಿದ್ದರಿಂದ, ಈ ನಗರಕ್ಕೆ ‘ಪ್ರಾಗ್ಜ್ಯೋತಿಷಪುರ’ (ಪೂರ್ವದ ಜ್ಯೋತಿಷ್ಯದ ಅಥವಾ ಬೆಳಕಿನ ನಗರಿ) ಎಂಬ ಹೆಸರು ಶಾಶ್ವತವಾಯಿತು.

ಒಂದೊಳ್ಳೆ ಮಾತು

ಅಸ್ಸಾಂನ ಗುವಾಹಟಿಯ ಹಸಿರ ಹೊದಿಕೆಯ ನಿಸರ್ಗದ ಮಡಿಲಿನಲ್ಲಿ ಚಿತ್ರಾಚಲ ಎಂಬ ಪ್ರಶಾಂತ ಬೆಟ್ಟವಿದೆ. ಆ ಬೆಟ್ಟದ ತುದಿಯಲ್ಲೊಂದು ಪ್ರಾಚೀನ ಹಾಗೂ ವಿಸ್ಮಯಕಾರಿಯಾದ ತಾಣವಿದೆ- ಅದೇ ನವಗ್ರಹ ದೇವಾಲಯ. ಈ ಪವಿತ್ರ ಕ್ಷೇತ್ರಕ್ಕೆ ಕಾಲಿಡುವುದೆಂದರೆ ಕೇವಲ ದೇವಾಲಯ ದರ್ಶನವಲ್ಲ, ಅದು ಪುರಾಣ, ಖಗೋಳಶಾಸ್ತ್ರ ಮತ್ತು ಬ್ರಹ್ಮಾಂಡದ ಗೂಢ ರಹಸ್ಯಗಳ ಆಳಕ್ಕಿಳಿಯುವ ಒಂದು ದೈವಿಕ ಯಾತ್ರೆ.

ಈ ಕ್ಷೇತ್ರದ ಉಗಮದ ಹಿಂದೆ ಒಂದು ಪೌರಾಣಿಕ ಹಿನ್ನೆಲೆಯಿದೆ. ಕಾಲಿಕಾ ಪುರಾಣದ ಪ್ರಕಾರ, ಸೃಷ್ಟಿಕರ್ತ ನಾದ ಬ್ರಹ್ಮದೇವನು ಈ ಭೂಮಂಡಲವನ್ನು ನಿರ್ಮಿಸಲು ಸಂಕಲ್ಪಿಸಿದಾಗ, ಬ್ರಹ್ಮಾಂಡದ ಶಕ್ತಿಗಳನ್ನು ಸಮತೋಲನದಲ್ಲಿಡಲು ಆಯ್ದುಕೊಂಡ ಪವಿತ್ರ ಸ್ಥಳ ಈ ಚಿತ್ರಾಚಲ ಬೆಟ್ಟ. ಬ್ರಹ್ಮದೇವನು ಇಲ್ಲಿ ಕುಳಿತು ನಕ್ಷತ್ರಗಳು ಹಾಗೂ ಆಕಾಶಕಾಯಗಳ ಚಲನವಲನಗಳನ್ನು ಅಭ್ಯಾಸ ಮಾಡಿದನಂತೆ.

ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳ ಶಕ್ತಿಯನ್ನು ನಿಯಂತ್ರಿಸಿ ಲೋಕಕಲ್ಯಾಣ ಮಾಡಲು, ಆತ ಒಂಬತ್ತು ಗ್ರಹಗಳ ಪ್ರತೀಕವಾಗಿ ಒಂಬತ್ತು ಶಿವಲಿಂಗಗಳನ್ನು ಸ್ವತಃ ಪ್ರತಿಷ್ಠಾಪಿಸಿದನು. ಬ್ರಹ್ಮನೇ ಇಲ್ಲಿ ಗ್ರಹ- ನಕ್ಷತ್ರಗಳ ಜ್ಯೋತಿಷ್ಯ ಅಧ್ಯಯನ ನಡೆಸಿದ್ದರಿಂದ, ಈ ನಗರಕ್ಕೆ ‘ಪ್ರಾಗ್ಜ್ಯೋತಿಷಪುರ’ (ಪೂರ್ವದ ಜ್ಯೋತಿಷ್ಯದ ಅಥವಾ ಬೆಳಕಿನ ನಗರಿ) ಎಂಬ ಹೆಸರು ಶಾಶ್ವತವಾಯಿತು.

ಇದನ್ನೂ ಓದಿ: Roopa Gururaj Column: ಭಾಗವತದ ಉದ್ಧವಗೀತೆ: ಭೂಮಿಯ ಕ್ಷಮಾ ಗುಣ

ಇನ್ನೊಂದು ಐತಿಹ್ಯದಂತೆ ದಕ್ಷಯಜ್ಞದ ನಂತರ ಸತೀದೇವಿಯ ದೇಹತ್ಯಾಗ ಹಾಗೂ ರುದ್ರ ತಾಂಡವದ ಕಥೆಯೂ ಇದಕ್ಕೆ ಬೆಸೆದುಕೊಂಡಿದೆ. ಸತೀದೇವಿಯ ದೇಹದ ಯೋನಿ ಭಾಗವು ಸಮೀಪದ ಕಾಮಾಖ್ಯ (ನೀಲಾಚಲ) ಬೆಟ್ಟದ ಮೇಲೆ ಬಿದ್ದಾಗ, ಆ ಅಪಾರ ಶಕ್ತಿಪೀಠದ ತೇಜಸ್ಸನ್ನು ನಿಯಂತ್ರಿಸಲು ಮತ್ತು ಬ್ರಹ್ಮಾಂಡದ ಶಕ್ತಿಯನ್ನು ಸಮತೋಲನಗೊಳಿಸಲು ಚಿತ್ರಾಚಲ ಬೆಟ್ಟದಲ್ಲಿ ನವಗ್ರಹ ಲಿಂಗಗಳ ಆರಾಧನೆ ಆರಂಭವಾಯಿತು ಎಂಬ ಪ್ರತೀತಿಯಿದೆ.

ಜ್ಯೋತಿಷ್ಯದ ಪ್ರಕಾರ ನವಗ್ರಹಗಳು ಪರಮೇಶ್ವರನ ಅಧೀನದಲ್ಲಿದ್ದು, ಗ್ರಹದೋಷ ನಿವಾರಣೆಗೆ ಶಿವನ ಆರಾಧನೆಯೇ ಪರಮೌಷಧ. ಬೆಟ್ಟದ ಮೆಟ್ಟಿಲುಗಳನ್ನು ಏರಿ ದೇವಾಲಯದ ಗರ್ಭಗುಡಿ ಯನ್ನು ಪ್ರವೇಶಿಸಿದಾಗ ಅಲ್ಲಿನ ನಿಶ್ಯಬ್ದ ಮತ್ತು ಸಾತ್ವಿಕ ಕಂಪನಗಳು ಮನಸ್ಸನ್ನು ಆವರಿಸುತ್ತವೆ.

ಸಾಮಾನ್ಯವಾಗಿ ನವಗ್ರಹಗಳನ್ನು ಬೇರೆ ಬೇರೆ ಮೂರ್ತಿಗಳ ರೂಪದಲ್ಲಿ ಕಾಣುವ ನಮಗೆ, ಇಲ್ಲಿ ಒಂಬತ್ತು ಶಿವಲಿಂಗಗಳು ಒಟ್ಟಾಗಿ, ಒಂಬತ್ತು ವಿಶಿಷ್ಟ ಬಣ್ಣಗಳ ವಸಗಳಿಂದ ಅಲಂಕೃತಗೊಂಡು ವೃತ್ತಾಕಾರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು ವಿಶಿಷ್ಟ ಅನುಭವ. ಮಂದ ದೀಪಗಳ ಬೆಳಕಿನಲ್ಲಿ ಆ ಒಂಬತ್ತು ಲಿಂಗಗಳನ್ನು ಏಕಕಾಲದಲ್ಲಿ ದರ್ಶಿಸಿದಾಗ ಸಿಗುವ ಶಾಂತಿ ಮತ್ತು ನೆಮ್ಮದಿ ಪದಗಳಲ್ಲಿ ಹೇಳಲಾಗದು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಬ್ರಹ್ಮಾಂಡವನ್ನು ತಮ್ಮಿಂದ ಬೇರೆ ಯಾದದ್ದೆಂದು ಭಾವಿಸದೆ, ಗ್ರಹ-ನಕ್ಷತ್ರಗಳು ನಮ್ಮ ಕರ್ಮ, ಬದುಕು ಮತ್ತು ಆಧ್ಯಾತ್ಮಿಕ ಪಯಣದೊಂದಿಗೆ ಬೆಸೆದುಕೊಂಡಿವೆ ಎಂಬು ದನ್ನು ಕಂಡುಕೊಂಡಿದ್ದರು.

ವಿಜ್ಞಾನ ಮತ್ತು ಭಕ್ತಿಯ ಈ ಅದ್ಭುತ ಸಮಾಗಮವೇ ನವಗ್ರಹ ದೇವಾಲಯ. ನೀವು ಗುವಾಹಟಿಗೆ ಪ್ರಯಾಣಿಸಿ ದರೆ, ಚಿತ್ರಾಚಲ ಬೆಟ್ಟದ ಈ ಪಾವನ ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ; ಅಲ್ಲಿನ ದೈವಿಕ ಸ್ಪಂದನ ನಿಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಪ್ರಾಚೀನ ಕಾಲದಲ್ಲಿ ಆಕಾಶಕಾಯಗಳನ್ನು ಕೇವಲ ಕಣ್ಣುಮುಚ್ಚಿ ನಂಬದೆ, ಖಗೋಳಶಾಸ ಮತ್ತು ಗಣಿತದ ಮೂಲಕ ಅಧ್ಯಯನ ಮಾಡಲಾಗಿತ್ತು.

ಇಂದಿನ ಡಿಜಿಟಲ್ ಯುಗದಲ್ಲೂ ನಾವು ಕುರುಡು ನಂಬಿಕೆಗಳಿಗೆ ಒಳಗಾಗದೆ, ನಮ್ಮ ಪರಂಪರೆ ಯಲ್ಲಿರುವ ವೈಜ್ಞಾನಿಕ ದೃಷ್ಟಿಕೋನ ವನ್ನು ಅರ್ಥಮಾಡಿಕೊಂಡು ವಿಜ್ಞಾನ ಮತ್ತು ನಂಬಿಕೆ ಯನ್ನು ಸಮತೋಲನದಿಂದ ಕಾಯ್ದುಕೊಳ್ಳಬಹುದು. ಗ್ರಹಗಳು ಮತ್ತು ನಿಸರ್ಗದ ಚಕ್ರವು ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂಬುದನ್ನು ಈ ದೇವಾಲಯ ನೆನಪಿಸುತ್ತದೆ.

ಸೂರ್ಯೋದಯಕ್ಕೆ ಮುನ್ನ ಏಳುವುದು, ನೈಸರ್ಗಿಕ ಬೆಳಕಿಗೆ ಮೈಯೊಡ್ಡುವುದು ಮತ್ತು ಋತು ಮಾನಕ್ಕೆ ತಕ್ಕಂತೆ ಆಹಾರ ಸೇವಿಸುವಂತಹ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ಇಂದಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಜೀವನ ಶೈಲಿಯ ಖಾಯಿಲೆಗಳಿಂದ ದೂರವಿರ ಬಹುದು. ಮನುಷ್ಯ ಜನ್ಮದ ಬಗ್ಗೆ ಅದನ್ನು ಸಾರ್ಥಕವಾಗಿ ಬದುಕುವ ಬಗ್ಗೆ ನಮ್ಮ ಪೂರ್ವ ಜರಿಗೆ ಇದ್ದ ಜ್ಞಾನ ಅಪಾರವಾದದ್ದು. ಅದನ್ನು ಬಹಳ ಪರಿಶ್ರಮದಿಂದ ಅವರು ನಮಗೆ ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಅವುಗಳ ಮಹತ್ವ ವನ್ನು ಅರಿತು ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿ ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ನಮ್ಮ ಜೀವನವೂ ಔನ್ನತ್ಯಕ್ಕೇರುತ್ತದೆ.

ರೂಪಾ ಗುರುರಾಜ್

View all posts by this author