ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸುರಸಳ ಶಕ್ತಿ ಮುಂದೆ ಯುಕ್ತಿ ಪ್ರದರ್ಶಿಸಿದ ಹನುಮಂತ

ಬದುಕಿನಲ್ಲಿ ಎಲ್ಲರನ್ನೂ ಹಣ, ಅಧಿಕಾರ ಶಕ್ತಿಯಿಂದ ಎದುರಿಸಲು ಸಾಧ್ಯವಿಲ್ಲ. ಅನೇಕ ಬಾರಿ ಅವೆಲ್ಲಾ ಇದ್ದರೂ ಪ್ರಯೋಜನವಾಗುವುದಿಲ್ಲ. ಕೆಲವೊಮ್ಮೆ ಅತೀ ಶಕ್ತಿವಂತರ ಮುಂದೆ ನಾವು ಶಕ್ತಿ ಪ್ರದರ್ಶನಕ್ಕೆ ನಿಲ್ಲುವುದಕ್ಕಿಂತ, ಯುಕ್ತಿಯಿಂದ ಆ ಸಂದರ್ಭವನ್ನು ನಿಭಾಯಿಸಬೇಕು. ಆಗ ಅನಗತ್ಯ ಸಂಕಟ, ನೋವು ಗಳಿಂದ ಪಾರಾಗಿ ನಮ್ಮ ಕೆಲಸವನ್ನು ಕೂಡ ಜಾಣತನದಿಂದ ನೆರವೇರಿಸಿಕೊಳ್ಳ ಬಹುದು. ಅದಕ್ಕೆ ಹಿರಿಯರು ಹೇಳುವುದು ಶಕ್ತಿಗಿಂತ ಯುಕ್ತಿ ಮೇಲು ಎಂದು.

ಒಂದೊಳ್ಳೆ ಮಾತು

rgururaj628@gmail.con

ಸೀತಾಮಾತೆಯನ್ನು ಅನ್ವೇಷಿಸುತ್ತಾ ಸಾಗರವನ್ನು ದಾಟುವ ಸಂದರ್ಭದಲ್ಲಿ ವೀರ ಹನುಮನು ಎತ್ತರದ ಮೈನಾಕ ಪರ್ವತಕ್ಕೆ ನಮಿಸಿ ಸಾಗರೋಲ್ಲಂಘನಕ್ಕೆ ಎತ್ತರಕ್ಕೆ ಹಾರುತ್ತಾನೆ. ಹನುಮಂತನ ಭಕ್ತಿ ವಿಧೇಯತೆಯನ್ನು ಕಂಡು ದೇವಾನುದೇವತೆಗಳು, ಗಂಧರ್ವರು, ಸಿದ್ದರು ಋಷಿ ಮುನಿಗಳು ಎಲ್ಲರೂ ಅತ್ಯಂತ ಸಂತೋಷಗೊಂಡರು. ಆದರೂ ಅವರಿಗೆ ಹನುಮಂತನನ್ನು ಪರೀಕ್ಷಿಸುವ ಮನಸಾಯಿತು.

ದೇವತೆಗಳಿಗೆ ಹನುಮಂತನ ಶಕ್ತಿಯು ಅದಮ್ಯವಾದುದೆಂದು ಮೊದಲೇ ಮನವರಿಕೆಯಿತ್ತು. ಆದರೂ, ಹನುಮನನ್ನು ಪೂರ್ಣವಾಗಿ ಪರೀಕ್ಷಿಸಿ ಆತನ ಸಾಮರ್ಥ್ಯವನ್ನು ಸಮಗ್ರ ರೀತಿಯಲ್ಲಿ ಕಂಡುಕೊಳ್ಳುವ ದೇವತೆಗಳ ಆಸೆಯಿನ್ನೂ ಇಂಗಿರಲಿಲ್ಲ. ಹೀಗಾಗಿ ದೇವತೆಗಳು ನಾಗಮಾತೆಯಾದ ಸುರಸಾಳನ್ನು ಸಂಪರ್ಕಿಸಿ ಸಾಗರೋಲ್ಲಂಘನಗೈಯ್ಯುತ್ತಿರುವ ಹನುಮನನ್ನು ಮಾರ್ಗ ಮಧ್ಯ ದಲ್ಲಿಯೇ ತಡೆ ಹಿಡಿಯುವಂತೆ ಕೇಳಿಕೊಳ್ಳುತ್ತಾರೆ.

ದೇವತೆಗಳ ಕೋರಿಕೆಯನ್ನು ಮನ್ನಿಸಿದ ನಾಗಮಾತೆಯು ಹನುಮನ ಪ್ರಯಾಣಕ್ಕೆ ಅಡಚಣೆಯನ್ನುಂಟು ಮಾಡುವ ಉದ್ದೇಶದಿಂದ ಎತ್ತರೆತ್ತರಕ್ಕೆ ರಾಕ್ಷಸೀ ಸ್ವರೂಪದ ಸ್ತ್ರೀಯ ಹಾಗೆ ಬೆಳೆಯುತ್ತಾಳೆ ಹಾಗೂ ಹನುಮನ ಮಾರ್ಗಕ್ಕೆ ಅಡ್ಡಲಾಗಿ ನಿಂತುಕೊಳ್ಳುತ್ತಾಳೆ.

ಇದನ್ನೂ ಓದಿ: Roopa Gururaj Column: ಶಕ್ತಿ-ಯುಕ್ತಿ ಎರಡೂ ಮೇಳೈಸಿದ ಬಲರಾಮ

ತನ್ನ ಮಾರ್ಗದಲ್ಲಿ ಸ್ತ್ರೀರೂಪದ ದೈತ್ಯೆಯೋರ್ವಳು ಅಡಚಣೆಯಾಗಿ ನಿಂತಿರುವುದನ್ನು ಕಂಡ ಹನುಮನು, ಸೀತಾನ್ವೇಷಣೆಯ ಮಹತ್ಕಾರ್ಯದಲ್ಲಿ ತೊಡಗಿರುವ ತನಗೆ, ತನ್ನ ಮಾರ್ಗದಿಂದ ಪಕ್ಕಕ್ಕೆ ಸರಿದು ಅನುಕೂಲ ಮಾಡಿಕೊಡುವಂತೆ ಹನುಮನು ಸುರಸಾಳಲ್ಲಿ ವಿನಂತಿಸಿಕೊಳ್ಳುವನು. ಅದಕ್ಕುತ್ತರವಾಗಿ ನಾಗ ಮಾತೆಯು, ‘ನನ್ನ ಬಾಯಿಯ ಮಾರ್ಗದ ಮೂಲಕ ಸಾಗದೇ ಯಾರಿಂದಲೂ ಮಹಾಸಾಗರವನ್ನು ದಾಟಲು ಸಾಧ್ಯವಿಲ್ಲ’.

ನನಗೆ ಬ್ರಹ್ಮನಿಂದ ವರವಿದೆ ಇದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ ಎಂದು ಹನುಮನಿಗೆ ಪಂಥಾಹ್ವಾನ ನೀಡುವಳು. ಹನುಮಂತ ಎಷ್ಟೇ ಪರಿಪರಿಯಾಗಿ ವಿನಂತಿಸಿಕೊಂಡರು ಸುರಸ ತನ್ನ ಹಠಕ್ಕೆ ಬದ್ಧಳಾಗಿ ನಿಂತಳು. ಸೀತಾನ್ವೇಷಣೆಯ ಕಾರ್ಯ ಅತ್ಯಂತ ಮಹತ್ವದ್ದಾದರೂ ಎದುರಿಗಿರುವ ಸುರಸೆಯನ್ನು ಹನುಮಂತ ನಿಭಾಯಿಸಲೇಬೇಕಿತ್ತು.

ಹನುಮಂತ ಬೃಹದಾಕಾರವಾಗಿ ಬೆಳೆಯಲಾರಂಭಿಸಿದ. ಅವನನ್ನು ಕಂಡು ಸುರಸೆಯೂ ದೈತ್ಯಳಾಗಿ ವಿಕಾರ ರೂಪವಾಗಿ ಬಾಯಿ ತೆರೆಯುತ್ತಾ ಬೆಳೆಯಲಾರಂಭಿಸಿದಳು. ಹನುಮನು ಕೈಮುಗಿದು ‘ನಾನು ನಿನ್ನ ಬಾಯಿಯೊಳಗೆ ಪ್ರವೇಶಿಸಲು ಸಾಧ್ಯವಾಗುವಷ್ಟರ ಮಟ್ಟಿಗೆ ನೀನು ನಿನ್ನ ಬಾಯಿಯನ್ನು ತೆರೆ’ ಎಂದು ಆಕೆಯಲ್ಲಿ ಕೇಳಿಕೊಳ್ಳುವನು.

ಇದನ್ನು ಕೇಳಿ ಸಂತುಷ್ಟಳಾದ ಸುರಸಳು ತನ್ನ ಬಾಯಿಯನ್ನು ಅಗಲಗಲವಾಗಿ ತೆರೆಯಲಾ ರಂಭಿಸುತ್ತಾಳೆ. ಹನುಮನ ದೈತ್ಯ ರೂಪವನ್ನು ನುಂಗಲು ಈ ವೇಳೆಗಾಗಲೇ, ಸುರಸಾಳ ಬಾಯಿಯು ಹನುಮಾನನ ಶರೀರದ ಗಾತ್ರಕ್ಕಿಂತಲೂ ಹೆಚ್ಚು ಪಟ್ಟು ದೊಡ್ಡದಾಗಿ ತೆರೆದಿರುತ್ತದೆ.

ಮಹಾಚತುರನಾದ ಹನುಮಂತನು ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದವನು, ಒಡನೆಯೇ ತನ್ನ ಶರೀರವನ್ನು ಇದ್ದಕ್ಕಿದ್ದಂತೆ ಕುಗ್ಗಿಸಿ ಒಂದು ಸೊಳ್ಳೆಯ ಗಾತ್ರದಷ್ಟು ಕಿರಿದಾಗಿಸಿಕೊಂಡನು, ಸುರಸಳು ತನ್ನ ಬಾಯಿಯನ್ನು ಹನುಮನ ಈಗಿನ ಗಾತ್ರಕ್ಕೆ ಕುಗ್ಗಿಸಿಕೊಳ್ಳಲು ಸಾಧ್ಯವಾಗುವುದಕ್ಕೆ ಮುಂಚೆಯೇ, ಅಗಲವಾಗಿ ತೆರೆದುಕೊಂಡಿರುವ ಆಕೆಯ ಕುರೂಪವಾದ ಬಾಯಿಯೊಳಗೆ ತನ್ನ ಸೂಕ್ಷ್ಮ ರೂಪದ ಶರೀರದೊಡನೆ ಹನುಮನು ಕಣ್ಣು ಮಿಟುಕುವಷ್ಟರಲ್ಲಿ ಪ್ರವೇಶಿಸಿ ಹೊರಬಂದು ಬಿಡುತ್ತಾನೆ.

ನಂತರ ಹನುಮಂತ ಸುರಸಳಿಗೆ ವಿನಮ್ರತೆಯಿಂದ ಕೈ ಮುಗಿಯುತ್ತಾ, ತಾಯಿ ದಾಕ್ಷಾಯಿಣಿ (ದಕ್ಷನ ಮಗಳು) ನಿನಗೆ ಸಿಕ್ಕ ವರದಂತೆ ನಾನು ನಿನ್ನ ಬಾಯಿಯೊಳಗೆ ಪ್ರವೇಶಿಸಿ ಹೊರ ಬಂದಿದ್ದೇನೆ. ಇನ್ನು ನಾನು ಹೊರಡಲು ಅನುಮತಿ ನೀಡು ಎಂದು ಕೇಳುತ್ತಾನೆ. ಹನುಮನ ಈ ಚುರುಕು ಬುದ್ಧಿಯು ಸುರ್ರ‍ಸಳಿಗೆ ಅತ್ಯಂತ ಸಂತಸವನ್ನುಂಟು ಮಾಡುತ್ತದೆ. ಹನುಮನ ಧೈರ್ಯ, ಸ್ಥೈರ್ಯ, ಸಾಹಸ, ಹಾಗೂ ಬುದ್ಧಿವಂತಿಕೆಗಳನ್ನು ಕಂಡು ಅತೀ ಸಂತುಷ್ಟಳಾದ ಸುರಸ ತನ್ನ ಸುಂದರ ನಿಜರೂಪದ ದರ್ಶನವನ್ನು ಹನುಮನಿಗಿತ್ತು, ಹನುಮನಿಗೆ ಅಂದುಕೊಂಡದ್ದನ್ನು ಸಾಧಿಸಲು ಅಪರಿಮಿತ ಶಕ್ತಿ ಮತ್ತು ವಿಜಯ ಪ್ರಾಪ್ತಿಯಾಗಲಿ ಎಂದು ಹರಸುತ್ತಾಳೆ.

ಬದುಕಿನಲ್ಲಿ ಎಲ್ಲರನ್ನೂ ಹಣ, ಅಧಿಕಾರ ಶಕ್ತಿಯಿಂದ ಎದುರಿಸಲು ಸಾಧ್ಯವಿಲ್ಲ. ಅನೇಕ ಬಾರಿ ಅವೆಲ್ಲಾ ಇದ್ದರೂ ಪ್ರಯೋಜನವಾಗುವುದಿಲ್ಲ. ಕೆಲವೊಮ್ಮೆ ಅತೀ ಶಕ್ತಿವಂತರ ಮುಂದೆ ನಾವು ಶಕ್ತಿ ಪ್ರದರ್ಶನಕ್ಕೆ ನಿಲ್ಲುವುದಕ್ಕಿಂತ, ಯುಕ್ತಿಯಿಂದ ಆ ಸಂದರ್ಭವನ್ನು ನಿಭಾಯಿಸಬೇಕು. ಆಗ ಅನಗತ್ಯ ಸಂಕಟ, ನೋವುಗಳಿಂದ ಪಾರಾಗಿ ನಮ್ಮ ಕೆಲಸವನ್ನು ಕೂಡ ಜಾಣತನದಿಂದ ನೆರವೇರಿಸಿಕೊಳ್ಳ ಬಹುದು. ಅದಕ್ಕೆ ಹಿರಿಯರು ಹೇಳುವುದು ಶಕ್ತಿಗಿಂತ ಯುಕ್ತಿ ಮೇಲು ಎಂದು.

ರೂಪಾ ಗುರುರಾಜ್

View all posts by this author