ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಹರಿಭಕ್ತಿಸಾರ: ಕೃಷ್ಣನ ದರ್ಶನ ಮತ್ತು ಅನನ್ಯ ಭಕ್ತಿ

ಮಳೆ, ಗಾಳಿ, ಬಿಸಿಲು ಎನ್ನದೆ ದಿನಗಟ್ಟಲೆ ಕಣ್ಣೀರು ಹಾಕುತ್ತಾ ಕೃಷ್ಣನನ್ನು ಆರಾಧಿಸಿದರು. ಅವರ ಭಕ್ತಿಗೆ ಕರಗಿದ ಉಡುಪಿಯ ಕೃಷ್ಣ, ಮಠದ ಗರ್ಭಗುಡಿಯ ಗೋಡೆಯನ್ನೇ ಸೀಳಿ, ಪಶ್ಚಿಮಾಭಿ ಮುಖವಾಗಿ ತಿರುಗಿ ಕನಕದಾಸರಿಗೆ ದರ್ಶನ ನೀಡಿದನು! (ಇದೇ ಇಂದು ಜಗತ್ಪ್ರಸಿದ್ಧವಾಗಿರುವ ‘ಕನಕನ ಕಿಂಡಿ’). ಈ ಪವಾಡ ನಡೆದಾಗ ಕನಕದಾಸರಿಗೆ ಮತ್ತೊಂದು ಪರಮ ಸತ್ಯದ ದರ್ಶನವಾಯಿತು.

ಒಂದೊಳ್ಳೆ ಮಾತು (ಭಾಗ-3)

ಬಾಳೆಹಣ್ಣಿನ ಪ್ರಸಂಗದ ನಂತರ ಆಶ್ರಮದ ಶಿಷ್ಯರಿಗೆ ಕನಕದಾಸರ ಆಧ್ಯಾತ್ಮಿಕ ಶ್ರೇಷ್ಠತೆಯ ಅರಿವಾಗಿತ್ತು. ಆದರೆ, ಹೊರಗಿನ ಸಮಾಜ ಮತ್ತು ಉಡುಪಿಯ ಶ್ರೀಕೃಷ್ಣ ಮಠದ ಪೂಜಾರಿಗಳು ಕನಕದಾಸರನ್ನು ಮಠದ ಒಳಗೆ ಸೇರಿಸಲು ಒಪ್ಪಲಿಲ್ಲ. ಕೆಳಜಾತಿಯವನಿಗೆ ಕೃಷ್ಣನ ದರ್ಶನ ಭಾಗ್ಯವಿಲ್ಲ, ಮಠದ ಒಳಗೆ ಪ್ರವೇಶವಿಲ್ಲ ಎಂದು ಅವರನ್ನು ಹೊರಗಟ್ಟಿದರು.

ಬಾಡದ ಆದಿಕೇಶವನನ್ನೇ ತನ್ನ ಅಂತರಾತ್ಮದಲ್ಲಿ ಕಂಡ ಕನಕದಾಸರಿಗೆ ಈ ಭೇದಭಾವದಿಂದ ಬೇಸರವಾಗಲಿಲ್ಲ. ಬದಲಿಗೆ, ಭಗವಂತನನ್ನು ಕಾಣಬೇಕೆಂಬ ಹಂಬಲ ಮತ್ತಷ್ಟು ತೀವ್ರವಾಯಿತು. ಅವರು ಮಠದ ಹಿಂಭಾಗದಲ್ಲಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ಕುಳಿತು, ತಂಬೂರಿ ಮೀಟುತ್ತಾ ಭಜನೆ ಮಾಡಲು ಆರಂಭಿಸಿದರು.

ಮಳೆ, ಗಾಳಿ, ಬಿಸಿಲು ಎನ್ನದೆ ದಿನಗಟ್ಟಲೆ ಕಣ್ಣೀರು ಹಾಕುತ್ತಾ ಕೃಷ್ಣನನ್ನು ಆರಾಧಿಸಿದರು. ಅವರ ಭಕ್ತಿಗೆ ಕರಗಿದ ಉಡುಪಿಯ ಕೃಷ್ಣ, ಮಠದ ಗರ್ಭಗುಡಿಯ ಗೋಡೆಯನ್ನೇ ಸೀಳಿ, ಪಶ್ಚಿಮಾಭಿ ಮುಖವಾಗಿ ತಿರುಗಿ ಕನಕದಾಸರಿಗೆ ದರ್ಶನ ನೀಡಿದನು! (ಇದೇ ಇಂದು ಜಗತ್ಪ್ರಸಿದ್ಧವಾಗಿರುವ ‘ಕನಕನ ಕಿಂಡಿ’). ಈ ಪವಾಡ ನಡೆದಾಗ ಕನಕದಾಸರಿಗೆ ಮತ್ತೊಂದು ಪರಮ ಸತ್ಯದ ದರ್ಶನ ವಾಯಿತು.

ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ: ಅಹಂಕಾರದ ಭಂಗ ಮತ್ತು ನಿಜವಾದ ಜ್ಞಾನ

ಭಗವಂತನಿಗೆ ಬಾಹ್ಯ ಆಡಂಬರ, ಜಾತಿ, ಸಂಪತ್ತು ಯಾವುದೂ ಮುಖ್ಯವಲ್ಲ; ಕೇವಲ ಶುದ್ಧವಾದ ಭಕ್ತಿ ಮಾತ್ರ ಮುಖ್ಯ ಎಂದು ಅವರಿಗೆ ಮನವರಿಕೆಯಾಯಿತು. ಭಗವಂತನು ಕೇವಲ ಕಲ್ಲಿನ ಮೂರ್ತಿಯಲ್ಲ, ಅವನು ನಮ್ಮ ಪ್ರಾರ್ಥನೆಗೆ ಸ್ಪಂದಿಸುವ ಕರುಣಾಮಯಿ ಎಂಬುದನ್ನು ಅರಿತಾಗ, ಅವರ ಲೌಕಿಕ ಬಂಧನಗಳೆಲ್ಲವೂ ಕಳಚಿ ಬಿದ್ದವು. ಭಗವಂತನ ಅಗಾಧ ಕರುಣೆಯನ್ನು ಕೊಂಡಾ ಡುತ್ತಾ, ತಮಗೆ ಮುಕ್ತಿ ನೀಡುವಂತೆ ಪ್ರಾರ್ಥಿಸುವ ‘ಹರಿಭಕ್ತಿಸಾರ’ದ ಮೂರನೇ ಪದ್ಯ ಇಂತಿದೆ.

ಅಜನ ಪಿತನೇ ನಿನ್ನ ನಾಮದ

ಭಜನೆ ಮುಕ್ತಿಯ ಪಥವು ಸಕಲ ಜ-

ಗಜನಕೆ ಕರುಣಾಬ್ಧಿ ನೀನೇ ಗತಿಯು ಸರ್ವರಿಗೆ ||

ತ್ರಿಜಗದೊಡೆಯನೆ ಸಲಹೊ ಯೆನ್ನನು

ನಿಜದ ಭಕ್ತಿಯ ನೀಡಿ ನಿತ್ಯದಿ

ಅಜವಿಮಲ ಕೀರ್ತಿಯನು ಪಾಲಿಸು

ಬಾಡದಾದಿಕೇಶ || ೩ ||

ಪದ್ಯದ ಭಾವಾರ್ಥ: ಉಡುಪಿಯ ಶ್ರೀಕೃಷ್ಣನ ದಿವ್ಯ ದರ್ಶನದಿಂದ ಪುಳಕಿತರಾದ ಕನಕದಾಸರು, ಆ ಪರಮಾತ್ಮನ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೀಗೆ ಪ್ರಾರ್ಥಿಸುತ್ತಾರೆ: ಸೃಷ್ಟಿಕರ್ತ ನಾದ ಬ್ರಹ್ಮದೇವನಿಗೆ ತಂದೆಯಾದವನೇ (ಅಜನ ಪಿತನೇ), ಈ ಇಡೀ ಜಗತ್ತಿನ ಕಲ್ಯಾಣಕ್ಕೆ ನಿನ್ನ ನಾಮಸ್ಮರಣೆ ಮತ್ತು ಭಜನೆಯೇ ಅತ್ಯಂತ ಸರಳ ಹಾಗೂ ಶ್ರೇಷ್ಠವಾದ ಮುಕ್ತಿಯ ಮಾರ್ಗವಾಗಿದೆ.

ಈ ಪ್ರಪಂಚದಲ್ಲಿ ಹುಟ್ಟಿದ ಸಕಲ ಜೀವರಾಶಿಗಳಿಗೂ ನೀನೇ ತಂದೆ (ಜಗಜನಕ). ನೀನು ಕರುಣೆಯ ಸಾಗರ (ಕರುಣಾಬ್ಧಿ), ನಿನ್ನನ್ನು ಬಿಟ್ಟರೆ ಈ ಸಂಸಾರದ ಕಡಲನ್ನು ದಾಟಲು ಬೇರೆ ಯಾರಿಗೂ ಯಾವುದೇ ಗತಿಯಿಲ್ಲ. ಮೂರು ಲೋಕಗಳ ಒಡೆಯನೇ (ತ್ರಿಜಗದೊಡೆಯನೆ), ನನ್ನಲ್ಲಿ ಯಾವುದೇ ಬಾಹ್ಯ ಆಡಂಬರವಿಲ್ಲ, ಕೇವಲ ನಿನ್ನ ಮೇಲಿನ ಪ್ರೀತಿಯಿದೆ.

ನನಗೆ ಪ್ರತಿದಿನವೂ ನಿನ್ನ ಪಾದಗಳ ಮೇಲಿರುವ ಸತ್ಯವಾದ ಭಕ್ತಿಯನ್ನು (ನಿಜದ ಭಕ್ತಿಯನ್ನು) ದಯಪಾಲಿಸು. ಬ್ರಹ್ಮದೇವನಿಗೂ ನಿಲುಕದ, ಅತ್ಯಂತ ಪವಿತ್ರವಾದ ನಿನ್ನ ಕೀರ್ತಿಯನ್ನು ಸದಾ ಹಾಡುವ ಭಾಗ್ಯವನ್ನು ನನಗೆ ನೀಡಿ, ನನ್ನನ್ನು ಸಲಹು ಪ್ರಭು!

ಕನಕದಾಸರ ಜೀವನದ ಈ ಘಟನೆಯು ನಮಗೆ ದ್ವೇಷದ ಬದಲಿಗೆ ಪ್ರೀತಿಯನ್ನು, ಸಮಾಜದ ವಿಕ್ಷಿಪ್ತ ಮನಸ್ಥಿತಿಯ ನಡುವೆಯೂ ಧೃತಿಗೆಡದ ಭಕ್ತಿಯನ್ನು, ನಮ್ಮ ಜೀವನದ ಗುರಿಯನ್ನು ಸಾಧಿಸುವ ಮನಸ್ಥಿತಿಯನ್ನು ಕಲಿಸುತ್ತದೆ. ನಾವು ದೇವಸ್ಥಾನದ ಒಳಗೆ ಹೋಗಿ ದೇವರನ್ನು ನೋಡುವುದು ಮುಖ್ಯವಲ್ಲ, ಆದರೆ ಒಂದು ಕ್ಷಣವಾದರೂ ಭಕ್ತಿಯಲ್ಲಿ ಲೀನವಾಗಿ ಅವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕು.

ಅಹಂಕಾರ ಮತ್ತು ಮತ್ತೊಬ್ಬರು ನಮಗಿಂತ ಬೌದ್ಧಿಕವಾಗಿ ಮೇಲು-ಕೀಳು ಎಂಬ ಭೇದಭಾವವನ್ನು ಮರೆತು, ನಮ್ಮ ಜೀವನದ ಗುರಿಯೆಡೆಗೆ ಗಮನ ಹರಿಸಿದಾಗ ಜ್ಞಾನ ಮತ್ತು ಸಮಾಧಾನ ಸಂತೃಪ್ತಿ ಎಲ್ಲವೂ ನಮಗೆ ತಾನೇ ತಾನಾಗಿ ಒಲಿಯುತ್ತದೆ. ಹೀಗಾಗಿ ಹರಿಭಕ್ತಿಸಾರ ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತ.

ರೂಪಾ ಗುರುರಾಜ್

View all posts by this author