ಒಂದೊಳ್ಳೆ ಮಾತು (ಭಾಗ-6)
ಕನಕದಾಸರು ಕಾಗಿನೆಲೆಯ ಆದಿಕೇಶವನ ದೇವಸ್ಥಾನವನ್ನು ಹಂತ ಹಂತವಾಗಿ ಜೀರ್ಣೋದ್ಧಾರ ಮಾಡಿ ಗರ್ಭಗುಡಿಯೊಳಗೆ ನಿಂತು ಭಗವಂತನ ವಿಶ್ವರೂಪವನ್ನು ಕಣ್ತುಂಬಿಕೊಳ್ಳುತ್ತಿದ್ದಂತೆ ಹೊರಗೆ ನಿಂತಿದ್ದ ಜನರಲ್ಲಿ ಗಲಾಟೆ ಹೆಚ್ಚಾಯಿತು. ದಾಸನೇ, ಗರ್ಭಗುಡಿಯಿಂದ ಹೊರಗೆ ಬಾ, ನೀನು ಕೆಳಜಾತಿಯವನು, ಮೂರ್ತಿಯನ್ನು ಮುಟ್ಟಿ ಮೈಲಿಗೆ ಮಾಡಬೇಡ ಎಂದು ಕೆಲವರು ಕೂಗಾಡಿದರು.
ಆಗ ಕನಕದಾಸರು ಶಾಂತವಾಗಿ ಹೊರಬಂದು, ನಿಮ್ಮ ಆಕ್ಷೇಪಣೆ ಮೂರ್ತಿಯನ್ನು ನಾನು ಮುಟ್ಟ ಬಾರದು ಎಂದಷ್ಟೇ ತಾನೇ? ಹಾಗಾದರೆ s ಗವಂತನೇ ಬಂದು ತನ್ನ ಸ್ಥಾನದಲ್ಲಿ ಕುಳಿತುಕೊಳ್ಳಲಿ ಎಂದು ನುಡಿದರು. ಅವರು ಕಾಗಿನೆಲೆಯ ಲಕ್ಷ್ಮಿ ನರಸಿಂಹ ಮತ್ತು ಆದಿಕೇಶವನ ವಿಗ್ರಹಗಳ ಮುಂದೆ ನಿಂತು, ತಮ್ಮ ತಂಬೂರಿ ಮೀಟುತ್ತಾ ಕಣ್ಣೀರ ಕಡಲಲ್ಲಿ ಮುಳುಗಿದರು. ಅವರ ಭಕ್ತಿಯ ಆರ್ದ್ರತೆಗೆ ಕರಗಿದ ಕಾಗಿನೆಲೆಯ ಆದಿಕೇಶವನ ಕಲ್ಲಿನ ಮೂರ್ತಿಯಲ್ಲಿ ಜೀವಕಳೆ ಮೂಡಿತು!
ಇಡೀ ಸಭೆಯು ಕಣ್ಣಿಕ್ಕಿ ನೋಡುತ್ತಿರುವಾಗಲೇ, ಆ ದಿವ್ಯ ಮೂರ್ತಿಯು ಕನಕದಾಸರು ತೋರಿದ ಪೀಠದ ಕಡೆಗೆ ತಾನಾಗಿಯೇ ನಡೆದು ಬಂದು ಪ್ರತಿಷ್ಠಾಪಿತವಾಯಿತು! ಆ ಕ್ಷಣದಲ್ಲಿ ಇಡೀ ಕಾಗಿನೆಲೆ ಯಲ್ಲಿ ದಿವ್ಯ ಬೆಳಕು ಮೂಡಿ, ಹೂವಿನ ಮಳೆಯಾಯಿತು. ದಾಸರನ್ನು ನಿಂದಿಸಿದವರೆ ಆ ದೃಶ್ಯ ವನ್ನು ಕಂಡು ಪ್ರಜ್ಞೆ ತಪ್ಪಿದವರಂತೆ ನಿಂತರು. ಅವರ ಕಣ್ಣೆದುರೇ ಒಬ್ಬ ಪರಮ ಭಕ್ತನಿಗಾಗಿ ಭಗವಂತನು ಕಲ್ಲಿನ ಮೂರ್ತಿಯಿಂದ ಚೇತನ ರೂಪಿಯಾಗಿ ಎದ್ದು ಬಂದಿದ್ದನು.
ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ: ಕಾಗಿನೆಲೆಯ ಪಯಣ, ದೇಗುಲ ನಿರ್ಮಾಣ
ಈ ಅದ್ಭುತ ಘಟನೆಯಿಂದ ಇಡೀ ಜನಸಮೂಹಕ್ಕೆ ಜ್ಞಾನೋದಯವಾಯಿತು. ಜಾತಿ, ವರ್ಣ, ಲಿಂಗಗಳ ಭೇದವಿಲ್ಲದೆ ಎಲ್ಲರೂ ಕನಕದಾಸರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದರು. ಭಗವಂತನು ತನ್ನ ಭಕ್ತರ ರಕ್ಷಣೆಗಾಗಿ ಮತ್ತು ಅಜ್ಞಾನಿಗಳ ಅಹಂಕಾರ ಅಳಿಸಲು ಸದಾ ಜಾಗೃತನಾಗಿದ್ದಾನೆ ಎಂಬುದನ್ನು ಕಣ್ಣಾರೆ ಕಂಡ ಕನಕದಾಸರು, ಆ ಪರಮಾತ್ಮನ ಅನಂತ ಲೀಲೆಗಳನ್ನು ಕೊಂಡಾ ಡುತ್ತಾ, ಲೌಕಿಕ ಜಗತ್ತಿನ ಕಷ್ಟಗಳಿಂದ ತಮಗೆ ಮುಕ್ತಿ ನೀಡಬೇಕೆಂದು ಪ್ರಾರ್ಥಿಸಿದರು.
‘ಹರಿಭಕ್ತಿಸಾರ’ದ ಆರನೇ ಪದ್ಯದ ಸಾರ ಮನಮುಟ್ಟುವಂತಿದೆ..
ಅಜನ ಹಡೆದವನೀ ಯಗಣಿತ ಭು-
ವನವನೆಲ್ಲವ ಕಾಯ್ವ ಕರ್ತನು
ತ್ರಿಜಗದೊಡೆಯನು ನೀನೆ ಸಕಲ
ಪ್ರಾಣಿಗಳ ತಂದೆ ||
ಭಜಿಸಬಲ್ಲಡೆ ಮುಕ್ತಿ ಪಾಲಿಸು
ಕುಜನರನು ಸಂಹರಿಸಿ ಕಾಯೊ
ಕೃ- ಪಾಜಲಧಿ ಯೆನ್ನನು ಸಲಹು
ಬಾಡದಾದಿಕೇಶ || 6 ||
ಪದ್ಯದ ಭಾವಾರ್ಥ: ಕಾಗಿನೆಲೆಯ ಆದಿಕೇಶವನ ದಿವ್ಯ ಪವಾಡಕ್ಕೆ ಸಾಕ್ಷಿಯಾದ ಕನಕದಾಸರು, ಆ ಜಗನ್ನಾಥನ ಸರ್ವಶಕ್ತತೆಯನ್ನು ಶರಣಾಗತಿಯ ಭಾವದಲ್ಲಿ ಹೀಗೆ ಕೊಂಡಾಡುತ್ತಾರೆ:
ಸೃಷ್ಟಿಕರ್ತನಾದ ಬ್ರಹ್ಮದೇವನನ್ನು ತನ್ನ ಹೊಕ್ಕಳ ಕಮಲದಿಂದ ಹೆತ್ತವನು (ಅಜನ ಹಡೆದವನು) ನೀನೇ ಪ್ರಭು. ಲೆಕ್ಕವಿಲ್ಲದಷ್ಟು ಬ್ರಹ್ಮಾಂಡಗಳನ್ನು (ಅಗಣಿತ ಭುವನವನೆಲ್ಲವ) ಸೃಷ್ಟಿಸಿ, ರಕ್ಷಿಸುವ ಏಕೈಕ ಒಡೆಯನು (ಕರ್ತನು) ನೀನೇ ಆಗಿದ್ದೀಯೆ. ಸ್ವರ್ಗ, ಮರ್ತ್ಯ ಪಾತಾಳ ಎಂಬ ಮೂರು ಲೋಕ ಗಳಿಗೂ (ತ್ರಿಜಗದೊಡೆಯನು) ನೀನೇ ರಾಜ ಮತ್ತು ಈ ಸೃಷ್ಟಿಯ ಸಕಲ ಜೀವರಾಶಿಗಳಿಗೂ ನೀನೇ ಹೆತ್ತ ತಂದೆ. ಯಾರು ನಿನ್ನನ್ನು ಯಾವುದೇ ಕಪಟವಿಲ್ಲದೆ, ಅಹಂಕಾರವನ್ನು ತೊರೆದು ಅನನ್ಯವಾಗಿ ಭಜಿಸುತ್ತಾರೋ, ಅವರಿಗೆ ಮುಕ್ತಿಯನ್ನು ಪಾಲಿಸುವವನು ನೀನೇ.
ನಮ್ಮೊಳಗಿರುವ ಮತ್ತು ಸಮಾಜದಲ್ಲಿರುವ ದುಷ್ಟ ಆಲೋಚನೆಗಳನ್ನು (ಕುಜನರನು) ಸಂಹರಿಸಿ ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸು. ಕರುಣೆಯ ಸಾಗರನೇ (ಕೃಪಾಜಲಧಿ), ನಿನ್ನನ್ನೇ ನಂಬಿದ ಈ ದಾಸನನ್ನು ಸದಾ ನಿನ್ನ ಕೃಪಾ ದೃಷ್ಟಿಯಿಂದ ಸಲಹು ಬಾಡದಾದಿಕೇಶ!
ನಾವು ಕೆಲವೊಮ್ಮೆ ಭಗವಂತನನ್ನು ಒಂದು ಜಾತಿಗೋ, ಧರ್ಮಕ್ಕೋ ಅಥವಾ ದೇವಸ್ಥಾನದ ಗರ್ಭಗುಡಿಗೋ ಸೀಮಿತಗೊಳಿಸಿಬಿಡುತ್ತೇವೆ. ಆದರೆ ಭಗವಂತನು ಯಾವುದೇ ಬಾಹ್ಯ ನಿಯಮಗಳಿಗೆ ಬದ್ಧನಲ್ಲ; ಅವನು ಕೇವಲ ಪ್ರೀತಿ ಮತ್ತು ಭಕ್ತಿಗೆ ಮಾತ್ರ ಒಲಿಯುತ್ತಾನೆ.
ನಾವು ಸಮಾಜದಲ್ಲಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ, ನಮ್ಮ ಆಲೋಚನೆಗಳು ಭೇದಭಾವದಿಂದ ಕೂಡಿದ್ದರೆ ಭಗವಂತ ನಮಗೆ ಒಲಿಯಲಾರ. ಆದ್ದರಿಂದಲೇ ಸರ್ವೇ ಜನ ಸುಖಿನೋ ಭವಂತು ಎನ್ನುವ ಹಾರೈಕೆ ಎಲ್ಲರಿಗೂ ಎಲ್ಲರಿಗೂ ಒಳಿತನ್ನು ಬಯಸುವ ಮೂಲ ಮಂತ್ರ. ಮನಸ್ಸಿನಲ್ಲಿ ಕಪಟವಿಲ್ಲದೆ ಎಲ್ಲರಿಗೂ ಒಳಿತನ್ನು ಹಾರೈಸುವ ದೊಡ್ಡ ಗುಣವನ್ನು ಬೆಳೆಸಿಕೊಂಡಾಗ ನಮ್ಮೊಳ ಗಿರುವ ಭಗವಂತನ ಸಾಕ್ಷಾತ್ಕಾರ ನಮಗಾಗುತ್ತದೆ. ಹೊರಗಿನ ಕಲ್ಲಿನ ಮೂರ್ತಿಗಿಂತ ಒಳಗಿನ ಚೇತನ ಮುಖ್ಯ ಎಂಬುದೇ ಹರಿಭಕ್ತಿಸಾರದ ಈ ಭಾಗದ ಪರಮ ಸತ್ಯ.