ಸಂಗತ
ಪುಟಿನ್ ಬೀಸಿದ ಬಲೆಯಲ್ಲಿ ಟ್ರಂಪ್ ಸಿಕ್ಕಿಬಿದ್ದಿದ್ದಾರಾ? ಉಕ್ರೇನ್ ವಿಷಯದಲ್ಲಿ ಐತಿಹಾಸಿಕ ಮುಖಭಂಗ ಹಾಗೂ ಸೋಲು ಅನುಭವಿಸಿದ ಬಳಿಕ ಡೊನಾಲ್ಡ್ ಟ್ರಂಪ್ ರಷ್ಯಾವನ್ನು ‘ಪೇಪರ್ ಟೈಗರ್ ಎಂದೂ, ಭಾರತವನ್ನು ‘ಸತ್ತ ಆರ್ಥಿಕತೆ ಎಂದೂ ಕರೆದರು. ಅವೆರಡೂ ಸುಳ್ಳು ಎಂಬುದು ಜಗತ್ತಿಗೇ ಗೊತ್ತಿದೆ.
ಕಳೆದ ವರ್ಷ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಡೊನಾಲ್ಡ್ ಟ್ರಂಪ್‌ಗೆ ಸಹಾಯ ಮಾಡಿದ್ದಾರೆ ಎಂಬ ಊಹಾಪೋಹ ಗಳು ಹರಡಿದ್ದವು. ಟ್ರಂಪ್ ಗೆದ್ದ ಮೇಲೆ ರಷ್ಯಾದ ಗುಪ್ತಚರ ಏಜೆನ್ಸಿಗಳು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದಲ್ಲಿ ವ್ಯಾಪಕ ಹಸ್ತಕ್ಷೇಪ ಮಾಡಿವೆ ಎಂಬ ಆರೋಪಗಳು ಕೂಡ ಕೇಳಿ ಬಂದಿದ್ದವು.
ಆ ಆರೋಪ ಅಥವಾ ಊಹಾಪೋಹಗಳು ಎಷ್ಟು ನಿಜವೋ ಎಷ್ಟು ಸುಳ್ಳೋ ನನಗೆ ಗೊತ್ತಿಲ್ಲ. ಹಿಂದೆ ಸೋವಿಯತ್ ಒಕ್ಕೂಟ ಪತನಗೊಳ್ಳುವಲ್ಲಿ ಅಮೆರಿಕದ ಗುಪ್ತಚರ ಏಜೆನ್ಸಿ ಸಿಐಎ ಪಾತ್ರ ವಿತ್ತು ಎಂದೂ ಜನರು ಆರೋಪಿಸುತ್ತಾರೆ. ಅಂತಹ ಆರೋಪಗಳ ಸತ್ಯಾಸತ್ಯತ ಸಾಬೀತಾಗುವುದು ಕಷ್ಟ.
ಏಕೆಂದರೆ ಇದಕ್ಕೆಲ್ಲ ಸಾಕ್ಷ್ಯ ಇರುವುದಿಲ್ಲ. ಆದರೆ, ಒಂದು ಪ್ರಬಲ ದೇಶದ ಚುನಾವಣೆಯಲ್ಲಿ ಇನ್ನೊಂದು ಪ್ರಬಲ ದೇಶದ ಗುಪ್ತಚರ ಏಜೆನ್ಸಿಗಳು ರಹಸ್ಯವಾಗಿ ರಾಜಕೀಯದ ಆಟ ಆಡುವುದು ಹೊಸತೇನಲ್ಲ. ಪ್ರಸ್ತುತ ಈಗಿನ ಬೆಳವಣಿಗೆಗಳನ್ನು ಗಮನಿಸುವುದಾದರೆ, ಉಕ್ರೇನ್ ವಿಷಯದಲ್ಲಿ ಪುಟಿನ್ ಬೀಸಿದ ಬಲೆಯಲ್ಲಿ ಟ್ರಂಪ್ ಸಿಕ್ಕಿಬಿದ್ದಿದ್ದಾರಾ ಎಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.
ಇದನ್ನೂ ಓದಿ: Dr Vijay Darda Column: ತಂಪು ಮರುಭೂಮಿಯಲ್ಲಿ ಬೆಂಕಿಯ ಕಿಡಿ ಹೊತ್ತಿಸಿದವರಾರು ?
ನಾನು ಗೆದ್ದ ಒಂದೇ ವಾರದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಿಬಿಡುತ್ತೇನೆ ಎಂದು ಟ್ರಂಪ್ ಬಡಾಯಿ ಕೊಚ್ಚಿಕೊಂಡಿದ್ದು ನಿಮಗೂ ನೆನಪಿರಬಹುದು! ನಂತರ ಶ್ವೇತಭವನ ದಲ್ಲಿ ನಡೆದ ಮಾತುಕತೆಯ ವೇಳೆ ಉಕ್ರೇನ್‌ನ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿಗೆ ಟ್ರಂಪ್ ಹೇಗೆ ಬಹಿರಂಗವಾಗಿ ಅವಮಾನ ಮಾಡಿದರು ಎಂಬುದೂ ನಿಮಗೆ ನೆನಪಿರಬಹುದು.
ಅಮೆರಿಕದ ಸಹಾಯ ಇಲ್ಲದಿದ್ದರೆ ರಷ್ಯಾದ ವಿರುದ್ಧ ಉಕ್ರೇನ್ ಕೆಲವೇ ತಾಸುಗಳ ಕಾಲ ಕೂಡ ಉಳಿಯಲು ಸಾಧ್ಯವಿಲ್ಲ ಎಂದೂ ಟ್ರಂಪ್ ನೇರವಾಗಿ ಹೇಳಿ ಅವಮಾನ ಮಾಡಿದ್ದರು. ಉಕ್ರೇನ್ ಈಗಾಗಲೇ ತಾನು ಕಳೆದುಕೊಂಡಿರುವ ಭೂಭಾಗಗಳನ್ನು ಮರೆತುಬಿಡಬೇಕು ಮತ್ತು ಅಲ್ಲಿ ಅಮೆರಿಕದ ಕಂಪನಿಗಳು ಅಪರೂಪದ ಖನಿಜಗಳನ್ನು ಗಣಿಗಾರಿಕೆ ಮೂಲಕ ತೆಗೆಯಲು ಬಿಡಬೇಕು ಎಂಬುದು ಅವರ ಆಸೆಯಾಗಿತ್ತು.
ಅದಕ್ಕಾಗಿ ರಷ್ಯಾ ಜೊತೆಗೆ ಪಾಲುದಾರಿಕೆಯ ವ್ಯವಹಾರಕ್ಕೂ ಅವರು ಕೈಚಾಚಿದ್ದರು. ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿಗೆ ಬೇರೆ ಆಯ್ಕೆಯೇ ಇಲ್ಲ, ಹೀಗಾಗಿ ಕ್ರಮೇಣ ತನಗೆ ತಲೆಬಾಗುತ್ತಾರೆ ಎಂಬ ವಿಶ್ವಾಸ ಟ್ರಂಪ್‌ಗಿತ್ತು. ಹೀಗಾಗಿ ಜೆಲೆನ್‌ಸ್ಕಿ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಈ ನಡುವೆ, ರಷ್ಯಾ ಕೂಡ ಹಟ ಬಿಟ್ಟು ಸಂಧಾನಕ್ಕೆ ಬರಬಹುದು ಎಂಬ ನಿರೀಕ್ಷೆ ಕೆಲ ಕಾಲ ಹುಟ್ಟಿಕೊಂಡಿತ್ತು.

ಆದರೆ ಪುಟಿನ್ ತಲೆಯಲ್ಲಿ ಸಂಪೂರ್ಣ ಬೇರೆಯದೇ ಯೋಚನೆಗಳಿದ್ದವು. ಅವರಿಗೆ ಜಗತ್ತಿನೆದುರು ತಾನೆಷ್ಟು ಶಕ್ತಿಶಾಲಿ ಎಂಬುದನ್ನು ತೋರಿಸಬೇಕಿತ್ತು. ಆಗಸ್ಟ್ 15ರಂದು ಅಲಾಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ಭೇಟಿಯಾದರು. ಆ ಭೇಟಿಯ ಬಳಿಕ ಪುಟಿನ್ ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿ ಯಾಗಿ ಹೊರಹೊಮ್ಮಿದರು.
ತಮ್ಮ ದೇಶದ ಸೈನಿಕರು ನಡು ಬಗ್ಗಿಸಿ ಪುಟಿನ್ ಅವರ ಸ್ವಾಗತಕ್ಕೆ ಕೆಂಪು ಹಾಸನ್ನು ಹಾಸುವುದು ನೋಡಿ ಅಮೆರಿಕನ್ನರಿಗೆ ಬಹಳ ಬೇಸರವಾಗಿತ್ತು. ಎರಡೂ ದೇಶಗಳ ನಾಯಕರು ನಗುನಗುತ್ತಾ ಭೇಟಿಯಾದರು, ಆದರೆ ಅಲ್ಲಿಂದ ತೆರಳುವಾಗ ಇಬ್ಬರ ನಡುವೆ ತಣ್ಣಗಿನ ಮುನಿಸು ಮನೆ ಮಾಡಿತ್ತು. ಸಭೆಯ ಬಳಿಕ ಪತ್ರಕರ್ತರು ಕೇಳುವ ಐದು ಪ್ರಶ್ನೆಗಳಿಗೆ ಅವರು ಉತ್ತರಿಸುವುದು ನಿಗದಿಯಾಗಿತ್ತು. ಆದರೆ ಪತ್ರಿಕಾಗೋಷ್ಠಿಯೇ ನಡೆಯಲಿಲ್ಲ.
ಅವರಿಬ್ಬರೂ ಒಟ್ಟಿಗೇ ಊಟ ಕೂಡ ಮಾಡಲಿಲ್ಲ. ತಾನು ಸಭೆಗೆ ತೆಗೆದುಕೊಂಡು ಬಂದಿದ್ದ ಕರಡು ಒಪ್ಪಂದಕ್ಕೆ ಪುಟಿನ್ ಸಹಿ ಹಾಕುತ್ತಾರೆಂಬ ವಿಶ್ವಾಸದಲ್ಲಿ ಟ್ರಂಪ್ ಇದ್ದರು. ಸಹಿ ಹಾಕಿದ್ದರೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಳ್ಳುವ ಹಾದಿ ಸುಗಮವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಪುಟಿನ್ ಮಹಾನ್ ತಂತ್ರಗಾರ.
ಟ್ರಂಪ್ ದೊಡ್ಡ ಉದ್ಯಮಿಯಿರಬಹುದು. ತಾನೊಬ್ಬ ಅದ್ಭುತ ನಾಯಕ ಎಂಬ ಭ್ರಮೆಯೂ ಅವರಿಗೆ ಇರಬಹುದು. ಆದರೆ ಪುಟಿನ್ ಗುಪ್ತಚರ ಜಾಲದ ಬಲದಿಂದ ಆಡಳಿತ ನಡೆಸುವ ಚಾಣಾಕ್ಷ ಹಾಗೂ ನುರಿತ ಆಡಳಿತಗಾರ. ಸದ್ಯಕ್ಕೆ ಜಗತ್ತಿನಲ್ಲಿ ಅವರಿಗಿಂತ ಬುದ್ಧಿವಂತ ತಂತ್ರಗಾರ ಯಾರಾ ದರೂ ಇದ್ದಾರಾ? ಅಲಾಸ್ಕಾ ಸಭೆಯ ಬಳಿಕ ನಾನು ಪುಟಿನ್‌ರ ದೂರದೃಷ್ಟಿಯ ಯೋಜನೆಯ ಬಗ್ಗೆ ಬರೆದಿದ್ದೆ. ಸಭೆಗೆ ಬರುವಾಗ ಪುಟಿನ್‌ರ ಜೊತೆಗಿದ್ದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ‘ಸಿಸಿಸಿಪಿ’ ಎಂದು ಬರೆದಿದ್ದ ಟಿ-ಶರ್ಟ್ ಧರಿಸಿದ್ದರು.
ಅದು ಹಿಂದಿನ ಸೋವಿಯತ್ ಯೂನಿಯನ್‌ಗೆ (ಯುಎಸ್‌ಎಸ್ ಆರ್) ರಷ್ಯನ್ ಭಾಷೆಯಲ್ಲಿರುವ ಹೆಸರಿನ ಸಂಕ್ಷಿಪ್ತ ರೂಪ. ಟ್ರಂಪ್‌ಗೆ ಸಂದೇಶ ನೀಡಲೆಂದೇ ಅವರು ಆ ಟಿ-ಶರ್ಟ್ ಧರಿಸಿದ್ದರು. ‘ಹಿಂದೊಮ್ಮೆ ಸೋವಿಯತ್ ಯೂನಿಯನ್ ನಲ್ಲಿದ್ದ ಎಲ್ಲಾ ದೇಶಗಳನ್ನೂ ನಾವು ಮತ್ತೆ ಒಂದು ಗೂಡಿಸಲು ಹೊರಟಿದ್ದೇವೆ ಎಂಬುದರ ಸುಳಿವು ಅದರಲ್ಲಿತ್ತು. ಆದ್ದರಿಂದಲೇ ಪುಟಿನ್ ಯಾವುದೇ ರಾಜಿ ಸೂತ್ರಕ್ಕೆ, ಅದರಲ್ಲೂ ಟ್ರಂಪ್ ಭಾಗಿಯಾಗಿರುವ ಯಾವುದೇ ಒಪ್ಪಂದಕ್ಕೆ ಮಣಿಯಲು ತಯಾರಿಲ್ಲ. ಪುಟಿನ್ ತನ್ನ ಸ್ನೇಹಿತ ಎಂದು ಟ್ರಂಪ್ ಭಾವಿಸಿದ್ದಾರೆ. ಆದರೆ ರಾಜಕಾರಣದ ಮೂಲ ಭೂತ ತತ್ವವನ್ನೇ ಅವರು ಮರೆತಿದ್ದಾರೆ. ರಾಜಕಾರಣದಲ್ಲಿ ಶಾಶ್ವತ ಶತ್ರು ಅಥವಾ ಶಾಶ್ವತ ಮಿತ್ರ ಯಾರೂ ಇರುವುದಿಲ್ಲ.
ಅಲ್ಲಿ ಕೇವಲ ಹಿತಾಸಕ್ತಿಗಳಿರುತ್ತವೆ. ಟ್ರಂಪ್ ಯಾವಾಗಲೂ ತಾನು ಭಾರತದ ಪ್ರಧಾನಿ ನರೇಂದ್ರ ಮೋದಿಯ ಖಾಸಾ ಸ್ನೇಹಿತ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಈಗೇಕೆ ವಿರೋಧಿಯಂತೆ ವರ್ತಿಸುತ್ತಿದ್ದಾರೆ? ಏಕೆ ಭಾರತದ ಮೇಲೆ ಒಂದಾದ ಮೇಲೊಂದು ತೆರಿಗೆ ವಿಧಿಸುತ್ತಿದ್ದಾರೆ? ಭಾರತವನ್ನು ಸತ್ತ ಆರ್ಥಿಕತೆ ಎಂದು ಕರೆಯಲು ಅವರು ಸ್ವಲ್ಪವೂ ಹಿಂದೆ ಮುಂದೆ ನೋಡಲಿಲ್ಲ. ರಷ್ಯಾಕ್ಕೆ ಬೆಣ್ಣೆ ಸವರಿ ಲಾಭ ಮಾಡಿಕೊಳ್ಳಲು ತಾನು ಮಾಡಿದ ತಂತ್ರ ವಿಫಲವಾದಾಗ ಟ್ರಂಪ್ ಮರುಕ್ಷಣವೇ ‘ರಷ್ಯಾ ಬರೀ ಪೇಪರ್ ಟೈಗರ್ ಎಂದು ಮೂದಲಿಸಿದರು. ಆದರೆ ರಷ್ಯಾ ಪೇಪರ್ ಟೈಗರ್ ಅಲ್ಲ ಎಂಬುದು ಇಡೀ ಜಗತ್ತಿಗೇ ಗೊತ್ತು!
ಟ್ರಂಪ್ ಹೇಳಿದಾಕ್ಷಣ ಯಾರೂ ಅದನ್ನು ಒಪ್ಪುವುದಿಲ್ಲ. ಇತಿಹಾಸದುದ್ದಕ್ಕೂ ರಷ್ಯಾ ಯಾರಿಗೂ ತಲೆಬಾಗಿಲ್ಲ. ಅದೊಂದು ದೈತ್ಯ ಶಕ್ತಿ. ಟ್ರಂಪ್ ಹೇಳಿದಂತೆ ಅದು ಪೇಪರ್ ಟೈಗರ್ ಆಗಿದ್ದರೆ ನ್ಯಾಟೋ ದೇಶಗಳೆಲ್ಲ ಒಂದಾಗಿ ಉಕ್ರೇನ್‌ನ ಬೆನ್ನಿಗೆ ನಿಂತಿದ್ದರೂ ಆ ದೇಶದ ಕಾಲು ಭಾಗದಷ್ಟು ಭೂಮಿಯನ್ನು ಪುಟಿನ್ ವಶಪಡಿಸಿಕೊಂಡಿರುವುದು ಹೇಗೆ? ಇಷ್ಟಕ್ಕೂ ಈ ವರ್ಷ ಫೆಬ್ರವರಿ 12ರಂದು ಬ್ರಸೆಲ್ಸ್‌ನಲ್ಲಿ ನಡೆದ ರಕ್ಷಣಾ ಶೃಂಗದಲ್ಲಿ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಏನು ಹೇಳಿದರು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕು.
‘ಉಕ್ರೇನ್ ಮತ್ತೆ ಮೊದಲಿನಂತಾಗಬೇಕು. ಅದು ಸಾರ್ವಭೌಮ ಸ್ವತಂತ್ರ ದೇಶವಾಗಿ, ಸಮೃದ್ಧವಾಗಿ ಬೆಳೆಯಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ, ಅದು 2014ಕ್ಕಿಂತ ಮೊದಲು ಹೊಂದಿದ್ದ ಗಡಿಗಳನ್ನು ಮತ್ತೆ ಹೊಂದಬೇಕು ಎಂದು ಬಯಸುವುದು ವಾಸ್ತವವಾದಿ ನಿರೀಕ್ಷೆ ಅಲ್ಲ. ಆ ಗುರಿಯ ಸಾಧನೆಗೆ ಹೊರಟರೆ ಯುದ್ಧ ಇನ್ನಷ್ಟು ದೀರ್ಘವಾಗುತ್ತದೆ. ಅದರಿಂದ ಇನ್ನಷ್ಟು ಹಾನಿಯಾಗುತ್ತದೆ ಎಂದು ಅವರು ಹೇಳಿದ್ದರು.
ತಮ್ಮ ದೇಶದ ರಕ್ಷಣಾ ಮಂತ್ರಿಯ ಮಾತನ್ನೇ ಟ್ರಂಪ್ ಕೇಳಿಸಿಕೊಂಡಿಲ್ಲವೆ? ಖಂಡಿತ ಕೇಳಿಸಿ ಕೊಂಡಿರುತ್ತಾರೆ. ಆದರೆ ಟ್ರಂಪ್‌ಗೆ ತನ್ನ ನಿಲುವು ಬದಲಿಸಲು ಎಷ್ಟು ಹೊತ್ತೂ ಬೇಡ. ಕ್ಷಣಕ್ಕೊಂದು ಮುಖವಾಡ ಧರಿಸಿಕೊಂಡು ಬರುವ ಕಲೆ ಅವರಿಗೆ ಸಿದ್ಧಿಸಿದೆ. ಅವರು ಈಗೊಂದು ಹೇಳಿದರೆ, ಇನ್ನೊಂದು ತಾಸಿನಲ್ಲೇ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಬಲ್ಲರು. ಅವರು ರಷ್ಯಾವನ್ನು ಪೇಪರ್ ಟೈಗರ್ ಎಂದು ಕರೆದ ಕೂಡಲೇ ಪುಟಿನ್ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಟ್ರಂಪ್‌ಗೊಂದು ಮರುಪ್ರಶ್ನೆ ಎಸೆದಿದ್ದರು: ‘ರಷ್ಯಾ ಪೇಪರ್ ಟೈಗರ್ ಆಗಿದ್ದರೆ ನ್ಯಾಟೋ ಏನು?’ ಈ ಪ್ರಶ್ನೆಯು ಅಮೆರಿಕ ಮತ್ತು ಯುರೋಪ್‌ನ ಮರ್ಮಕ್ಕೇ ತಾಗುವಂತಿತ್ತು.
ಪುಟಿನ್ ಚೆನ್ನಾಗಿ ಕುಟುಕಿದ್ದರು. ನ್ಯಾಟೋ ಮತ್ತು ಅಮೆರಿಕದವರು ಉಕ್ರೇನ್‌ಗೆ ಅಷ್ಟೊಂದು ಸಹಾಯ ಮಾಡುತ್ತಿದ್ದರೂ ಯುದ್ಧದಲ್ಲಿ ಉಕ್ರೇನ್ ಸೋಲುತ್ತಿರುವುದು ಏಕೆ ಎಂಬುದು ಅವರ ಪ್ರಶ್ನೆಯಾಗಿತ್ತು. ಅದೇ ವೇಳೆ, ಅವರು ಯುರೋಪ್‌ಗೂ ಕಠಿಣ ಎಚ್ಚರಿಕೆ ನೀಡಿದ್ದರು. ಯುದ್ಧದ ಪರಿಸ್ಥಿತಿಗೆ ತುಪ್ಪ ಸುರಿಯಲು ಯುರೋಪ್ ಮುಂದಾದರೆ ರಷ್ಯಾ ಗಂಭೀರವಾದ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಅವರು ನೇರವಾಗಿಯೇ ಹೇಳಿದ್ದರು.
ನಂತರ ಅವರು ವಾಷಿಂಗ್ಟನ್‌ನ ಆಷಾಢಭೂತಿತನವನ್ನೂ ಬಯಲು ಮಾಡಿದ್ದರು. ಅಮೆರಿಕವೇ ರಷ್ಯಾದಿಂದ ಸಂಸ್ಕರಿತ ಯುರೇನಿಯಂ ಖರೀದಿಸುತ್ತದೆ, ಆದರೆ ಭಾರತ ಮತ್ತು ಇತರ ದೇಶಗಳು ರಷ್ಯಾದಿಂದ ಇಂಧನ ಖರೀದಿ ಮಾಡಬಾರದು ಎಂದು ತಾಕೀತು ಮಾಡುತ್ತದೆ; ಇದು ಯಾವ ನ್ಯಾಯ ಎಂದು ಪುಟಿನ್ ಪ್ರಶ್ನಿಸಿದ್ದರು.
ಇದನ್ನೆಲ್ಲಾ ನೋಡಿದರೆ ಟ್ರಂಪ್ ಮತ್ತು ಪುಟಿನ್ ನಡುವಿನ ವೈಮನಸ್ಯ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆ. ರಷ್ಯಾದ ವಶದಲ್ಲಿರುವ ಉಕ್ರೇನ್‌ನ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಿ ಅಮೂಲ್ಯ ಖನಿಜಗಳನ್ನು ತೆಗೆದು ಹಣ ಗಳಿಸುವ ಟ್ರಂಪ್‌ರ ಕನಸನ್ನು ಪುಟಿನ್ ಛಿದ್ರಗೊಳಿಸಿದ್ದಾರೆ.
ಅದಕ್ಕಿಂತಲೂ ನೋವಿನ ಸಂಗತಿಯೇನೆಂದರೆ, ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸುವ ಟ್ರಂಪ್‌ರ ಮಹದಾಸೆಗೆ ಪುಟಿನ್ ತಣ್ಣೀರು ಎರಚಿದ್ದಾರೆ. ಟ್ರಂಪ್ ಏನನ್ನು ಬೇಕಾದರೂ ಸಹಿಸಿಕೊಳ್ಳಬಲ್ಲರು, ಆದರೆ ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪುವುದನ್ನು ಮಾತ್ರ ಸಹಿಸಿಕೊಳ್ಳಲಾರರು! ಅದೇಕೋ ಆ ಪ್ರಶಸ್ತಿಯ ಮೇಲೆ ಅವರಿಗೆ ವಿಪರೀತ ಎನ್ನುವಷ್ಟು ವ್ಯಾಮೋಹ ಬಂದುಬಿಟ್ಟಿದೆ. ನನ್ನ ಸಲಹೆ ಇಷ್ಟೆ. ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಬೇಕೇ ಬೇಕು ಅಂತಾದರೆ ದಯವಿಟ್ಟು ಕೊಡಿ. ಆಗಲಾದರೂ ಜಗತ್ತಿನಲ್ಲಿ ಒಂದಷ್ಟು ಶಾಂತಿ ಸ್ಥಾಪನೆಯಾಗಬಹುದು!
(ಲೇಖಕರು ಹಿರಿಯ ಪತ್ರಿಕೋದ್ಯಮಿ)