ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Thimmanna Bhagwat Column: ದ್ವೇಷ ಭಾಷಣ ವಿಧೇಯಕ: ದ್ವೇಷ ಸಾಧನೆಯ ಸಾಧನವಾಗಬಾರದು

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, “ಸರಕಾರದ ವೈಫಲ್ಯಗಳನ್ನು ಟೀಕಿಸು ವವರನ್ನು ಹತ್ತಿಕ್ಕಲು ಈ ಕಾಯಿದೆ ಯನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಕಾಯಿದೆ ಪಾಸ್ ಆದರೆ ರಾಜ್ಯದ ಜೈಲುಗಳು ವಿರೋಧ ಪಕ್ಷದ ನಾಯಕರಿಂದ ಮತ್ತು ಪತ್ರಕರ್ತರಿಂದ ತುಂಬಿ ತುಳುಕ ಬಹುದು" ಎಂದು ಟೀಕಿಸಿದ್ದಾರೆ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

ʼಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ನಿಯಂತ್ರಣ) ವಿಧೇಯಕ 2025 (The Karna taka Hate Speech and Hate Crime (Prevention) Bill) ಹೆಚ್ಚಿನ ಚರ್ಚೆಯಿಲ್ಲದೆ, ವಿರೋಧ ಪಕ್ಷಗಳ ವಿರೋಧದ ನಡುವೆ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಅಂಗೀಕಾರವಾಯಿತು.

ಇನ್ನು ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುವುದು. ಜಾತಿ, ಮತ, ಲಿಂಗ, ಜನ್ಮಸ್ಥಳ, ಭಾಷೆ ಅಥವಾ ಪಂಗಡಗಳ ಆಧಾರದಲ್ಲಿ ಯಾವುದೇ ಜೀವಂತ ಅಥವಾ ಮೃತ ವ್ಯಕ್ತಿ, ಸಂಸ್ಥೆ, ಪಂಗಡ ಅಥವಾ ಸಮುದಾಯಗಳಿಗೆ ಘಾಸಿ ಮಾಡುವ, ದ್ವೇಷ, ವೈರತ್ವ, ಅಸಾಮರಸ್ಯ ಉಂಟುಮಾಡುವ ಉದ್ದೇಶದಿಂದ ಯಾವುದೇ ಬರವಣಿಗೆ, ವಿದ್ಯುನ್ಮಾನ ಮಾಧ್ಯಮವೂ ಸೇರಿದಂತೆ ಮಾಧ್ಯಮಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿರುವ ಪ್ರಸರಣವನ್ನು ತಡೆಯುವುದು ಈ ಉದ್ದೇಶಿತ ಕಾಯಿದೆಯ ಆಶಯವಾಗಿದೆ.

ಈ ಕಾಯಿದೆಯು ಮೂಲಭೂತ ಹಕ್ಕುಗಳಲ್ಲಿ ಮುಖ್ಯವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಸಾಧನವಾಗುತ್ತದೆ ಮತ್ತು ಇದು ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುತ್ತದೆ ಎಂಬುದು ವಿರೋಧ ಪಕ್ಷವಾದ ಬಿಜೆಪಿಯ ಸದಸ್ಯರ ವಾದ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, “ಸರಕಾರದ ವೈಫಲ್ಯಗಳನ್ನು ಟೀಕಿಸುವವರನ್ನು ಹತ್ತಿಕ್ಕಲು ಈ ಕಾಯಿದೆ ಯನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಕಾಯಿದೆ ಪಾಸ್ ಆದರೆ ರಾಜ್ಯದ ಜೈಲುಗಳು ವಿರೋಧ ಪಕ್ಷದ ನಾಯಕರಿಂದ ಮತ್ತು ಪತ್ರಕರ್ತರಿಂದ ತುಂಬಿ ತುಳುಕ ಬಹುದು" ಎಂದು ಟೀಕಿಸಿದ್ದಾರೆ. ಹಾಗೆ ನೋಡಿದರೆ, ಈ ಕಾಯಿದೆ ಯನ್ವಯ ಅಪರಾಧವೆಂದು ಪರಿಗಣಿಸಲಾಗುವ ದ್ವೇಷ ಭಾಷಣ ಮತ್ತು ದ್ವೇಷಕ್ಕೆ ಸಂಬಂಧಿಸಿದ ಕಲಮುಗಳು ಹೊಸತಲ್ಲ.

ಭಾರತೀಯ ನ್ಯಾಯ ಸಂಹಿತೆಯ 196/1, 196/2, 299, 302 (IPC 153/A, 153/B, 295A, 298) ಮುಂತಾದ ಕಲಮುಗಳಲ್ಲಿ ಕೂಡಾ ಇಂಥ ಅಂಶಗಳು ಇವೆ. ಆದರೆ ಪ್ರಸಕ್ತ ಮಸೂದೆಯಲ್ಲ್ಲಿ ಅವುಗಳ ಅರ್ಥವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು ದಂಡ ಮತ್ತು ಶಿಕ್ಷೆಯ ಪ್ರಮಾಣಗಳನ್ನು ಕೂಡಾ ಗಣನೀಯವಾಗಿ ಹೆಚ್ಚಿಸಲಾಗಿದೆ. ಕೆಲವು ಕಡೆ ‘ಜಾಮೀನು ನೀಡಬಹುದಾದ’ ಎಂದಿದ್ದುದನ್ನು ‘ಜಾಮೀನು ರಹಿತ’ ಎಂದೂ, ಕಾಗ್ನಿಜೇಬಲ್ ಅಲ್ಲದ್ದನ್ನು ‘ಕಾಗ್ನಿಜೇಬಲ್’ ಎಂದೂ ಪರಿವರ್ತಿಸ ಲಾಗಿದೆ.

ಇದನ್ನೂ ಓದಿ: Thimmanna Bhagwat Column: ಹೊಸ ಸಂಹಿತೆಗಳು: ಅತಿ ನಿಯಂತ್ರಣ ತಪ್ಪಿಸುವ ಯತ್ನವೇ ?

ಉದಾಹರಣೆಗೆ BNS 196(1) ರಲ್ಲಿ 3 ವರ್ಷ ಜೈಲು ಮತ್ತು 196(2)ರಲ್ಲಿ 5 ವರ್ಷ ಜೈಲು ಶಿಕ್ಷೆಯ ಬದಲು 7 ವರ್ಷ ಎಂದು ಹೇಳಲಾಗಿದೆ. 302ರಲ್ಲಿ ನಾನ್-ಕಾಗ್ನಿಜೇಬಲ್ ಮತ್ತು ಜಾಮೀನು ಪಡೆಯ ಬಹುದಾದ ಅಪರಾಧವೆಂದು ಇದ್ದದ್ದನ್ನು ಕಾಗ್ನಿಜೇಬಲ್ ಮತ್ತು ಜಾಮೀನು ರಹಿತವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ಎಲ್ಲ ಅಪರಾಧಗಳು ಕೇವಲ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ರಿಂದ ವಿಚಾರಣೆ ಆಗಬೇಕೆಂದು ನಿಗದಿಪಡಿಸಲಾಗಿದೆ.

1 ಲಕ್ಷ ರುಪಾಯಿವರೆಗೂ ದಂಡ ವಿಧಿಸುವ ಅವಕಾಶವಿದೆ. 302ರ ಅಪರಾಧ ಅಂದರೆ ದ್ವೇಷ ಭಾಷಣವನ್ನು ಕಾಗ್ನಿಜೇಬಲ್ ಮತ್ತು ಜಾಮೀನು ರಹಿತ ಮಾಡಿರುವುದರಿಂದ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ ಮತ್ತು ಆಪಾದಿತರು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ ಮುಂದೆ ಹಾಜರಾಗ ಬೇಕಾಗುತ್ತದೆ.

ಅಂಥ ಮ್ಯಾಜಿಸ್ಟ್ರೇಟರು ತಾಲೂಕು ಕೇಂದ್ರದಿಂದ ಬೇರೆ ಕಡೆ ಇದ್ದರೆ, ಆಪಾದಿತರ ವಿಚಾರಣಾಽನ ಜೈಲುವಾಸಸ್ಥಳ ಕೂಡಾ ಅಂಥ ಪ್ರದೇಶಗಳಿಗೆ ಬದಲಾಗುವ ಸಾಧ್ಯತೆ ಇರುತ್ತದೆ. ಈ ಅಪರಾಧ ಗಳನ್ನು ವ್ಯಕ್ತಿಗಳಿಗಲ್ಲದೆ ಸಂಸ್ಥೆಗಳಿಗೂ ಅನ್ವಯಿಸಲಾಗಿದೆ ಮತ್ತು ಯಾವುದೇ ಸಂಸ್ಥೆ ಆಯೋಜಿ ಸುವ ರ‍್ಯಾಲಿ ಅಥವಾ ಕಾರ್ಯಕ್ರಮಗಳಲ್ಲಿ ಅಂಥ ಅಪರಾಧ ಪ್ರಕರಣ ನಡೆದರೆ ಅಂಥ ಸಂಸ್ಥೆಯ ನಾಯಕರುಗಳಿಗೆ ಕೂಡಾ ಶಿಕ್ಷೆಯಾಗುತ್ತದೆ.

ಅಂಥ ಸಂಸ್ಥೆ ನೋಂದಾಯಿತವಲ್ಲದಿದ್ದರೂ ಈ ಕಲಮುಗಳು ಅನ್ವಯವಾಗುತ್ತವೆ. ಈ ಕಾಯಿದೆ ಯು ಪತ್ರಿಕಾ ಸ್ವಾತಂತ್ರ್ಯದ ಹರಣಕ್ಕೂ ದುರುಪಯೋಗವಾಗಬಹುದೆಂಬ ಅಂಜಿಕೆ ವ್ಯಕ್ತವಾಗಿದೆ.

ಯಾವುದೇ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗಳಿಂದ ಅಂಥ ದ್ವೇಷ ಭಾಷಣ ಅಥವಾ ದ್ವೇಷಪೂರಿತ ಕ್ರಿಯೆಯನ್ನೊಳಗೊಂಡ ಅಪರಾಧಗಳು ನಡೆಯುವ ಕುರಿತು ಮಾಹಿತಿ ಬಂದಲ್ಲಿ ಅಂಥ ಭಾಷಣ ಅಥವಾ ಕ್ರಿಯೆ/ರ‍್ಯಾಲಿ ನಡೆಯದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.

ಚುನಾವಣಾ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳಿಗೆ ಭಾರತೀಯ ನಾಗರಿಕ ಸಂಹಿತೆಯ 2ನೇ ಅಧ್ಯಾಯದಲ್ಲಿ ನೀಡಲಾದ ವಿಶೇಷ ಅಧಿಕಾರಗಳು ಈ ದ್ವೇಷ ಭಾಷಣದ ವಿಷಯದಲ್ಲಿ ಯಾವಾ ಗಲೂ ಅನ್ವಯವಾಗುತ್ತವೆ. ಇದರ ಅರ್ಥವೆಂದರೆ ಯಾವುದೇ ಭಾಷಣ ಅಥವಾ ಕಾರ್ಯಕ್ರಮ, ದ್ವೇಷಕ್ಕೆ ಕಾರಣವಾಗಬಹುದೆಂದು ಅಧಿಕಾರಿಗಳಿಗೆ ಅನಿಸಿದರೆ ಅಂಥ ಕಾರ್ಯಕ್ರಮಗಳನ್ನು ನಡೆಸದಂತೆ ಪ್ರತಿಬಂಧಿಸುವ ಅಧಿಕಾರ ಈ ಕಾಯಿದೆಯ ಅಡಿ ಸರಕಾರಕ್ಕೆ ಇರುತ್ತದೆ.

ಈ ಕಲಮು ಅಧಿಕಾರಿಗಳಿಗೆ ನಿರಂಕುಶ ಅಧಿಕಾರವನ್ನು ನೀಡುತ್ತದೆ ಎಂಬ ಭಾವನೆಯಿದೆ. ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಷ್ಟವಲ್ಲದ ವ್ಯಕ್ತಿ ಅಥವಾ ನಿರ್ದಿಷ್ಟ ಸಂಘಟನೆಯ ಕುರಿತು ಪೂರ್ವಗ್ರಹವಿದ್ದರೆ ಅಂಥ ವ್ಯಕ್ತಿ ಅಥವಾ ಸಂಸ್ಥೆಗಳ ಯಾವುದೇ ಕಾರ್ಯಕ್ರಮವನ್ನು ಈ ಕಲಮಿನಡಿ ಪ್ರತಿಬಂಧಿಸುವ ಸಾಧ್ಯತೆ ಇರುತ್ತದೆ.

ರಾಜ್ಯದಲ್ಲಿ ಈಗಾಗಲೇ ಕೆಲವು ಸಂಘಟನೆಗಳ (ಉದಾಹರಣೆಗೆ ಅರೆಸ್ಸೆಸ್), ವ್ಯಕ್ತಿಗಳ ಭಾಷಣ ಗಳನ್ನು, ಸಭೆಗಳನ್ನು ಪ್ರತಿಬಂಧಿಸುವ ಪ್ರಯತ್ನಗಳು ನಡೆದಿವೆ. ಆದರೆ ನ್ಯಾಯಾಲಯ ಅಂಥ ಕೆಲವು ಪ್ರತಿಬಂಧಗಳನ್ನು ತೆರವುಗೊಳಿಸಿದೆ. ಈ ವಿಧೇಯಕವು ಕಾಯಿದೆಯಾದರೆ ನ್ಯಾಯಾಲಯದ ಮಧ್ಯಪ್ರವೇಶ ಕಷ್ಟಸಾಧ್ಯವಾಗಬಹುದು.

ದ್ವೇಷ ಭಾಷಣ ಕಾಯಿದೆಯನ್ನು ಟೀಕಿಸಲು ಇನ್ನೊಂದು ಕಾರಣವೆಂದರೆ ಈ ಕಾಯಿದೆಯಲ್ಲಿ ‘ದ್ವೇಷ ಭಾಷಣ’ದ ವ್ಯಾಖ್ಯೆ ತೀರಾ ಅಸ್ಪಷ್ಟವಾಗಿರುವುದು. ಈ ಕಾಯಿದೆಯ 2(1)(ಐ) ಕಲಮಿನ ಪ್ರಕಾರ ಯಾವುದೇ ಜೀವಂತ ಅಥವಾ ಮೃತ ವ್ಯಕ್ತಿಗಳು, ವ್ಯಕ್ತಿಗಳ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ವೈರತ್ವ, ದ್ವೇಷ ಅಥವಾ ದುರ್ಭಾವನೆ ಎಸಗುವ ಉದ್ದೇಶ ದಿಂದ ಮಾತು, ಬರವಣಿಗೆ, ಸಂಜ್ಞೆಗಳು, ಇತರ ದೃಶ್ಯ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಮಾಡಲಾದ, ಪ್ರಕಟಿಸಿದ ಅಥವಾ ಪ್ರಚುರಪಡಿಸಿದ ಯಾವುದೇ ಅಭಿವ್ಯಕ್ತಿಯು ‘ದ್ವೇಷ ಭಾಷಣ’ ಎಂದೆನಿಸುತ್ತದೆ.

ಅಂಥ ಭಾಷಣವನ್ನು ಮಾಡುವುದರ ಹಿಂದೆ ಪೂರ್ವಗ್ರಹದ ಭಾವನೆ ಇರಬೇಕು. ಈ ವ್ಯಾಖ್ಯೆಯ ವ್ಯಾಪ್ತಿ ತುಂಬಾ ವಿಸ್ತಾರವಾಗಿದ್ದು ಅಂಥ ವಿವೇಚನಾಧಿಕಾರವನ್ನು ಚಲಾಯಿಸುವಾಗ ಅಧಿಕಾರಿ ಗಳು/ ಪೊಲೀಸರು, ನಿಷ್ಪಕ್ಷಪಾತವಾಗಿ ಹಾಗೂ ಜಾಗರೂಕತೆಯಿಂದ ವ್ಯವಹರಿಸುವುದು ಅಗತ್ಯ. ಇಲ್ಲವಾದಲ್ಲಿ ಈ ಕಾಯಿದೆಯ ಕಲಮುಗಳನ್ನು ರಾಜಕೀಯ ದುರುದ್ದೇಶಕ್ಕೆ ಅಥವಾ ಯಾವುದೇ ವ್ಯಕ್ತಿ, ಗುಂಪು ಅಥವಾ ಸಮುದಾಯದ ವಿರುದ್ಧದ ದ್ವೇಷ ತೀರಿಸಿಕೊಳ್ಳಲು ದುರ್ಬಳಕೆ ಮಾಡಿ ಕೊಳ್ಳುವ ಸಾಧ್ಯತೆ ಇರುತ್ತದೆ.

ಯಾವುದೇ ವಿಷಯದ ಕುರಿತು ಸಹಜವಾಗಿ ಅಡಲಾದ ಮಾತುಗಳನ್ನೂ ದ್ವೇಷ ಭಾಷಣದ ವ್ಯಾಪ್ತಿ ಯಲ್ಲಿ ತರಲು ಸಾಧ್ಯ. ಉದಾಹರಣೆಗೆ ವಿಷ್ಣು ಭಕ್ತರು ಸಹಜವಾಗಿ ‘ಹರಿ ಸರ್ವೋತ್ತಮ’ ಎಂದರೆ ಅದು ಇತರ ದೇವರುಗಳ ಭಕ್ತರ ಭಾವನೆಗಳಿಗೆ ಘಾಸಿಯಾಯಿತು ಎನ್ನಬಹುದು.

ಮಸೀದಿಗಳಲ್ಲಿ ‘ಅಲ್ಲಾಹುವೇ ಏಕಮಾತ್ರ ದೇವರು’ ಎಂದು ಆಝಾನ್ ಪ್ರಾರ್ಥನೆ ಮಾಡುವ ಮೌಲ್ವಿ, ‘ದ್ವೇಷ ಭಾಷಣ ಮಾಡಿದರು’ ಎಂದು ಹೇಳುವುದು ತಪ್ಪಾಗುತ್ತದೆ. ಅದು ಅವರವರ ಧಾರ್ಮಿಕ ನಂಬಿಕೆ. ಅಂತೆಯೇ ‘ಕನ್ನಡವೇ ಶ್ರೇಷ್ಠ ಭಾಷೆ’ ಎಂದು ನಾವು ಹೇಳಿದರೆ ಇತರ ಭಾಷಿಕರ ಭಾವನೆಗಳಿಗೆ ಧಕ್ಕೆಯಾಗಬಹುದು.

ಅಂದ ಮಾತ್ರಕ್ಕೆ ಹಾಗೆಂದವರ ಮೇಲೆ ಕೇಸು ಜಡಿಯುತ್ತ ಹೋದರೆ ರಾಜ್ಯದಲ್ಲಿರುವ ಎಲ್ಲಾ ಜೈಲುಗಳು ತುಂಬಿ ತುಳುಕಬಹುದು. ಇಂಥ ಪ್ರಕರಣಗಳು ಕಾಗ್ನಿಜೇಬಲ್ ಮತ್ತು ಜಾಮೀನು ರಹಿತವಾಗುವುದರಿಂದ ಹಾಗೆ ಕೇಸ್ ಹಾಕಿದರೆ ಬಂಧನ ನಿಶ್ಚಿತವಾಗಿರುತ್ತದೆ. ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಗಳು ಮೂಲಭೂತ ಹಕ್ಕುಗಳ ಅಡಿಪಾಯವೆನಿಸುತ್ತವೆ.

ಸಂವಿಧಾನದ 19(1)(ಎ)ನೇ ವಿಧಿ ಅಡಿಯಿರುವ ವಾಕ್ ಸ್ವಾತಂತ್ರ್ಯಕ್ಕೆ ಸಾಮಾಜಿಕ ಶಾಂತಿ, ಸಾಮ ರಸ್ಯ, ದೇಶದ ಸಮಗ್ರತೆ ಮುಂತಾದ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಸಮಂಜಸ ನಿರ್ಬಂಧ ಗಳನ್ನು ವಿಧಿಸಬಹುದು ಎಂದು 19(2)ನೇ ವಿಧಿ ಹೇಳುತ್ತದೆ. ಮೂಲಭೂತ ಹಕ್ಕುಗಳ ಕುರಿತಾಗಿ ಸರಕಾರ ವಿಧಿಸುವ ನಿರ್ಬಂಧಗಳು ಸಂವಿಧಾನದ ಮೂಲರಚನೆಗೆ ವ್ಯತಿರಿಕ್ತವಾಗಿರ ಬಾರದು ಎಂಬ ತತ್ವವನ್ನು ಶ್ರೀ ಕೇಶವಾನಂದ ಭಾರತೀ, ಮನೇಕಾ ಗಾಂಧಿ ಪ್ರಕರಣದಂಥ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ.

ವಾಕ್ ಸ್ವಾತಂತ್ರ್ಯದ ಕುರಿತಾದ ಇತ್ತೀಚಿನ ಪ್ರಕರಣವೆಂದರೆ ‘ಶ್ರೇಯಾ ಸಿಂಘಲ್ ವರ್ಸಸ್ ಭಾರತ ಸರಕಾರ’. ಮಾಹಿತಿ ತಂತ್ರಜ್ಞಾನ ಕಾಯಿದೆಯ 66-ಎ ಕಲಮಿನ ಪ್ರಕಾರ ತೀವ್ರ ಅವಮಾನಕರ, ಅಸಹ್ಯ, ಕಿರಿಕಿರಿಯುಂಟು ಮಾಡುವ ಅಥವಾ ಬೆದರಿಕೆಯೊಡ್ಡುವ ಸಂದೇಶಗಳನ್ನು ಅಥವಾ ತಪ್ಪು ಮಾಹಿತಿಗಳನ್ನು ಕಂಪ್ಯೂಟರ್ ಅಥವಾ ಇತರ ವಿದ್ಯುನ್ಮಾನ ಮಾಧ್ಯಮದ ಮೂಲಕ ಕಳುಹಿಸುವು ದನ್ನು ಅಪರಾಧವೆಂದು ಪರಿಗಣಿಸಲಾಗುತ್ತಿತ್ತು.

ಈ ಕಲಮನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟು ಇದರಲ್ಲಿ ಉಪಯೋಗಿಸಿದ ‘ತೀವ್ರ ಆಕ್ರಮಣ ಕಾರಿ’, ‘ಅಸಹ್ಯಕರ’, ‘ಬೆದರಿಕೆಯೊಡ್ಡುವ’, ‘ಕಿರಿಕಿರಿಯುಂಟುಮಾಡುವ’ ಮುಂತಾದ ಶಬ್ದಗಳ ಅರ್ಥ ತೀರಾ ಅಸ್ಪಷ್ಟವಾಗಿದೆ ಮತ್ತು ಈ ಕಲಮು 19(1)(ಎ) ವಿಧಿಯ ಅಡಿ ಲಭ್ಯವಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಪರಿಗಣಿಸಿ ಆ ಕಲಮನ್ನೇ ರದ್ದು ಪಡಿಸಿತು.

‘ಕೌಶಾಲಿ ಘೋಷ್ ವರ್ಸಸ್ ಉತ್ತರ ಪ್ರದೇಶ ಸರಕಾರ’ ಪ್ರಕರಣವನ್ನು ಪರಿಗಣಿಸಿದ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ, “ಮೂಲಭೂತ ಹಕ್ಕುಗಳ ಮೇಲೆ ಯಾವೆಲ್ಲ ಕಾರಣಗಳಿಗಾಗಿ ನಿರ್ಬಂಧ ವಿಧಿಸಬಹುದು ಎಂಬುದನ್ನು 19(2) ವಿಧಿಯಲ್ಲಿ ಸಮಗ್ರವಾಗಿ ವಿವರಿಸಲಾಗಿದೆ.

ಅದೇ ಕಾಲಕ್ಕೆ ಸಂವಿಧಾನಬದ್ಧ ಮೂಲಭೂತ ಹಕ್ಕುಗಳ ರಕ್ಷಣೆ ಕುರಿತು ಸರಕಾರದ ಕರ್ತವ್ಯವನ್ನು ಅದು ಒತ್ತಿ ಹೇಳುತ್ತದೆ. ಆ ಕಾರಣದಿಂದ ಅಸಮಂಜಸ ನಿರ್ಬಂಧಗಳನ್ನು ಹೇರುವುದು ಅಸಾಂವಿ ಧಾನಿಕವಾ ಗುತ್ತದೆ ಎಂದು ಅಭಿಪ್ರಾಯಪಟ್ಟಿತು. ನಿರ್ಬಂಧಗಳ ಕುರಿತು ಸಂವಿಧಾನ ವಿಧಿಸಿದ ಷರತ್ತುಗಳು, ಮೂಲಭೂತ ಹಕ್ಕುಗಳೆಂಬ ದೇವಾಲಯದ ಒಳಗಡೆ ಹೊಸ ನಿರ್ಬಂಧಗಳ ಪ್ರವೇಶಕ್ಕೆ ದ್ವಾರಪಾಲಕನಂತೆ ಇರಬೇಕು ಮತ್ತು ಅಂಥ ಷರತ್ತುಗಳಿಗೆ ಹೊರತಾದ ನಿರ್ಬಂಧಗಳ ಪ್ರವೇಶ ನಿರಾಕರಿಸಲ್ಪಡಬೇಕು. ೧೯(೨)ನೇ ವಿಧಿಯ ಚೌಕಟ್ಟಿನ ಒಳಗೆ ಇರದ ನಿರ್ಬಂಧಗಳು ಅಸಾಂವಿ ಧಾನಿಕವಾಗುತ್ತವೆ ಎಂದು ಆದೇಶಿಸಿತು.

ಮೂಲಭೂತ ಹಕ್ಕುಗಳ ಚಲಾವಣೆಗೆ ಹೇರಲಾಗುವ ನಿರ್ಬಂಧಗಳ ಕುರಿತು ಇನ್ನೂ ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಮತ್ತು ಹೈಕೋರ್ಟ್‌ಗಳು ವ್ಯತಿರಿಕ್ತ ಆದೇಶಗಳನ್ನು ನೀಡಿವೆ. ಕರ್ನಾಟಕ ಸರಕಾರ ತರಲು ಉದ್ದೇಶಿಸಿರುವ ದ್ವೇಷ ಭಾಷಣ ನಿಯಂತ್ರಣ ಕಾಯಿದೆಗೆ ಇನ್ನೂ ರಾಜ್ಯಪಾಲರ ಅಂಕಿತವಾಗ ಬೇಕಿದೆ. ನಂತರ ಕೂಡಾ ನ್ಯಾಯಾಲಯಗಳ ಪರಿಶೀಲನೆಗೆ ಈ ಕಾಯಿದೆ ಹೊರತಲ್ಲ.

ಕಾಯಿದೆಯ ಉದ್ದೇಶ ನಿಜಕ್ಕೂ ದ್ವೇಷ ಭಾಷಣ (Hate Speech) ಮತ್ತು ದ್ವೇಷ ಅಪರಾಧಗಳ (Hate Crime ) ತಡೆಯೇ ಆಗಿದ್ದರೆ ಅದು ಸ್ವಾಗತಾರ್ಹ. ಆದರೆ ಅದು ದ್ವೇಷ ಸಾಧನೆಗೆ ಸಾಧನವಾಗ ಬಾರದು ಎಂಬುದು ಸಹೃದಯಿಗಳ ಆಶಯ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)