ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಇದನ್ನು ಫುಟ್ಬಾಲ್ ನೋಡುವಾಗ ಗಮನಿಸಿದ್ದೀರಾ?

ಆಧುನಿಕ ಫುಟ್‌ಬಾಲ್ ಕೇವಲ ಕೌಶಲಕ್ಕೆ ಸೀಮಿತವಾಗಿಲ್ಲ. ಅದು ಸಂಪೂರ್ಣವಾಗಿ ದತ್ತಾಂಶ ಮತ್ತು ಕ್ರೀಡಾ ವಿಜ್ಞಾನದ ಮೇಲೆ ನಿರ್ಭರವಾಗಿದೆ. ವಿಶ್ವಕಪ್‌ನಂಥ ಅತ್ಯುನ್ನತ ಮಟ್ಟದ ಪಂದ್ಯಾವಳಿಗಳಲ್ಲಿ ಆಟಗಾರರು ಈ ಜಿಪಿಎಸ್ ವೆಸ್ಟ್‌ಗಳನ್ನು ಏಕೆ ಧರಿಸುತ್ತಾರೆ ಮತ್ತು ಇದರ ಹಿಂದಿರುವ ತಾಂತ್ರಿಕ ರಹಸ್ಯ ವೇನು ? ಈ ವೆಸ್ಟ್‌ನ ಮುಖ್ಯ ಉದ್ದೇಶ ಆಟಗಾರನ ದೇಹಕ್ಕೆ ಯಾವುದೇ ತೊಂದರೆಯಾಗದಂತೆ ಒಂದು ಸಣ್ಣ ತಾಂತ್ರಿಕ ಸಾಧನವನ್ನು ಸುರಕ್ಷಿತವಾಗಿ ಹಿಡಿದಿಟ್ಟು ಕೊಳ್ಳುವುದು

ಸಂಪಾದಕರ ಸದ್ಯಶೋಧನೆ

ವಿಶ್ವಕಪ್ ಸೇರಿದಂತೆ ಪ್ರಮುಖ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಆಟಗಾರರು ತಮ್ಮ ಜರ್ಸಿ (ಜೆರ್ಸಿ) ಒಳಗಡೆ ಕಪ್ಪು ಬಣ್ಣದ, ನೋಡಲು ಮಹಿಳೆಯರ ಸ್ಪೋರ್ಟ್ಸ್ ಬ್ರಾ ಥರ ಕಾಣುವ ವಿಶಿಷ್ಟವಾದ ವೆಸ್ಟ್‌ಗಳನ್ನು (Vests) ಧರಿಸಿರುವುದನ್ನು ನೀವು ಗಮನಿಸಿರಬಹುದು. ಮೇಲ್ನೋಟಕ್ಕೆ ಇದು ಕೇವಲ ಬಟ್ಟೆಯಂತೆ ಕಂಡರೂ, ಕ್ರೀಡಾ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಇದಕ್ಕೆ ಪ್ರಾಮುಖ್ಯವಿದೆ. ಇದನ್ನು 'ಜಿಪಿಎಸ್ ಟ್ರ್ಯಾಕರ್ ವೆಸ್ಟ್' ಎಂದು ಕರೆಯುತ್ತಾರೆ.

ಆಧುನಿಕ ಫುಟ್‌ಬಾಲ್ ಕೇವಲ ಕೌಶಲಕ್ಕೆ ಸೀಮಿತವಾಗಿಲ್ಲ. ಅದು ಸಂಪೂರ್ಣವಾಗಿ ದತ್ತಾಂಶ ಮತ್ತು ಕ್ರೀಡಾ ವಿಜ್ಞಾನದ ಮೇಲೆ ನಿರ್ಭರವಾಗಿದೆ. ವಿಶ್ವಕಪ್‌ನಂಥ ಅತ್ಯುನ್ನತ ಮಟ್ಟದ ಪಂದ್ಯಾವಳಿಗಳಲ್ಲಿ ಆಟಗಾರರು ಈ ಜಿಪಿಎಸ್ ವೆಸ್ಟ್‌ಗಳನ್ನು ಏಕೆ ಧರಿಸುತ್ತಾರೆ ಮತ್ತು ಇದರ ಹಿಂದಿರುವ ತಾಂತ್ರಿಕ ರಹಸ್ಯವೇನು ? ಈ ವೆಸ್ಟ್‌ನ ಮುಖ್ಯ ಉದ್ದೇಶ ಆಟಗಾರನ ದೇಹಕ್ಕೆ ಯಾವುದೇ ತೊಂದರೆಯಾಗದಂತೆ ಒಂದು ಸಣ್ಣ ತಾಂತ್ರಿಕ ಸಾಧನವನ್ನು ಸುರಕ್ಷಿತವಾಗಿ ಹಿಡಿದಿಟ್ಟು ಕೊಳ್ಳುವುದು.

ಇದನ್ನೂ ಓದಿ: Vishweshwar Bhat Column: ಇಲ್ಲಿದ್ದರೂ ಅಲ್ಲಿ, ಅಲ್ಲಿದ್ದರೂ ಇಲ್ಲಿ!

ಈ ವೆಸ್ಟ್‌ನ ಹಿಂಭಾಗದಲ್ಲಿ, ಅಂದರೆ ಆಟಗಾರನ ಹೆಗಲ ಮೂಳೆಗಳ ನಡುವೆ ಒಂದು ಸಣ್ಣ ಜಿಪಿಎಸ್ ಸಾಧನವನ್ನು ಇಡಲು ವಿಶೇಷ ಪಾಕೆಟ್ ಇರುತ್ತದೆ. ಈ ಜಾಗದಲ್ಲಿ ಸಾಧನವನ್ನು ಇಡುವುದರಿಂದ ಆಟಗಾರ ಓಡುವಾಗ, ಜಿಗಿಯುವಾಗ ಅಥವಾ ಮೈದಾನದಲ್ಲಿ ಇತರ ಆಟಗಾರರೊಂದಿಗೆ ಮುಖಾ ಮುಖಿಯಾಗುವಾಗ ಅದಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಉಪಗ್ರಹದೊಂದಿಗೆ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ಜಾಗವಾಗಿದೆ.

ಈ ಸಣ್ಣ ಸಾಧನದಲ್ಲಿ ಕೇವಲ ಜಿಪಿಎಸ್ ಮಾತ್ರವಲ್ಲ, ಅಕ್ಸೆಲೆರೊಮೀಟರ್, ಮ್ಯಾಗ್ನೆಟೋಮೀಟರ್ ಮತ್ತು ಹೃದಯ ಬಡಿತವನ್ನು ಅಳೆಯುವ ಸೆನ್ಸರ್‌ಗಳಿರುತ್ತವೆ. ಇವು ಸೆಕೆಂಡಿಗೆ ಸುಮಾರು ಸಾವಿರ ಕ್ಕೂ ಹೆಚ್ಚು ದತ್ತಾಂಶ ಬಿಂದುಗಳನ್ನು ಸಂಗ್ರಹಿಸಿ ತರಬೇತುದಾರರು ಮತ್ತು ಕ್ರೀಡಾ ವಿಜ್ಞಾನಿಗಳಿಗೆ ನೈಜ ಸಮಯದಲ್ಲಿ ಕಳುಹಿಸುತ್ತವೆ. ಮೈದಾನದಲ್ಲಿ ಒಬ್ಬ ಆಟಗಾರ ಎಷ್ಟು ಸಕ್ರಿಯನಾಗಿದ್ದಾನೆ ಎಂಬುದನ್ನು ಕೇವಲ ಕಣ್ಣಿನಿಂದ ನೋಡಿ ಅಳೆಯಲು ಸಾಧ್ಯವಿಲ್ಲ.

ಪಂದ್ಯದ 90 ನಿಮಿಷಗಳಲ್ಲಿ ಆಟಗಾರ ಎಷ್ಟು ಕಿಮೀ ಓಡಿದ್ದಾನೆ ಎಂಬುದನ್ನು ಇದು ಲೆಕ್ಕ ಹಾಕುತ್ತದೆ. ಆಟಗಾರನ ಅತ್ಯಧಿಕ ವೇಗ ಎಷ್ಟು, ಆತ ಎಷ್ಟು ಬಾರಿ ತೀವ್ರ ವೇಗದಲ್ಲಿ ಓಡಿದ್ದಾನೆ ಎಂಬುದನ್ನು ಇದು ಪತ್ತೆ ಮಾಡುತ್ತದೆ. ಆಟಗಾರ ಎಷ್ಟು ವೇಗವಾಗಿ ಓಡಲು ಆರಂಭಿಸಿದ ಮತ್ತು ಎಷ್ಟು ವೇಗವಾಗಿ ತನ್ನ ಓಟವನ್ನು ನಿಲ್ಲಿಸಿದ ಎಂಬ ಮಾಹಿತಿ ನೀಡುತ್ತದೆ.

ಉದಾಹರಣೆಗೆ, ಒಬ್ಬ ವಿಂಗರ್ ಸಾಮಾನ್ಯವಾಗಿ ಒಂದು ಪಂದ್ಯದಲ್ಲಿ 30 ಬಾರಿ ತೀವ್ರ ವೇಗದಲ್ಲಿ ಸ್ಪ್ರಿಂಟ್ ಮಾಡುತ್ತಿದ್ದರೆ, ಯಾವುದೋ ಪಂದ್ಯದಲ್ಲಿ ಆತ ಕೇವಲ 15 ಬಾರಿ ಮಾತ್ರ ಸ್ಪ್ರಿಂಟ್ ಮಾಡಿದ್ದರೆ, ಆತ ಆಯಾಸಗೊಂಡಿದ್ದಾನೆ ಅಥವಾ ಆತನ ಫಿಟ್‌ನೆಸ್‌ನಲ್ಲಿ ಸಮಸ್ಯೆಯಿದೆ ಎಂಬು ದನ್ನು ತರಬೇತುದಾರರು ತಕ್ಷಣವೇ ಗ್ರಹಿಸಬಹುದು. ವಿಶ್ವಕಪ್‌ನಂಥ ಸರಣಿಗಳಲ್ಲಿ ಆಟಗಾರರು ಅಲ್ಪಾವಧಿಯಲ್ಲಿ ಸಾಲು ಸಾಲು ಪಂದ್ಯಗಳನ್ನು ಆಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆಟಗಾರರ ಸ್ನಾಯುಗಳ ಮೇಲಾಗುವ ಒತ್ತಡವನ್ನು ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ.

ಆಟಗಾರನ ದೇಹದ ಸಾಮರ್ಥ್ಯ ಮೀರಿ ಆತ ಶ್ರಮಪಡುತ್ತಿದ್ದರೆ, ಈ ಸಾಧನವು ಕೋಚ್‌ಗಳಿಗೆ ಎಚ್ಚರಿಕೆ ನೀಡುತ್ತದೆ. ಇದರಿಂದ ಸ್ನಾಯು ಸೆಳೆತ ಉಂಟಾಗುವುದನ್ನು ಮುಂಚಿತವಾಗಿಯೇ ತಡೆಯಬಹುದು. ಯಾವುದೇ ಆಟಗಾರ ಗಾಯಗೊಂಡು ಮತ್ತೆ ತಂಡಕ್ಕೆ ಮರಳುವಾಗ, ಆತನ ಹಳೆಯ ಡಾಟಾವನ್ನು ಪ್ರಸ್ತುತ ಡಾಟಾಗೆ ಹೋಲಿಸಿ ನೋಡಲಾಗುತ್ತದೆ. ಆತ ಪೂರ್ಣ ಪ್ರಮಾಣದ ಫಿಟ್‌ನೆಸ್ ತಲುಪುವವರೆಗೆ ಆತನಿಗೆ ಎಷ್ಟು ತರಬೇತಿ ನೀಡಬೇಕು ಎಂಬುದನ್ನು ಈ ಸಾಧನದ ಮೂಲಕ ನಿರ್ಧರಿಸಲಾಗುತ್ತದೆ.

ಜಿಪಿಎಸ್ ಸಾಧನಗಳು ಆಟಗಾರನ ದೈಹಿಕ ಸ್ಥಿತಿಯನ್ನು ಮಾತ್ರವಲ್ಲ, ಮೈದಾನದಲ್ಲಿ ಆತನ ಸ್ಥಾನವನ್ನು ಕೂಡ ಪತ್ತೆ ಮಾಡುತ್ತವೆ. ಪಂದ್ಯದ ಅವಧಿಯಲ್ಲಿ ಆಟಗಾರ ಮೈದಾನದ ಯಾವ ಭಾಗದಲ್ಲಿ ಹೆಚ್ಚು ಸಮಯ ಕಳೆದಿದ್ದಾನೆ ಎಂಬುದನ್ನು ತೋರಿಸುವ ಗ್ರಾಫಿಕಲ್ ನಕ್ಷೆಯನ್ನು ಇದು ಸಿದ್ಧಪಡಿಸುತ್ತದೆ. ರಕ್ಷಣಾತ್ಮಕ ಅಥವಾ ಆಕ್ರಮಣಕಾರಿ ಆಟದ ಸಂದರ್ಭದಲ್ಲಿ ತಂಡದ ಆಟಗಾರರು ಯೋಜನೆಯ ಪ್ರಕಾರ ಸರಿಯಾದ ಜಾಗದಲ್ಲಿ ನಿಂತಿದ್ದಾರೆಯೇ ಇಲ್ಲವೇ ಎಂಬುದನ್ನು ವಿಶ್ಲೇಷಿಸಲು ಇದು ಮುಖ್ಯ ಕೋಚ್‌ಗಳಿಗೆ ನೆರವಾಗುತ್ತದೆ.

ಪಂದ್ಯದ ಅರ್ಧಾವಧಿಯಲ್ಲಿ ಈ ಡಾಟಾವನ್ನು ಪರಿಶೀಲಿಸಿ, ದ್ವಿತೀಯಾರ್ಧದಲ್ಲಿ ಯಾವ ಆಟಗಾರ ನನ್ನು ಬದಲಾಯಿಸಬೇಕು ಎಂಬ ಪ್ರಮುಖ ತಂತ್ರಗಾರಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲು ಇದು ಸಹಕಾರಿಯಾಗಿದೆ.

ವಿಶ್ವೇಶ್ವರ ಭಟ್‌

View all posts by this author