ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ಯಾರಾದರೂ ಜಿರಳೆ ಸಾಕುವುದನ್ನು ನೋಡಿದ್ದೀರಾ ?

ಗುಜರಾತ್‌ನ ಹಾರ್ದಿಕ್ ಪಟೇಲ್ ಎಂಬ ಹೆಸರು ನೆನಪಿದೆಯಾ? ಶರವೇಗದಲ್ಲಿ ಆತನ ಆಂದೋಲನ ಉತ್ತುಂಗಕ್ಕೆ ಏರಿತ್ತು. ಆದರೆ ನಮ್ಮ ದೇಶದ ರಾಜಕಾರಣವು ಆತನನ್ನೂ ಆತನ ಚಳವಳಿಯನ್ನೂ ಸಂಪೂರ್ಣ ನುಂಗಿ ಆಪೋಶನ ತೆಗೆದುಕೊಂಡಿತು. ಬಹುಶಃ ಬಹಳ ಜನರಿಗೆ ಹಾರ್ದಿಕ್ ಪಟೇಲ್ ಈಗ ಏನು ಮಾಡುತ್ತಿದ್ದಾನೆಂಬುದೂ ಗೊತ್ತಿಲ್ಲ. ಆತ ಈಗ ಗುಜರಾತ್‌ನ ವೀರಮ್‌ಗಾಮ್‌ನ ಬಿಜೆಪಿ ಶಾಸಕ. ಅಸ್ಸಾಂ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹೀಗೆ ಏಕಾಏಕಿ ಉತ್ತುಂಗಕ್ಕೇರಿ, ಬಹಳ ಬೇಗ ನಾಮಾವಶೇಷಗೊಂಡ ಚಳವಳಿಗಳ ಐತಿಹ್ಯವಿದೆ.

ಸಂಗತ

ಮೆಲೋಡಿ ಯಾವುದೇ ರೂಪದಲ್ಲಿದ್ದರೂ ಬದುಕಿಗೆ ಸಂತಸ ತರುತ್ತದೆ. ಅದು ಚಾಕೊಲೇಟ್ ಆದರೂ ಆಗಿರಲಿ ಅಥವಾ ಮಧುರ ಧ್ವನಿಯಾದರೂ ಆಗಿರಲಿ. ಜಿರಳೆಯ ವಾಸನೆ, ಯುದ್ಧದ ಕ್ರೌರ್ಯದ ನಡುವೆ ಮನಸ್ಸಿಗೆ ಹಿತವಾದ ಸುದ್ದಿ ಇಟಲಿಯಿಂದ ಬಂದಿತು.

ಕಳೆದ ಕೆಲ ದಿನಗಳಿಂದ ಎರಡು ಪದಗಳು ಸಾರ್ವಜನಿಕ ವಲಯದಲ್ಲಿ ತುಂಬಾ ಓಡಾಡುತ್ತಿವೆ. ಒಂದು ಕಾಕ್ರೋಚ್ (ಹಿಂದಿಯಲ್ಲಿ ತಿಲಚಟ್ಟಾ, ಕನ್ನಡದಲ್ಲಿ ಜಿರಳೆ), ಇನ್ನೊಂದು ಮೆಲೋಡಿ. ಈ ಪದಗಳು ಎಷ್ಟೊಂದು ಸದ್ದು ಮಾಡುತ್ತಿವೆ ಅಂದರೆ ಈ ವಾರ ಬೇರೇನನ್ನೂ ಬರೆಯಲು ಮನಸ್ಸಾ ಗುತ್ತಿಲ್ಲ.

ಪ್ರಕರಣವೊಂದರ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ಮಾತಿನ ಭರದಲ್ಲಿ ಕಾಕ್ರೋಚ್ ಎಂಬ ಪದ ಬಳಸಿದ್ದರು. ತಮ್ಮ ಭಾವನೆ ಹಂಚಿಕೊಳ್ಳುವುದಕ್ಕಷ್ಟೇ ಅವರು ಜಿರಳೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆದರೂ ಕೆಲವರು ಈ ಪದವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು, ದೇಶದ ಯುವಕರನ್ನು ಮುಖ್ಯ ನ್ಯಾಯ ಮೂರ್ತಿಗಳು ಜಿರಳೆಯೆಂದು ಕರೆದು ಅವಮಾನ ಮಾಡಿದ್ದಾರೆಂದು ಪ್ರಚಾರ ಮಾಡಿದರು.

ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿ, ಯುವಕರನ್ನು ಜಿರಳೆಗೆ ಹೋಲಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದು ಹೇಳಿದರು. ಆದರೆ ಒಮ್ಮೆ ನಮ್ಮ ಮನಸ್ಸಿನೊಳಗೆ ಒಂದು ವಿಚಾರ ಅಚ್ಚೊತ್ತಿದರೆ ಸುಲಭಕ್ಕೆ ಅದನ್ನು ಅಳಿಸುವುದು ಕಷ್ಟ. ಅದು ನಮ್ಮನ್ನು ಕೆಣಕುವ ವಿಚಾರ ವಾಗಿದ್ದರಂತೂ ಏನಾದರೊಂದು ಕಿತಾಪತಿ ಮಾಡಿಯೇ ತೀರುವುದಕ್ಕೆ ಮನಸ್ಸು ಬಯಸುತ್ತದೆ. ಅಂತೆಯೇ ಈ ಕಾಕ್ರೋಚ್ ಪದಕ್ಕೂ ಅಭಿಜೀತ್ ದಿಪ್ಕೆ ಎಂಬ ಯುವಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೇಜ್ ಆರಂಭಿಸಿದ.

ಇದನ್ನೂ ಓದಿ; Dr Vijay Darda Column: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಎಂಬ ಭಯೋತ್ಪಾದಕ ಕೃತ್ಯ !

ಜನರು ಮುಗಿಬಿದ್ದು ಪ್ರತಿಕ್ರಿಯಿಸಿದರು. ದಿಪ್ಕೆಯ ಇನ್‌ಸ್ಟಾ ಪೇಜನ್ನು ಲಕ್ಷಾಂತರ ಯುವಕರು ಫಾಲೋ ಮಾಡಿದರು. ಕೆಲವೇ ದಿನದಲ್ಲಿ ಅದು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿತು.

ಈಚೆಗಿನ ವರದಿ ಪ್ರಕಾರ ಆ ಪುಟವನ್ನೇ ನಿಷೇಧ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಬೆಳವಣಿಗೆಗಳು ಹೊಸತೇನೂ ಅಲ್ಲ. ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತದೆ ಅಂದರೆ, ಅಲ್ಲಿ ಯಾವುದಾದರೂ ಹವಾ ಎದ್ದರೆ ಏಕಾಏಕಿ ತುರೀಯಾವಸ್ಥೆಗೆ ಹೋಗಿ ತಲುಪುತ್ತದೆ. ಅಷ್ಟೇ ವೇಗದಲ್ಲಿ ದೊಪ್ಪನೆ ಕೆಳಗೆ ಬೀಳುತ್ತದೆ. ಕ್ರಾಂತಿಯನ್ನೇ ಉಂಟು ಮಾಡುತ್ತದೆ ಎಂಬಂತಹ ವೈರಲ್ ಬೆಳವಣಿಗೆ ಅತ್ಯಲ್ಪ ಸಮಯದಲ್ಲೇ ಹೇಳಹೆಸರಿಲ್ಲದೆ ಕಣ್ಮರೆಯಾಗಿರುವುದನ್ನು ನಮ್ಮ ದೇಶ ಸಾಕಷ್ಟು ನೋಡಿದೆ.

ಗುಜರಾತ್‌ನ ಹಾರ್ದಿಕ್ ಪಟೇಲ್ ಎಂಬ ಹೆಸರು ನೆನಪಿದೆಯಾ? ಶರವೇಗದಲ್ಲಿ ಆತನ ಆಂದೋಲನ ಉತ್ತುಂಗಕ್ಕೆ ಏರಿತ್ತು. ಆದರೆ ನಮ್ಮ ದೇಶದ ರಾಜಕಾರಣವು ಆತನನ್ನೂ ಆತನ ಚಳವಳಿಯನ್ನೂ ಸಂಪೂರ್ಣ ನುಂಗಿ ಆಪೋಶನ ತೆಗೆದುಕೊಂಡಿತು. ಬಹುಶಃ ಬಹಳ ಜನರಿಗೆ ಹಾರ್ದಿಕ್ ಪಟೇಲ್ ಈಗ ಏನು ಮಾಡುತ್ತಿದ್ದಾನೆಂಬುದೂ ಗೊತ್ತಿಲ್ಲ. ಆತ ಈಗ ಗುಜರಾತ್‌ನ ವೀರಮ್‌ಗಾಮ್‌ನ ಬಿಜೆಪಿ ಶಾಸಕ. ಅಸ್ಸಾಂ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹೀಗೆ ಏಕಾಏಕಿ ಉತ್ತುಂಗಕ್ಕೇರಿ, ಬಹಳ ಬೇಗ ನಾಮಾವಶೇಷಗೊಂಡ ಚಳವಳಿಗಳ ಐತಿಹ್ಯವಿದೆ.

ಈಗ ಜಿರಳೆಗಳ ಮೂಲಭೂತ ವಿಷಯಕ್ಕೆ ಬರೋಣ. ಜಿರಳೆಗೆ ಕೆಲ ವಿಶೇಷ ಗುಣಗಳಿವೆ. ಕೀಟಗಳ ಜಗತ್ತಿನಲ್ಲಿ ಅದೊಂದು ವಿಶಿಷ್ಟ ಪ್ರಭೇದ. ಅದು ಅತ್ಯಂತ ಪುರಾತನ ಜೀವಿ. ಅದಕ್ಕೆ ಎಂತಹ ಸನ್ನಿವೇಶಗಳನ್ನು ತಾಳಿ ಬದುಕುವ ಶಕ್ತಿಯಿದೆ. ಜಿರಳೆಗಳು ಡೈನೋಸಾರ್‌ಗಳ ಯುಗದಿಂದಲೂ ಇವೆ. ಏನಿಲ್ಲವೆಂದರೂ 35 ಕೋಟಿ ವರ್ಷಗಳಿಂದ ಅವು ಜೀವಿಸುತ್ತಿವೆ! ತಲೆಯೇ ಇಲ್ಲದೆಯೂ ಅವು ವಾರಗಟ್ಟಲೆ ಬದುಕಬಲ್ಲವು. ಜಿರಳೆ 40 ನಿಮಿಷ ಉಸಿರನ್ನು ಹಿಡಿದುಕೊಳ್ಳಬಲ್ಲದು. ಅರ್ಧ ತಾಸಿಗೂ ಹೆಚ್ಚು ಕಾಲ ನೀರಲ್ಲಿ ಜೀವ ಉಳಿಸಿಕೊಳ್ಳಬಲ್ಲದು. ಕೆಲವರ ಪ್ರಕಾರ, ಈ ಭೂಮಿಯಲ್ಲಿ ಪ್ರಳಯ ಸಂಭವಿಸಿದರೂ ಜಿರಳೆ ನಾಶವಾಗುವುದಿಲ್ಲ. ಅದನ್ನೂ ತಾಳಿಕೊಂಡು ಬದುಕುಳಿಯುವ ಅಸಾಮಾನ್ಯ ಶಕ್ತಿ ಜಿರಳೆಗಿದೆ.

ಇಷ್ಟೆಲ್ಲ ಆಗಿಯೂ ಯಾರಾದರು ಜಿರಳೆ ಸಾಕುವುದನ್ನು ನೋಡಿದ್ದೀರಾ? ನನಗೆ ಎಲ್ಲಾ ಜೀವ ಜಂತುಗಳ ಬಗ್ಗೆಯೂ ಅಪಾರವಾದ ಗೌರವ ಮತ್ತು ಪ್ರೀತಿಯಿದೆ. ಆದರೂ ಒಂದು ವಿಷಯವನ್ನು ನಾನೂ ಒಪ್ಪುತ್ತೇನೆ, ನೀವೂ ಒಪ್ಪುತ್ತೀರಿ. ಅದೇನು? ಬಹಳಷ್ಟು ಜನರಿಗೆ ಜಿರಳೆಯನ್ನು ನೋಡಿದ ಕೂಡಲೇ ಕೊಲ್ಲಬೇಕು ಅನ್ನಿಸುತ್ತದೆ.

ಆದ್ದರಿಂದಲೇ ಧ್ರುವ ರಾಠಿಯಂತಹ ವ್ಯಕ್ತಿಗಳು ಹಾಯಾಗಿ ಜರ್ಮನಿಯಲ್ಲಿ ಕುಳಿತು ‘ಜಿರಳೆ ಮರಳಿ ಬಂದಿದೆ’ ಎಂದೋ, ‘56 ಇಂಚಿನ ಎದೆ ನಡುಗುತ್ತಿದೆ’ ಎಂದೋ ಹೇಳಿದಾಗ ಅಂತಹ ಮಾತಿನ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕು ಎಂದು ನನಗೆ ಬಹಳ ಸಹಜವಾಗಿಯೇ ಅನ್ನಿಸುತ್ತದೆ. ಅತ್ಯಂತ ಸಾಮಾನ್ಯ ವ್ಯಕ್ತಿಗೂ ಕೂಡ ಇಂತಹವರನ್ನು ನೋಡಿದಾಗ ಅಥವಾ ತೆರೆಯ ಮರೆಯಲ್ಲಿ ಕುಳಿತು ಕೆಲಸ ಮಾಡುವ ಏಜೆನ್ಸಿಗಳ ಬಗ್ಗೆ ಕೇಳಿದಾಗ ಭಾರತದ ಆರ್ಥಿಕ ಪ್ರಗತಿಯನ್ನು ಸಹಿಸಿ ಕೊಳ್ಳಲು ಸಾಧ್ಯವಾಗದ ಒಂದಷ್ಟು ಜನರು ಇವುಗಳ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ!

ಆದರೆ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ನೇಪಾಳ ಅಥವಾ ಬಾಂಗ್ಲಾದೇಶ ದಲ್ಲಿ ಆದಂತೆ ಭಾರತದ ಜೆನ್ ಜೀ ಯುವಕರ ತಲೆಯಲ್ಲೂ ಭ್ರಮೆಗಳನ್ನು ಬಿತ್ತಿ, ಅವರನ್ನು ರೊಚ್ಚಿಗೆಬ್ಬಿಸಲು ಸಾಧ್ಯವಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಹಗಲುಗನಸು ಅಷ್ಟೆ. ಜೆನ್‌ಜೀ ಆಗಿರಲಿ ಅಥವಾ ಜೆನ್ ಆಲಾ ಆಗಿರಲಿ, ಭಾರತದ ಯುವ ತಲೆಮಾರು ಅತ್ಯಂತ ಬುದ್ಧಿವಂತಿಕೆಯಿಂದ ನಡೆದುಕೊಳ್ಳುತ್ತದೆ.

ಪ್ರತಿಯೊಂದು ವಿಷಯವನ್ನೂ ನಮ್ಮ ಯುವಕರು ಅತ್ಯಂತ ಆಳಕ್ಕಿಳಿದು, ಪೂರ್ವಾಪರ ವಿವೇಚನೆ ಯನ್ನು ಬಳಸಿಯೇ ನೋಡುತ್ತಾರೆ. ಜೆನ್‌ಜೀ, ಜೆನ್ ಆಲಾ ಅಂದರೇನು ಎಂಬ ವಿಷಯದಲ್ಲಿ ಗೊಂದಲ ಇರುವವರಿಗಾಗಿ ಹೇಳುತ್ತೇನೆ. 1997 ಮತ್ತು 2012ರ ನಡುವೆ ಜನಿಸಿದವರು ಜೆನ್‌ಜೀ. 2013ರಿಂದ 2024ರ ನಡುವೆ ಜನಿಸಿದವರು ಜೆನ್ ಆಲಾ. 2024ರ ಬಳಿಕ ಜನಿಸಿದವರಿಗೆ ಜೆನ್ ಬೀಟಾ ಎನ್ನುತ್ತಾರೆ.

ನಮ್ಮ ದೇಶದ ಯುವಕರು ಮತ್ತು ಮಕ್ಕಳು ಬೌದ್ಧಿಕವಾಗಿ ತುಂಬಾ ಗಟ್ಟಿಗರು. ಇವರು ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಇವರಿಗೆ ಆತ್ಮಾಭಿಮಾನ ಜಾಸ್ತಿ. ದೇಶದ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದಾರೆ. ಇವರನ್ನು ದಾರಿ ತಪ್ಪಿಸುವುದು ಅಥವಾ ಭ್ರಮೆಯಲ್ಲಿ ಬೀಳಿಸುವುದು ಬಹಳ ಕಷ್ಟ. ರಾಜಕೀಯವಾಗಿ ಎರಡು ಶಕ್ತಿಗಳು ಯಾವಾಗಲೂ ಕೆಲಸ ಮಾಡುತ್ತಿರುತ್ತವೆ ಎಂಬುದು ನಮ್ಮ ದೇಶದ ಜೆನ್‌ಜೀ ತರುಣರಿಗೆ ತಿಳಿದಿದೆ.

ಸರ್ಕಾರದ ಪರ ಇರುವವರು ಮತ್ತು ಸರ್ಕಾರದ ವಿರುದ್ಧ ಇರುವವರು ಇವೇ ಆ ಎರಡು ಶಕ್ತಿಗಳು. ಆದರೆ ರಹಸ್ಯವಾದ ಯಾವುದಾದರೂ ಮೂರನೆಯ ಶಕ್ತಿ ನಮ್ಮ ನಡುವೆ ಆಟವಾಡಲು ಆರಂಭಿಸಿ ದರೆ ಅದನ್ನು ಜೆನ್‌ಜೀ ತಲೆಮಾರಿನವರು ಥಟ್ಟನೆ ಗುರುತಿಸುತ್ತಾರೆ. ನಿಜವಾದ ಕ್ರಾಂತಿಯ ಬಗ್ಗೆ ಮಾತನಾಡುವವರು ಯಾವತ್ತೂ ನಮ್ಮ ನಂಬಿಕೆಗಳನ್ನು ಘಾಸಿಗೊಳಿಸುವುದಿಲ್ಲ ಮತ್ತು ನಮ್ಮ ದೇವರನ್ನು ಹೀಗಳೆಯುವುದಿಲ್ಲ ಎಂಬುದೂ ಅವರಿಗೆ ಗೊತ್ತಿದೆ.

ಪ್ರಾಮಾಣಿಕ ಉದ್ದೇಶ ಹೊಂದಿರುವವರು ಯಾವತ್ತೂ ಕೆಟ್ಟ ಭಾಷೆಯನ್ನು ಬಳಸುವುದಿಲ್ಲ ಮತ್ತು ಅನಾಗರಿಕರಂತೆ ಮಾತನಾಡುವುದಿಲ್ಲ ಎಂಬುದೂ ಇವರಿಗೆ ತಿಳಿದಿದೆ. ನನಗೆ ಯುವಕರ ಭಾವನೆ ಮತ್ತು ಆಶೋತ್ತರಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ನಮ್ಮ ದೇಶ ಸದೃಢವಾಗಿ ಅಭಿವೃದ್ಧಿ ಹೊಂದು ತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಯುವಕರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ, ಅವರು ಹೊಸ ಹೊಸ ಉದ್ದಿಮೆಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹಿಸಬೇಕು, ತನ್ಮೂಲಕ ಬೇರೆಯವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತೆ ಮಾಡಬೇಕು ಎಂದು ನಾನು ಪದೇಪದೇ ಹೇಳುತ್ತಿರು ತ್ತೇನೆ. ಇದನ್ನೇ ಅನೇಕ ಅಂಕಣಗಳಲ್ಲೂ ಬರೆದಿದ್ದೇನೆ.

ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ಮತ್ತು ಚೀನಾದಲ್ಲಿ ಕ್ಸಿ ಜಿನ್‌ಪಿಂಗ್ ಅವರು ಈ ನಿಟ್ಟಿನಲ್ಲಿ ಬಹಳಪರಿಣಾಮಕಾರಿಯಾದ ಕೆಲಸ ಮಾಡಿದ್ದಾರೆ. ಅಲ್ಲಿ ಯುವಕರಿಗೆ ಹೊಸ ಹೊಸ ಅವಕಾಶ ಗಳನ್ನೂ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಾಗುತ್ತಿದೆ. ನಮ್ಮ ದೇಶದಲ್ಲೂ ಕೂಡ ಬೇರೆ ಬೇರೆ ರೀತಿಯ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿವೆ. ಅವು ನಮ್ಮಲ್ಲಿನ ಯುವಕರಿಗೆ ಹೊಸ ಮಾರ್ಗ ಗಳನ್ನೂ, ಹೊಸ ಸಾಧ್ಯತೆಗಳನ್ನೂ ತೆರೆಯುತ್ತಿವೆ.

ಆದರೂ ನಿರುದ್ಯೋಗಿಗಳಾಗಿಯೇ ಉಳಿದ ಒಂದಷ್ಟು ಯುವಕರು ಅಥವಾ ಇಲ್ಲಿನ ವ್ಯವಸ್ಥೆಯಿಂದ ಮೋಸ ಹೋಗಿದ್ದೇವೆ ಎಂಬ ಭಾವನೆಯನ್ನು ಹೊಂದಿರುವವರು ಸಹಜವಾಗಿಯೇ ಅತೃಪ್ತರಾಗಿರುತ್ತಾರೆ. ಅಂತಹ ಅತೃಪ್ತ ಯುವಕರನ್ನು ತಮ್ಮತ್ತ ಸೆಳೆದು ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಒಂದಷ್ಟು ವಿದೇಶಿ ಶಕ್ತಿಗಳು ಯತ್ನಿಸುತ್ತಿರುತ್ತವೆ. ಆದರೆ ವಿದೇಶಿ ಶಕ್ತಿಗಳು ಯಾವತ್ತೂ ನಮ್ಮ ಯುವಕರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ.

ಗಂಭೀರ ವಿಷಯದ ಬಳಿಕ ಈಗ ಮೆಲೋಡಿಯ ಬಗ್ಗೆಯೂ ಸ್ವಲ್ಪ ಮಾತಾಡೋಣ! ಶಬ್ದಶಃ ಅರ್ಥವನ್ನು ನೋಡಿದರೆ ಮೆಲೋಡಿಅಂದರೆ ಸಂಗೀತದ ಸ್ವರದಲ್ಲಿರುವ ಇಂಪು. ಆದರೆ ಈಗ ಹೆಡ್

ಲೈನುಗಳಲ್ಲಿ ಕಾಣಿಸುತ್ತಿರುವ ಮೆಲೋಡಿಯೆಂಬುದು ಚಾಕೋಲೆಟ್‌ನ ಒಂದು ಬ್ರ್ಯಾಂಡ್. ಇಟಲಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿಯವರಿಗೆ ಮೆಲೋಡಿ ಬ್ರ್ಯಾಂಡ್‌ನ ಚಾಕೋಲೆಟ್ ನೀಡಿದ್ದರು. ಅದು ಉಭಯ ದೇಶಗಳ ನಡುವೆ ಈಗಾಗಲೇ ಇರುವ ಸುಮಧುರ ಸಂಬಂಧವು ಇನ್ನೊಂದು ಎತ್ತರಕ್ಕೆ ಏರಿದ್ದರ ಪ್ರತೀಕವಾಗಿತ್ತು.

ಕಾಕ್ರೋಚ್ ಪಾರ್ಟಿಯ ವಿವಾದ ಮತ್ತು ಯುದ್ಧದ ಘೋರ ಸುದ್ದಿಗಳ ನಡುವೆ ಈ ಮೆಲೋಡಿಯ ಇಂಪು ಮತ್ತು ಮಾನವ ಸ್ನೇಹದ ಕಂಪು ನನ್ನೆದೆಯೊಳಗೆ ಬೆಚ್ಚನೆಯ ಭಾವವನ್ನು ಮೂಡಿಸಿದೆ. ಥ್ಯಾಂಕ್ಯೂ ಮೆಲೋನಿ ಜೀ, ನೀವು ಭಾರತದ ಮೇಲೆ ಇಟ್ಟಿರುವ ಪ್ರೀತಿ ಹಾಗೂ ನಂಬಿಕೆಯನ್ನು ನಾವು ಯಾವತ್ತೂ ಗೌರವಿಸುತ್ತೇವೆ. ನಿಮಗೆ ಹೃದಯಾಂತರಾಳದ ನಮನಗಳು!

ಸಲಾಮತ್ ರಹೇ ದೋಸ್ತಾನಾ ಹಮಾರಾ!

ಡಾ.ವಿಜಯ್‌ ದರಡಾ

View all posts by this author