Dr Vijay Darda Column: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಎಂಬ ಭಯೋತ್ಪಾದಕ ಕೃತ್ಯ !
ಉತ್ತಮ ಡಾಕ್ಟರ್ ಆಗಿ ದೇಶ ಸೇವೆ ಮಾಡುವ ಕನಸು ಕಂಡಿರುತ್ತಾರೆ. ಆದರೆ ವ್ಯವಸ್ಥೆಯೊಳಗೇ ಇರುವ ಕ್ರಿಮಿನಲ್‌ಗಳು ಅಂತಹವರ ಕನಸನ್ನು ಇನ್ನೆಲ್ಲೋ ಕುಳಿತು ನುಚ್ಚುನೂರು ಮಾಡುತ್ತಾರೆ. ಪರೀಕ್ಷೆ ಯನ್ನು ಮತ್ತೆ ನಡೆಸಬಹುದು ಎಂಬುದು ನಿಜ. ಆದರೆ ಈ ಮೊದಲು ಬರೆದಷ್ಟೇ ಉತ್ಸಾಹ, ಬದ್ಧತೆ ಹಾಗೂ ಭಾವನಾತ್ಮಕ ತಾದಾತ್ಮ್ಯದಿಂದ ಮಕ್ಕಳು ಮತ್ತೊಮ್ಮೆ ಅದನ್ನು ಬರೆಯಲು ಸಾಧ್ಯವೇ? ಮೊದಲ ಬಾರಿ ಪರೀಕ್ಷೆ ಬರೆಯುವಾಗ ಅವರು ಪಟ್ಟ ಪರಿಶ್ರಮ ಅವರಿಗೇ ಗೊತ್ತಿರುತ್ತದೆ.
-
ಸಂಗತ
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆಂದು ನಡೆಸುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಯಾಗಿರುವುದು ಪರೀಕ್ಷೆ ಮುಗಿದ ಹಲವು ದಿನಗಳ ಬಳಿಕ ಇತ್ತೀಚೆಗೆ ಬೆಳಕಿಗೆ ಬಂತು. ಇದು ಕೇವಲ ನಾಚಿಕೆಗೇಡಿನ ಕೃತ್ಯವಷ್ಟೇ ಅಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಡೆಸಿದ ಕ್ರೂರ ದಾಳಿ ಕೂಡ ಹೌದು. ಈ ಘಟನೆಯಿಂದ ಹೊರಹೊಮ್ಮಿದ ಆಘಾತದ ಅಲೆಗಳು ವಿದ್ಯಾರ್ಥಿಗಳ ಸ್ಥೈರ್ಯವನ್ನು ಮಾತ್ರ ಅಲುಗಾಡಿಸಿಲ್ಲ, ಬದಲಿಗೆ ಅವರ ತಂದೆ ತಾಯಿಯರು ಕೂಡ ಅಷ್ಟೇ ಶಾಕ್‌ಗೆ ಒಳಗಾಗಿದ್ದಾರೆ. ಈ ಅಂಕಣ ಬರೆಯಲು ಕುಳಿತಿರುವ ನನಗೆ ಅತ್ಯಂತ ಕ್ರೂರ ಹಾಗೂ ಕಠಿಣ ಪದಗಳೇ ಮನಸ್ಸಿಗೆ ಬರುತ್ತಿವೆ. ಏಕೆಂದರೆ ಈ ಘಟನೆಯಿಂದ ನಾನು ಕೂಡ ಆಘಾತಗೊಂಡಿದ್ದೇನೆ.
ಎಷ್ಟು ಯೋಚಿಸಿದರೂ ಸರಳವಾದ ಒಂದು ಪ್ರಶ್ನೆಗೆ ನನಗೆ ಉತ್ತರ ಸಿಗುತ್ತಿಲ್ಲ: ಇಷ್ಟೊಂದು ವಿಸ್ತಾರ ವಾದ ಭಾರತದಲ್ಲಿ ನಾವು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನೇ ನಡೆಸುತ್ತಿರು ವಾಗ ಶೈಕ್ಷಣಿಕ ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ಹಾಗೂ ನ್ಯಾಯಬದ್ಧವಾಗಿ ನಡೆಸಲು ಏನು ಮಹಾನ್ ಕಷ್ಟವಿದೆ? ಭವಿಷ್ಯದ ಪ್ರಜೆಗಳಾಗಿರುವ ವಿದ್ಯಾರ್ಥಿಗಳನ್ನು ಇಷ್ಟೊಂದು ಕ್ರೂರವಾಗಿ ನಡೆಸಿ ಕೊಳ್ಳುವುದನ್ನು ನೋಡಿ ನಾವು ಸುಮ್ಮನಿರಲು ಹೇಗೆ ಸಾಧ್ಯ? ಇದು ನಮ್ಮ ಮಕ್ಕಳಿಗೆ ನಾವೇ ಮಾಡುವ ವಂಚನೆಯಲ್ಲವೇ? ನಮ್ಮ ಯುವ ಸಮೂಹದ ಕನಸು ಹಾಗೂ ಆಶೋತ್ತರಗಳನ್ನು ಒಂದಷ್ಟು ದುಷ್ಟರು ಸೇರಿಕೊಂಡು ಹೊಸಕಿ ಹಾಕುತ್ತಿರುವಾಗ ಒಂದು ಸಮಾಜವಾಗಿ ನಾವು ಹೇಗೆ ಅದನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಸಾಧ್ಯವಿದೆ? ನೀಟ್ ಪರೀಕ್ಷೆಗೆ ಹಾಜರಾಗಿದ್ದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಕರ್ಮಕಾಂಡವು ಮಾನಸಿಕವಾಗಿ ಇನ್ನಿಲ್ಲದಂತೆ ಜರ್ಜರಿತಗೊಳಿಸಿದೆ.
ಜೊತೆಗೆ, ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಇನ್ನೂ ಅಸಂಖ್ಯಾತ ಯುವಕರನ್ನು ಕೂಡ ಇದು ಕಂಗಾಲು ಮಾಡಿದೆ. ಅವರ ನಂಬಿಕೆಗಳು ಛಿದ್ರವಾಗಿವೆ. ಅವರೆಲ್ಲರ ಮನಸ್ಸಿನಲ್ಲಿ ಈಗ ಅವ್ಯಕ್ತ ಭಯವೊಂದು ಮನೆ ಮಾಡಿದೆ. ನಾವು ಇಷ್ಟೊಂದು ಕಷ್ಟಪಟ್ಟು, ಹಗಲು-ರಾತ್ರಿ ನಿದ್ದೆಗೆಟ್ಟು, ಶಿಸ್ತುಬದ್ಧವಾಗಿ ತಯಾರಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಕೊನೆಗೆ ಪ್ರಶ್ನೆ ಪತ್ರಿಕೆಗಳನ್ನು ಹಣ ಕೊಟ್ಟು ಖರೀದಿಸಿದವರೇ ಸುಲಭವಾಗಿ ರ‍್ಯಾಂಕ್ ಗಳಿಸಿ ಉನ್ನತ ಹುದ್ದೆಗಳಿಗೆ ಹೋಗುತ್ತಾರಲ್ಲವೇ ಎಂದು ಅವರು ಯೋಚಿಸತೊಡಗಿದ್ದಾರೆ.
ಇದನ್ನೂ ಓದಿ: Dr Vijay Darda Column: ಅಮಿತ್ ಶಾ ಹೆಣೆದ ರಣವ್ಯೂಹ, ಮಂಡಿಯೂರಿದ ದೀದಿ !
ಪ್ರಾಮಾಣಿಕ ವಿದ್ಯಾರ್ಥಿಗಳು ಯಾವತ್ತೂ ಕಷ್ಟಪಟ್ಟು ಪರೀಕ್ಷೆಗಳಿಗೆ ತಯಾರಾಗುತ್ತಾರೆ. ಎಲ್ಲಾ ಸುಖ, ಸಂತೋಷಗಳನ್ನು ಬಿಟ್ಟು ಕನಸಿನ ಬೆನ್ನತ್ತಿರುತ್ತಾರೆ. ನೀಟ್ ಪರೀಕ್ಷೆ ಬರೆಯುವವರು ಒಳ್ಳೆಯ ಮೆಡಿಕಲ್ ಕಾಲೇಜಿಗೆ ಸೇರಬೇಕೆಂದು ಇನ್ನೂ ಕಷ್ಟಪಟ್ಟು ಓದುತ್ತಾರೆ.
ಉತ್ತಮ ಡಾಕ್ಟರ್ ಆಗಿ ದೇಶ ಸೇವೆ ಮಾಡುವ ಕನಸು ಕಂಡಿರುತ್ತಾರೆ. ಆದರೆ ವ್ಯವಸ್ಥೆಯೊಳಗೇ ಇರುವ ಕ್ರಿಮಿನಲ್‌ಗಳು ಅಂತಹವರ ಕನಸನ್ನು ಇನ್ನೆಲ್ಲೋ ಕುಳಿತು ನುಚ್ಚುನೂರು ಮಾಡುತ್ತಾರೆ. ಪರೀಕ್ಷೆಯನ್ನು ಮತ್ತೆ ನಡೆಸಬಹುದು ಎಂಬುದು ನಿಜ. ಆದರೆ ಈ ಮೊದಲು ಬರೆದಷ್ಟೇ ಉತ್ಸಾಹ, ಬದ್ಧತೆ ಹಾಗೂ ಭಾವನಾತ್ಮಕ ತಾದಾತ್ಮ್ಯದಿಂದ ಮಕ್ಕಳು ಮತ್ತೊಮ್ಮೆ ಅದನ್ನು ಬರೆಯಲು ಸಾಧ್ಯವೇ? ಮೊದಲ ಬಾರಿ ಪರೀಕ್ಷೆ ಬರೆಯುವಾಗ ಅವರು ಪಟ್ಟ ಪರಿಶ್ರಮ ಅವರಿಗೇ ಗೊತ್ತಿರುತ್ತದೆ.
ಒಮ್ಮೆ ಆ ಓಘಕ್ಕೆ ತಡೆ ಬಿದ್ದರೆ ಇನ್ನೊಮ್ಮೆ ಅದನ್ನು ಗಳಿಸಿಕೊಳ್ಳಲು ಅವರಿಂದ ಸಾಧ್ಯವೇ? ಇನ್ನು, ಅವರ ಅಪ್ಪ ಅಮ್ಮ, ಅಕ್ಕ ತಮ್ಮಂದಿರು, ಕುಟುಂಬದವರು ಹಾಗೂ ಅವರನ್ನು ನೀಟ್ ಪರೀಕ್ಷೆಗೆ ತಯಾರು ಮಾಡಲು ಶ್ರಮಿಸಿದವರು ಅನುಭವಿಸಿದ ಭಾವನಾತ್ಮಕ ನೋವು ಯಾರಿಗೆ ಅರ್ಥವಾಗು ತ್ತದೆ? ಈ ಸಲದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ವಿಷಯ ರಾಷ್ಟ್ರಮಟ್ಟ ದಲ್ಲಿ ಆಕ್ರೋಶಕ್ಕೆ ಕಾರಣವಾಗಿ, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಚರ್ಚೆಗೊಳಗಾದ ಕಾರಣಕ್ಕೆ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತು.
ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದು ನಮಗೇನು ಹೊಸತೇ? ಖಂಡಿತ ಅಲ್ಲ. ಇತಿಹಾಸವನ್ನೊಮ್ಮೆ ನೋಡಿದರೆ ಅಂತಹ ಡಜನ್‌ಗಟ್ಟಲೆ ಉದಾಹರಣೆಗಳು ಸಿಗುತ್ತವೆ. ಹಾಗಿರುವಾಗ ಇಂತಹ ಹಗರಣಗಳ ಎಷ್ಟು ಮಾಸ್ಟರ್ ಮೈಂಡ್‌ಗಳನ್ನು ನಾವು ಹಿಡಿದು ಶಿಕ್ಷೆಗೆ ಒಳಪಡಿಸಿದ್ದೇವೆ? ಎಷ್ಟು ಹುಡುಕಿದರೂ ಮೂರ‍್ನಾಲ್ಕು ಉದಾಹರಣೆ ಕೂಡ ಸಿಗುವುದಿಲ್ಲ.
ನಿಮಗೆ ಮಧ್ಯಪ್ರದೇಶದ ಕುಖ್ಯಾತ ವ್ಯಾಪಂ ಹಗರಣ ನೆನಪಿರಬಹುದು. ಆ ಹಗರಣ ನಡೆದಾಗ ನೂರಾರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಕೊನೆಗೆ ಶಿಕ್ಷೆಯಾಗಿದ್ದು ಕೆಲವೇ ಕೆಲವು ಖದೀಮರಿಗೆ. ಅಚ್ಚರಿಯ ಸಂಗತಿಯೆಂದರೆ ಆ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ಕನಿಷ್ಠ 48 ಆರೋಪಿಗಳು ನಿಗೂಢವಾಗಿ ಸಾವನ್ನಪ್ಪಿದ್ದರು!
ಪ್ರಕರಣದಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರು ಹೊರಗೆ ಬಂದಿತ್ತು. ಆದರೂ ಕೊನೆಯಲ್ಲಿ ಹಗರಣದ ನಿಜವಾದ ಸೂತ್ರಧಾರಿ ಯಾರೆಂಬುದು ಗೊತ್ತಾಗಲೇ ಇಲ್ಲ. ಸರ್ಕಾರವೊಂದು ಯಾವುದಾದರೂ ಪ್ರಕರಣದಲ್ಲಿ ಸಂಪೂರ್ಣ ಸತ್ಯವನ್ನು ಪತ್ತೆ ಹಚ್ಚಬೇಕೆಂದು ನಿರ್ಧರಿಸಿ ತನ್ನೆಲ್ಲಾ ಶಕ್ತಿಯನ್ನು ಬಳಸಲು ಮುಂದಾದರೆ ಅಂತಹ ಸತ್ಯವನ್ನು ಬಚ್ಚಿಡಲು ಯಾರಿಗಾದರೂ ಸಾಧ್ಯ ವಿದೆಯೇ? ನನ್ನ ಪ್ರಕಾರ ಸಾಧ್ಯವೇ ಇಲ್ಲ.
ಆದರೂ ಕೆಲವರ ಹಿತಾಸಕ್ತಿಗಳು ಇಂತಹ ಪ್ರಕರಣದಲ್ಲಿ ಒಳಗೊಳಗೇ ಕೆಲಸ ಮಾಡುತ್ತವೆ. ಅವರು ವ್ಯವಸ್ಥೆಯ ಲೋಪಗಳನ್ನು ಬಳಸಿಕೊಂಡು, ತಮಗೆ ಬೇಕಾದವರನ್ನು ಬಚಾವು ಮಾಡಿಕೊಳ್ಳುತ್ತಾರೆ. ನಿಜವಾದ ಮೊಸಳೆಗಳು ಬಲೆಗೆ ಬೀಳದಂತೆ ಅವರೇ ಉದ್ದೇಶಪೂರ್ವಕವಾಗಿ ನೋಡಿಕೊಳ್ಳುತ್ತಾರೆ.
ಸತ್ಯ ಏನೆಂದರೆ, ಈ ಮೊಸಳೆಗಳು ಯಾವತ್ತೂ ಸಿಕ್ಕಿಬೀಳುವುದೇ ಇಲ್ಲ. ತನಿಖಾ ಏಜೆನ್ಸಿಗಳು ಒಂದಷ್ಟು ಸಣ್ಣಪುಟ್ಟ ಮೀನುಗಳನ್ನು ಹಿಡಿದು ತಿಪ್ಪೆ ಸಾರಿಸುತ್ತವೆ. ತಿಮಿಂಗಿಲಗಳು ಅಕ್ರಮದ ಸಮುದ್ರದಲ್ಲಿ ಹಾಗೇ ಈಜಾಡಿಕೊಂಡು ಹಾಯಾಗಿರುತ್ತವೆ. ದೊಡ್ಡ ದೊಡ್ಡ ಮೊಸಳೆಗಳು ಸುರಕ್ಷಿತ ವಾಗಿ ಬೇಟೆಯಾಡಿಕೊಂಡು ಇರುತ್ತವೆ. ಇದೇನೂ ನನ್ನ ಹೊಸ ಸಂಶೋಧನೆಯಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ಬೇರುಬಿಟ್ಟಿರುವ ಸ್ಥಾಪಿತ ಹಿತಾಸಕ್ತಿಗಳು ಬಹಳ ವರ್ಷಗಳಿಂದ ಅಕ್ರಮಗಳನ್ನು ಎಸಗುತ್ತಾ ಬಂದಿರುವುದೇ ಹೀಗೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಬಹಳ ಸುಲಭವಾಗಿ ಸಿಗುತ್ತವೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹಗರಣವನ್ನು ವಿಸ್ತೃತವಾಗಿ ತನಿಖೆ ನಡೆಸಿ ಸತ್ಯ ಬಯಲಿ ಗೆಳೆಯುವ ಹೊಣೆಯನ್ನು ಈಗ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗಿದೆ. ಆದರೆ ಸಾಮಾನ್ಯ ಜ್ಞಾನ ಬಳಸಿ ಈ ವಿಷಯವನ್ನು ಅವಲೋಕಿಸಿದರೂ ಕೆಲ ಬಹಿರಂಗ ಸತ್ಯಗಳು ನಮ್ಮ ಕಣ್ಣಿಗೇ ಬೀಳುತ್ತಿವೆ.
ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಹಿಂದೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಖಂಡೇಲಾ ತಾಲೂಕಿನ ಸಮರ್ಥಪುರ ಎಂಬ ಹಳ್ಳಿಯ ರಾಕೇಶ್ ಕುಮಾರ್ ಮಂಡವಾರಿಯಾ ಎಂಬವನ ಹೆಸರು ಪ್ರಮುಖ ವಾಗಿ ಕೇಳಿ ಬರುತ್ತಿದೆ. ಅವನು ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವನು ಸಿಕಾರ್‌ಗೆ ಹೋಗಿ ನೆಲೆಸಿದ್ದ.
ಅಲ್ಲಿ 15 ವರ್ಷಗಳಿಂದ ವಾಸವಿದ್ದಾನೆ. ಆದರೆ ಅಲ್ಲಿ ಇಷ್ಟು ವರ್ಷಗಳಿಂದ ಏನು ಮಾಡುತ್ತಿದ್ದಾನೆ ಎಂಬುದನ್ನು ಕೆದಕಿದರೆ ಕುತೂಹಲಕರ ಅಂಶಗಳು ಹೊರ ಬೀಳುತ್ತಿವೆ. ಕಳೆದ ಹಲವಾರು ವರ್ಷಗಳಿಂದ ಅವನು ‘ಕನ್ಸಲ್ಟೆನ್ಸಿ ಆಫೀಸ್’ ಎಂಬ ಕಚೇರಿಯೊಂದನ್ನು ನಡೆಸುತ್ತಿದ್ದಾನೆ. ಅದು ಸಿಕಾರ್‌ನ ಪಿಪ್ರಾಲಿ ರಸ್ತೆಯ ನೀಟ್ ಕೋಚಿಂಗ್ ಸೆಂಟರ್‌ನ ಎದುರಿಗೇ ಇದೆ. ಅವನು ಕೋಚಿಂಗ್ ಕೇಂದ್ರದ ನೌಕರನಲ್ಲ.
ಅವನ ಕನ್ಸಲ್ಟೆನ್ಸಿ ಆಫೀಸ್ ಎಂಬುದು ಅವನದೇ ಸ್ವಂತ ಸಂಸ್ಥೆ. ಆದರೆ ಅದು ಏನು ಮಾಡುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಂತಹ ಕನ್ಸಲ್ಟೆನ್ಸಿ ಸೇವೆಯನ್ನು ಅವನು ನೀಡುತ್ತಾನೆ? ಯಾರಲ್ಲೂ ಉತ್ತರವಿಲ್ಲ. ಅವನ ವಿರುದ್ಧ ಕೇಳಿ ಬಂದಿರುವ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಇನ್ನೂ ಸಾಬೀತಾಗಿಲ್ಲವಾದರೂ, ಅವನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಹಗರಣದಲ್ಲಿ ಅವನ ಪಾತ್ರ ಎಂತಹವರಿಗಾದರೂ ತಿಳಿಯುತ್ತದೆ.
ಹಾಗಂತ ಅವನೇನೂ ಒಬ್ಬನೇ ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ. ಹಗರಣದಲ್ಲಿ ಹೊರಗೆ ಕಾಣಿಸು ತ್ತಿರುವ ಮುಖವಷ್ಟೇ ಅವನದು. ಆದರೆ ಅವನ ಹಿಂದೆ ಇನ್ನೂ ದೊಡ್ಡ ತಂಡವೇ ಇದೆ. ಅದು ಬಹುಶಃ ದೊಡ್ಡದೊಂದು ಸಿಂಡಿಕೇಟ್ ರೀತಿಯಲ್ಲಿ ಕೆಲಸ ಮಾಡುತ್ತಿರಬಹುದು. ಇಲ್ಲವಾದರೆ ನೀಟ್ ಪ್ರಶ್ನೆಪತ್ರಿಕೆಗಳು ಅಷ್ಟು ದೊಡ್ಡ ರಾಜ್ಯವಾದ ರಾಜಸ್ಥಾನದ ಉದ್ದಗಲಕ್ಕೂ ಹರಿದಾಡಿ, ಅಲ್ಲಿಂದ ಬಿಹಾರ, ಹರ್ಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆಲ್ಲ ಹೋಗಿ ತಲುಪಲು ಹೇಗೆ ಸಾಧ್ಯ? ಶಿಕ್ಷಣ ತಜ್ಞ ಖಾನ್ ಸರ್ ಈ ವಿಷಯ ದಲ್ಲಿ ಬಹಳ ತಾರ್ಕಿಕವಾಗಿ ಮಾತನಾಡಿದ್ದಾರೆ.
ನಾವೊಂದು ಸಾಮಾನ್ಯ ಡೈಪರ್ ಖರೀದಿಸಿದರೂ ಅದು ಸೋರುವುದಿಲ್ಲ. ಆದರೆ ಇಲ್ಲಿ ರಾಷ್ಟ್ರ ಮಟ್ಟದ ಪರೀಕ್ಷಾ ವ್ಯವಸ್ಥೆಯೇ ಸೋರಿಕೆಗೆ ಸಂಪೂರ್ಣ ಕುಸಿದು ಬಿದ್ದಿದೆ. ನೀಟ್ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಒಂಬತ್ತು ವರ್ಷಗಳ ಹಿಂದೆ ಪರೀಕ್ಷಾ ವ್ಯವಸ್ಥೆ ಯ ಪಾವಿತ್ರ್ಯ ಮತ್ತು ದಕ್ಷತೆಯನ್ನು ಕಾಪಾಡುವುದಕ್ಕೆಂದೇ ಹುಟ್ಟಿಕೊಂಡಿದೆ. ಆದರೆ ಆ ಸಂಸ್ಥೆ ಯನ್ನು ಹುಟ್ಟು ಹಾಕಿದ ಮೇಲೆ ಪರಿಸ್ಥಿತಿ ಸುಧಾರಣೆಯಾಗಿದೆಯೇ? ಖಂಡಿತ ಇಲ್ಲ!
ನನ್ನ ಪ್ರಕಾರ ಪ್ರಶ್ನೆ ಪತ್ರಿಕೆ ಸೋರಿಕೆಯೆಂಬುದು ಸಾಮಾನ್ಯ ಅಪರಾಧ ಅಲ್ಲ. ಅದು ಶಿಕ್ಷಣ ಮಾಫಿಯಾದ ಮೂಲಕ ನಡೆಯುವ ಬಹುದೊಡ್ಡ ಮಸಲತ್ತು. ಅದು ಡ್ರಗ್ ಮಾಫಿಯಾಕ್ಕಿಂತ ಅಪಾಯಕಾರಿ. ಏಕೆಂದರೆ, ಒಬ್ಬ ಅಸಮರ್ಥ ವ್ಯಕ್ತಿ ಹಣ ಕೊಟ್ಟು ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ದೊಡ್ಡ ಹುದ್ದೆಗೆ ಹೋದರೆ ಅವನು ಮಾಡಬಹುದಾದ ಅನಾಹುತಗಳನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅವನು ಡಾಕ್ಟರ್ ಆದರೆ ರೋಗಿಗಳ ಪರಿಸ್ಥಿತಿ ಏನಾಗಬೇಕು? ಮನುಷ್ಯರನ್ನು ಕಾಪಾಡುವ ಬದಲು ಅವನು ಸಾಯಿಸುತ್ತಾನೆ.
ಆದರೆ ಅವನಿಗೆ ಶಿಕ್ಷೆಯಾಗುವುದಿಲ್ಲ. ಏಕೆಂದರೆ ಅವನು ಡಾಕ್ಟರ್! ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಯಂತಹ ಅಪರಾಧಗಳನ್ನು ದೇಶದ್ರೋಹವೆಂದು ಪರಿಗಣಿಸಬೇಕು. ಅದಕ್ಕೆ ನೀಡುವ ಶಿಕ್ಷೆ ಅತ್ಯಂತ ಕಠಿಣವಾಗಿರಬೇಕು. ಎಷ್ಟು ಕಠಿಣವಾಗಿರಬೇಕು ಅಂದರೆ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕೈಹಾಕುವವರು ಗಡಗಡ ನಡುಗಬೇಕು. ಇಷ್ಟಕ್ಕೂ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವುದು ಕೂಡ ಒಂದು ರೀತಿಯಲ್ಲಿ ಭಯೋತ್ಪಾದನೆಯೇ ಆಗಿದೆ!