ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಚಿಟ್ಟೆಗಳ ವಲಸೆಯನು ನೀವು ಕಂಡಿರಾ ?

ಜುಲೈ ತಿಂಗಳಿನ ಒಂದು ದಿನ. ಸಂಜೆ ಹೊಳವಾಗಿತ್ತು. ಮಗಳನ್ನು ಕರೆದುಕೊಂಡು ಮನೆಯ ಹತ್ತಿರವೇ ಇರುವ ಪಾರ್ಕ್ ಹೋಗಿದ್ದೆ. ಅಲ್ಲಿನ ಸಣ್ಣಪುಟ್ಟ ಗಿಡಗಳ ತುಂಬಾ ಕಂಬಳಿ ಹುಳುಗಳಿದ್ದವು; ಮರಗಳಿಂದ ಕೆಲವು ಕಂಬಳಿ ಹುಳಗಳು, ತೆಳ್ಳನೆಯ ದಾರವನ್ನು ಸ್ರವಿಸಿಕೊಂಡು, ಜೋತಾಡುತ್ತಿದ್ದವು. ನಡೆಯುವವರ ಮೈಕೈಗೇ ತಾಗುವಂತಿದ್ದ ಆ ಕಂಬಳಿಹುಳಗಳನ್ನು ಕಂಡು ನನ್ನ ಮಗಳಿಗೆ ತುಸು ಅಳುಕು, ಭಯ.

ಶಶಾಂಕಣ

ಪ್ರತಿ ವರ್ಷ ಸೆಪ್ಟೆಂಬರ್- ಡಿಸೆಂಬರ್ ಅವಧಿಯಲ್ಲಿ, ಡಾರ್ಕ್ ಬ್ಲೂ ಟೈಗರ್, ಡಬಲ್ ಬ್ರಾಂಡೆಡ್ ಬ್ರೌನ್ ಕ್ರೌ ಎಂಬ ಹೆಸರಿನ ಚಿಟ್ಟೆಗಳ ಗುಂಪು ಮೈಸೂರು-ಬೆಂಗಳೂರು ಮೂಲಕ ವಲಸೆ ಹೋಗುತ್ತವೆ! ಈ ಪ್ರಾಕೃತಿಕ ವಿಸ್ಮಯದ ಪೂರ್ಣ ಅಧ್ಯಯನದ ವಿವರಗಳು ನಮ್ಮ ಜನರನ್ನು ಇನ್ನೂ ತಲುಪಿಲ್ಲ.

ಜುಲೈ ತಿಂಗಳಿನ ಒಂದು ದಿನ. ಸಂಜೆ ಹೊಳವಾಗಿತ್ತು. ಮಗಳನ್ನು ಕರೆದುಕೊಂಡು ಮನೆಯ ಹತ್ತಿರವೇ ಇರುವ ಪಾರ್ಕ್ ಹೋಗಿದ್ದೆ. ಅಲ್ಲಿನ ಸಣ್ಣಪುಟ್ಟ ಗಿಡಗಳ ತುಂಬಾ ಕಂಬಳಿ ಹುಳುಗಳಿದ್ದವು; ಮರಗಳಿಂದ ಕೆಲವು ಕಂಬಳಿ ಹುಳಗಳು, ತೆಳ್ಳನೆಯ ದಾರವನ್ನು ಸ್ರವಿಸಿಕೊಂಡು, ಜೋತಾಡುತ್ತಿದ್ದವು. ನಡೆಯುವವರ ಮೈಕೈಗೇ ತಾಗುವಂತಿದ್ದ ಆ ಕಂಬಳಿಹುಳಗಳನ್ನು ಕಂಡು ನನ್ನ ಮಗಳಿಗೆ ತುಸು ಅಳುಕು, ಭಯ. ‘ಕಂಬಳು ಹುಳ ಮೈಗೆ ತಲುಗಿದರೆ ಮೈ ತುಂಬಾ ತುರಿಕೆ ಆಗುತ್ತೆ, ಅದನ್ನು ಪರಕೆ ತಕೊಂಡು ಹೊಡೆಯಬಹುದೇ?’ ಎಂದಳು. ‘ಬೇಡ ಕಣಮ್ಮಾ, ಯಾಕೆ ಗೊತ್ತಾ?’ ಎಂದು ಪ್ರಶ್ನಿಸಿದೆ. ‘ಯಾಕೆ?’ ‘ಇದೇ ಕಂಬಳಿ ಹುಳಗಳು ಇನ್ನು ಒಂದೆರಡು ವಾರಗಳಲ್ಲಿ ಚಿಟ್ಟೆಗಳಾಗಿ ಹಾರುತ್ತವೆ.

ಬಣ್ಣ ಬಣ್ಣದ ಚಿಟ್ಟೆಗಳೆಂದರೆ ನಿನಗೆ ಇಷ್ಟ, ಅಲ್ಲವಾ?’ ಎಂದೆ. ‘ಹೌದಾ, ಇದೇ ಕಪ್ಪು ಕಂಬಳಿಹುಳ ಗಳು ಚಿಟ್ಟೆ ಆಗುತ್ತವಾ? ಹಾಗಾದರೆ, ಹೊಡೆಯುವುದು ಬೇಡ. ಚಿಟ್ಟೆ ಚಿಟ್ಟೆ, ಚಂದದ ಚಿಟ್ಟೆ’ ಎಂದ ಮಗಳು, ಕುಣಿದಾಡುತ್ತಾ, ಪಾರ್ಕ್‌ನಲ್ಲಿ ಆಟವಾಡತೊಡಗಿದಳು. ಅದಾಗಿ ಒಂದೆರಡು ವಾರಗಳಲ್ಲಿ, ಆ ಪಾರ್ಕ್ ತುಂಬಾ ಪುಟಾಣಿ ಚಿಟ್ಟೆಗಳು ಹಾರಾಡತೊಡಗಿದವು! ಹಳದಿ, ಕೇಸರಿ, ನೀಲಿ ಬಣ್ಣದ ಚಿತ್ತಾರ ತುಂಬಿದ ಅವುಗಳ ರೆಕ್ಕೆಗಳೇ ಎಷ್ಟು ಚಂದ!

ಇದನ್ನೂ ಓದಿ: Shashidhara Halady Column: ಹಲಸಿನ ಮರದ ದಶಾವತಾರಗಳು

ಕಾಡು ಹೂವೇ ಸಿಗಲಿ, ನಾಡ ಹೂವೇ ಅರಳಲಿ, ಅದರ ಮೇಲೆ ಕುಳಿತು, ಮಕರಂದ ಹೀರುತ್ತಾ ರೆಕ್ಕೆ ಬಡಿಯುವ ಆ ಚಿಟ್ಟೆಗಳನ್ನು ನೋಡುತ್ತಾ ಕೂರುವದೇ ಒಂದು ಕಾವ್ಯಾನುಭವ. ಇದಾಗಿ ಇಪ್ಪತ್ತು ವರ್ಷಗಳಾಗಿವೆ. ನಾವೆಲ್ಲರೂ ಈಗ ಫ್ಲ್ಯಾಟ್ ವಾಸಿಗಳಾಗಿ, ಬೆಂಗಳೂರಿನ ನಾಗರಿಕ ಕಟ್ಟುಪಾಡುಗಳ ಶಿಶುಗಳಾಗಿದ್ದೇವೆ.

ನಮ್ಮ ನಿವಾಸಿಗಳ ಸಂಘದ ವಾಟ್ಸಾಪ್ ಗುಂಪಿನಲ್ಲಿ ಒಂದು ದಿನ ಒಂದು ಗಾಬರಿ ಇಮೋಜಿ ಹಾಕಿ, ಯಾರೋ ಸಂದೇಶ ಹಾಕಿದ್ದರು ‘ಅಯ್ಯಯ್ಯೋ, ಐದನೆಯ ಮಹಡಿಯ ಬಾಲ್ಕನಿಯಂತಹ ಜಾಗದಲ್ಲಿ ಕಂಬಳಿ ಹುಳಗಳಿವೆ. ನಮ್ಮ ಮಕ್ಕಳು ಅಲ್ಲಿಗೆ ಹೋದರೆ ಮೈತುಂಬಾ ಗಂಧೆಗಳಾಗುತ್ತವೆ. ಮಕ್ಕಳಿಗೆ ಭಯ ಆಗುತ್ತಿದೆ!’ ಕೆಲವೇ ನಿಮಿಷಗಳಲ್ಲಿ ಅದಕ್ಕೆ ಉತ್ತರವಾಗಿ ಹತ್ತಾರು ನಿವಾಸಿಗಳು ಪಟಪಟನೆ ಸಂದೇಶ ತೂರಿದರು.

‘ಕಂಬಳಿ ಹುಳನಾ? ಅಪಾಯ! ಮಕ್ಕಳು ಮುಟ್ಟಿದರೆ ಮೈತುಂಬಾ ದದ್ದುಗಳು ಏಳುತ್ತವೆ’ ‘ಮಕ್ಕಳು ಅಲ್ಲಿಗೆ ಹೋಗಲು ಬಿಡಬೇಡಿ, ಕಂಬಳಿಹುಳಗಳಿಂದ ಅಪಾಯವಿದೆ’ ‘ಮಕ್ಕಳಿಗೆ ಬೇರೆಲ್ಲೂ ಆಟವಾಡಲು ಜಾಗವಿಲ್ಲ. ಐದನೆಯ ಮಹಡಿಯ ಬಾಲ್ಕನಿಯಲ್ಲಿರುವ ನೂರಾರು ಕಂಬಳಿ ಹುಳಗಳಿಂದ ಮಕ್ಕಳಿಗೆ ಅಪಾಯವಿದೆ’ ‘ಮಳೆ ಬಂದು, ಆ ಗೋಡೆಯಲ್ಲೆಲ್ಲಾ ನೀರಿನ ಪಸೆ. ಬಾಲ್ಕನಿಯ ಕೈಪಿಡಿ ಗೋಡೆಯ ತುಂಬಾ ಕಂಬಳಿ ಹುಳಗಳಿವೆ. ತಕ್ಷಣ ಅವುಗಳನ್ನು ತೆಗೆಸಿ. ಇಲ್ಲವಾದರೆ ನಮ್ಮ ಮಕ್ಕಳಿಗೆ ಕಷ್ಟವಾಗುತ್ತದೆ’ ಎಂದು ಫೋಟೋ ಸಹ ಹಾಕಿದ್ದರು.

71 R

ಪುಟಾಣಿ ಕಂಬಳಿ ಹುಳಗಳು ಆ ಫೋಟೋದಲ್ಲಿದ್ದದ್ದು ನಿಜ. ಇದೆಲ್ಲಾ ಕಂಡು ನಾನೊಂದು ಸಂದೇಶ ಬಿಟ್ಟೆ. ‘ಕಂಬಳಿ ಹುಳಗಳೇ ಮುಂದೆ ಚಿಟ್ಟೆಗಳಾಗುತ್ತವೆ. ಅವುಗಳಿಂದಲೇ ಪರಾಗ ಸ್ಪರ್ಶ. ಮಕ್ಕಳಿಗೆ ತಿಳಿಹೇಳಬೇಕು. ಪರಿಸರದ ವಿಚಾರ ತಿಳಿಸಲು ಇದೊಂದು ಒಳ್ಳೆಯ ಅವಕಾಶ’. ಆದರೆ, ಅಲ್ಲಿದ್ದ ಕಂಬಳಿ ಹುಳ ತೆಗೆಸಬೇಕೆಂದು ಇನ್ನಷ್ಟು ಮನವಿಗಳು ವಾಟ್ಸಾಪ್ ಗ್ರೂಪ್‌ನಲ್ಲಿ ತುಂಬಿಕೊಂಡವು; ಹೊರತು, ಕಂಬಳಿ ಹುಳಗಳನ್ನು ರಕ್ಷಿಸಿ, ಅದರಿಂದಾಗಿ ನಂತರ ಚಿಟ್ಟೆಗಳಾಗು ತ್ತವೆ, ಅವು ನಮಗೆ ಬೇಕು, ನಮ್ಮ ಪರಿಸರದ ಕೊಂಡಿಗಳು ಅವು ಎಂದು ಯಾರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ.

ಕೆಲವರಿಗೆ ಚಿಟ್ಟೆಗಳ, ಜೇನು ಹುಳಗಳ ಮಹತ್ವ ಗೊತ್ತಿದ್ದರೂ, ವಾಟ್ಸಾಪ್ ಗುಂಪಿನಲ್ಲಿ ಬಹು ಸಂಖ್ಯಾತರು ಹಾಕಿದ ಒಂದು ಅಭಿಪ್ರಾಯವನ್ನು ವಿರೋಧಿಸಲಾಗದೇ, ಸುಮ್ಮನೇ ಇದ್ದರು ಎನಿಸುತ್ತದೆ. ಒಟ್ಟಿನಲ್ಲಿ, ಕಂಬಳಿಹುಳಗಳನ್ನು ನಮ್ಮ ವಸತಿ ಸಂಕೀರ್ಣದ ಆವರಣದಿಂದಲೇ ಕಣ್ಮರೆ ಮಾಡಬೇಕು ಎಂಬ ಒತ್ತಾಯವೇ ಅಽಕವಾಯಿತೇ ವಿನಹ, ಕಂಬಳಿ ಹುಳಗಳನ್ನು ರಕ್ಷಿಸುವ ಧ್ವನಿ ಕ್ಷೀಣವಾಗಿತ್ತು.

ನಿವಾಸಿಗಳ ಸಂದೇಶದ ಕುರಿತಾಗಿ, ವೈಯಕ್ತಿಕವಾಗಿ ಏನಾದರೂ ಚರ್ಚೆ ನಡೆಯಿತೋ ಗೊತ್ತಿಲ್ಲ. ನಮ್ಮ ನಿವಾಸಿಗಳ ಸಂಘದ ಪದಾಽಕಾರಿಗಳು ಒಂದು ಸಂದೇಶ ಹಾಕಿದರು. ‘ನಮ್ಮ ಕಾಂಪ್ಲೆಕ್ಸ್‌ನಲ್ಲಿ ಕೆಲವು ಮನೆಗಳಲ್ಲಿ ಮತ್ತು ಮನೆಯ ಹತ್ತಿರದ ಗೋಡೆಗಳಲ್ಲಿ ಕಂಬಳಿಹುಳಗಳಿಂದ ತೊಂದರೆ ಕಂಡು ಬಂದಿದೆ. ಅವುಗಳನ್ನು ನಿವಾರಿಸಲು ಪೆಸ್ಟ್ ಕಂಟ್ರೋಲ್‌ನವರಿಗೆ ತಿಳಿಸಿದ್ದೇವೆ’. ಒಂದೆರಡು ದಿನಗಳಲ್ಲಿ ಪೆಸ್ಟ್ ಕಂಟ್ರೋಲ್‌ನವರು ಬಂದು, ಪುಸ್ ಎಂದು, ಅದಾವುದೋ ವಿಷಕಾರಿ ದೂಳನ್ನು ಸ್ಪ್ರೇ ಮಾಡಿ, ತಮ್ಮ ಕೆಲಸವನ್ನು ಮುಗಿಸಿದರು!

ಇದು ಬೆಂಗಳೂರಿಗೆ ಮಾತ್ರ ಸೀಮಿತವಲ್ಲ, ಕಂಬಳಿಹುಳ, ಜೇನುಹುಳ, ಸಣ್ಣಪುಟ್ಟ ಕೀಟಗಳು, ಸಹಸ್ರಪದಿಗಳು ಎಲ್ಲವನ್ನೂ ವಿಷತುಂಬಿದ ಅನಿಲದಿಂದ ಅಥವಾ ದೂಳಿನಿಂದ ಒಮ್ಮೆಗೇ ಗುಡಿಸಿ, ನಿರ್ನಾಮಮಾಡುವ ಪ್ರಕ್ರಿಯೆಯು ಸಣ್ಣಪುಟ್ಟ ಪಟ್ಟಣಗಳಲ್ಲೂ ಇಂದು ನಡೆಯುತ್ತಿದೆ; ಪರಿಸರದ ರಕ್ಷಣೆಯ ಕುರಿತು ಯಾರಿಗೂ ಗಮನವಿಲ್ಲ; ಅದಿರಲಿ, ಈ ಭೂಮಿಯಲ್ಲಿ ಸಹಬಾಳ್ವೆಯೇ ಮೂಲ ಮಂತ್ರ ಎಂಬುದನ್ನು ಸಹ ಮರೆತು, ಮನುಷ್ಯನು ತನ್ನ ಸುತ್ತಮುತ್ತಲಿನ ಇತರ ಜೀವಿಗಳನ್ನು ಹೊಸಕಿಹಾಕುತ್ತಿದ್ದಾನೆ.

ಮನೆ ಸುತ್ತಲೂ ಇರುವ ಗಿಡಮರಗಳಲ್ಲಿ ವಾಸಿಸುವ, ಪಾರ್ಕ್‌ಗಳಲ್ಲಿ ಕಂಡುಬರುವ ಕಂಬಳಿ ಹುಳಗಳೇ ಮುಂದೆ ಬಣ್ಣ ಬಣ್ಣದ ಚಿಟ್ಟೆಗಳಾಗಿ ಮೆಟಾಮಾ-ಸಿಸ್ ಹೊಂದುತ್ತವೆ ಎಂದು ಮಕ್ಕಳಿಗೆ ತಿಳಿಹೇಳಿ, ಸಮಾಧಾನ ಪಡಿಸಲಾಗದಷ್ಟು ಜಡವಾಗಿ ಹೋಗಿದೆಯೇ ನಮ್ಮ ಸಮಾಜ? ನಗರಗಳಲ್ಲಿ ರುವ ನಾಗರಿಕರು, ದಿನೇ ದಿನೇ ಸೂಕ್ಷ್ಮತೆಯನ್ನು ಕಳೆದುಕೊಂಡು, ಸ್ವಾರ್ಥ ಸುಖವನ್ನು ಬಯಸುವ ಭರದಲ್ಲಿ, ಹೆಚ್ಚು ಹೆಚ್ಚು ಕ್ರೌರ್ಯವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆಯೆ? ಇಂತಹ ವಿಷಾದದ ಪ್ರಶ್ನೆಗಳು ನನ್ನಲ್ಲಿ ಮೂಡಿದ್ದು ನಿಜ! ಇದಾಗಿ ಒಂದೆರಡು ವಾರಗಳು ಕಳೆಯಿತು.

ನಮ್ಮ ಫ್ಲ್ಯಾಟ್ ಸುತ್ತಲೂ ಇರುವ ಕೈತೋಟದಲ್ಲಿ, ಅಲ್ಲಲ್ಲಿ ಬೆಳೆದ ಕೆಲವು ಗಿಡಗಳ ಸುತ್ತಲೂ ನಾಲ್ಕೆಂಟು ಚಿಟ್ಟೆಗಳು ಹಾರಾಡುತ್ತಿವೆ! ಬೇಲಿಗುಂಟ ಬೆಳೆದಿರುವ ಲಂಟಾನಾ ಇರಲಿ, ಶಂಖಪುಷ್ಪವೇ ಇರಲಿ, ಅಲ್ಲೆಲ್ಲೋ ಒಂದು ಮೂಲೆಯಲ್ಲಿ ಬೆಳೆಸಿರುವ ಕಾಬಾಳೆಯ ಗಿಡಗಳೇ ಇರಲಿ, ಅಲ್ಲೇ ಚುರುಕಾಗಿ ಅತ್ತಿಂದಿತ್ತ ಹಾರುತ್ತಾ ಮಕರಂದ ಸಂಗ್ರಹಿಸುತ್ತಿವೆ!

ತಮ್ಮ ಬಣ್ಣ ರೆಕ್ಕೆಗಳಿಂದಲೇ ನಸುನಗುತ್ತಾ, ನಾವು ಬಳಿಸಾರಿದರೆ, ಮೆಲ್ಲಗೆ ತೇಲುತ್ತಾ ಸಾಗಿ ಪಕ್ಕದ ಹೂವಿನ ಮೇಲೆ ಕುಳಿತು, ಪರಾಗ ಸ್ಪರ್ಶ ಕ್ರಿಯೆ ಮುಂದುವರಿಸುತ್ತಿವೆ. ಸಣ್ಣಗೆ ಹನಿಯುತ್ತಿರುವ ಮಳೆಯ ನಡುವೆಯೇ, ಅತ್ತಿಂದಿತ್ತ ಹಾರಾಡುವ ಬಣ್ಣದ ಚಿಟ್ಟೆಗಳ ನೋಟ, ಮನಸ್ಸಿನಲ್ಲಿ ಸಂತಸದ ಅಲೆಗಳನ್ನು ಏಳಿಸುತ್ತಿವೆ. ಈ ಜಗತ್ತು ತನ್ನ ಚಲನಶೀಲತೆಯನ್ನು ಇನ್ನೂ ಉಳಿಸಿಕೊಂಡಿದೆ! ಚಿಟ್ಟೆಗಳ ಪ್ರಪಂಚವೇ ವಿಶಿಷ್ಟ, ಅದ್ಭುತ. ಬಣ್ಣದ ಲೋಕದ ನಿಜವಾದ ಜೀವಿಗಳೆಂದರೆ ಚಿಟ್ಟೆಗಳು.

ಏಕೆಂದರೆ, ಅವುಗಳ ಮೈತುಂಬಾ ಬಣ್ಣಗಳೇ! ನೀಲಿ, ಹಳದಿ, ಹಸಿರು, ನಾನಾ ಮಿಶ್ರಣದ ಬಣ್ಣಗಳ ರೆಕ್ಕೆಗಳನ್ನು ಬಡಿಯುತ್ತಾ, ಆಗಸದಲ್ಲಿ ಹಾರಾಡುವ ಚಿಟ್ಟೆಗಳು, ಮನುಷ್ಯನಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿವೆ. ಪರಾಗಸ್ಪರ್ಶ ನಡೆಸುತ್ತವೆ; ಜತೆಯಲ್ಲೇ, ಅವುಗಳ ಮೊಟ್ಟೆ, ಮರಿಯಾಗುವ ಸಮಯದಲ್ಲಿ ಕಂಬಳಿಹುಳದ ಸ್ವರೂಪ ಪಡೆದು, ಹಸಿರಿನ ಎಲೆಗಳನ್ನು ತಿಂದು ಹಾಕುವುದೂ ನಿಜ. ಆದರೆ, ಅವೆಲ್ಲವೂ ಪರಿಸರದ ಸರಪಣಿಯ ಭಾಗಗಳೇ ಹೊರತು, ಬೇರಿನ್ನೇನಲ್ಲ.

ಮತ್ತೊಂದು ವಿಶೇಷವಿದೆ; ಮಳೆಗಾಲ ಅಂದರೆ ಮಾನ್ಸೂನ್ ಆರಂಭವಾಗಿ ಎರಡು ಮೂರು ತಿಂಗಳು ಕಳೆಯುವ ಅವಧಿಯಲ್ಲಿ, ನಮ್ಮ ರಾಜ್ಯದ ಎಲ್ಲಾ ಕಡೆಗಳಲ್ಲಿ ಚಿಟ್ಟೆಗಳು ಅಧಿಕ ಸಂಖ್ಯೆಯಲ್ಲಿ ಹಾರಾಡುವುದನ್ನು ಕಾಣಬಹುದು. ಈ ವರ್ಷ ಮಳೆಗಾಲವು ತುಸು ಏರುಪೇರಾಗಿರುವುದು ನಿಜ; ಕರಾವಳಿಯ ಕೆಲವು ಭಾಗಗಳಲ್ಲಿ, ಉತ್ತರ ಕರ್ನಾಟಕದಲ್ಲಿ ಹಲವು ವಾರಗಳಿಂದ ಸಾಕಷ್ಟು ಮಳೆ ಬಂದಿಲ್ಲವಂತೆ.

ಇದು ಚಿಟ್ಟೆಗಳ ಜೀವನಚಕ್ರದ ಮೇಲೆ ತುಸು ಪರಿಣಾಮ ಬೀರಿರಲೇಬೇಕು. ಆದರೂ, ಒಂದಂತೂ ನಿಜ, ಈ ತಿಂಗಳು ನಮ್ಮ ನಾಡಿನಾದ್ಯಂತ ಚಿಟ್ಟೆಗಳು ಹಾರುತ್ತಿವೆ! ಇದು ಮಕ್ಕಳು, ದೊಡ್ಡವರು, ಕಿರಿಯರು, ಹಿರಿಯರು ಎಲ್ಲರಿಗೂ ಸಂತಸ ತಂದಿವೆ!

ನಾಗರಿಕ ಮಾನವನು ತನಗೆ ತೊಂದರೆ ನೀಡುತ್ತದೆ ಎಂಬ ನೆಪವೊಡ್ಡಿ, ಕಂಬಳಿ ಹುಳವನ್ನು ಸಾಯಿಸಿ ದರೂ, ತೋಟಕ್ಕೆ ಕ್ರಿಮಿನಾಶಕವನ್ನು ಸಿಂಪಡಿಸಿದರೂ, ಚಿಟ್ಟೆಗಳು ವಲಸೆ ಹೋಗುವ ಕಾಡುಗಳನ್ನೇ ತರಿದು ಹಾಕಿದರೂ, ಎದೆಗುಂದದೇ, ಬೇಸರ ಪಟ್ಟುಕೊಳ್ಳದೇ, ಚಿಟ್ಟೆಗಳು ಎಂದಿನಂತೆ ತಮ್ಮ ಚೆಲ್ಲಾಟದಲ್ಲಿ ತೊಡಗಿಕೊಂಡಿವೆ. ತಮ್ಮ ಮೊಟ್ಟೆಗಳಲ್ಲಿ, ಕಂಬಳಿ ಹುಳಗಳಲ್ಲಿ ಒಂದು ಭಾಗ ಅಳಿದರೂ, ಬದುಕುಳಿದ ಇನ್ನೊಂದು ಭಾಗದಿಂದ ತಮ್ಮ ಜೀವನ ಚಕ್ರವನ್ನು ಮುಂದುವರಿಸಿವೆ. ತಮ್ಮ ಪಾಡಿಗೆ ಈ ಜಗತ್ತಿಗೆ ಬಣ್ಣದ ಸಿಂಚನ ಮಾಡುತ್ತಾ, ಭರವಸೆಯ ಹಾರಾಟವನ್ನು ಮುಂದುವರಿಸಿವೆ.

ಬಣ್ಣದ ರೆಕ್ಕೆಗಳನ್ನು ಹೊಂದಿರುವ ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನು ಭವ. ಬಣ್ಣದ ರೆಕ್ಕೆಗಳನ್ನು ಬಡಿಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನಗಳನ್ನು ಬರೆಯತ್ತಲೇ ಇರುತ್ತವೆ! ಹಗುರ ದೇಹದ ಚಿಟ್ಟೆಗಳು ಸಾವಿರಾರು ಮೈಲಿ ದೂರ ವಲಸೆ ಹೋಗುವುದು ಪ್ರಕೃತಿಯ ವಿಸ್ಮಯಗಳಲ್ಲೊಂದು.

ಅಮೆರಿಕದ ಮೊನಾರ್ಕ್ ಚಿಟ್ಟೆಗಳು 4000 ಮೈಲಿ, ಬ್ರಿಟಿಷ್ ಪೈಂಟೆಡ್ ಲೇಡಿ ಚಿಟ್ಟೆಗಳು 9000 ಮೈಲಿ ವಲಸೆ ಹೋಗಿ ಸಂತಾನೋತ್ಪತ್ತಿ ಮಾಡಿ ವಾಪಸಾಗುತ್ತವೆ! ಹಾರುತ್ತಾ ಹೋಗುವ ತಲೆಮಾರು ಒಂದಾದರೆ, ಅದೇ ಜಾಗಕ್ಕೆ ವಾಪಸಾಗುವ ಚಿಟ್ಟೆಗಳು ಬೇರೊಂದೇ ತಲೆಮಾರಿನವು! ನಮ್ಮ ಪಶ್ಚಿಮ ಘಟ್ಟಗಳಲ್ಲೂ ಸಾವಿರಾರು ಚಿಟ್ಟೆಗಳು ಸ್ಥಳೀಯವಾಗಿ ಮತ್ತು ಪೂರ್ವ ಘಟ್ಟಗಳಿಗೆ ವಲಸೆ ಹೋಗುತ್ತವೆ. ಇದನ್ನು ಹಲವು ಹವ್ಯಾಸಿ ಪರಿಸರಾಸಕ್ತರು, ಛಾಯಾಚಿತ್ರಗ್ರಾಹಕರು ಗಮನಿಸಿದ್ದಾರೆ, ದಾಖಲಿಸಿದ್ದಾರೆ.

ಆದರೆ, ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿವರ್ಷ ನಡೆಯುತ್ತಿರುವ ಈ ಪ್ರಾಕೃತಿಕ ವಿಸ್ಮಯದ ಪೂರ್ಣ ಅಧ್ಯಯನದ ವಿವರಗಳು ನಮ್ಮ ಜನರನ್ನು ಇನ್ನೂ ತಲುಪಿಲ್ಲ. ಪ್ರತಿ ವರ್ಷ ಸೆಪ್ಟೆಂಬರ್- ಡಿಸೆಂಬರ್ ಅವಽಯಲ್ಲಿ, ಡಾರ್ಕ್ ಬ್ಲೂ ಟೈಗರ್, ಡಬಲ್ ಬ್ರಾಂಡೆಡ್ ಬ್ರೌನ್ ಕ್ರೌ ಎಂಬ ಹೆಸರಿನ ಚಿಟ್ಟೆಗಳ ಗುಂಪು ಮೈಸೂರು-ಬೆಂಗಳೂರು ಮೂಲಕ ವಲಸೆ ಹೋಗುತ್ತವೆ ಎಂಬುದನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಈ ಸೆಪ್ಟೆಂಬರ್‌ನಿಂದ ಆರಂಭಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಚಿಟ್ಟೆಗಳು ಗುಂಪುಗುಂಪಾಗಿ ಸಂಚರಿಸುವುದನ್ನು ಕಾಣಬಹುದು; ನೀವೆಲ್ಲಾದರೂ ಇಂತಹ ವಿದ್ಯಮಾನ ಕಂಡರೆ, ಮೊಬೈಲ್ ಫೋಟೋ ಮೂಲಕ ದಾಖಲಿಸಲು ಪ್ರಯತ್ನಿಸಬಹುದು; ಮಾಹಿತಿಯನ್ನು ಸಂಗ್ರಹಿಸಲೂ ಬಹುದು; ನಮ್ಮ ರಾಜ್ಯದ ಚಿಟ್ಟೆಗಳ ವಲಸೆಯನ್ನು ಅಧ್ಯಯನಕ್ಕೆ ಒಳಪಡಿಸುವವರಿಗೆ ಇದರಿಂದ ಅನುಕೂಲ ವಾಗಬಹುದು. (ಸೂ: ಇಲ್ಲಿ ಬಳಸಲಾಗಿರುವ ಚಿತ್ರಗಳು ಬೇರೆ ಸಂದರ್ಭದ ಪ್ರಾತಿನಿಧಿಕ ಚಿತ್ರಗಳು. ಕೃಪೆ: ವಿಕಿಮೀಡಿಯಾ ಕಾಮನ್ಸ್)

ಶಶಿಧರ ಹಾಲಾಡಿ

View all posts by this author