Shashidhara Halady Column: ಇವರು ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ !
ಕನ್ನಡದ ಸಾಹಿತಿಗಳ ಕುರಿತು ಅವರ ಮಕ್ಕಳು ಬರೆದ ಪುಸ್ತಕಗಳು ಕಡಿಮೆ ಎಂದೇ ಹೇಳಬಹುದು; ತೇಜಸ್ವಿಯವರು ತಮ್ಮ ತಂದೆಯ ಕುರಿತು ಬರೆದ ‘ಅಣ್ಣನ ನೆನಪು’ ಇಲ್ಲಿ ನೆನಪಾಗುತ್ತದೆ. ಶಿವರಾಮ ಕಾರಂತರನ್ನು ಅವರ ಮಕ್ಕಳು ಕರೆಯುತ್ತಿದ್ದುದು ‘ತಾತ’ ಎಂದು! ಆದ್ದರಿಂದ, ಮೂವರು ಮಕ್ಕಳು ಸೇರಿ ಕಾರಂತರ ಕುರಿತು ಬರೆದ ಪುಸ್ತಕಗಳನ್ನು ಕನ್ನಡದಲ್ಲಿ ‘ತಾತನ ನೆನಪು’ ಎಂದೂ ಕರೆಯ ಬಹುದು.


ಶಶಾಂಕಣ
ಕನ್ನಡ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದ ಹೆಮ್ಮರ ಎನ್ನಬಹುದಾದ ಡಾ.ಶಿವರಾಮ ಕಾರಂತರ ಕುರಿತು ಅವರ ಮಕ್ಕಳು ಒಂದು ಪುಸ್ತಕವನ್ನು ಬರೆದಿದ್ದಾರೆ: ‘ಗ್ರೋಯಿಂಗ್ ಅಪ್ ಕಾರಂತ್’ ಹೆಸರಿನ ಈ ಪುಸ್ತಕವು 2021ರಲ್ಲೇ ಪ್ರಕಟಗೊಂಡರೂ (ವೆಸ್ಟ್‌ಲ್ಯಾಂಡ್ ಬುಕ್ಸ್), ಕನ್ನಡ ಸಾಹಿತ್ಯಕ ವಲಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿಲ್ಲ ಎಂದೇ ಹೇಳಬೇಕು; ಅದೇ ರೀತಿ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆದಿಲ್ಲ ಎಂದೂ ಹೇಳಬಹುದು. ಕನ್ನಡದಲ್ಲಿ 47 ಪ್ರಮುಖ ಕಾದಂಬರಿ ಗಳನ್ನು, 400ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ ಶಿವರಾಮ ಕಾರಂತರನ್ನು, ಅವರ ಮೂವರು ಮಕ್ಕಳು ವಿಶಿಷ್ಟ ದೃಷ್ಟಿಕೋನದಿಂದ ನೋಡಿ ಬರೆದ ಪುಸ್ತಕ ಇದು. 20ನೆಯ ಶತಮಾನದ ದೈತ್ಯ ಪ್ರತಿಭೆ ಕಾರಂತರ ಬದುಕಿನ ಹಲವು ಒಳನೋಟಗಳನ್ನು ನೀಡುವ ಈ ಪುಸ್ತಕವು, ಆ ನಿಟ್ಟಿನಲ್ಲಿ ಒಂದು ಅಪರೂಪದ ಕೃತಿ.
ಕನ್ನಡದ ಸಾಹಿತಿಗಳ ಕುರಿತು ಅವರ ಮಕ್ಕಳು ಬರೆದ ಪುಸ್ತಕಗಳು ಕಡಿಮೆ ಎಂದೇ ಹೇಳಬಹುದು; ತೇಜಸ್ವಿಯವರು ತಮ್ಮ ತಂದೆಯ ಕುರಿತು ಬರೆದ ‘ಅಣ್ಣನ ನೆನಪು’ ಇಲ್ಲಿ ನೆನಪಾಗುತ್ತದೆ. ಶಿವರಾಮ ಕಾರಂತರನ್ನು ಅವರ ಮಕ್ಕಳು ಕರೆಯುತ್ತಿದ್ದುದು ‘ತಾತ’ ಎಂದು! ಆದ್ದರಿಂದ, ಮೂವರು ಮಕ್ಕಳು ಸೇರಿ ಕಾರಂತರ ಕುರಿತು ಬರೆದ ಪುಸ್ತಕಗಳನ್ನು ಕನ್ನಡದಲ್ಲಿ ‘ತಾತನ ನೆನಪು’ ಎಂದೂ ಕರೆಯ ಬಹುದು.
‘ಗ್ರೋಯಿಗ್ ಅಪ್ ಕಾರಂತ್’ ಈ ಪುಸ್ತಕವನ್ನು ಕೆ.ಉಲ್ಲಾಸ ಕಾರಂತ, ಮಾಳವಿಕಾ ಕಪೂರ್ ಮತ್ತು ಕ್ಷಮಾ ರಾವ್ ಒಟ್ಟಾಗಿ ಬರೆದು, ರೂಪಿಸಿದ್ದಾರೆ. ಇಲ್ಲಿ ಮಾಳವಿಕಾ ಕಪೂರ್ ಮತ್ತು ಕ್ಷಮಾ ರಾವ್ ಅವರ ಅಪರೂಪದ ಬರಹಗಳಿದ್ದು, ಪುಸ್ತಕದ ಹೆಚ್ಚಿನ ಭಾಗದಲ್ಲಿ ಉಲ್ಲಾಸ ಕಾರಂತರ ಬರಹಗಳೇ ಇವೆ. ಈ ಅಪರೂಪದ ಗ್ರಂಥದಲ್ಲಿ ಅಡಕಗೊಂಡಿರುವ ವಿಶಿಷ್ಟ, ಅಪರೂಪದ ಫೋಟೋಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.
ಇದನ್ನೂ ಓದಿ: Shashidhara haladi Column: ಪ್ರಶಸ್ತಿಗಳ ಆಯ್ಕೆಯಲ್ಲಿ ವಶೀಲಿ ರಾಜಕಾರಣ !
ಹಾಗೆ ನೋಡಿದರೆ, ಕನ್ನಡಿಗರಿಗೆ ಕಾರಂತರ ಬದುಕು ಒಂದು ತೆರೆದ ಪುಸ್ತಕವೇ ಸರಿ. ಶಿವರಾಮ ಕಾರಂತರು ಸ್ವತಃ ಮೂರು ಆತ್ಮಕಥೆಗಳನ್ನು ಬರೆದಿದ್ದಾರೆ! ‘ಹುಚ್ಚು ಮನಸ್ಸಿನ ಹತ್ತು ಮುಖಗಳು’, ‘ಸ್ಮೃತಿ ಪಟಲದಿಂದ’ ಮತ್ತು ‘ಅಳಿದುಳಿದ ನೆನಪುಗಳು’- ಈ 3 ಗ್ರಂಥಗಳಲ್ಲಿ ಕಾರಂತರು ತಮ್ಮ ಬದುಕಿನ ಬಹಳಷ್ಟು ವಿಚಾರಗಳನ್ನು ಮುಕ್ತವಾಗಿ ಬರೆದುಕೊಂಡಿದ್ದಾರೆ.
1948ರಷ್ಟು ಮುಂಚೆಯೇ ಕಾರಂತರು ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಬರೆದಿದ್ದರು! ಈ ನಡುವೆ, ಅವರ ಮೊದಲ ಆತ್ಮಕಥೆ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಇದಕ್ಕೆ ಅವರೇ ಇನ್ನಷ್ಟು ನೆನಪುಗಳನ್ನು ಸೇರಿಸಿ, ಆ ಪುಸ್ತಕದ ಗಾತ್ರವನ್ನು ವೃದ್ಧಿಸಿದರು. ಕಾರಂತರ ಮೂರು ಆತ್ಮಕಥೆಗಳನ್ನು ಒಟ್ಟಾಗಿ ಓದಿದರೆ, 20ನೆಯ ಶತಮಾನದ ಒಂದು ಅಪರೂಪದ ಗ್ರಹಿಕೆಯನ್ನು ಪಡೆಯಲು ಸಾಧ್ಯ.
ಶಿವರಾಮ ಕಾರಂತರದು ಬಹುಮುಖ ಪ್ರತಿಭೆ; ಕಾದಂಬರಿಕಾರರು, ಸ್ವತಃ ನೃತ್ಯ ಕಲಾವಿದರು, ಚಿತ್ರ ಕಲಾವಿದರು, ಪತ್ರಕರ್ತರು, ವಿಜ್ಞಾನ ಲೇಖಕ, ಪರಿಸರ ಹೋರಾಟಗಾರ, ಅನುವಾದಕ, ಮಕ್ಕಳ ಸಾಹಿತಿ, ನಾಟಕಕಾರ, ಸಮಾಜ ಸುಧಾರಕ, ವೇಶ್ಯಾ ವಿವಾಹ ಪ್ರತಿಪಾದಕ, ಯಕ್ಷಗಾನ ಸಂಶೋಧಕ, ಯಕ್ಷಗಾನ ಕಲಾವಿದ, ಯಕ್ಷಗಾನ ತರಬೇತುಗಾರ, ಬ್ಯಾಲೆ ಸಂಶೋಧಕ, ಸಾರ್ವಜನಿಕ ಚುನಾವಣೆ ಗಳಲ್ಲಿ ಸ್ಪರ್ಧಿಸುವ ಮೂಲಕ ರಾಜಕಾರಣಿ, ಸ್ವಾತಂತ್ರ ಹೋರಾಟಗಾರ, ಚಲನಚಿತ್ರ ನಿರ್ದೇಶಕ, ಉದ್ಯಮಿ, ಪ್ರಕಾಶಕ .. ಹೀಗೆ ಅವರ ಜೀವನದ ಮತ್ತು ಪ್ರಯೋಗಗಳ ವ್ಯಾಪ್ತಿ ವಿಸ್ತಾರವಾದದ್ದು.

ಅವರ ಮೂವರು ಮಕ್ಕಳು ತಮ್ಮ ತಂದೆಯನ್ನು ನೋಡಿದ ರೀತಿಯು ‘ಗೋಯಿಂಗ್ ಅಪ್ ಕಾರಂತ್’ ನಲ್ಲಿ ತೆರೆದುಕೊಂಡಿದ್ದು, ಕಾರಂತರ ಬದುಕನ್ನು ಇನ್ನಷ್ಟು ಆಪ್ತವಾಗಿ, ವಾಸ್ತವಕ್ಕೆ ಹತ್ತಿರವಾಗಿ ಗ್ರಹಿಸಲು ಸಾಧ್ಯವಾಗಿದೆ.
ಶಿವರಾಮ ಕಾರಂತರಿಗೆ ನಾಲ್ವರು ಮಕ್ಕಳು; ಅವರ ಪೈಕಿ ಹರ್ಷ 1960ರ ದಶಕದಲ್ಲೇ ಆರೋಗ್ಯದ ಸಮಸ್ಯೆಯಿಂದಾಗಿ ತೀರಿಕೊಂಡರು. ಅವರ ಹೆಸರಿನಲ್ಲಿ ಕಾರಂತರು ‘ಹರ್ಷ ಪ್ರಕಟಣಾಲಯ’ ತೆರೆದು, ತಮ್ಮ ಪುಸ್ತಕಗಳನ್ನು ತಾವೇ ಮುದ್ರಿಸಿ, ಪ್ರಕಟಿಸಿದ್ದೂ ಇದೆ. ಆ ಸಂದರ್ಭಗಳಲ್ಲಿ, ಲಾರಿ ಯಲ್ಲಿ ಮುದ್ರಣಕ್ಕೆ ಅಗತ್ಯ ಎನಿಸುವ ಕಾಗದವು ಪುತ್ತೂರಿಗೆ, ಅಂದರೆ ಕಾರಂತರು ಆಗ ವಾಸಿಸಿದ್ದ ಸ್ಥಳಕ್ಕೆ ಬಂದಾಗ, ಮನೆಯವರೂ ಸೇರಿದಂತೆ ಎಲ್ಲರಿಗೂ ಅಚ್ಚರಿ!
‘ಇಷ್ಟೊಂದು ಕಾಗದವನ್ನು ಪುತ್ತೂರಿಗೆ ಏಕೆ ತರಿಸುತ್ತಿದ್ದಾರೆ ಈ ಕಾರಂತರು?’ ಎಂದು ಪುತ್ತೂರಿನ ಜನ ಮಾತನಾಡಿಕೊಂಡಿದ್ದೂ ಇದೆ! ಕಾರಂತರ ಸಾಹಸಗಳಿಗೆ ಮಿತಿಯೇ ಇಲ್ಲ; ಸಾಕಷ್ಟು ಸಾಲ ಮಾಡಿ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಅವುಗಳಲ್ಲಿ ಅಂದಿನ ಕಾಲಕ್ಕೆ, ಬಹು ದೊಡ್ಡ ಸಂಪುಟವಾಗಿದ್ದ ವಿಜ್ಞಾನ ಪ್ರಪಂಚ ಎಂಬ ಜ್ಞಾನಕೋಶಗಳೂ ಸೇರಿವೆ.
ನಮ್ಮ ನಾಡಿನ ಹಲವು ಪ್ರಖ್ಯಾತ ಸಾಹಿತಿಗಳಿಗೆ ಆದಾಯ ಮೂಲವಿತ್ತು; ಆದರೆ, ಕಾರಂತರಿಗೆ ನಿಶ್ಚಿತ ಆದಾಯ ಮೂಲವಿರಲಿಲ್ಲ. ಅವರ ಹಿರಿಯರು ಕುಂದಾಪುರದ ಕೋಟದಲ್ಲಿ ಶ್ರೀಮಂತರಾಗಿದ್ದರೂ, ಕಾರಂತರ ಅಜ್ಜನವರು ‘ರಸವಿದ್ಯೆ’ಯ ಮೋಹಕ್ಕೆ ಬಿದ್ದು, ತಾಮ್ರವನ್ನು ಚಿನ್ನ ಮಾಡಲೆಂದು ಸಾಕಷ್ಟು ಆಸ್ತಿಯನ್ನು ಕರಗಿಸಿದ್ದರಿಂದಾಗಿ, ಕಾರಂತರ ತಂದೆಯ ಕಾಲಕ್ಕೆ ಬಡವರಾಗಿದ್ದರು ಎಂಬ ವಿವರ ಈ ಪುಸ್ತಕದಲ್ಲಿ ಲಭ್ಯ. ಕಾರಂತರು ಹೈಸ್ಕೂಲು ಶಿಕ್ಷಣಕ್ಕೆ ಸೇರಿಕೊಂಡರೂ, ಅದರಲ್ಲಿ ಸ್ವಾರಸ್ಯವನ್ನು ಕಾಣದೇ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಅದಕ್ಕೆ ಮಹಾತ್ಮ ಗಾಂಧಿ ಯವರೇ ಸ್ಪೂರ್ತಿ.
ಕಾರಂತರನ್ನು ಹತ್ತಿರದಿಂದ ನೋಡಿದ ಕೆ.ಉಲ್ಲಾಸ ಕಾರಂತರು, ತಮ್ಮ ಇಲ್ಲಿನ ಬರಹಗಳಲ್ಲಿ ಕಾರಂತರ ಕುರಿತು ಹಲವು ಒಳನೋಟಗಳನ್ನು ನೀಡಿರುವುದು ವಿಶೇಷ. ಇದುವರೆಗೆ ನಾವು ಅರಿಯದ ಕಾರಂತರ ಕೆಲವು ಮುಖಗಳನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ಪರಿಸರ ರಕ್ಷಣೆಯ ಕುರಿತು ಕಾರಂತರು ಹೋರಾಡಿದ್ದು, ಕೈಗಾ ಅಣುಸ್ಥಾವರ ವಿರೋಧಿ ಹೋರಾಟದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು, ಹೋರಾಟದ ಜಾಥಾದಲ್ಲಿ ಪಾಲ್ಗೊಂಡದ್ದು, ವಿವಿಧ ಪ್ರದೇಶ ಗಳಲ್ಲಿ ಭಾಷಣ ಮಾಡಿದ್ದು, ಪರಿಸರ ಉಳಿಸುವ ಪ್ರಾಮುಖ್ಯವನ್ನು ಸರಕಾರಕ್ಕೆ, ಜನರಿಗೆ ತಿಳಿಸಲು ತಾವೇ ಉತ್ತರ ಕನ್ನಡದಲ್ಲಿ ಚುನಾವಣೆಗೆ ನಿಂತದ್ದು ಮೊದಲಾದವೆಲ್ಲವೂ ಸಾಕಷ್ಟು ಪ್ರಸಿದ್ಧ.
ಆದರೆ, ಪರಿಸರವಾದದ ಕುರಿತು ಕಾರಂತರು ವಿಭಿನ್ನ ಕಾಲಘಟ್ಟಗಳಲ್ಲಿ ಎರಡು ರೀತಿಯ ನಿಲುವು ತಳೆದದ್ದನ್ನು ಕೆ. ಉಲ್ಲಾಸ ಕಾರಂತರು ಗುರುತಿಸಿ ಇಲ್ಲಿ ದಾಖಲಿಸಿದ್ದಾರೆ. ಮೊದಲಿನಿಂದಲೂ ಕಾರಂತರಿಗೆ ಕೈಗಾರಿಕೆಗಳ ಕುರಿತು ಒಲವು, ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿದಿದ್ದವರು ಅವರು; ದೊಡ್ಡ ಕೈಗಾರಿಕೆಗಳ ವಿರುದ್ಧವಾಗಿದ್ದ, ಗುಡಿ ಕೈಗಾರಿಕೆಗಳಿಗೆ ಅತಿಯಾದ ಪ್ರಾಮುಖ್ಯ ನೀಡಬೇಕೆಂಬ ಗಾಂಧೀಜಿಯವರ ನಿಲುವನ್ನು ಕಾರಂತರು ಒಪ್ಪುತ್ತಿರಲಿಲ್ಲ.
1955ರ ಸಮಯದಲ್ಲಿ ಪ್ರಕಟಗೊಂಡ ‘ವಿಜ್ಞಾನ ಪ್ರಪಂಚ’ದಲ್ಲಿ ಅಣು ವಿದ್ಯುತ್‌ನಿಂದ ದೊರೆ ಯುವ ಲಾಭದ ಕುರಿತು ಬರೆದಿದ್ದರು. ಆದರೆ, 1980ರ ದಶಕದಲ್ಲಿ ಕೈಗಾ ಅಣುವಿದ್ಯುತ್ ಯೋಜನೆ ಯನ್ನು ಬಲವಾಗಿ ವಿರೋಧಿಸಿದವರಲ್ಲಿ ಕಾರಂತರು ಪ್ರಮುಖರು. ಈ ವೈರುಧ್ಯವನ್ನು ಕೆ. ಉಲ್ಲಾಸ ಕಾರಂತರು ಇಲ್ಲಿ ದಾಖಲಿಸಿದ್ದು, ಶಿವರಾಮ ಕಾರಂತರ ನಿಲುವಿನಲ್ಲಾದ ಬದಲಾವಣೆ ಯನ್ನು ಗುರುತಿಸಿದ್ದಾರೆ.
ಪರಿಸರ ವಾದದ ತಳಹದಿಯಲ್ಲಿ, ಉತ್ತರ ಕನ್ನಡದಿಂದ ಚುನಾವಣೆಗೆ ಕಾರಂತರು ಸ್ಪರ್ಧಿಸಿದ್ದರೂ, ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಅಮೆರಿಕಕ್ಕೆ ಹೋಗಿದ್ದರಿಂದ, ಅವರ ಪ್ರಚಾರವು ಅಬ್ಬರವನ್ನು ಕಳೆದುಕೊಂಡಿದ್ದು ನಿಜ; ಆದರೆ ಇದರಿಂದ ನಷ್ಟಕ್ಕೆ ಒಳಗಾದವರು ಅನಂತ್‌ನಾಗ್! ಜನತಾಪಕ್ಷದಿಂದ ಸ್ಪರ್ಧಿಸಿದ್ದ ಅನಂತ್‌ನಾಗ್ ಅವರಿಗೆ ಬೀಳಬೇಕಾಗಿದ್ದ ಕೆಲವು ಸಾವಿರ ಮತಗಳನ್ನು ಕಾರಂತರು (ಪಕ್ಷೇತರರು) ಸೆಳೆದದ್ದರಿಂದಾಗಿ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರು.
ಶಿವರಾಮ ಕಾರಂತರು ತಮ್ಮ ಸಂಪರ್ಕಕ್ಕೆ ಬರುವ ಜನರನ್ನು ಸರಿಯಾಗಿ ಅಳೆಯುವಲ್ಲಿ ಪರಿಣಿತ ರಲ್ಲ ಎಂದು ಈ ಪುಸ್ತಕದಲ್ಲಿ ದಾಖಲಿಸಿರುವ ಉಲ್ಲಾಸ ಕಾರಂತರು, ಕಾರಂತರ ಈ ಸ್ವಭಾವವನ್ನು ಹಲವರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದಿದ್ದಾರೆ (ಪುಟ 140). ಪರಿಸರ ವಾದದಲ್ಲೂ ಕಾರಂತರನ್ನು ಈ ರೀತಿಯ ಕೆಲವು ಹೋರಾಟಗಳಿಗೆ ಕೆಲವರು ಸೆಳೆದಿರಬಹುದು ಎಂದು ಇಲ್ಲಿ ಹೇಳಲಾಗಿದೆ.
‘ಗ್ರೋಯಿಂಗ್ ಅಪ್ ಕಾರಂತ್’ದಲ್ಲಿ ದಾಖಲೆಗೊಂಡ ಹಲವು ವಿಚಾರಗಳಲ್ಲಿ ಕಾರಂತರು ಮತ್ತು ಲೀಲಾ ಕಾರಂತರ ಬಾಂಧವ್ಯ ಮತ್ತು ಮಕ್ಕಳೊಂದಿಗೆ ತಾಯಿಯ ಒಡನಾಟಗಳು ಮುಖ್ಯ ಎನಿಸು ತ್ತವೆ. ಯುವ ಲೇಖಕರಾಗಿದ್ದ, ನೃತ್ಯ ಕಲಾವಿದರಾಗಿದ್ದ ಕಾರಂತರನ್ನು ಮದುವೆಯಾಗಲು ಬಯಸಿ ಬಂದವರು ಲೀಲಾ ಅವರು. ಆ ಕಾಲದಲ್ಲಿ ಅವರದ್ದು ಅಂತರ್ಜಾತೀಯ ವಿವಾಹ; ಎಲ್ಲೆಡೆ ಸುದ್ದಿ ಮಾಡಿದ್ದ ಆ ವಿವಾಹದಿಂದಾಗಿ, ಕಾರಂತರು ಖ್ಯಾತರೂ ಆದರು ಮತ್ತು ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸುದ್ದಿಯೂ ಆದರು. ಆದರೆ, ಅವರ ದಾಂಪತ್ಯವು ಕೊನೆ ಕೊನೆಗೆ ಅಷ್ಟೊಂದು ಸುಖಮಯವಾಗಿರಲಿಲ್ಲ ಎಂಬುದನ್ನು ಮಕ್ಕಳು ಈ ಪುಸ್ತಕದಲ್ಲಿ ದಾಖಲಿಸುತ್ತಾರೆ.
ಮಾನಸಿಕ ಸ್ಥಿತಿಯ ಏರುಪೇರುಗಳಿಗೆ ಸಿಲುಕಿಕೊಳ್ಳುತ್ತಿದ್ದ ಲೀಲಾ ಕಾರಂತರಿಂದಾಗಿ, ಕಾರಂತರೂ ಒತ್ತಡಗಳಿಗೆ ಸಿಲುಕಿದ್ದರು ಎಂದು ಅವರ ಮಕ್ಕಳು ಇಲ್ಲಿ ದಾಖಲಿಸಿ, ವಸ್ತು ಸ್ಥಿತಿಯನ್ನು ಬಿಡಿಸಿ ಟ್ಟಿದ್ದು ಗಮನಾರ್ಹ. ಕಾರಂತರ ಕೃತಿಗಳನ್ನು ಟೈಪ್ ಮಾಡಲು, ಅವರು ಡಿಕ್ಟೇಟ್ ಮಾಡಿದ್ದನ್ನು ಬರೆದುಕೊಂಡು ಪ್ರಕಟಣೆಗೆ ಸಿದ್ಧಗೊಳಿಸಲು ಅವರ ಕುಟುಂಬವನ್ನು ಪ್ರವೇಶಿಸಿದ ಸಹಾಯಕಿಯು, ಆ ಕುಟುಂಬದಲ್ಲಿ ಕೆಲವು ಒತ್ತಡದ ಸನ್ನಿವೇಶ ಸೃಷ್ಟಿಗೆ ಕಾರಣರಾದರು ಎಂದು ಈ ಪುಸ್ತಕದಲ್ಲಿ ದಾಖಲಾಗಿದೆ.
ಅವರ ಹೆಸರನ್ನು ಹೇಳದೇ ಇನಿಷಿಯಲ್ ಮೂಲಕ ಮಾತ್ರ ಗುರುತಿಸಿದ, ಆ ಸಹಾಯಕಿಯ ಕುರಿತ ಆರೆಂಟು ಪುಟಗಳಲ್ಲಿನ ನೇರ ಮತ್ತು ದಿಟ್ಟ ವಿವರಗಳು ಸಂಕ್ಷಿಪ್ತವಾಗಿ ಇವೆ. ಆ ಸಹಾಯಕಿಯು ಕಾರಂತರ ಬರಹಗಳನ್ನು ಸಂಪಾದಿಸಿ, ಸಿದ್ಧಪಡಿಸಿ, ಪ್ರಕಟಿಸುವಲ್ಲಿ ಅಪಾರ ಶ್ರಮ ವಹಿಸಿದ್ದನ್ನು, ಕನ್ನಡ ಸಾರಸ್ವತ ಲೋಕ ಸಾಕಷ್ಟು ಗೌರವದಿಂದಲೇ ಗುರುತಿಸಿದೆ ಎಂಬುದನ್ನು ನಾವಿಲ್ಲಿ ಗಮನಿಸ ಬಹುದು.
ಇಡೀ ಪುಸ್ತಕದಲ್ಲಿ ಪ್ರಮುಖ ಎನಿಸುವ ಮತ್ತು ತುಂಬಾ ಇಷ್ಟವಾಗುವ ಹಲವು ಭಾಗಗಳಿವೆ. ಅವು ಗಳಲ್ಲಿ ಒಂದು ಕಾರಂತರ ‘ಬಾಲವನ’. ಪುತ್ತೂರು ಸನಿಹದ ಬಾಲವನದಲ್ಲೇ ಅವರ ಮಕ್ಕಳು ಜನಿಸಿದ್ದರಿಂದಾಗಿ, ಅಲ್ಲಿನ ಆಪ್ತ ಮತ್ತು ವಿಶಿಷ್ಟ ವಿವರಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಕಾರಂತರ ಹಲವು ಒಡನಾಡಿಗಳು, ಕಾರಂತರ ಜೀವನದ ಮೇಲೆ ಪ್ರಭಾವ ಬೀರಿದ ಹಲವು ಪ್ರಮುಖ ವ್ಯಕ್ತಿಗಳ ಕುರಿತು ಬೇರೆಲ್ಲೂ ದೊರಕದ ಒಳನೋಟಗಳು ಇಲ್ಲಿವೆ.
ಕಾರ್ನಾಡು ಸದಾಶಿವರಾವ್ ರಂಥ ಸಾರಸ್ವತ ಪಂಗಡದ ಹಲವು ಪ್ರತಿಭಾವಂತರು ಕಾರಂತರ ಬದುಕನ್ನು ರೂಪಿಸುವಲ್ಲಿ ಬಹಳಷ್ಟು ಪ್ರಭಾವ ಬೀರಿದ್ದರು ಮತ್ತು ಅವರೆಲ್ಲರೂ ಕಾರಂತರ ಸಾರಸ್ವತ ಸಾಹಸಗಳಿಗೆ ಸಹಾಯ ಮಾಡಿದ್ದರು ಎಂಬ ವಿಚಾರವು ಇಲ್ಲಿ ಅಭಿಮಾನದಿಂದ ದಾಖ ಲಾಗಿದೆ. ಪುತ್ತೂರಿನ ಬಾಲವನದ ಸುತ್ತಮುತ್ತ ಕಾಡು ಪ್ರದೇಶವಿದ್ದು, ಅಲ್ಲಿನ ಪ್ರಕೃತಿಯು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿತು ಮತ್ತು ಆ ಪ್ರಕೃತಿಯನ್ನು ನೋಡಲು, ಅಧ್ಯಯನ ಮಾಡಲು ಕಾರಂತರು ತಮ್ಮ ಮಕ್ಕಳಿಗೆ ಅದೆಷ್ಟು ಸ್ವಾತಂತ್ರ್ಯ ನೀಡಿದ್ದರು ಎಂದು ಮಕ್ಕಳು ಬರೆದು ಕೊಂಡಿರು ವುದು ಕುತೂಹಲಕಾರಿ. ಬಾಲವನದ ಪಕ್ಕದಲ್ಲೇ ಚಿರತೆ ಹಾದುಹೋಗಿದ್ದನ್ನು ಸಹ ಮಕ್ಕಳು ನೋಡಿದ್ದರಂತೆ!
ಪುಸ್ತಕ ಪ್ರಕಟಣೆಯಲ್ಲಿ, ನೃತ್ಯದಲ್ಲಿ, ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ, ಕೌಟುಂಬಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ಕಾರಂತರು ದಿಟ್ಟ ನಿಲುವಿಗೆ ಸದಾ ಬದ್ಧರು; ಕುಟುಂಬ ಮತ್ತು ಸಂಸಾರದ ವಿಚಾರದಲ್ಲೂ ಇಂಥದ್ದೇ ನಡೆ, ಅದೇ ಕಾಠಿಣ್ಯ. ಮಕ್ಕಳು ಬೇರೆ ಊರುಗಳಲ್ಲಿ ಓದುತ್ತಿರುವಾಗ, ಅವರಲ್ಲಿ ಶಿಸ್ತು ಕಡಿಮೆ ಆಯಿತು ಎಂದು ಯಾರಾದರೂ ಹೇಳಿದರೆ, ತಕ್ಷಣ ಟೆಲಿಗ್ರಾಂ ಕಳಿಸಿ, ಮಕ್ಕಳನ್ನು ಕರೆಸಿ, ಬುದ್ಧಿ ಹೇಳುತ್ತಿದ್ದರಂತೆ!
ನಂತರದ ವರ್ಷಗಳಲ್ಲಿ ಕಾರಂತರು ಪುತ್ತೂರು ತೊರೆದು, ಕೋಟ ಸನಿಹದ ಸಾಲಿಗ್ರಾಮಕ್ಕೆ ಬಂದರು, ಅಲ್ಲೇ ನಿಂತರು. ತಮ್ಮ ಕೊನೆಗಾಲವನ್ನು ಅಲ್ಲೇ ಕಳೆದರು. ತಮ್ಮ ‘ತಾತ’ನ ಕುರಿತು ಮೂವರು ಮಕ್ಕಳು ಬರೆದಿರುವ ಈ ಪುಸ್ತಕವು ಹಲವು ಒಳನೋಟಗಳನ್ನು ಹೊಂದಿರುವ ವಿಶಿಷ್ಟ ಪುಸ್ತಕ. That was my Tata: the perennially angry man who I feared, admired and loved, all at the same time ಎಂದು ಉಲ್ಲಾಸ ಕಾರಂತರು ಇಲ್ಲಿ ಮೆಚ್ಚುಗೆಯಿಂದ ಬರೆದುಕೊಂಡಿದ್ದಾರೆ.
ಕಾರಂತರು ಆಗಿನ ಕಾಲದ ಸಾರಸ್ವತ ಲೋಕದ ‘ಆಂಗ್ರಿ ಯಂಗ್‌ಮ್ಯಾನ್!’ ಜತೆಗೆ, ಕೊನೆಯ ತನಕ ವೂ ಅವರು ತಮ್ಮ ಪ್ರಖರ ಸೃಜನಶೀಲತೆಯನ್ನು ಉಳಿಸಿಕೊಂಡಿದ್ದು, ಅದೇ ವೇಳೆಯಲ್ಲಿ ‘ಆಂಗ್ರಿ ಮ್ಯಾನ್’ ಮನೋಭಾವವನ್ನು ಉಳಿಸಿಕೊಂಡಿದ್ದರು! ಅದಕ್ಕೇ ತಾನೆ, ನಾವೆಲ್ಲಾ ಅವರನ್ನು ಪ್ರೀತಿ ಯಿಂದ ‘ಖಾರಂತರು’ ಎಂದು ಒಮ್ಮೊಮ್ಮೆ ಕರೆಯುವುದು! ಈ ಅಪರೂಪದ ಪುಸ್ತಕವನ್ನು ಕನ್ನಡದ ಓದುಗರು, ಕಾರಂತರ ಅಭಿಮಾನಿಗಳು, ಕನ್ನಡ ಸಾಹಿತ್ಯಾಸಕ್ತರೆಲ್ಲರೂ ಓದಲೇಬೇಕು! ಅಷ್ಟು ಒಳನೋಟಗಳನ್ನು ಹೊಂದಿರುವ ಪುಸ್ತಕವಿದು. ಈ ಪುಸ್ತಕದ ಆಯ್ದ ಭಾಗಗಳ ಕನ್ನಡ ಅನುವಾ ದವು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರಕಟಗೊಂಡಿತ್ತು. ಸದ್ಯದಲ್ಲೇ ಈ ಪುಸ್ತಕದ ಕನ್ನಡ ಅನುವಾದವು ಪ್ರಕಟಗೊಳ್ಳಲಿದೆ.