ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

ಸರಕಾರ ಈಗ ಹೊರಡಿಸಿರುವ ಆದೇಶದ ಪಾಲನೆಯನ್ನು ಮೊದಲಿನಿಂದಲೇ ಮಾಡಿಕೊಂಡು ಬರುತ್ತಿರು ವಾಗ ನಮ್ಮ ಯಾವ ಕಾರ್ಯಕ್ರಮಗಳಿಗೂ ತೊಂದರೆಯಾಗುವುದಿಲ್ಲ ಎನ್ನುವ ಸ್ಪಷ್ಟತೆಯಲ್ಲಿದ್ದಾರೆ. ಹಾಗಾದರೆ, ಈ ಆದೇಶದಿಂದ ಸರಕಾರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

-

ಅಶ್ವತ್ಥಕಟ್ಟೆ

ರಾಜ್ಯದಲ್ಲಿ ಕಳೆದೊಂದು ವಾರದಿಂದ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್‌ನ)ಚಟುವಟಿಕೆಗಳನ್ನು ನಿರ್ಬಂಧಿಸುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದರ ಕುರಿತಾಗಿದೆ. ಅದರಲ್ಲಿಯೂ ಚಿತ್ತಾಪುರದಲ್ಲಿ ನಡೆಸಬೇಕಿದ್ದ ಪಥ ಸಂಚಲನಕ್ಕೆ ನಿರ್ಬಂಧ ವಿಧಿಸಿದ್ದು, ಪಥ ಸಂಚಲನಕ್ಕೆ ಅವಕಾಶ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದು, ನ.೨ಕ್ಕೆ ಅವಕಾಶ ನೀಡಬೇಕೆಂದು ನಿರ್ದೇಶನ ನೀಡಿರುವುದು ನೋಡಿದ್ದೇವೆ.

ಈ ಎಲ್ಲ ಹೈಡ್ರಾಮಾದಿಂದ ಯಾರಿಗೆ ಲಾಭ-ನಷ್ಟ ಎನ್ನುವುದು ಈಗಲೂ ಯಕ್ಷಪ್ರಶ್ನೆ. ಹೌದು, ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ, ಸರಕಾರಿ ಜಾಗದಲ್ಲಿ ಸಂಘ ಪರಿವಾರದ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಮೊದಲು ಕಡ್ಡಾಯ ಅನುಮತಿ ಪಡೆಯುಬೇಕು ಎನ್ನುವ ಆದೇಶ ಮಾಡಬೇಕೆಂದು ಪತ್ರ ಬರೆದರು. ಈ ಪತ್ರ ಬರೆದಷ್ಟೇ ವೇಗವಾಗಿ, ಮುಖ್ಯಮಂತ್ರಿಗಳು ತಮಿಳುನಾಡು ಮಾದರಿಯನ್ನು ಕರ್ನಾಟಕದಲ್ಲಿಯೂ ಅನುಸರಿಸಬೇಕೆಂಬ ಆಲೋಚನೆಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿ, ಈ ಸಂಬಂಧ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು.

ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಅನುಮತಿ ಕಡ್ಡಾಯ’ ಎನ್ನುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಸರಕಾರ ಈ ತೀರ್ಮಾನ ಕೈಗೊಳ್ಳುವ ಸಮಯದಲ್ಲಿ 2013ರಲ್ಲಿ ಜಗದೀಶ್ ಶೆಟ್ಟರ್ ಅವರ ಸರಕಾರದ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನು ‘ಟ್ರಂಪ್ ಕಾರ್ಡ್’ ರೀತಿ ಬಳಸಿಕೊಂಡಿತ್ತು. ಆದರೆ ಆರೆಸ್ಸೆಸ್‌ನ ಕಾರ್ಯಕರ್ತರು ಹಾಗೂ ಪ್ರಚಾರಕರ ಪ್ರಕಾರ ಯಾವುದೇ ಕಾರ್ಯಕ್ರಮಕ್ಕೂ ಮೊದಲು ಸಂಘ ಅನುಮತಿಯನ್ನು ಈವರೆಗೆ ಪಡೆದುಕೊಂಡೇ ಬಂದಿದೆ. ಮುಂದೆಯೂ ಪಡೆದುಕೊಳ್ಳುತ್ತದೆ.

ಸರಕಾರ ಈಗ ಹೊರಡಿಸಿರುವ ಆದೇಶದ ಪಾಲನೆಯನ್ನು ಮೊದಲಿನಿಂದಲೇ ಮಾಡಿಕೊಂಡು ಬರುತ್ತಿರುವಾಗ ನಮ್ಮ ಯಾವ ಕಾರ್ಯಕ್ರಮಗಳಿಗೂ ತೊಂದರೆಯಾಗುವುದಿಲ್ಲ ಎನ್ನುವ ಸ್ಪಷ್ಟತೆ ಯಲ್ಲಿದ್ದಾರೆ. ಹಾಗಾದರೆ, ಈ ಆದೇಶದಿಂದ ಸರಕಾರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ:Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

ಏಕೆಂದರೆ, ಸಂಘ ಪರಿವಾರಕ್ಕೆ ಬಿಜೆಪಿಯನ್ನು ಮೀರಿದ ‘ಶಕ್ತಿ’ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಂಘವನ್ನು ಒಪ್ಪುವ ಅನೇಕರು ಬಿಜೆಪಿಯ ‘ಒಳ ರಾಜಕೀಯ’ದಿಂದಾಗಿ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈ ರೀತಿ ಅಂತರ ಕಾಯ್ದುಕೊಂಡವರಲ್ಲಿ ಬಹುತೇಕರು ‘ತಟಸ್ಥ’ ರಾಗಿದ್ದಾರೆ. ತಟಸ್ಥರಾಗಿದ್ದರೂ, ಆರೆಸ್ಸೆಸ್‌ನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಹೀಗಿರುವಾಗ ನಿರ್ಬಂಧದ ತೀರ್ಮಾನದಿಂದ ಸಂಘದ ಚಟುವಟಿಕೆಗಳಿಗೆ ಸರಕಾರ ಅಡ್ಡಿಪಡಿಸುತ್ತಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ನಿಲ್ಲಲಿದ್ದಾರೆ. ರಾಜ್ಯ ಸರಕಾರ ತೆಗೆದುಕೊಂಡಿರುವ ಈ ತೀರ್ಮಾನದಿಂದ ಆರೆಸ್ಸೆಸ್ ವಿರೋಧಿಗಳೆಲ್ಲ ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರೆ ಎನ್ನುವುದು ನಿಜವಲ್ಲ. ಆದರೆ ಆರೆಸ್ಸೆಸ್ ಪರವಾಗಿರುವವರು ಒಟ್ಟಾಗುವುದು ಸ್ಪಷ್ಟ. ಈ ವಿಷಯದಲ್ಲಿ ಸಂಘದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸಂಘದ ಇತಿಹಾಸದಲ್ಲಿಯೇ, ತನ್ನ ವಿರುದ್ಧದ ಟೀಕೆ-ಟಿಪ್ಪಣಿಗಳಿಗೆ ಪ್ರತಿಕ್ರಿಯಿಸಿರುವ ಉದಾಹರಣೆ ಯಿಲ್ಲ. ಆದರೆ ಈ ಹಿಂದಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಹಿರಂಗವಾಗಿ ಹೇಳಿಕೆ ನೀಡುವುದಿಲ್ಲವಾದರೂ, ತಮ್ಮ ಕಾರ್ಯದ ಮೂಲಕವೇ ಪ್ರತಿಕ್ರಿಯಿಸಿರುವ ನಿದರ್ಶನ ಗಳಿವೆ.

ರಾಜಕೀಯವಾಗಿಯೇ ಪ್ರತಿಕ್ರಿಯೆ ನೀಡಬೇಕು ಎನ್ನುವ ಅನಿವಾರ್ಯತೆ ಸೃಷ್ಟಿಯಾದಾಗಲೆಲ್ಲ, ಚುನಾವಣೆಯ ಸಮಯದಲ್ಲಿ ತಮ್ಮ ಸ್ವಯಂಸೇವಕರನ್ನು ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡು ವಂತೆ ಮಾಡಿ, ಫಲಿತಾಂಶಗಳನ್ನು ತಲೆಕೆಳಗೆ ಮಾಡಿರುವ ಹತ್ತಾರು ಉದಾಹರಣೆ ನೀಡಬಹುದು. ಕಮ್ಯುನಿಸ್ಟರ ಹಿಡಿತದಲ್ಲಿದ್ದ ತ್ರಿಪುರದಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದಲ್ಲಿ ಗೆಲ್ಲಿಸಿಕೊಂಡು ಬಂದಿದ್ದು, ಮಹಾರಾಷ್ಟ್ರ ಚುನಾವಣೆಯಲ್ಲಿ ಐತಿಹಾಸಿಕ ಸಂಖ್ಯಾಬಲ ಸಿಗುವಂತೆ ಮಾಡಿದ್ದು ಸೇರಿದಂತೆ ಹಲವು ನಿದರ್ಶನಗಳಿವೆ.

ಆರೆಸ್ಸೆಸ್‌ನ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂಬ ಚರ್ಚೆ ಬರುವುದಕ್ಕೂ ‘ದೂರಾಲೋಚನೆ’ ಇತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಶತಮಾನೋತ್ಸವ ಸಂಭ್ರಮದಲ್ಲಿರುವ ಆರೆಸ್ಸೆಸ್ ಅನ್ನು ನಿರ್ಬಂಧ ಮಾಡಬೇಕೆಂದು ಚರ್ಚೆ ಆರಂಭಿಸುತ್ತಿದ್ದಂತೆ, ಇದಕ್ಕೆ ಸಂಘ ಪರಿವಾರ ಪ್ರತಿಕ್ರಿಯಿಸುತ್ತದೆ.

ಆ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಇದರಿಂದ ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಸಡಗರದಲ್ಲಿ ‘ಇರಿಸು-ಮುರಿಸು’ ಉಂಟು ಮಾಡಬಹುದು ಎನ್ನುವ ಲೆಕ್ಕಾಚಾರ ಅನೇಕರಲ್ಲಿತ್ತು. ಅದಕ್ಕೆ ಪೂರಕವಾಗಿ ತಮಿಳುನಾಡು ಸರಕಾರದ ತೀರ್ಮಾನ, ಕೇರಳದಲ್ಲಿ ಯುವಕನೊಬ್ಬನ ಲೈಂಗಿಕ ಕಿರುಕುಳ ಆರೋಪ ಎನ್ನುವ ವಿಷಯಗಳನ್ನು ಸೇರಿಸಿ ಸಂಘದ ವಿರುದ್ಧ ಬಹುದೊಡ್ಡ ಹೋರಾಟ ನಡೆಸಬಹುದು ಎನ್ನುವ ಆಲೋಚನೆಯಲ್ಲಿಯೇ ಪಕ್ಷದ ಹೈಕಮಾಂಡ್ ಸಹ ಪ್ರಿಯಾಂಕ್ ಅವರಿಗೆ ಒಪ್ಪಿಗೆ ನೀಡಿತ್ತು.

ಆದರೆ ನಿರ್ಬಂಧಿಸುವ ಬಗ್ಗೆ ಸಂಪುಟದಲ್ಲಿ ತೀರ್ಮಾನ ಕೈಗೊಂಡರೂ, ಆರೆಸ್ಸೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೋಗಲಿ, ಹೆಚ್ಚುವರಿ ಪಥ ಸಂಚಲನ, ಕಾರ್ಯಕ್ರಮಗಳನ್ನು ನಡೆಸುತ್ತಾರೆ, ಅದನ್ನು ನಿರ್ಬಂಧಿಸುವ ಮೂಲಕ ಚರ್ಚೆಗೆ ವೇದಿಕೆ ಸಿದ್ಧಪಡಿಸಿಕೊಳ್ಳಬಹುದು ಎಂದರೆ ಅದಕ್ಕೂ ಅವಕಾಶ ಸಿಗಲಿಲ್ಲ.

ಬದಲಿಗೆ ಶತಮಾನೋತ್ಸವದ ನಿಮಿತ್ತ ಏನು ಮಾಡಬೇಕಿತ್ತೋ ಅದನ್ನು ‘ಅಚ್ಚುಕಟ್ಟಾಗಿ’ ಮಾಡಿ ಮೌನಕ್ಕೆ ಶರಣಾಗಿತ್ತು ಆರೆಸ್ಸೆಸ್. ಚಿತ್ತಾಪುರದಲ್ಲಿ ಅನುಮತಿ ನೀಡಲೇ ಇಲ್ಲ ಎನ್ನುವ ಕಾರಣಕ್ಕೆ ಹೈಕೋರ್ಟ್ ಹೋಗಿ, ನ.೨ರಂದು ನಡೆಸುವುದಕ್ಕೆ ಬೇಕಾದ ಕಾನೂನು ರಕ್ಷಣೆಗಳನ್ನು ತಗೆದು ಕೊಂಡಿದೆ.

ಬದಲಿಗೆ ಆರೆಸ್ಸೆಸ್ ವಿರುದ್ಧ ಯಾರೇ ಪೋಸ್ಟ್ ಮಾಡಿದರೂ, ಅಲ್ಲಿ ತೀವ್ರ ಆಕ್ರೋಶವನ್ನು ಸಾರ್ವಜನಿಕರೇ ಹೊರಹಾಕಿದ್ದು ನೋಡಿ ಹಲವು ಕಾಂಗ್ರೆಸಿಗರಿಗೆ ಇದರ ಸೂಕ್ಷ್ಮತೆ ಅರಿವಿಗೆ ಬಂತು. ಹಾಗೆ ನೋಡಿದರೆ, ಸಂಘ ಪರಿವಾರದ ವತಿಯಿಂದ ನಡೆಯುತ್ತಿರುವ ಪಥಸಂಚಲನಗಳು ಇದೇ ಮೊದಲಲ್ಲ. ಪ್ರತಿವರ್ಷ ವಿಜಯದಶಮಿಯ ಬಳಿಕ ರಾಷ್ಟ್ರಾದ್ಯಂತ ಈ ರೀತಿಯ ಪಥಸಂಚಲನ ಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಇತಿಹಾಸದಲ್ಲಿ ನಡೆದಿರುವ ಬಹುತೇಕ ಪಥ ಸಂಚಲನ ಶಿಸ್ತು ಹಾಗೂ ಶಾಂತಿಯಿಂದ ಮುಗಿದಿರು ವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದಿಷ್ಟೇ ಅಲ್ಲದೇ, ಯಾವುದೇ ಪಥಸಂಚಲನಕ್ಕೆ ಮೊದಲು ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕೆಂಬ ‘ನಿಯಮ’ವನ್ನು ಜಾರಿಗೊಳಿಸಿರುವುದಾಗಿ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಆರೆಸ್ಸೆಸ್ ಮಾತ್ರವಲ್ಲ, ಯಾವುದೇ ಸಂಘಟನೆ ಪಥಸಂಚಲನ ನಡೆಸಬೇಕು ಎಂದರೂ ಈ ಹಿಂದೆಯೂ ಅನುಮತಿ ಪಡೆಯಬೇಕಿತ್ತು,

ಈಗಲೂ ಪಡೆಯಬೇಕು, ಮುಂದೆಯೂ ಪಡೆಯಬೇಕು. ಅದೇ ರೀತಿಯಲ್ಲಿ ಸಂಘ ಪರಿವಾರದವರೂ ತಮ್ಮ ಕಾರ್ಯಕ್ರಮ ಅಥವಾ ಪಥಸಂಚಲನದ ಸಮಯದಲ್ಲಿ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದಿದ್ದಾರೆ. ಯಾವುದೇ ಅನುಮತಿ ಪಡೆಯುವ ಸಮಯದಲ್ಲಿ ಬೇಕಿರುವ ‘ಅಗತ್ಯ’ ದಾಖಲೆಗಳನ್ನು ನೀಡಿದ ಬಳಿಕವೇ ಸ್ಥಳೀಯ ಆಡಳಿತವು ಅನುಮತಿಯನ್ನು ನೀಡುವುದು ಎನ್ನುವುದು ಸ್ಪಷ್ಟ.

ಆದರೆ ಈ ಬಾರಿ ನಿರ್ಬಂಧದ ನೆಪದಲ್ಲಿ ಆರೆಸ್ಸೆಸ್‌ನ ಪಥಸಂಚಲನಕ್ಕೆ ವಿಶೇಷ ಪ್ರಚಾರವನ್ನು ಕಾಂಗ್ರೆಸ್ಸಿಗರೇ ನೀಡಿದರು ಎನ್ನುವುದು ವಾಸ್ತವ. ಈಗಾಗಲೇ ರಾಜ್ಯಾದ್ಯಂತ ಆರೆಸ್ಸೆಸ್‌ನ ಪಥಸಂಚಲನ ಮುಕ್ತಾಯವಾಗಿದೆ. ಚಿತ್ತಾಪುರ, ಸೇಡಂ, ಯಡ್ರಾಮಿಯಲ್ಲಿ ಮಾತ್ರ ನ.೨ಕ್ಕೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ನಿರ್ಬಂಧ, ಅನುಮತಿ ನಿರಾಕರಣೆ, ಅಧಿಕಾರಿಯ ಅಮಾನತು ವಿಷಯದಲ್ಲಿ ರಾಜ್ಯಾದ್ಯಂತ ಇಷ್ಟೆಲ್ಲ ಚರ್ಚೆಯಾದರೂ ಆರೆಸ್ಸೆಸ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಪಥಸಂಚಲನದ ಮೂಲಕ ತನ್ನ ಕಾರ್ಯಕರ್ತರ ಪಡೆಯನ್ನು ತೋರಿಸುವಲ್ಲಿ ಅದು ಯಶಸ್ವಿಯಾಗಿದೆ.

ಉದಾಹರಣೆಗೆ ಭಾನುವಾರ ಒಂದೇ ದಿನ ಬೆಂಗಳೂರು ಒಂದರಲ್ಲಿಯೇ ನೂರಕ್ಕೂ ಹೆಚ್ಚು ಭಾಗ ದಲ್ಲಿ ಪಥಸಂಚಲನವನ್ನು ನಡೆಸಲಾಗಿದೆ. ಇದರಲ್ಲಿ ೨೪ ಸಾವಿರ ಜನರು ಸೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಸೇರಿದ್ದು ಮಾತ್ರ ೩೪ ಸಾವಿರ ಮಂದಿ!

ಹಾಗೆ ನೋಡಿದರೆ, ಸಂಘ ಪರಿವಾರವನ್ನು ನಿರ್ಬಂಧಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಪ್ರಿಯಾಂಕ್ ಖರ್ಗೆಯವರನ್ನು ಬೆಂಬಲಿಸಿ ಪ್ರತಿಕ್ರಿಯಿಸಿಲ್ಲ ಎನ್ನುವುದು ಎಷ್ಟು ಸತ್ಯವೋ, ಬಿಜೆಪಿ ಗರು ಆರೆಸ್ಸೆಸ್ ಪರವಾಗಿ ನಿಲ್ಲಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಸಂಘ ಪರಿವಾರದ ಪ್ರಮುಖರು ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಘವನ್ನು ಬಲ್ಲ ಎಲ್ಲರಿಗೂ ಗೊತ್ತಿತ್ತು. ಆದರೆ ಬಿಜೆಪಿ ಪಕ್ಷವಾಗಿ, ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಬಹು ದಾಗಿತ್ತು.

ಆದರೆ ಬಿಜೆಪಿಯ ಬಹುತೇಕ ನಾಯಕರು ಆರೆಸ್ಸೆಸ್‌ನ ನಿರ್ಬಂಧದ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾದರೇ ಹೊರತು, ಈ ವಿಷಯವನ್ನು ಸರಕಾರದ ವಿರುದ್ಧ ಯಾವ ರೀತಿ ಜನಾಕ್ರೋಶವಾಗಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಆಲೋಚನೆ ಮಾಡಲಿಲ್ಲ. ಸರಕಾರದ ತೀರ್ಮಾನದಿಂದ ಸಂಘವನ್ನು ರಕ್ಷಿಸಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಹೋರಾಡಬೇಕಿತ್ತು ಎನ್ನುವುದಕ್ಕಿಂತ, ಕುಸಿದು ಹೋಗಿರುವ ಬಿಜೆಪಿ ಸಂಘಟನೆಗೆ ‘ಬಲ’ ನೀಡುವ ಉದ್ದೇಶದಿಂದಾದರೂ ಈ ವಿಷಯವನ್ನು ಮತ್ತಷ್ಟು ಗಟ್ಟಿಯಾಗಿ ತೆಗೆದುಕೊಳ್ಳಬಹುದಾಗಿತ್ತು.

ಆದರೆ ಬಿಜೆಪಿಯ ಬಹುತೇಕ ನಾಯಕರು ‘ಟ್ವೀಟ್ ವಾರ್’ ನಡೆಸಿ, ಅಲ್ಲಿಗೆ ನಮಗೂ ಈ ಘಟನೆಗೂ ಸಂಬಂಧ ಮುಗಿಯಿತು ಎನ್ನುವ ರೀತಿಯಲ್ಲಿ ನಡೆದುಕೊಂಡರು ಎಂದರೆ ತಪ್ಪಾಗುವುದಿಲ್ಲ. ಆದರೆ ಒಟ್ಟಾರೆ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದು ಮಾತ್ರ ಕಾಂಗ್ರೆಸ್ಸಿಗರು. ಈ ವಿಷಯದ ಸೂಕ್ಷ್ಮತೆ ಅರಿತ ಬಹುತೇಕರು ಆರಂಭದಲ್ಲಿಯೇ ದೂರ ಉಳಿಯಲು ಪ್ರಯತ್ನಿಸಿದರು.

ಆದರೆ ಕೆಲವರು ಎಐಸಿಸಿ ಅಧ್ಯಕ್ಷರ ಮಗನಿಂದ ಶುರುವಾಗಿರುವ ಕಾರಣಕ್ಕೆ ‘ಹೇಳಿಕೆ’ಗಳಿಗೆ ಸೀಮಿತವಾದರು. ಆದರೆ ಸಂಘದ ವಿರುದ್ಧ ವಾಗ್ದಾಳಿ ಆರಂಭಿಸಿದ್ದ ಪ್ರಿಯಾಂಕ್ ಖರ್ಗೆ ಮಾತ್ರ ಹಿಂದೆ ಹೋಗಲಾಗದ ಸ್ಥಿತಿಯಲ್ಲಿದ್ದಾರೆ ಎನ್ನುವುದು ಸ್ಪಷ್ಟ. ಸಂಘದ ವಿಷಯದಲ್ಲಿ ಕಾಂಗ್ರೆಸ್ಸಿಗರ ನಿಲುವನ್ನು ನೋಡಿದರೆ, ಆರೆಸ್ಸೆಸ್‌ಗೆ ಬೈದರೆ ಗಾಂಧಿ ಕುಟುಂಬದ ಕೃಪೆ ಸಿಗುತ್ತದೆ ಎನ್ನುವ ಆಲೋಚನೆಯಲ್ಲಿ ಅನೇಕರಿದ್ದಾರೆ.

ಈ ಕಾರಣಕ್ಕಾಗಿಯೇ, ಶತಮಾನೋತ್ಸವದ ಹೊಸ್ತಿಲಿನಲ್ಲಿ, ಇಡೀ ವರ್ಷ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದರಿಂದ ಅದಕ್ಕೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಅವರು ಈ ರೀತಿ ಪತ್ರ ಬರೆದಂತೆ ಮಾಡಿ, ‘ಇನ್ನು ಮುಂದೆ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಕಡ್ಡಾಯ’ ಎನ್ನುವ ಆದೇಶವನ್ನು ಮತ್ತೊಮ್ಮೆ ಹೊರಡಿಸುವಂತೆ ನೋಡಿಕೊಂಡಿದ್ದಾರೆ.

ಇದರೊಂದಿಗೆ ಸರಕಾರಿ ನೌಕರಿಯಲ್ಲಿರುವವರು ಸಂಘದ ಪಥಸಂಚಲನದಲ್ಲಿ ಭಾಗವಹಿಸ ದಂತೆಯೂ ನಿರ್ಬಂಧ ಹೇರಿ, ಒಂದು ಹೆಜ್ಜೆ ಮುಂದೆ ಹೋಗಿ ತಮ್ಮಇಲಾಖೆಯ ಪಿಡಿಒ ಒಬ್ಬರು ಗಣವೇಷ ಹಾಕಿ, ಪರೇಡ್‌ನಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ಅಮಾನತಿನ ಶಿಕ್ಷೆ ನೀಡಿದ್ದಾರೆ. ಈ ಎಲ್ಲಕ್ಕೂ ಪಕ್ಷದ ‘ಒಡ್ಡೋಲಗ’ದಲ್ಲಿ ಆರಂಭದಲ್ಲಿ ಶಹಬಾಸ್‌ಗಿರಿ ಬಂತಾದರೂ, ಬಳಿಕ ಸಾರ್ವಜನಿಕವಾಗಿ ಶುರುವಾದ ಪ್ರತಿರೋಧವು ಕಾಂಗ್ರೆಸ್ಸಿಗರು ‘ಮೌನ’ಕ್ಕೆ ಶರಣಾಗುವಂತೆ ಮಾಡಿತ್ತು.

ಆದರೆ ಒಂದಂತೂ ಸತ್ಯ, ಇಷ್ಟೆಲ್ಲ ರಾಜಕೀಯ ಮೇಲಾಟವಾಗುತ್ತಿದ್ದರೂ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ‘ಯಥಾ ಪುರಾ ಆಸೀತ್ ತಥಾ ಭವಿಷ್ಯೆ ಅಪಿ ಭವಿಷ್ಯತಿ’ ಎನ್ನುವ ತತ್ವದಲ್ಲಿ ಸಂಘ ತನ್ನ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವುದು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿರುವುದಂತೂ ಸತ್ಯ.