ಶಿಶಿರಕಾಲ
ನಾವೆಲ್ಲ ನೆನಪನ್ನು ಒಂದು ಉಗ್ರಾಣ ಎಂದು ಭಾವಿಸಿದ್ದೇವೆ. ಬದುಕು ನಡೆಯು ತ್ತದೆ, ಮೆದುಳು ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಹೋಗುತ್ತದೆ, ಮತ್ತು ಬೇಕಾ ದಾಗ ಉಗ್ರಾಣಕ್ಕೆ ಹೋಗಿ ಆ ಫೈಲ್ ತೆಗೆದು ನೋಡುತ್ತದೆ- ಎಂದು. ನೆನಪೆಂದರೆ ಒಂದು ರೀತಿಯ ಲೈಬ್ರರಿ ಎಂದು. ನಮ್ಮ ನೆನಪು ಕೆಲಸ ಮಾಡುವ ರೀತಿ ಕಂಪ್ಯೂ ಟರ್ ರೀತಿ ಎನ್ನುವುದು ಹೌದೆ?
ಮೂರೂರಿನಲ್ಲಿ ನನ್ನ ಸೋದರಮಾವನ ಮಗಳ ಮದುವೆ ಸಂದರ್ಭ. ಬೇಸಿಗೆಯ ಸೆಖೆ ಯಲ್ಲಿ ನಡೆಯುವ ಮದುವೆಯ ಕಥೆ ಗೊತ್ತಲ್ಲ ! ಅದಾಗಲೇ ಬಹುತೇಕರ ಬಟ್ಟೆ ರವಿಚಂದ್ರನ್ ಚಲನಚಿತ್ರದ ಹೀರೋ ಹೀರೋಯಿನ್ ತರಹ ಒದ್ದೆಯಾಗಿತ್ತು, ಬೆವರಿಗೆ. ಊಟದ ಪಂಕ್ತಿಯಲ್ಲಿ ಮೇಲೆ ಹಾಕಿದ ಫ್ಯಾನುಗಳು ಬಿಸಿ ಗಾಳಿಯನ್ನು ಒಂದು ಚೂರು ಕೂಡ ಹಾಳು ಮಾಡದೇ ತಗಡಿನಿಂದ ನೇರವಾಗಿ ಕೆಳಗಿರುವ ನೆಂಟರನ್ನು ಇನ್ನಷ್ಟು ಬಿಸಿ ಮಾಡುತ್ತಿದ್ದವು!
ಎರಡು ಫ್ಯಾನಿನ ನಡುವೆ ಸೀಟು ಸಿಕ್ಕವರಿಗೆ ಬಿಸಿ ಗಾಳಿಯ ಕನಿಷ್ಠ ಪುಣ್ಯವೂ ಇಲ್ಲ. ಒಟ್ಟಾರೆ ಊಟದ ಪಂಕ್ತಿಯಲ್ಲಿ ಎಲ್ಲರೂ ನಡು ಬಗ್ಗಿಸಿ, ಬೆವರಿಳಿಸಿ ಊಟ ಮಾಡುತ್ತಿದ್ದರು!
ನಾನೀಗ ಹೇಳಲು ಹೊರಟಿರುವ ಕುಶಾಲಿನ ಜಟಾಪಟಿ ನಡೆದದ್ದು ಪಾಯಸ ಮತ್ತು ಎರಡನೇ ಬಾರಿ ಜಿಲೇಬಿ ಬರುವ ನಡುವಿನ ಆ ಐದು ನಿಮಿಷದ ಗ್ಯಾಪ್‌ನಲ್ಲಿ. ಗಲಾಟೆಯ ವಿಷಯ ಏನೆಂದು ಕೇಳಿದಿರಾ? ವರದಕ್ಷಿಣೆಯ ವಿಚಾರವೂ ಅಲ್ಲ, ಆಸ್ತಿ ಅಥವಾ ರಾಜಕೀಯ ವಿಷಯವೂ ಅಲ್ಲ, ಬೀಗರ ಗಲಾಟೆಯೂ ಅಲ್ಲ. ವಿಷಯ ತೀರಾ ಪೊಕ್ಕು. ಮೂವತ್ತೈದು ವರ್ಷದ ಹಿಂದೆ ನಮ್ಮೂರಲ್ಲಿ ಆದ ನೆರೆಹಾವಳಿ- ಅತಿವೃಷ್ಟಿ ಯಾವ ಇಸವಿಯಲ್ಲಿ ಆಗಿದ್ದು ಎಂದು!
ನಮ್ಮ ಊರಿನ ಅಧಿಕೃತ ಇತಿಹಾಸಕಾರ ಎಂದು ಸ್ವತಃ ತಮ್ಮನ್ನು ತಾವೇ ನೇಮಿಸಿಕೊಂಡಿ ರುವ ಪುಟ್ಟಣ್ಣ ಹೆಗಡೇರು ಶಂಕ್ರಪ್ಪ ಆಚಾರಿಯ ಕೊಟ್ಟಿಗೆ ಕೊಚ್ಚಿಕೊಂಡು ಹೋದ ದೊಡ್ಡ ನೆರೆ ಬಂದದ್ದು 1989ರಲ್ಲಿ. ಅದೇ ವರ್ಷ ಶಾರದತ್ತೆ ಮದುವೆ ಆಗಿತ್ತು.
ಇದನ್ನೂ ಓದಿ: Shishir Hegde Column: ಜೀವ ವಿಕಸನಕ್ಕೆ ನೋವು ಬೇಕೇ ಬೇಕು !
ಹೌದು, ಆ ವರ್ಷವೇ ನೆರೆಹಾವಳಿ! ಅವರು ಹೇಳಿದ ಧಾಟಿ ಹೇಗಿತ್ತೆಂದರೆ, ಹೈಕೋರ್ಟ್ ಜಡ್ಜ್ ತೀರ್ಪು ಓದಿ ಪೆನ್ನು ಕೆಳಕ್ಕಿಟ್ಟಂತೆ! ಕೇಸ್ ಮೊಕ್ಲಿಕ್. ಅದನ್ನು ಕೇಳಿದ ಗಣಪಯ್ಯ ಮಾವ ಶಾಂತವಾಗಿ ಬಾಳೆಲೆಯಿಂದ ತಲೆ ಮೇಲಕ್ಕೆತ್ತುತ್ತ, ಅಷ್ಟೇ ಖಚಿತವಾಗಿ: ಅದು 1991.
ಆಗ ತಾನೇ ನಾನು ರಾಜದೂತ್ ತಗೊಂಡಿದ್ದೆ, ಅದಕ್ಕೇ ನೆನಪು. ಎಂತದ್ದು ರಾಜದೂತ್? ನೀನು ರಾಜದೂತ್ ತಗೊಂಡದ್ದು ಬಾಬರಿ ಮಸೀದಿ ಆದ ಮೇಲೆ! ಇಲ್ಲಪ್ಪ ಆ ನೆರೆ ನೀರಲ್ಲಿ ಮೊಣಕಾಲವರೆಗೆ ನೀರಿದ್ದ ಹಳ್ಳ ದಾಟಿದ್ದೇ ನಾನು! ಅಯ್ಯೋ, ನೀನು ಆ ಮಳೆಗಾಲ ಪೂರ್ತಿ ಹುಬ್ಬಳ್ಳಿಯಲ್ಲಿದ್ದೆ ಮಾರಾಯ!
ಇನ್ನಿಬ್ಬರು ಮಾತಿಗೆ ಜೊತೆಯಾದರು. ಇಲ್ಲಪ್ಪಾ.. ಆಗ ದೊಡ್ಡ ಬೊಮ್ಮಾಯಿ ಮುಖ್ಯ ಮಂತ್ರಿಯಾಗಿದ್ದರು, ಹಾಗಾಗಿ ಅದು 1989! ಎಹ್ ನನಗೆ ನೆನಪಿದೆ, ವೀರೇಂದ್ರ ಪಾಟೀಲರು ಆಗ ಮುಖ್ಯಮಂತ್ರಿ- ನೆರೆಹಾವಳಿ ಬಂದದ್ದು 1989. ಬಿಲ್ಕುಲ್, ನೆರೆಹಾವಳಿ ಯಲ್ಲಿ ಗಂಜಿ ಕೇಂದ್ರ ಘೋಷಿಸಿದ್ದು ಬಂಗಾರಪ್ಪ - ಹಾಗಾಗಿ 1991!
ಪ್ರತಿಯೊಬ್ಬರಿಗೂ ಅವರು ಹೇಳುತ್ತಿರುವುದು ಸತ್ಯವೆಂದು ನೂರಕ್ಕೆ ನೂರು ಖಾತ್ರಿ. ಪ್ರತಿಯೊಬ್ಬರ ನೆನಪಿಗೂ ಅವರದೇ ಸಾಕ್ಷಿಗಳು. ಬಂದ ನೆರೆಹಾವಳಿ ಒಂದೇ ಆದರೂ, ಪ್ರತಿಯೊಬ್ಬರ ನೆನಪಿನಲ್ಲೂ ಅವರದೇ ನೆನಪಿನ ‘ನೆರೆಹಾವಳಿ’!
ಊಟ ಮುಗಿಯುವ ಹೊತ್ತಿಗೆ ಎಲ್ಲರೂ ಒಪ್ಪಿಕೊಂಡ ಒಂದೇ ವಿಷಯವೆಂದರೆ- ಉಳಿದವ ರೆಲ್ಲರ ನೆನಪು ಸರಿಯಿಲ್ಲ - ನನಗೆ ನೆನಪಿದ್ದದ್ದೇ ಸರಿ! ಆದರೇನು ಗೊತ್ತಾ.. ಆ ಪಂಕ್ತಿಯಲ್ಲಿ ಯಾರೊಬ್ಬರೂ ಸುಳ್ಳು ಹೇಳುತ್ತಿರಲಿಲ್ಲ. ಪ್ರತಿಯೊಬ್ಬರೂ ಸತ್ಯವನ್ನೇ ಹೇಳುತ್ತಿದ್ದರು- ಅವರವರ ನೆನಪಿನಲ್ಲಿ ಇದ್ದ ಹಾಗೆ. ತನಗೆ ನೆನಪಿದ್ದದ್ದೇ ಸತ್ಯ ಎನ್ನುವುದನ್ನು ಯಾರೊ ಬ್ಬರೂ ಬಿಟ್ಟುಕೊಡಲು ತಯಾರಿರಲಿಲ್ಲ!
ಇದು ಕೇವಲ ನನ್ನ ಕುಟುಂಬದ ಕಥೆಯಲ್ಲ. ಪ್ರತಿ ಭಾಷೆಯ, ಪ್ರತಿ ಊರಿನ, ಸತ್ಯ ನಾರಾಯಣ ಕಥೆ, ಸ್ನೇಹಕೂಟ, ಮದುವೆ ಪಂಕ್ತಿ ಹೀಗೆ ನಾಲ್ಕು ಜನ ಸೇರಿದಾಗ, ತಮ್ಮ ಗತಕಾಲವನ್ನು ನೆನಪು ಮಾಡಿಕೊಳ್ಳುವಾಗಲೆಲ್ಲ ಇದೇ ಸನ್ನಿವೇಶ ನಡೆಯುತ್ತದೆ. ಒಂದೇ ಘಟನೆ, ಆದರೆ ಒಬ್ಬೊಬ್ಬೊರದು ಒಂದೊಂದು ನೆನಪು.
ಎಲ್ಲರಿಗೂ ತಮ್ಮ ನೆನಪಿನ ಮೇಲೆ ಎಲ್ಲಿಲ್ಲದ ನಂಬಿಕೆ, ದೃಢತೆ. ಅದೇಕೆ ಹೀಗೆ? ನಾವೆಲ್ಲ ನೆನಪನ್ನು ಒಂದು ಉಗ್ರಾಣ ಎಂದು ಭಾವಿಸಿದ್ದೇವೆ. ಬದುಕು ನಡೆಯುತ್ತದೆ, ಮೆದುಳು ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಹೋಗುತ್ತದೆ, ಮತ್ತು ಬೇಕಾದಾಗ ಉಗ್ರಾಣಕ್ಕೆ ಹೋಗಿ ಆ ಫೈಲ್ ತೆಗೆದು ನೋಡುತ್ತದೆ- ಎಂದು.
ನೆನಪೆಂದರೆ ಒಂದು ರೀತಿಯ ಲೈಬ್ರರಿ, ಕಂಪ್ಯೂಟರಿನ ಹಾರ್ಡ್ ಡಿಸ್ಕ್, ತಲೆಬುರುಡೆಯೊಳಗೆ ಭದ್ರವಾಗಿ ಇಟ್ಟಿರುವ ವೀಡಿಯೋ ಕ್ಯಾಸೆಟ್ ಎಂದು. ನಮ್ಮ ನೆನಪು ಕೆಲಸ ಮಾಡುವ ರೀತಿ ಕಂಪ್ಯೂಟರ್ ರೀತಿ ಎನ್ನುವುದು ಹೌದೆ? ವಿಜ್ಞಾನವೂ ಮನುಷ್ಯ ನೆನಪು ‘ವಿಡಿಯೋ ಕೆಸೆಟ್’ನಂತೆ ಕೆಲಸ ಮಾಡುತ್ತದೆ ಎಂದೇ ಒಂದೆರಡು ಶತಮಾನ ನಂಬಿಕೊಂಡಿತ್ತು. ಆದರೆ ಇತ್ತೀಚೆ ಅತ್ಯಾಧುನಿಕ ಬ್ರೈನ್ ಸ್ಕ್ಯಾನಿಂಗ್ ಉಪಕರಣಗಳನ್ನು ಬಳಸಿ ನಡೆದ ಪ್ರಯೋಗ ಗಳಲ್ಲಿ ಕೆಲವೊಂದಿಷ್ಟು ಹೊಸ ವಿಷಯಗಳು ಸಿದ್ಧವಾಗಿವೆ.
ಏನೆಂದರೆ ನಾವು ನೀವು ಏನನ್ನಾದರೂ ನೆನಪಿಸಿಕೊಂಡಾಗಲೆಲ್ಲ ಮೆದುಳು ಎಲ್ಲೋ ಒಂದು ಕಡೆ ಕುಳಿತ ಪ್ಲೇ ಬಟನ್ ಒತ್ತುವುದಿಲ್ಲ. ಅಸಲಿಗೆ ಮೆದುಳು ಇಡೀ ದೃಷ್ಟಾಂತವನ್ನು ನೆನಪಿ ನಲ್ಲಿಟ್ಟುಕೊಳ್ಳುವುದಿಲ್ಲ. ಬದಲಿಗೆ ಘಟನೆಯ ಕೆಲವೇ ತುಣುಕುಗಳನ್ನು ಮಾತ್ರ ನೆನಪಿಟ್ಟುಕೊಂಡಿರುತ್ತದೆ.
ಕ್ರಿಕೆಟ್ ಹೈಲೈಟ್ಸ್ʼನಂತೆ. ಹಳೆಯ ಘಟನೆಯನ್ನು ನೆನಪು ಮಾಡಿಕೊಂಡಾಗ, ಈ ನೆನಪಿನ ತುಣುಕುಗಳನ್ನು, ಅದರ ಜೊತೆ ಆಗ ಸಂಭವಿಸಿದ್ದ ನಮ್ಮೊಳಗಿನ ಭಾವನೆ, ನಂತರ ಆ ವಿಷಯದ ಬಗ್ಗೆ ಕೇಳಿದ ಮಾತುಗಳು, ನಂತರ ನೋಡಿದ ಫೋಟೋ ಇತ್ಯಾದಿ ವಿಷಯ ಗಳನ್ನು ಬೆರೆಸಿ, ಸೇರಿಸಿ ಇಡೀ ದೃಷ್ಟಾಂತವನ್ನು, ಘಟನೆಯನ್ನು ಮನಸ್ಸಿನೊಳಗೆ ಇನ್ನೊಮ್ಮೆ ಸೃಷ್ಟಿಸುತ್ತದೆ.
ಇದನ್ನು ಮೆದುಳು, ಮನಸ್ಸು ಪ್ರತೀ ಬಾರಿ ಘಟನೆಯನ್ನು ನೆನಪು ಮಾಡಿಕೊಂಡಾಗಲೂ ತಪ್ಪದೇ ಮಾಡುತ್ತದೆ. ಘಟನೆಯನ್ನು ಪ್ರತಿ ಬಾರಿ ಮರು ಸೃಷ್ಟಿಸುತ್ತದೆ. ಬ್ರೈನ್ ಸ್ಕ್ಯಾನರ್ ಹುಟ್ಟುವ ಸಾವಿರಾರು ವರ್ಷ ಮೊದಲೇ ಪ್ರಾಚೀನ ದಾರ್ಶನಿಕರು ಇದನ್ನು ಪರೋಕ್ಷ ವಾಗಿಯೇ ಗಮನಿಸಿದ್ದರು, ಬಲ್ಲವರಾಗಿದ್ದರು ಹೌದು.
ಮನಸ್ಸು ಯಾವತ್ತೂ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ, ಬದಲಿಗೆ ವ್ಯಾಖ್ಯಾನಿಸುತ್ತದೆ. ನಾವು ‘ಭೂತಕಾಲ’ ಎಂದು ಕರೆಯುವುದು ಯಥಾವತ್ ಘಟನೆಯನ್ನಲ್ಲ, ಬದಲಿಗೆ ನೆನಪಿದ್ದ ಘಟನೆಗಳ ಭಾಗ, ಭಾವನೆ ಮತ್ತು ಅರ್ಥಗಳನ್ನು ಹೆಣೆದು ಮಾಡಿದ ಒಂದು ಕಥೆಯನ್ನು. ಇದನ್ನು ಆಧುನಿಕ ನರವಿಜ್ಞಾನ ಸಾವಿರ ವರ್ಷಗಳ ನಂತರ ಕೋಟಿಗಟ್ಟಲೆ ಡಾಲರ್ ಕಳೆದು ಹೌದೆಂದಿದೆ.
ನಮ್ಮ ಮನೆಯಲ್ಲಿ ಅಪ್ಪ, ಚಿಕ್ಕಪ್ಪ, ಅತ್ತೆಯಂದಿರು ಹಳೆಯ ಯಾವುದೋ ಜೊತೆಯಲ್ಲಿದ್ದ ಘಟನೆಯನ್ನು, ಅಥವಾ ಅಜ್ಜನನ್ನು ನೆನಪಿಸಿಕೊಳ್ಳುವಾಗ ಕೂಡ ಇದನ್ನು ಗಮನಿಸಿದ್ದೇನೆ. ಒಬ್ಬೊಬ್ಬರಿಗೂ ಅಜ್ಜ ದಕ್ಕಿದ ರೀತಿಯಲ್ಲಿ ಅಜ್ಜನ ವ್ಯಕ್ತಿತ್ವವನ್ನು ವರ್ಣಿಸುತ್ತಾರೆ, ನೆನಪಿಸಿ ಕೊಳ್ಳುತ್ತಾರೆ. ಹಾಗಲ್ಲ ಹೀಗಾಗಿತ್ತು ಎಂದು ವಾದಕ್ಕಿಳಿಯುತ್ತಾರೆ. ಹಾಗಾದರೆ ಇಲ್ಲಿ ಯಾರು ಸರಿ? ಬಹುಶಃ ಎಲ್ಲರೂ. ಏಕೆಂದರೆ ಅವರು ನೆನಪಿಸಿಕೊಳ್ಳುತ್ತಿರುವುದು ಕ್ಯಾಮೆರಾ ರೆಕಾರ್ಡಿಂಗ್ ಅಲ್ಲ. ಅವೆಲ್ಲವೂ ಅವರವರ ಬಾಲ್ಯಗಳ ಜರಡಿಯಲ್ಲಿ ಹಾದು ಬಂದ ಒಂದೇ ಬದುಕು. ಘಟನೆ ಎಲ್ಲರದ್ದೂ ಒಂದೇ. ಅನುಭವ ಮಾತ್ರ ಅವರವರದ್ದು.
ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧ ಇದನ್ನೇ ಹೇಳಿದ್ದ. ನಾವು ಜಗತ್ತನ್ನು, ಘಟನೆ ಯನ್ನು ಇದ್ದ ಹಾಗೆಯೇ ನೋಡುವುದಿಲ್ಲ, ನಡೆದಂತೆಯೇ ನೆನಪಿಟ್ಟುಕೊಳ್ಳುವು ದಿಲ್ಲ. ಬದಲಿಗೆ ನಮ್ಮ ಗ್ರಹಿಕೆಯ ಕನ್ನಡಕದ ಮೂಲಕ ನೋಡುತ್ತೇವೆ ಎಂದು. ಅವನಿಗೆ ಅದನ್ನು ಸಾಬೀತು ಮಾಡಲಿಕ್ಕೆ ಒಂದು ಮದುವೆ ಊಟದ ಪಂಕ್ತಿ ಸಿಕ್ಕಿರಲಿಲ್ಲ, ಅಷ್ಟೆ.
ಮನಃಶಾಸ್ತ್ರಜ್ಞರು ಕಂಡುಕೊಂಡಿರುವ ಇನ್ನೊಂದು, ‘ನೆನಪಿನ ವಿಷಯದಲ್ಲಿ ಆತ್ಮ ವಿಶ್ವಾಸಕ್ಕೂ ನಿಖರತೆಗೂ ಸಂಬಂಧವೇ ಇಲ್ಲ’ ಎಂದು. ಊಟದ ಪಂಕ್ತಿಯಲ್ಲಿ ಪುಟ್ಟಣ್ಣ ಹೆಗಡೇರ ಧ್ವನಿಯಲ್ಲಿದ್ದ ಆ ಖಚಿತತೆ ಆಧಾರದ ಮೇಲೆ ಅವರು ಹೇಳುತ್ತಿದ್ದುದೇ ಸತ್ಯ ಎನ್ನುವಂತಿಲ್ಲ. ನಿಜ ಹೇಳಬೇಕೆಂದರೆ, ಮತ್ತೆ ಮತ್ತೆ ನೆನಪಿಸಿಕೊಂಡರೆ, ಅರ್ಥಾತ್ ಕಥೆಯ ಮರುಸೃಷ್ಟಿ ಮಾಡುತ್ತಿದ್ದರೆ, ಕಾಲ ಕಳೆದಂತೆ ನಮ್ಮ ಕಥೆಯ ಮೇಲೆ ಆತ್ಮವಿಶ್ವಾಸ ಬೆಳೆಯುತ್ತಲೇ ಹೋಗುತ್ತದೆ.
ನೆನಪು ಮಾಡಿಕೊಂಡಾಗಲೆಲ್ಲ ನೆನಪಿರುವ ತುಣುಕುಗಳು ಮೂಲಕ ಕಥೆ ನಮ್ಮ ತಲೆಯೊಳಗೆ ಮರುಸೃಷ್ಟಿ ಆಗುತ್ತದೆ ಎಂದೆನಲ್ಲ, ಇಂದು ಗಮನಿಸಬೇಕು. ಏನೆಂದರೆ, ಪ್ರತಿ ಬಾರಿ ನೆನಪು ಮಾಡಿಕೊಂಡಾಗಲೂ ಈ ಚಿಕ್ಕಪುಟ್ಟ ವಿಷಯಗಳು ಆಚೀಚೆಯಾಗುತ್ತವೆ, ಇಲ್ಲ ಕೆಲವೊಂದು ಮರೆತು ಹೋಗಿರುತ್ತದೆ. ಆ ರೀತಿ ಮರೆತ ವಿವರವನ್ನು ನಮ್ಮ ತಲೆ ನಮಗೆ ಗೊತ್ತಿಲ್ಲದಂತೆ ಮರುಸೃಷ್ಟಿಸಿರುತ್ತದೆ.
ಉದಾಹರಣೆಗೆ, ಯಾವುದೋ ಒಂದು ಘಟನೆ ನೆನಪು ಮಾಡಿಕೊಳ್ಳುತ್ತಿದ್ದೀರಿ ಎಂದಿಟ್ಟು ಕೊಳ್ಳಿ, ಅದರಲ್ಲಿ ಕೆಲವಷ್ಟೇ ನೆನಪಿದ್ದು ಇನ್ನು ಕೆಲವು ತಲೆಯ ಸೃಷ್ಟಿಯಾಗಿರಬಹುದು. ಘಟನೆ ನೆನಪಿರಬಹುದು, ಆದರೆ ಆ ಘಟನೆಯಲ್ಲಿ ಯಾವ ಅಂಗಿ ಹಾಕಿದ್ದ, ಅಥವಾ ಸಂಪೂರ್ಣ ನಡೆದ ಜಾಗ ಇತ್ಯಾದಿ ಮರೆತು, ಕಲ್ಪಿತ ಸೃಷ್ಟಿಯಾಗಿರಬಹುದು!
ಹಾಗಾಗಿ ಪ್ರತಿ ಬಾರಿ ನೆನಪಾದಾಗಲೂ ಕಥೆಯೂ ಕೊಂಚ ಬದಲಾಗುತ್ತಿರುತ್ತದೆ. ಬಹುತೇಕ ಬಾರಿ ಈ ರೀತಿ ನೆನಪಿನ ಬಿಟ್ಟ ಸ್ಥಳ ತುಂಬಿದಾಗ ಸತ್ಯವೇ ಆಚೀಚೆ ಆಗಿರುತ್ತದೆ! ಅರ್ಧ ಕಲ್ಪಿತ ಕಥೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ, ಕೊನೆಗೆ ಅದುವೆ ಸತ್ಯವೆಂದು ನಾವೇ ಗಟ್ಟಿ ನಂಬಿಬಿಡುತ್ತೇವೆ!
ಇಲ್ಲಿ ಹೈಲೈಟ್ ಮಾತ್ರ ಸತ್ಯ- ಅದರಿಂದ ಮರುಸೃಷ್ಟಿಸಿದ ‘ಪೂರ್ಣ ಕ್ರಿಕೆಟ್ ಮ್ಯಾಚ್’ ಸತ್ಯವಲ್ಲ. ಆದರೆ ಮ್ಯಾಚ್ ಸತ್ಯ. ಮನಸ್ಸಿನ ಈ ಚಾಳಿಗೆ- ತಾನೇ ಕಟ್ಟಿದ ಕಥೆಯನ್ನು ವಾಸ್ತವ ಎಂದು ನಂಬುವ ಚಾಳಿಗೆ- ನಮ್ಮ ಪ್ರಾಚೀನ ಭಾರತೀಯ ದಾರ್ಶನಿಕರ ಬಳಿ ಒಂದು ನಿಖರವಾದ ಪದವೇ ಇತ್ತು. ಮಾಯೆ. ಮಾಯೆಯನ್ನು ನಾವು ‘ಭ್ರಮೆ’ ಎಂದು ಭಾವಿಸುತ್ತೇವೆ. ಆದರೆ ಮಾಯೆ ಎಂದರೆ ‘ತಪ್ಪು ಗ್ರಹಿಕೆ’. ಏನನ್ನೋ ನೋಡುತ್ತೇವೆ, ಅದರ ಸುತ್ತ ಒಂದು ಕಥೆ ಕಟ್ಟುತ್ತೇವೆ, ಆಮೇಲೆ ಆ ಕಥೆ ವಾಸ್ತವವಲ್ಲ ಎಂಬುದನ್ನೇ ಮರೆತು ಬಿಡುತ್ತೇವೆ. ಅದನ್ನೇ ನಂಬಿಕೊಂಡು ಊಟದ ಪಂಕ್ತಿಯ ವಾದಕ್ಕಿಳಿಯುತ್ತೇವೆ!
ಇದೆಲ್ಲ ಮದುವೆ ಊಟದ ತಮಾಷೆ ಎಂದರೆ, ನಿಮಗೆ ‘ಫುಡ್ ಕ್ಲೇ’ ಎಂಬ ಹುಡುಗನ ಕಥೆ ಹೇಳಬೇಕಿದೆ. 1979, ಅಮೆರಿಕ. ಅಂದು ಕೊಲೆಯಾಯಿತು. ಕೊಲೆಗಾರನನ್ನು ಕೆಲವರು ದೂರದಿಂದ ನೋಡಿದ್ದರು. ಶಂಕಿತರನ್ನು ತಂದು ನಿಲ್ಲಿಸಿ ಯಾರು ಕೊಲೆಗಾರ ಎಂದು ಪ್ರತ್ಯಕ್ಷ ದರ್ಶಿಗಳಲ್ಲಿ ಕೇಳಲಾಯಿತು. ನೋಡಿದ ಇಬ್ಬರಿಗೂ ಮುಖ ಸರಿಯಾಗಿ ನೆನಪಿರ ಲಿಲ್ಲ. ಹದಿನಾರು ವರ್ಷದ ಈ ಹುಡುಗನೇ ಕೊಲೆಗಾರ ಎಂದು ಒಬ್ಬ ಅನುಮಾನ ದಿಂದ ತೋರಿಸಿದ.
ಆದರೆ ಫುಡ್ ಕ್ಲೇ ಕೊಲೆಯಾಗುವ ಸಮಯದಲ್ಲಿ ಹಾಸ್ಟೆಲ್ʼನಲ್ಲಿ ಮಲಗಿದ್ದ. ಅಲ್ಲಿ ಭೌತಿಕ ಸಾಕ್ಷ ಒಂದೂ ಇರಲಿಲ್ಲ. ಇನ್ನೊಬ್ಬ ಹೌದು, ಇವನೇ. ನಾನು ನೋಡಿದ್ದೇನೆ ಎಂದು ಪೂರ್ಣ ನಂಬಿಕೆಯಿಂದ ಬೆರಳು ತೋರಿಸಿದ. ಮೊದಲನೆಯವನಿಗೂ ಹೌದೆಂದೆನಿಸಿತು. ಎರಡನೇ ಸಾಕ್ಷಿಗೆ ಹೆಚ್ಚಿನ ವಿವರ ನೆನಪಾಗಲಿಲ್ಲ. ಆಗ ಅವನನ್ನು ಹಿಪ್ನಾಟೈಜ್ ಮಾಡಿ ಸಾಕ್ಷ ಕೇಳಲಾಯಿತು.
ಅಷ್ಟಾಗುವಾಗ ಅಲ್ಲಿರುವ ಎರಡು ಮೂರು ಮಂದಿಗೆ ಫುಡ್ ಮುಖವೇ ಕಂಡದ್ದು ಹೌದೆಂದೆ ನಿಸಲು ಶುರುವಾಯಿತು. ತರುವಾಯ ಫುಡ್ ಕ್ಲೇ- ಜೈಲಿಗೆ ಹಾಕಲಾಯಿತು. ಮೂವತ್ತೆಂಟು ವರ್ಷ! ತೀರಾ ಇತ್ತೀಚೆ ಡಿಎನ್‌ಎ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ ಮೇಲೆ, ಅಲ್ಲಿದ್ದ ರಕ್ತದ ಸ್ಯಾಂಪಲ, ಡಿಎನ್‌ಎ ಎಲ್ಲವನ್ನೂ ಮರುಪರೀಕ್ಷಿಸಲಾಗಿ ಅವನು ಕೊಲೆಗಾರನಲ್ಲ ಎಂಬ ಸತ್ಯ ಹೊರಬಂತು. ನಿರಪರಾಧಿ ಎಂದು ಬಿಡುಗಡೆಯಾಯಿತು.
ಒಟ್ಟಾರೆ ಒಂದಿಬ್ಬರ ನೆನಪಿನ ಅವಾಂತರದಿಂದಾಗಿ ಆತ ಮೂವತ್ತೆಂಟು ವರ್ಷ ಜೈಲಿ ನೊಳಗೆ ಕಳೆಯಬೇಕಾಯ್ತು. ಇಂತಹ ನೂರಾರು ಕೇಸುಗಳಿವೆ! ಇಲ್ಲಿ ಸಾಕ್ಷಿಗಳು ಸುಳ್ಳುಗಾರ ರಲ್ಲ. ಆದರೆ ಅವರು ಹೇಳಿದ್ದು ಸತ್ಯವೂ ಅಲ್ಲ. ಇಂದು ಪ್ರಶ್ನೆ ಏಳುತ್ತದೆ.
ನೆನಪು ಇಷ್ಟು ಅಪನಂಬಿ ಕೆಯ ವ್ಯವಸ್ಥೆ ಎಂದಾದರೆ, ವಿಕಸನದಲ್ಲಿ ಹಾಗೇಕೆ ಆಯಿತು? ವಿಕಾಸ ನಮಗೊಂದು ಸರಿಯಾದ ರೆಕಾರ್ಡಿಂಗ್ ಯಂತ್ರವನ್ನೇ ಕೊಡಬಹುದಿತ್ತಲ್ಲ? ಅದೇಕೆ ಇಂತಹ ಸೃಷ್ಟಿಯಾಯಿತು? ಉತ್ತರ ಬಹಳ ಸುಲಭ - ನಮ್ಮ ಪೂರ್ವಜರಿಗೆ ವಿಕಸನದ ಅದೆಷ್ಟೋ ಕೋಟಿ ವರ್ಷ ಘಟನೆಯನ್ನು ನಿಖರವಾಗಿ ನೆನಪಿಟ್ಟುಕೊಳ್ಳುವ ಅವಶ್ಯಕತೆಯೇ ಇರಲಿಲ್ಲ.
ಬದಲಿಗೆ ಹುಲಿ ಬಂದಾಗ, ಇನ್ನೊಬ್ಬರು ದಾಳಿ ಮಾಡಿದಾಗ ಇತ್ಯಾದಿ ಮುಖ್ಯ ಘಟನೆ, ಅದರಲ್ಲೂ ವಿವರಣೆಗಿಂದ ನಮ್ಮೊಳಗೆ ಏನೇನು ಭಾವಗಳು ಆ ಕ್ಷಣದಲ್ಲಿ ಹುಟ್ಟಿದವು ಎನ್ನುವುದನ್ನು ನೆನಪಿಟ್ಟುಕೊಂಡರೆ ಸಾಕು. ಡೇಂಜರ್- ಇದು ಅಪಾಯ, ಇದು ಅಪಾಯ ವಲ್ಲ ಎಂಬುದಕ್ಕೆ ಪೂರ್ತಿ ಘಟನೆ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಆದರೆ ಕೆಲವೊಂದು ವಿಷಯಗಳು- ಉದಾಹರಣೆಗೆ ಯಾವ ಹಣ್ಣು ವಿಷ, ಯಾವ ಹಣ್ಣು ವಿಷವಲ್ಲ ಎಂಬ ಜ್ಞಾನ ನಿಜವಾಗಿ ಸಾವು ಬದುಕಿನ ಪ್ರಶ್ನೆ- ಅದನ್ನು ಮಾತ್ರ ಸ್ಪಷ್ಟ ನೆನಪಿಟ್ಟು, ಉಳಿದ ಘಟನೆಗಳಲ್ಲಿ ಕೆಲವೊಂದನ್ನು, ನಮಗನಿಸಿದ್ದನ್ನಷ್ಟೇ ನೆನಪಿಟ್ಟುಕೊಳ್ಳುವ, ಬೇಕಾದಾಗ ಮರುಸೃಷ್ಟಿಸುವ ವ್ಯವಹಾರ ಬೆಳೆದುಬಂತು.
ಇದರಿಂದಾಗಿ ಯಾವುದು ಅಪಾಯದ ಘಟನೆಯೋ, ಅದು ನೆನಪಿಸಿಕೊಂಡಾಗಲೆಲ್ಲ ಇನ್ನಷ್ಟು ಹೆದರಿಕೆಯಾಗುವಂತೆ ಕಥೆಯ ಮರುಸೃಷ್ಟಿಯಾಗಿ ನಮ್ಮನ್ನು ಇನ್ನಷ್ಟು ರಕ್ಷಿಸುತ್ತಿತ್ತು. ಆ ಕಾರಣಕ್ಕೆ, ಶಾಲೆಯ ಮೇಷ್ಟ್ರು ಹೇಳಿದ ಪಾಠದ ಒಂದು ವಾಕ್ಯವೂ ಈಗ ನಮಗೆ ನೆನಪಿಲ್ಲ. ಆದರೆ ಕಡಿಮೆ ಮಾರ್ಕ್ಸ್ತೆಗೆದುಕೊಂಡಾಗ, ಫೈಲಾದಾಗ ಹೆಗಲ ಮೇಲೆ ಕೈಯಿಟ್ಟ ಆ ಒಬ್ಬ ಮೇಷ್ಟ್ರು ಮಾತ್ರ ನೆನಪಿದ್ದಾರೆ.
ಗೆಳೆತನವನ್ನು ಮುರಿದ ಜಗಳದ ಮಾತುಗಳು ಮರೆತುಹೋಗಿವೆ; ಗಾಯ ಮಾತ್ರ ನೆನಪಿನಲ್ಲಿರುತ್ತದೆ. ವಿವರ ಮಾಸುತ್ತದೆ. ಭಾವ ಉಳಿಯುತ್ತದೆ. People remember how you made them feel. ಜನರು ಘಟನೆಯನ್ನು, ಮಾತನ್ನು, ವಿವರವನ್ನು ನೆನಪಿಟ್ಟು ಕೊಳ್ಳುವುದಿಲ್ಲ, ಬದಲಿಗೆ ಆದ ಭಾವನಾತ್ಮಕ ಅನುಭವ ಮಾತ್ರ ನೆನಪಿರುತ್ತದೆ. ಆ ಭಾವ ಪ್ರತಿ ಬಾರಿ ನೆನಪಿಸಿಕೊಂಡಾಗಲೂ ಇನ್ನಷ್ಟು ತೀವ್ರತೆ ಪಡೆಯುತ್ತ ಹೋಗುತ್ತದೆ. ನಮ್ಮ ರಕ್ಷಣಾ ವಿಕಾಸ ಹೇಗಿದೆಯೆಂದರೆ ಇದ್ಯಾವುದೂ ನಮ್ಮ ಗಮನಕ್ಕೆ ಬರುವುದೇ ಇಲ್ಲ.
ಇತ್ತೀಚೆ ನಾಲ್ಕು ಸ್ನೇಹಿತರು ಮಾತನಾಡುತ್ತಿದ್ದೆವು. ಆಗ ಮಾತು ಮಾತಿಗೆ ‘ನನಗೆ ಈಗಲೂ ಪರೀಕ್ಷೆಗೆ ಹಾಲ್ ಟಿಕೆಟ್ ಮರೆತು ಹೋದಂತೆ’ ಕನಸು ಬೀಳುತ್ತದೆ ಎಂದೆ. ಅದಕ್ಕೆ ಸ್ನೇಹಿತೆ- ಅಯ್ಯೋ ನನಗೂ ಹೌದು, ನನಗಂತೂ ರೋಲ್ ನಂಬರ್ ಬರೆಯದೇ ಉತ್ತರ ಪತ್ರಿಕೆ ಕೊಟ್ಟು ಬಂದಂತೆ ಕನಸು ಬೀಳುತ್ತದೆ ಎಂದರು.
ನೋಡಿದರೆ ಈ ಕನಸು ನನ್ನ ಎ ಸ್ನೇಹಿತರಿಗೂ ಆಗೀಗ ಬರುತ್ತದೆಯಂತೆ! ಏನದರರ್ಥ? ನಾವೆಲ್ಲ ಈ ವಿಷಯದಲ್ಲಿ ಅನುಭವಿಸಿದ ಭಾವೋತ್ಕಟತೆ, ಆತಂಕ ಅಂದಿನ ದಿನದ ಜೀವನ್ಮರಣದ ವಿಷಯ! ಹಾಗಾಗಿ ಈಗ ಉದ್ಯೋಗದಲ್ಲಿದ್ದರೂ ನಮ್ಮ ತಲೆ ಮಾತ್ರ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತದೆ!
ಹಾಗಾಗಿಯೇ ಈಗಲೂ ಕೆಲವೊಮ್ಮೆ ಹಾಗಿನ ಕನಸು ಬಿದ್ದು ನಿದ್ರೆಯಿಂದ ಎಚ್ಚರ ವಾಗುತ್ತದೆ! ಹಾಗಾದರೆ ನಮ್ಮ ಹೆಚ್ಚಿನ ಘಟನೆಗಳ ನೆನಪು ವಿಶ್ವಾಸಾರ್ಹವಲ್ಲ ಎಂದಾದರೆ ನೆನಪನ್ನು ನಂಬುವುದನ್ನೇ ನಿಲ್ಲಿಸಬೇಕೆ? ಇಲ್ಲ.ಇದೆಲ್ಲ ತಿಳಿದಿರಬೇಕು, ಆಗಲೇ ನಮ್ಮ ನೆನಪನ್ನು ನಾವು ವೈಭವೀಕರಿಸುವುದನ್ನು ನಿಲ್ಲಿಸುವುದು.
ಯಾವುದೇ ಘಟನೆಯ ನೆನಪು 100% ಸರಿ ಎನ್ನುವಂತಿಲ್ಲ. ಬಹುತೇಕ ಬಾರಿ, ನಮ್ಮ ತಲೆಯ ತಲೆಹರಟೆಯಿಂದಾಗಿ ಸತ್ಯವೇ ಬದಲಾಗಿರುತ್ತದೆ. ಹಾಗಾಗಿ ಸಂಬಂಧಗಳಲ್ಲಿ, ಸ್ನೇಹದಲ್ಲಿ ಯಾವತ್ತೂ ನಾವು ನಂಬಿಕೊಂಡಿದ್ದೇ ಸರಿ, ಸತ್ಯವಾಗಿರುವುದಿಲ್ಲ. ನಮ್ಮಂದು ಶಬ್ದದ ಬಳಕೆಯಿದೆ- ‘ವಿವೇಕ’. ನೆನಪಿನ ಜೊತೆ ಅದರ ಪಾಲನೆಯೂ ಅಷ್ಟೇ ಮುಖ್ಯ.
ನಮ್ಮೆಲ್ಲರ ತಲೆಯಲ್ಲೂ ಒಬ್ಬ ಕಥೆಗಾರ, ಈ ವಿಚಿತ್ರ ಇತಿಹಾಸಕಾರ ಇದ್ದಾನೆ! ಅವನು ಸ್ಟೆನೋಗ್ರಾಫರ್ ಅಲ್ಲ. ಹಾಗಾಗಿ ಅವನನ್ನು ಪೂರ್ತಿ ನಂಬುವಂತಿಲ್ಲ. ಜಗತ್ತು ಉಳಿದವರು ಕಂಡಂತಲ್ಲ, ಅವರವರು ಕಂಡಂತೆ! ಇಲ್ಲಿ ಎಲ್ಲರೂ ನಂಬಿ ಕೆಟ್ಟವರೇ, ನೆನಪಿರಲಿ!