ಸಂಸ್ಮರಣೆ
ಪ್ರೊ.ಆರ್.ಜಿ.ಹೆಗಡೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಮಂತ್ರಿ ರಾಮಕೃಷ್ಣ ಹೆಗಡೆಯವರು ಬದುಕಿದ್ದಿದ್ದರೆ ಇಂದಿಗೆ (ಆಗಸ್ಟ್ 29) ಅವರಿಗೆ 100 ವರ್ಷಗಳು ತುಂಬಿರುತ್ತಿದ್ದವು. ಹೆಗಡೆ ಯವರಿಗಿದ್ದ ರಾಜಕೀಯ ಅಸ್ಮಿತೆ ಮತ್ತು ವಿಶಿಷ್ಟತೆಯನ್ನು ಗುರುತಿಸಿ ದಾಖಲಿಸುವ ಸಮಯ ಇದು. ಅಂಥ ಅನನ್ಯತೆಯೊಂದು ಹೆಗಡೆಯವರಲ್ಲಿತ್ತು.
‘ರಾಜಕೀಯ ಬೇಳೆ’ ಬೇಯಿಸಿಕೊಳ್ಳುವ ರೀತಿಯ ವಿಲಕ್ಷಣ ರಾಜಕಾರಣಿಯಾಗಿರಲಿಲ್ಲ ಹೆಗಡೆ; ಅಂಥ ವಿಲಕ್ಷಣ ನಾಯಕರನ್ನು ಜನಮಾನಸ ಮತ್ತು ಇತಿಹಾಸ ತಿರಸ್ಕರಿಸುತ್ತವೆ. ಚರಿತ್ರೆಯನ್ನು ಸೃಷ್ಟಿಸು ವವರನ್ನು ಮಾತ್ರವೇ ಚರಿತ್ರೆ ನೆನಪಿಟ್ಟುಕೊಳ್ಳುತ್ತದೆ. ಹೀಗಾಗಿ ನೆನಪಿನಲ್ಲಿ ಉಳಿಯುವವರು ಕೆಲವೇ ಕೆಲವರು. ಬದಲಿ ರಾಜಕೀಯ ವ್ಯವಸ್ಥೆಯ ಯಶಸ್ವಿ ಮಾದರಿಯೊಂದನ್ನು ಕಟ್ಟಿದ ಹೆಗಡೆ ಅಂಥ ಮಹಾನುಭಾವರಲ್ಲಿ ಒಬ್ಬರು.
ಪ್ರಜಾಪ್ರಭುತ್ವ ಮಾದರಿಯ ‘ಸತ್ತೆ’ಯ ಯಶಸ್ಸು ಇರುವುದು, ಜನರು ಮತ್ತು ರಾಜಕಾರಣಿಗಳ ನಡುವಿನ ಅಧಿಕಾರ ಹಂಚಿಕೆಯ ಸ್ವರೂಪದಲ್ಲಿ. ಈ ಸ್ವರೂಪವು ಹೆಚ್ಚಿನ ಪ್ರಜಾಪ್ರಭುತ್ವಗಳಲ್ಲಿ ಸ್ಪಷ್ಟವಾಗಿರುವುದಿಲ್ಲ. ಏಕೆಂದರೆ, ಆಚರಣೆಯಲ್ಲಿ ಅದು ರಾಜಕಾರಣಿಗಳ ಮನೋ ಧರ್ಮ ಮತ್ತು ಜನತೆಯ ಅರಿವಿನ ಮಟ್ಟವನ್ನು ಅವಲಂಬಿಸಿರುತ್ತದೆ.
ರಾಜಕಾರಣಿಗಳ ಮನೋ ಧರ್ಮ ಮತ್ತು ಜನತೆಯ ಅರಿವಿನ ಮಟ್ಟದಲ್ಲಿ ದೋಷಗಳಿದ್ದರೆ ಪ್ರಜಾ ಪ್ರಭುತ್ವವು ಕೆಟ್ಟ ಸರ್ವಾಧಿಕಾರಿ ವ್ಯವಸ್ಥೆಗಿಂತಲೂ ದುಷ್ಟವಾದ ವ್ಯವಸ್ಥೆ ಯಾಗಿಬಿಡುತ್ತದೆ. ನಮ್ಮ ದೇಶದ ಮಟ್ಟಿಗಂತೂ ತುಂಬಾ ಅಸ್ಪಷ್ಟವಾಗಿದ್ದ ಇಂಥ ಅಧಿಾರ ಹಂಚಿಕೆಯ ವ್ಯವಸ್ಥೆ ಯನ್ನು ಪಾರದರ್ಶಕವಾಗಿಸಿ, ಜನಪರವಾಗಿಸಿ, ಶ್ರೇಷ್ಠ ಮಾದರಿಗಳನ್ನು ಒದಗಿಸಿದವರು ಹಾಗೂ ಹೆಚ್ಚಿನ ಅಧಿಕಾರಗಳನ್ನು ಜನರಿಗೆ ಬಿಟ್ಟುಕೊಟ್ಟು ವ್ಯವಸ್ಥೆಯ ಆಯಾಮಗಳನ್ನೇ ವಿಸ್ತರಿಸಿದವರು ಹೆಗಡೆ. ಅಷ್ಟೇ ಅಲ್ಲ, ಹಾಗೆ ಬಿಟ್ಟುಕೊಡಬಲ್ಲ ರಾಜಕೀಯ ಸಂಸ್ಕೃತಿಯೊಂದನ್ನು ನಿರೂಪಿಸಿ ಅದಕ್ಕೆ ರೂಪಕವಾಗಿ ನಿಂತವರು ಹೆಗಡೆ.
ಇದನ್ನೂ ಓದಿ: Prof R G Hegde Column: ದೇಶದ ಚರಿತ್ರೆ ಅವರನ್ನು ಆದರದಿಂದ ಕಾಣಲಿದೆ
ಭಾರತೀಯ ರಾಜಕೀಯ ಇತಿಹಾಸದಲ್ಲಿ ದಾಖಲಾರ್ಹವಾದ ಇಂಥ ರಾಜಕೀಯ ಶೈಲಿ/ಸಂಸ್ಕೃತಿ ಅಥವಾ ‘ಘರಾನಾ’ವನ್ನೇ ಅವರು ‘ಮೌಲ್ಯಾಧಾರಿತ ರಾಜಕೀಯ’ ಎಂದು ಕರೆದದ್ದು. ಇಂಥ ರಾಜಕೀಯ ಸಂಸ್ಕೃತಿಗೆ ಹಲವು ಆಯಾಮಗಳಿದ್ದವು. ಅವುಗಳಲ್ಲಿ ಪ್ರಮುಖ ವಾದುದು ‘ಜನಪರ ರಾಜಕೀಯ’.
ಬಾಜಾ-ಬಜಂತ್ರಿಗಳನ್ನೆಲ್ಲ ಬದಿಗೊತ್ತಿ ನಿಜಕ್ಕೂ ಜನರೆಡೆಗೆ ನಡೆದವರು, ಜನರೊಂದಿಗೆ ನಿಂತವರು, ಜನರ ಜತೆ ನೇರಸಂವಾದ ಆರಂಭಿಸಿ ಸರಕಾರವನ್ನು ಜನಸ್ಪಂದನದಲ್ಲಿ ಸಕ್ರಿಯವಾಗಿ ತೊಡಗಿಸಿ ದವರು ಹೆಗಡೆ. ಸರಕಾರವನ್ನು ಶಕ್ತಿಯುತವಾದ, ಜನರಿಗಾಗಿ ಇರುವ ವ್ಯವಸ್ಥೆಯನ್ನಾಗಿ ಮಾಡಿ ಸಾಮಾಜಿಕ ಅಭಿವೃದ್ಧಿಯ ಪರಿಕರವನ್ನಾಗಿ ಮರು ರೂಪಿಸಿದ ಅವರು ಜಾರಿಗೆ ತಂದ ಅಧಿಕಾರ ವಿಕೇಂದ್ರೀಕರಣವು ಸರಕಾರವನ್ನು ಶಕ್ತಿಯುತಯಂತ್ರವನ್ನಾಗಿಸಿತು.
ಅಧಿಕಾರದ ದೊಡ್ಡ ಭಾಗ ವನ್ನು ಜಿಲ್ಲೆ ಹಾಗೂ ಮಂಡಲಗಳಿಗೆ ನೀಡಿದ್ದ ಅವರ ಕ್ರಮ ದಿಂದಾಗಿಯೇ ಕರ್ನಾಟಕವು ಅಂದು ನಿಜವಾದ ಜನಪರ, ಅಭಿವೃದ್ಧಿಪರ ರಾಜ್ಯವಾಗಿ ಎದ್ದು ನಿಂತಿದ್ದು. ಸರಕಾರಿ ಕೆಲಸಗಳು ತ್ವರಿತಗತಿಯಲ್ಲಿ ನಡೆದು ಜನಸಮುದಾಯವನ್ನು ನಿಜಕ್ಕೂ ತಲುಪಿದ್ದು. ಜನಪರ ಸರಕಾರವೆಂದರೇನು ಮತ್ತು ಹೇಗಿರುತ್ತದೆ ಎಂಬುದನ್ನು ಹೀಗೆ ದೇಶದಲ್ಲಿಯೇ ಮೊದಲ ಬಾರಿಗೆ ಸ್ಪಷ್ಟವಾಗಿ ಗುರುತಿಸಿ ತೋರಿಸಿ ಕೊಟ್ಟಿದ್ದು, ಭಾರತದ ರಾಜಕೀಯಕ್ಕೆ ಹೆಗಡೆಯ ವರು ನೀಡಿದ ಕೊಡುಗೆ ಎನ್ನಬೇಕು.
‘ರಾಜಕಾರಣಿ ಕೇಂದ್ರಿತ’ ಸ್ವಾರ್ಥಪರ ರಾಜಕೀಯಕ್ಕೆ ಬದಲಾಗಿ ‘ಜನಕೇಂದ್ರಿತ’ ರಾಜಕೀಯ ವ್ಯವಸ್ಥೆಯನ್ನು ತಂದಿಡಲು ಯತ್ನಿಸಿದವರು ಹೆಗಡೆ. ರಾಜಕೀಯ ಅಧಿಕಾರವು ಜನರಿಂದ ಪಕ್ಷಗಳಿಗೆ, ಅದರ ನಾಯಕರುಗಳಿಗೆ ಯಾವ ಕಾರಣಗಳ ಹಿನ್ನೆಲೆಯಲ್ಲಿ ಸಿಗುತ್ತದೆ ಮತ್ತು ಅದನ್ನು ಅವರು ಹೇಗೆ ವಿನಿಯೋಗಿಸಬೇಕು? ಎಂಬ ಪ್ರಶ್ನೆಗೆ ಉತ್ತರವಾಗಿ ಕೆಲವು ವಿಷಯಗಳು ಅವರ ಗಮನಕ್ಕೆ ಬಂದಿದ್ದವು.
ರಾಜಕೀಯ ಪಕ್ಷಗಳು ನಿಜಕ್ಕೂ ಸಮಾಜದೊಂದಿಗೆ ಸಂಪೂರ್ಣವಾಗಿ ಬೆರೆತು, ಅದರ ವಿಶ್ವಾಸ ಗಳಿಸಿ ನಿಂತಾಗ, ಜನತೆ ಮತ್ತು ರಾಜಕೀಯದ ನಡುವೆ ಒಂದು ಸಮರ್ಥ ಸಂವಹನ ಏರ್ಪಟ್ಟಾಗ ಅವಕ್ಕೆ ಬಲ ಬರುತ್ತದೆ ಎಂಬುದನ್ನು ಹೆಗಡೆ ಅರಿತಿದ್ದರು. ಮಾತ್ರವಲ್ಲ, ಜನರ ಮನೋರಥವನ್ನು ಅರಿತ ನಾಯಕರು ಎಲ್ಲಾ ಹಂತಗಳಲ್ಲಿಯೂ ಹುಟ್ಟಿಕೊಂಡು ಸರಕಾರವನ್ನು ಜನರ ಆಶೋತ್ತರಗಳ ಈಡೇರಿಕೆಯ ಪರಿಕರವನ್ನಾಗಿ ಪರಿವರ್ತಿಸಿದಾಗ ಮತ್ತು ವೈಯಕ್ತಿಕ ಮೌಲ್ಯಗಳನ್ನು ರಾಜಕೀಯ ದಲ್ಲೂ ಇಟ್ಟುಕೊಂಡು ಕೆಲಸ ಮಾಡಿದಾಗಲಷ್ಟೇ ಸಾರ್ಥಕ್ಯ ಎಂಬುದು ಹೆಗಡೆಯವರಿಗೆ ಗೊತ್ತಿತ್ತು.
ಜನಸಂಪರ್ಕವಿಲ್ಲದೆ ಕೇವಲ ಹಣ ಅಥವಾ ಜಾತಿಬಲದಿಂದ, ಕುಟುಂಬದ ಹೆಸರಿನಿಂದ ನಡೆಯುವ ನಾಯಕತ್ವವು ಸಮರ್ಥನೀಯವಲ್ಲ ಎಂಬುದನ್ನು ಅರಿತಿದ್ದ ಹೆಗಡೆಯವರು, ‘ಅಧಿಕಾರವು ಬರುವುದು ಜನರಿಂದ, ಅದನ್ನು ಮತ್ತೆ ವಿನಿಯೋಗಿಸಬೇಕಾಗಿರುವುದು ಜನರಿಗೇ. ಆಗ ಹುಟ್ಟಿ ಕೊಳ್ಳುವುದು ಮೌಲ್ಯಧಾರಿತ, ಆರೋಗ್ಯವಂತ ರಾಜಕೀಯ. ಇಂಥ ವ್ಯವಸ್ಥೆಯು ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ಮತ್ತು ಜನರಿಗೆ ಪರಸ್ಪರ ಪ್ರಯೋಜನಕಾರಿಯಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ’ ಎಂಬುದನ್ನು ಗ್ರಹಿಸಿದ್ದರು.
ಜನರು ಮತ್ತು ರಾಜಕಾರಣಿಗಳ ನಡುವೆ ಭಾರಿ ಕಂದಕ ಸೃಷ್ಟಿಯಾದರೆ, ಚುನಾವಣೆಯನ್ನು ಗೆಲ್ಲಲು ಏನು ಮಾಡಬೇಕೆಂಬುದೇ ರಾಜಕಾರಣಿಗಳಿಗೆ ಹೊಳೆಯುವುದಿಲ್ಲ. ಆಗ ಅವರು ಹತಾಶೆಗೆ ಸಿಲುಕು ವಂತಾಗುತ್ತದೆ, ಭಾರಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಸ್ವರೂಪದ ದುಷ್ಟ ರಾಜಕೀಯ ಹುಟ್ಟಿ ಕೊಳ್ಳುತ್ತದೆ. ನಂತರ ಅವು ಎಂಥ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತವೆಂದರೆ, ಈ ಶಕ್ತಿಗಳ ಮುಂದೆ ಯಾರಿಗೂ ನಿಲ್ಲಲಾಗುವುದಿಲ್ಲ; ಜನರಷ್ಟೇ ಅಲ್ಲ, ರಾಜಕಾರಣಿಗಳು, ಸರಕಾರಗಳು ಕೂಡ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ ಮತ್ತು ಇಂದು ಆಗಿರುವ ಹಾಗೆ ಇಡೀ ರಾಜಕೀಯ ವ್ಯವಸ್ಥೆ ಯು ಕಲುಷಿತ ಗೊಳ್ಳುತ್ತದೆ.
ರಾಮಕೃಷ್ಣ ಹೆಗಡೆಯವರು ‘ಮೌಲ್ಯಾಧಾರಿತ ರಾಜಕೀಯ’ದ ಪರಿಕಲ್ಪನೆಯನ್ನು ಪಕ್ಷ ಹಾಗೂ ಸರಕಾರ ಎರಡೂ ಹಂತಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದು ದೇಶದ ಇತಿಹಾಸದಲ್ಲಿ ದಾಖಲಾಗಿದೆ. ಆಡಳಿತ ವ್ಯವಸ್ಥೆಯಲ್ಲಿನ ಮುಕ್ತ ಪ್ರವೇಶಕ್ಕೆ ಜನರಿಗೆ ಅವಕಾಶ ಕಲ್ಪಿಸಿದ ಅವರು, ಅಹವಾಲುಗಳನ್ನು ಆಲಿಸಲೆಂದು ಸರಕಾರಿ ವೇದಿಕೆಗಳನ್ನು ಸೃಷ್ಟಿಸಿದರು, ಅದಕ್ಕಾಗಿ ಒಂದು ಪ್ರತ್ಯೇಕ ಖಾತೆಯನ್ನೇ ಆರಂಭಿಸಿದರು.
ವಿಷಯಜ್ಞಾನವುಳ್ಳವರಿಗೆ, ಅರ್ಹರಿಗೆ ಖಾತೆಗಳ ನಿರ್ವಹಣೆಯ ಹೊಣೆಯನ್ನು ನೀಡಿದರು, ಕೆಲಸ ಮಾಡಲು ಸಚಿವರಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹಿಸಿದರು, ದಕ್ಷ ಅಽಕಾರಿಗಳನ್ನು ಬೆಂಬ ಲಿಸಿ ಗೌರವದಿಂದ ನಡೆಸಿಕೊಂಡರು. ಕುತೂಹಲದ ವಿಷಯವೆಂದರೆ, ತಮ್ಮ ಸರಕಾರದ ವಿರುದ್ಧ ಪತ್ರಿಕೆಗಳಲ್ಲಿ ಬರುವ ಟೀಕೆಗಳನ್ನು ಗಮನಿಸಿ, ಅವು ಸರಿ ಎನಿಸಿದಾಗ ಆ ತಪ್ಪನ್ನು ತಿದ್ದಲು ಮುಂದಾ ದರು.
ಸರಕಾರವು ಕಾರ್ಯನಿರ್ವಹಣೆಯಲ್ಲಿ ಶ್ರೇಷ್ಠತೆಯನ್ನು ಸಾಽಸುವಂತಾಗುವುದಕ್ಕೆ ಕಾಲಾನುಕಾಲಕ್ಕೆ ಸೂಚಿಸಲು ‘ಥಿಂಕ್ ಟ್ಯಾಂಕ್’ಗಳನ್ನು ರೂಪಿಸಿದರು. ಹೀಗೆ ಸರಕಾರವನ್ನು ಒಂದು ಜನಪರ ವೇದಿಕೆಯಾಗಿ ರೂಪಿಸಿದ ಹೆಗ್ಗಳಿಕೆ ಹೆಗಡೆ ಅವರದ್ದು.
ಹೆಗಡೆಯವರು ಮತ್ತು ಅವರ ಸಹವರ್ತಿಗಳು ಪಕ್ಷವನ್ನು ಹೇಗೆ ಮುನ್ನಡೆಸಿದರು ಎಂಬುದನ್ನೂ ಗಮನಿಸಬೇಕು. ಮುಖ್ಯಮಂತ್ರಿಯಾದ ಬಳಿಕ ತಾವು ಸ್ವತಃ ‘ಸ್ಟಾರ್’ ಆಗಿದ್ದರೂ, ಪಕ್ಷವನ್ನು ಅವರು ಸಾಮೂಹಿಕ ನಾಯಕತ್ವದ ತಳಹದಿಯ ಮೇಲೆ ಕಟ್ಟಿದರು. ಕೈಶುದ್ಧಿ ಇರುವವರನ್ನು, ಜನಪ್ರಿಯ ಹೋರಾಟಗಳ ಹಿನ್ನೆಲೆಯಿದ್ದವರನ್ನು ಪಕ್ಷಕ್ಕೆ ಸ್ವಾಗತಿಸಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಆದ್ಯತೆಯ ಮೇಲೆ ಟಿಕೆಟ್ ನೀಡಿದರು.
ಹೀಗಾಗಿ ಪಕ್ಷದೊಳಗೆ ಒಂದು ಸ್ವಚ್ಛ ಸಂಸ್ಕೃತಿ ಬೆಳೆದುಬಂತು. ಸಮಾಜದ ವಿವಿಧ ಸ್ತರಗಳನ್ನು, ಕ್ಷೇತ್ರಗಳನ್ನು ಪ್ರತಿನಿಧಿಸುವ ವ್ಯಕ್ತಿಗಳೆಲ್ಲರೂ ಅಲ್ಲಿದ್ದರು; ಹೀಗಾಗಿ ಪಕ್ಷದೊಳಗೆ ಒಂದು ಬೌದ್ಧಿಕ ವಲಯ ನಿರ್ಮಾಣವಾಯಿತು, ಪ್ರತಿಭಾವಂತ ಮತ್ತು ಜವಾಬ್ದಾರಿಯುತ ನಾಯಕರು ಸೃಷ್ಟಿ ಯಾದರು.
ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆಗೆ ಮಹತ್ತರ ಕೊಡುಗೆ ನೀಡಿದ ಹಲವು ರಾಜಕಾರಣಿಗಳು ಅಲ್ಲಿ ಹುಟ್ಟಿಕೊಂಡಿದ್ದು ಹೀಗೆ. ಇಂಥ ರಾಜಕೀಯ ಸಂಸ್ಕೃತಿಯಿಂದಾಗಿ ಕರ್ನಾಟಕ ಮತ್ತು ದೇಶದ ಮೇಲೆ ಯಾವ ರೀತಿಯ ಪರಿಣಾಮವಾಯಿತು ಎಂಬುದನ್ನೂ ಗಮನಿಸಬೇಕು. ಅಲ್ಲಿಯವರೆಗೂ ವಿಲಕ್ಷಣ ರಾಜಕೀಯ ಸಂಸ್ಕೃತಿಯಿಂದ ಬೇಸರಗೊಂಡಿದ್ದ ಜನರಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಮಧ್ಯಮ ವರ್ಗದವರಲ್ಲಿ ಭರವಸೆಯ ಆಶಾಕಿರಣ ಮೂಡಿತು.
ಮಧ್ಯಮ ವರ್ಗದವರ ಸಬಲೀಕರಣ ಮತ್ತು ಅವರ ರಾಜಕೀಯ ಆಕಾಂಕ್ಷೆಗಳಿಗೆ ಬಲ ತುಂಬಿದ್ದು ಹೆಗಡೆಯವರು ನೀಡಿದ ದೊಡ್ಡ ಕೊಡುಗೆ. ಈ ವರ್ಗವು ಭವಿಷ್ಯದ ಭಾರತದ ರಾಜಕೀಯದಲ್ಲಿ ಮಹತ್ತರ ಪಾತ್ರವನ್ನು ವಹಿಸುವುದಕ್ಕೆ ಸಾಧ್ಯವಾಯಿತು. ಹಾಗೆಯೇ ರಾಜಕೀಯಕ್ಕೆ ಹೆಚ್ಚು ಸಂಖ್ಯೆ ಲ್ಲಿ ಯುವಕರನ್ನು ಕರೆತಂದವರು, ದೇಶದಲ್ಲಿಯೆ ಮೊದಲ ಬಾರಿಗೆ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದವರು (ಕ್ರಮೇಣ ಈ ಸಂಸ್ಕೃತಿ ಇಡೀ ದೇಶಕ್ಕೆ ಹಬ್ಬಿದ್ದು ಗೊತ್ತಿರುವಂಥದ್ದೇ) ಹೆಗಡೆಯವರು.
ಬೇರೆಯದೇ ಪರಿಸ್ಥಿತಿ ತಾಂಡವವಾಡುತ್ತಿದ್ದ ಉತ್ತರ ಭಾರತದಲ್ಲಿ, ಈ ತೆರನಾದ ವಿಶಿಷ್ಟ ರಾಜಕೀಯವೇ ‘ಭ್ರಷ್ಟಾಚಾರ-ವಿರೋಧಿ’ ರಾಜಕೀಯವಾಗಿ ಪರಿವರ್ತನೆಗೊಂಡಿದ್ದು. ಗಮನಿಸ ಬೇಕಾದ ವಿಷಯವೆಂದರೆ, ಇವೆಲ್ಲ ಸೂಕ್ಷ್ಮವಾಗಿ ಆರಂಭವಾಗಿದ್ದು ಕರ್ನಾಟಕದಿಂದ ಮತ್ತು ಹೆಗಡೆಯವರು ಆರಂಭಿಸಿದ ರಾಜಕೀಯ ಪ್ರಯೋಗಶಾಲೆಯಿಂದ.
ಹೆಗಡೆಯವರು ಮುಂದೆ ಸ್ವತಃ ಪ್ರಧಾನಮಂತ್ರಿ ಯಾಗದಿದ್ದರೂ, ‘ಜನತಾ ಪರಿವಾರ’ದ ಮೂವರು ಆ ಗದ್ದುಗೆಯನ್ನೇರಿ ದೇಶವನ್ನು ಆಳಿದ್ದು ಇಂಥ ವಿಶಿಷ್ಟ ರಾಜಕೀಯದ ಫಲಶ್ರುತಿಯಿಂದಾಗಿಯೇ. ಸಜ್ಜನಿಕೆ ಮತ್ತು ಸುಸಂಸ್ಕೃತ ವರ್ತನೆಯೇ ‘ಹೆಗಡೆ-ಪ್ರಣೀತ’ ರಾಜಕೀಯ ಸಂಸ್ಕೃತಿಯ ಆಧಾರ ಸ್ತಂಭ. ಅವರಿಗೆ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಮರ್ಯಾದೆಯ ಕುರಿತು ಅಪಾರ ಸೂಕ್ಷ್ಮತೆ ಇತ್ತು. ಇಂದಿನ ದಿನಗಳಲ್ಲಿ ‘ಚಿಲ್ಲರೆ’ ಎನಿಸುವಂಥ ಘಟನೆಗಳಿಗೂ (ಉದಾಹರಣೆಗೆ, ಟೆಲಿಫೋನ್ ಕದ್ದಾಲಿಕೆ) ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಹೊರ ನಡೆದು ಬಿಟ್ಟವರು ಹೆಗಡೆ. ಮತ್ತು ಅದೇ ಕಾರಣಕ್ಕೆ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೂ ಅವರು ತಿಲಾಂಜಲಿಯಿತ್ತರು.
ರಾಜಕಾರಣಿಯು ಪರಿಶುದ್ಧನಾಗಿರಬೇಕು ಎಂಬುದು ಅವರ ನಂಬುಗೆಯಾಗಿತ್ತು. ಹಣದ ಮತ್ತು ಲೋಭದ ರಾಜಕೀಯದಿಂದ ಮೈಲುಗಟ್ಟಲೆ ದೂರವಿದ್ದ ಅವರು, ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ತಾವೇ ತಂದಿದ್ದ ಲೋಕಾಯುಕ್ತ ಮಸೂದೆಯಡಿ ಮುಖ್ಯಮಂತ್ರಿಗಳಾಗಿದ್ದ ತಮ್ಮ ಹುದ್ದೆಯನ್ನೂ ಸೇರಿಸಿ ಕಾನೂನು ರಚಿಸಿದರು.
ಹೆಗಡೆಯವರ ರಾಜಕೀಯ ಪರಿಭಾಷೆಯೂ ಮಹತ್ತರವಾದುದೇ ಆಗಿತ್ತು; ಅವರು ತಮ್ಮ ಪರಮ ವೈರಿಗಳ ವಿರುದ್ಧವೂ ಕೀಳುಭಾಷೆಯನ್ನು ಬಳಸಿದವರಲ್ಲ. ಚುನಾವಣಾ ಕಾವೇರಿದಾಗಲೂ ‘ಹೊಡಿ- ಬಡಿ-ಕಡಿ’ ಮಾತಾಡಿದವರಲ್ಲ. ಅಕಸ್ಮಾತ್ ತಮ್ಮ ಮಾತಿನಿಂದ ಬೇರೆಯ ವರಿಗೆ ನೋವಾಗಿದ್ದರೆ ಅದಕ್ಕಾಗಿ ಕ್ಷಮೆ ಕೇಳಿದವರು. ಪ್ರಸಕ್ತ ರಾಜಕೀಯ ವಾತಾವರಣದಿಂದ ರೋಸತ್ತ ಜನರು ಒಮ್ಮೆ ಹಿಂದಿರುಗಿ ನೋಡಿದರೆ, ಹೆಗಡೆಯವರು ಬೆಳೆಸಲು ಪ್ರಯತ್ನಿಸಿದ ರಾಜಕೀಯ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ.
ಹೆಗಡೆಯವರು ‘ಎಡ’ ಮತ್ತು ‘ಬಲ’ ಎಂಬ ಪಂಥಗಳ ನಡುವೆ ನಿಂತವರು; ಈ ‘ಪಂಥಪ್ರಶ್ನೆ’ ಅವರ ರಾಜಕೀಯ ಚಟುವಟಿಕೆಯಲ್ಲಿ ಉದ್ಭವಿಸುತ್ತಲೇ ಇರಲಿಲ್ಲ. ಬಡತನದ ಆಳ-ಅಗಲಗಳನ್ನು ಅರಿತಿದ್ದ ಅವರು ರೈತರಿಗೆ ‘ಹಸಿರುಕಾರ್ಡ್’, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಿದರು. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೆ ಒಮ್ಮೆಲೇ ಅನುಮತಿ ನೀಡಿದರು.
90ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ‘ಐಟಿ’ ಕ್ರಾಂತಿಗೆ ಹೇರಳ ಮಾನವ ಸಂಪನ್ಮೂಲ ದೊರೆಯುವುದಕ್ಕೆ ಇದು ಅನುವು ಮಾಡಿಕೊಟ್ಟಿತು. ಹೆಗಡೆಯವರು ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಏಕ ಕಾಲಕ್ಕೆ ಅಪಾರ ಜನಪ್ರಿಯತೆ ಹೊಂದಿದ್ದು, ಎಡ ಬಲಗಳ ನಡುವೆ ನಿಲ್ಲಬಲ್ಲ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.
ರಾಜಕಾರಣಿಯು ವೈಯಕ್ತಿಕವಾಗಿ ಹೇಗಿರಬೇಕು ಎನ್ನುವ ವಿಷಯದಲ್ಲಿ ಹೆಗಡೆಯವರಿಗೆ ಒಂದಷ್ಟು ಆದರ್ಶಗಳಿದ್ದವು ಎನಿಸುತ್ತದೆ. ‘ರಾಜಕಾರಣಿಯೊಬ್ಬನಿಗೆ ತನ್ನ ಬಟ್ಟೆ- ಬರೆಯ ಬಗ್ಗೆ, ಭಾಷಾ ಶೈಲಿಯ ಬಗ್ಗೆ ಅರಿವಿರಬೇಕು; ತನ್ನ ಸಾರ್ವಜನಿಕ ನಡವಳಿಕೆ ಮತ್ತು ಸಜ್ಜನಿಕೆಯ ವಿಷಯದಲ್ಲಿ ಆತ ಹೊಂದಾಣಿಕೆ ಮಾಡಿಕೊಳ್ಳಬಾರದು.
ಆತ ರಾಜಕೀಯವನ್ನು ಸಮಾಜಸೇವೆ ಎಂದೇ ಪರಿಭಾವಿಸಬೇಕು, ಕ್ರಿಮಿನಲ್ ಚಟು ವಟಿಕೆಯಿಂದ ದೂರವಿರಬೇಕು’ ಎಂಬುದು ಹೆಗಡೆಯವರ ಸ್ಪಷ್ಟ ಗ್ರಹಿಕೆಯಾಗಿತ್ತು. ಅವರ ‘ಮೌಲ್ಯಾಧಾರಿತ ರಾಜಕೀಯ’ದ ಚಾರಿತ್ರಿಕ ಮಹತ್ವವಿರುವುದು ಇಲ್ಲಿಯೇ.
(ಲೇಖಕರು ಮಾಜಿ ಪ್ರಾಂಶುಪಾಲರು
ಮತ್ತು ಸಂವಹನಾ ಸಮಾಲೋಚಕರು)