Dr Sadhanashree Column: ಹೇಮಂತದ ಧಾವಂತ: ಮುಗ್ಧ ಮನಸು, ಸ್ನಿಗ್ಧ ತಿನಿಸು
ಪ್ರಕೃತಿಮಾತೆಯ ಹೊಸ ರೂಪವನ್ನು ನೋಡಲು ನಾವೆಲ್ಲರೂ ಸಿದ್ಧರಾಗೋಣ. ಅರೆ, ಏನಪ್ಪಾ ಇದು ಎಂದು ಯೋಚಿಸುತ್ತಿದ್ದೀರಾ? ಪ್ರಕೃತಿಯಲ್ಲಿ ಶರತ್ ಋತುವು ಕಳೆದು ಈಗ ಹೇಮಂತ ಋತು ಪ್ರಾರಂಭ ವಾಗುವ ಕಾಲ. ಹೇಮಂತ ಋತು ಎಂದರೆ ಚಳಿಗಾಲದ ಆಗಮನ. ಈ ಸಮಯದಲ್ಲಿ ಹೊರಗಿನ ಶೀತಲತೆ ಯ ಪ್ರಭಾವದಿಂದ ನಮ್ಮ ದೇಹದಲ್ಲಿ ಅಗ್ನಿಯು ಉತ್ತೇಜನಗೊಳ್ಳುತ್ತದೆ.
-
ಡಾ. ಸಾಧನಾಶ್ರೀ ಪಿ,
Nov 1, 2025 7:19 AM
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಪ್ರಕೃತಿಮಾತೆಯ ಹೊಸ ರೂಪವನ್ನು ನೋಡಲು ನಾವೆಲ್ಲರೂ ಸಿದ್ಧರಾಗೋಣ. ಅರೆ, ಏನಪ್ಪಾ ಇದು ಎಂದು ಯೋಚಿಸುತ್ತಿದ್ದೀರಾ? ಪ್ರಕೃತಿಯಲ್ಲಿ ಶರತ್ ಋತುವು ಕಳೆದು ಈಗ ಹೇಮಂತ ಋತು ಪ್ರಾರಂಭವಾಗುವ ಕಾಲ. ಹೇಮಂತ ಋತು ಎಂದರೆ ಚಳಿಗಾಲದ ಆಗಮನ. ಈ ಸಮಯದಲ್ಲಿ ಹೊರಗಿನ ಶೀತಲತೆಯ ಪ್ರಭಾವದಿಂದ ನಮ್ಮ ದೇಹದಲ್ಲಿ ಅಗ್ನಿಯು ಉತ್ತೇಜನಗೊಳ್ಳುತ್ತದೆ. ಇದರ ಪ್ರಭಾವದಿಂದ ಹಸಿವು ಹೆಚ್ಚಾಗುತ್ತದೆ.
ಈ ಸಮಯದಲ್ಲಿ ನಮ್ಮ ಅಗ್ನಿಯು ಹೆಚ್ಚಿನ ಆಹಾರವನ್ನು ಬೇಡುತ್ತದೆ. ಅಂತೆಯೇ ಶೀತಕಾಲದಲ್ಲಿ ದೇಹದ ಬಲವು ಅತ್ಯುತ್ತಮವಾಗಿರುತ್ತದೆ. ಪ್ರತಿನಿತ್ಯವೂ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಮಲಮೂತ್ರಾದಿಗಳ ವಿಸರ್ಜನೆಯನ್ನು ಮುಗಿಸಿ, ದೇಹಕ್ಕೆ ಸೂಕ್ತವಾದಂಥ ಎಣ್ಣೆಯನ್ನು ಸವರಿ ಕೊಂಡು, ವ್ಯಾಯಾಮ ಮಾಡಿ, ಬಿಸಿನೀರಿನ ಸ್ನಾನವನ್ನು ಮಾಡಿದರೆ, ಅದು ದೇಹ-ಇಂದ್ರಿಯ-ಮನಸ್ಸುಗಳಿಗೆ ಉತ್ಸಾಹ, ಬಲ ಮತ್ತು ಲವಲವಿಕೆಯನ್ನು ನೀಡುತ್ತದೆ.
ಚಳಿಗಾಲದಲ್ಲಿ ನಮ್ಮ ದೇಹಬಲವು ಉತ್ತಮವಾಗಿರುವ ಕಾರಣ ಹೆಚ್ಚಿನ ವ್ಯಾಯಾಮವನ್ನು ಮಾಡಬಹುದು. ಉತ್ತಮವಾದ ವ್ಯಾಯಾಮ ಮತ್ತು ಅಭ್ಯಂಗ ಸ್ನಾನದ ಆಚರಣೆಯನ್ನು ನಾವು ಚಳಿಗಾಲದಲ್ಲಿ ಇಟ್ಟುಕೊಂಡರೆ, ಅದು ಪೂರ್ತಿ ವರ್ಷ ನಮ್ಮನ್ನು ಕಾಪಾಡುವುದರಲ್ಲಿ ಸಂಶಯ ವಿಲ್ಲ.
ಇನ್ನು ಈ ಕಾಲವು ಮಧುರರಸ ಪ್ರಧಾನವಾದ, ಜಿಡ್ಡಿನಂಶ ಇರುವ ಆಹಾರವನ್ನು ಸೇವಿಸಲು ಸೂಕ್ತ ಕಾಲ. ಇದು ನಮಗೆ ಉತ್ತಮವಾದ ಪುಷ್ಟಿಯನ್ನು ನೀಡಿ, ಶರೀರದ ಬೆಳವಣಿಗೆಗೆ ಸಹಾಯ ಮಾಡು ತ್ತದೆ. ವಿಶೇಷವಾಗಿ ಬೆಳೆಯುವ ಮಕ್ಕಳಿಗೆ ಇಂಥ ಆಹಾರವನ್ನು ಶೀತ ಕಾಲದಲ್ಲಿ ನೀಡುವುದು ಬಹಳ ಪ್ರಯೋಜನಕಾರಿ.
ಇದನ್ನೂ ಓದಿ: Dr Sadhanashree Column: ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ
ಹಾಗಾಗಿ, ಇಂದಿನ ಸಂಚಿಕೆಯಲ್ಲಿ ಈ ಚಳಿಗಾಲದಲ್ಲಿ ಮಕ್ಕಳಿಗೆ ನೀಡಬಹುದಾದ ಪುಷ್ಟಿಕರ ಆಹಾರ ವನ್ನು, ಆಯುರ್ವೇದದ ಚೌಕಟ್ಟಿನಲ್ಲಿ ಅದನ್ನು ತಯಾರಿಸುವ ವಿಧಾನವನ್ನು ತಿಳಿದು ಕೊಳ್ಳೋಣ. ಬಳಸುವ ಮುನ್ನ ನೆನಪಿನಲ್ಲಿಡಬೇಕಾದ ಅಂಶವೆಂದರೆ- ಇದನ್ನು ಮಕ್ಕಳ ಹಸಿವೆ ಮತ್ತು ಜೀರ್ಣ ಶಕ್ತಿಯನ್ನು ಗಮನಿಸಿ ಕೊಡುವುದು ಉತ್ತಮ.
ಹಸಿವೆಯಿದ್ದಾಗ ಪೌಷ್ಟಿಕ ಆಹಾರವನ್ನು ನೀಡಿದರೆ ಅದರಿಂದ ಪ್ರಯೋಜನಗಳು ಹಲವು. ಹಸಿವೆ ಕಡಿಮೆ ಇದ್ದಾಗ, ಜೀರ್ಣಶಕ್ತಿ ಕುಗ್ಗಿದಾಗ, ಜ್ವರ, ನೆಗಡಿ, ಕೆಮ್ಮುಗಳಿದ್ದಾಗ ಇದನ್ನು ನೀಡಬಾರದು.
ನೆಲ್ಲಿಕಾಯಿ ಜಾಮ್
ಬೇಕಾಗುವ ಪದಾರ್ಥಗಳು: ೨ ಬಟ್ಟಲು ಬೆಟ್ಟದ ನೆಲ್ಲಿಕಾಯಿ ತುರಿ, ೨ ಬಟ್ಟಲು ಸಕ್ಕರೆ ಅಥವಾ ಕಲ್ಲು ಸಕ್ಕರೆ ಪುಡಿ, ೨ ಬಟ್ಟಲು ತುಪ್ಪ, ಏಲಕ್ಕಿ ಪುಡಿ ಕಾಲು ಚಮಚ ಮಾಡುವ ವಿಧಾನ: ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ನಯವಾಗಿ ತುರಿಯಬೇಕು.
ಒಂದು ದಪ್ಪ ತಳದ ಪಾತ್ರೆಗೆ ಎರಡು ಬಟ್ಟಲು ಸಕ್ಕರೆ ಮತ್ತು ಎರಡು ಬಟ್ಟಲು ನೀರನ್ನು ಹಾಕಿ ಅದನ್ನು ಕುದಿಯಲು ಇಡಬೇಕು. ಇದು ತಳ ಹಿಡಿಯದ ಹಾಗೆ ಮತ್ತೆ ಮತ್ತೆ ತಿರುಗಿಸುತ್ತಿರಬೇಕು. ಈ ಮಿಶ್ರಣವು ಒಂದು ಕುದಿ ಬಂದ ಮೇಲೆ ತುರಿದಿಟ್ಟುಕೊಂಡ ಎರಡು ಬಟ್ಟಲು ನೆಲ್ಲಿಕಾಯಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಅದರ ನೀರಿನ ಅಂಶವೆಲ್ಲವೂ ಹೋಗುವವರೆಗೆ ಚೆನ್ನಾಗಿ ಬೇಯಿಸ ತಕ್ಕದ್ದು. ಸತತವಾಗಿ ತಿರುಗಿಸುತ್ತಿರಬೇಕು.
ನೀರು ಪೂರ್ತಿ ಕಡಿಮೆಯಾದ ಮೇಲೆ ಅದಕ್ಕೆ ತುಪ್ಪವನ್ನು ಹಾಕಿ ಸ್ವಲ್ಪ ತಿರುಗಿಸಿ. ಯಾವ ಕಾರಣ ಕ್ಕೂ ತಳ ಹಿಡಿಯದಂತೆ ಎಚ್ಚರ ವಹಿಸತಕ್ಕದ್ದು. ಮಿಶ್ರಣವು ತಳಬಿಟ್ಟ ನಂತರ ಪಾತ್ರೆಯನ್ನು ಒಲೆ ಯಿಂದ ಕೆಳಗಿಳಿಸಿ, ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ತಿರುಗಿಸಿ ತಣ್ಣಗಾಗಲು ಬಿಡಬೇಕು.
ನೆಲ್ಲಿಕಾಯಿಯಿಂದ ತಯಾರಿಸಿದ ಸವಿಯಾದ ಜಾಮ್ ಈಗ ಸಿದ್ಧ. ಇದನ್ನು ಒಂದು ಸ್ವಚ್ಛವಾದ ಗಾಜಿನ ಶೀಶೆಯಲ್ಲಿ ಶೇಖರಿಸಿದರೆ ಬಹಳ ದಿನಗಳವರೆಗೂ ಬಳಸಬಹುದು. ಇದನ್ನು ದೋಸೆ, ಚಪಾತಿ, ರೊಟ್ಟಿಯ ಜತೆಗೆ ತಿನ್ನಲು ಬಹಳ ರುಚಿ. ಮಕ್ಕಳಿಗಂತೂ ಇದು ಅತ್ಯಂತ ಪ್ರಿಯ. ಇದರ ಪ್ರಮುಖ ಉಪಯೋಗಗಳು: ಇದೊಂದು ಉತ್ತಮ ರಸಾಯನ.
ಆಯಸ್ಸನ್ನು ವೃದ್ಧಿ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಸಿವೆ ಮತ್ತು ಜೀರ್ಣಶಕ್ತಿಯನ್ನು ವೃದ್ಧಿ ಮಾಡಿ ಪಿತ್ತವನ್ನು ಶಮನ ಮಾಡುತ್ತದೆ. ವಿಶೇಷವಾಗಿ ಮಕ್ಕಳಿಗೆ ಪುಷ್ಟಿಯನ್ನು ಕೊಡುತ್ತದೆ. ಕೂದಲು ಉದುರುವುದನ್ನು ತಡೆದು ಸೊಂಪಾಗಿ ಬೆಳೆಯಲು ಸಹಾಯಕ. ಹೃದಯದ ಆರೋಗ್ಯಕ್ಕೆ ಹಿತಕರ. ಸುಸ್ತು, ಆಯಾಸವನ್ನು ಕಡಿಮೆ ಮಾಡಿ ಲವಲವಿಕೆಯನ್ನು ನೀಡುತ್ತದೆ.
ಬ್ರಾಹ್ಮೀ ಲೇಹ್ಯ
ಬೇಕಾಗುವ ಪದಾರ್ಥಗಳು: ಒಂದೆಲಗದ ಸೊಪ್ಪು ೨ ಬಟ್ಟಲು, ಬೆಲ್ಲ ೨ ಬಟ್ಟಲು, ಜೀರಿಗೆ ಪುಡಿ ೧ ಚಮಚ, ಧನಿಯ ಪುಡಿ ೧ ಚಮಚ, ಒಣದ್ರಾಕ್ಷಿ ೧/೪ ಬಟ್ಟಲು, ಉತ್ತುತ್ತೆ ೧/೪ ಬಟ್ಟಲು, ಬಾದಾಮಿ ೫ರಿಂದ ೬, ಏಲಕ್ಕಿ ಪುಡಿ ೧/೨ ಚಮಚ, ಗಸಗಸೆ ೧ ಚಮಚ, ತುಪ್ಪ ೧/೨ ಬಟ್ಟಲು.
ಮಾಡುವ ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿ, ಶೋಧಿಸಿಕೊಳ್ಳಬೇಕು. ಗಸಗಸೆಯನ್ನು ಸ್ವಲ್ಪ ಲಘುವಾಗಿ ಹುರಿದುಕೊಂಡು ಅದಕ್ಕೆ ಒಣದ್ರಾಕ್ಷಿ, ಉತ್ತುತ್ತೆ, ಬಾದಾಮಿ, ಗಸಗಸೆ, ಧನಿಯಾ ಮತ್ತು ಜೀರಿಗೆ ಪುಡಿಯನ್ನು ಒಟ್ಟಿಗೆ ಸೇರಿಸಿ ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದೆಲಗವನ್ನು ಬೇರುಸಮೇತ ತೆಗೆದುಕೊಂಡು, ಸ್ವಚ್ಛ ಮಾಡಿ, ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಂಡು, ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಬಟ್ಟೆಯ ಸಹಾಯದಿಂದ ಅದರ ರಸವನ್ನು ಹಿಂಡಿ ತೆಗೆದು ಇಟ್ಟುಕೊಳ್ಳಬೇಕು. ಒಂದೆಲಗದ ರಸವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಕಾಯಿಸಲು ಇಡಬೇಕು. ಹಸಿ ವಾಸನೆ ಹೋಗು ವವರೆಗೂ ಇದನ್ನು ಕಾಯಿಸತಕ್ಕದ್ದು. ನಂತರ ಕರಗಿಸಿದ ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಬೇಕು.
ಒಂದು ಕುದಿ ಬಂದ ಮೇಲೆ, ನುಣ್ಣಗೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ತಿರುಗಿಸಿ ನೀರಿನ ಅಂಶವೆಲ್ಲ ಕಡಿಮೆಯಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಬೇಕು. ಪದೇ ಪದೆ ಕೈಯಾಡಿಸ ತಕ್ಕದ್ದು. ಗಟ್ಟಿಯಾಗಿ ಲೇಹದ ಹದಕ್ಕೆ ಬಂದ ನಂತರ ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಹಾಕಿ ತಳ ಹಿಡಿಯದ ಹಾಗೆ ಮತ್ತೆ ತಿರುಗಿಸಬೇಕು. ನಂತರ ಒಲೆಯಿಂದ ಕೆಳಗಿಳಿಸಿದರೆ ಒಂದೆಲಗದ ಲೇಹ ಸಿದ್ಧ. ಇದನ್ನು ಗಾಜಿನ ಶೀಶೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು. ಇದನ್ನು ಒಂದು ಚಮಚ ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಬಿಸಿ ಹಾಲು ಅಥವಾ ಬಿಸಿ ನೀರಿನೊಂದಿಗೆ ಸೇವಿಸುವುದು ಉತ್ತಮ.
ಇದರ ಪ್ರಯೋಜನಗಳು: ಇದು ಮಕ್ಕಳ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತಮ ನಿzಯನ್ನು ನೀಡಿ ನರಗಳ ದುರ್ಬಲತೆಯನ್ನು ಸರಿಪಡಿಸುತ್ತದೆ. ದೇಹಕ್ಕೆ ತಂಪನ್ನು ಎರೆದು ಪಿತ್ತವನ್ನು ಶಮನ ಮಾಡುತ್ತದೆ. ಮಕ್ಕಳಿಗೆ ಪುಷ್ಟಿ ನೀಡಿ ಮಿದುಳಿನ ಕಾರ್ಯವನ್ನು ಚುರುಕು ಗೊಳಿಸುತ್ತದೆ
ಮಖಾನ ಲಡ್ಡು
ಬೇಕಾಗುವ ಪದಾರ್ಥಗಳು: ಮಖಾನ (ಕಮಲದ ಬೀಜ) ೪ ಬಟ್ಟಲು, ಭತ್ತದ ಅರಳು ೧ ಬಟ್ಟಲು, ಒಣಕೊಬ್ಬರಿ ೧ ಬಟ್ಟಲು, ಬಾದಾಮಿ ೧/೨ ಬಟ್ಟಲು, ಒಣದ್ರಾಕ್ಷಿ ೧/೪ ಬಟ್ಟಲು, ಗೋಡಂಬಿ ೧/೪ ಬಟ್ಟಲು, ಬೆಲ್ಲ ೨ ಬಟ್ಟಲು, ಗಸಗಸೆ ೨ ಚಮಚ, ಏಲಕ್ಕಿ ಪುಡಿ ೧/೨ ಚಮಚ, ತುಪ್ಪ ೧ ಬಟ್ಟಲು.
ತಯಾರಿಸುವ ವಿಧಾನ: ಬೆಲ್ಲಕ್ಕೆ ಎರಡು ಬಟ್ಟಲು ನೀರು ಹಾಕಿ ಪಾಕ ಮಾಡಲು ಇಡಬೇಕು. ಮಧ್ಯೆ ಮಧ್ಯೆ ತಿರುಗಿಸುತ್ತಾ ಇರಬೇಕು. ಮಖಾನವನ್ನು ಗರಿಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ಕೊಂಡು ತಣ್ಣಗಾಗಲು ಬಿಡಿ. ಅಂತೆಯೇ, ಭತ್ತದ ಅರಳನ್ನು ಕೂಡ ಲಘುವಾಗಿ ಹುರಿದು ಕೊಳ್ಳಬೇಕು. ಒಣಕೊಬ್ಬರಿಯನ್ನು ತೇವಾಂಶ ಹೋಗುವವರೆಗೆ ಬಿಸಿ ಮಾಡಿಕೊಳ್ಳಿ. ಬಾದಾಮಿ ಯನ್ನು ಸಣ್ಣ ಉರಿಯಲ್ಲಿ ಹುರಿದಿಟ್ಟುಕೊಳ್ಳಬೇಕು.
ಎಲ್ಲ ಪದಾರ್ಥಗಳನ್ನು ಬೇರೆ ಬೇರೆಯಾಗಿ ಪುಡಿ ಮಾಡಿಕೊಂಡು ಬಾದಾಮಿಯನ್ನು ಮಾತ್ರ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಬೆಲ್ಲ ಒಂದೆಳೆ ಪಾಕ ಬಂದ ಕೂಡಲೇ ಒಲೆಯಿಂದ ಇಳಿಸಿ. ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿದುಕೊಳ್ಳಬೇಕು. ಹಾಗೆಯೇ, ಗಸಗಸೆಯನ್ನು ಸಹ ಹುರಿದುಕೊಳ್ಳಬೇಕು. ಪುಡಿ ಮಾಡಿಕೊಂಡ ಎಲ್ಲ ಪದಾರ್ಥಗಳನ್ನು ಸೇರಿಸಿಕೊಂಡು, ಹುರಿದಿಟ್ಟುಕೊಂಡ ಒಣದ್ರಾಕ್ಷಿ, ಗೋಡಂಬಿ ಮತ್ತು ಗಸಗಸೆಯನ್ನು ಹಾಕಿ, ಅರ್ಧ ಬಟ್ಟಲು ತುಪ್ಪವನ್ನು ಬಿಸಿ ಮಾಡಿಕೊಂಡು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಬೆಲ್ಲದ ಪಾಕವನ್ನು ನಿಧಾನವಾಗಿ ಸೇರಿಸುತ್ತಾ ಇಷ್ಟ ಬಂದ ಗಾತ್ರದ ಉಂಡೆಗಳನ್ನು ಮಾಡಬೇಕು.ಹೀಗೆ ಮಾಡಿದರೆ ಮಖಾನ ಲಡ್ಡು ಸಿದ್ದ.
ಮಖಾನ ಲಡ್ಡುವಿನ ಲಾಭಗಳು: ಇದು ಮಕ್ಕಳಿಗೆ ಉತ್ತಮ ಪುಷ್ಟಿದಾಯಕ ಆಹಾರ. ದೇಹಕ್ಕೆ ಬಲಕರವೂ ಆಗಿದ್ದು ವಾತ-ಪಿತ್ತವನ್ನು ಶಮನ ಮಾಡುತ್ತದೆ. ಇದು ಮೂಳೆ ಮಾಂಸಖಂಡಗಳ ಬೆಳವಣಿಗೆಗೆ ಸಹಾಯಕ. ಖರ್ಜೂರ ಹಲ್ವಾ ಬೇಕಾಗುವ ಪದಾರ್ಥಗಳು: ಖರ್ಜೂರ ೨ ಬಟ್ಟಲು, ಕ್ಯಾರೆಟ್ ೧ ಬಟ್ಟಲು, ಬೆಲ್ಲ ೨ ಬಟ್ಟಲು, ಏಲಕ್ಕಿ ಪುಡಿ ೧/೪ ಚಮಚ, ಬಾದಾಮಿ ೧/೪ ಬಟ್ಟಲು, ಪಿಸ್ತಾ ೧/೪ ಬಟ್ಟಲು, ತುಪ್ಪ ೧/೨ ಬಟ್ಟಲು.
ಮಾಡುವ ವಿಧಾನ: ಮೆತ್ತಗಿರುವ ಖರ್ಜೂರವನ್ನು ತೆಗೆದುಕೊಂಡು ನೀರಿನಲ್ಲಿ ತೊಳೆದು ಕೊಳ್ಳಬೇಕು. ಅದರ ಬೀಜವನ್ನು ಬೇರ್ಪಡಿಸಬೇಕು. ಕ್ಯಾರೆಟ್ ಅನ್ನು ಹೋಳುಗಳಾಗಿ ಮಾಡಿಕೊಳ್ಳ ಬೇಕು. ಈಗ ಖರ್ಜೂರ ಮತ್ತು ಕ್ಯಾರೆಟ್ ಅನ್ನು ನೀರಲ್ಲಿ ಹಾಕಿ ಬೇಯಿಸಿಕೊಳ್ಳಬೇಕು. ನಂತರ ನೀರನ್ನು ಬಸಿದು ಎರಡನ್ನೂ ನುಣ್ಣಗೆ ರುಬ್ಬಿಕೊಳ್ಳಬೇಕು.
ಬಾದಾಮಿ ಮತ್ತು ಪಿಸ್ತಾವನ್ನು ಸಣ್ಣದಾಗಿ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಒಂದು ದಪ್ಪ ತಳದ ಪಾತ್ರೆಯಲ್ಲಿ ಎರಡು ಕಪ್ಪು ನೀರನ್ನು ಹಾಕಿ, ಅದಕ್ಕೆ ಬೆಲ್ಲ ಹಾಕಿ, ಮಧ್ಯಮ ಉರಿಯಲ್ಲಿ ಕುದಿಯಲು ಇಡಬೇಕು. ಪಾಕ ಬರುವವರೆಗೂ ಅದನ್ನು ಕಾಯಿಸಿ ಪಾಕ ಬಂದ ಮೇಲೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಬೇಕು. ನಂತರ ಹುರಿದಿಟ್ಟುಕೊಂಡ ಬಾದಾಮಿ, ಪಿಸ್ತಾ ಮತ್ತು ಏಲಕ್ಕಿ ಪುಡಿಯನ್ನು ಹಾಗೂ ತುಪ್ಪವನ್ನು ಹಾಕಿ ಚೆನ್ನಾಗಿ ತಿರುಗಿಸಿ, ತಳ ಬಿಟ್ಟು ಬರುವವರೆಗೂ ತಿರುಗಿಸುತ್ತಿರಬೇಕು. ಹಲ್ವಾದ ಹದಕ್ಕೆ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ, ಒಂದು ತಟ್ಟೆಗೆ ತುಪ್ಪ ಸವರಿ, ಅದರ ಮೇಲೆ ಹರಡಬೇಕು. ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ತಣ್ಣಗಾಗಲು ಬಿಡಬೇಕು. ಈಗ ರುಚಿಯಾದ ಖರ್ಜೂರದ ಹಲ್ವಾ ಸಿದ್ಧ.
ಮುಖ್ಯ ಉಪಯೋಗಗಳು: ಮಕ್ಕಳ ದೇಹದ ಬೆಳವಣಿಗೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳಿಗೆ ಬಲವನ್ನು ನೀಡಿ ರಕ್ತವನ್ನು ವೃದ್ಧಿ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಿ ಮೂಲವ್ಯಾಧಿಯನ್ನು ಶಮನ ಮಾಡುತ್ತದೆ. ಸುಸ್ತು ಆಯಾಸಗಳನ್ನು ನೀಗಿಸುತ್ತದೆ.
ಆಯುರ್ವೇದದ ಪ್ರಕಾರ, ಚಳಿಗಾಲವು ದೇಹದ ಪೋಷಣೆ ಮತ್ತು ಬಲವರ್ಧನೆಗೆ ಅತ್ಯುತ್ತಮ ಕಾಲ. ಈ ಋತುವಿನಲ್ಲಿ ಮನಸ್ಸು ಮತ್ತು ದೇಹಕ್ಕೆ ಬಲವನ್ನು ನೀಡುವ ಸಾತ್ವಿಕ ಆಹಾರ ಅವಶ್ಯಕ. ಆಮ್ಲಾ ಜಾಮ, ಬ್ರಾಹ್ಮೀ ಲೇಹ, ಮಖಾನಾ ಲಡ್ಡು, ಖರ್ಜೂರ ಹಲ್ವಾ ಮುಂತಾದ ಖಾದ್ಯಗಳು ಮಕ್ಕಳಿಗೆ ಪೋಷಣೆಯ ಜತೆಗೆ ಸಂತೃಪ್ತಿಯ ಅನುಭವವನ್ನು ಕೊಡುತ್ತವೆ. ಇಂಥ ಆಹಾರಗಳು ಶೀತ ಋತುವಿನ ಅಗ್ನಿಯನ್ನು ಸಮತೋಲನಗೊಳಿಸಿ, ದೇಹವನ್ನು ದೃಢಗೊಳಿಸುತ್ತವೆ. ಹೀಗಾಗಿ, ಈ ಚಳಿಗಾಲದಲ್ಲಿ ಆಯುರ್ವೇದದ ಮಾರ್ಗದರ್ಶನದಂತೆ ಪೋಷಕ ತಿನಿಸುಗಳಿಂದ ಮಕ್ಕಳ ಆರೋಗ್ಯ ದ ನೆಲೆಯನ್ನು ಬಲಪಡಿಸೋಣ.