ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ

ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ ಆತುರಸ್ಯ ವಿಕಾರಪ್ರ ಶಮನಂ ಚ’ ಎಂಬ ಆಯುರ್ವೇದದ ಮೂಲ ತತ್ತ್ವವು ಸ್ವಾಸ್ಥ್ಯದ ರಕ್ಷಣೆಯನ್ನೂ ಹಾಗೂ ರೋಗಗಳ ನಿವಾರಣೆಯನ್ನೂ ಒಟ್ಟಾಗಿ ನೋಡುತ್ತದೆ. ಮಾನವ ಶರೀರದ ಅತ್ಯಂತ ದೊಡ್ಡ ಅಂಗವಾದ ಚರ್ಮವು ದೇಹದ ಒಳಗಿನ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದರೆ ತಪ್ಪಾಗಲಾರದು. ಆಯುರ್ವೇದದಲ್ಲಿ ಚರ್ಮರೋಗಗಳನ್ನು ‘ಕುಷ್ಠ’ ಎಂಬ ಸಾಮಾನ್ಯ ಶೀರ್ಷಿಕೆಯಡಿಯಲ್ಲಿ ವಿವರಿಸಲಾಗಿದೆ.

ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ ಆತುರಸ್ಯ ವಿಕಾರಪ್ರ ಶಮನಂ ಚ’ ಎಂಬ ಆಯುರ್ವೇದದ ಮೂಲ ತತ್ತ್ವವು ಸ್ವಾಸ್ಥ್ಯದ ರಕ್ಷಣೆಯನ್ನೂ ಹಾಗೂ ರೋಗಗಳ ನಿವಾರಣೆಯನ್ನೂ ಒಟ್ಟಾಗಿ ನೋಡುತ್ತದೆ. ಮಾನವ ಶರೀರದ ಅತ್ಯಂತ ದೊಡ್ಡ ಅಂಗವಾದ ಚರ್ಮವು ದೇಹದ ಒಳಗಿನ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದರೆ ತಪ್ಪಾಗಲಾರದು. ಆಯುರ್ವೇದದಲ್ಲಿ ಚರ್ಮರೋಗಗಳನ್ನು ‘ಕುಷ್ಠ’ ಎಂಬ ಸಾಮಾನ್ಯ ಶೀರ್ಷಿಕೆಯಡಿಯಲ್ಲಿ ವಿವರಿಸಲಾಗಿದೆ.

ಕುಷ್ಣಾತಿ ವಪುಃ ಇತಿ ಕುಷ್ಠಮ್! ಯಾವುದು ಶರೀರವನ್ನು ವಿಕೃತಗೊಳಿಸುವುದೋ/ವಿಕೃತವಾಗಿ ಕಾಣುವಂತೆ ಮಾಡುವುದೋ ಅದು ಕುಷ್ಠ! ಕುಷ್ಠ ಎಂಬ ಶಬ್ದವು ಕೇವಲ ಕುಷ್ಠರೋಗ ಅರ್ಥ ದಲ್ಲಲ್ಲ; ಅದು ಎಲ್ಲಾ ರೀತಿಯ ಚರ್ಮರೋಗಗಳಿಗೆ ಬಳಸಲಾಗುತ್ತದೆ.

ಚರ್ಮದ ವ್ಯಾಧಿಗಳನ್ನು ಆಯುರ್ವೇದವು ಅತ್ಯಂತ ವಿಶ್ಲೇಷಿತವಾಗಿ ವಿವರಿಸಿದೆ- ಅದರ ಕಾರಣ, ಲಕ್ಷಣ, ಉಪಚಾರ ಮತ್ತು ಪಥ್ಯಗಳೊಂದಿಗೆ. ಆಯುರ್ವೇದದಲ್ಲಿ ಚರ್ಮರೋಗಗಳ ವರ್ಗೀಕರಣ ಹೀಗಿದೆ:

೧. ಮಹಾಕುಷ್ಠ: ಗಂಭೀರ ಹಾಗೂ ದೀರ್ಘಕಾಲೀನ ಚರ್ಮರೋಗಗಳು.

೨. ಕ್ಷುದ್ರ ಕುಷ್ಠ: ಸಾಧಾರಣ ಅಥವಾ ತಾತ್ಕಾಲಿಕ ಚರ್ಮದ ಸಮಸ್ಯೆಗಳು.

ಎಲ್ಲಾ ರೀತಿಯ ಕುಷ್ಠಗಳ/ಚರ್ಮರೋಗಗಳ ಕಾರಣಗಳನ್ನು ಆಯುರ್ವೇದ ಶಾಸ್ತ್ರದಲ್ಲಿ ವಿವರಿಸಿ ರುವಂತೆ ತಿಳಿದುಕೊಳ್ಳೋಣ. ಆಯುರ್ವೇದದ ಪ್ರಕಾರ, ಚರ್ಮರೋಗಗಳ ಮೂಲ ಕಾರಣಗಳು ದೋಷಗಳ ಅಸಮತೋಲನ, ಆಹಾರ ಮತ್ತು ಜೀವನಶೈಲಿಯ ಅಕ್ರಮಗಳು. ಪ್ರಮುಖ ಕಾರಣಗಳನ್ನು ಕೆಳಗಿನಂತೆ ವಿವರಿಸಬಹುದು:

೧. ಅಹಿತಕರ ಆಹಾರ ಸೇವನೆ

ಮೊಸರನ್ನು ಬಿಸಿ ಮಾಡಿ ಸೇವಿಸುವುದು, ಹುಳಿ ಹಣ್ಣುಗಳನ್ನು ಹಾಲಿನೊಂದಿಗೆ ಸೇವಿಸುವುದು, ಜೇನುತುಪ್ಪವನ್ನು ಬಿಸಿ ಮಾಡುವುದು, ಮೀನು ಮತ್ತು ಹಾಲಿನಂಥ ವಿರುದ್ಧ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು.

ಅಧಿಕ ಉಪ್ಪು, ಹುಳಿ, ಉಷ್ಣ ಆಹಾರ ಸೇವನೆ. ಇಂದಿನ ಚಾಟ್ಸ್, ಫಾಸ್ಟ್‌ ಫುಡ್, ಮಂಚೂರಿಯನ್ ಇನ್ನಿತರ ಅತಿಯಾದ ಮಸಾಲೆ ಮತ್ತು ಎಣ್ಣೆಗಳಿಂದ ತಯಾರಿಸಿದ ಪದಾರ್ಥಗಳು ಚರ್ಮದ ಸ್ವಾಸ್ಥ್ಯವನ್ನು ಕೆಡಿಸುವುದರಲ್ಲಿ ಸಂಶಯವಿಲ್ಲ.

ಜೀರ್ಣಶಕ್ತಿಯನ್ನು ಗಮನಿಸದೆ ಜೀರ್ಣಕ್ಕೆ ಜಡವಾದ ಆಹಾರವನ್ನು ಪದೇ ಪದೆ ಸೇವಿಸುವುದು ಶರೀರದಲ್ಲಿ ಆಮ ವಿಷವನ್ನು ಉತ್ಪತ್ತಿ ಮಾಡಿ, ಈ ವಿಷವು ವಿವಿಧ ರೀತಿಯ ಚರ್ಮದ ತೊಂದರೆ ಗಳನ್ನು ಪ್ರಚೋದಿಸುತ್ತದೆ.

ಚರ್ಮರೋಗದ ಮತ್ತೊಂದು ಮುಖ್ಯವಾದ ಕಾರಣವೆಂದರೆ ಬಿಸಿ ನೀರು ಅಥವಾ ಬಿಸಿ ಆಹಾರ ವನ್ನು ಸೇವಿಸಿದ ತಕ್ಷಣ ತಣ್ಣೀರು ಅಥವಾ ತಣ್ಣಗಿನ ಆಹಾರವನ್ನು ಸೇವಿಸುವುದು. ಇಂದು ಸಾಮಾನ್ಯವಾಗಿ, ಸಮಾರಂಭಗಳಲ್ಲಿ ಬಿಸಿ ಊಟದ ಜತೆಯ ನೀಡುವ ಐಸ್‌ಕ್ರೀಮ್ ಇದಕ್ಕೆ ಒಳ್ಳೆಯ ಉದಾಹರಣೆ. ಇಂಥ ಅಭ್ಯಾಸ ಮುಂದೆ ಚರ್ಮದ ತೊಂದರೆಗೆ ಕಾರಣವಾಗಬಹುದು.

ಹಾಲು, ಮೊಸರು, ಮಜ್ಜಿಗೆ, ಹುರಳಿ, ಉದ್ದಿನಂಥ ಪದಾರ್ಥಗಳನ್ನು ಹೊಟ್ಟೆ ತುಂಬ ತಿಂದು ಕೂಡಲೇ ಕೆಲಸ ಮಾಡುವುದು ವ್ಯಾಯಾಮ ಮಾಡುವುದು ಅಥವಾ ಬಿಸಿಲಿಗೆ ಹೋಗುವುದು ಚರ್ಮವ್ಯಾಧಿಗೆ ಕಾರಣ. ಆಹಾರದ ನಂತರ ವ್ಯಾಯಾಮ ನಿಷಿದ್ಧ.

೨. ಅನುಚಿತ ಜೀವನಶೈಲಿ

ಅತಿಯಾಗಿ ಆಯಾಸವಾದಾಗ ಅಥವಾ ಬಿಸಿಲಿನಿಂದ ಹಿಂತಿರುಗಿದಾಗ ಅಥವಾ ಮೈ ಬಿಸಿಯಾಗಿರು ವಾಗ ಕೂಡಲೇ ಮೈಮೇಲೆ ತಣ್ಣೀರನ್ನು ಹಾಕಿಕೊಳ್ಳುವುದು ಚರ್ಮರೋಗಗಳು ಉಂಟಾಗಲು ಒಂದು ಮುಖ್ಯ ಕಾರಣ. ಅಂತೆಯೇ ಸ್ನಾನ ಮಾಡುವಾಗ ಬಿಸಿ ನೀರನ್ನು ಹಾಕಿಕೊಂಡು ತಕ್ಷಣವೇ ತಣ್ಣೀರನ್ನು ಬಳಸುವುದು ಸಹ ಚರ್ಮಕ್ಕೆ ಒಳ್ಳೆಯದಲ್ಲ ದಿನದಲ್ಲಿ ನಿದ್ರೆ ಮಾಡುವುದು, ಅದರಲ್ಲೂ ಊಟವಾದ ತಕ್ಷಣವೇ ಮಲಗುವ ಅಭ್ಯಾಸ ಚರ್ಮ ರೋಗಕಾರಕ. ಅಂತೆಯೇ ರಾತ್ರಿ ಜಾಗರಣೆ ಕೂಡ.

೩. ಮಾನಸಿಕ ಕಾರಣಗಳು: ಆತಂಕ, ಕೋಪ, ಭಯ, ಉದ್ವೇಗಾದಿ ಕಾರಣಗಳು ತ್ವಚೆಗೆ ತೊಂದರೆ ಯುಂಟು ಮಾಡುತ್ತದೆ. ಪೌರಾಣಿಕವಾಗಿ ಹೇಳುವುದಾದರೆ, ಶರಭನು ಶಿವನಿಂದ ಸೃಷ್ಟಿಸಲ್ಪಟ್ಟ ಒಂದು ಶಕ್ತಿಶಾಲಿ ರೂಪ- ಅಷ್ಟಬಾಹು, ಸಿಂಹ-ಪಕ್ಷಿ ಸಂಯುಕ್ತ ದೈವಿಕ ಸೃಷ್ಟಿ. ವಿಷ್ಣುವಿನ ನರಸಿಂಹಾವತಾರದ ನಂತರ, ಅವನ ಕೋಪ ಮತ್ತು ಉಗ್ರತೆ ನಿಯಂತ್ರಣಕ್ಕೆ ಬರದೆ, ಪ್ರಪಂಚದ ಸಮತೋಲನ ಹಾಳಾಗುತ್ತಿತ್ತು. ಶಿವನು ಶರಭ ರೂಪದಲ್ಲಿ ಅವನಿಗೆ ಎದುರಾದನು. ನರಸಿಂಹನು ಶರಭನೊಂದಿಗೆ ಯುದ್ಧ ಮಾಡಿದಾಗ, ತೀವ್ರ ಉಷ್ಣತೆ, ಶೋಥ ಮತ್ತು ಚರ್ಮದ ಉರಿ ಅವನ ದೇಹದಲ್ಲಿ ಉಂಟಾಯಿತು.

ಆಯುರ್ವೇದದ ತಾತ್ವಿಕ ದೃಷ್ಟಿಯಲ್ಲಿ, ಇದು ಪಿತ್ತದ ಅತಿಯಾದ ಪ್ರಾಬಲ್ಯದಿಂದ ಉಂಟಾದ ‘ಚರ್ಮದ ದೋಷ’ ಎಂದು ವಿವರಣೆ ನೀಡಬಹುದು.

ನಂತರ ಶಿವನ ಕೃಪೆಯಿಂದ ನರಸಿಂಹನು ಶಾಂತನಾದನು; ಅವನ ಉರಿ, ಉಷ್ಣತೆ ಮತ್ತು ಚರ್ಮದ ವ್ಯಾಧಿ ಶಮನಗೊಂಡಿತು. ಈ ಕಥೆಯ ತಾತ್ಪರ್ಯವೇನೆಂದರೆ- ಕೋಪ, ಅಹಂಕಾರ ಮತ್ತು ಅತಿಯಾದ ಉಷ್ಣ ಸ್ವಭಾವವು ದೇಹದ ಪಿತ್ತದ ಅಸಮತೋಲನಕ್ಕೆ ಕಾರಣವಾಗುತ್ತದೆ. ಮಾನಸಿಕ ವೈಪರೀತ್ಯವು ಚರ್ಮರೋಗದ ಒಂದು ಆಂತರಿಕ ಕಾರಣ ಎಂದು ಆಯುರ್ವೇದವು ಹೇಳುತ್ತದೆ. ಶಾಂತಿ, ಕ್ಷಮೆ ಮತ್ತು ಸಾತ್ವಿಕತೆ ಚರ್ಮದ ಶುದ್ಧತೆಗೆ ಅಗತ್ಯವಾದ ಮಾನಸಿಕ ಪಥ್ಯಗಳಾಗಿವೆ.

೪. ಕರ್ಮಜನ್ಯ ಕಾರಣಗಳು: ತಂದೆ-ತಾಯಿಯರ ನಾಸ್ತಿಕ್ಯ, ಗುರುನಿಂದನೆ, ಸಾಧು ಸಂತರನ್ನು ಅವಮಾನಿಸುವುದು ಸೇರಿದಂತೆ ಎಲ್ಲಾ ರೀತಿಯ ಕಾಯಿಕ-ವಾಚಿಕ-ಮಾನಸಿಕ ಪಾಪಕರ್ಮಗಳು ಕುಷ್ಠ ರೋಗಕ್ಕೆ ಕಾರಣ.

ಚಿಕಿತ್ಸೆಗೆ ಬಗ್ಗದ ಕುಷ್ಠರೋಗವು ಒಂದು ‘ಕರ್ಮ ಜನ್ಯ ವ್ಯಾಧಿ’ ಎಂದು ಆಯುರ್ವೇದ ಪರಿಗಣಿಸು ತ್ತದೆ. ಆಚಾರ್ಯ ಸುಶ್ರುತರು ಹೇಳಿರುವಂತೆ ಚರ್ಮರೋಗ ಇಟ್ಟುಕೊಂಡು ಸತ್ತರೆ ಮತ್ತೆ ಹುಟ್ಟುವಾಗಲೂ ಅದರೊಂದಿಗೇ ಹುಟ್ಟುತ್ತಾನೆ.

ಇಂಥ ಕರ್ಮಜನ್ಯ ವ್ಯಾಧಿಗಳಲ್ಲಿ ಕೆಲವು ವಿಶೇಷ ಚಿಕಿತ್ಸೆಗಳನ್ನು ಆಯುರ್ವೇದವು ಸೂಚಿಸುತ್ತದೆ. ವೈಯಕ್ತಿಕ ಚಾಂದ್ರಾಯಣಾದಿ ವ್ರತಗಳ ಅನುಷ್ಠಾನ, ಇಂದ್ರಿಯಗಳ ನಿಯಂತ್ರಣ, ಯಮ -ನಿಯಮಗಳ ಪರಿಪಾಲನೆ, ದಾನ-ಸತ್ಯ ಪರತೆ-ಬ್ರಹ್ಮಚರ್ಯ-ಸರಳತೆ ಮುಂತಾದವುಗಳ ಪಾಲನೆ, ಜ್ಞಾನಿಗಳ-ದೇವತೆಗಳ-ಗುರುಗಳ ಅರ್ಚನೆ.

ಎಲ್ಲ ಸ್ವಭಾವದ ಜನರನ್ನು ಸಮನಾಗಿ ಕಾಣುವ ಅಭ್ಯಾಸ, ಶಿವ-ಗಣಪತಿ-ಸುಬ್ರಹ್ಮಣ್ಯ-ಸ್ವನಕ್ಷತ್ರಾ ದಿ ದೇವತೆ ಹಾಗೂ ಸೂರ್ಯನ ಆರಾಧನೆ ನಾವು ಮಾಡಿದ ಪಾಪವು ಬೇರೆಯವರಿಗೆ ತಿಳಿಯುವಂತೆ ಮಾಡುವ ಪ್ರಯತ್ನ- ಇವುಗಳು ದೇಹದಲ್ಲಿ ಪ್ರಕಟವಾಗುವ ಚರ್ಮರೋಗವನ್ನು ಗೆಲ್ಲುವ ಸಾಧನಾ ಪಥವಾಗಿವೆ.

ಚರ್ಮರೋಗಗಳ ಸಾಮಾನ್ಯ ಲಕ್ಶಣಗಳೆಂದರೆ ಚರ್ಮದ ಬಣ್ಣದಲ್ಲಿ ಬದಲಾವಣೆ (ವರ್ಣ ವೈಷಮ್ಯ), ತುರಿಕೆ, ಉರಿ, ಶೋಥ, ಚರ್ಮ ಒಣಗುವುದು ಅಥವಾ ಸಿಪ್ಪೆ ಸುಲಿಯುವುದು, ಒಣಗಿ ಪುಡಿಯಂತೆ ಉದುರುವುದು, ಸ್ರಾವ, ಗುಳ್ಳೆಗಳು, ದಪ್ಪವಾಗುವುದು ಇತ್ಯಾದಿ. ಈ ಲಕ್ಷಣಗಳ ಪ್ರಕಾರ ವೈದ್ಯರು ದೋಷದ ಪ್ರಾಬಲ್ಯವನ್ನು (ವಾತ, ಪಿತ್ತ ಅಥವಾ ಕಫ) ಗುರುತಿಸಿ ಚಿಕಿತ್ಸೆ ನಿಗದಿ ಪಡಿಸುತ್ತಾರೆ. ಆಯುರ್ವೇದದಲ್ಲಿ ಶೋಧನ, ಶಮನ ಮತ್ತು ರಸಾಯನ ಚಿಕಿತ್ಸೆ ಎಂಬ ೩ ಹಂತಗಳು ಮುಖ್ಯವಾಗಿವೆ.

೧. ಶೋಧನ ಚಿಕತ್ಸೆ: ಈ ಹಂತದಲ್ಲಿ ದೇಹದೊಳಗಿನ ದೋಷ ಮತ್ತು ವಿಷಗಳನ್ನು ವಮನ, ವಿರೇಚನ ಮತ್ತು ಬಸ್ತಿಯಂಥ ಪಂಚಕರ್ಮ ಚಿಕಿತ್ಸೆಗಳ ಮೂಲಕ ಶುದ್ಧೀಕರಿಸಲಾಗುತ್ತದೆ. ವಮನ ವನ್ನು(ವಾಂತಿ ಮಾಡಿಸುವುದು)- ಪಿತ್ತ ಮತ್ತು ಕಫದ ಅತಿಯಾಗಿ ಇರುವ ಸ್ಥಿತಿಯಲ್ಲಿ ಸಂಯೋಜಿಸ ಲಾಗುತ್ತದೆ. ವಿರೇಚನವು (ಬೇಧಿ ಮಾಡಿಸುವುದು)- ರಕ್ತ ಮತ್ತು ಪಿತ್ತ ಶುದ್ಧಿಗೆ. ಬಸ್ತಿಯು (ಗುದದ್ವಾರದ ಮೂಲಕ ನೀಡುವ ಶೋಧನ)- ವಾತದ ವಿಕೃತಿಯಿದ್ದಾಗ.

೨. ಶಮನ ಚಿಕತ್ಸೆ : ಶೋಧನದ ನಂತರ ದೋಷಗಳನ್ನು ಸಮತೋಲನಗೊಳಿಸಲು ಶಮನ ಚಿಕಿತ್ಸೆ ನೀಡಲಾಗುತ್ತದೆ. ಇದು ಔಷಧ ಮತ್ತು ಪಥ್ಯಗಳ ಯುಕ್ತಿಪೂರ್ವಕ ಪ್ರಯೋಗ.

೩. ರಸಾಯನ ಚಿಕತ್ಸೆ: ದೇಹದ ವ್ಯಾಧಿ ಪ್ರತಿರೋಧ ಶಕ್ತಿಯನ್ನು ವೃದ್ಧಿಸುವ ಉದ್ದೇಶದಿಂದ ಮತ್ತು ಚರ್ಮಾಂಗವನ್ನು ಸದೃಢಗೊಳಿಸಲು ನೀಡಲಾಗುವ ಚಿಕಿತ್ಸೆ.

ಚರ್ಮದ ಆರೋಗ್ಯಕ್ಕೆ ಪಾಲಿಸಬೇಕಾದ ಪಥ್ಯ

ಚರ್ಮರೋಗಗಳಿಗೆ ಸದಾ ಪಚನಕ್ಕೆ ಹಗುರವಾದ ಆಹಾರ ಹಿತಕರವಾದದ್ದು. ಕಹಿರುಚಿ ಉಳ್ಳ ಬಳ್ಳಿಯಲ್ಲಿ ಬೆಳೆದ ತರಕಾರಿಗಳು (ಹೀರೇಕಾಯಿ, ಪಡವ ಲಕಾಯಿ, ಸೋರೇಕಾಯಿ, ಹಾಗಲಕಾಯಿ, ಕುಂಬಳಕಾಯಿ ಇತ್ಯಾದಿ) ಶ್ರೇಷ್ಠ. ಆಹಾರದಲ್ಲಿ ಬಿಸಿಯಾದ ಕರಗಿಸಿದ ತುಪ್ಪವು ಅತ್ಯಂತ ಶ್ರೇಯಸ್ಕರ. ಹೆಸರು ಬೇಳೆ, ದಾಳಿಂಬೆ, ಒಣದ್ರಾಕ್ಷಿ, ಹಳೆಯ ಧಾನ್ಯ, ಒಣಭೂಮಿಯ ಪ್ರಾಣಿಯ ಮಾಂಸ- ಇವುಗಳು ಸದಾ ಪಥ್ಯ. ಇನ್ನು ಪಚನಕ್ಕೆ ಜಡವಾದ ಪದಾರ್ಥಗಳು, ಹುಳಿ ರಸ, ಹಾಲು, ಮೊಸರು, ಚೀಸ್, ಪನೀರ್, ತೇವಾಂಶ ಇರುವ ಪ್ರದೇಶದ ಪ್ರಾಣಿಗಳಮಾಂಸ, ಮೀನು, ಮದ್ಯ, ಧೂಮಪಾನ, ಕಾಫಿ, ಚಹಾ, ಬೆಲ್ಲದಿಂದ ಮಾಡಿದ ಪದಾರ್ಥ ಹಾಗೂ ಎಳ್ಳು- ಇವುಗಳು ಚರ್ಮ ರೋಗದಲ್ಲಿ ಸದಾ ನಿಷಿದ್ಧ.

ಇದರೊಂದಿಗೆ ದಿನನಿತ್ಯ ಯೋಗ, ಪ್ರಾಣಾಯಾಮ ಮತ್ತು ಧ್ಯಾನದಿಂದ ಮಾನಸಿಕ ಸಮತೋಲನ ವನ್ನು ಕಾಯ್ದಿರಿಸಿಕೊಳ್ಳುವುದು ಬಹು ಮುಖ್ಯ. ಆಯುರ್ವೇದದ ಪ್ರಕಾರ, ಚರ್ಮವು ಕೇವಲ ದೇಹದ ಬಾಹ್ಯಾವರಣವಲ್ಲ. ಅದು ಮನಸ್ಸು, ಪ್ರಾಣಶಕ್ತಿ ಮತ್ತು ಆಂತರಿಕ ಶುದ್ಧತೆಯ ಪ್ರತಿಫಲ.

ಚರ್ಮರೋಗಗಳು ಎಂದಿಗೂ ಚರ್ಮಕ್ಕಷ್ಟೇ ಸೀಮಿತವಲ್ಲ. ಅವು ನಮ್ಮ ಆಹಾರ, ಆಲೋಚನೆ, ಭಾವನೆ ಮತ್ತು ಜೀವನಶೈಲಿಯ ಆಳವಾದ ಪ್ರತಿಫಲನಗಳು. ಆಯುರ್ವೇದದ ದೃಷ್ಟಿಯಲ್ಲಿ ‘ಶುದ್ಧ ತ್ವಚೆ’ ಎಂದರೆ ಕೇವಲ ಮೃದುವಾದ ತ್ವಚೆಯಲ್ಲ; ಅದು ಶುದ್ಧ ರಕ್ತ, ಶಾಂತ ಮನಸ್ಸು ಮತ್ತು ಸಾತ್ವಿಕ ಜೀವನದ ಫಲ.

ಚರ್ಮದ ಆರೋಗ್ಯವನ್ನು ಕಾಪಾಡಲು ಮಲಹರಗಳು ಮತ್ತು ಔಷಧಿಗಳು ಬೇಕಾದರೂ, ನಿಜವಾದ ಚಿಕಿತ್ಸೆ- ಒಳಗಿನ ತೃಪ್ತಿ, ಕೃತಜ್ಞತೆ ಮತ್ತು ಪ್ರಾಮಾಣಿಕ ಜೀವನದಲ್ಲಿದೆ. ಚರ್ಮದ ಪ್ರಕಾಶವು ಹೊರಗೆ ಹೊಮ್ಮಲು, ಮನಸ್ಸಿನ ಶುದ್ಧತೆ ಒಳಗೆ ಬೆಳಗಬೇಕು.