ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಅರೆ ಗೋಪಾಲ್‌, ನಿಮ್ದುಕೆ ಅಷ್ಟೆಲ್ಲಾ ದೇವ್ರು ಏಕಿದೆ ?

ಸರಕಾರಿ ವ್ಯವಸ್ಥೆಗೂ, ಕಾರ್ಪೊರೇಟ್ ವ್ಯವಸ್ಥೆಗೂ ಹೋಲಿಸುವಂತೆಯೇ ಇಲ್ಲ. ಕಾರ್ಪೊರೇಟ್ ವ್ಯವಹಾರಗಳನ್ನು ತೀರಾ ಹತ್ತಿರದಿಂದ ದಿನಬೆಳಗಾದರೆ ಕಂಡು ವ್ಯವಹರಿಸುವುದರಿಂದ ಅವೆಲ್ಲ ಹೇಗೆ ಇರುತ್ತದೆ ಎನ್ನುವುದು ನನಗೆ ನೇರವಾಗಿ ಕಂಡು ಗೊತ್ತು. ಎಲ್ಲ ಕಂಪನಿಗಳಲ್ಲೂ ಬಂತು, ಅಲ್ಲಿನ ನೌಕರ ಶೋಷಣೆಗೆ ಒಳಗಾದಲ್ಲಿ ಅದನ್ನು ಹೇಳಿಕೊಳ್ಳಲು ಕನಿಷ್ಠ ಮೂರ್ನಾಲ್ಕು ಮಾರ್ಗಗಳನ್ನಾದರೂ ಮಾಡಿಟ್ಟಿರುತ್ತಾರೆ.

ಶಿಶಿರಕಾಲ

ಇತ್ತೀಚೆಗೆ ಟಿಸಿಎಸ್ ಕಂಪನಿಯಲ್ಲಿ ನಡೆದ ಘಟನೆ ಹಲವು ಕಾರಣಗಳಿಂದ ಯೋಚಿಸುವಂತೆ ಮಾಡಿದೆ. ನಾನು ವೃತ್ತಿ ಆರಂಭಿಸಿದ್ದು ಟಿಸಿಎಸ್'ನಿಂದ. ವೃತ್ತಿಯ ಎಬಿಸಿಡಿ ಕಲಿತದ್ದು ಟಿಸಿಎಸ್‌ ನಿಂದ. ಅತ್ಯಂತ ಸಂಭಾವಿತ ಕಂಪನಿ. ಖಾಸಗಿ IT ವಲಯದಲ್ಲಿ, ಎಂಜಿನಿಯರುಗಳಲ್ಲಿ ಟಿಸಿಎಸ್ ಎಂದರೆ ‘ಗವರ್ನಮೆಂಟ್ ಕಂಪನಿ’.

ಇಲ್ಲಿನ ಕೆಲಸ ಅಷ್ಟು ಅರಾಮಿನದು ಎಂಬ ಕಾರಣಕ್ಕೆ ಹಾಗೊಂದು ಮಾತಿದೆ. ಟಿಸಿಎಸ್ ಒಂದು ಸಾ-ವೇರ್ ಸರ್ವಿಸಿಂಗ್ ಕಂಪನಿ. ಸರ್ವಿಸಿಂಗ್ ಕಂಪನಿಗಳೆಂದರೆ ಬೇರೆ ಕಂಪನಿಗೆ, ಗ್ರಾಹಕರಿಗೆ ತಂತ್ರಜ್ಞಾನ ಸಂಬಂಧಿತ ಕೆಲಸ ಮಾಡಿಕೊಡುವುದು ಅವರ ಕೆಲಸ. ನಾನು ಟಿಸಿಎಸ್‌ನಲ್ಲಿ ಇದ್ದಾಗ ಅಲ್ಲಿನ HR (ಮಾನವ ಸಂಪನ್ಮೂಲ) ಬಹಳ ವ್ಯವಸ್ಥೆ ಕಟ್ಟುನಿಟ್ಟಾಗಿಯೇ ಇತ್ತು.

ವೃತ್ತಿಯ ಹೊಸತರಲ್ಲಿ HR ಎಂಬುದು ಅರ್ಥವಾಗದ ವೃತ್ತಿ. ಅವರಿಗಿರುವ ಕೆಲಸದಿಂದ ತೆಗೆದು ಹಾಕಬಹುದಾದ ಶಕ್ತಿ - ‘ಸಾಮರ್ಥ್ಯ’ ಇತ್ಯಾದಿ ಕಾರಣಕ್ಕೆ ಅವರ ಮೇಲೆ ಹೆದರಿಕೆ ಸ್ವಲ್ಪ ಜಾಸ್ತಿಯೇ ಇತ್ತು. ಏನಾದರೂ ಗೊತ್ತಿಲ್ಲದ ತಪ್ಪಾಗಿ ಕೆಲಸ ಹೋದರೆ ಎಲ್ಲದಕ್ಕಿಂತ ಹೆಚ್ಚಾಗಿ ಮರ್ಯಾದೆ ಪ್ರಶ್ನೆ! ಕಾರ್ಪೊರೇಟ್ ವ್ಯವಸ್ಥೆ ಬಹಳ ಪಾರದರ್ಶಕವಾಗಿ ರೂಪಗೊಂಡಿರುತ್ತದೆ.

ಸರಕಾರಿ ವ್ಯವಸ್ಥೆಗೂ, ಕಾರ್ಪೊರೇಟ್ ವ್ಯವಸ್ಥೆಗೂ ಹೋಲಿಸುವಂತೆಯೇ ಇಲ್ಲ. ಕಾರ್ಪೊರೇಟ್ ವ್ಯವಹಾರಗಳನ್ನು ತೀರಾ ಹತ್ತಿರದಿಂದ ದಿನಬೆಳಗಾದರೆ ಕಂಡು ವ್ಯವಹರಿಸುವುದರಿಂದ ಅವೆಲ್ಲ ಹೇಗೆ ಇರುತ್ತದೆ ಎನ್ನುವುದು ನನಗೆ ನೇರವಾಗಿ ಕಂಡು ಗೊತ್ತು. ಎಲ್ಲ ಕಂಪನಿಗಳಲ್ಲೂ ಬಂತು, ಅಲ್ಲಿನ ನೌಕರ ಶೋಷಣೆಗೆ ಒಳಗಾದಲ್ಲಿ ಅದನ್ನು ಹೇಳಿಕೊಳ್ಳಲು ಕನಿಷ್ಠ ಮೂರ್ನಾಲ್ಕು ಮಾರ್ಗ ಗಳನ್ನಾದರೂ ಮಾಡಿಟ್ಟಿರುತ್ತಾರೆ.

ಇದನ್ನೂ ಓದಿ: Shishir Hegde Column: ಇದೆಲ್ಲ ಸವತಿ ಮಕ್ಕಳ ನಾಲ್ಕು ಸಾವಿರ ವರ್ಷದ ವ್ಯಾಜ್ಯವೇ ?

ಒಂದು ವೇಳೆ ದೌರ್ಜನ್ಯ, ತಮ್ಮ ಮೇಲಿನ ನೌಕರರನಿಂದ ಕಿರುಕುಳ ಎದುರಾದಾಗ, ಟಿಸಿಎಸ್ ರೀತಿ ಎಜಿಎಂ ಹಂತದವರು ಶೋಷಣೆಗೆ, ಮತಾಂತರಕ್ಕೆ ಕೈಜೋಡಿಸಿದಾಗ? ಅಂತಹ ಸಂದರ್ಭದಲ್ಲಿ ಆರೋಪವನ್ನು ಹೇಳಿಕೊಳ್ಳಲೆಂದೇ ಒಂದು ಇಮೇಲ್ ID ಇಟ್ಟಿರುತ್ತಾರೆ. ಈ ಇಮೇಲ್ ID ಸಾಮಾನ್ಯವಾಗಿ hrcompanyname.com ಎಂದಿರುತ್ತದೆ. ಇದನ್ನು ಬಹುತೇಕ ಕಂಪನಿಗಳು ಯಥಾ ವತ್ ಹಾಗೆಯೇ ಪಾಲಿಸುತ್ತವೆ. ಇದರ ಜತೆಯಲ್ಲಿ HR Helpline - ಒಂದು ಫೋನ್ ನಂಬರ್ 100% ಇಟ್ಟಿರುತ್ತಾರೆ. ಆ ನಂಬರಿಗೆ ಫೋನ್ ಮಾಡಿ ಎಲ್ಲವನ್ನೂ ಹೇಳಿಕೊಳ್ಳುವ ವ್ಯವಸ್ಥೆ ಇರುತ್ತದೆ.

ಇದೆಲ್ಲ ಹೇಗೆಂದರೆ ನೌಕರ ಯಾರಯಾರ ಹೆಸರನ್ನು ಆರೋಪಿಸುತ್ತಾನೋ ಅವರಿಗೆ ಒಂಚೂರು ಅನುಮಾನ ಬರದಂತೆ ತನಿಖೆಯಾಗುತ್ತದೆ. ಈ ಇಮೇಲ್ ID , ಅಥವಾ ಫೋನ್ ಕರೆ ಹೇಗೆಂದರೆ, ಇದು ಕಂಪನಿಯಲ್ಲಿ ಯಾರೋ ಅಜ್ಞಾತ HR ಗೆ ಹೋಗಿಬಿಡುತ್ತದೆ. ಆ ವ್ಯಕ್ತಿ ಅದನ್ನು ಇದೆಲ್ಲ ಆರೋಪಗಳ ಮೇಲಿನ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತಾನೆ.

ಯಾರೂ ಅಲಕ್ಷಿಸುವಂತೆಯೇ ಇಲ್ಲ. ಕಾರ್ಪೊರೇಟ್ ಜಗತ್ತಿನಲ್ಲಿ ಈ ಇಮೇಲ್ FIR ಇದ್ದಂತೆ. ಕಳುಹಿಸಿಬಿಟ್ಟರೆ ಅದು ದಾಖಲಾದಂತೆ. ನಿಯಮ ಬಾಹಿರ ಘಟನೆಗಳಾದಾಗ - HR ಬಂದು ಅಹವಾಲು ತಂದು ಹೇಳಿದರೆಂದರೆ, ಉನ್ನತ ಹುದ್ದೆಯಲ್ಲಿರುವವರು ಇದ್ದ ಕೆಲಸವನ್ನೆಲ್ಲಾ ಬಿಟ್ಟು ಇದಕ್ಕೆ ಉತ್ತರಿಸಬೇಕಾಗುತ್ತದೆ.

ಒಮ್ಮೆ ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಂದು ಘಟನೆಯಾಗಿತ್ತು. ಒಬ್ಬ ಹೆಣ್ಣು ನೌಕರ ಗಂಡು ನೌಕರನಿಗೆ ಪೀಡಿಸುತ್ತಿದ್ದಳು. ಬೆಳಗ್ಗೆ ಕಂಪ್ಲೇಂಟ್ ಬಂದದ್ದು, ಸಂಜೆಯೊಳಗೆ ತನಿಖೆ ಮುಗಿಸಿ, ದಾಖಲೆ ಕೊಟ್ಟು, ಆ ನೌಕರನನ್ನು ಕೆಲಸದಿಂದ ಹೊರ ಹಾಕಲಾಯಿತು. ಇನ್ನೊಂದೆರಡು ಘಟನೆಗಳಲ್ಲಿ HR ಪೊಲೀಸರಿಗೆ ರಿಪೋರ್ಟ್ ಮಾಡಿರುವುದು ಕೂಡ ಇದೆ. ಅಲ್ಲದೆ ಪ್ರತಿಯೊಂದು ಕಾರ್ಪೊರೇಟ್ ಕಂಪನಿಗಳಲ್ಲಿ ಈ ಎಲ್ಲ ಮಾಹಿತಿ, ದೌರ್ಜನ್ಯವಾದರೆ ಯಾವ ಯಾವ ಮಾರ್ಗವಿದೆ ಎನ್ನುವುದರ ಟ್ರೇನಿಂಗ್ ಪ್ರತಿ ವರ್ಷ ಎಲ್ಲ ನೌಕರರಿಂದಲೂ ಕಡ್ಡಾಯವಾಗಿ ಮಾಡಿಸಲಾಗುತ್ತದೆ.

ಬಿಡಿ. ಅದೆಂತಹುದೇ ವ್ಯವಸ್ಥೆ ಮಾಡಿಕೊಂಡರೂ ಜಿರೆಲೆಗೆ ಮೀಸೆ ತೂರಿಸಲು ಜಾಗವಿದ್ದರೆ ಸಾಕು, ಕ್ರಿಮಿಗಳಿಗೆ ಅದು ಕೂಡ ಬೇಕಿಲ್ಲ. ಸದ್ಯ ಈ ಘಟನೆಯಲ್ಲಿ ಟಿಸಿಎಸ್ ದೋಷಿಯೆಂಬಂತೆ ಮಾಧ್ಯಮ ಗಳು ಬಿಂಬಿಸುತ್ತಿವೆ. ಅಲ್ಲಿಯೂ ಖಂಡಿತ ಒಳ್ಳೆಯ ವ್ಯವಸ್ಥೆಯೇ ಇಂದಿಗೂ ಇದೆ. ಹೀಗಿರುವಾಗ ಪ್ರಶ್ನೆ ಕೇಳಬೇಕಾದದ್ದು, ಇಂಥಲ್ಲಿಯೂ ಸಾಧ್ಯವಾಯಿತು ಎಂದಾದರೆ ಇನ್ನೆಲ್ಲಿ? ಇದೆಲ್ಲದರ ನಡುವೆ ಅಂದಿಷ್ಟು ಮತಾಂತರ ಕೂಡ ಆಗಿದೆ.

ಇದೆಲ್ಲವೂ ಕೇವಲ ಪ್ರಜ್ವಲ್ ರೇವಣ್ಣ ಕೇಸ್ ನಂತೆ ಅಧಿಕಾರ ಮತ್ತು ವ್ಯವಸ್ಥೆಯ ದೋಷಗಳನ್ನು ಬಳಸಿಕೊಂಡು ಶೋಷಣೆಯಲ್ಲ. ಇದೆಲ್ಲದರ ಉದ್ದೇಶವೇ ಮತಾಂತರ. ಶೋಷಿತರು ಸುಶಿಕ್ಷಿತರು. ಅವರೇನು ರೈಸ್ ಬ್ಯಾಗ್ ಕೊಟ್ಟರೆ ಮತಾಂತರವಾಗಿಬಿಡುವವರಲ್ಲ. ದುಡಿಯುವ ಹಿಂದೂ ಗಂಡಸರೂ ಮತಾಂತರವಾಗಿದ್ದರೆ!

ಇದು ಟಿಸಿಎಸ್ ನೊಳಗಿನ ವ್ಯವಸ್ಥೆಸರಿಯಿಲ್ಲದಿದ್ದದ್ದಕ್ಕೆ, ಅಥವಾ ದುರ್ಬಲರನ್ನು ಯಾವುದೋ ಒಂದು ಸಂದರ್ಭದಲ್ಲಿ ಸಿಕ್ಕಿಹಾಕಿಸಿ ಮಾಡಿದ ಕೆಲಸವಷ್ಟೇ ಅಲ್ಲ. ಮತಾಂತರ ಅವಕಾಶ ಸಿಕ್ಕಾಗ ನಡೆದ ದಾಳಿಯಾಗಿರುವುದಿಲ್ಲ. ಮತಾಂತರ ಎಂದರೆ ಅದು ಬೇಟೆ. ಬೇಟೆ ಎಂದರೆ ಇಲ್ಲಿ ಹೆದರಿಸಿ, ಬೆದರಿಸುವುದಷ್ಟೇ ಅಲ್ಲ.

ಬೇಟೆ ಬಲೆಗೆ, ಖೆಡ್ಡಾಕ್ಕೆ ಬೀಳಬೇಕೆಂದರೆ ಎಲ್ಲದಕ್ಕಿಂತ ಮೊದಲು ಬೇಟೆಯ ಬಲಿಯಲ್ಲಿ ಗೊಂದಲ ಸೃಷ್ಟಿಸಬೇಕು. ಮತಾಂತರವೆಂಬ ಮೆಂಟಲ್ ಗೇಮ. ಇದು ಶುರುವಾಗುವುದು ರೈಸ್ ಬ್ಯಾಗ್ ನಿಂದಲ್ಲ. ಅದೆಲ್ಲದಕ್ಕಿಂತ ಮೊದಲು ಈ ಕೆಲವು ಅತ್ಯಂತ ಸರಳವೆನಿಸುವ ಪ್ರಶ್ನೆಗಳಿಂದ. ಈ ಪ್ರಶ್ನೆ ಗಳು ಶ್ರೀರಾಮಪುರದ ಸ್ಲಮ್ಮಿನಿಂದ ಹಿಡಿದು ಅಮೆರಿಕದ ಬಹುಮಹಡಿ ಕಟ್ಟಡದ ಕಾರಿಡೋರಿ ನಲ್ಲಿ, ಪಾರ್ಕುಗಳಲ್ಲಿ, ಎಲ್ಲಿಬೇಕಾದರೂ, ಸ್ನೇಹಿತನಾಗಿ, ಸಹವರ್ತಿಯಾಗಿ ಹೀಗೆ ಯಾರಿಗೆ, ಯಾವ ರೀತಿಯಲ್ಲಿ ಬೇಕಾದರೂ ಎದುರಾಗಬಹುದು. ನಾನು ಈ ಪ್ರಶ್ನೆಗಳನ್ನು ದೇಶದಲ್ಲಿ, ವಿದೇಶದಲ್ಲಿ ಕನಿಷ್ಠ ಹದಿನೈದಿಪ್ಪತ್ತು ಬಾರಿಯಾದರೂ ಎದುರಿಸಿದ್ದಿದೆ!

ಅವರ ಪ್ರಶ್ನೆಗಳು ಎಂದೂ ವಾದದಂತೆ ಶುರುವಾಗುವುದಿಲ್ಲ. ಪ್ರಶ್ನೆಗಳು ಅತ್ಯಂತ ಸಭ್ಯವಾಗಿಯೇ ಬರುತ್ತವೆ. ಕುತೂಹಲಕ್ಕೆಂಬಂತೆ. ಹಿಂದೂಗಳಲ್ಲಿ ಇಷ್ಟೊಂದು ದೇವರೇಕೆ? ನಿಮ್ಮಕೆ ಪವಿತ್ರಗ್ರಂಥವೇ ಇಲ್ಲ? ಇಂತಹ ಪ್ರಶ್ನೆಗಳು ಎದುರಾದಾಗ ಏನೆಂದು ಉತ್ತರಿಸುವುದು? ಹೇಗೆಂದು ಉತ್ತರಿಸುವುದು? ಒಂದು ಮಜವೆಂದರೆ - ಈ ಪ್ರಶ್ನೆಗಳು ಇಂದು ನಿನ್ನೆ ಆವಿಷ್ಕರಿಸಿದವಲ್ಲ.

ಆಫ್ರಿಕಾದಲ್ಲಿ ಬ್ರಿಟಿಷ್ ಪಾದ್ರಿಗಳು, ಗೋವಾದಲ್ಲಿ ಪೋರ್ಚುಗೀಸ್ ಮತಾಂತರಿಗಳು, ದಕ್ಷಿಣ ಏಷ್ಯಾ ದಲ್ಲಿ ಇಸ್ಲಾಂ ಮತಾಂತರಿಗಳು ಶತಮಾನಗಳಿಂದ ಕೇಳಿ ಗೊಂದಲವೇಳಿಸಿದ್ದು ಅವೇ ಪ್ರಶ್ನೆಗಳಿಂದ. ಸಮಯ ಸಂದರ್ಭಕ್ಕೆ ತಕ್ಕಂತೆ ಈ ಪ್ರಶ್ನೆಗಳು ರೂಪಾಂತರಗೊಳ್ಳುತ್ತವೆ. ಪ್ರಶ್ನೆ ಎದುರಾದಾಗ ಅದು ಎದುರಿನವನ ಕುತೂಹಲವೆಂದು ನಂಬಿ, ಜಾಸ್ತಿ ತಿಳಿವಳಿಕೆಯಿಲ್ಲದೆ ಉತ್ತರಿಸಲು, ವಿವರಿಸಲು, ಪ್ರತಿಪಾದಿಸಲು ಮುಂದಾದಾದಿರೋ, ನೀವು ಅವರು ನೆಟ್ಟಿಟ್ಟ ಬಲೆಯತ್ತ, ಖೆಡ್ಡಾದತ್ತ ಮುಖಮಾಡಿ ದಂತೆ.

ಹಿಂದೂಗಳಲ್ಲಿ ಇಷ್ಟೊಂದು ದೇವರೇಕೆ? ಅಸಲಿಗೆ ಅವರಿಲ್ಲಿ ಪ್ರಶ್ನಿಸುವುದು ಏನನ್ನು? ನಿಮ್ಮ ಧರ್ಮ ನಮ್ಮ ಮತದಂತೆ ಸರಳವಾಗಿ ಏಕಿಲ್ಲ? ಎಂಬುದನ್ನು. ಎಲ್ಲ ಮನುಷ್ಯರಿಗೂ ಸರಳತೆಯ ಬಗ್ಗೆ ಒಂದಿಷ್ಟು ಒಲವು ಸಹಜವಾಗಿಯೇ ಇದೆ. ಒಂದು ದೇವರು, ಒಂದು ಪುಸ್ತಕ, ಒಂದು ಮಾರ್ಗ ಸುಲಭವಲ್ಲವೇ? ಇದು ಗೊಂದಲವೆಬ್ಬಿಸುವ ಮೊದಲ ಪ್ರಶ್ನೆ.

ಗೊಂದಲದ ಜತೆ ದ್ವಂದ್ವ. ಅಲ್ಲಿಂದ ಮುಂದೆ ಪ್ರಶ್ನೆ ಬದಲಾಗುತ್ತದೆ. ಸಾಮಾನ್ಯವಾಗಿ ಎರಡನೆಯ ಪ್ರಶ್ನೆ - ನೀವು ಮೂರ್ತಿ ಪೂಜೆ ಮಾಡುವುದು ಏಕೆ? ಈ ಪ್ರಶ್ನೆ ಮೊದಲ ಪ್ರಶ್ನೆಗಿಂತ ವಿಭಿನ್ನ. ಮೊದಲನೆಯದು ಕುತೂಹಲಕ್ಕೆನಿಸಿದರೆ ಎರಡನೆಯದು ಮೆಲ್ಲನೆಯ, ಧರ್ಮದೆಡೆಗಿನ ತಿರಸ್ಕಾರ. ‘ಈಗ ನೀವೇಕೆ ಹಾಗೆ ಮೂರ್ತಿ ಪೂಜಿಸುವುದು?’ ಎನ್ನುವ ಪ್ರಶ್ನೆಯಲ್ಲಿ, ಮೊದಲಿದ್ದ ಕುತೂಹಲ ವಿರುವುದಿಲ್ಲ.

ಕೆಲಸಮಯದ ಹಿಂದೆ ಒಬ್ಬ ಗಡ್ಡ ಕೆರೆದುಕೊಳ್ಳುತ್ತ ಇದನ್ನೇ ನನಗೆ ಕೇಳಿದ್ದ. ಏನು ಹೇಳಬೇಕೆಂದು ಒಂದು ಕ್ಷಣ ಯೋಚಿಸಬೇಕಾಯ್ತು. ಯಾವುದೇ ಪ್ರಶ್ನೆ ಎರಡು ಕಾರಣಕ್ಕೆ ನಮ್ಮೊಳಗೆ ಗೊಂದಲ ವನ್ನು ಸೃಷ್ಟಿಸುತ್ತದೆ. ಮೊದಲನೆಯದು ನಮಗೆ ಉತ್ತರ ಗೊತ್ತಿಲ್ಲದಿದ್ದಾಗ. ಎರಡನೆಯದು ಉತ್ತರ ಗೊತ್ತಿದ್ದರೂ, ಕೇಳಿದವನಿಗೆ ಆ ವಿಷಯದ ಪೂರ್ವಾಪರ ತಿಳಿದಿಲ್ಲದಾಗ, ಅವನಿಗೆ ಅರ್ಥವಾಗು ವಂತೆ ಹೇಳಬೇಕಾದ ಸ್ಥಿತಿ ಎದುರಾದಾಗ.

ನಿಮ್ಮ ಮನೆಯಲ್ಲಿ ಅಪ್ಪ ಅಮ್ಮ, ಮಕ್ಕಳ ಫೋಟೊ ನೇತುಹಾಕುತ್ತೀರಲ್ಲವೇ?ಎಂದು ಕೇಳಿದೆ. ಅವನಿಗೆ ಪ್ರಶ್ನೆಯೇ ಉತ್ತರವಾಗಿ ಬರಬಹುದು ಎಂಬ ಅಂದಾಜಿರಲಿಲ್ಲ. ಹೌದು, ಫೋಟೊ ನೇತು ಹಾಕುತ್ತೇವೆ. ಅವೆಲ್ಲ ಮನುಷ್ಯರ ಫೋಟೋ ಎಂದ. ನೀನು ಆ ಫೋಟೊವನ್ನು, ಅದರ ಗಾಜು, ಫ್ರೇಮ್ ಇವನ್ನೆಲ್ಲ ಯಾವತ್ತಾದರೂ ಇದುವೇ ಆ ವ್ಯಕ್ತಿ ಎಂದು ಅಂದುಕೊಂಡಿದ್ದೀಯಾ? ಇಲ್ಲ.

ಗೋಡೆ ಮೇಲಿರುವ ಫೋಟೊ ಅವರೆಲ್ಲರ ಇರುವಿಕೆಯ ಅನುಭವ ಕೊಡುತ್ತದೆ ಅಲ್ಲವೇ? ಹಾಗಾದರೆ ಆ ಫೋಟೊಗಳು ಕೇವಲ ಪೇಪರಿನ ಮೇಲೆ ಬಿದ್ದ ಬಣ್ಣಗಳಲ್ಲ ತಾನೇ? ಅವನು ಉತ್ತರಿಸಲಿಲ್ಲ. ಮೂರ್ತಿ-ಫೋಟೊ ಇದ್ದಹಾಗೆ. ಅದರೊಳಗೆ ಏನೋ ಒಂದು ಶಕ್ತಿ ಅಡಗಿಸಿಡಲು, ದೈವಿಕ ಶಕ್ತಿ ಯನ್ನು ಬಂಧಿಸಿಡಲು ಮೂರ್ತಿ ಇರುವುದಲ್ಲ.

ಮೂರ್ತಿ ದೇವರನ್ನು ಕಾಣಲು ಮನುಷ್ಯನಿಗಿರುವ ಮಾರ್ಗ. ಸಮಸ್ಯೆ ಆಚರಣೆಯಲ್ಲ, ಆಚರಣೆಯ ಅರ್ಥೈಸುವಿಕೆಯದು. ಮೂರನೆಯ ಪ್ರಶ್ನೆಗೆ ಬರುವಾಗ ಪ್ರಶ್ನೆಗಳ ಉದ್ದೇಶ ಹೆಚ್ಚುಕಡಿಮೆ ಇಬ್ಬರಿಗೂ ಸ್ಪಷ್ಟವಾಗಿ ಬಿಡುತ್ತದೆ. ಆಗ ಈ ರೀತಿಯ ಪ್ರಶ್ನೆಗಳು ಎದುರಾಗುತ್ತವೆ. ಗಣಪತಿಗೆ ಆನೆಯ ತಲೆ ಏಕೆ? ಪಾರ್ವತಿಯ ಮಗನೆಂದು ಗೊತ್ತಾಗದೆ ಗಣಪತಿಯ ಕುತ್ತಿಗೆ ಕತ್ತರಿಸಿದ ಶಿವ ದೇವರು ಹೇಗಾಗುತ್ತಾನೆ? ಕೇವಲ ಕಾರ್ಟೂನ್, ಪೌರಾಣಿಕ ಧಾರಾವಾಹಿ ನೋಡಿಕೊಂಡು ಬೆಳೆದವರಿಗೆ ಖಂಡಿತ ಗೊಂದಲಕ್ಕೆ ಈ ಒಂದೇ ಪ್ರಶ್ನೆ ಸಾಕು.

ಪ್ರಶ್ನೆ ಸರಿಯೇ ಇದೆ. ಶಿವ ಮತ್ತು ಗಣಪತಿ ಮತಾಂತರಿಗಳದ್ದೂ ಫೇವರೇಟ್. ಇಡೀ ಶಿವನ ವಿಷಯ ದಲ್ಲಿ ನಮ್ಮ ಸಮಸ್ಯೆಯೇನು ಹೇಳಿ? ಶಿವನನ್ನು ಸಂಸಾರ ತಾಪತ್ರಯವಿರುವ ಅಘೋರಿ ರೀತಿಯ ವನು ಎಂದು ನಾವು ಕೂಡ ನಂಬಿಕೊಂಡಿರುವುದು. ಶಿವ ಅಸಲಿಗೆ ಏನು? ಶಿವ ವ್ಯಕ್ತಿಯಲ್ಲ, ಶಿವ ಎಂದರೆ ಜೀವಪ್ರಜ್ಞೆ.

Consciousness. ನೀವು ಎಲ್ಲಾದರೂ ಶಿವನ ಮೂರ್ತಿರೂಪ ದೇವಸ್ಥಾನದಲ್ಲಿ ಪೂಜಿಸಿದ್ದು ನೋಡಿ ದ್ದೀರಾ? ಮಹಾಬಲಿಪುರಂ ನಂದು ಪಾಳುಬಿದ್ದ ದೇವಸ್ಥಾನದಲ್ಲಿ ಈಶ್ವರನ ಮೂರ್ತಿ ನೋಡಿದ್ದು ನೆನಪು. ಅದು ಬಿಟ್ಟರೆ ಇನ್ನೆಲ್ಲಾ ಕಡೆ ಲಿಂಗ.

ಲಿಂಗವೇಕೆ? ಲಿಂಗ ಶಬ್ದದ ಅರ್ಥವೇ ಗುರುತು, ಹೆಣ್ಣು ಗಂಡನ್ನು ಪ್ರತ್ಯೇಕಿಸಿ ನೋಡುವುದು ಗುರುತಿನಿಂದ, ಹಾಗಾಗಿ ಪುಲ್ಲಿಂಗ, ಸ್ತ್ರೀಲಿಂಗ. ಇಲ್ಲದಿದ್ದಲ್ಲಿ ಸ್ತ್ರೀ‘ಲಿಂಗ’ ಎಂದೇಕಿರುತ್ತದೆ? ಶಿವನ ವಿಷಯ ಬಂದಾಗಲೆಲ್ಲ ಅದು ಪ್ರಜ್ಞೆ, ಧ್ಯಾನ, ಯೋಗ ಇತ್ಯಾದಿಗೆ ಸಂಬಂಧಿಸಿದ್ದು ಎಂದೇ ಅರ್ಥ.

ಶಿವನೆಂದರೆ ಪ್ರಜ್ಞೆ- consciousness ಎಂದು ವೇದ, ಉಪನಿಷತ್ತುಗಳಲ್ಲಿ ಕಂಡಕಂಡಲ್ಲ, ಸಾವಿರ ದೆಂಟು ಕಡೆ ಸ್ಪಷ್ಟವಾಗಿ ಹೇಳಲಾಗಿದೆ. ಜೀವ ಪ್ರಜ್ಞೆಗೆ ರೂಪವಿಲ್ಲ. ಹಾಗಾಗಿ ಅದರ ದ್ಯೋತಕ ಲಿಂಗ ಕ್ಕೂ ರೂಪವಿಲ್ಲ. ಗಣಪತಿ ಕಥೆಯನ್ನೇ ತೆಗೆದುಕೊಂಡರೆ - ಪಾರ್ವತಿಯನ್ನು ಕಾಯುವಾಗ ಮೊದಲಿನ ಗಣಪತಿ - ಅಹಂ ನ ದ್ಯೋತಕ.

ಆ ಅಹಂಭಾವ (I), ಶಿವನನ್ನು (consciousness) ಮಹಾಶಕ್ತಿಯನ್ನು- ಸತ್ಯವನ್ನು ತಿಳಿಯಲು ಅಡ್ಡಿಯಾಗಿ ನಿಲ್ಲುತ್ತದೆ. ಯಾವಾಗ ಶಿವ ಗಣಪತಿಯ ಆ ಅಹಂನ ತಲೆಯನ್ನು ಕಡಿದು ಆನೆಯ ತಲೆಯನ್ನು ಜೋಡಿಸಿದನೋ ಆಗಲೇ ಶಿವಿ ಶಿವನನ್ನು ಒಪ್ಪಿದ್ದು. ಏನರ್ಥ? ಅ ಬಿದ್ದ ಗಣಪತಿ ಯದೇ ತಲೆ ಜೋಡಿಸಿದರಾಗುತ್ತಿರಲಿಲ್ಲವೇ? ಇಲ್ಲ - ಏಕೆಂದರೆ ಅದೇ ತಲೆ ಎಂದರೆ ಅದೇ ಅಹಂ.

ಅದನ್ನು ರಿಪ್ಲೇಸ್ ಮಾಡಿದ್ದು, ಆನೆಯ ತಲೆ. ಆನೆಯ ತಲೆಯೇ ಏಕೆ? ಪಾರ್ವತಿ - ಸೃಷ್ಟಿಯ ಶಕ್ತಿ (ಆದಿ ಶಕ್ತಿ - ಇಷ್ಟು ನೇರ ಶಬ್ದ), ಗಣೇಶ - ಎಲ್ಲದನ್ನೂ ರಕ್ಷಣಾತ್ಮಕವಾಗಿ ನೋಡುವ ಮನಸ್ಸು, ಶಿವ - ಪ್ರಜ್ಞೆ (pure Consciousness), ರುಂಡ ಹಾರಿಸುವುದು ಎಂದರೆ ನಮ್ಮೊಳಗಿನ ಅಹಂ ನ ಸಂಹರಿಸುವುದು.

ಆನೆಯ ತಲೆ - ಧ್ಯಾನದಿಂದ, ಯೋಗದ ಮೂಲಕ ಬದಲಾಗುವ ನಮ್ಮ ಬುದ್ಧಿವಂತಿಕೆ (ಸರಿಯಾದ ಜೀವನ ದೃಷ್ಟಿಕೋನ). ಒಮ್ಮೆ ಗಣಪತಿ ಅಥರ್ವಶೀರ್ಷ ಮಂತ್ರವನ್ನು ತೆರೆದು ನೋಡಿ. ಅಲ್ಲಿ ಗಣಪತಿ ಎಂದರೆ ಏನು ಎಂಬುದಿದೆ. ನಿಮಗೆ ಗೊತ್ತಿರಬಹುದು, ಶ್ರೀರುದ್ರದಲ್ಲಿ ಶಿವನನ್ನು ಕಳ್ಳ, ಕಳ್ಳರ ಗುರು (ಸೂತಾಯ ಹಂತ್ಯಾಯ ವನಾನಾಂ ಪತಯೇ ನಮೋ ನಮೋ) ಎಂದೆಲ್ಲ ಬರುತ್ತದೆ.

ಏನು ಈಶ್ವರ ಕಳ್ಳನೇ? ಕಳ್ಳನಲ್ಲೂ, ಕೊಲೆಗಾರನಲ್ಲೂ ಎಲ್ಲರಲ್ಲೂ ಆಂತರ್ಯದಲ್ಲಿ ಇರುವ ಜೀವ ಪ್ರಜ್ಞೆ(ಸ್ಮೃತಿ) ಅದುವೇ ಎಂದು. ಈ ಇಡೀ ಶಿವ - ಗಣಪತಿ ತಲೆ ಕಾಡಿದ ಕಥೆಯ ಅರ್ಥ ಇಷ್ಟು - ಪ್ರಜ್ಞೆಯು ತನ್ನನ್ನು ತಾನು ಗುರುತಿಸಿಕೊಳ್ಳಲು, ಅಹಂ ಅನ್ನು ಸಂಹರಿಸಿ ಮನಸ್ಸನ್ನು ಪುನರ್‌ ರೂಪಿಸಿಕೊಳ್ಳಬೇಕು. ಆಗ ಶಿವ ಪಾರ್ವತಿಗೆ - ಪ್ರಜ್ಞೆ ಜ್ಞಾನಕ್ಕೆ ಒಪ್ಪಿಗೆಯಾಗುತ್ತದೆ.

ಇಲ್ಲಿ ಇಷ್ಟು ಕಾಲ ಹೇಳಿದ್ದು ನಾನೇನು ಹಿಮಾಲಯಕ್ಕೆ ಹೋಗಿ ಕಲಿತುಕೊಂಡು ಬಂದ ವಿಷಯ ವಲ್ಲ. ಇದೆಲ್ಲ ಹಿಂದೂ ಎನಿಸಿಕೊಂಡ ಪ್ರತಿಯೊಬ್ಬನೂ ತಿಳಿದಿರಲೇಬೇಕಾದ ಕನಿಷ್ಠ ಜ್ಞಾನ. ವಾಹನ ಓಡಿಸುವವನಿಗೆ ಕ್ಲಚ್ ಯಾವುದು, ಎಕ್ಸಲೇಟರ್ ಯಾವುದು ಎಂದು ತಿಳಿದಿರಬೇಕು ಎಂಬಷ್ಟು ಕನಿಷ್ಠ ಜ್ಞಾನ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಇದೆಲ್ಲ ತಿಳಿದುಕೊಳ್ಳುವ ಆಸಕ್ತಿಯಿಲ್ಲ, ಕುತೂಹಲವಿಲ್ಲ, ಮುಂದಿನ ಸಂತತಿಗೆ ಸಂಸ್ಕಾರ ಮುಖೇನ ದಾಟಿಸುವುದು ಗೊತ್ತಿಲ್ಲ.

ನಮ್ಮಲ್ಲಿ ಇವತ್ತು ಹೆಚ್ಚಿನವರಿಗೆ ಹೂವು, ಆರತಿ, ಕೈಮುಗಿಯುವುದು, ಪ್ರಸಾದ, ಊಟದ ಆಚೆ ಹಿಂದೂ ಧರ್ಮವೆಂದರೆ ಏನು ಎಂಬ ಕಲ್ಪನೆಯೂ ಇಲ್ಲದಿರುವುದು. ಹಿಂದೂ ಧರ್ಮದ ಪೂರ್ಣ ಪರಿಕಲ್ಪನೆ ಕಾಲಕಳೆ ದಂತೆ ಇನ್ನಷ್ಟು ಕ್ಷೀಣಿಸುತ್ತಿರುವುದು. ಇದರಿಂದ ಯಾವುದೇ ಆಚರಣೆಗಳು ಅರ್ಥಹೀನವಾಗಿರುವುದು. ಹಿಂದೂಗಳು ಗಣಹೋಮ ಇತ್ಯಾದಿಯನ್ನು ಭಟ್ಟರನ್ನು ಮನೆಗೆ ಕರೆಸಿ ಮಾಡಿಸುತ್ತೇವಲ್ಲ, ಎಷ್ಟು ಜನರಿಗೆ ಗಣಹೋಮ ಎಂದರೆ ಏನು ಎಂದು ಯೋಚಿಸಿರಬಹುದು? ಪ್ರಶ್ನಿಸಿ ತಿಳಿದುಕೊಂಡಿರಬಹುದು? ನಮ್ಮ ದೇವರ ಕಥೆಗಳು ಇತಿಹಾಸವಲ್ಲ, fairy tale ಕೂಡ ಅಲ್ಲ .

ಹಾಗಾಗಿ ಅವು ಲಾಜಿಕಲ್ ಅನಿಸದಿರುವುದೇ ಸರಿ. ಎಲ್ಲಿ ಅತಾರ್ಕಿಕ ಅನಿಸುತ್ತದೆಯೋ ಅಲ್ಲಿ ಏನೋ ಒಂದು ಸೂಕ್ಷ್ಮವನ್ನು ಕಥೆಯ ಮೂಲಕ ಹೇಳುತ್ತಿದ್ದಾರೆ ಎಂದೇ ಅರ್ಥ. ನೀವು ಈ ದೃಷ್ಟಿಕೋನದಲ್ಲಿ - ಯಾವ ದೇವರು ಯಾವುದರ ಪ್ರತೀಕ? ಕಥೆಗಳ ಹಿನ್ನೆಲೆಯೇನು? ಎಂದು ಪ್ರಶ್ನಿಸಿಕೊಂಡರೆ, ಉತ್ತರ ಅರಸಿ ಮೂಲದತ್ತ ಹೋದರೆ ನಿಮ್ಮ ಬೆರಗು ಮುಗಿಯುವುದೇ ಇಲ್ಲ.

ನನಗೆ ಮನವರಿಕೆಯಾದ ವಿಷಯ ಏನು ಗೊತ್ತಾ? ನಮ್ಮ ಮೂಲ ವೇದ, ಪುರಾಣ, ಉಪನಿಷತ್ತು ಗಳಲ್ಲಿ ಯಾವುದೂ ಲಾಜಿಕ್ ಇಲ್ಲದ್ದು ಇಲ್ಲವೇ ಇಲ್ಲ. ಅತಾರ್ಕಿಕ ಎಂದೆನಿಸಿದರೆ ನಮಗೆ ಅರ್ಥ ವಾಗಿಲ್ಲ ಎಂದೇ ಅರ್ಥ. ಅನುಮಾನವೇ ಬೇಡ. ನಮ್ಮಲ್ಲಿ ದೇವರ ಪೂಜೆ ಒಂದು ಹಂತ, ಆಧ್ಯಾತ್ಮಿಕ ವಾಗಿ ಬೆಳೆಯುತ್ತಾ ದೇವರ ಪೂಜೆಯನ್ನು ಮೀರುವುದು ಅದರ ಮುಂದಿನ ಹಂತ. ಇದನ್ನೆಲ್ಲ ಎಲ್ಲರಿಗೂ ಹೇಳುವುವವರು ಯಾರು? ಸರಕಾರ? ಜಾತ್ಯತೀತ ಮಾಡಿಕೊಂಡು ಕೂತಿದ್ದೇವೆ. ಇನ್ನು ಮಠಮಾನ್ಯಗಳು? ಮಠಾಧೀಶರು? ಬಹುತೇಕ ಮಠಾಧೀಶರುಗಳಿಗೆ ತಾವು ಒಂದು ವ್ಯವಹಾರವೋ ಅಥವಾ ರಾಜಕೀಯ ವ್ಯವಸ್ಥೆಯ ಭಾಗವೋ ಎನ್ನುವುದೇ ಸ್ಪಷ್ಟತೆಯಿಲ್ಲ.

ಹಿಂದೂ ಎಚ್ಚೆತ್ತುಕೊಳ್ಳಬೇಕು ಎಂದು ಎಲ್ಲರೂ ಹೇಳುತ್ತಲೇ ಓಡಾಡಿಕೊಂಡಿರುತ್ತಾರಲ್ಲ? ಎಚ್ಚೆತ್ತು ಕೊಳ್ಳುವುದು ಎಂದರೆ ಏನು? ಇಲ್ಲಿರುವ ನಿದ್ರೆ, ಜಡತ್ವ ಯಾವುದು? ನನಗನಿಸುವಂತೆ ಹಿಂದೂ ಧರ್ಮವೆಂದರೆ ಏನೆಂಬ ಕನಿಷ್ಠ ಜ್ಞಾನ, ತಿಳಿವಳಿಕೆ - ಇದರ ಕೊರತೆ. ಅದು ಬಿಟ್ಟು ಪೂಜೆಗಷ್ಟೇ ನಮ್ಮನ್ನು ಸೀಮಿತಗೊಳಿಸಿ ನಾನೊಬ್ಬ ಹಿಂದೂ ಎಂದುಕೊಂಡುಬಿಟ್ಟರೆ? ಹಿಂದೂ ಭ್ರಮೆಯಲ್ಲಿ ಬದುಕುತ್ತಿದ್ದಾನೆ! ನಾಗಪುರದ TCS ಕೇಸ್ ಗೋಪಾಲ - ಗುಲ್ಶನ್ ಆಗಿ ಬದಲಾದವನು ಇಲ್ಲಿ ನಮ್ಮೆಲ್ಲರ ಒಂದು ಪಾತ್ರ ಪ್ರತೀಕ ಮಾತ್ರ !!

ಶಿಶಿರ್‌ ಹೆಗಡೆ

View all posts by this author