ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Prabhat Balnad Column: ಕರಾವಳಿಯ ಹಿಂದೂ-ಜೈನ ಸಾಮರಸ್ಯ: ಚರಿತ್ರೆ- ವರ್ತಮಾನ

ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಶಕ್ತರಾಜ ಮನೆತನಗಳೆಲ್ಲವೂ ಜೈನ ಧರ್ಮದ ಅರಸರುಗಳಿಂದ, ಮಂತ್ರಿಗಳಿಂದ ಮಾತ್ರವಲ್ಲದೆ ಪ್ರಜಾಪರಿವಾರದಿಂದ ಪೋಷಣೆಯನ್ನು ಪಡೆದಿತ್ತು. ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು ಮಾನ್ಯಖೇಟದ ರಾಷ್ಟ್ರ ಕೂಟರು, ದ್ವಾರಸಮುದ್ರದ ಹೊಯ್ಸಳರು ಮೊದಲಾದ ವಂಶದಲ್ಲಿ ಆಡಳಿತ ನಡೆಸಿದ ಜೈನರಾಜರುಗಳ ಇತಿಹಾಸ ಗಮನಾರ್ಹ.

ಕರಾವಳಿಯ ಹಿಂದೂ-ಜೈನ ಸಾಮರಸ್ಯ: ಚರಿತ್ರೆ- ವರ್ತಮಾನ

-

Ashok Nayak Ashok Nayak Sep 10, 2025 7:12 AM

ಇತಿಹಾಸ

ಡಾ.ಪ್ರಭಾತ್‌ ಬಲ್ನಾಡ್

ಹಿಂದೂ ಹಾಗೂ ಜೈನ ಧರ್ಮಗಳೆರಡು ಸಹೋದರ ಧರ್ಮಗಳಂತೆ ಸನಾತನ ಧರ್ಮಗಳೆಂದು ಜನಜನಿತವಾಗಿವೆ. ಇವುಗಳೆರಡು ಪ್ರತ್ಯೇಕ ಧರ್ಮಗಳಾದರೂ ಕೂಡ ಸಾವಿರಾರು ವರ್ಷಗಳಿಂದಲೂ ಪರಸ್ಪರ ಕೊಡು ಕೊಳ್ಳುವಿಕೆಯ ವಿಚಾರದಲ್ಲಿ ಇಂತಹ ಇನ್ನೊಂದು ನಿದರ್ಶನ ಜಗತ್ತಿನಲ್ಲಿ ಸಿಗಲು ಸಾಧ್ಯವಿಲ್ಲ. ಈ ಒಡಂಬಡಿಕೆಯ ಕಾರಣದಿಂದಲೇ ಜೈನಧರ್ಮ ವಿಶಾಲವಾದ ವೈದಿಕ ಧರ್ಮದ ಜೊತೆಯಲ್ಲಿ ಇಂದಿಗೂ ಸಾಮರಸ್ಯದಿಂದ ನಿಲ್ಲಲು ಸಾಧ್ಯವಾಯಿತು.

ಈ ಅನ್ಯೋನ್ಯತೆಯನ್ನು ತಿಳಿಯಬೇಕಾದರೆ ಇತಿಹಾಸದ ಕಡೆ ದೃಷ್ಟಿ ಹಾಯಿಸಬೇಕು. ಕನ್ನಡದ ಇತಿಹಾಸವನ್ನು ತಿಳಿದ ವಿದ್ವಾಂಸರಿಗೆಲ್ಲ ಒಪ್ಪಿತವಾದ ವಿಚಾರ ಏನೆಂದರೆ ಪಂಪ, ಪೊನ್ನ, ಜನ್ನ, ರನ್ನ, ನಾಗಚಂದ್ರ, ಶಿವಕೋಟ್ಯಾಚಾರ್ಯ ಮೊದಲಾದ ಜೈನ ಕವಿಗಳು, ವಿದ್ವಾಂಸರು ಇಲ್ಲದ ಕನ್ನಡ ಸಾಹಿತ್ಯ ಚರಿತ್ರೆಯನ್ನು ಊಹಿಸಲು ಸಾಧ್ಯವಿಲ್ಲ.

ಆದರೆ ವಿಶೇಷ ಏನೆಂದೆರೆ ಇವರೆಲ್ಲರೂ ತಮ್ಮ ಧರ್ಮದ ಕೃತಿಗಳನ್ನು ಬರೆಯುವುದರ ಜೊತೆಯಲ್ಲಿ ಹಿಂದೂ ಧರ್ಮದ ಕೃತಿಗಳನ್ನು ರಚಿಸಿದರು. ನಮ್ಮ ಮಹಾಭಾರತವನ್ನು, ರಾಮಾಯಣವನ್ನು ಮುಟ್ಟಲು ನೀವು ಯಾರು ಎಂದು ಇಲ್ಲಿಯವರೆಗೆ ಯಾರು ಕೇಳಿಲ್ಲ.

ಯಾಕೆಂದರೆ ಈ ಜೈನ ಕವಿಗಳು ಕನ್ನಡ ಸಾಹಿತ್ಯ ಚರಿತ್ರೆಯನ್ನು ಶ್ರೀಮಂತಗೊಳಿಸುವುದರ ಮೂಲಕ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಶ್ರೀಮಂತಗೊಳಿಸಿದರು. ಜೈನ ರಾಜ ಪರಂಪರೆ: ಭಾರತದ ಮೊಟ್ಟ ಮೊದಲ ಬಹುದೊಡ್ಡ ಸಾಮ್ರಾಜ್ಯ ಮೌರ್ಯಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ ಜೈನಧರ್ಮವನ್ನು ಪಾಲಿಸಿದ.

ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಶಕ್ತರಾಜ ಮನೆತನಗಳೆಲ್ಲವೂ ಜೈನ ಧರ್ಮದ ಅರಸರುಗಳಿಂದ, ಮಂತ್ರಿಗಳಿಂದ ಮಾತ್ರವಲ್ಲದೆ ಪ್ರಜಾಪರಿವಾರದಿಂದ ಪೋಷಣೆಯನ್ನು ಪಡೆದಿತ್ತು. ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು ಮಾನ್ಯಖೇಟದ ರಾಷ್ಟ್ರಕೂಟರು, ದ್ವಾರಸಮುದ್ರದ ಹೊಯ್ಸಳರು ಮೊದಲಾದ ವಂಶದಲ್ಲಿ ಆಡಳಿತ ನಡೆಸಿದ ಜೈನರಾಜರುಗಳ ಇತಿಹಾಸ ಗಮನಾರ್ಹ.

ಇದನ್ನೂ ಓದಿ: ‌M J Akbar Column: ಟ್ರಂಪ್‌ʼರ ಎಡವಟ್ಟುಗಳು

ಇತಿಹಾಸಕಾರರ ಪ್ರಕಾರ ರಾಷ್ಟ್ರಕೂಟರ ಕಾಲದಲ್ಲಿ ಜೈನಧರ್ಮ ಜೈನಧರ್ಮೀಯರು ಬಹು ಸಂಖ್ಯೆ ಯಲ್ಲಿದ್ದರು. ಕದಂಬ ಅರಸ ರವಿವರ್ಮ, ಗಂಗ ರಾಚಮಲ್ಲ, ಪೋರ್ಚುಗೀಸರನ್ನು ಎದುರಿಸಿದ ಹಿರಿಯ ಮತ್ತು ಕಿರಿಯ ಅಬ್ಬಕ್ಕ, ದೀರ್ಘ ಆಡಳಿತದ ದಾಖಲೆ ಹೊಂದಿರುವ ಕರಿಮೆಣಸಿನ ರಾಣಿ ಚನ್ನಭೈರಾದೇವಿ ಮುಂತಾದ ನೂರಾರು ಅರಸರ ಸಾಮರಸ್ಯದ ಆಡಳಿತ ವೈಖರಿ ಇತಿಹಾಸ ಓದದ ವಿನಃ ತಿಳಿಯದು.

140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಜೈನರು ಇಂದು 50 ಲಕ್ಷಕ್ಕಿಂತ (0.04%,) ಕಡಿಮೆ ಸಂಖ್ಯೆ ಯಲ್ಲಿದ್ದಾರೆ ಎಂದರೆ ಅವರೇನಾದರು?

ತುಳುನಾಡಿನ ರಾಜ ಪರಂಪರೆ: ತುಳುನಾಡನ್ನು ಮೊದಲು ಆಡಳಿತ ಮಾಡಿದ ಅಳುಪ ಅರಸರ ದೊರೆ ಮೂರನೆಯ ಕುಲಶೇಖರ (1390) ಮೂಡುಬಿದಿರೆ ಜೈನ ಸ್ವಾಮೀಜಿಗಳ ಪಾದ ಪದ್ಮಾರಾಧಕ ನಾಗಿದ್ದ ಎನ್ನುವುದನ್ನು ಅವನೇ ಬರೆಸಿದ ಮೂಡುಬಿದಿರೆಯ ಗುರು ಬಸದಿಯ ಶಾಸನದ ಮೂಲಕ ತಿಳಿಯಬಹುದು.

ಈ ಹಿನ್ನೆಲೆಯಲ್ಲಿ ಮತ್ತು ಹೊಯ್ಸಳ ಬಲ್ಲಾಳರ ಹಿನ್ನೆಲೆಯಲ್ಲಿ, ಆ ನಂತರ ಆಳ್ವಿಕೆ ನಡೆಸಿದ ತುಳುನಾಡಿನ ಎಲ್ಲಾ ರಾಜಮನೆತನಗಳು ಜೈನಧರ್ಮವನ್ನು ಅನುಸರಿಸಿದವು. ಬಂಗವಾಡಿಯ ಬಂಗರು, ಪುತ್ತಿಗೆ, ಮೂಡಬಿದರೆ, ಉಳ್ಳಾಲದಿಂದ ಆಳ್ವಿಕೆ ಮಾಡಿದ ಅಬ್ಬಕ್ಕನ ಪ್ರಸಿದ್ಧಿಯ ಚೌಟ ಅರಸರು, ವೇಣೂರು ಅಳದಂಗಡಿಯ ಅಜಿಲ ಅರಸರು, ಮೂಲ್ಕಿ ಸೀಮೆಯ ಸಾವಂತರು, ಕಾರ್ಕಳದ ಭೈರವರಸರು ಹೀಗೆ 15 ಕ್ಕಿಂತ ಹೆಚ್ಚು ರಾಜಮನೆತನಗಳಲ್ಲದೆ, ಇಡೀ ತುಳುನಾಡನ್ನು ಆಳ್ವಿಕೆ ಮಾಡಿದ ನೂರಾರು ಬೀಡು, ಬಲ್ಲಾಳರು, ಹೆಗ್ಗಡೆಯವರು ಜೈನರಾಗಿದ್ದುದನ್ನು ಅಲ್ಲಗೆಳೆ ಯಲು ಸಾಧ್ಯವೇ? ಬೆರಳೆಣಿಕೆಯ ರಾಜಮನೆತನಗಳು ಮತ್ತು ಬೀಡುಗಳು ಜೈನೇತರರಿಗೆ ಸೇರಿದರೂ ಶೇಕಡ 90ಕ್ಕಿಂತ ಹೆಚ್ಚು ಜೈನಮನೆತನಗಳು ಇಲ್ಲಿ ಆಳ್ವಿಕೆ ಮಾಡಿದ್ದವು ಎಂಬುದು ಇತಿಹಾಸಕಾರರಿಗೆ ಒಪ್ಪಿತವಾದ ವಿಚಾರ. ಈ ಮನೆತನಗಳು ಎಲ್ಲಾ ಧರ್ಮ, ಜಾತಿ, ಜನಾಂಗದವರನ್ನು ಸಾಮರಸ್ಯ ದಿಂದ ಆಳಿದ ನೂರಾರು ಉದಾಹರಣೆಗಳು ದಾಖಲಾಗಿದೆ.

Screenshot_2 R

ಧರ್ಮಸಾಮರಸ್ಯದ ಬೀಡು: ಜೈನ ನಂಬಿಕೆಗಳು, ಆರಾಧನಾ ಪದ್ಧತಿಗಳು ಉಳಿದ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಧರ್ಮಕ್ಕೆ ಅತ್ಯಂತ ಹತ್ತಿರವಾಗಿದೆ. ಇದು ಎಷ್ಟು ಹತ್ತಿರವಾಗಿದೆ ಎಂದರೆ ಹೊರಗಿನಿಂದ ನೋಡುವ ಅನ್ಯಧರ್ಮೀಯರೊಬ್ಬರಿಗೆ ಅವೆರಡು ಒಂದೇ ಎಂದು ಭಾವನೆ ಬಂದು ಬಿಡುವುದರಲ್ಲಿ ಸಹಜತೆ ಇದೆ. ಇದರ ಮುಂದುವರಿದ ಭಾಗವೇ ದೇವಾಲಯಗಳ ನಿರ್ಮಾಣ.

ಇತಿಹಾಸವನ್ನು ಓದದ ಸಾಮಾಜಿಕ ಜಾಲತಾಣದ ಇತಿಹಾಸ ವೀರರಿಗೆ ಗೊತ್ತಿಲ್ಲದ ವಿಚಾರ ವೇನೆಂದರೆ ಹಿಂದೂ ರಾಜರುಗಳು ಎಷ್ಟು ಹಿಂದೂ ದೇವಾಲಯಗಳನ್ನು ನಿರ್ಮಿಸಿದರೋ ಅಷ್ಟೇ ಸಂಖ್ಯೆಯ ದೇವಾಲಯಗಳನ್ನು ದೈವಸ್ಥಾನಗಳನ್ನು ಜೈನ ರಾಜರುಗಳು, ಮಂತ್ರಿಗಳು, ದಂಡ ನಾಯಕರು, ಪ್ರಜಾ ಪರಿವಾರದವರು ನಿರ್ಮಿಸಿದರು, ಪೋಷಿಸಿದರು, ದಾನದತ್ತಿಗಳನ್ನು ನೀಡಿದರು.

ಇದಕ್ಕೆ ಉದಾಹರಣೆ ಎಂದರೆ ಹೊಯ್ಸಳ ರಾಜ ವಿಷ್ಣುವರ್ಧನ. ಶೈವತತ್ವದ ಅನುಯಾಯಿಗಳ ಕಿರುಕುಳಕ್ಕೆ ಒಳಗಾದ ವೈಷ್ಣವ ಸಂತ ರಾಮಾನುಜಾಚಾರ್ಯರು ಕರ್ನಾಟಕಕ್ಕೆ ಓಡಿ ಬಂದಾಗ ಅವರಿಗೆ ಆಶ್ರಯ ನೀಡಿದವನು ಜೈನ ಧರ್ಮೀಯನಾದ ಇದೇ ಬಿಟ್ಟಿದೇವ ಅಥವಾ ವಿಷ್ಣುವರ್ಧನ.

ಅವನು ನಿರ್ಮಿಸಿದ ಹತ್ತಾರು ವೈಷ್ಣವ ದೇವಾಲಯಗಳು, ಅವನ ಹೆಂಡತಿ ಶಾಂತಲಾದೇವಿ ಮತ್ತು ಮಗಳು ಕೊನೆಯವರೆಗೂ ಜೈನ ಧರ್ಮೀಯರಾಗಿಯೇ ಉಳಿದು ಜಿನಮಂದಿರಗಳನ್ನು ನಿರ್ಮಿಸಿದ ಬಸದಿಗಳು, ಬಾದಾಮಿಯ 4 ಗುಹಾಂತರ ದೇವಾಲಯದಲ್ಲಿ ಶಿವ-ವಿಷ್ಣುವಿನ ಜೊತೆಯಲ್ಲಿಯೇ ಜಿನಾಲಯದ ನಿರ್ಮಾಣ, ಇವುಗಳ ಹಿಂದಿನ ಸಂದೇಶವೇನು? ಇಂತಹ ನೂರಾರು ಉದಾಹರಣೆಗಳು ಕರ್ನಾಟಕದ ಇತಿಹಾಸದಲ್ಲಿವೆ. ವಿಷ್ಣುವರ್ಧನ ಶಾಂತಲೆಯರ ವಂಶಸ್ಥರು ಇಂದು ಬದುಕಿದ್ದು, ಈ ದೇವಾಲಯದಲ್ಲಿ ಮುಖ್ಯಸ್ಥ ರಾಗಿದ್ದರೆ, ಅದು ನಿಮ್ಮದಲ್ಲ ಎಂದು ವಿರೋಧಿಸುವುದಾದರೆ ಅದು ಎಂತಹ ಮನಸ್ಥಿತಿ.

ತುಳುನಾಡಿನ ದೇವಳಗಳು; ಜೈನರ ಆಡಳಿತ: ತುಳುನಾಡಿನ ಬಸದಿಗಳಲ್ಲಿ ತೀರ್ಥಂಕರರನ್ನು ಪೂಜಿಸುವ ಈ ಅರಸರು ಅಥವಾ ಬೀಡಿನ ಮುಖ್ಯಸ್ಥರು ತಮ್ಮ ಕುಲ ದೇವರಾಗಿ ಹಿಂದೂ ದೇವರು ಗಳನ್ನು ಸ್ಥಾಪಿಸಿ ಪರಂಪರೆಯಿಂದ ಪೂಜಿಸಿಕೊಂಡು ಬರುತ್ತಿದ್ದಾರೆ. ಪುತ್ತಿಗೆಯ ಚೌಟರಿಗೆ ಕುಲದೈವ ಚಂದ್ರನಾಥನಾದರೆ ಆರಾಧ್ಯ ದೈವ ಪುತ್ತಿಗೆಯ ಸೋಮನಾಥ. ಬಂಗವಾಡಿಯ ಬಂಗರಸರ ಕುಲದೇವ ಶಾಂತಿನಾಥ ಮತ್ತು ಸೋಮನಾಥ. ವೇಣೂರಿನ ಅಜಿಲ ಅರಸರ ಕುಲದೈವ ಪಾರ್ಶ್ವ ನಾಥ ಮತ್ತು ಮಹಾಲಿಂಗ. ಕಾರ್ಕಳದ ಭೈರವರಸರ ಕುಲದೈವ ಪಾರ್ಶ್ವನಾಥ ಮತ್ತು ಕಳಸದ ಕಳಸೇಶ್ವರ. ಮೂಲ್ಕಿಯ ಸಾವಂತರಿಗೆ ಬಪ್ಪನಾಡು ದುರ್ಗೆ ಹಾಗೂ ಸಿಮಂತೂರು ಜನಾದನ, ಪಡುಬಿದಿರೆ ಕಿನ್ಯಕ್ಕ ಬಲ್ಲಾಳರಿಗೆ ಮಹಾಲಿಂಗೇಶ್ವರ, ಸೂರಾಲಿನ ತೋಳಹರರಿಗೆ ಮಹಾಲಿಂಗೇಶ್ವರ, ಧರ್ಮಸ್ಥಳದ ಕುಲದೇವರು ಚಂದ್ರನಾಥನಾದರೆ, ಹೆಗ್ಗಡೆಯವರ ಆರಾಧ್ಯದೈವ ಮಂಜುನಾಥ.

ಎರ್ಮಾಳಿನ ಮಾರಮ್ಮ ಹೆಗ್ಗಡೆಯವರಿಗೆ ಜನಾದನ ಸ್ವಾಮಿ, ಪುತ್ತೂರಿನ ಹೆಗ್ಗಡೆ ಮನೆತನದವರಿಗೆ ಅಲ್ಲಿಯ ಶಾಂತೀಶ್ವರ ಮತ್ತು ಪುತ್ತೂರಿನ ಮಹಾಲಿಂಗೇಶ್ವರ, ಸುಳ್ಯ ಸೀಮೆಯ ಬಲ್ಲಾಳರಿಗೆ ಚೆನ್ನಕೇಶವ ಹೀಗೆ ನೂರಾರು ಉದಾಹರಣೆಗಳು ಜೈನರ ಸ್ಥಾಪನೆ, ಪೋಷಣೆಯ ಶಾಸನೋಕ್ತ ಅಥವ ಇತರ ದಾಖಲೆಗಳ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಕುಕ್ಕೆ ಸುಬ್ರಹ್ಮಣ್ಯ, ಜೈನ ಬಂಗರಸರ ಆಡಳಿತದಲ್ಲಿದ್ದುದಕ್ಕೆ ಸುಬ್ರಹ್ಮಣ್ಯದ ಶಾಸನ ಸಹಿತ ಹಲವು ದಾಖಲೆಗಳಿವೆ.

ಜೈನ ಬಲ್ಲಾಳರು ಮತ್ತು ದೈವಗಳು: ತುಳುನಾಡಿನ ದೈವಸ್ಥಾನದಲ್ಲಿ ಯಾವುದಾದರೂ ದೈವ, ಇಲ್ಲಿಯ ಸ್ಥಳೀಯ ಜೈನ ಅರಸರು ಮತ್ತು ಬಲ್ಲಾಳರನ್ನು ಉಲ್ಲೇಖಿಸದಿದ್ದರೆ ಅದು ಪ್ರಾಚೀನ ದೈವವಲ್ಲವೆಂದೆ ಅರ್ಥ. ಅಷ್ಟರಮಟ್ಟಿಗೆ ಈ ದೈವಸ್ಥಾನಗಳ ಸ್ಥಾಪನೆಯ ಹಿಂದೆ ಜೈನರಿದ್ದಾರೆ.

ಇಂದು ಸುಳ್ಯ, ಪುತ್ತೂರು ಭಾಗದಲ್ಲಿ ಈ ಜೈನ ಬಲ್ಲಾಳ ಹೆಗ್ಗಡೆ ಮನೆತನದವರು ನಿಸ್ಸಂತತಿ ಹೊಂದಿರಬಹುದು. ಆದರೆ ದೈವಗಳ ಪಾಡ್ದನಗಳಲ್ಲಿ (ಊಟ್ಝhಟ್ಟಛಿ) ಮತ್ತು ಅಷ್ಟಮಂಗಲ ಪ್ರಶ್ನೆಗಳಲ್ಲಿ ಅನಿವಾರ್ಯವಾಗಿ ಇವರ ಹೆಸರು ಬರುವುದನ್ನು ಯಾರಿಗೂ ತಪ್ಪಿಸಲು ಸಾಧ್ಯ ವಾಗಿಲ್ಲ. ಉದಾಹರಣೆಗೆ ಮೂಡುಬಿದರೆಯ ಚೌಟರು ಜುಮಾದಿ ಪಂಜುರ್ಲಿ, ಬಂಗರಸರು ಮುರ್ತು ರಾಯೇ ಪಂಜುರ್ಲಿ, ಬೈಲಂಗಡಿಯ ಮೂಲರು ಪಂಜುರ್ಲಿ ರಕ್ತೇಶ್ವರಿ, ಧರ್ಮಸ್ಥಳ ಬೀಡಿನವರು ಪಂಜುರ್ಲಿ ಕಾಳರಾತ್ರಿ ಇತ್ಯಾದಿ. ಹೀಗೆ ನೂರಾರು ದೈವಗಳನ್ನು ಆರಾಧಿಸಿಕೊಂಡು ಬಂದವರು ಈ ಜೈನರು.

ದೈವಗಳ ಕುರಿತಾದ ನಂಬಿಕೆಯನ್ನೇ ಪ್ರಶ್ನಿಸುವ ಈ ಕಾಲಘಟ್ಟದಲ್ಲಿ ದೈವದ ಮೊಟ್ಟ ಮೊದಲ ಶಾಸನ ಸಿಗುವುದು 1379ರ ಕಾಂತೇಶ್ವರ ದೇವಾಲಯದಲ್ಲಿ. ಇಲ್ಲಿ ಬರುವ “ದೈವಕ್ಕೆ ತಪ್ಪಿದವರು" ಎನ್ನುವ ಪದವನ್ನು ಕಾಪಿಟ್ಟ ಕಾಂತೇಶ್ವರ ದೇವಾಲಯದ ಪೋಷಕರು, ಮುಖ್ಯಸ್ಥರು ಇಂದಿಗೂ ಬಾರಾಡಿಬೀಡಿನ ಜೈನ ಬಲ್ಲಾಳರು.

ತಮ್ಮ ಹಿರಿಯರು ಸ್ಥಾಪಿಸಿದ ಈ ದೈವಸ್ಥಾನಗಳನ್ನು, ನಂಬಿದ ಈ ಸತ್ಯಗಳನ್ನು ಬಿಟ್ಟುಬಿಡಿ ಅದು ನಿಮ್ಮದಲ್ಲ ಎಂದರೆ ಅದು ಯಾವ ಮನಸ್ಥಿತಿ? ನನಗೆ ಮಧುಮಾಂಸವು ಉಂಟು, ಮಾಂಸ ರಹಿತ ಜೈನರ ಧರ್ಮವು ಉಂಟು ಎನ್ನುವ ಆ ಸತ್ಯಗಳ ನ್ಯಾಯ ಧರ್ಮವನ್ನು ಪ್ರಶ್ನಿಸುವುದು ಯಾವ ಮನಸ್ಥಿತಿ? ತುಳುನಾಡಿನ ಶೇಕಡ 95 ಅರಮನೆಗಳು, ಸುಮಾರು ಶೇಕಡಾ 80 ಬೀಡುಗಳು ಇಂದಿಗೂ ಜೈನರ ಕೈಯಲ್ಲಿವೆ.

ಸುಮಾರು ಅರ್ಧದಷ್ಟು ಗುತ್ತಿನ ಯಜಮಾನರಾಗಿ ಇಂದಿಗೂ ಜೈನರಿದ್ದಾರೆ. ಇತರ ಊರಿನ ಪ್ರಮುಖ ಮನೆಗಳಲ್ಲಿರುವ ಹಲವು ಬಂಟರು ಅಥವಾ ಅಲ್ಲಿರುವ ಮುಖ್ಯಸ್ಥರು ತಮಗೆ ಈ ಅಧಿಕಾರ ಜೈನ ಮೂಲದಿಂದ ಬಂದಿದೆ ಎಂದು ಹೇಳಿಕೊಳ್ಳುತ್ತಾರೆ. ಇಂತಹ ನೂರಾರು ಮನೆತನಗಳಲ್ಲಿ ಹಿರಿಯರಿಗೆ ಬಡಿಸುವಾಗ ಇಂದಿಗೂ “ಜೈನ ಎಡೆ" ಎಂಬ ಶುದ್ಧ ಸಸ್ಯಾಹಾರದ ಎಲೆ ಇಡುವ ಮೂಲಕ ಆ ಪರಂಪರೆಯನ್ನು ಗೌರವಿಸುತ್ತಾರೆ.

ತುಳುನಾಡಿನ ಮೂಲೆ ಮೂಲೆಯಲ್ಲಿ ಜೈನರ ಕುರುಹುಗಳು, ಜೈನರ ಎಡೆ, ಜೈನಬಸದಿಗಳ ಕುರುಹು ಗಳು ಇನ್ನೂ ಇವೆ. ಜೈನರು ಗುತ್ತಿನ ಯಜಮಾನರಾಗಿ, ಬೀಡಿನ ಮುಖ್ಯಸ್ಥರಾಗಿ ತಮ್ಮ ಹಿರಿಯರು ಸ್ಥಾಪಿಸಿದ ದೇವಳದ, ದೈವ ಸ್ಥಾನದ ಮುಖ್ಯಸ್ಥರಾಗಿ ಇಂದಿಗೂ ಮುಂದುವರೆದಿದ್ದರೆ, ಅವರನ್ನು ಪ್ರಶ್ನಿಸುವ ಮನಸ್ಥಿತಿ ಯಾವುದು? ಕುಡುಮದ ಚಂದ್ರನಾಥನಿಂದ, ಧರ್ಮಸ್ಥಳದ ಮಂಜುನಾಥನ ವರೆಗೆ: ಜೈನ ಹೆಗ್ಗಡೆ ವಂಶಸ್ಥರೇ ಸ್ಥಾಪಿಸಿದ, ಕುಡುಮದ ಮಂಜುನಾಥ, ಧರ್ಮ ಸ್ಥಳದ ಮಂಜುನಾಥನಾಗಿ, ಇಪ್ಪತ್ತು ಪೆರ್ಗಡೆಗಳಿಂದ ಆರಾಧಿಸಲ್ಪಟ್ಟು, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಪರಿಶುದ್ಧ ಭಕ್ತಿ, ಕರ್ತವ್ಯಪರಾಯಣತೆ, ವ್ಯವಹಾರ ಕುಶಲತೆಯಿಂದ ನ ಭೂತೋ ಎಂದು ಬೆಳೆದು ನಿಂತಾಗ, ಜೈನರಿಗೆ ಯಾಕೆ? ಎಂದು ಕೇಳಿದರೆ ಉತ್ತರ ಸರಳ.

ಅದು ಅವರೇ ಸ್ಥಾಪನೆ ಮಾಡಿದ್ದು, ಅದು ಅವರೇ ಪೋಷಿಸಿದ್ದು, ಈ ಕ್ಷೇತ್ರವನ್ನು ಆ ವಂಶದವರೇ ಬೆಳಗಿಸಿದ್ದು. ಎಲ್ಲರೂ ಗಮನಿಸಬೇಕಾದ ವಿಚಾರವೆಂದರೆ, ಧರ್ಮಸ್ಥಳದಲ್ಲಿ ಅಣ್ಣಪ್ಪ ಗುಡಿ, ಮಂಜುನಾಥ ದೇವಾಲಯ ಇವುಗಳ ಸ್ಥಾಪನೆಗೂ ಪೂರ್ವದಲ್ಲಿ ಇದ್ದದ್ದು ಭಗವಾನ್ ಚಂದ್ರನಾಥ ಬಸದಿ ಮತ್ತು ಕುಡುಮದ ನೆಲ್ಯಾಡಿ ಬೀಡು ಮಾತ್ರ. ಆ ನಂತರ ಬಿರ್ಮಣ್ಣ ಹೆಗ್ಗಡೆ ಅಮ್ಮುಬಲ್ಲಾಳ್ತಿ ಜೈನ ದಂಪತಿಗಳು ಧರ್ಮದೇವತೆಗಳ ಕೋರಿಕೆಯಂತೆ ತಮ್ಮ ವಾಸದ ಮನೆಯನ್ನೇ ದೇವತೆಗಳಿಗೆ ಬಿಟ್ಟು ಕೊಟ್ಟರು.

1513ರಲ್ಲಿ ದೇವರಾಜ ಹೆಗ್ಗಡೆಯವರ ಕಾಲದಲ್ಲಿ ಉಡುಪಿ ವಾದಿರಾಜ ಯತಿಗಳ ಮಾರ್ಗ ದರ್ಶನದಲ್ಲಿ ಆಗಮೋಕ್ತ ರೀತಿಯಿಂದ ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆಯನ್ನು ನೆರವೇರಿಸಿ, ನಂತರ ತಮ್ಮ ಶಿಷ್ಯಂದಿರನ್ನು ಸಹ ಪೂಜೆಗೆ ಬಿಟ್ಟುಹೋಗಿರುವುದರಿಂದ ಇಲ್ಲಿ ಜೈನ, ವೈಷ್ಣವ, ಶೈವ ಹೀಗೆ ಮೂರು ಮತಗಳ ಸಮ್ಮಿಲನ ಕ್ಷೇತ್ರವಾಗಿ ರೂಪುಗೊಂಡಿತು.

“೧.ನೆಲ್ಯಾಡಿ ಬೀಡು, ೨. ಶ್ರೀ ಚಂದ್ರನಾಥ ಸ್ವಾಮಿ ಬಸದಿ, ೩.ಧರ್ಮದೇವತೆಗಳು, ೪. ಶ್ರೀಮಂಜುನಾಥ ಸ್ವಾಮಿ ದೇವಾಲಯ ೫. ಶ್ರೀ ಹೆಗ್ಗಡೆಯವರನ್ನೊಳಗೊಂಡ ಈ ಐದೂ ಶಕ್ತಿಗಳ ಸಂಯುಕ್ತ ಸಂಸ್ಥೆಯೇ (ಇಟಞmಟoಜಿಠಿಛಿ ಐoಠಿಜಿಠ್ಠಿಠಿಜಿಟ್ಞ) ಶ್ರೀಕ್ಷೇತ್ರ ಧರ್ಮಸ್ಥಳವಾಗಿದೆ.

ಇದರಲ್ಲಿ ಒಂದನ್ನು ಮತ್ತೊಂದರಿಂದ ಪ್ರತ್ಯೇಕಿಸುವಂತಿಲ್ಲ" ಎಂದು ಈ ದೇಶದ ಮಾನ್ಯ ಸುಪ್ರಿಂ ಕೋರ್ಟ್ ಆದೇಶಿಸಿದೆ. ಇಲ್ಲಿ ರಥೋತ್ಸವ, ರಂಗಪೂಜೆ ಅಥವಾ ನಿತ್ಯ ನಡೆಯುವ ನೂರಾರು ಆಚರಣೆಗಳಿಗೆ ಪ್ರತಿನಿತ್ಯ ಹೆಗ್ಗಡೆಯವರ ಅನುಮತಿ ಬೇಕು ಎನ್ನುವ ವಿಶಿಷ್ಟ ವಿಚಾರ ಶ್ರದ್ಧಾವಂತ ಧಾರ್ಮಿಕರಿಗೆ ಅರ್ಥವಾಗಬಹುದೇ ಹೊರತು ನಾಸ್ತಿಕರಿಗೆ ಅರ್ಥವಾಗದು.

ಅಂತರಾತ್ಮದ ಭಕ್ತಿ; ಆಡಳಿತದ ಸ್ವಾರ್ಥವಲ್ಲ: ಸಾವಿರಾರು ವರ್ಷಗಳಿಂದ ಜೈನರು ಈ ದೇವರು ಗಳನ್ನು ದೈವಗಳನ್ನು ಆರಾಧಿಸಿಕೊಂಡು ಬಂದದ್ದು ಅದು 21 ನೇ ಶತಮಾನದಲ್ಲಿ ಶ್ರೀಮಂತ ದೇವಸ್ಥಾನವಾಗುತ್ತದೆ ಎನ್ನುವ ಕನಸಿನಿಂದಲ್ಲ. ಅವರ ಸಾತ್ವಿಕ ಭಕ್ತಿಗೆ ಶ್ರದ್ದೆಗೆ ಒಲಿದು ಕ್ಷೇತ್ರ ಶ್ರೀಮಂತವಾಯಿತು ಅಷ್ಟೇ.

ತುಳುನಾಡಿನ ಜೈನರು ತಾವು ನಂಬಿರುವ ದೇವಾಲಯದಲ್ಲಿ ತಾಯಿ ಗರ್ಭಿಣಿಯಾಗುವುದರಿಂದ ಹಿಡಿದು ಮಗು ಜನಿಸಿ ನಾಮಕರಣ ಮಾಡಿ ಅವನು ಬೆಳೆದು ಮದುವೆಯಾಗಿ, ಸಾಧನೆ ಮಾಡಿ ಅವನ ಕೊನೆಗಾಲದ ಮರಣದ ನಂತರ ನಡೆಸುವ ಉತ್ತರ ಕ್ರಿಯೆಯವರೆಗೆ ಈ ದೈವ- ದೇವರುಗಳ ಎದುರು ಪೂಜೆ-ಪುನಸ್ಕಾರ, ಶಾಂತಿ- ಹೋಮ-ಹವನಗಳನ್ನು ಮಾಡಿಸುತ್ತಾರೆಂದರೆ, ಅದರ ಅರ್ಥ ಆಡಳಿತ ಮಾಡಿ ಲಾಭ ಮಾಡಬೇಕೆಂಬ ಸ್ವಾರ್ಥದಿಂದಲ್ಲ.

ಈ ನಂಬಿಕೆ ಅವರ ಪರಂಪರೆಯಿಂದ ಬಂದದ್ದು. ಈ ನಂಬಿಕೆ ಅವರ ದೇಹದ ರಕ್ತದ ಕಣಕಣ ದಲ್ಲೂ ಇದೆ. ನಮ್ಮ ನಮ್ಮ ಕುಟುಂಬದ ವ್ಯಾಪ್ತಿಯಲ್ಲಿರುವ ನಾವು ಸ್ಥಾಪಿಸಿದ, ನಮ್ಮ ನಿಯಂತ್ರಣ ದಲ್ಲಿರುವ ನಾಗ, ದೈವ-ದೇವರುಗಳು ದೇವಸ್ಥಾನಗಳು, ನಮ್ಮ ಸುತ್ತಮುತ್ತಲ ಜನರಿಗೆ, ಗ್ರಾಮಸ್ಥರಿಗೆ ಕಾರ್ಣಿಕದ ಸ್ಥಳವಾಗಿ ಕಂಡು ಬಂದು, ಇಡೀ ನಾಡಿನಲ್ಲಿ ಪ್ರಸಿದ್ಧ ಇಡೀ ನಾಡಿನಲ್ಲಿ ಪ್ರಸಿದ್ಧ ವಾದಾಗ, ಹಣದ ಕೊಡುಗೆಯನ್ನೇ ಕೊಡುವ ಕೇಂದ್ರವಾಗಿ ಬೆಳೆದು ನಿಂತಾಗ, ಶ್ರೀಮಂತ ಸಂಸ್ಥೆ ಯಾಗಿ ಜಗದ್ವಿಖ್ಯಾತವಾದಾಗ, ಅದು ಹಿಂದೂ ದೇವಾಲಯ, ಅಲ್ಲಿ ನಿಮಗೇನು ಕೆಲಸ, ಶತಮಾನ ಗಳಿಂದ ತನ್ನ ಹಿರಿಯರು ಆರಾಧಿಸಿಕೊಂಡು ಬಂದ ಈಶ್ವರನನ್ನು ವಿಷ್ಣುವನ್ನು ಮಂಜುನಾಥ ನನ್ನು ಮಹಾಲಿಂಗನನ್ನು ಆರಾಧಿಸಲು ಆಡಳಿತ ನಡೆಸಲು ನೀವು ಸರಿಯಾದ ವ್ಯಕ್ತಿಗಳಲ್ಲ ಎಂದು ದೂಷಿಸುವುದು ಎಂದರೆ ಅದು ಎಂತಹ ಮನಸ್ಥಿತಿ? ಪ್ರಜ್ಞಾವಂತರು ಯೋಚಿಸಬೇಕಲ್ಲವೇ?

ಲೇಖಕರು ಪ್ರಾಂಶುಪಾಲರು, ಜೈನ ಪದವಿ ಪೂರ್ವ ಕಾಲೇಜು ಮೂಡುಬಿದಿರೆ.