ಒಂದೊಳ್ಳೆ ಮಾತು
ತ್ರೆತಾಯುಗದಲ್ಲಿ, ‘ಚಕ್ಷವೇಣ’ ಎಂಬ ರಾಜನಿದ್ದನು. ಅವನು ಧರ್ಮಾತ್ಮನೂ ದಯಾಗುಣ ಸಂಪನ್ನನೂ ಆಗಿದ್ದನು. ಆತನು ಪತ್ನಿಯೊಂದಿಗೆ ಸರಳ ಜೀವನ ನಡೆಸುತ್ತಿದ್ದನು. ಪತ್ನಿಯು ಸಹ ತನ್ನ ಗಂಡನಿಗೆ ಸಹಧರ್ಮಿಣಿಯಾಗಿ ಅವನ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಳು.
ಅಧಿಕಾರದಿಂದ ರಾಜನಾಗಿದ್ದರೂ, ಆತ ಅತಿಯಾಸೆ ಪಡದೆ ಬಹಳ ಧರ್ಮದಿಂದ ರಾಜ್ಯ ವನ್ನು ಕಾಯುತ್ತಿದ್ದನು. ಯಾವುದೇ ಆಡಂಬರವಿಲ್ಲದೆ, ಬೊಕ್ಕಸಕ್ಕೆ ಬಂದ ಹಣದ ಬಹು ಭಾಗವನ್ನು ಪ್ರಜೆಗಳಿಗಾಗಿ ಮೀಸಲಿಟ್ಟು ಖರ್ಚು ಮಾಡುತ್ತಿದ್ದನು.
ಸಾಮಾನ್ಯವಾಗಿ ರಾಜರು ಮಾಡುತ್ತಿದ್ದ ದರ್ಬಾರು, ಬಳಸುತ್ತಿದ್ದ ಬೆಲೆ ಬಾಳುವ ವಸ್ತ್ರ ಆಭರಣಗಳು, ಕೈ ಕಾಲಿಗೆ ಆಳುಗಳು ಇಂಥ ಯಾವುದೇ ತೋರಿಕೆಗೆ ಬಗ್ಗದೆ ಸರಳವಾಗಿ ಬದುಕುತ್ತಿದ್ದನು. ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ಸೌಲಭ್ಯಗಳು ಮಾತ್ರ ಅವನ ಸರಳ ಸುಂದರ ಅರಮನೆಯಲ್ಲಿ ಇದ್ದವು.
ಇದನ್ನೂ ಓದಿ:Roopa Gururaj Column: ಕರ್ಮ ಮರಳಿ ಬರುತ್ತದೆ, ಮರೆಯದಿರಿ...
ಇನ್ನು ಯಾರ ಮೇಲೂ ದಬ್ಬಾಳಿಕೆ ಮಾಡುವುದು, ಯುದ್ಧ ಸಾರುವುದು ಇದೆ ದೂರದ ಮಾತೇ ಆಗಿತ್ತು. ಜನರು ಅವನನ್ನು ಧರ್ಮದ ಅವತಾರವೆಂದೇ ಭಾವಿಸಿದ್ದರು. ರಾಜ್ಯದಲ್ಲಿ ಯಾರಾದರೂ ತಪ್ಪು ಮಾಡಿದರೆ, ಚಕ್ಷವೇಣನ ಧರ್ಮಚಕ್ರ ಬಂದು ಅವರನ್ನು ಶಿಕ್ಷಿಸುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇತ್ತು.
ಒಮ್ಮೆ ರಾಜ್ಯದಲ್ಲಿ ಬಹುದೊಡ್ಡ ಜಾತ್ರೆಯಾಯಿತು. ಈ ಜಾತ್ರೆಯಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದಲೂ ದೊಡ್ಡ ದೊಡ್ಡ ವ್ಯಾಪಾರಿಗಳು ಬಂದಿದ್ದರು. ವ್ಯಾಪಾರಿಗಳ ಪತ್ನಿಯ ರೆಲ್ಲ ಬಹಳ ಶ್ರೀಮಂತರಾಗಿದ್ದರು. ಅವರೆಲ್ಲ ಚಕ್ಷವೇಣ ರಾಜನ ಪತ್ನಿಯನ್ನು ನೋಡಲು ಅರಮನೆಗೆ ಬಂದರು. ಆಕೆಯ ಸರಳವಾದ ಜೀವನ, ವೇಷಭೂಷಣಗಳನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು.
ಮಹಾರಾಣಿ ಯಾವುದೇ ವೈಭೋಗವಿಲ್ಲದೆ ಸರಳ ಜೀವನ ನಡೆಸುತ್ತಿರುವುದನ್ನು ನೋಡಿ ‘ವ್ಯಾಪಾರಸ್ಥರ ಹೆಂಡತಿಯರಾದ ನಾವೇ ಇಷ್ಟು ವೈಭವದಿಂದ ಇರುವಾಗ ನಿಮ್ಮಂಥ ಮಹಾರಾಣಿ ಹೇಗಿರಬೇಕು?’ ಎಂದು ಬೇಡದ ವಿಚಾರಗಳನ್ನು ಅವಳ ತಲೆಗೆ ತುಂಬಿದರು. ಆ ಕ್ಷಣಕ್ಕೆ ಅವರೆಲ್ಲರೂ ಹೇಳಿದ ಮಾತುಗಳಿಂದ ಆಕೆಯ ಮನಸ್ಸು ಗೊಂದಲಗೊಂಡಿತು.
ಎಂದಿಗೂ ಮಾತನಾಡದ ಅವಳು, ಬೆಲೆಬಾಳುವ ಆಭರಣಗಳು ಮತ್ತು ರೇಷ್ಮೆ ವಸ್ತ್ರಗಳು ಇವೆಲ್ಲವೂ ಬೇಕೆಂದು ಚಕ್ಷವೇಣ ರಾಜನನ್ನು ಪೀಡಿಸತೊಡಗಿದಳು. ಕೊನೆಗೆ ರಾಜ ಮಣಿಯಲೇಬೇಕಾಯಿತು. ಅವನು ನೆರೆರಾಜ್ಯದ ಶ್ರೀಮಂತ ರಾಜನಿಗೆ ಒಂದು ಪತ್ರ ಬರೆದನು.
ಮರುದಿನವೇ ಆ ರಾಜ ಕೇಳಿದ್ದಕ್ಕಿಂತ ಎರಡರಷ್ಟು ಚಿನ -ವಜ್ರ-ವೈಡೂರ್ಯ-ವಸ್ತ್ರಗಳನ್ನು ಕಾಣಿಕೆಯಾಗಿ ಚಕ್ಷವೇಣ ರಾಜನಿಗೆ ಕಳಿಸಿಕೊಟ್ಟನು. ತಮಗಿಂತ ಸೈನ್ಯ, ಶಕ್ತಿ, ಶ್ರೀಮಂತಿಕೆ ಎಲ್ಲದರಲ್ಲೂ ಮೇಲಿರುವ ಆ ರಾಜನು ತಮ್ಮ ಕಡೆಯಿಂದ ಕೇವಲ ಒಂದು ಪತ್ರ ಹೋಗಿದ್ದಕ್ಕೆ ಮರುಮಾತನಾಡದೆ ಇಷ್ಟೊಂದು ಕಾಣಿಕೆಗಳನ್ನು ಕಳಿಸಿಕೊಟ್ಟನಲ್ಲ ಎಂದು ರಾಣಿಗೆ ಆಶ್ಚರ್ಯವಾಯಿತು.
ಆಗ ಚಕ್ಷವೇಣ ಮುಗುಳ್ನಗುತ್ತಾ, “ಅದು ನನ್ನ ಶಕ್ತಿಯಲ್ಲ, ಧರ್ಮದ ಶಕ್ತಿ. ಯಾವಾಗ ಮನುಷ್ಯನ ಬುದ್ಧಿಯು ನಿರಪೇಕ್ಷೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೋ, ಆಗ ಧರ್ಮದ ಶಕ್ತಿ ಎಲ್ಲರಿಗೂ ಬರುತ್ತದೆ. ಒಂದು ಸಲ ಅಧರ್ಮದ ಕುರಿತು ಏನನ್ನಾದರೂ ಯೋಚಿಸಿಬಿಟ್ಟರೆ ಆ ಶಕ್ತಿ ಬಿದ್ದು ಹೋಗುತ್ತದೆ. ನಾನು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟು ನೆರೆಹೊರೆಯವರ ಮೇಲೆ ಯುದ್ಧ ಸಾರಿಲ್ಲ, ತೊಂದರೆ ಕೊಟ್ಟಿಲ್ಲ.
ಹೀಗಾಗಿಯೇ ವರ್ಷಗಳಿಂದ ಎಲ್ಲಾ ರಾಜ್ಯಗಳು ಸಮೃದ್ಧವಾಗಿವೆ. ಈಗ ಸಮಯ ಎಂದು ನಾನು ಪತ್ರ ಬರೆದಾಗ ಅದೇ ಕಾರಣಕ್ಕೆ ಮಿತ್ರರಾಜನು ಮರುಮಾತನಾಡದೆ ಆಸೆ ಪಟ್ಟಿದ್ದನ್ನು ಕಳಿಸಿಕೊಟ್ಟಿದ್ದಾನೆ" ಎಂದನು.
ನಂತರ, “ಈಗ ಹೇಳು ನಿನಗೆ ಯಾವುದು ಬೇಕು? ಕಂಡವರು ನೀಡಿದ ಆಭರಣದಿಂದ ಮಹಾರಾಣಿ ಎಂದು ಮೆರೆಯುವುದೋ ಅಥವಾ ಧರ್ಮದಿಂದ ಬದುಕುವುದೋ?" ಎಂದನು. ಆಗ ರಾಣಿ ಪಶ್ಚಾತಾಪಪಡುತ್ತಾ “ಧರ್ಮಮಾರ್ಗದಲ್ಲಿ ನಡೆವ ಬಂಗಾರದಂಥ ಪತಿ ನನಗಿರುವಾಗ ಇನ್ನು ಯಾವ ಬಂಗಾರವಾಗಲಿ, ಬೆಲೆಬಾಳುವ ವಸ್ತ್ರಗಳಾಗಲಿ ಅಗತ್ಯ ವಿಲ್ಲ" ಎಂದಳು. ರಾಜ ಧನ್ಯವಾದದ ಪತ್ರದೊಂದಿಗೆ ನೆರೆ ರಾಜ್ಯದ ರಾಜನಿಗೆ ಎಲ್ಲವನ್ನೂ ಹಿಂದಿರುಗಿಸಿದನು.
ಯಾವುದೇ ಅಧಿಕಾರಯುತ ಕೆಲಸದಲ್ಲಿರುವಾಗ ಅದನ್ನು ಬಳಸಿಕೊಂಡು ಹಣ ಮಾಡು ವುದು ಬಹಳ ಸುಲಭ. ಆದರೆ ಹಣ ಎಂದಿಗೂ ಗೌರವವನ್ನು ಕೊಡಲು ಸಾಧ್ಯವಿಲ್ಲ. ಪ್ರಾಮಾಣಿಕತೆ ಮತ್ತು ಒಳ್ಳೆಯ ನಡವಳಿಕೆ ಮಾತ್ರ ನಾವಿರುವವರೆಗೂ ನಮಗೆ ಅಂಥ ಒಂದು ಸಾತ್ವಿಕ ಗತ್ತನ್ನೂ ಗೌರವವನ್ನೂ ಕೊಡುತ್ತದೆ. ಇದನ್ನು ಕಳೆದುಕೊಂಡರೆ ನಮ್ಮ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.