ಸಂಪಾದಕೀಯ ಸದ್ಯಶೋಧನೆ
ಇತ್ತೀಚೆಗೆ ಮ್ಯಾನೇಜ್ಮೆಂಟ್ ಗುರು ರಘುರಾಮನ್ ಬರೆದ ಅಂಕಣವನ್ನು ಓದುತ್ತಿದ್ದೆ. ಅವರು ಒಂದು ವಿಶಿಷ್ಟ ವಿಷಯವನ್ನು ಪ್ರಸ್ತಾಪಿಸಿದ್ದರು- ನೀವು ಎಂದಾದರೂ ಮರುಭೂಮಿಯ ಮಧ್ಯದಲ್ಲಿ ಬ್ಯುಸಿನೆಸ್ ಮೀಟಿಂಗ್ ಮಾಡಿದ್ದೀರಾ? ನಾನು ಅಂಥದ್ದೊಂದು ಮರುಭೂಮಿಯ ಮಧ್ಯದಲ್ಲಿದ್ದೆ. ಅಲ್ಲಿನ ಭೌಗೋಳಿಕ ಸಂರಚನೆ ನನ್ನಲ್ಲಿ ದಿಗಿಲು ಹುಟ್ಟಿಸಿತ್ತು. ಅದೆಷ್ಟೋ ಹೊತ್ತು ಒಂಟೆಯ ಮೇಲೆ ಸವಾರಿ ಮಾಡಿ ನಾನು ಆ ಜಾಗ ತಲುಪಿದ್ದೆ. ಅಲ್ಲಿ ನಾನೊಂದು ಮೀಟಿಂಗಿನಲ್ಲಿ ಭಾಗವಹಿಸಬೇಕಿತ್ತು.
ನಾನು ಯಾರನ್ನು ಭೇಟಿಯಾಗಬೇಕಿತ್ತೋ ಆ ವ್ಯಕ್ತಿಯನ್ನು ಹೊರತುಪಡಿಸಿ ಇನ್ನಾರೂ ಅಲ್ಲಿ ಇರಲಿಲ್ಲ. ಎರಡು ಸಣ್ಣ ಮೇಜುಗಳು ಮತ್ತು ಮೂರು ಕುರ್ಚಿಗಳಿದ್ದವು. ಮೇಜಿನ ಮೇಲೆ ನೀರಿನ ಬಾಟಲಿ ಇತ್ತು. ಅಂದಿಗೆ ಅದೇ ನಮ್ಮ ಬೋರ್ಡ್ ರೂಮ್ ಆಗಿತ್ತು. ಉಂಗುಷ್ಠ ಗಾತ್ರದ ಸಣ್ಣಸಣ್ಣ ಕೀಟಗಳು ಅಲ್ಲೆಲ್ಲ ಹರಿದಾಡುತ್ತಿದ್ದವು. ಇನ್ನೇನು ಸೂರ್ಯ ಮುಳುಗುವುದರಲ್ಲಿದ್ದ. ನಾವು ನಮ್ಮ ಮೊಬೈಲುಗಳಲ್ಲಿ ಜೈಸಲ್ಮೇರಿನ ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ಚಿತ್ರಿಸಿಕೊಳ್ಳುತ್ತಿದ್ದೆವು. ಆಗಸದಲ್ಲಿ ನಕ್ಷತ್ರಗಳು ಮಿನುಗಲು ಶುರುವಾದಾಗ ನಮ್ಮ ಮೀಟಿಂಗು ಶುರುವಾಯಿತು.
ಇದನ್ನೂ ಓದಿ: Vishweshwar Bhat Column: ಯಾರ ಸ್ವತ್ತೂ ಅಲ್ಲದ, ಜಾಗತಿಕ ಪ್ರಜೆಗಳು ಕಟ್ಟುತ್ತಿರುವ ಇಂಗ್ಲಿಷ್ !
ನಾವು ಯಾರೊಡನೆ ಮೀಟಿಂಗ್ ಮಾಡಬೇಕಿತ್ತೋ ಅವರ ಮೊಬೈಲ್ ಕಿರುಗುಟ್ಟತೊಡಗಿತು. ಅವರು ಸೌಜನ್ಯದಿಂದ ಕೊಂಚ ಸಮಯಕೊಡಿ ಎಂದು ನಮ್ಮನ್ನು ಕೇಳಿಕೊಂಡರಲ್ಲದೇ ಸ್ವಲ್ಪ ದೂರ ಹೋಗಿ ಮಾತನಾಡತೊಡಗಿದರು. ನಾನು ಆಗಸದತ್ತ ಮುಖ ಮಾಡಿ ನಕ್ಷತ್ರಸಮೂಹದ ನಡುವೆ ಶುಕ್ರಗ್ರಹ ಹುಡುಕತೊಡಗಿದೆ. ಫೋನಿನಲ್ಲಿ ಮಾತನಾಡಲು ಹೋಗಿದ್ದ ವ್ಯಕ್ತಿ ಕೊಂಚ ಕಾಲ ಅದೃಶ್ಯರಾಗಿ ಬಿಟ್ಟರು. ನಾನು ನಿಜಕ್ಕೂ ಗಾಬರಿಯಾಗಿದ್ದೆ. ಏಕೆಂದರೆ ಅಲ್ಲಿ ಬೇರಾರೂ ಇರಲಿಲ್ಲ.
ನಮ್ಮ ಮೀಟಿಂಗ್ ಮುಗಿಯುತ್ತಿದ್ದಂತೆ ಒಂದು ಜೀಪ್ ಅಲ್ಲಿಗೆ ಬಂತು. ಅದರಿಂದ ಸುಮಾರು ಅರವತ್ತೆರಡರ ವಯಸ್ಸಿನ ಒಬ್ಬ ಹಿರಿಜೀವ ಕೆಳಗಿಳಿದರು. ಅವರು ಅತ್ಯಂತ ವಿನೀತರಾಗಿ ತಮ್ಮ ಚಪ್ಪಲಿ ಬಿಚ್ಚಿಟ್ಟು ನಮ್ಮಿಂದ ಕೊಂಚ ದೂರದಲ್ಲಿ ಕೈಕಟ್ಟಿ ನಿಂತಿದ್ದರು. ಇಲ್ಲೇ ಬಂದು ನಮ್ಮ ಪಕ್ಕ ಕುಳಿತುಕೊಳ್ಳಿ ಎಂದು ವಿನಂತಿಸಿಕೊಂಡ ನಂತರದಲ್ಲಿ ಹಿಂಜರಿಕೆಯಿಂದಲೇ ಬಂದು ಕುಳಿತರು. ತಮ್ಮ ಜೋಳಿಗೆಯನ್ನು ಬಿಚ್ಚಿ ಅದರಿಂದ ಹಲವಾರು ಬಣ್ಣಗಳ ಕೊಳಲುಗಳನ್ನು ಹೊರತೆಗೆದರು. ರಾಜಾಸ್ತಾನಿಯಲ್ಲಿ ಇಂಥ ಕೊಳಲುಗಳಿಗೆ ಅಲಗೋಜಾ ಎಂದು ಕರೆಯುತ್ತಾರೆ. ಭಗವಾನ್ ಕೃಷ್ಣ ನನ್ನು ನೆನಪಿಸಿಕೊಳ್ಳಿ. ಆತ ಗೋವುಗಳನ್ನು ಮೇಯಿಸುವಾಗ ಹೇಗೆ ಕೊಳಲೂದುತ್ತಿದ್ದ ಎಂಬುದನ್ನು ಊಹಿಸಿಕೊಳ್ಳಿ.
ಈ ಭಾಗದ ಗೋಪಾಲಕರು ಅಂಥ ಕೊಳಲುಗಳನ್ನು ಬಾರಿಸುತ್ತಾರೆ ಮತ್ತು ಮಾರಾಟ ಮಾಡಲೆಂದು ಇನ್ನೊಂದಷ್ಟನ್ನು ತಮ್ಮ ಬಗಲಚೀಲದಲ್ಲಿ ಇಟ್ಟುಕೊಂಡಿರುತ್ತಾರೆ. ಕೊಳಲುವಾದನ ಅವರ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ. ಅದರ ವಿನಾ ಅವರು ಇರಲಾರರು. ನಿಮಗೆ ರಜಾದಿನ ಗಳಲ್ಲಿ ಇಂಥದೊಂದು ಮರುಭೂಮಿಯಲ್ಲಿ ದಿನವಿಡೀ ಕಳೆಯುವ ಇರಾದೆ ಇದ್ದರೆ ನನ್ನದೊಂದು ಸಲಹೆ. ಸಂಜೆಯ ತಂಪು ಹವೆಯಲ್ಲಿ ನೀವು ಸಮಯ ಕಳೆಯಬೇಕು. ಡಿನ್ನರ್ ವ್ಯವಸ್ಥೆ ಮಾಡಿಕೊಳ್ಳಿ. ಆದರೆ ಆ ಹೊತ್ತಿನಲ್ಲಿ ಅಲಗೋಜಾ ಕೇಳುವುದಿದೆಯಲ್ಲ, ಅದೊಂದು ಬಗೆಯ ಆನಂದದ ಉತ್ತುಂಗಕ್ಕೆ ನಿಮ್ಮನ್ನು ಒಯ್ಯಬಲ್ಲದು. ಈ ಕಲೆ ಬಲ್ಲ ಕೆಲವೇ ಮಂದಿ ಈ ಭಾಗದಲ್ಲಿದ್ದಾರೆ.
ಅಲಗೋಜಾ ಎಂದರೆ ಅದು ಎರಡು ಕೊಳಲುಗಳ ಜೋಡಣೆಯಂತೆ ತೋರುವ ವಾದ್ಯ. ಅದರ ವಾದನದಲ್ಲಿ ಪರಿಣತಿ ಸಾಧಿಸುವುದು ಮಹಾ ಕಷ್ಟದ ಕೆಲಸವೇ ಸರಿ. ಶ್ವಾಸದ ಮೇಲೆ ಅತ್ಯುನ್ನತ ವಾದ ನಿಯಂತ್ರಣವಿರಬೇಕು. ಬೆರಳುಗಳೊಂದಿಗೆ ಆಟವಾಡುತ್ತಾ ಮಧುರ ಧ್ವನಿ ಹೊರಡಿಸುವುದಿದೆ ಯಲ್ಲ ಅದು ಕಲಾಕಾರರಿಗೆ ದೈವದತ್ತವಾಗಿ ಸಿಗುವ ವರದಾನ.
ಇಲ್ಲಿನ ಕೊಳಲುವಾದಕರ ಸಾಧನೆಯನ್ನು ಹಗುರವಾಗಿ ಪರಿಗಣಿಸಬೇಡಿ. ಅವರು ವಿಶ್ವದೆಲ್ಲೆಡೆ ಯಾತ್ರೆ ಮಾಡಿ ತಮ್ಮ ಕಲೆಯ ಪ್ರದರ್ಶನ ಮಾಡಿಬಂದಿದ್ದಾರೆ. ಅವರ ಪಾಸ್ ಪೋರ್ಟಿನಲ್ಲಿ ಎಂಬತ್ತಕ್ಕೂ ಹೆಚ್ಚು ದೇಶಗಳ ವೀಸಾ ಮುದ್ರೆ ಬಿದ್ದಿದೆ. ಅಮೆರಿಕ ಅಧ್ಯಕ್ಷರ ವೈಟ್ ಹೌಸಿನಲ್ಲಿ ಕೊಳಲುವಾದನ ಮಾಡಿ ಬಂದವರೂ ಅಲ್ಲಿದ್ದಾರೆ. ಮಿನುಗುವ ನಕ್ಷತ್ರದಂತೆ ಇರಬೇಕಾದರೆ ವಿಭಿನ್ನ ಕೆಲಸಗಳನ್ನು ಮಾಡಬೇಕಾದ ಅಗತ್ಯವಿಲ್ಲ. ನಿಮ್ಮೊಳಗಿರುವ ಪ್ರತಿಭೆಗೆ ಸಾಣೆ ಹಿಡಿದು ಅದನ್ನೇ ವಿಭಿನ್ನವಾಗಿ ಪ್ರದರ್ಶಿಸುವ ಕಲೆ ರೂಢಿಸಿಕೊಂಡರೆ ಸಾಕು, ಯಶಸ್ಸು ನಿಮ್ಮದಾಗುತ್ತದೆ