ಯಕ್ಷ ಪ್ರಶ್ನೆ
ಜನಮೇಜಯ ಉಮರ್ಜಿ
ಕಳೆದ ಶನಿವಾರದಂದು, ‘ಅನುಮಾನವೇಕೆ, ಬಸವಣ್ಣ ಹಿಂದೂ’ ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ಬಸವಣ್ಣನವರು ಯಾವೆಲ್ಲ ಕಾರಣಕ್ಕಾಗಿ ಹಿಂದೂ ಎಂಬುದನ್ನು ಅವರ ವಚನಗಳ ಸಾಧಾರವಾಗಿ ನಿರೂಪಿಸಲಾಗಿತ್ತು. ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದವು. ಜತೆಗೆ ಒಂದಿಷ್ಟು ವಿಷಯಗಳ ಪಟ್ಟಿ ಮತ್ತು ಅವುಗಳ ಬಗ್ಗೆ ಬರೆಯಲು ಆಗ್ರಹ. ಹೀಗಾಗಿ ಬರೆಯಲೇಬೇಕಾಗಿದೆ.
ಉದಾತ್ತ ಲಿಂಗಾಯತವನ್ನು ಮರಳುಗಾಡಿನ ಮತಗಳೊಂದಿಗೆ ಸಮೀಕರಿಸುವುದೆಷ್ಟು ಸರಿ? ಇಲ್ಲಿಂದ ಶುರು ಮಾಡೋಣ. ಪ್ರತ್ಯೇಕ ಧರ್ಮ ಮಾಡಲು ಹೊರಟ ಘಟಾನುಘಟಿಗಳಲ್ಲಿ ಕೆಲವರು ಲಿಂಗಾಯತವನ್ನು ಮರಳುಗಾಡಿನ ಮತಗಳೊಂದಿಗೆ ಸಮೀಕರಿಸಲು ಹೆಣಗು ತ್ತಿರುವುದು ಹಲವು ಭಾಷಣಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಿದಿತವಾಗಿದೆ.
ಈ ಬಲೆ ಹೆಣೆದವರಾರು? ಇದರ ಹಿಂದಿನ ಕಾರಣವೇನಿರಬಹುದು? ಸದ್ಯಕ್ಕಿದು ಕುತೂಹಲ. ಮರಳುಗಾಡಿನ ಮತಗಳು, ರಿಲಿಜನ್ನುಗಳೇ ಹೊರತು ಧರ್ಮವಲ್ಲ. ‘ರಿಲಿಜನ್’ ಮತ್ತು ‘ಧರ್ಮ’ ಒಂದೇ ಅರ್ಥದ ಪದಗಳಲ್ಲ. ಮತ ಹತ್ತಿರದ ಪದ ಆದರೆ ಭಾರತೀಯ ಭಾಷೆಗಳಲ್ಲಿ ರಿಲಿಜನ್ನಿಗೆ ಸಮಾನಾರ್ಥಕ ಪದವಿಲ್ಲ.
ರಿಲಿಜನ್ ಮುಖ್ಯವಾಗಿ ನಿರ್ದಿಷ್ಟ ನಂಬಿಕೆ, ಪ್ರವಾದಿ ಮತ್ತು ಗ್ರಂಥವನ್ನು ಕೇಂದ್ರ ವಾಗಿಟ್ಟುಕೊಂಡ ವ್ಯವಸ್ಥೆಯಾಗಿದ್ದರೆ, ಬದಲಾಗಿ ಧರಿಸಲ್ಪಡುವುದು ಧರ್ಮ. ಆಚರಿಸ ಲ್ಪಡುವುದು ಧರ್ಮ. ಅದು ನೈತಿಕ-ಅಧ್ಯಾತ್ಮಿಕ ನಿಯಮ ಮತ್ತು ಜೀವನಪದ್ಧತಿ. ರಿಲಿಜನ್ “ನೀವು ಏನು ನಂಬುತ್ತೀರಿ?" ಎಂದು ಕೇಳುತ್ತದೆ; ಧರ್ಮ “ನೀವು ಹೇಗೆ ಬದುಕುತ್ತೀರಿ?" ಎಂಬುದನ್ನು ಬಯಸುತ್ತದೆ.
ಇದನ್ನೂ ಓದಿ: Janamejaya Umarji Column: ಅನುಮಾನವೇಕೆ ? ಬಸವಣ್ಣನವರು ಸನಾತನ ಹಿಂದೂ...
ಆದ್ದರಿಂದ ಧರ್ಮವು ಕೇವಲ ಪೂಜಾಪದ್ಧತಿಗೆ ಸೀಮಿತವಲ್ಲ, ಅದು ಕರ್ತವ್ಯ-ಅಕರ್ತವ್ಯ, ಕರ್ಮ-ಅಕರ್ಮ, ಸತ್ಯ-ಅಸತ್ಯ ಮತ್ತು ನೀತಿ-ಅನೀತಿಯ ಸಮಗ್ರ ಜೀವನದರ್ಶನ. ಉದಾತ್ತ ಲಿಂಗಾಯತವನ್ನು ರಿಲಿಜನ್ನುಗಳಂತೆ ಸಮೀಕರೀಸಲು, ಅಂದರೆ ಒಂದೇ ದೇವರು, ಒಬ್ಬನೇ ಪ್ರವಾದಿ ಯಾನೆ ಸಂಸ್ಥಾಪಕ, ಒಂದೇ ಪವಿತ್ರ ಗ್ರಂಥ, ಒಂದೇ ಭಾಷೆ, ಒಂದೇ ಪವಿತ್ರ ಸಂಖ್ಯೆ ಇವುಗಳನ್ನೆಲ್ಲ ಲಿಂಗಾಯತಕ್ಕೆ ಅಂಟಿಸಲಾಗುತ್ತಿದೆ.
‘ಇಷ್ಟ ಲಿಂಗ’ ಒಂದೇ ದೇವರು, ‘ವಚನಗಳು ಮಾತ್ರವೇ ಧರ್ಮಗ್ರಂಥ’, ‘ಬಸವಣ್ಣನವರು ಪ್ರವಾದಿ’ ಮತ್ತು ಒಂದೇ ಪವಿತ್ರ ಸಂಖ್ಯೆ, ಇದು ಕನ್ನಡದ ಧರ್ಮ- ಈ ರೀತಿ ಮರು ವಿನ್ಯಾಸ ಗೊಳಿಸಲು ಒಂದು ಗುಂಪು ಹೆಣಗುತ್ತಿದೆ. ವಿಚಾರಿಸಿ ನೋಡಿದರೆ ಹಿಂದೂ ಲಿಂಗಾಯತ ದರ್ಶನ ಮತ್ತು ಸೆಮೆಟಿಕ್-ಅಬ್ರಹಾಮಿಕ್ ರಿಲಿಜನ್ನುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ.
ರಿಲಿಜನ್ನುಗಳು ಸಹ ದೇವರ ಅಸ್ತಿತ್ವದಲ್ಲಿ ನಂಬಿಕೆಯನ್ನು ಹೊಂದಿದ್ದರೂ, ಅವುಗಳ ಮೂಲತತ್ತ್ವಗಳಲ್ಲಿ ಮಹತ್ತರ ಭೇದಗಳಿವೆ. ಲಿಂಗಾಯತ ದರ್ಶನದಲ್ಲಿ ಇಷ್ಟಲಿಂಗದ ಮೂಲಕ ಶಿವಾನುಭವವನ್ನು ಸಾಧಿಸುವ ಸಾಕಾರ-ನಿರಾಕಾರದ ಏಕತ್ವ ದರ್ಶನವಿದೆ.
ಹಿಂದಿನ ಲೇಖನದಲ್ಲಿ ಹೇಳಿದಂತೆ ಸ್ಥಾವರ-ಜಂಗಮ ರೂಪಗಳ ವೈವಿಧ್ಯದಲ್ಲಿಯೂ ಪರಮತತ್ತ್ವದ ಏಕತ್ವವನ್ನು ಒಪ್ಪಿಕೊಳ್ಳಲಾಗುತ್ತದೆ. ಈ ಉಪಾಸನಾ ವೈವಿಧ್ಯವೇ ಮುಂದೆ ವಿಭಜನೆಯಾಗಬಾರದೆಂದು ಎಚ್ಚರಿಕೆಯನ್ನೂ ವಹಿಸಿದ್ದಾರೆ ಬಸವಣ್ಣನವರು.
ಉದಾಹರಣೆಗೆ “ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೇ; ಜಂಗಮ ದೊಳಗೆ ಲಿಂಗಯ್ಯ ಸನ್ನಿಹಿತನಾಗಿರ್ಪ. ‘ಸ್ಥಾವರ ಜಂಗಮ ಒಂದೆ’ ಎಂದುದು ಕೂಡಲ ಸಂಗನ ವಚನ", “ಆರಾಧನೆಯ ಮಾಡಿದಡೆ ಅಮೃತದ ಬೆಳಸು, ವಿರೋಧಿಸಿದಡೆ ವಿಷದ ಬೆಳಸು! ಇದು ಕಾರಣ, ಲಿಂಗ ಜಂಗಮಕ್ಕಂಜಲೆಬೇಕು. ಸ್ಥಾವರ ಜಂಗಮ ಒಂದೆಯೆಂದರಿ ದರೆ, ಕೂಡಲಸಂಗಮದೇವ ಶರಣಸನ್ನಿಹಿತ" ಈ ವಚನಗಳನ್ನು ನೋಡಬಹುದು. ರಿಲಿಜನ್ನುಗಳಲ್ಲಿ ನಿರಾಕಾರ ಏಕದೇವತ್ವವೇ ಮೂಲಾಧಾರವಾಗಿದ್ದು, ದೇವರಿಗೆ ಯಾವುದೇ ರೂಪ-ಪ್ರತಿಮೆಯನ್ನು ನಿರಾಕರಿಸಲಾಗುತ್ತದೆ.
ಜತೆಗೆ ನಮ್ಮ ದೇವರು ಮಾತ್ರ ದೇವರು, ಉಳಿದವರಲ್ಲ ಎಂಬುದನ್ನು ಹೇಳಲಾಗುತ್ತದೆ. ಈ ವ್ಯತ್ಯಾಸ ಸ್ಪಷ್ಟವಿದ್ದರೂ ಲಿಂಗಾಯತವನ್ನು ರಿಲಿಜನ್ನುಗಳ ರೀತಿ ನಿರಾಕಾರ ಹಾಗೂ ಏಕದೇವವಾದಕ್ಕೆ ಒಗ್ಗಿಸಲು ಮೂರ್ತಿಪೂಜೆ ನಿರಾಕರಿಸುವ, ಜಗುಲಿಗಳಿಂದ, ಗೂಡು ಗಳಿಂದ ಮೂರ್ತಿಗಳನ್ನು ತೆಗೆಸಿ ಹಾಕುವ, ದೇವಸ್ಥಾನಗಳಿಗೆ ಹೋಗದಂತೆ ತಡೆಯುವ ಶತಪ್ರಯತ್ನ ನಡೆಸಲಾಗುತ್ತದೆ. ಇನ್ನು ರಿಲಿಜನ್ನುಗಳಲ್ಲಿ ದೇವರಿಗೆ ಒಂದೇ ಹೆಸರು. ಶಿವಶರಣರು ಒಂದೇ ಪರತತ್ವವನ್ನು ತಮ್ಮ ಇಷ್ಟದ ಹೆಸರಿಟ್ಟು ಕರೆದಿದ್ದಾರೆ. ಅವನನ್ನು ಇಷ್ಟದಂತೆ ಕರೆಯುವ ಸ್ವಾತಂತ್ರ್ಯವಿದೆ.
‘ಕೂಡಲಸಂಗಮದೇವ’, ‘ಗುಹೇಶ್ವರ’, ‘ಚೆನ್ನಮಲ್ಲಿಕಾರ್ಜುನ’, ‘ಸೌರಾಷ್ಟ್ರ ಸೋಮನಾಥ’ ಹೀಗೆ ನೂರಾರು ಹೆಸರು ಶಿವನಿಗೆ. ಇವುಗಳನ್ನು ಅಂಕಿತನಾಮಗಳು ಎನ್ನುವುದರ ಜತೆಗೆ ಇಷ್ಟದೈವ ಎನ್ನುವುದು ಸತ್ಯ. ಅಂಬಿಗರ ಚೌಡಯ್ಯನವರ ಅಂಕಿತ ಇದಕ್ಕೆ ಹೊರತು ಎಂದು ಕೆಲವರು ವಾದಿಸಬಹುದು.
ಇದು ಲಿಂಗಾಂಗ ಸಾಮರಸ್ಯದ ಸ್ಥಿತಿ. ಇದೇ ರೀತಿ ಇನ್ನೂ ಕೆಲವು ಇರಬಹುದು ಆದರೆ ಬಹುಪಾಲು ಇಷ್ಟ ದೈವಗಳೇ. ಅಷ್ಟೇ ಅಲ್ಲದೇ ವಚನಗಳಲ್ಲಿ ಅಭವ, ನೊಸಲಗಣ್ಣ, ತ್ರಿಪುರಾರಿ, ಲಿಂಗ, ಶಿವ, ಶಂಕರ, ರುದ್ರ, ಪಂಚವಕ ಈ ರೀತಿ ಹಲವು ಹೆಸರುಗಳಿಂದ ಕರೆಯ ಲಾಗಿದೆ.
ಅಕ್ಕಮಹಾದೇವಿಯವರ ವಚನಗಳನ್ನು ನೋಡಿದಾಗ ಅವರು ಚೆನ್ನಮಲ್ಲಿಕಾರ್ಜುನನ ಗುಣ ರೂಪಗಳನ್ನು ಎಷ್ಟು ರೀತಿ ವರ್ಣಿಸಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ. ಉದಾಹರಣೆಗೆ, “ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ, ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ, ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು, ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ, ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈಪಿಡಿದೆ, ಚೆನ್ನಮಲ್ಲಿಕಾರ್ಜುನನ ಕಂಡು ನಾ ಕಣ್ತೆರೆದೆ" ವಚನವನ್ನು ನೋಡಬಹುದು.
ಈ ವಚನದಲ್ಲಿ ಚೆನ್ನಮಲ್ಲಿಕಾರ್ಜುನ ಕೆಂಜೆಡೆಗಳ ಸುಲಿಪಲ್ಲ ಗೊರವ. ಈ ಸ್ವಾತಂತ್ರ್ಯವು ಹಿಂದೂ ಧರ್ಮದಲ್ಲಿ ಮಾತ್ರವೇ ಇದೆ. ಅನೇಕ ನಿಂದಾಪರ ಸ್ತುತಿ ವಚನಗಳನ್ನು ಸಹ ನೋಡಬಹುದು. ಇದು ರಿಲಿಜನ್ನುಗಳಲ್ಲಿ ಊಹಿಸಲೂ ಸಾಧ್ಯವಿಲ್ಲ. ಕರ್ಮ, ಪುನರ್ಜನ್ಮ ಮತ್ತು ಮೋಕ್ಷದ ವಿಷಯದಲ್ಲಿಯೂ ಸನಾತನ ಲಿಂಗಾಯತ ದರ್ಶನ ಮತ್ತು ಅಬ್ರಹಾ ಮಿಕ್ ರಿಲಿಜನ್ನುಗಳ ನಡುವೆ ಮೂಲಭೂತ ಭೇದವಿದೆ. ಲಿಂಗಾಯತ ದರ್ಶನದಲ್ಲಿ ಕರ್ಮ-ಫಲದ ನಿಯಮ ಅಚಲಸತ್ಯ; ಸಂಸಾರವು ಹುಟ್ಟು-ಸಾವುಗಳ ಚಕ್ರ, ಮತ್ತು ಆ ಭವದಿಂದ ಬಿಡುಗಡೆ ಹೊಂದುವುದೇ ಲಿಂಗಾಂಗ ಸಾಮರಸ್ಯ.
ವಚನಗಳಲ್ಲಿ ಹಲವು ಕಡೆ “ಕುಂಭೀಪಾತಕ ನಾಯಕ ನರಕ" ಮುಂತಾದ ಶಬ್ದಗಳು ಬಂದಿವೆ. ಅವು ಅನೈತಿಕ ಕರ್ಮದ -ಲವನ್ನು ಸೂಚಿಸುವ ಎಚ್ಚರಿಕೆಗಳು. ಆದರೆ ಪ್ರತಿ ಶರಣರ ಗುರಿ ಸೌಲಭ್ಯಗಳಿರುವ ಸ್ವರ್ಗಪ್ರಾಪ್ತಿ ಅಲ್ಲ. ಬದಲಾಗಿ ಭವ ನಾಸ್ತಿಯಾಗುವುದು, ಹುಟ್ಟುಗೆಡುವುದು, ಮತ್ತೆ ಹುಟ್ಟದಿರುವುದು. ಉದಾಹರಣೆಗೆ ಬಸವಣ್ಣನವರ ಈ ವಚನ ಗಳನ್ನು ನೋಡಬಹುದು “ಭವಬಂಧನ ಭವಪಾಶವಾದ ಕಾರಣವೇನಯ್ಯಾ? ಹಿಂದಣ ಜನ್ಮನಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ, ಅರಿದೊಡೀ ಸಂಸಾರವ ಹೊದ್ದಲೀವನೆ, ಕೂಡಲ ಸಂಗಮದೇವ?", “ಭವಭವದನ್ನ ಮನವು ನೀವಲ್ಲದೆ ಭವಭವದನ್ನ ಮನವು ಸಿಲುಕದೆ? ಭವರಾಟಳದೊಳು ತುಂಬದೆ? ಕೆಡಹದೆ? ಭವರೋಗವೈದ್ಯ ನೀನು, ಭವವಿರಹಿತ ನೀನು, ಅವಧಾರು, ಕರುಣಿಸುವುದು, ಕೂಡಲಸಂಗಮದೇವಾ".
ಆದರೆ ರಿಲಿಜನ್ನುಗಳಲ್ಲಿ ಒಂದೇ ಜನ್ಮ, ಸಾವಿನ ನಂತರ ಎಲ್ಲರಿಗೂ ಒಂದೇ ದಿನ ನ್ಯಾಯ ದಿನ. ಅವುಗಳು ಸ್ವರ್ಗ-ನರಕದಲ್ಲಿ ಸಿಗುವ ಶಾಶ್ವತ ಸೌಲಭ್ಯ ಅಥವಾ ಶಿಕ್ಷೆಯ ಮೇಲೆ ಕೇಂದ್ರಿತವಾಗಿವೆ. ಅಲ್ಲಿ ಪುನರ್ಜನ್ಮ ಇಲ್ಲ. ಲಿಂಗಾಯತದಲ್ಲಿ ಲಿಂಗಾಂಗ ಸಾಮರಸ್ಯವೇ ಜೀವನದ ಅಂತಿಮ ಗುರಿ, ಅದುವೇ ಮುಕ್ತಿ. ಶುದ್ಧಜೀವನ ಕ್ರಮವೇ ಅದರ ದಾರಿ. ಹೀಗಾಗಿ ಇಲ್ಲಿ ಆಚಾರವೇ ಸ್ವರ್ಗ, ಅನಾಚಾರವೇ ನರಕ. ಇಲ್ಲಿ ಜೀವನೇ ಶಿವನಾಗುವುದಿದೆ.
ರಿಲಿಜನ್ನುಗಳಲ್ಲಿ ‘ಜೀವ-ದೇವ’ ಒಂದಾಗುವ ಅದ್ವೈತ ಸಾಧ್ಯವೇ ಇಲ್ಲ. ಇದೇ ಜನ್ಮದಲ್ಲಿ ಮುಕ್ತಿಯಾಗಬೇಕು, ಮತ್ತೆ ಹುಟ್ಟಬಾರದು ಎಂಬುದನ್ನು ಬಹುತೇಕ ಎಲ್ಲ ಹಿಂದೂ ದರ್ಶನಗಳು ಸಾರುತ್ತವೆ. ಗ್ರಂಥಾಧಿಕಾರ ಮತ್ತು ಪ್ರವಾದಿತ್ವದ ದೃಷ್ಟಿಯಿಂದಲೂ ಲಿಂಗಾ ಯತ ದರ್ಶನ ಮತ್ತು ರಿಲಿಜನ್ನುಗಳ ನಡುವೆ ಸ್ಪಷ್ಟ ತತ್ತ್ವಭೇದವಿದೆ.
ಲಿಂಗಾಯತದಲ್ಲಿ ವಚನಗಳು ಅಂತಿಮ ‘ದೈವ ಪ್ರಕಟಣೆ’ಗಳಲ್ಲ; ಶರಣರ ಅನುಭಾವದಿಂದ ಉಗಮಿಸಿದ ಆಧ್ಯಾತ್ಮಿಕ ಸ್ರೋತಗಳು. ಇಲ್ಲಿ ಅಂತಿಮ ಪ್ರವಾದಿ ಎಂಬ ಸ್ಥಿರ ಕಲ್ಪನೆ ಇಲ್ಲ; ಗುರು-ಲಿಂಗ-ಜಂಗಮ ತತ್ವದ ಮೂಲಕ ಅನುಭಾವ ಪರಂಪರೆ ನಿರಂತರವಾಗಿ ಜೀವಂತ ವಾಗಿರುತ್ತದೆ.
ಸತ್ಯವು ಕಾಲಾತೀತ; ಅದು ಅನುಭವಿಸಬೇಕಾದದ್ದು, ಒಂದೇ ವ್ಯಕ್ತಿಯ ಮೂಲಕ ಅಂತಿಮ ವಾಗಿ ಮುಕ್ತಾಯಗೊಳ್ಳುವುದಲ್ಲ. ಬಸವಣ್ಣನವರು ಪ್ರವರ್ತಿಸಿದ ಭಕ್ತಿ ಪರಂಪರೆಗೆ 63 ಪುರಾತನರೇ ಸ್ಪೂರ್ತಿ. ಬಸವಣ್ಣನವರ ವಚನವೊಂದು ಹೀಗೆ ಹೇಳುತ್ತದೆ.
“ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ ತೆರೆಯಂತೆ, ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ". ಬಸವಣ್ಣನವರಿಗೆ ಪ್ರೇರಣೆ ನೀಡಿದ ಭಕ್ತಿ ಪಂಥಗಳು ಮೊದಲೇ ಇದ್ದವು, ಅವರ ಪ್ರೇರಣೆಯಿಂದ ಹುಟ್ಟಿದ ಪಂಥಗಳು ಮುಂದೇಯೂ ಬಂದಿವೆ. ಈಗಲೂ ಇವೆ.
ಕೊನೆಯದಾಗಿ ಭಾಷೆಯನ್ನು ಬಳಸಿಕೊಂಡು ಧರ್ಮವನ್ನು ಒಡೆಯುವ ಪ್ರಯತ್ನಗಳೂ ನಡೆದಿವೆ. ವಚನ ಸಾಹಿತ್ಯವು ಕನ್ನಡದಲ್ಲಿ ರಚಿತವಾದುದರಿಂದ ಅದು ಕನ್ನಡದ ಅಮೂಲ್ಯ ಆಸ್ತಿ ಎಂಬುದು ನಿಸ್ಸಂಶಯ. ಲೋಕಭಾಷೆ ಕನ್ನಡವನ್ನು ಬಳಸಿಕೊಂಡು ಅಮೂಲ್ಯವಾದ ಅನುಭಾವ ಜನ್ಯ ಅಮೃತನುಡಿಗಳನ್ನು ಸೃಜಿಸಿದ್ದಾರೆ ಶರಣರು. ಆದರೆ ವಚನ ದರ್ಶನ ಭಾಷಾ-ಪ್ರಾದೇಶಿಕ ಗಡಿಗಳಿಗೆ ಸೀಮಿತವಾಗಿಲ್ಲ; ಅದು ವೈಶ್ವಿಕವಾಗಿದೆ.
ಭಾಷೆಯನ್ನು ಬಳಸಿಕೊಂಡು ಒಡೆವ ಅಪಾಯವನ್ನು ಊಹಿಸಿಯೇ ಬಸವಣ್ಣನವರು ಈ ವಚನವನ್ನು ಬರೆದಿರಬಹುದೇನೋ?- ಕಾಳಿದಾಸಂಗೆ (ಸಂಸ್ಕೃತ) ಕಣ್ಣನಿತ್ತೆ, ಓಹಿಲಯ್ಯನ (ತಮಿಳು) ನಿಜಪುರಕ್ಕೊಯ್ದೆ: ನಂಬಿ ಕರೆದೋಡೋ ಎಂದೆ, ತೆಲುಗು ಜೊಮ್ಮಯ್ಯಂಗೆ ಒಲಿದೆ, ದೇವಾ, ಕೂಡಲಸಂಗಮದೇವಾ, ಎನ್ನನೇಕೆ ಒಯಯ್ಯಾ?ಈ ಎಲ್ಲ ತತ್ತ್ವ-ಆಚಾರ-ದರ್ಶನಗಳ ವ್ಯತ್ಯಾಸಗಳನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಉದಾತ್ತ ಲಿಂಗಾಯತವನ್ನು ಸೆಮೆಟಿಕ್ ರಿಲಿಜನ್ನುಗಳೊಂದಿಗೆ ಸರಳ ಸಮೀಕರಣ ಮಾಡುವುದು ಬೌದ್ಧಿಕವಾಗಿ ಮತ್ತು ಐತಿಹಾಸಿಕವಾಗಿ ಬಗೆಯುವ ದ್ರೋಹವಾಗುತ್ತದೆ.
ಆದರೆ ನಡೆಯುತ್ತಿರುವುದು ಮಾತ್ರ ಹಿಂದೂ ಧರ್ಮ ಭಂಜನೆಯ ಭಾಗ. ವಿಧಿಯ ಬದಲು ನಿಷೇಧಗಳನ್ನು ಹೇರುವಲ್ಲಿ ಬೆರಳೆಣಿಕೆಯ ಜನರಿರುವ ಒಂದು ಗುಂಪು ನಿರತವಾಗಿದೆ. ಲಿಂಗಾಯತವು ಅಂತಿಮ ಗ್ರಂಥ-ಪ್ರವಾದಿ ಆಧಾರಿತ ಸಂಕುಚಿತ ವ್ಯವಸ್ಥೆಯಲ್ಲ; ಅದು ಅನುಭಾವ, ಕಾಯಕ, ಭಕ್ತಿ, ದಾಸೋಹ ಮತ್ತು ಲಿಂಗಾಂಗ ಸಾಮರಸ್ಯದ ಮೂಲಕ ಜೀವನೇ ಶಿವನಾಗುವ ಸಾಧನೆಯ ಮಾರ್ಗ.
ಇದು ಸನಾತನ ಭಾರತೀಯ ಜೀವನಪದ್ಧತಿಯೊಳಗೆ ರೂಪುಗೊಂಡ ವಿಶಿಷ್ಟ ದರ್ಶನ. ಆದ್ದರಿಂದ ನಿಜ ಲಿಂಗಾಯತದ ಅಸ್ತಿತ್ವವನ್ನು ಉಳಿಸಬೇಕಾದರೆ ಅದನ್ನು ಅನ್ಯ ಮಾದರಿ ಗಳ ಚೌಕಟ್ಟಿಗೆ ಸಿಕ್ಕಿಸದೇ, ರಾಜಕೀಯ ಕಾರಣಗಳಿಗಾಗಿ ತುಷ್ಟೀಕರಣಕ್ಕಿಳಿಯದೇ ಅದರ ತತ್ತ್ವಗಾಂಭೀರ್ಯ, ವೈಶಾಲ್ಯ ಮತ್ತು ಸನಾತನ ಮೂಲಸಂಬಂಧವನ್ನು ಅರಿತು ಸಮಗ್ರವಾಗಿ ಪ್ರಚಾರ ಮಾಡುವುದು ಈ ಕಾಲದ ಅಗತ್ಯವಾಗಿದೆ.
(ಲೇಖಕರು ಸಂಸ್ಕೃತಿ ಚಿಂತಕರು)