ವಚನಾಮೃತ (ಭಾಗ-2)
ರವಿ ಹಂಜ್
ನಾನು ನನ್ನ ಬಗ್ಗೆ ಒಂದು ಲೇಖನ ಬರೆಯುವಾಗ ನಾನು ಹೀಗಿದ್ದೇನೆ, ಇದನ್ನು ಮಾಡಿದ್ದೇನೆ ಎಂದು ಬರೆಯುತ್ತೇನೆಯೇ ಹೊರತು ರವಿಯು ಹೀಗಿದ್ದಾನೆ ರವಿಯು ಇದನ್ನೆಲ್ಲ ಮಾಡುವನು ಎಂದು ಬರೆಯುತ್ತೇನೆಯೇ? ಮೇಲಾಗಿ ಪುರಾಣಗಳು ಪುಂಡರ ಗೋಷ್ಠಿ ಎನ್ನುವ ವೈಜ್ಞಾನಿಕ ಪುರಾವೆ ಬಯಸು ವವರು ಸೃಜನಶೀಲ ಪುರಾಣ, ಕಾವ್ಯ, ವಚನಗಳಲ್ಲಿ ಸಾಕ್ಷ ಹುಡುಕುವುದು ತಪ್ಪಾಗುತ್ತದೆ.
ಇರಲಿ, ಹೀಗೆ ಒಂದು ಭಾಷೆಯ ಸೀಮಿತ ವರ್ಣಮಾಲೆಯ ಕಾರಣದಿಂದ ಸಿಂಧೂ ಎಂಬ ಪದ ಹಿಂದೂ ಎಂದಾಯಿತು. ಈ ಅಪಭ್ರಂಶ ರೂಪದ ಗೌರವಾನ್ವಿತ ಹಿಂದೂ ಪದವು ಹಲವಾರು ಶತಮಾನಗಳ ಅಂತರದಲ್ಲಿ ಭೌಗೋಳಿಕ/ಜನಾಂಗೀಯ ಪದದಿಂದ ಸಾಂಸ್ಕೃತಿಕ ಪದವಾಗಿ ಇಸ್ಲಾಮೇತರ ಜನಾಂಗದ ಧಾರ್ಮಿಕ ಪದವಾಗಿ ವಿಕಾಸ ಹೊಂದಿತು.
ಹಾಗಾಗಿಯೇ ಪಾಕಿಸ್ತಾನ ಮುಸ್ಲಿಂ ದೇಶವಾಗಿ ಮತ್ತು ಭಾರತವು ಹಿಂದೂ (ಇಸ್ಲಾಮೇತರ) ರಾಷ್ಟ್ರ ವಾಗಿ ವಿಭಜನೆಗೊಂಡು ಸ್ಥಾಪನೆಯಾದವು. ಆ ಕಾರಣದಿಂದ ಭಾರತವು ಒಂದು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಸ್ಥಾಪನೆಗೊಂಡರೂ ಇಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಎಲ್ಲರೂ ಹಿಂದೂಗಳೇ ಆಗಿದ್ದಾರೆ.
ಜೈನ, ಬೌದ್ಧ, ಸಿಖ್ ಮತಗಳು ಧರ್ಮಗಳಾಗಿ ಸಂವಿಧಾನಿಕ ಮಾನ್ಯತೆ ಪಡೆದದ್ದು ಸಾಂದರ್ಭಿಕ ಶಿಶುಗಳಾಗಿಯಷ್ಟೇ. ಈಗಲೂ ಭಾರತದಲ್ಲಿ ಹಿಂದೂ ಎನ್ನುವುದು ಇತರೆ ಮತಧರ್ಮಗಳು ಎಂಬ ಸಮಗ್ರತೆಯ ರೂಪ ಹೊಂದಿದೆಯೇ ಹೊರತು ಮತಧರ್ಮದ ಗುರುತಾಗಿಯಲ್ಲ. ಹಾಗಾಗಿಯೇ ಕೇವಲ ಪಾಕಿಸ್ತಾನವಷ್ಟೇ ವಿಭಜನೆಯಂದು ಇಸ್ಲಾಂ ರಾಷ್ಟ್ರವಾಗಲಿಲ್ಲ, ಹಿಂದೂ ಎನ್ನುವದು ಇಂದಿಗೂ ಸ್ವತಂತ್ರ ಭಾರತದಲ್ಲಿ ಸಂಸ್ಕೃತಿಯಾಗಿದ್ದು ಮತಧರ್ಮವಾಗಿ ಸಂವಿಧಾನಿಕ ಮಾನ್ಯತೆ ಪಡೆದಿರದ ಕಾರಣ ಭಾರತ ಸಹ ಪರೋಕ್ಷವಾಗಿ ಇಸ್ಲಾಂ ರಾಷ್ಟ್ರವೇ ಆಗಿದೆ ಎನ್ನಬಹುದು!
ಇದನ್ನೂ ಓದಿ: Ravi Hunj Column: ಹಿಂದೂ ಎಂಬ ಪದದ ಹಿಂದು ಮುಂದು !
ಈ ಧರ್ಮದ ವ್ಯಾಖ್ಯಾನದಾಚೆ ನಮ್ಮ ಸಾಕ್ಷಿಪ್ರಜ್ಞೆಗಳು ಪುರೋಗಾಮಿ ಮಂತ್ರಿಗಳು ಹಿಂದೂ ಎಂದರೆ ಕಳ್ಳ, ಗುಲಾಮ, ಡಕಾಯಿತ ಎಂದಿzರಲ್ಲ, ಅದು ಹೇಗೆ? ಕ್ರಿಸ್ತಶಕ ಹತ್ತೊಂಬತ್ತನೇ ಶತಮಾನ ದಲ್ಲಿ ಕೆಲವು ಕಿಡಿಗೇಡಿಗಳು ಪರ್ಷಿಯನ್ ಮತ್ತು ಉರ್ದು ಭಾಷೆಯ ಲುಗಾತ್-ಇ-ಕಿಶ್ವಾರಿ ಮುಂತಾದ ನಿಘಂಟುಗಳಲ್ಲಿ ಹಿಂದೂ ಪದಕ್ಕೆ ಗುಲಾಮ, ಕಳ್ಳ, ಡಕಾಯಿತ ಎಂಬ ವ್ಯಾಖ್ಯಾನವನ್ನು ಸೇರಿಸಿದರು.
ಇದನ್ನೇ ‘ಕಣ್ಣರಿಯದಿದ್ದರೆ ಕರುಳರಿಯದೆ’ ಎಂದಂತೆ ತಾವು ಏನಾಗಿದ್ದಾರೋ ಅದೇ ಹಿಂದೂ ಗಳೆಲ್ಲ ಆಗಿದ್ದಾರೆ ಎಂದುಕೊಂಡೋ ಏನೋ ಈ ಇಪ್ಪತ್ತೊಂದನೇ ಶತಮಾನದ ಭಾರತೀಯ ಬುದ್ಧಿಜೀವಿಗಳು, ಸಾಕ್ಷಿಪ್ರಜ್ಞೆಗಳು, ಶೈಕ್ಷಣಿಕ ಉನ್ನತಿ ಪಡೆದ ಡಾಕ್ಟರೇಟ್ ಮತ್ತು ಪೋಸ್ಟ್ ಡಾಕ್ಟರೋಲ್ ಪಂಡಿತರು ಮತ್ತು ಘನ ಪುರೋಗಾಮಿ ಮಂತ್ರಿಗಳು ಹಿಂದೂ ಎಂಬುದು ತುಚ್ಛ ಪದ ಎಂದು ಭೀಷಣ ಭಾಷಣಗಳಲ್ಲಿ ಬಿಂಬಿಸತೊಡಗಿದರು. ಈ ಗುಂಪಿನಲ್ಲಿ ಇತ್ತೀಚೆಗೆ ಲಿಂಗಾಹತಿಗಳ ಆಧುನಿಕ ಬಸವಣ್ಣ ಎನಿಸಿರುವ ಸಿದ್ಧರಾಮ ಬೆಲ್ದಾಳ ಅವರು ಹಿಂದೂ ಪದ ವೇದಗಳಲ್ಲಿ ಇಲ್ಲ. ಉಪನಿಷತ್ತಿನಲ್ಲಿ ಇಲ್ಲ. ಮೋಹನ್ ಭಾಗವತರೇ ಹೀಗೆ ಹೇಳಿದ್ದಾರೆ ಇತ್ಯಾದಿಯಾಗಿ ಭಾಷಣ ಮಾಡುತ್ತಿದ್ದಾರೆ!
ಇಷ್ಟೇ ಇತಿಹಾಸವನ್ನು ಪರಾಮರ್ಶಿಸಿದ ಮೇಲೆ ವೇದಗಳಲ್ಲಿ ಹಿಂದೂ ಪದ ಏಕಿಲ್ಲ ಎಂದು ನಿಮಗೀಗ ಅರ್ಥವಾಗಿರಬೇಕಲ್ಲವೇ? ಆದರೂ ಕೆಲವು ಮುಗ್ಧರಿಗೆ ಬಹಳಷ್ಟು ಬಿಡಿಸಿ ಹೇಳಬೇಕಾಗು ತ್ತದೆ. ಹಾಗಾಗಿ ಸರಳವಾಗಿ ಹೇಳಬೇಕೆಂದರೆ, ನನ್ನ ಹೆಸರು ರವಿ. ನಾನದನ್ನು ರವಿ ಎಂದೇ ನನ್ನ ಭಾಷೆ ಕನ್ನಡದಲ್ಲಿ ಬರೆಯುತ್ತೇನೆ. ನನ್ನ ಬರಹವನ್ನು ಬೆಂಗಾಳಿಯೊಬ್ಬ ಇದರಲ್ಲಿ ರಬಿ ಇಲ್ಲ ಎಂದು ದೂರಿದರೆ ರವಿ ಇಲ್ಲವೆಂದೇ? ಆದೇ ರೀತಿ ತಮಿಳಿನಲ್ಲಿ ಹಂಜ್ ಎಂಬುದು ಗಂಜ, ನಮಃ ಎಂಬುದು ನಮಗ, ಯಮಹಾ ಎಂಬುದು ಯಮಗಾ, ಬಿಹಾರಿ ಎಂಬುದು ಬಿಕಾರಿ, ದಳಪತಿ ಎಂಬುದು ತಲಬದಿ ಎಂದು ಬರೆಯಲಾಗುತ್ತದೆ.
ಹಾಗಾದರೆ ಹಂಜ, ನಮಃ, ಯಮಹಾ, ಬಿಹಾರಿ, ದಳಪತಿ ಪದಗಳು ಅವುಗಳನ್ನು ಬಳಸಿದ ತಮಿಳು ಲೇಖನದಲ್ಲಿ ಇಲ್ಲವೇ ಇಲ್ಲ ಎನ್ನಲಾಗುವುದೇ? ಇದು ಅತ್ಯಂತ ಸಾಮಾನ್ಯ ಜ್ಞಾನ! ಇಂತಹ ಸಾಮಾನ್ಯ ತಿಳಿವಳಿಕೆ ನಮ್ಮ ಸಾಕ್ಷಿಪ್ರಜ್ಞೆ, ಬುದ್ಧಿಜೀವಿ, ಸಂಶೋಧಕ, ಡಾಕ್ಟರೇಟ್, ಪೋಸ್ಟ್ ಡಾಕ್ಟೋರಲ್ಲುಗಳಿಗೆ ಏಕಿಲ್ಲ ಎಂಬ ಸಂಶಯ ಜನಸಾಮಾನ್ಯ ರಲ್ಲಿ ಮೂಡಿ ಈ ಅಸಾಮಾನ್ಯರ ಜ್ಞಾನದ ಹಿನ್ನೆಲೆ ಏನು ಎಂಬ ಅನುಮಾನ ಕಾಡತೊಡಗುತ್ತದೆ.
ಹಾಗಾಗಿ ಇಂತಹ ಸಮಗ್ರ ಅಸಾಮಾನ್ಯರ ವ್ಯಕ್ತಿರೂಪವಾದ ಶ್ರೀ ಬೆಲ್ದಾಳ ಶರಣರ ವ್ಯಕ್ತಿತ್ವ ಮತ್ತು ಸಾಧನೆಯ ಕುರಿತಾದ ಉಪಮೆ, ರೂಪಾಲಂಕಾರ, ಷೋಡಶ ವರ್ಣನೆಗಳನ್ನು ಗಮನಿಸೋಣ. ಏಕೆಂದರೆ ಬಹುಪಾಲು ಈ ಎಲ್ಲಾ ಅಸಾಮಾನ್ಯರ ಬಹುಪರಾಕುಗಳು, ಗುಣವಿಶೇಷಣಗಳು ಬೆಲ್ದಾಳ ಶರಣರಂತೆಯೇ ಇರುತ್ತವೆ. ಅನ್ನ ಬೆಂದಿದೆಯೋ ಎಂದು ನೋಡಲು ಒಂದಗುಳು ಹಿಸುಕಿ ನೋಡಿ ದರೆ ಸಾಕಲ್ಲವೇ!
ಶ್ರೀಯುತ ಡಾ.ಬೆಲ್ದಾಳ ಸಿದ್ಧರಾಮ ಶರಣರು ಭಾರತ ದೇಶದ ಎಲ್ಲ ಗ್ರಂಥಗಳು ಶಿವಲೀಲಾಮೃತ, ಶಿವಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಮನುಸ್ಮೃತಿ, ಎಲ್ಲಾ ವೇದ, ಉಪನಿಷತ್ತು, ಆಗಮಗಳು, ಪುರಾಣ, ಪೋತಿ, ಕಥೆಗಳು, ಬೌದ್ಧ ಜೈನ ಸಿಖ್ ಕ್ರಿಶ್ಚಿಯನ್ ಇಸ್ಲಾಂ ಪಾರ್ಸಿ ಧರ್ಮ ಗ್ರಂಥಗಳು, ಅಂಬೇಡ್ಕರ್ ಬರೆದ ಎಲ್ಲಾ ಸಂಪುಟಗಳು, ಗಾಂಧೀಜಿ ಜೀವನ ಚರಿತ್ರೆ , ನೆಹರೂ ಬರೆದ ಗ್ರಂಥಗಳು ಅಧ್ಯಯನ ಮಾಡಿದ್ದಾರೆ.
ಅವರು ದೇಶ ವಿದೇಶದವರು ಬರೆದ ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಜ್ಞಾನ ಪಡೆದಿದ್ದಾರೆ. ಬಸವಾದಿ ಶರಣರ ಸಂಪೂರ್ಣ ವಚನ ಸಾಹಿತ್ಯ ಅಧ್ಯಯನ ಮಾಡಿ, ಅವುಗಳ ಸಾರ ತಿಳಿದುಕೊಂಡಿದ್ದಾರೆ. ವಚನ ಸಾಹಿತ್ಯ ಅಧ್ಯಯನ ಮಾಡಿದ್ದಲ್ಲದೆ ನಿಜ ಜೀವನದಲ್ಲಿ ಅವನ್ನು ಮೈಗೂಡಿಸಿಕೊಂಡಿದ್ದಾರೆ.
ಬಸವಾದಿ ಶರಣರ ಯೋಗಗಳ ಬಗ್ಗೆ ಬರೆದ ವಚನಗಳನ್ನು ಅಧ್ಯಯನ ಮಾಡಿ, ಯೋಗ ಕಲಿತು ಕೊಂಡಿದ್ದಾರೆ. ಪತಂಜಲಿ ಯೋಗಕ್ಕಿಂತ ಬಸವಾದಿ ಶರಣರ ಯೋಗಗಳು ಶ್ರೇಷ್ಟ ಎಂದು ಅರಿತು ದಿನಾಲು ಅಭ್ಯಾಸ ಮಾಡಿzರೆ. ಹಠಯೋಗ ರಾಜಯೋಗಕ್ಕಿಂತ ಶರಣರ ಅಂಗಲಿಂಗಾಂಗ ಸಾಮರಸ್ಯ ಶಿವಯೋಗ ಅತಿ ಶ್ರೇಷ್ಠ ಎಂದು ಸ್ವತಃ ಯೋಗ ಮಾಡಿ ಅರಿತುಕೊಂಡು ಸಮಾಜಕ್ಕೆ ತಿಳಿಸಿ ಹೇಳಿದ್ದಾರೆ.
ಶರಣರ ಯೋಗಗಳ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ದೃಷ್ಟಿಯೋಗ ಯಾವಾಗ ಹೇಗೆ ಮಾಡಬೇಕು ಎನ್ನುವದು ವಚನಗಳನ್ನು ಹಾಡುತ್ತಾ, ಪ್ರಾಯೋಗಿಕವಾಗಿ ತಾನೇ ಮಾಡಿ ಶರಣರಿಗೆ ತೋರಿಸಿ ಕೊಟ್ಟಿದ್ದಾರೆ. ವಚನ ಸಾಹಿತ್ಯದ ತಿರುಳನ್ನು ವಿವರಿಸಲು ಹೊಸ ಪುಸ್ತಕ ರಚನೆ ಮಾಡಿದ್ದಾರೆ. ಇನ್ನೂ ಏನೇನೋ ಮಾಡಿದ್ದಾರೆ!
ಹಾಗಾಗಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇಷ್ಟೆ ಗುಣ ವಿಶೇಷಣ, ಓದು, ಅಧ್ಯಯನ ಹೊಂದಿದ ಬೆಲ್ದಾಳ ಶರಣರಿಗೆ ಸ ಅಕ್ಷರವಿರುವ ಸಂಸ್ಕೃತದ ವೇದಗಳಲ್ಲಿ ಸಿಂಧೂ ಎಂದಿರುತ್ತದೆಯೇ ಹೊರತು ಸ ಅಕ್ಷರದ ಬದಲು ಹ ಬಳಸುವ ಪರ್ಷಿಯನ್ ಉಚ್ಚಾರಣೆಯ ಹಿಂದೂ ಪದವನ್ನು ಹುಡುಕುವುದು ಸರಿಯೇ ಎಂಬ ಸಾಮಾನ್ಯ ತಿಳಿವಳಿಕೆ ಏಕಿಲ್ಲ ಎಂಬ ಯಕ್ಷ ಪ್ರಶ್ನೆ ಮತ್ತೆ ಭೂತಾಕಾರವಾಗಿ ನಿಲ್ಲುತ್ತದೆಯೇ ಹೊರತು ಉತ್ತರವಲ್ಲ.
ಇರಲಿ, ಇವರಿಗೆ ಈ ಸಾಮಾನ್ಯ ತಿಳಿವಳಿಕೆ ಏಕೆ ಸಿಕ್ಕಿಲ್ಲವೆಂದರೆ ಇವರೆಲ್ಲರೂ ಬಸವಣ್ಣನ ಪರಾಮ ರ್ಶನದ ಒರೆಯ ಕಟ್ಟಿ, ನಿಗಳವನಿಕ್ಕಿ, ಬಾರನೆತ್ತಿ ಕುಯ್ದ ಸೂತ್ರವನ್ನು ಬಸವಣ್ಣ ಮೌಢ್ಯವೆಂದಿ ದ್ದಾನೆ ಎಂದು ನಿರ್ಧರಿಸಿ ಗಂಟು ಕಟ್ಟಿ ಎಸೆದಿದ್ದಾರೆ.
ಆಧುನಿಕ ವಿಶ್ಲೇಷಣಾ ತಂತ್ರದಲ್ಲಿ oಜ್ಚಿಜ್ಞಿಜ Zb bಜ್ಚಿಜ್ಞಿಜ ಎಂಬುದನ್ನು ಕತ್ತರಿಸಿ ಕೊಚ್ಚಿ ಹಾಕುವುದು ಎಂದು ಅತ್ಯುಗ್ರವಾಗಿ ಅಳವಡಿಸಿಕೊಂಡು ಬೋಧಿಸುತ್ತಿದ್ದಾರೆ. ಇವರ ಗುಣವಿಶೇಷಣ ಗಳನ್ನು ಮತ್ತು ಪ್ರವಚನಗಳನ್ನು ಕೇಳಿದರೆ- ‘ಏನನೋದಿದರೇನಯ್ಯಾ? ಏನ ಕೇಳಿದರೇನಯ್ಯಾ? ಏನ ಹಾಡಿದರೇನಯ್ಯಾ? ‘ಓದಿ ಮರುಳಾದೆಯೋ ಕೂಚಿಭಟ್ಟ’ರೇ! ಎಂದು, ಗಿಣಿಯೋದಿ ತನ್ನ ಹೇಲ ತಾ ತಿಂದಂತೆ, ಏಕಲಿಂಗ ನಿಷ್ಠಾಚಾರ ಸ್ವಾನುಭವವಿವೇಕ, ಸಿದ್ಧಾಂತ ನಿರ್ಣಯವಿಲ್ಲದೆ, ಮಾತಿಗೆ ಮಾತು ಕಲಿತು ನುಡಿಗೆ ನುಡಿಯ ಕಲಿತು, ತರ್ಕಮರ್ಕಟರಂತೆ ಹೋರುವ, ಬಯಲಸಂಭ್ರಮದ ತರ್ಕಿಗಳ ಕಂಡರೆ, ಮಾಗಿಯ ಕೋಗಿಲೆಯಂತೆ, ಮುಖ ಮುನಿಸಾಗಿರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’ ಎಂಬ ತೋಂಟದ ಸಿದ್ದಲಿಂಗೇಶ್ವರರ ವಚನ ಬೇಡವೆಂದರೂ ನೆನಪಾಗುತ್ತದೆ.
ಅಂದ ಹಾಗೆ ಬಸವಣ್ಣನ ಪರಾಮರ್ಶನದ ವೇದಕ್ಕೆ ಒರೆಯ ಕಟ್ಟುವೆ ರೀತಿಯಲ್ಲಿಯೇ ಒಂದು ಪ್ರಕ್ಷಿಪ್ತ ವಚನವಿದೆ. ಅದು: ‘ಜೋಳವನು ಬಡಿಯುವೆ, ರಾಗಿಯನು ತೂರುವೆ, ಭತ್ತವನು ಕುಟ್ಟುವೆ ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಬೆವಸಾಯಿಯ ಮನೆಯ ಮಗ ನಾನಯ್ಯಾ’ ಎಂದಿದೆ.
ಈ ವಚನದಲ್ಲಿ ಬಸವಣ್ಣನು ಜೋಳ, ರಾಗಿ, ಭತ್ತವನ್ನು ಬಡಿದು ತೂರಿ ಕುಟ್ಟುವೆ ಎಂದ ಕಾರಣ ಈ ಧಾನ್ಯಗಳನ್ನು ತಿರಸ್ಕರಿಸುವುದು ಎಂದರ್ಥವೇ? ಹೇಗೆ ವೇದಕ್ಕೆ ಒರೆಯ ಕಟ್ಟುವೆ ವಚನವು ಪರಾಮ ರ್ಶಿಸಿ ಪರಿಷ್ಕರಿಸುವೆ ಎಂದಿದೆಯೋ ಅದೇ ರೀತಿ ಇಲ್ಲಿ ಈ ಧಾನ್ಯಗಳನ್ನು ಪರಿಷ್ಕರಿಸಿ ಉಪಯೋಗಿಸ ಬೇಕು ಎಂಬ ಕರೆ ಇದೆ. ಆದರೆ ಈ ಎಲ್ಲಾ ಗುಣವಿಶೇಷಣಗಳ ಗಾಂಪ ವ್ಯಕ್ತಿಗಳು ಸಾಮಾನ್ಯ ತಿಳಿವಳಿಕೆಯಿಲ್ಲದೆ ತಿರಸ್ಕರಿಸುವುದು ಎಂದು ಅರ್ಥೈಸಿ ಸಮಾಜವನ್ನು ಸಹ ಗಾಂಪ ಸಮಾಜ ಮಾಡುತ್ತಿದ್ದಾರೆ.
ಇವರಿಗೆ ಕರ್ನಾಟಕದ ಘನ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿವೆ. ಕರ್ನಾಟಕ ಘನ ಸರಕಾರ ಪ್ರಶಸ್ತಿಗಳನ್ನು ಘೋಷಿಸಿ ನೂರಾರು ಕೋಟಿಯ ಅನುಭವ ಮಂಟಪ ಎಂಬ ಬೃಹತ್ ಸ್ಥಾವರವನ್ನು ಕಟ್ಟಿ ಇವರ ಸುಪರ್ದಿಗೆ ಕೊಡುತ್ತಿದೆ. ಇದೆಲ್ಲವನ್ನೂ ಇಪ್ಪತ್ತೊಂದ ನೇ ಶತಮಾನದಲ್ಲಿ ಹೀಗೂ ಉಂಟೇ ಎಂದು ಭಾರತೇತರ ಜಗತ್ತು ನೋಡಿ ನಗುತ್ತಿದೆ!
ಇಲ್ಲಿ ಯಾವುದೇ ವ್ಯಕ್ತಿಯ ಅವಹೇಳನವಿಲ್ಲ. ಆದರೆ ತಮ್ಮನ್ನು ತಾವೇ ಸಾಮಾಜೋದ್ಧಾರಕರು, ಎಲ್ಲಾ ಬಲ್ಲ ಪಂಡಿತರು ಎಂದುಕೊಂಡು ಯಾವ ಎಗ್ಗಿಲ್ಲದೆ ಆತ್ಮಸಾಕ್ಷಿಯ ಅರಿವಿಲ್ಲದೆ ಬಸವಣ್ಣ, ಶರಣ, ವಚನ, ಲಿಂಗಾಯತವನ್ನು ಬಳಸಿಕೊಂಡು ಮೂರ್ಖತನವನ್ನು ಹೇರುವವರ ಖಂಡಿಸುವ ಲಿಂಗವಂತ ವೀರಶೈವದ ನಿಷ್ಠುರ ಸತ್ಯವಿದೆಯಷ್ಟೇ.
ಹಾಗಾಗಿ ನನ್ನ ಭಾರತದ ಕನ್ನಡನಾಡಿನ ತಾರ್ಕಿಕ ಬಸವಣ್ಣನ ಸತ್ಯಾವರಣವನ್ನು ಚೆನ್ನಬಸವಣ್ಣನ ಕರಣ ಹಸುಗೆಯ ವಿಂಗಡಣೆ ಸೂತ್ರದಂತೆ ವಿಭಜಿಸಿ, ಸೋಸಿ ಪಾಶ್ಚಿಮಾತ್ಯ ಆಡಳಿತಾತ್ಮಕ ಸೂಕ್ತಿ ಯಾದ Cut the fat. Give it straight ಎನ್ನುವಂತೆ ನಿಜ ನಿಷ್ಠುರ ಗಣಾಚಾರ ಕರ್ತವ್ಯ ನನ್ನಂತಹ ಅನಿವಾಸಿಯ ಆದ್ಯ ಕರ್ತವ್ಯವಾಗಿದೆ. ಅದನ್ನು ವಿಶ್ವಕ್ಕೆ ತಿಳಿಸುವ ಆಕಾಶವಾಣಿಯು ವಿಶ್ವವಾಣಿ ಯಾಗಿದೆ.