ಸಂಪಾದಕರ ಸದ್ಯಶೋಧನ
ವಿಮಾನ ನಿಲ್ದಾಣದಲ್ಲಿ ನೀವು ನೋಡುವ ಎತ್ತರದ ಗೋಪುರ (ಎಟಿಸಿ ಟವರ್) ಮತ್ತು ಅದರ ಒಳಗೆ ನಡೆಯುವ ಕೆಲಸಗಳು ಅತ್ಯಂತ ರೋಚಕ ಮತ್ತು ಕುತೂಹಲಕಾರಿ. ಆಕಾಶದಲ್ಲಿ ಸಾವಿರಾರು ವಿಮಾನಗಳು ಹಾರುತ್ತಿದ್ದರೂ ಅವು ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ನೋಡಿಕೊಳ್ಳುವವರು ಈ ‘ಏರ್ ಟ್ರಾಫಿಕ್ ಕಂಟ್ರೋಲರ್‌ಗಳು’ (ಎಟಿಸಿ).
ಇವರನ್ನು ‘ಆಕಾಶದ ಅದೃಶ್ಯ ಟ್ರಾಫಿಕ್ ಪೊಲೀಸರು’ ಎಂದು ಕರೆಯಬಹುದು. ಎಟಿಸಿ ಒಳಗೆ ಏನಿರುತ್ತದೆ? ಅಲ್ಲಿ ಎಷ್ಟು ಜನರಿರುತ್ತಾರೆ? ಮತ್ತು ಅದು ಹೇಗೆ ಕೆಲಸ ಮಾಡುತ್ತದೆ? ಏರ್ ಟ್ರಾಫಿಕ್ ಕಂಟ್ರೋಲ್ ಆಕಾಶದ ಸುರಕ್ಷತೆಯ ಬೆನ್ನೆಲುಬು. ವಿಮಾನವನ್ನು ಓಡಿಸುವುದು ಪೈಲಟ್ ಆದರೂ, ಆ ಪೈಲಟ್‌ಗೆ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡುವುದು ಎಟಿಸಿ. ಪೈಲಟ್ ತನ್ನ ವಿಮಾನವನ್ನು ಮಾತ್ರ ನೋಡಬಲ್ಲ, ಆದರೆ ಎಟಿಸಿಗೆ ಆಕಾಶದಲ್ಲಿರುವ ಎಲ್ಲ ವಿಮಾನಗಳ ಒಟ್ಟು ಚಿತ್ರಣ ತಿಳಿದಿರು ತ್ತದೆ.
ಸಾಮಾನ್ಯವಾಗಿ ಜನರಿಗೆ ಎಟಿಸಿ ಎಂದಾಕ್ಷಣ ವಿಮಾನ ನಿಲ್ದಾಣದಲ್ಲಿರುವ ಎತ್ತರದ ಗಾಜಿನ ಗೋಪುರ ಮಾತ್ರ ನೆನಪಾಗುತ್ತದೆ. ಆದರೆ ವಾಸ್ತವದಲ್ಲಿ ಎಟಿಸಿ 2 ಭಾಗಗಳಲ್ಲಿ ಕಾರ್ಯ ನಿರ್ವಹಿಸು ತ್ತದೆ. ಒಂದು, ‘ಟವರ್’ ಮತ್ತು ಇನ್ನೊಂದು ‘ರೇಡಾರ್ ರೂಂ’. ಇದು ವಿಮಾನ ನಿಲ್ದಾಣದ ಅತಿ ಎತ್ತರದ ಕಟ್ಟಡ.
ಇದನ್ನೂ ಓದಿ: Vishweshwar Bhat Column: ಸಂಜೆ 5 ಗಂಟೆ ಸಂಗೀತ
ಇದರ ನಾಲ್ಕೂ ಕಡೆ ಗಾಜನ್ನು ಅಳವಡಿಸಿರುತ್ತಾರೆ. ಇಲ್ಲಿರುವ ಅಧಿಕಾರಿಗಳು ಬೈನಾಕ್ಯುಲರ್ ಮತ್ತು ಬರಿಗಣ್ಣಿನಿಂದ ರನ್‌ವೇ, ಟ್ಯಾಕ್ಸಿವೇ ಮತ್ತು ನಿಲ್ದಾಣದ ಪರಿಸರವನ್ನು ನೋಡುತ್ತಿರುತ್ತಾರೆ. ಇದು ಸಾಮಾನ್ಯವಾಗಿ ಕಟ್ಟಡದ ಕೆಳಗೆ ಪ್ರತ್ಯೇಕ ಕೊಠಡಿಯಲ್ಲಿರುತ್ತದೆ. ಇಲ್ಲಿ ಕತ್ತಲಾಗಿರುತ್ತದೆ ಅಂದರೆ ದೀಪಗಳನ್ನು ಮಂದವಾಗಿರಿಸಿರುತ್ತಾರೆ.
ಏಕೆಂದರೆ, ಕಂಟ್ರೋಲರ್ ಗಳು ಕಂಪ್ಯೂಟರ್ ಮತ್ತು ರೇಡಾರ್ ಪರದೆಗಳನ್ನು (Screens) ಸ್ಪಷ್ಟ ವಾಗಿ ನೋಡಲು ಕತ್ತಲೆ ಅಗತ್ಯ. ಇಲ್ಲಿ ಹೊರಗಿನ ಪ್ರಪಂಚ ಕಾಣುವುದಿಲ್ಲ, ಕೇವಲ ಪರದೆಯ ಮೇಲಿನ ಚುಕ್ಕೆಗಳೇ (ವಿಮಾನಗಳು) ಇವರ ಜಗತ್ತು. ದೊಡ್ಡ ಮಾನಿಟರ್‌ಗಳಲ್ಲಿ ನಕ್ಷೆ ಇರುತ್ತದೆ ಮತ್ತು ಪ್ರತಿಯೊಂದು ವಿಮಾನವೂ ಒಂದು ಹಸಿರು ಚುಕ್ಕೆಯಂತೆ ಅಥವಾ ಚಿಹ್ನೆಯಂತೆ ಚಲಿಸು ತ್ತಿರುತ್ತದೆ. ಆ ಚುಕ್ಕೆಯ ಪಕ್ಕದ ವಿಮಾನದ ಸಂಖ್ಯೆ, ಎತ್ತರ ಮತ್ತು ವೇಗ ಬರೆದಿರುತ್ತದೆ.
ಪೈಲಟ್ ಜತೆ ಮಾತನಾಡಲು ಬಳಸುವ ಅತ್ಯಾಧುನಿಕ ಮೈಕ್ ಮತ್ತು ಹೆಡ್ ಸೆಟ್ ಒಳಗೊಂಡ ರೇಡಿಯೋ ಕಮ್ಯುನಿಕೇಷನ್ ಸಿಸ್ಟಮ್ ಇರುತ್ತದೆ. ಅಲ್ಲಿ ಎಷ್ಟು ಜನ ಇರುತ್ತಾರೆ? ಇದು ವಿಮಾನ ನಿಲ್ದಾಣದ ಗಾತ್ರದ ಮೇಲೆ ನಿರ್ಧಾರವಾಗುತ್ತದೆ. ಸಣ್ಣ ವಿಮಾನ ನಿಲ್ದಾಣಗಳಲ್ಲಿ ಕೇವಲ 2-3 ಜನ ಇರಬಹುದು.
ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಒಂದು ಶಿಫ್ಟ್ ನಲ್ಲಿ ಸುಮಾರು 15ರಿಂದ 30 ಜನ ಅಥವಾ ಅದಕ್ಕಿಂತ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಬ್ಬ ವ್ಯಕ್ತಿ ಎಲ್ಲವನ್ನೂ ನಿಯಂತ್ರಿಸುವುದಿಲ್ಲ. ಅಲ್ಲಿ ಕೆಲಸವನ್ನು ವಿಭಾಗಿಸಲಾಗಿರುತ್ತದೆ. ವಿಮಾನ ಗೇಟ್ ನಿಂದ ರನ್‌ವೇವರೆಗೆ ಬರುವಾಗ (ನೆಲದ ಮೇಲೆ ಚಲಿಸುವಾಗ) ಗ್ರೌಂಡ್ ಕಂಟ್ರೋಲರ್ ದಾರಿ ತೋರಿಸುತ್ತಾರೆ.
ರನ್‌ವೇ ಟವರ್ ಕಂಟ್ರೋಲರ್ ಸುಪರ್ದಿಯಲ್ಲಿರುತ್ತದೆ. ವಿಮಾನದ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಅನುಮತಿ ಕೊಡುವ ಅಧಿಕಾರ ಇವರದ್ದು. ವಿಮಾನ ಟೇಕಾಫ್ ಆಗಿ ಆಕಾಶಕ್ಕೆ ಏರಿದ ನಂತರ ಅಥವಾ ಇಳಿಯಲು 50-60 ಕಿ.ಮೀ ದೂರವಿರುವಾಗ ಅಪ್ರೋಚ್/ಡಿಪಾರ್ಚರ್ ಕಂಟ್ರೋಲರ್ ನಿಯಂತ್ರಿಸುತ್ತಾರೆ.
ವಿಮಾನವು 35000 ಅಡಿ ಎತ್ತರದಲ್ಲಿ ಹಾರುವಾಗ, ಒಂದು ನಗರದಿಂದ ಇನ್ನೊಂದು ನಗರದ ನಡುವಿನ ದಾರಿಯಲ್ಲಿ ಎನ್-ರೂಟ್ ಕಂಟ್ರೋಲರ್ ಮಾರ್ಗದರ್ಶನ ನೀಡುತ್ತಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದೊಂದು ರಿಲೇ ರೇಸ್ ಇದ್ದಂತೆ. ಒಬ್ಬ ಅಧಿಕಾರಿ ವಿಮಾನದ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವರ್ಗಾಯಿಸುತ್ತಾ ಹೋಗುತ್ತಾರೆ.
ಇದನ್ನು ‘ಹ್ಯಾಂಡ್ ಆಫ್’ ಎನ್ನುತ್ತಾರೆ. ಒಂದು ವಿಮಾನ ಮಸ್ಕತ್‌ನಿಂದ ಬೆಂಗಳೂರಿಗೆ ಹೋಗುತ್ತಿದೆ ಎಂದುಕೊಳ್ಳೋಣ. ಪೈಲಟ್ ಕಾಕ್‌ಪಿಟ್‌ನಲ್ಲಿ ಕುಳಿತು ರೇಡಿಯೋ ಮೂಲಕ ‘ನಾನು ಬೆಂಗಳೂರಿಗೆ ಹೋಗಲು ಸಿದ್ಧ’ ಎಂದು ಹೇಳುತ್ತಾರೆ. ಎಟಿಸಿಯಿಂದ ‘Clearance’ ಸಿಗುತ್ತದೆ. ವಿಮಾನ ನಿಲ್ದಾಣದ ಗೇಟ್‌ನಿಂದ ರನ್‌ವೇ ತುದಿಯವರೆಗೆ ಹೋಗಲು ‘ಗ್ರೌಂಡ್ ಕಂಟ್ರೋಲರ್’ ದಾರಿ ಹೇಳುತ್ತಾರೆ.
ರನ್‌ವೇ ಖಾಲಿ ಇದೆಯೇ ಎಂದು ನೋಡಿಕೊಂಡು, ಟವರ್ ಕಂಟ್ರೋಲರ್ ‘Cleared for takeof’ ಎಂದು ಆದೇಶ ನೀಡುತ್ತಾರೆ. ವಿಮಾನ ಗಾಳಿಯಲ್ಲಿ ಏರುತ್ತಿದ್ದಂತೆ, ಟವರ್ ಕಂಟ್ರೋಲರ್ ಪೈಲಟ್‌ಗೆ ಹೇಳುತ್ತಾರೆ- ‘ಇನ್ನು ಮುಂದೆ ಡಿಪಾರ್ಚರ್ ಕಂಟ್ರೋಲರ್ ಜತೆ ಮಾತನಾಡಿ’. ಆಗ ಪೈಲಟ್ ಫ್ರೀಕ್ವೆನ್ಸಿ ಬದಲಾಯಿಸುತ್ತಾರೆ.