ವಿಶ್ವರಂಗ
ನಮ್ಮಮ್ಮನಿಗೆ ಅಕ್ಟೋಬರ್ ತಿಂಗಳು 76 ವರ್ಷ ತುಂಬಿ, ಈಗ 77ರ ಹರೆಯದಲ್ಲೂ ಯಾವುದೇ ಜೀವಘಾತ ಮಾಡುವ ದೊಡ್ಡ ಕಾಯಿಲೆಗಳಿಲ್ಲದೆ ಸುಖವಾಗಿದ್ದಾರೆ. ಆದರೆ ಭಾರತದ ಬಹುತೇಕ ಅಮ್ಮಂದಿರಂತೆ ಆಕೆಗೂ ಕಾಲಿನ ನೋವಿನ ಸಮಸ್ಯೆಯಿದೆ. 1950/60ರ ದಶಕದಲ್ಲಿ ಹುಟ್ಟಿದ ಇವರಿಗೆ ಕ್ಯಾಲ್ಸಿಯಂ ಕೊರತೆ ಬಹಳ. ನಮ್ಮಮ್ಮನೂ ಇದಕ್ಕೆ ಹೊರತಲ್ಲ. ಎರಡೂ ಕಾಲಿನ ಚಿಪ್ಪು ಬದಲಿಸಿ ಆ ಜಾಗದಲ್ಲಿ ಮೆಟಲ್ ಅಳವಡಿಸಿದ್ದಾರೆ. ಹೀಗಾಗಿ ಆಕೆಗೆ ನೋವಿಲ್ಲ, ಆದರೆ ನಡೆದಾಡು ವುದು ಬಹಳ ನಿಧಾನವಾಗಿದೆ.
ನೆಲದ ಮೇಲೆ ಕೂರಲು ಸಾಧ್ಯವಿಲ್ಲ. ಇಷ್ಟೆ ಮಾತೇಕೆ ಬಂದಿತು ಎಂದರೆ ನಮ್ಮಮ್ಮನಿಗೆ ಆಸೆ, ಉತ್ಸಾಹ ಇಳಿದಿಲ್ಲ. ನಡಿಗೆ ನಿಧಾನವಾಗಿದೆ ಎನ್ನುವುದು ಬಿಟ್ಟರೆ ಮನಸ್ಸಿನ ವೇಗಕ್ಕೆ ಕಿಂಚಿತ್ತೂ ಬ್ರೇಕ್ ಬಿದ್ದಿಲ್ಲ. ನಾವೂ ಆಕೆಯ ಸ್ಪಿರಿಟ್ ಕಡಿಮೆ ಮಾಡಲು ಹೋಗಿಲ್ಲ. ಈ ಕಾರಣದಿಂದ ನಾವು ಹೋಗುವ ಕಡೆಗೆ ಆಕೆಯನ್ನೂ ಕೂಡ ಕರೆದುಕೊಂಡು ಹೋಗುತ್ತೇವೆ.
ಒಮ್ಮೆ ಮಾಲ್ ಒಂದಕ್ಕೆ ಹೋಗಿದ್ದೆವು. ಅಲ್ಲಿ ಪ್ರವೇಶದ ತಡೆದು ತಪಾಸಣೆ ಮಾಡುವಂತೆ ನಾಟಕ ಮಾಡುವ ಮಹಿಳೆಯೊಬ್ಬರು ‘ಈ ಅಜ್ಜಿಯನ್ನು ಏಕೆ ಕರೆದುಕೊಂಡು ಬಂದಿದ್ದೀರಿ? ಈ ಮಾಲ್ ಅಂತಲ್ಲ ಯಾವುದೇ ಮಾಲಿನಲ್ಲಿ ಅಜ್ಜಿಯರಿಗೆ ಅಂತ ಏನೂ ಇಲ್ಲ’ ಎಂದರು. ತಕ್ಷಣಕ್ಕೆ ಆಕೆಯ ಮೇಲೆ ಕೋಪ ಬಂದಿತು. ಆದರೂ ಆಕೆಗೆ ಏನೂ ಹೇಳದೆ ಮಾಲ್ ಹೊಕ್ಕೆವು. ತಪಾಸಣೆ ಮಾಡುವ ಮಹಿಳೆಯ ಮಾತುಗಳು ಅದೆಷ್ಟು ಸತ್ಯ ಎನ್ನಿಸಿತು.
ಇದನ್ನೂ ಓದಿ: Rangaswamy Mookanahalli Column: ಕಣ್ಣಿಗೆ ಕಾಣುತ್ತಿಲ್ಲ ಎಂದ ಮಾತ್ರಕ್ಕೆ ಅದಿಲ್ಲ ಎಂದಲ್ಲ !
ಮಾಲುಗಳಲ್ಲಿ ಇರುವ ಅಂಗಡಿಯಲ್ಲಿರಬಹುದು ಅಥವಾ ಮಾಲಿನ ಅಂಗಡಿಯ ಮುಂದೆ ತಿರುಗಾಡುವ ಜಾಗಗಳಲ್ಲಿ, ಎಲ್ಲಿಯೂ ಕೂರಲು ಒಂದು ಬೆಂಚು ಕೂಡ ಇರಲಿಲ್ಲ. ಇದಾದ ಮೇಲೆ ಒಂದಲ್ಲ ಹಲವಾರು ಮಾಲುಗಳನ್ನು ಗಮನಿಸಿ ನೋಡಿದೆ. ಎಲ್ಲಿಯೂ ಕೂರಲು ಬೆಂಚು ಹಾಕುವುದಿಲ್ಲ. ಕೂರಬೇಕು ಎಂದರೆ ನೀವು ಅಲ್ಲಿರುವ ರೆಸ್ಟುರೆಂಟ್ ಅಥವಾ ಕಾಫಿ, ತಿಂಡಿ ಶಾಪುಗಳಲ್ಲಿ ಮಾತ್ರವೇ ಕೂರಬೇಕು. ಸುಮ್ಮನೆ ಕೂರುವಂತಿಲ್ಲವಲ್ಲ! ಅಲ್ಲಿ ಕೂರಲು ಏನಾದರೂ ಕೊಳ್ಳಬೇಕು.
ಅಲ್ಲಿ ತಿನ್ನಲು ಹಿರಿಯ ನಾಗರಿಕರ ಹೊಟ್ಟೆಗೆ ಹೊಂದುವಂತದ್ದು ಸಿಗುವುದಿಲ್ಲ. ಹದಿನೈದು, ಇಪ್ಪತ್ತು ನಿಮಿಷದಲ್ಲಿ ಅಮ್ಮನಿಗೆ ನಾನು ಇಲ್ಲಿಗೆ ಸೇರಿದವಳಲ್ಲ ಎನ್ನುವ ಭಾವನೆ ಬಲಿಯ ತೊಡಗಿತು. ಅರ್ಧಗಂಟೆಯ ನಂತರ ಮನೆಗೆ ಹೋಗೋಣ ಎಂದಳು. ಇದು ಎಲ್ಲಾ ಹಿರಿಯ ನಾಗರಿಕರ ಕಥೆ.
ಇಲ್ಲಿ ಒಂದಂಶವನ್ನು ಗಮನಿಸಿ, ಅವರ ಬದುಕು ಮುಗಿಯಿತು ಎಂದು ಸಮಾಜ ಆಗಲೇ ನಿರ್ಧರಿಸಿ ಯಾಗಿದೆ. ಹೀಗಾಗಿ ಅವರಿಗೆ ಎನ್ನುವುದು ಮಾಲುಗಳಲ್ಲಿ ಏನೂ ಇಲ್ಲ. ಇವರೇನು ಖರ್ಚು ಮಾಡಿಯಾರು ಎನ್ನುವ ಧಾಷ್ಟಿಕತೆ ಇದ್ದರೂ ಇರಬಹುದು. ಮಾಲುಗಳ ಕಥೆ ಮಾತ್ರ ಹೀಗೆ ಎಂದುಕೊಂಡರೆ ಅಲ್ಲಿಗೆ ಈ ಕಥೆ ಮುಗಿಯುವುದಿಲ್ಲ.
ನಾವು ಐದು ವರ್ಷದ ಹಿಂದೆ ಬೆಂಗಳೂರಿನ ನಾಗರಭಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿದ್ದೆವು. ಬಾರ್ಸಿಲೋನಾದಿಂದ ನೇರವಾಗಿ ಅಲ್ಲಿಗೆ ಮರಳಿ ಬಂದು ಜೀವಿಸಲು ಶುರು ಮಾಡಿದ್ದು. ನಮ್ಮ ಮನೆಯ ಅಡ್ಡರಸ್ತೆಯಿಂದ ಮೂರು ರಸ್ತೆ ದಾಟಿದರೆ ಮುಖ್ಯರಸ್ತೆ ಸಿಗುತ್ತಿತ್ತು. ಆದರೆ ಆ ರಸ್ತೆ ದಾಟಲು ನನಗೆ ಸಾಧ್ಯವಾಗುತ್ತಿರಲಿಲ್ಲ! ಅಮ್ಮ ರಸ್ತೆ ದಾಟುವುದು ಬೇರೆ ವಿಚಾರ. ಬರುವ ವಾಹನಗಳಲ್ಲಿ ಒಬ್ಬರಿಗೂ ಸಮಾಧಾನವಿಲ್ಲ.
ಎಲ್ಲರಲ್ಲೂ ಧಾವಂತ, ಬೇಗ ಹೋಗಬೇಕು, ತಮ್ಮ ಗಮ್ಯವನ್ನು ತಲುಪಬೇಕು ಎನ್ನುವ ಆತುರ. ಈ ಮಧ್ಯೆ ರಸ್ತೆ ದಾಟುವವರ ಬಗ್ಗೆ ಅವರಿಗೆ ಯಾವ ಕರುಣೆಯೂ ಇಲ್ಲ. ಹೇಗೋ ಮೈಯಲ್ಲಿ ಕಸುವಿದ್ದವರು ಕ್ಷಣದಲ್ಲಿ ಸಿಕ್ಕ ಚೂರು ಜಾಗದಲ್ಲಿ ತೂರಿಕೊಂಡು ರಸ್ತೆ ದಾಟಿ ದಿಗ್ವಿಜಯ ಸಾಧಿಸಿದವರಂತೆ ಮುಖಭಾವ ಹೊತ್ತು ಹೋಗುತ್ತಾರೆ.
ಹಿರಿಯ ನಾಗರಿಕರ ಪಾಡೇನು? ಇನ್ನು ನಡೆಯಲಾಗದವರನ್ನು ಈ ಸಮಾಜ ನೋಡಿಕೊಳ್ಳುವ ಬಗೆ ಮನಸ್ಸಿನಲ್ಲಿ ವಿಷಾದ ಹೆಚ್ಚು ಮಾಡುತ್ತದೆ. ರ್ಯಾಂಪ್ ವ್ಯವಸ್ಥೆಯಿಲ್ಲ. ಎಲ್ಲರೂ ಮೆಟ್ಟಿಲನ್ನು ಹತ್ತಿ ಹೋಗಬೇಕು. ಅದ್ಹೇಗೆ ಸಾಧ್ಯ? ಅಂಗವಿಕಲರು, ವೃದ್ಧರು ಬದುಕಲು ಅರ್ಹರಲ್ಲವೇ? ಬಹಳ ಕಚೇರಿಗಳಲ್ಲಿ ಲಿಫ್ಟ್ ವ್ಯವಸ್ಥೆಯಿಲ್ಲ, ರ್ಯಾಂಪ್ ವ್ಯವಸ್ಥೆಯಿಲ್ಲ. ಲಿಫ್ಟ್ ಇದ್ದರೂ ಲಿಫ್ಟ್ ಬಳಿ ತಲುಪಲು ವ್ಯವಸ್ಥೆ ಸರಿಯಿಲ್ಲ. ಈ ಸಮಾಜದಲ್ಲಿ ಎಲ್ಲವೂ ಸರಿಯಿರುವ, ದುಡಿಯುವ ಯುವ ವರ್ಗಕ್ಕೆ ಬೇಕಾದದ್ದು, ಬೇಡವಾದದ್ದು ಎಲ್ಲವೂ ಸಿಗುತ್ತದೆ. ಆ ನಿರ್ದಿಷ್ಟ ಪರಿಧಿ ಮೀರಿದರೆ ಆಗ ಈ ಸಮಾಜದಲ್ಲಿರುವ ಖಾಲಿತನದ ಅರಿವಾಗಲು ಶುರುವಾಗುತ್ತದೆ.
ನಾಗರಿಕ ಸಮಾಜದಲ್ಲಿ ಶೌಚಕ್ಕೆ ಸರಿಯಾದ ವ್ಯವಸ್ಥೆ ಕೂಡ ಇಲ್ಲ. ಅಲ್ಲೂ, ಇಲ್ಲೂ, ದೂರದಲ್ಲೂ ಇರುವ ಒಂದೆರಡು ಶೌಚಗಳ ಸ್ಥಿತಿ ಶೋಚನೀಯ. ಗಂಡುಪ್ರಾಣಿ ಹೇಗೋ ಅಲ್ಲಿ ಅನಿವಾರ್ಯ ಕರ್ಮವನ್ನು ಮೂಗು ಮುಚ್ಚಿ ಮುಗಿಸಿ ಬರಬಹುದು. ಆದರೆ ನನ್ನಮ್ಮನಿಗೆ, ನನ್ನ ಸಹೋದರಿಯ ರಿಗೆ ಅದೂ ಸಾಧ್ಯವಾಗುವುದಿಲ್ಲ. ಹಿರಿಯ ನಾಗರಿಕರಲ್ಲಿ, ಬಹುತೇಕರಲ್ಲಿ ಮೂತ್ರವನ್ನು ದೀರ್ಘಕಾಲ ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ.
ಅಂತಹ ವ್ಯಕ್ತಿಗಳು ಏನು ಮಾಡಬೇಕು? ಸಾಮಾನ್ಯ ಮನುಷ್ಯ ಯಾವಾಗ ಬೇಕಾದರೂ ಈ ಪಟ್ಟಿಯ ಅಡಿಯಲ್ಲಿ ಬರಬಹುದು. ಭಾರತದಲ್ಲಿ ಸರಿಸುಮಾರು 15 ಕೋಟಿಗೂ ಮೀರಿದ ಹಿರಿಯ ನಾಗರಿಕ ರಿದ್ದಾರೆ. ಸರಿಸುಮಾರು 3 ಕೋಟಿ ಜನ ಅಂಗವಿಕಲತೆ ಹೊಂದಿದವರು ಇದ್ದಾರೆ. ನೆನಪಿರಲಿ ಇವೆಲ್ಲವೂ 2011ರ ಅಂಕಿಅಂಶಗಳು!
ನಮ್ಮ ದೇಶದ ನಿಖರ ಜನಸಂಖ್ಯೆ ಎಷ್ಟು ಎನ್ನುವುದೇ ನಮಗೆ ಗೊತ್ತಿಲ್ಲ! ಹಳೆಯ ಲೆಕ್ಕಾಚಾರದ ಪ್ರಕಾರವೇ 18 ಕೋಟಿ ಜನ, ಸಾಮಾನ್ಯರಂತೆ ವ್ಯವಹರಿಸಲು ಸಾಧ್ಯವಿಲ್ಲ ಎಂದಾಯ್ತು. ಮೊನ್ನೆ ಸಾವಣ್ಣ ಪ್ರಕಾಶನದ 17ನೇ ವಾರ್ಷಿಕೋತ್ಸವ ಕಾರ್ಯಕ್ರಮವಿತ್ತು. ಅಲ್ಲಿ ಜೋಗಿಯವರ ವಾನಪ್ರಸ್ಥ ಪುಸ್ತಕ ಬಿಡುಗಡೆ ಇತ್ತು. ಜೋಗಿಯವರು ಮಾತಾಡುತ್ತ ಒಂದು ವಿಚಾರ ಹೇಳಿದರು.
ಹಿರಿಯ ನಾಗರಿಕರ ಬಾಳು ಪಂಜರದಲ್ಲಿರುವ ಪಕ್ಷಿಯಂತೆ ಆಗಿ ಬಿಟ್ಟಿದೆ ಎನ್ನುವುದು ಆ ವಿಚಾರ. ಅವರ ಪರಿಚಯಸ್ಥರ ಮನೆಯ ಒಂದು ಉದಾಹರಣೆ ಕೂಡ ಹೇಳಿದರು. ಮಗ ದೂರದ ಅಮೇರಿಕಾ ದಲ್ಲಿ ಕುಳಿತು ಪೋಷಕರನ್ನು ಕ್ಯಾಮರಾ ಮೂಲಕ ಮಾನಿಟರ್ ಮಾಡುತ್ತಾರೆ. ಅಪ್ಪ ಎದ್ದು ಹೊರಗೆ ಹೋಗಲು ಗೇಟು ತೆರೆಯುತ್ತಿದ್ದಂತೆ ಮಗನ ಫೊನು ಬರುತ್ತೆ. ಎಲ್ಲಿಗೆ ಹೊರಟೆ ಎನ್ನುವ ಪ್ರಶ್ನೆ. ತರಕಾರಿ ಬೇಕಿತ್ತು ಎನ್ನುವ ಅಪ್ಪನ ಮಾತಿಗೆ, ಬಿಗ್ ಬಾಸ್ಕೆಟ್‌ನಲ್ಲಿ ಆರ್ಡರ್ ಮಾಡಿದ್ದೇನೆ , ಬರುತ್ತೆ. ಹೊರಗೆ ಹೋಗುವ ಅವಶ್ಯಕತೆಯಿಲ್ಲ. ಒಂದೆರಡು ತಾಸು ಬಿಟ್ಟು ಅಪ್ಪ ಮತ್ತೆ ಹೊರಕ್ಕೆ ಹೋಗಲು ಗೇಟು ತೆರೆಯುತ್ತಾರೆ, ಮತ್ತೆ ಮಗನ ಫೋನ್. ಅಪ್ಪ ಬಯಸಿದ ವಸ್ತು ಮನೆ ಬಾಗಿಲಿಗೆ ಬರುತ್ತಿತ್ತು. ಒಟ್ಟಾರೆ ಅಪ್ಪ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ರಣಬಿಸಿಲು, ಅದಕ್ಕೂ ಮೀರಿದ ಟ್ರಾಫಿಕ್!
ಪಾಪ ಮಗನ ಕಾಳಜಿ ಮೆಚ್ಚುವಂತದ್ದೇ. ಮತ್ತೆ ಅಪ್ಪ ಗೇಟು ತೆಗೆಯುತ್ತಾರೆ, ಮತ್ತೆ ಮಗನ -ನು, ಮತ್ತದೇ ಪ್ರಶ್ನೆ, ಎಲ್ಲಿಗೆ ಹೊರಟೆ. ಈ ಬಾರಿ ಅಪ್ಪ ಖುಷಿಯಿಂದ ಹೇರ್‌ಕಟ್ ಮಾಡಿಸಿಕೊಳ್ಳಬೇಕು ಕಣಪ್ಪ, ಅದಕ್ಕೆ ಹೊರಟೆ. ಕ್ಷೌರಿಕ ಬಿಗ್ ಬಾಸ್ಕೆಟ್‌ನಲ್ಲಿ ಬರುವುದಿಲ್ಲವಲ್ಲ ಎನ್ನುತ್ತಾರೆ. ಅರ್ಬನ್ ಕಂಪನಿಯಲ್ಲಿ ಬುಕ್ ಮಾಡಿದ್ದೇನೆ ಅಪ್ಪ, ಚಿಂತಿಸಬೇಡ ಕ್ಷೌರಿಕ ಇನ್ನೊಂದು ತಾಸಿನಲ್ಲಿ ಮನೆಗೆ ಬರುತ್ತಾರೆ ಎನ್ನುತ್ತಾನೆ.
ಇದು ಇವತ್ತಿನ ಭಾರತ. ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದೆ. ಇದು ಅಭಿವೃದ್ಧಿ ಹೇಗಾಯ್ತು? ನಾಲ್ಕು ದಶಕದ ಹಿಂದೆ ನಮ್ಮ ಮನೆಗೆ ಕ್ಷೌರಿಕ ನಾಗಣ್ಣ ಬರುತ್ತಿದ್ದರು. ಮನೆಯ ಜಗಲಿಯ ಮೇಲೆ ಕುಳಿತು ಬಂದ ಕಾರ್ಯ ಮುಗಿಸಿ ಕೊಟ್ಟ ಕಾಳು, ಬೇಳೆ ಅಥವಾ ಅಕ್ಕಿ ಬೆಲ್ಲ ಕೊಂಡು ಹೋಗುತ್ತಿದ್ದರು. ಗ್ರಾಹಕ ಮತ್ತು ಸೇವೆ ನೀಡುವವರ ಮಧ್ಯೆ ಒಂದು ಸಂಬಂಧವಿತ್ತು.
ಖುಷಿಯಿತ್ತು, ಆತ್ಮೀಯತೆಯಿತ್ತು. ಎಲ್ಲಕ್ಕೂ ಮಿಗಿಲಾಗಿ ಮುಂದಿನ ತಿಂಗಳು ಮತ್ತೆ ಇವರನ್ನೇ ನೋಡಬೇಕು ಎನ್ನುವ ಪ್ರeಯಿತ್ತು. ಹೀಗಾಗಿ ನೀಡುವ ಸೇವೆಯಲ್ಲಿ ಕಕ್ಕುಲಾತಿ ಇರುತ್ತಿತ್ತು. ಈಗ ಎಲ್ಲಕ್ಕೂ ಆಪ್ ಬಂದಿದೆ. ಮನೆಬಾಗಿಲಿಗೆ ಮತ್ತೆ ಕ್ಷೌರಿಕ ಬರುವುದನ್ನು, ಆತನ ಸೇವೆಯನ್ನು ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದು ಎನ್ನುವುದನ್ನು ಜನತೆ ಕೂಡ ಡೆವೆಲಪ್‌ಮೆಂಟ್ ಎಂದು ನಂಬಿ ಬಹಳ ಖುಷಿಯಿಂದ ಸೇವೆ ಪಡೆದುಕೊಳ್ಳುತ್ತಿದೆ.
ಮನೆಯಿಂದ ಈಚೆ ಹೋಗಲಾಗದ ಹಿರಿಯ ಜೀವಗಳು ಮಾತ್ರ ಪಕ್ಷಿಗಳು, ಪಾರಿವಾಳಗಳು ಒಳಗೆ ಬರಬಾರದು ಎಂದು ಹಾಕಿಸಿರುವ ಗ್ರಿಲ್, ಗ್ರಿಲ್ ಮೇಲಿನ ಪಿಜನ್ ನೆಟ್ ಮೂಲಕ ಬಾಲ್ಕನಿಯಲ್ಲಿ ನಿಂತು ಶೂನ್ಯದಲ್ಲಿ ದೃಷ್ಟಿ ನೆಟ್ಟು ‘ಜಾನೇ ಕಹಾ ಗಯೇ ವೋ ದಿನ್’ ಎನ್ನುವ ಹಾಡನ್ನು ಮೆಲುಕು ಹಾಕುವುದು ಬಿಟ್ಟು ಬೇರೇನೂ ಮಾಡಲಾಗುವುದಿಲ್ಲ. ಇಷ್ಟೆ ಪ್ರಜ್ಞೆಯಿದ್ದ ಕಾರಣ, ಅಮ್ಮನನ್ನು ಕೂಡಿ ಹಾಕುವುದು ತರವಲ್ಲ, ಆಕೆಗೆ ಆಗುವವರೆಗೂ ನಿಧಾನವಾದರೂ ಸರಿಯೇ ಆಕೆಯ ಕೆಲಸ ಆಕೆಯೇ ಮಾಡಿಕೊಳ್ಳಲಿ ಎಂದು ನಿರ್ಧಾರ ಮಾಡಿದ್ದೆವು. ಹೀಗಾಗಿ ಅಮ್ಮ ತನಗೆ ಬೇಕಾದ ಮೆಡಿಸಿನ್‌ಗಳನ್ನು ತಾನೇ ಖರೀದಿ ಮಾಡುತ್ತಾರೆ.
ಮನೆಯಿಂದ 600/700 ಮೀಟರ್ ದೂರದಲ್ಲಿರುವ ಮೆಡಿಕಲ್ ಶಾಪಿನಲ್ಲಿ ಕೊಳ್ಳುತ್ತಾರೆ. ಕಳೆದ ವಾರ ಅದೇ ಮೆಡಿಕಲ್ ಶಾಪಿಗೆ ಹೋಗಿದ್ದೆ. ಶಾಪಿನಲ್ಲಿರುವ ಹುಡುಗ ‘ಸಾರ್ ಅಜ್ಜಿಗೆ ಈಗಾಗಲೇ ಹೇಳಿದ್ದೇನೆ, ಜಸ್ಟ್ ವಾಟ್ಸಪ್ ಮಾಡಿ ಸಾಕು, ಮನೆಗೆ ತಂದು ಕೊಡುತ್ತೇನೆ ಎಂದು. ಆದರೂ ಅವರಿಗೆ ಅರ್ಥವೇ ಆಗುವುದಿಲ್ಲ. ಅವರನ್ನೇಕೆ ಕಳುಹಿಸುತ್ತೀರಿ? ನೀವು ಬನ್ನಿ, ಇಲ್ಲ ನಾನೇ ಹೋಂ ಡೆಲಿವರಿ ಮಾಡುತ್ತೇನೆ. ಅಜ್ಜಿಯನ್ನು ಮಾತ್ರ ಕಳಿಸಬೇಡಿ. ರಸ್ತೆ ಕಂಡೀಷನ್ ನೋಡಿದ್ದೀರಾ? ಅಜ್ಜಿ ಬಿದ್ದು ಕಾಲು ಮುರಿದುಕೊಂಡರೆ? ಏನು ಗತಿ?’ ಎಂದು ತುಸು ಕೋಪದಿಂದ ಹೇಳಿದರು.
ಯಾರು ಸರಿ? ಯಾರು ತಪ್ಪು? ನಾಲ್ಕು ದಶಕದ ನಂತರ ಮನೆಗೆ ಮತ್ತೆ ಕ್ಷೌರಿಕ ಬರುತ್ತಾರೆ ಎನ್ನುವುದು ಅಭಿವೃದ್ಧಿಯೇ? ಖುಷಿಯಾಗಿ ಗೆಳೆಯರ ಜೊತೆಗೆ ಹರಟೆ ಹೊಡೆದುಕೊಂಡು, ಕಾಫಿ ಹೀರುತ್ತಾ ಕಾಲ ಕಳೆಯಬೇಕಾದ ಹಿರಿಯ ನಾಗರಿಕರನ್ನು ಮನೆಯಿಂದ ಹೊರಬರಲಾಗದ ಸಮಾಜ ಸೃಷ್ಟಿಸಿದ್ದು ಅಭಿವೃದ್ಧಿಯೇ? ಎಲ್ಲರಲ್ಲೂ ಧಾವಂತ, ಎಲ್ಲರಲ್ಲೂ ಆತುರ, ಎಲ್ಲರಿಗೂ ಬೇಗ ತಲುಪುವ ಒತ್ತಡ. ಆದರೆ ಯಾವುದೇ ಕಾರ್ಯಕ್ರಮವಿರಲಿ ಸರಿಯಾದ ಸಮಯಕ್ಕೆ ಮಾತ್ರ ಯಾರೊಬ್ಬರೂ ಬರುವುದಿಲ್ಲ.
ಗತಕಾಲದ ವೈಭವವನ್ನು ನೆನೆಯುತ್ತಾ ವಿಶ್ವಗುರು ಎಂದು ಬೆನ್ನು ತಟ್ಟಿಕೊಳ್ಳೋಣ. ಮುಂದಿನ ಚುನಾವಣೆ ನಿಜವಾದ ಅಭಿವೃದ್ಧಿ ಹೆಸರಿನಲ್ಲಿ ಆಗಬೇಕು. ಮನೆಯ ಮುಂದೆ ಪಾರ್ಕ್ ಇರಬೇಕು. ಹಿರಿಯ ನಾಗರಿಕರು ಭಯವಿಲ್ಲದೆ ರಸ್ತೆ ದಾಟುವಂತಾಗಬೇಕು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ರ್ಯಾಂಪ್ ವ್ಯವಸ್ಥೆ ಕಲ್ಪಿಸಬೇಕು. ಶೌಚಗಳ ನಿರ್ಮಾಣ ಹೆಚ್ಚಾಗಬೇಕು ಮತ್ತು ಅವು ಶುಚಿಯಾಗಿರ ಬೇಕು. ಜನದಟ್ಟಣೆ ಒಂದೇ ಊರಿನಲ್ಲಿ ಆಗದಂತೆ ನೋಡಿಕೊಳ್ಳಬೇಕು.
ಎಲ್ಲಾ ಊರುಗಳೂ ಕೂಡ ಸರಿಸಮನಾಗಿ ಬೆಳೆಯಬೇಕು. ಕುಡಿಯುವ ನೀರು, ಸೇವಿಸುವ ಗಾಳಿ ಸ್ವಚ್ಛವಾಗಿರಬೇಕು. ಈ ಮೂಲಭೂತ ಅಂಶಗಳನ್ನು ಸಾಕಾರಗೊಳಿಸಲು ಮುಂದೆ ಬರುವವರಿಗೆ ನನ್ನ ವೋಟ್ ಎನ್ನುವ ನಿರ್ಧಾರ ಗಟ್ಟಿಯಾದರೆ ನೋಡಿ, ಭಾರತ ನಿಜಕ್ಕೂ ವಿಶ್ವಗುರು ಆಗುವತ್ತ ಹೆಜ್ಜೆ ಇಡಬಹುದು.