Harish Kera Column: ಇಷ್ಟೊಂದು ಮಿನುಗುತಾರೆ, ಎಲ್ಲಿವರೆಗೆ ಇರುತಾರೆ?
ʼನಾನು ಲೈಟ್ ಆರಿಸಲು ಹೇಳಲು ಎರಡು ಕಾರಣ- ಒಂದು, ಬಲ್ಬಿನ ಬೆಳಕು ಇದ್ದರೆ ಇಷ್ಟು ಸೊಗಸಾಗಿ ಇವು ಕಾಣುವುದಿಲ್ಲ, ಎರಡನೆಯದು, ಅವು ಲೈಟಿನ ಬೆಳಕಿಗೆ ಕಕ್ಕಾಬಿಕ್ಕಿ ಆಗಿಬಿಡುತ್ತವೆ. ಈಗ ಅವುಗಳ ಮಿಲನದ ಸಮಯ. ನೋಡಿ ಅಲ್ಲಿ, ಕೆಳಗೆ ನೆಲದಲ್ಲಿ ಹೊಳೆಯುತ್ತಿರುವುದೆಲ್ಲ ಹೆಣ್ಣು ಮಿಂಚು ಹುಳ ಗಳು. ಮೇಲೆ ಹಾರಾಡುತ್ತಿರುವವು ಗಂಡು ಹುಳಗಳು. ಈ ಕತ್ತಲಿನಲ್ಲಿ ಮಿನುಗುವ ಬೆಳಕಿನ ಮೂಲಕ ಅವು ಒಂದಕ್ಕೊಂದು ಸಂದೇಶ ಕಳಿಸುತ್ತವೆ.


ಕಾಡುದಾರಿ
ʼಲೈಟುಗಳನ್ನು ಆರಿಸಿ ಹೊರಗೆ ಬಂದು ಕುಳಿತುಕೊಳ್ಳಿʼ ಎಂದರು ಆ ಹೋಂಸ್ಟೇ ಮಾಲಿಕ. ನಾವು ಹಾಗೇ ಮಾಡಿದೆವು. ಆಗ ರಾತ್ರಿ ಏಳು ಗಂಟೆ. ಕತ್ತಲಾಗಿತ್ತು. ಮಲೆನಾಡಿನ ಆ ಕಾಡಿನ ನಡುವಿನ ಮನೆ ಮೌನವಾಗಿತ್ತು. ಕತ್ತಲಿಗೆ ಕಣ್ಣುಗಳು ಹೊಂದಿಕೊಳ್ಳುತ್ತಿರುವಂತೆ, ಹೊರಗೆ ಒಂದೊಂದೇ ನಕ್ಷತ್ರಗಳು ಮಿನುಗಲು ಆರಂಭಿಸಿದಂತಾಯಿತು. ನಕ್ಷತ್ರಗಳಲ್ಲ ಅವು ಮಿಂಚುಹುಳಗಳು. ಮೊದಲಿಗೆ ಒಂದೊಂದೇ ಮಿನುಗಿದವು. ಬಳಿಕ ಗುಂಪಾಗಿ, ಗೊಂಚಲು ಗೊಂಚಲಾಗಿ. ನೆಲದಲ್ಲೂ ಮಿಂಚು, ಮರಗಳ ಮೇಲೂ ಮಿನುಗು, ಗಾಳಿಯಲ್ಲೂ ಮಿಣುಕು. ಒಮ್ಮೆ ಇಡೀ ಪರಿಸರ ಕತ್ತಲಾಗುತ್ತಿತ್ತು. ಮರುಕ್ಷಣ ಜಗ್ಗನೆ ಬೆಳಕಾಗುತ್ತಿತ್ತು. ಒಮ್ಮೆ ಪೂರ್ವದಿಕ್ಕಿನಿಂದ ಪಶ್ಚಿಮಕ್ಕೆ ಮಿಂಚಿನ ಗೆರೆಯೆಳೆದಂತೆ ಸಾಲಾಗಿ ಹೊಳೆದರೆ, ಇನ್ನೊಮ್ಮೆ ಉತ್ತರದಿಂದ ದಕ್ಷಿಣಕ್ಕೆ ಹೊಳೆಯೊಂದು ಹರಿದಂತೆ. ಮತ್ತೊಮ್ಮೆ ಸಾಗರದ ಅಲೆ ಉಕ್ಕಿ ಬಂದಂತೆ ದೂರದಿಂದ ಹತ್ತಿರಕ್ಕೆ. ನಿರ್ದೇಶಕನೇ ಇಲ್ಲದ ಪರಿಸರದ ಮಾಯಾ ರೂಪಕವೊಂದು ನಮ್ಮೆದುರು ನಡೆಯುತ್ತಿರುವಂತೆ ಇತ್ತು ಆ ದೃಶ್ಯ.
ʼನಾನು ಲೈಟ್ ಆರಿಸಲು ಹೇಳಲು ಎರಡು ಕಾರಣ- ಒಂದು, ಬಲ್ಬಿನ ಬೆಳಕು ಇದ್ದರೆ ಇಷ್ಟು ಸೊಗಸಾಗಿ ಇವು ಕಾಣುವುದಿಲ್ಲ, ಎರಡನೆಯದು, ಅವು ಲೈಟಿನ ಬೆಳಕಿಗೆ ಕಕ್ಕಾಬಿಕ್ಕಿ ಆಗಿಬಿಡುತ್ತವೆ. ಈಗ ಅವುಗಳ ಮಿಲನದ ಸಮಯ. ನೋಡಿ ಅಲ್ಲಿ, ಕೆಳಗೆ ನೆಲದಲ್ಲಿ ಹೊಳೆಯುತ್ತಿರುವುದೆಲ್ಲ ಹೆಣ್ಣು ಮಿಂಚು ಹುಳಗಳು. ಮೇಲೆ ಹಾರಾಡುತ್ತಿರುವವು ಗಂಡು ಹುಳಗಳು. ಈ ಕತ್ತಲಿನಲ್ಲಿ ಮಿನುಗುವ ಬೆಳಕಿನ ಮೂಲಕ ಅವು ಒಂದಕ್ಕೊಂದು ಸಂದೇಶ ಕಳಿಸುತ್ತವೆ. ಇಲ್ಲಿ ಲಕ್ಷಾಂತರ ಹುಳಗಳಿವೆ ತಾನೆ? ಒಂದೊಂದು ಗಂಡಿನ ಮಿನುಗುವ ಲಯವೂ ಒಂದೊಂದು ಥರ. ಯಾವುದೋ ಒಂದು ನಿರ್ದಿಷ್ಟ ಹೆಣ್ಣು, ಇನ್ಯಾವುದೋ ಒಂದು ನಿರ್ದಿಷ್ಟ ಗಂಡಿಗೆ ಪಸಂದ್ ಆಗಬೇಕು. ಆ ಸಂದೇಶವೂ ಅವುಗಳ ಬೆಳಕಿನ ಮೂಲಕವೇ. ನಂತರ ಅವು ಕೂಡಿ ಮೊಟ್ಟೆ ಇಟ್ಟು ಮರಿ ಮಾಡಬೇಕು. ವಿದ್ಯುತ್ತಿನ ಪ್ರಬಲ ಬೆಳಕು ಅದನ್ನು ಕಾಣಲು ಬಿಡುವುದೇ ಇಲ್ಲ. ಬೆಳಕಿನ ಮೂಲಕ ಸಂದೇಶ ಕಳಿಸುವುದು ಸಾಧ್ಯವಾಗದೇ ಹೋದಾಗ ಅವು ಕೂಡಲಾಗದೇ ಸಾಯುತ್ತವೆ. ಇಂದು ಮಿಂಚುಹುಳಗಳು ಅಳಿಯುತ್ತಿರುವುದಕ್ಕೆ ನಾವು ಮಾಡುತ್ತಿರುವ ಬೆಳಕಿನ ಮಾಲಿನ್ಯ ದೊಡ್ಡ ಕಾರಣʼ ಎಂದರು ಅವರು. ದೊಡ್ಡ ಡಿಗ್ರಿ ಕಲಿತು, ಬೆಂಗಳೂರಿನಲ್ಲಿದ್ದ ಕೈತುಂಬ ಸಂಬಳ ಬರುವ ಕೆಲಸ ಬಿಟ್ಟು, ಊರಿನಲ್ಲಿ ಪರಿಸರದೊಂದಿಗೆ ಒಂದಾಗಿ ಇರುವ, ಕೃಷಿ ಮಾಡುವ ಉತ್ಸಾಹದಿಂದ ಬಂದ ವ್ಯಕ್ತಿ.
ಇದನ್ನೂ ಓದಿ: Harish Kera Column: ಆಕಾಶವೇ ಬೀಳದಿರಲಿ ನಮ್ಮ ಮೇಲೆ
ಅತ್ಯಂತ ನಿರುಪದ್ರವಿ ಹುಳಗಳಾದ ಇವು ನಮ್ಮ ಬಾಲ್ಯವನ್ನು ಶ್ರೀಮಂತಗೊಳಿಸಿದ್ದವು ಅಂತ ನಮ್ಮಲ್ಲಿ ಕೆಲವರಾದರೂ ನೆನಪಿಸಿಕೊಳ್ಳದೇ ಇರಲಾರರು. ಬಯಲುಸೀಮೆಯಲ್ಲೂ ತಂಪು ಪ್ರದೇಶ ದಲ್ಲಿ, ಹೊಳೆ-ಕೆರೆಗಳ ಬದಿಯಲ್ಲಿ ಕಾಣಬಹುದಾದರೂ ಮಲೆನಾಡಿನವರಿಗೆ ಇದರ ನಂಟು ಹೆಚ್ಚು. ಮುಂಗಾರಿನ ಮೊದಲ ದಿನಗಳಲ್ಲಿ ಪಶ್ಚಿಮ ಘಟ್ಟಗಳು ಈ ಮಿಂಚುಹುಳಗಳ ಮಿನಿಯೇಚರ್ ಬಲ್ಬು ಮಾಲೆಗಳನ್ನು ಹೊದೆಸಿದಂತೆ ಕಂಗೊಳಿಸುತ್ತವೆ. ಒಂದೆರಡು ಮಳೆ ಬಿದ್ದರೆ ಸಾಕು ಇವು ಭುಗಿಲೇಳುತ್ತವೆ. ಆಗೆಲ್ಲ ನಮಗೆ ಇವುಗಳನ್ನು ಹಿಡಿದು ಗಾಜನ ಜಾಡಿಯಲ್ಲಿ ತುಂಬುವ ಹುಚ್ಚು. ನಾಲ್ಕು ಹುಳ ಗಾಜಿನ ಜಾಡಿಯಲ್ಲಿ ಹಾಕಿ ಮನೆಯೊಳಗಿಟ್ಟರೆ ಇಡೀ ರಾತ್ರಿ ಬೆಳಗುತ್ತ ಇಂದ್ರಲೋಕದ ಫೀಲ್ ಕೊಡುತ್ತಿದ್ದವು. ಅದರೊಳಗೆ ಗಾಳಿಯಾಡಲು ಒಂದು ರಂಧ್ರ. ಅವು ತಿನ್ನಲಿ ಎಂದು ಹಣ್ಣಿನ ಚೂರು. ಪಾಪ, ಅವು ಏನನ್ನೂ ತಿನ್ನುವುದಿಲ್ಲ ಎಂಬುದು ನಮಗೆ ಆಗ ಗೊತ್ತಿರಲಿಲ್ಲ. ಯಾಕೆಂದರೆ ತಿನ್ನುವ ಕೆಲಸವನ್ನೆಲ್ಲ ಅವು ಪ್ಯೂಪಾ ಆಗಿರುವಾಗಲೇ ಮುಗಿಸಿರುತ್ತವೆ. ಅವು ದೊಡ್ಡದಾಗಿ ಹಾರುವ ಹಂತಕ್ಕೆ ಬಂದ ಬಳಿಕ ಸಂತಾನೋತ್ಪಾದನೆ ಮಾತ್ರ ಅವುಗಳ ಕೆಲಸ. ಒಂದೇ ತಿಂಗಳ ಜೀವನ. ಇದೆಲ್ಲ ಗೊತ್ತಿದ್ದರೆ ಅಂದು ಅವುಗಳನ್ನು ಹಿಡಿದು ಬಂಧಿಸುತ್ತಿರಲಿಲ್ಲ ವೆನಿಸುತ್ತದೆ.
ಮಿಣುಕುಹುಳ ಯಾಕೆ ಮಿನುಗುತ್ತದೆ ಎಂಬುದಕ್ಕೆ ಅಜ್ಜಿ ಕತೆ ಹೇಳುತ್ತಿದ್ದರು. ಅವರ ಪ್ರಕಾರ, ಅಳಿದುಹೋಗಿರುವ ನಮ್ಮ ಹಿರಿಯರು ನಮ್ಮನ್ನು ನೋಡಲು ರಾತ್ರಿಗಳಲ್ಲಿ ಮಿಂಚುಹುಳವಾಗಿ ಆಗಮಿಸುತ್ತಾರೆ. ಬಹುಶಃ ನಾವು ಅವುಗಳನ್ನು ಹಿಡಿದು ಹಿಂಸೆ ಕೊಡದಿರಲಿ ಎಂಬ ಉದ್ದೇಶ ದಿಂದಲೇ ಅವರು ಹಾಗೆ ಹೇಳುತ್ತಿದ್ದರೆಂದು ತೋರುತ್ತದೆ. ಜಪಾನಿ ಸಂಸ್ಕೃತಿಯಲ್ಲಿ ಮಿಣುಕುಹುಳ ಗಳಿಗೆ ಪವಿತ್ರ ಸ್ಥಾನವೇ ಇದೆ.
ಅವುಗಳನ್ನು ಹಿಡಿಯಲು ಕಲಿಯುವ ಮೊದಲು, ಅವು ಬೆಳಗುವುದನ್ನು ನೋಡಿ ಈ ಹುಳಗಳು ಬಿಸಿಬಿಸೀ ಇರಬಹುದು ಎಂದು ಯೋಚಿಸುತ್ತಿದ್ದುದನ್ನು ಈಗ ನೆನೆದರೆ ನಗು ಬರುತ್ತದೆ. ಅಣ್ಣ ಮೊದಲ ಸಲ ಮಿಂಚುಳ ಹಿಡಿದು ಅಂಗೈ ಮೇಲಿಟ್ಟುಕೊಂಡು ʼಅಯ್ಯೋ ಬಿಸಿʼ ಎಂದು ನಾಟಕ ವಾಡಿದ್ದು, ಅದನ್ನು ನಂಬಿ ಕಂಗಾಲಾದದ್ದು ಕೂಡ ನೆನಪು. ಆದರೆ ಈ ಬೆಳಕು ಹೊಮ್ಮಿಸುವ ಇವುಗಳ ಪೃಷ್ಠಭಾಗವೇನೂ ಬಿಸಿಯಾಗಿರುವುದಿಲ್ಲ.

ಅದು ಚಂದ್ರನ ಬೆಳಕಿನಂಥದ್ದು. ಲ್ಯುಸಿಫೆರಿನ್ ಎಂಬ ರಾಸಾಯನಿಕವನ್ನು ಆಕ್ಸಿಲ್ಯುಸಿಫೆರಿನ್ ಎಂಬ ಇನ್ನೊಂದು ರಾಸಾಯನಿಕವಾಗಿ ಬದಲಾಯಿಸುವ ಮೂಲಕ ಆ ಕ್ರಿಯೆಯಲ್ಲಿ ಬೆಳಕು ಬಿಡುಗಡೆಯಾಗುವಂತೆ ಮಾಡುವುದು ಈ ಕ್ರಿಯೆಯ ಹಿಂದಿನ ವೈಜ್ಞಾನಿಕ ರಹಸ್ಯ. ಅದೇನೂ ತನಗೆ ದಾರಿ ಕಾಣಲಿ ಎಂದು ಹಾಗೆ ಮಾಡುವುದಲ್ಲ. ಗಂಡು ಹೆಣ್ಣನ್ನು- ಹೆಣ್ಣು ಗಂಡನ್ನು ಹುಡುಕಿ ಕೊಳ್ಳಲು ಇರುವ ವ್ಯವಸ್ಥೆಯದು. ಹಾಗೇ ತನ್ನನ್ನು ಬೇಟೆಯಾಡಲು ಬರುವ ಕ್ರಿಮಿಕೀಟಗಳಿಗೆ ಕೊಡುವ ಎಚ್ಚರಿಕೆಯೂ ಹೌದು. ಈ ಎಚ್ಚರಿಕೆಯನ್ನು ಮೀರಿ ಇವುಗಳನ್ನು ಹಿಡಿದು ಭಕ್ಷಿಸಿದರೆ ಆ ಬೇಟೆಗಾರ ಕ್ರಿಮಿ ವಿಷ ಸೇವಿಸಿದಂತೆಯೇ ಸರಿ. ಅಷ್ಟು ಕಹಿಯಾದ ಸ್ಟಿರಾಯ್ಡ್‌ಗಳನ್ನು ಅದು ಬಿಡುತ್ತದೆ.
ಮಿಂಚುಹುಳ ಎಂದ ಕೂಡಲೆ ಕುವೆಂಪು ಬರೆದ ʼರಾಮಾಯಣ ದರ್ಶನಂʼ ಮಹಾಕಾವ್ಯದ ಒಂದು ದೃಶ್ಯ ನೆನಪಾಗುತ್ತದೆ. ರಾಮನ ವನವಾಸ. ಸೀತೆಯನ್ನು ರಾವಣ ಅಪಹರಿಸಿದ್ದಾನೆ. ಸುಗ್ರೀವ ನೊಂದಿಗೆ ಮೈತ್ರಿಯಾಗಿ, ವಾಲಿವಧೆಯೂ ಆಗಿ ಸುಗ್ರೀವ ಕಿಷ್ಕಿಂಧೆಗೆ ತೆರಳಿ ರಾಮ ಲಕ್ಷ್ಮಣರು ಮಾಲ್ಯವಂತ ಪರ್ವತದ ಗುಹೆಯಲ್ಲಿ ತಂಗಿದ್ದಾರೆ. ಘೋರಭೀಷಣ ಮಳೆಗಾಲ. ಥಂಡಿ ಹಿಡಿಸಿದ ಆ ಮಲೆನಾಡಿದ ಮಳೆಗಾಲದ ಮಳೆಗಾಲದ ಐದು ತಿಂಗಳು ಕಳೆಯುತ್ತ ಬಂದರೂ ಸುಗ್ರೀವನ ಸುಳಿವಿಲ್ಲ. ಸೀತಾನ್ವೇಷಣೆಗೆ ನೆರವಾಗುತ್ತೇನೆ ಎಂದಿದ್ದ ಕಪಿವೀರನ ಸದ್ದಿಲ್ಲ. ಆತಂಕ ಒಳಗೊಳಗೇ ಮಡುಗಟ್ಟುತ್ತದೆ. ಮರೆತನೇನು? ಲಕ್ಷ್ಮಣ ಕೋಪದಿಂದ ಹೂಂಕರಿಸುತ್ತಾನೆ. ಆದರೆ ರಾಮನೇ ಅವನನ್ನು ಸುಮ್ಮನಿರಿಸುತ್ತಾನೆ. ಈ ಭಯಂಕರ ಮಳೆ ಕಳೆದ ಮೇಲೆ ಬಾ ಎಂದು ನಾನೇ ಅವನಿಗೆ ಹೇಳಿದ್ದೇನೆ ಎನ್ನುತ್ತಾನೆ. ಅಷ್ಟರಲ್ಲಿ ಬಂತು ಅಶ್ವಯುಜ ಮಾಸ.
ಅರಳಿದುವು ಕಣ್ಣಾಲಿ: ಘೋರಾಂಧಕಾರದಾ
ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್,
ಮಿಂಚುಂಬುಳೊಂದೊಯ್ಯನೊಯ್ಯನೆಯೆ
ಪೊಕ್ಕುದಾ
ಕಗ್ಗತ್ತಲೆಯ ಗವಿಗೆ, ತೇಲುತೀಜುತ ಮೆಲ್ಲ
ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ,
ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ
ಸೋರ್ವ
ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ
ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ
ಮೂಡಿ,
ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ
ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ.
ಸಾಮಾನ್ಯಮಂ, ಆ ಅನಿರ್ವಚನೀಯ
ದೃಶ್ಯಮಂ !
ಕಗ್ಗತ್ತಲು ಕವಿದ ರಾಮನ ಬದುಕಿಗೆ ಭರವಸೆಯ ಬೆಳಕು ಬಂದುದು ಒಂದು ಸಣ್ಣ ಮಿಂಚುಹುಳದ ಮೂಲಕ! ವಾಲ್ಮೀಕಿಯಂಥ ಆದಿಕವಿಗೂ ಹೊಳೆಯದ ದೃಶ್ಯವೊಂದು ಮಲೆನಾಡಿನ ಈ ಮಹಾ ಕವಿಗೆ ಝಗ್ಗನೆ ಹೊಳೆದುಬಿಟ್ಟಿದೆ. ಕಾರ್ಗತ್ತಲಲ್ಲಿ ತಡಕಾಡುತ್ತಿರುವವನಿಗೆ ಅಶ್ವಯುಜ ಮಾಸದ ಮಳೆ ಇಳಿಯುತ್ತ ಬಂದ ಆ ರಾತ್ರಿಯಲ್ಲಿ ಗವಿಯೊಳಗೆ ಮೆಲ್ಲಮೆಲ್ಲನೆ ಹಾರಾಡುತ್ತ ಬಂದ ಮಿಂಚುಹುಳವೊಂದು ಆಸೆಯ ಹಣತೆಗೆ ಕಿಡಿ ಹಚ್ಚಿತು. ನೋಡಿದ ರಾಮನ ಕಣ್ಣು ಹನಿಗೂಡಿತು, ಆತ್ಮವನ್ನು ಶಾಂತಿ ತುಂಬಿತು. ಅನಿರ್ವಚನೀಯ ದೃಶ್ಯವನ್ನು ಮತ್ತೆ ಮತ್ತೆ ನೋಡಿದ, ಕೆನ್ನೆ ತೋಯಿಸಿಕೊಂಡ. ಇದು ವಾಲ್ಮೀಕಿಗೆ ಕಾಣದ ಶ್ರೀರಾಮ, ನಮ್ಮ ಮಲೆನಾಡಿನ ಮಿಂಚುಹುಳದ ಮಹಿಮೆ!
ಮಿಂಚುಹುಳಗಳ ಬಗ್ಗೆ ಇತ್ತೀಚೆಗೆ ಓದಿದ ಕೆಲವು ಸುದ್ದಿಗಳನ್ನು ಹೇಳಲೇಬೇಕು. ಎಲ್ಲ ಕಡೆಯಲ್ಲೂ ಈ ಹುಳಗಳು ಅಷ್ಟಿಷ್ಟು ಕಂಡುಬರುತ್ತವೆ. ಇತ್ತೀಚೆಗೆ, ಬೆಂಗಳೂರಿನಲ್ಲೂ ಕೆಲವೆಡೆ ಇವುಗಳನ್ನು ಕಂಡಿದ್ದೇವೆ, ಆದರೆ ನಗರದ ಒಳಗಲ್ಲ, ಹೊರಗೆ ಎಂದು ಸಂಶೋಧಕರು ಹೇಳಿದ್ದಾರೆ. ಅದೇನೂ ಸಿಹಿ ಸುದ್ದಿಯಲ್ಲ. ತೀವ್ರ ನಗರೀಕರಣದ ಮೊದಲು ಇವುಗಳನ್ನು ಬೆಂಗಳೂರಿನ ಹಸಿರು ಇದ್ದೆಡೆ ಗಳಲ್ಲಿ ಕಾಣಬಹುದಿತ್ತು. ಈಗ ಜಿಕೆವಿಕೆ, ಬನ್ನೇರಘಟ್ಟ, ಹೆಸರಘಟ್ಟ, ನಂದಿಬೆಟ್ಟ ಮೊದಲಾದ ಕಡೆಗಳಿಗೆ ಅಲ್ಪ ಸಂಖ್ಯೆಗೆ ಸೀಮಿತವಾಗಿವೆಯಂತೆ. ಅವೂ ಕೂಡ ಕೃತಕ ಬೆಳಕಿನ ಏಟಿಗೆ ಅಳಿಯುವ ಸಾಧ್ಯತೆ ಹೆಚ್ಚು. ಮಿಂಚುಹುಳಗಳು ಇರುವುದು ಆ ಪರಿಸರ ಚೆನ್ನಾಗಿದೆ ಎನ್ನುವುದರ ಸೂಚಕ. ಅವು ಇರಬೇಕಿದ್ದರೆ ಮಣ್ಣು ಆರೋಗ್ಯವಾಗಿರಬೇಕು, ಸಾಕಷ್ಟು ಹಸಿರು ಇರಬೇಕು, ವಾತಾವರಣದಲ್ಲಿ ಆರ್ದ್ರತೆ ಇರಬೇಕು. ಹೊಗೆ ಮತ್ತು ಕೃತಕ ಬೆಳಕಿನ ಹಾವಳಿ ಇರಬಾರದು.
80ರ ದಶಕದ ಬಾಲಿವುಡ್ ಚಲನಚಿತ್ರಗಳಲ್ಲೂ ಮತ್ತು ಮಕ್ಕಳ ಬೆಡ್‌ಟೈಮ್ ಕಥೆಗಳಲ್ಲೂ ಸಾಮಾನ್ಯವಾಗಿದ್ದ ಮಿಣುಕುಹುಳುಗಳು ಈಗ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂಬುದು ಭಾರತೀಯ ವನ್ಯಜೀವಿ ಸಂಸ್ಥೆ (WII) ಸಹಯೋಗದೊಂದಿಗೆ ಇಬ್ಬರು ವಿಜ್ಞಾನಿಗಳು ನಡೆಸಿದ ರಾಷ್ಟ್ರವ್ಯಾಪಿ ಅಧ್ಯಯನದಿಂದ ಗೊತ್ತಾಗಿದೆ. ಇವರು ಮಿಂಚುಹುಳುಗಳ ಇತ್ತೀಚಿನ ಗಣತಿ ಮಾಡಿದ್ದಾರೆ. ಕೇವಲ ಒಂದು ವರ್ಷದೊಳಗೆ ದೇಶಾದ್ಯಂತ ಅವುಗಳ ಸಂಖ್ಯೆಯಲ್ಲಿ 76 ಪ್ರತಿಶತ ದಷ್ಟು ಕುಸಿತ ಆಗಿದೆಯಂತೆ. ಇದು ಕಳವಳಕಾರಿ. ಡೆಹ್ರಾಡೂನ್‌ನ ಗ್ರಾಫಿಕ್ ಎರಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ವೀರೇಂದ್ರ ಪ್ರಸಾದ್ ಉನಿಯಾಲ್ ಮತ್ತು ಡಾ. ನಿಧಿ ರಾಣಾ ಅವರು ನಡೆಸಿದ ಗಣತಿಯಿದು. ʼಬಹುಶಃ ಇವುಗಳನ್ನು ನೋಡುತ್ತಿರುವ ಕೊನೆಯ ತಲೆಮಾರು ನಾವೇ ಆದರೂ ಅಚ್ಚರಿಯಿಲ್ಲʼ ಎನ್ನುತ್ತಾರೆ ವಿಜ್ಞಾನಿಗಳು.
ಮಿಂಚುಹುಳುಗಳು ಸಾಮಾನ್ಯವಾಗಿ ಸಮಶೀತೋಷ್ಣ ಮತ್ತು ಉಷ್ಣವಲಯದ ಹವಾಮಾನದಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ತೇವಾಂಶವುಳ್ಳ ಜೌಗು ಪ್ರದೇಶ, ಕಾಡುಪ್ರದೇಶಗಳಲ್ಲಿ. ಇದು ಅವುಗಳಿಗೆ ಉಳಿದು ಬೆಳೆಯಲು ಸೂಕ್ತ ಪರಿಸರ. ಅವುಗಳೇಕೆ ಅಳಿಯುತ್ತಿವೆ ಮತ್ತು ಅವುಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹೆಚ್ಚಿನ ಭಾಷಣದ ಅಗತ್ಯವಿಲ್ಲವೆನಿಸುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಕಾರಣಗಳೇ- ಅರಣ್ಯನಾಶ, ಜಲಮೂಲಗಳ ಮಾಲಿನ್ಯ, ದಟ್ಟ ರಾತ್ರಿಗಳಲ್ಲೂ ಕೃತಕ ಬೆಳಕಿನ ಹಾವಳಿ, ಜವುಗು ನೆಲಗಳ ನಾಶ, ಕ್ರಿಮಿನಾಶಕಗಳ ಮಿತಿಮೀರಿದ ಬಳಕೆ ಇತ್ಯಾದಿ. ನಾನು ಮೇಲೆ ಹೇಳಿದ ಹೋಂಸ್ಟೇ ಓನರ್‌ನಂತೆ ಸ್ವಲ್ಪ ಸೂಕ್ಷ್ಮತೆ ಇದ್ದರೂ ಸಾಕು, ಅವುಗಳನ್ನು ಉಳಿಸಿ ಕೊಳ್ಳಬಹುದು.