ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಆಕಾಶವೇ ಬೀಳದಿರಲಿ ನಮ್ಮ ಮೇಲೆ

ಆಗ್ನೇಯ ಮಾರುತಗಳು ತಂದೊಟ್ಟಿದ ಮಳೆಮೋಡಗಳು ಇದ್ದಕ್ಕಿದ್ದಂತೆ ದಭಾರನೆ ಟೆಕ್ಸಾಸ್ ನ ಕೆರ್ ಕೌಂಟಿಯ ಮೇಲೆ ಒಂದೇ ಸಲ ಸುರಿದುಬಿಟ್ಟವು. ನಾಲ್ಕು ತಿಂಗಳಲ್ಲಿ ಬರಬೇಕಾದ ಮಳೆ ಒಂದೇ ದಿನದಲ್ಲಿ ಅಪ್ಪಳಿಸಿತು. ಹೇಗೆ ಒಂದಳತೆ ಪಾತ್ರೆಗೆ ಹತ್ತಳತೆ ನೀರು ಸುರಿದರೆ ಆಗುವುದೋ ಅದೇ ಆಯಿತು. ಗುಡಲೂಪ್ ನದಿ ಹಿಂದೆಂದೂ ಕಾಣದ ರೀತಿಯಲ್ಲಿ ಉಕ್ಕಿ ಹರಿಯಿತು.

Harish Kera Column: ಆಕಾಶವೇ ಬೀಳದಿರಲಿ ನಮ್ಮ ಮೇಲೆ

ಹರೀಶ್‌ ಕೇರ ಹರೀಶ್‌ ಕೇರ Jul 17, 2025 8:11 AM

ಕಾಡುದಾರಿ

ಕಳೆದ ವಾರ ಅಮೆರಿಕದ ಮೀಡಿಯಾಗಳಲ್ಲಿ ಟೆಕ್ಸಾಸ್‌ನ ಫ್ಲ್ಯಾಶ್ ಫ್ಲಡ್ ಅರ್ಥಾತ್ ದಿಢೀರ್ ಪ್ರವಾಹದ್ದೇ ಸುದ್ದಿ. ಕಂಡು ಕೇಳರಿಯದ ಈ ಹಠಾತ್ ನೆರೆಗೆ ಬಲಿಯಾದವರ ಸಂಖ್ಯೆ ಇದುವರೆಗೆ ಅಧಿಕೃತವಾಗಿ ಸಿಕ್ಕಿರುವಂತೆ 130. ಟೆಕ್ಸಾಸ್ ಒಂದು ಕಡೆಗೆ ಸಮುದ್ರವನ್ನು ಇನ್ನೊಂದು ಕಡೆಗೆ ಕಾಡುಗಳನ್ನೂ ಹೊಂದಿದ ರಾಜ್ಯ.

ಆಗ್ನೇಯ ಮಾರುತಗಳು ತಂದೊಟ್ಟಿದ ಮಳೆಮೋಡಗಳು ಇದ್ದಕ್ಕಿದ್ದಂತೆ ದಭಾರನೆ ಟೆಕ್ಸಾಸ್ ನ ಕೆರ್ ಕೌಂಟಿಯ ಮೇಲೆ ಒಂದೇ ಸಲ ಸುರಿದುಬಿಟ್ಟವು. ನಾಲ್ಕು ತಿಂಗಳಲ್ಲಿ ಬರಬೇಕಾದ ಮಳೆ ಒಂದೇ ದಿನದಲ್ಲಿ ಅಪ್ಪಳಿಸಿತು. ಹೇಗೆ ಒಂದಳತೆ ಪಾತ್ರೆಗೆ ಹತ್ತಳತೆ ನೀರು ಸುರಿದರೆ ಆಗುವುದೋ ಅದೇ ಆಯಿತು. ಗುಡಲೂಪ್ ನದಿ ಹಿಂದೆಂದೂ ಕಾಣದ ರೀತಿಯಲ್ಲಿ ಉಕ್ಕಿ ಹರಿಯಿತು.

ಶಾಂತವಾಗಿ ನಿದ್ರಿಸುತ್ತಿದ್ದ ಟೆಕ್ಸಾಸ್‌ನ ಕೆರಿ ಟೌನ್‌ನ ಗುಡ್ಡಗಾಡು ಸಮೀಪದಲ್ಲಿದ್ದ ಮನೆಗಳನ್ನು ಮುರಿದು ಕೊಂಡೊಯ್ದಿತು. ಮನೆಮನೆಗಳೇ ಪ್ರವಾಹದಲ್ಲಿ ಸಾಗಿ ಹೋಗುವ ದೃಶ್ಯಗಳು ವೈರಲ್ ಆಗಿ ಬೆಚ್ಚಿ ಬೀಳಿಸಿದವು. ಹಾಗೆ ನೋಡಿದರೆ ನಮ್ಮ ವಯನಾಡ್‌ನಲ್ಲಿ ನಡೆದ ಭೂಕುಸಿತದಲ್ಲಿ ಸಂಖ್ಯೆಯ ದೃಷ್ಟಿಯಿಂದ ಇದಕ್ಕಿಂತ ಹೆಚ್ಚು (254) ಸಾವುನೋವುಗಳಾಗಿವೆ. ಆದರೆ ಇದು ಅಮೆರಿಕ ದಲ್ಲಿ ಘಟಿಸಿದ್ದರಿಂದ, ಮನೆಮನೆಗೂ ಸಿಸಿಟಿವಿಗಳಿದ್ದುದರಿಂದ ಈ ಭೀಕರ ಪ್ರವಾಹದ ಮೈ ನಡುಗಿಸುವ ದೃಶ್ಯಗಳೂ ಮಾಧ್ಯಮಗಳಿಗೆ ಸಿಕ್ಕಿ, ಅದೊಂದು ಅಂತಾರಾಷ್ಟ್ರೀಯ ಸುದ್ದಿಯೇ ಆಗಿಹೋಯಿತು.

ಇದೇ ತಿಂಗಳಲ್ಲಿ ನಮ್ಮ ಹಿಮಾಚಲ ಪ್ರದೇಶದಲ್ಲಿ ಆದ ಹಠಾತ್ ಮಳೆ ಹಾಗೂ ಪ್ರವಾಹಕ್ಕೆ 85 ಮಂದಿ ಬಲಿಯಾಗಿದ್ದಾರೆ. ಊರಿಗೂರೇ ನಾಶವಾಗಿವೆ. ಮಂಡಿಯಲ್ಲಿ 9 ಮಂದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದವರ ದೇಹಗಳು ಅಲ್ಲಿಂದ 150 ಕಿಲೋಮೀರ್ಟರ್ ದೂರದ ಸಿಕ್ಕಿದವು ಎಂದರೆ ಪ್ರವಾಹದ ಭೀಕರತೆ ಅರ್ಥ ಮಾಡಿಕೊಳ್ಳಿ. ಇದೆಲ್ಲವೂ ಬಿಡಿಬಿಡಿಯಾಗಿ ಸುದ್ದಿಯಾಗಿವೆ. ಇದರ ಅರ್ಥ ಇಷ್ಟೇ-ನಮ್ಮನ್ನು ಚಕಿತಗೊಳಿಸುವ, ನಿಬ್ಬೆರಗುಗೊಳಿಸುವ ದೃಶ್ಯಾವಳಿಗಳು ಇಲ್ಲದೇ ಹೋದರೆ ಎಂಥ ದುರಂತ ಕೂಡ ಅದು ದುರಂತ ಎಂಬ ಭಾವನೆ ಕೂಡ ಮೂಡಿಸದಂತೆ ಮರೆಯಾಗಿ ಬಿಡುತ್ತದೆ.

ಟೆಕ್ಸಾಸನ್ನೋ ವಯನಾಡನ್ನೋ ಹಿಮಾಚಲವನ್ನೋ ಹಾಗೆ ಮರೆಯದಿರುವುದು ಒಳ್ಳೆಯದು. ಯಾಕೆಂದರೆ ಇನ್ನು ಮುಂದೆ ‘ಫ್ಲ್ಯಾಶ್ ಫ್ಲಡ್ʼ ಮತ್ತು ‘ಕ್ಲೌಡ್ ಬರ್ಸ್ಟ್’ ಎಂಬ ಪದಗಳು ನಮ್ಮ ಬಳಕೆಯಲ್ಲಿ ಮತ್ತೆ ಮತ್ತೆ ಬರಲಿವೆ. ಭವಿಷ್ಯತ್ ಕಾಲದಲ್ಲಿ ಇವುಗಳು ಸಾಮಾನ್ಯ ಎನಿಸಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಫ್ಲ್ಯಾಶ್ ಫ್ಲಡ್ ಎಂದರೆ ಭೂಮಿ ನೀರಿಂಗಿಸಿಕೊಳ್ಳಲು ಸಾಧ್ಯವಾಗದಂತೆ ಮಿತಿ ಮೀರಿ ಸುರಿಯುವ ಮಳೆ.

ಇದನ್ನೂ ಓದಿ: Harish Kera Column: ಹುಲಿ ಕಾಡಿನಿಂದ ಕೊನೆಯ ಗರ್ಜನೆ

ಕ್ಲೌಡ್ ಬರ್ಸ್ಟ್ ಎಂದರೆ ಮೋಡಗಳು ಒಂದೇ ಸಲಕ್ಕೆ ಪೂರ್ತಿ ಬಿಚ್ಚಿಕೊಂಡು ಮಳೆಗರೆಯುವುದು. ಪ್ರಕೃತಿ ಮೊದಲಿನಂತಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗೆ ಎಲ್ಲವೂ ಅವಧಿ- ಪಥ ಬದಲಿಸಿಕೊಂಡಿವೆ. ಊಹಾತೀತ ಹವಾಮಾನ ಸಾಮಾನ್ಯವಾಗಿದೆ. ಈ ವರ್ಷ ಚೆನ್ನಾಗಿ ಮಳೆ ಬಂದು ತಿಪ್ಪಗೊಂಡನ ಹಳ್ಳಿ ತುಂಬಿರಬಹುದು.

ಮುಂದಿನ ವರ್ಷ ಸಿಟಿಜನ ಬಾಯಾರಿ ಬಸವಳಿದು ಹೋಗಲಾರದು ಎಂದುಕೊಳ್ಳಬೇಕಿಲ್ಲ. ನಡು‌ ಬೇಸಿಗೆಯಲ್ಲಿ ಮೇಘಸ್ಫೋಟ ಆಗಲಾರದು ಎನ್ನುವಂತೆಯೂ ಇಲ್ಲ. ಹವಾಮಾನ ಇಲಾಖೆ ಎಷ್ಟು, ಯಾವಾಗ ಮಳೆಯಾದೀತು ಎಂದು ಊಹಿಸಬಹುದು. ಆದರೆ ನೆಲದ ಮೇಲೆ ನಾವು ಮಾಡಿಟ್ಟು ಕೊಂಡ ಅವಾಂತರಗಳಿಂದಾಗಿ ಸೃಷ್ಟಿಯಾಗುವ ಕೃತಕ ನೆರೆಯನ್ನು ಹವಾಮಾನ ಇಲಾಖೆ ಅಂದಾಜಿಸಲಾರದು.

ಅದು ಸ್ಥಳೀಯಾಡಳಿತಗಳ ಹೊಣೆ. ಸಿಟಿಗಳಲ್ಲಿ ಇಂಥ ಅನಾಹುತಗಳು ಆದರೆ ಕಾರಣ ಮನುಷ್ಯನೇ ಎನ್ನಲು ಸಾಧ್ಯವಿರುವಂತೆ, ಗುಡ್ಡಗಾಡು ಪ್ರದೇಶದಲ್ಲಿ ಕಾರಣ ಇಂಥದೇ ಎಂದು ಸ್ಪಷ್ಟವಾಗಿ ಬೆಟ್ಟು ಮಾಡಿ ಹೇಳಲು ಆಗದು. ಉದಾಹರಣೆಗೆ ಟೆಕ್ಸಾಸನ್ನೇ ತೆಗೆದುಕೊಳ್ಳಿ. ಒಂದು ತಿಂಗಳ ಮಳೆ ಒಂದೇ ದಿನ ಸುರಿದದ್ದೇ ವಿಪತ್ತಿಗೆ ಕಾರಣವಾಯ್ತು. ಅಂಥಾ ರಣಮಳೆಯೊಂದು ಮನುಷ್ಯರೇ ಇಲ್ಲದ ಕಾಡಿನಲ್ಲಿ ಬಿದ್ದು, ಜನವಸತಿಯಿಲ್ಲದ ಪ್ರದೇಶದಲ್ಲಿ ಹರಿದುಹೋಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ.

ಆದರೆ ಜನ ನದಿಯ ಬದಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ನದಿಯ ಜೊತೆಗೆ ಒಡನಾಡುತ್ತಾರೆ. ಪ್ರಕೃತಿ ರಮಣೀಯತೆಗೆ ಮನಸೋತು ಕಾಡಿಗೆ ಹೋಗಿ ಕ್ಯಾಂಪ್ ಹಾಕುತ್ತಾರೆ. ಆದರೂ ಇಲ್ಲಿ ಹಿಮಾಚಲ ಪ್ರದೇಶದಷ್ಟು ಜನಸಾಂದ್ರತೆ ಇಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ ಹಿಮಾಚಲ ಪ್ರದೇಶದಲ್ಲಿ ಆಗಿರುವಷ್ಟು ಬೆಳವಣಿಗೆಗಳು ಅಲ್ಲಿ ಅದಂತಿಲ್ಲ.

71 R

ಹಾಗಾಗಿ ಹೋಲಿಸಿದರೆ ಜನಹಾನಿ ಕಡಿಮೆಯೇ. ಸುಮ್ಮನೆ ಊಹಿಸಿಕೊಳ್ಳಿ. ಟೆಕ್ಸಾಸ್‌ನ ಜನಸಾಂದ್ರತೆ ಚದರ ಮೈಲಿಗೆ 117 ಜನ. ಅದೇ, ಬೆಂಗಳೂರಿನಲ್ಲಿ ಜನಸಾಂದ್ರತೆ ಚದರ ಮೈಲಿಗೆ 25000ಕ್ಕೂ ಹೆಚ್ಚು. ಈಗ ಟೆಕ್ಸಾಸ್‌ನಲ್ಲಿ ಬಿದ್ದಂಥದೇ ಮಳೆ ಒಂದು ದಿನದಲ್ಲಿ ಬೆಂಗಳೂರಿನಲ್ಲಿ ಸುರಿದರೆ ಏನಾದೀತೆಂದು ಕಲ್ಪಿಸಿಕೊಳ್ಳಿ.

ಸಾಮಾನ್ಯ ಮುಂಗಾರು ಮಳೆಗೇ ತತ್ತರಿಸುವ ಈ ನಗರ, ಇಂಥ ನೆರೆಗೆ ತುತ್ತಾದರೆ ಚೇತರಿಸಿಕೊಳ್ಳು ವುದೇ ಅನುಮಾನ. ‘ಶಾಂತಂ ಪಾಪಂ, ಒಳ್ಳೆಯದನ್ನೇ ಮಾತಾಡೋಣ’ ಎಂದು ನೀವು ಹೇಳುತ್ತಿರು ವುದು ನನಗೆ ಕೇಳಿಸುತ್ತಿದೆ. ಆದರೆ ಭವಿಷ್ಯದಲ್ಲಿ ಎಂದೂ ಇಂಥ ವಿಪತ್ತು ಬೆಂಗಳೂರಿಗೆ ಬಂದೆರಗ ಲಾರದು, ಬಂದರೂ ನಮ್ಮ ಆಡಳಿತಗಳು ಅದನ್ನು ಎದುರಿಸಲು ಸನ್ನದ್ಧವಾಗಿವೆ ಎಂದು ಎದೆ ತಟ್ಟಿ ಹೇಳುವ ಧೈರ್ಯ ನಿಮಗೆ ಇದೆಯೇ? ಯಾರಿಗೂ ಇಲ್ಲ.

ಯಾಕೆಂದರೆ ಇಂಥ ವಿಪತ್ತುಗಳು ಇನ್ನು ಮುಂದೆ ಹೇಳಿಕೇಳಿ ಬರುವುದಿಲ್ಲ. ಮತ್ತು ಅದಕ್ಕೆ ನಿಖರ ಕಾರಣ ಯಾವುದು ಎಂದು ಹೇಳುವ ಸಾಧ್ಯತೆಗಳೂ ಕಡಿಮೆಯಾಗುತ್ತ ಹೋಗುತ್ತಿವೆ. ಉದಾಹರಣೆಗೆ, ವಯನಾಡು, ಕೊಡಗು ಮತ್ತು ಶಿರೂರಿನಲ್ಲಿ ನಡೆದ ಭೂಕುಸಿತಗಳು. ಬಹು ಸುಲಭವಾಗಿ ಕಾಣುವ ಕಾರಣಗಳು ರಸ್ತೆ ಅಗಲೀಕರಣ, ಗುಡ್ಡಗಳನ್ನು ಲಂಬವಾಗಿ ಕಡಿದಿರುವುದು, ಅವುಗಳಿಗೆ ವೈಜ್ಞಾನಿಕವಾಗಿ ತಡೆಗೋಡೆಗಳನ್ನು ಕಟ್ಟದಿರುವುದು, ಮಲೆನಾಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ರೆಸಾರ್ಟ್ ಮಾಫಿಯಾ ಉಂಟುಮಾಡಿರುವ ಭೂ ಸವಕಳಿ.

ಆದರೆ ಇಂಥ ಕಡೆಯಲ್ಲಿ ಭೂಮಿ ಕೊರೆದ ಪರಿಣಾಮವೇ ಇಂತಿಂಥಾ ಕಡೆಯಲ್ಲಿ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲು ಆಗುವಂತಿಲ್ಲ. ಯಾಕೆಂದರೆ ಭೂಮಿಯ ಒಳಗೆ ಏನೇನೋ ನಡೆಯುತ್ತಿರುತ್ತದೆ. ಹತ್ತಾರು ಕಿಲೋಮೀಟರ್‌ಗಳ ಆಚೆಯೆ ನಡೆದ ಒಂದು ಕಾಮಗಾರಿ, ಊಹಿಸಿಯೇ ಇಲ್ಲದ ಇನ್ನೆ ಒಂದು ಕಡೆಗೆ ಅನಾಹುತ ಸೃಷ್ಟಿಸಲು ಸಾಧ್ಯ. ಗುಡ್ಡದ ಮೇಲೆ ನಡೆದ ಅಗೆತ, ಕೆಳಗೆ ವಿಪತ್ತು ಸೃಷ್ಟಿಸಬಹುದು.

ಉದಾಹರಣೆಗೆ ವಯನಾಡಿನ ಎರಡು ಹಳ್ಳಿಗಳಿಗೆ ಹರಿದುಬಂದ ಅಗಾಧ ಪ್ರಮಾಣದ ಕೆಸರು ಮಣ್ಣಿನ ಜಲರಾಶಿಗೆ ಕಾರಣ ಅಲ್ಲಿಂದ ಎಂಟು ಕಿಲೋಮೀಟರ್ ಒಳಗೆ ಕಾಡಿನ ನಡೆದ ಭೂಕುಸಿತ. ಅದಕ್ಕೆ ಏನು ಕಾರಣ? ನಿಖರ ಅಂದಾಜು ಕಷ್ಟಸಾಧ್ಯ.

ಈ ಪ್ರಾಕೃತಿಕ ವೈಪರೀತ್ಯಗಳೆಲ್ಲವೂ ಮಾನವಕೃತ ಎಂದು ವಾದಿಸುವಂತೆಯೂ ಇಲ್ಲ. ಭೂಮಿಯ ಹವಾಮಾನ ನಿರಂತರ ಬದಲಾಗುತ್ತಿರುತ್ತದೆ. ಇದನ್ನು ಗಮನಿಸಿಕೊಂಡು ಜನವಾಸ, ಪಟ್ಟಣಗಳೆಲ್ಲ ನಿರ್ಮಿತವಾಗಬೇಕು. ಆದರೆ ಅಂಥ ಯಾವ ಪ್ಲಾನಿಂಗ್ ಕೂಡ ನಮ್ಮ ನಡುವೆ ಇದ್ದಂತಿಲ್ಲ.

ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿರುವ ಲಕ್ಷಾಂತರ ಮಂದಿಯನ್ನು ಒಂದೆರಡು ತಾಸಿನಲ್ಲಿ ಸುರಕ್ಷಿತ ಪ್ರದೇಶಗಳಿಗೆ ಒಯ್ಯಲು ಸಾಧ್ಯವೇ? ಜಪಾನಿನಲ್ಲಿ ಭೂಕಂಪನಕ್ಕೆ ತುತ್ತಾದರೂ ಕುಸಿದುಬೀಳದಂತೆ, ಬಿದ್ದರೂ ಜೀವಹಾನಿಯಾಗದಂತೆ ಕಟ್ಟಲಾಗುವ ಹಗುರ ಮನೆಗಳು ಪ್ರಕೃತಿಸ್ನೇಹಿ ತಂತ್ರಜ್ಞಾನಕ್ಕೆ ಉದಾಹರಣೆ. ಇಂದು ಮಲೆನಾಡಿನ ಗುಡ್ಡಬೆಟ್ಟಗಳಲ್ಲಿ ಕಟ್ಟಲಾಗುತ್ತಿರುವ ದೊಡ್ಡ ದೊಡ್ಡ ಕಟ್ಟಡಗಳಿಗೆ ಅಂಥ ಯಾವ ಗ್ಯಾರಂಟಿಯೂ ಇಲ್ಲ.

ಆ ಗುಡ್ಡಗಳ ಕೆಳಗಿರುವ ಜನತೆಗೂ ನೆಮ್ಮದಿಯಿಲ್ಲ. ಇದರಲ್ಲಿ ಅತಿ ಹೆಚ್ಚು ಹೊಡೆತ ತಿನ್ನುವವರು ಸುಭದ್ರ ಮನೆಗಳು, ದೊಡ್ಡ ಜಮೀನು ಇಲ್ಲದ ಬಡವರು ಎಂಬುದನ್ನು ಮರೆಯಬಾರದು. ಈ ದುರಂತಗಳು ಮನುಷ್ಯನ ಪ್ರಜ್ಞೆಯ ಮೇಲೆ ಮಾಡುವ ದುಷ್ಪರಿಣಾಮ ಬಹಳ ಆಳವಾದದ್ದು. ವಯನಾಡ್‌ನಲ್ಲಿ ನಡೆದ ದುರಂತದಲ್ಲಿ ಬದುಕುಳಿದವರೊಬ್ಬರು ಖಾಸಗಿಯಾಗಿ ಹೇಳಿದ ಮಾತು- ‘ಈಗ ಮಳೆ ಕಾಣುವಾಗ ಮೈ ನಡುಗುತ್ತದೆ ಮಾರಾಯರೇ!’ ಅಂದರೆ ಸಹಜವಾದ ಒಂದು ಪ್ರಕೃತಿ ವ್ಯಾಪಾರವನ್ನು ಅದು ಇದ್ದಂತೆ ಕಾಣಲಾಗದ ಮನಸ್ಥಿತಿಗೆ ಈ ದುರಂತಗಳು ದೂಡುತ್ತವೆ.

ಅವರು ತಮ್ಮ ಮನೆ, ಜಾಗ, ಕುಟುಂಬದವರನ್ನು ಅಲ್ಲಿ ಕಳೆದುಕೊಂಡಿದ್ದಾರೆ. ಬೇರೆ ಆಶ್ರಯ ಪಡೆದುಕೊಂಡು ದಿನ ದೂಡುತ್ತಿದ್ದಾರೆ. ಮಳೆಯ ಸದ್ದು ಕೇಳಿದರೆ ಭಯದಿಂದ ತತ್ತರಿಸಿ ಹೋಗು ತ್ತಾರೆ. ಕತ್ತಲಿನಲ್ಲಿ ಹೆಚ್ಚು ಹೊತ್ತು ಒಬ್ಬಂಟಿಯಾಗಿ ಇರಲಾರರು. ಗುಡ್ಡ ಕಂಡರೆ ಅಲ್ಲಿಂದ ದೂರ ಓಡುತ್ತಾರೆ. ಅಲ್ಲಿ ಬದುಕುಳಿದು ತೀವ್ರ ದೈಹಿಕ ಗಾಯಗಳಿಂದ ಬಳಲುತ್ತಿರುವವರು, ಈಗ ಅವರನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆಗಳ ವಿರುದ್ಧ ಇನ್ನೂ ಹೆಚ್ಚಿನ ಹೋರಾಟ ಮಾಡಬೇಕಾಗಿ ಬಂದಿದೆ. ಚೇತರಿಕೆಯ ಹಾದಿ ಅಸಾಧ್ಯವೆಂದೇ ಅವರಿಗೆ ತೋರುತ್ತಿದೆ.

ಅವರ ಬದುಕಿನಲ್ಲಿ ನಿದ್ದೆಯಿಲ್ಲದ ರಾತ್ರಿಗಳು ಮತ್ತು ಮಳೆಯ ಭಯ ಸದಾ ನೆಲೆಸಿದೆ. ಈ ಮಾನಸಿಕ ಗಾಯಗಳನ್ನು ಸುಲಭವಾಗಿ ಸರಿಪಡಿಸಲು ಸಾಧ್ಯವಿಲ್ಲ. ಕೇರಳ ಆರೋಗ್ಯ ಇಲಾಖೆ ಈ ದುರಂತದ ಬಳಿಕ ದೀರ್ಘಕಾಲೀನ ಮಾನಸಿಕ ಆರೋಗ್ಯ ಬೆಂಬಲ ನೀಡಲು ಮನೋವೈದ್ಯರು, ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಸಲಹೆಗಾರರು ಇರುವ 121 ಸದಸ್ಯರ ದೊಡ್ಡ ತಂಡವನ್ನೇ ವಯನಾಡಿನಲ್ಲಿ ನಿಯೋಜಿಸಿದೆ. ಅಂದರೆ ಈ ದುರಂತಗಳು ಸೃಷ್ಟಿಸುವ ಮನೋ-ಸಾಮಾಜಿಕ ವಿಕಲ್ಪ ತಲೆಮಾರುಗಳ ಕಾಲ ಮುಂದುವರಿಯುತ್ತದೆ ಎಂಬುದರಲ್ಲಿ ಸಂದೇಹ ಬೇಡ.

ಹಾಗಾದರೆ ನಮ್ಮ ಮುಂದೆ ಇಂಥ ಭಾರಿ ಅನಾಹುತಗಳಿಂದ ಪಾರಾಗಲು ಇರುವ ದಾರಿಗಳೇನು? ಮುಖ್ಯವಾಗಿ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವುದು. ಶತಮಾನಗಳ ಕಾಲದಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿದ್ದ ಸುಸ್ಥಿರ- ಪ್ರಕೃತಿಸ್ನೇಹಿ ಬದುಕನ್ನು ನಡೆಸುವುದು. ಗುಡ್ಡಬೆಟ್ಟಗಳನ್ನು ಅವುಗಳ ಪಾಡಿಗೆ ಬಿಡುವುದು, ಅಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡದಿರುವುದು. ಕಾಂಕ್ರಿಟೀಕರಣವನ್ನು ಸಾಧ್ಯವಾದಷ್ಟು ತಡೆದು, ಮಳೆ ನೀರು ಇಂಗಿಸಲು ಜಾಗ ಬಿಟ್ಟು ಕೊಂಡಿರುವುದು.

ಅವೈಜ್ಞಾನಿಕ ಕಾಮಗಾರಿಗಳಿಗೆ ತಡೆ ಹಾಕುವುದು. ಇದೆಲ್ಲದರ ಶುರುವಾತಿಗೆ ತಜ್ಞರು ಹೇಳುವ ಮಾತುಗಳನ್ನು ಸಾವಧಾನವಾಗಿ ಕೇಳುವುದು. ಆದರೆ ಇವೆಲ್ಲವೂ ಕನಸಿನ ಗಂಟೆಂದೇ ತೋರುತ್ತವೆ. ಪಶ್ಚಿಮ ಘಟ್ಟಗಳ ಕಾಡನ್ನೂ ಜನಜೀವನವನ್ನೂ ಸಂರಕ್ಷಿಸಲು ಸಾಕಷ್ಟು ಅಧ್ಯಯನದ ಮೂಲಕ ವಿeನಿಗಳಾದ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ನೀಡಿದ ವರದಿಗಳನ್ನು ನಾವು ಸಮಾಧಿ ಮಾಡಿದ್ದೇವೆ. ತಜ್ಞರ ಮಾತುಗಳಿಗಿಂತಲೂ ನಮಗೆ ಸ್ಥಳೀಯ ರಾಜಕಾರಣಿಗಳ ಮಾತುಗಳೇ ವೇದವಾಕ್ಯಗಳಾಗಿವೆ. ಇಂಥ ಹೊತ್ತಿನಲ್ಲಿ ನಮಗೆ ಒಳ್ಳೆಯ ಭವಿಷ್ಯವಿದೆ ಎಂದು ನನಗಂತೂ ಅನಿಸುವುದಿಲ್ಲ.