ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಈ ಸಾವಿರಾರು ಕೋಟಿ ಅದೆಷ್ಟು ದಲಿತ ಕುಟುಂಬಗಳಿಗೆ ಮುಟ್ಟಿದೆ?

2026-27ನೇ ಸಾಲಿನಲ್ಲಿ ಕರ್ನಾಟಕದಲ್ಲಿ SCSP/ TSP ಗೆ ಸುಮಾರು ರೂ.44,632 ಕೋಟಿ ಮೀಸಲಿಡ ಲಾಗಿದೆ. ಇದನ್ನು ಮೇಲಿನ ರೂ.780 ಕೋಟಿಯ ಉದಾಹರಣೆಯೊಂದಿಗೆ ಕೇವಲ ಆರ್ಥಿಕ ಪ್ರಮಾಣದ ಹೋಲಿಕೆಗಾಗಿ ನೋಡಿದರೆ, ಅದು ಸುಮಾರು 57 ಪಟ್ಟು ದೊಡ್ಡ ಮೊತ್ತ. 13 ಸಾವಿರ ಕುಟುಂಬಗಳ ಪ್ರಮಾಣವನ್ನು 57 ಪಟ್ಟು ಮಾಡಿದರೆ ಅದು ಸುಮಾರು 7.4 ಲಕ್ಷ ಕುಟುಂಬ ಗಳಿಗೆ ವರ್ಷಕ್ಕೆ ರೂ.6 ಲಕ್ಷದ ಆದಾಯಕ್ಕೆ ಸಮನಾದ ಆರ್ಥಿಕ ಪ್ರಮಾಣವಾಗುತ್ತದೆ.

ಜನಕಲ್ಯಾಣ

ಹರಿರಾಮ ಎ.

ದಲಿತರ ಅಭಿವೃದ್ಧಿ ಎಂದರೆ ಕೇವಲ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುವುದಲ್ಲ. ಆ ಹಣವು ದಲಿತ ಕುಟುಂಬಗಳ ಬದುಕಿನಲ್ಲಿ ಶಾಶ್ವತ ಆದಾಯ, ಉದ್ಯೋಗ, ಉದ್ಯಮ, ಆಸ್ತಿ ಮತ್ತು ಆರ್ಥಿಕ ಸ್ವಾವಲಂಬನೆ ರೂಪದಲ್ಲಿ ಪ್ರತಿಫಲಿಸಬೇಕು. ಈ ದೃಷ್ಟಿಯಿಂದ ಕರ್ನಾಟಕದಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅಡಿಯಲ್ಲಿ ಮೀಸಲಿಡುತ್ತಿರುವ ಸಾವಿರಾರು ಕೋಟಿ ರೂಪಾಯಿಗಳ ಪರಿಣಾಮವನ್ನು ಪರಿಶೀಲಿಸಿದಾಗ ಕೆಲವು ಗಂಭೀರ ಪ್ರಶ್ನೆಗಳು ಎದುರಾಗುತ್ತವೆ.

ಕರ್ನಾಟಕದಲ್ಲಿ ಸುಮಾರು 35 ಲಕ್ಷ ಎಸ್‌ಎಸಿ ಎಸ್‌ಟಿ ಕುಟುಂಬಗಳಿದ್ದು, ಒಟ್ಟು ಜನಸಂಖ್ಯೆ ಸುಮಾರು ಒಂದೂವರೆ ಕೋಟಿ ಎಂದು ಅಂದಾಜಿಸಲಾಗುತ್ತದೆ. ಇವರಲ್ಲಿ ಸರಕಾರಿ ಉದ್ಯೋಗ ಪಡೆದಿರುವವರ ಸಂಖ್ಯೆ ಸುಮಾರು ಎರಡು ಲಕ್ಷ ಎಂದು ಪರಿಗಣಿಸಿದರೂ, ಬಹುಸಂಖ್ಯಾತ ಕುಟುಂಬಗಳಿಗೆ ಇಂದಿಗೂ ಸ್ಥಿರವಾದ ಮತ್ತು ಗೌರವಯುತ ಆದಾಯದ ಮೂಲ ಸೃಷ್ಟಿಯಾಗ ಬೇಕಾದ ಅಗತ್ಯ ಉಳಿದಿದೆ.

ಇದನ್ನು ಅರ್ಥಮಾಡಿಕೊಳ್ಳಲು ಒಂದು ಸರಳ ಆರ್ಥಿಕ ಲೆಕ್ಕ ಸಾಕು. 13 ಸಾವಿರ ಉದ್ಯೋಗಗಳು- ವರ್ಷಕ್ಕೆ ರೂ.780 ಕೋಟಿ ಆದಾಯ. ರಾಜ್ಯ ಸರಕಾರವು ಭರ್ತಿ ಮಾಡಲಿರುವ 72,186 ಹುದ್ದೆಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಅನ್ವಯಿಸಿದರೆ ಎಸ್‌ಸಿ ಸಮುದಾಯಕ್ಕೆ ಸುಮಾರು 10,828 ಹಾಗೂ ಎಸ್‌ಪಿ ಸಮುದಾಯಕ್ಕೆ ಸುಮಾರು 2166 ಹುದ್ದೆಗಳು ದೊರೆಯುತ್ತವೆ ಎಂದು ಲೆಕ್ಕ ಹಾಕಬಹುದು. ಅಂದರೆ ಒಟ್ಟು 12994 ಎಸ್‌ಸಿ ಎಸ್‌ಪಿ ಕುಟುಂಬಗಳಿಗೆ ಒಂದು ಶಾಶ್ವತ ಉದ್ಯೋಗದ ಅವಕಾಶ ದೊರೆಯುತ್ತದೆ.

ಇದನ್ನೂ ಓದಿ: Thimmanna Bhagwat Column: ಮಾಫಿ ಸಾಕ್ಷಿ, ಪ್ರತಿಕೂಲ ಸಾಕ್ಷಿಗಳ ನಡುವೆ ತೂಗುದೀಪ

ಒಬ್ಬ ಉದ್ಯೋಗಿಗೆ ಸರಾಸರಿ ತಿಂಗಳಿಗೆ ರೂ.50000 ವೇತನ ಎಂದು ಪರಿಗಣಿಸಿದರೆ, 12994 ಹಿ ರೂ.50000 ರೂ.64.97 ಕೋಟಿ. ಅಂದರೆ ಸುಮಾರು ರೂ.65 ಕೋಟಿ ಪ್ರತಿ ತಿಂಗಳು ಈ ಕುಟುಂಬ ಗಳಿಗೆ ಆದಾಯವಾಗಿ ಹರಿಯುತ್ತದೆ. ವರ್ಷಕ್ಕೆ ಇದು ಸುಮಾರು ರೂ.780 ಕೋಟಿ. ಈ ಲೆಕ್ಕ ನಮಗೆ ಒಂದು ಮಹತ್ವದ ಸಂಗತಿಯನ್ನು ತೋರಿಸುತ್ತದೆ. ಸುಮಾರು ರೂ.780 ಕೋಟಿ ವಾರ್ಷಿಕ ಆದಾಯ ದ ಹರಿವು 13 ಸಾವಿರ ಕುಟುಂಬಗಳಿಗೆ ತಿಂಗಳಿಗೆ ಸರಾಸರಿ ರೂ.50 ಸಾವಿರದ ಸ್ಥಿರ ಆದಾಯಕ್ಕೆ ಸಮನಾದ ಆರ್ಥಿಕ ಸಾಮರ್ಥ್ಯವನ್ನು ಹೊಂದಿದೆ.

ಇಲ್ಲಿಂದಲೇ SCSP/TSP ನಿಧಿಯ ಕುರಿತು ಮೂಲಭೂತ ಪ್ರಶ್ನೆ ಹುಟ್ಟುತ್ತದೆ. ರೂ.44,632 ಕೋಟಿ ಮೊತ್ತವು ಎಷ್ಟು ಕುಟುಂಬಗಳ ಬದುಕು ಬದಲಿಸಬಹುದು?

2026-27ನೇ ಸಾಲಿನಲ್ಲಿ ಕರ್ನಾಟಕದಲ್ಲಿ SCSP/ TSP ಗೆ ಸುಮಾರು ರೂ.44,632 ಕೋಟಿ ಮೀಸಲಿಡ ಲಾಗಿದೆ. ಇದನ್ನು ಮೇಲಿನ ರೂ.780 ಕೋಟಿಯ ಉದಾಹರಣೆಯೊಂದಿಗೆ ಕೇವಲ ಆರ್ಥಿಕ ಪ್ರಮಾಣದ ಹೋಲಿಕೆಗಾಗಿ ನೋಡಿದರೆ, ಅದು ಸುಮಾರು 57 ಪಟ್ಟು ದೊಡ್ಡ ಮೊತ್ತ. 13 ಸಾವಿರ ಕುಟುಂಬಗಳ ಪ್ರಮಾಣವನ್ನು 57 ಪಟ್ಟು ಮಾಡಿದರೆ ಅದು ಸುಮಾರು 7.4 ಲಕ್ಷ ಕುಟುಂಬ ಗಳಿಗೆ ವರ್ಷಕ್ಕೆ ರೂ.6 ಲಕ್ಷದ ಆದಾಯಕ್ಕೆ ಸಮನಾದ ಆರ್ಥಿಕ ಪ್ರಮಾಣವಾಗುತ್ತದೆ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. *ಖಇಖP/SಖPಯ ಸಂಪೂರ್ಣ ರೂ.44 ಸಾವಿರ ಕೋಟಿಯನ್ನು ಜನರಿಗೆ ಸಂಬಳವಾಗಿ ಹಂಚಬೇಕು ಎಂಬುದು ಈ ವಾದದ ಉದ್ದೇಶವಲ್ಲ. ಶಿಕ್ಷಣ, ಆರೋಗ್ಯ, ವಸತಿ, ಮೂಲಸೌಕರ್ಯ, ವಿದ್ಯಾರ್ಥಿವೇತನ, ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ಅಗತ್ಯಗಳಿಗೆ ಈ ಹಣ ಬಳಕೆಯಾಗುತ್ತದೆ.

ಆದರೆ ಈ ಬೃಹತ್ ಮೊತ್ತದಲ್ಲಿ ಗಣನೀಯ ಪಾಲನ್ನು ನೇರ ಆರ್ಥಿಕ ಸಬಲೀಕರಣ, ಉತ್ಪಾದಕ ಆಸ್ತಿ ಮತ್ತು ಶಾಶ್ವತ ಆದಾಯ ಸೃಷ್ಟಿಗೆ ಬಳಸಿದರೆ ಎಷ್ಟು ಲಕ್ಷ ಕುಟುಂಬಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದಿತ್ತು ಎಂಬ ಪ್ರಶ್ನೆಯನ್ನು ಕೇಳಲೇಬೇಕಾಗಿದೆ.

ರೂ.3.84 ಲಕ್ಷ ಕೋಟಿ ಎಂಬುದು ಒಂದು ಸಮುದಾಯದ ಆರ್ಥಿಕ ಚಿತ್ರವನ್ನೇ ಬದಲಿಸಬಹುದಾದ ಮೊತ್ತ. 2014-15ರಿಂದ 2026-27ರವರೆಗೆ * ಖಇಖP/SಖP ಅಡಿಯಲ್ಲಿ ಒಟ್ಟಾರೆ ಸುಮಾರು ರೂ.3.84 ಲಕ್ಷ ಕೋಟಿ, ಅಂದರೆ ರೂ.3,84,000 ಕೋಟಿ ಮೀಸಲಿಡಲಾಗಿದೆ ಎಂಬ ಒಟ್ಟು ಲೆಕ್ಕವನ್ನು ಪರಿಗಣಿಸೋಣ.

ಇದನ್ನು ರೂ.780 ಕೋಟಿಯ ವಾರ್ಷಿಕ ಆದಾಯದ ಉದಾಹರಣೆಯೊಂದಿಗೆ ಹೋಲಿಸಿದರೆ: ರೂ.3,84,000 ಕೋಟಿ ರೂ.780 ಕೋಟಿ = 492 ಪಟ್ಟು. 13 ಸಾವಿರ ಕುಟುಂಬಗಳ ಪ್ರಮಾಣದಲ್ಲಿ ನೋಡಿದರೆ ಇದು ಸುಮಾರು 64 ಲಕ್ಷ ಕುಟುಂಬಗಳಿಗೆ ತಲಾ ವರ್ಷಕ್ಕೆ ರೂ.6 ಲಕ್ಷದ ಆದಾಯಕ್ಕೆ ಸಮನಾದ ಆರ್ಥಿಕ ಪ್ರಮಾಣ. ಇದು ನೇರವಾಗಿ 64 ಲಕ್ಷ ಕುಟುಂಬಗಳಿಗೆ ಹಣ ಹಂಚಬಹುದಿತ್ತು ಎಂಬ ವಾದವಲ್ಲ. ಬದಲಾಗಿ ರೂ.3.84 ಲಕ್ಷ ಕೋಟಿ ಎಷ್ಟು ದೊಡ್ಡ ಆರ್ಥಿಕ ಸಂಪನ್ಮೂಲ ಎಂಬುದನ್ನು ಅರ್ಥಮಾಡಿಸುವ ಹೋಲಿಕೆ.

ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲವನ್ನು ಸಮರ್ಪಕವಾಗಿ ಯೋಜಿಸಿ, ಅದರ ಒಂದು ಭಾಗವನ್ನು ಆದಾಯ ತರುವ ಆಸ್ತಿ, ಉದ್ಯೋಗ ಮತ್ತು ಉದ್ಯಮ ಸೃಷ್ಟಿಗೆ ನಿರಂತರವಾಗಿ ಬಳಸಿದ್ದರೆ ಕರ್ನಾಟಕದ ದಲಿತ ಕುಟುಂಬಗಳ ಆರ್ಥಿಕ ಚಿತ್ರ ಇಂದು ಇನ್ನಷ್ಟು ಉತ್ತಮವಾಗಿರ ಬೇಕಾಗಿತ್ತು.

ಹಣ ಖರ್ಚಾಗಿದೆಯೇ ಎಂಬುದಕ್ಕಿಂತ ಬದುಕು ಬದಲಾಗಿದೆಯೇ? ಇಲ್ಲಿಯವರೆಗೆ SCSP/TSP ಕುರಿತು ಚರ್ಚೆಗಳು ಹೆಚ್ಚಾಗಿ ಎಷ್ಟು ಹಣ ಮೀಸಲಿಟ್ಟರು, ಎಷ್ಟು ಬಿಡುಗಡೆ ಮಾಡಿದರು, ಎಷ್ಟು ಖರ್ಚು ಮಾಡಿದರು ಎಂಬ ಅಂಕಿಅಂಶಗಳ ಸುತ್ತಲೇ ನಡೆಯುತ್ತಿವೆ. ಆದರೆ ನಿಜವಾದ ಲೆಕ್ಕ ಬೇರೆ ಇರಬೇಕು. ಎಷ್ಟು ಕುಟುಂಬಗಳು ಬಡತನದಿಂದ ಹೊರಬಂದವು? ಎಷ್ಟು ಕುಟುಂಬಗಳಿಗೆ ಶಾಶ್ವತ ಆದಾಯದ ಮೂಲ ಸೃಷ್ಟಿಯಾಯಿತು? ಎಷ್ಟು ನಿರುದ್ಯೋಗಿ ಯುವಕರು ಉದ್ಯಮಿಗಳಾದರು? ಎಷ್ಟು ಕುಟುಂಬಗಳಿಗೆ ಆದಾಯ ತರುವ ಆಸ್ತಿ ದೊರೆಯಿತು? ಎಷ್ಟು ಕುಟುಂಬಗಳು ಸ್ವಂತ ಉದ್ಯಮಗಳನ್ನು ಸ್ಥಾಪಿಸಿದವು? ಎಷ್ಟು ಕುಟುಂಬಗಳ ವಾರ್ಷಿಕ ಆದಾಯ ರೂ.5 ಲಕ್ಷ ಅಥವಾ ರೂ.10 ಲಕ್ಷದ ಮಟ್ಟಕ್ಕೆ ಏರಿತು? ಎಷ್ಟು ಕುಟುಂಬಗಳು ಸರಕಾರದ ನೆರವಿನ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿಗಳಾದವು?

ಈ ಪ್ರಶ್ನೆಗಳಿಗೆ ಉತ್ತರ ನೀಡದೆ ಕೇವಲ ಇಷ್ಟು ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುವುದು ಸಾಮಾಜಿಕ ನ್ಯಾಯದ ಸಂಪೂರ್ಣ ಲೆಕ್ಕವಾಗುವುದಿಲ್ಲ.

SCSP/TSP ಯೋಜನೆಗಳಿಗೆ ಈಗ ಹೊಸ ಮಾನದಂಡದ ಅಗತ್ಯವಿದೆ. "Expenditure Accounting' ಬದಲು "Outcome Accounting' ಬೇಕು. ಸರಕಾರ ಕೇವಲ Allocation - Release - Expenditure ಲೆಕ್ಕವನ್ನು ಪ್ರಕಟಿಸುವುದರ ಜೊತೆಗೆ Outcome Accounting -ಫಲಿತಾಂಶದ ಲೆಕ್ಕವನ್ನೂ ಸಾರ್ವಜನಿಕರ ಮುಂದಿಡಬೇಕು.

ಪ್ರತಿ ಯೋಜನೆಗೂ ಎಷ್ಟು ಹಣ- ಎಷ್ಟು ಫಲಾನುಭವಿ ಕುಟುಂಬಗಳು- ಎಷ್ಟು ಉತ್ಪಾದಕ ಆಸ್ತಿಗಳು- ಎಷ್ಟು ಉದ್ಯೋಗಗಳು- ಎಷ್ಟು ಹೊಸ ಉದ್ಯಮಗಳು- ಕುಟುಂಬದ ಆದಾಯದಲ್ಲಿ ಎಷ್ಟು ಹೆಚ್ಚಳ- ಐದು ವರ್ಷಗಳ ನಂತರ ಆ ಕುಟುಂಬದ ಆರ್ಥಿಕ ಸ್ಥಿತಿ ಏನು? ಎಂಬ ಮಾಹಿತಿ ಯನ್ನು ಬಹಿರಂಗಪಡಿಸಬೇಕು.

ಪ್ರತಿ ಫಲಾನುಭವಿ ಕುಟುಂಬದ ಆರ್ಥಿಕ ಪ್ರಗತಿಯನ್ನು ಕೆಲವು ವರ್ಷಗಳ ಕಾಲ ದಾಖಲಿಸುವ ಆರ್ಥಿಕ ಸಬಲೀಕರಣ ನಿಗಾ ವ್ಯವಸ್ಥೆ ( Economic Empowerment Tracking System) ರೂಪಿಸುವ ಅಗತ್ಯವೂ ಇದೆ. ಆಗ ಮಾತ್ರ ಒಂದು ಯೋಜನೆ ಯಶಸ್ವಿಯೇ ಅಥವಾ ವಿಫಲವೇ ಎಂಬುದನ್ನು ನಿಖರವಾಗಿ ಅಳೆಯಲು ಸಾಧ್ಯ.

ಫಲಾನುಭವಿಯಿಂದ ಉದ್ಯಮಿಯವರೆಗೆ

ಒಂದು ಕುಟುಂಬಕ್ಕೆ ಮನೆ ನೀಡುವುದು ಅಗತ್ಯ. ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡುವುದು ಅಗತ್ಯ. ರಸ್ತೆ, ಶಾಲೆ, ಆಸ್ಪತ್ರೆ ಮತ್ತು ಮೂಲಸೌಕರ್ಯ ನಿರ್ಮಿಸುವುದೂ ಅಗತ್ಯ. ಆದರೆ ಸಾಮಾಜಿಕ ನ್ಯಾಯದ ಮುಂದಿನ ಹಂತ ಆರ್ಥಿಕ ಸ್ವಾತಂತ್ರ್ಯ ಆಗಬೇಕು. ದಲಿತ ಕುಟುಂಬಗಳಿಗೆ ಕೃಷಿಭೂಮಿ, ನೀರಾವರಿ ಸೌಲಭ್ಯ, ವಾಣಿಜ್ಯ ವಾಹನ, ಅಂಗಡಿ, ಸಣ್ಣ ಕೈಗಾರಿಕೆ, ಉತ್ಪಾದನಾ ಘಟಕ, ಸೇವಾ ಉದ್ಯಮ, ವೃತ್ತಿಪರ ಕೌಶಲ್ಯ, ಮಾರುಕಟ್ಟೆ ಸಂಪರ್ಕ ಮತ್ತು ಬಂಡವಾಳವನ್ನು ಸಮಗ್ರವಾಗಿ ಒದಗಿಸುವ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ರೂಪುಗೊಳ್ಳಬೇಕು.

ಗುರಿ ಕೇವಲ ‘ಫಲಾನುಭವಿ’ಗಳನ್ನು ಸೃಷ್ಟಿಸುವುದಲ್ಲ. ಉದ್ಯೋಗದಾತರು, ಉದ್ಯಮಿಗಳು, ಆಸ್ತಿ ಮಾಲೀಕರು ಮತ್ತು ಆರ್ಥಿಕವಾಗಿ ಸ್ವತಂತ್ರ ಕುಟುಂಬಗಳನ್ನು ಸೃಷ್ಟಿಸುವುದು ಆಗಬೇಕು.

ಮುಂದಿನ ಐದು ಅಥವಾ ಹತ್ತು ವರ್ಷಗಳ ನಂತರ ಸರ್ಕಾರ ಹೆಮ್ಮೆಯಿಂದ, SCSP/TSP ಅಡಿಯಲ್ಲಿ ಇಷ್ಟು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಹೇಳುವುದಕ್ಕಿಂತ, ಈ ಹಣದಿಂದ ಇಷ್ಟು ಲಕ್ಷ ಕುಟುಂಬಗಳನ್ನು ಬಡತನದಿಂದ ಹೊರತಂದಿದ್ದೇವೆ; ಇಷ್ಟು ಲಕ್ಷ ಕುಟುಂಬಗಳಿಗೆ ಶಾಶ್ವತ ಆದಾಯ ಸೃಷ್ಟಿಸಿದ್ದೇವೆ; ಇಷ್ಟು ಯುವಕರನ್ನು ಉದ್ಯಮಿಗಳನ್ನಾಗಿ ಮಾಡಿದ್ದೇವೆ ಎಂದು ಹೇಳುವಂತಾಗಬೇಕು. ಅದೇ SCSP/ TSP ಯ ನಿಜವಾದ ಯಶಸ್ಸು. ಅದೇ ಸಾಮಾಜಿಕ ನ್ಯಾಯದ ಅರ್ಥಪೂರ್ಣ ಅನುಷ್ಠಾನ.

ಸುಮಾರು ರೂ.780 ಕೋಟಿಯ ವಾರ್ಷಿಕ ಆದಾಯದ ಪ್ರಮಾಣ 13 ಸಾವಿರ ಕುಟುಂಬಗಳಿಗೆ ತಿಂಗಳಿಗೆ ರೂ.50 ಸಾವಿರ ಆದಾಯಕ್ಕೆ ಸಮನಾಗುತ್ತದೆ ಎಂದಾದರೆ- ರೂ.44,632 ಕೋಟಿ ಎಷ್ಟು ಕುಟುಂಬಗಳ ಬದುಕನ್ನು ಬದಲಿಸಬಹುದಿತ್ತು? ಅದೇ ರೀತಿ, ರೂ.3.84 ಲಕ್ಷ ಕೋಟಿ ಎಷ್ಟು ಲಕ್ಷ ದಲಿತ ಕುಟುಂಬಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬಹುದಿತ್ತು? ಹಾಗಾದರೆ ಇಷ್ಟು ವರ್ಷಗಳ ನಂತರ ನಾವು ಕೇಳಬೇಕಾದ ಪ್ರಶ್ನೆ ಕೇವಲ- *ಖಇಖP/SಖP ಹಣ ಎಷ್ಟು ಖರ್ಚಾಯಿತು? ಎಂಬುದಲ್ಲ.

ಅದಕ್ಕಿಂತ ಮುಖ್ಯವಾದ ಪ್ರಶ್ನೆ: ರೂ.3.84 ಲಕ್ಷ ಕೋಟಿ ಮೀಸಲಿಟ್ಟ ನಂತರ ಎಷ್ಟು ದಲಿತ ಕುಟುಂಬಗಳು ನಿಜವಾಗಿಯೂ ಆರ್ಥಿಕವಾಗಿ ಸ್ವಾವಲಂಬಿಯಾದವು? ಈ ಪ್ರಶ್ನೆಗೆ ಸರ್ಕಾರ ಅಂಕಿಅಂಶಗಳೊಂದಿಗೆ ಉತ್ತರಿಸಬೇಕು. ಸಮಾಜವೂ ಉತ್ತರ ಕೇಳಬೇಕು. ಏಕೆಂದರೆ SCSP/TSP ಹಣ ದಲಿತರ ಹೆಸರಿನಲ್ಲಿ ಖರ್ಚಾಗುವ ಹಣವಾಗಬಾರದು. ದಲಿತರ ಬದುಕನ್ನೇ ಶಾಶ್ವತವಾಗಿ ಬದಲಿಸುವ ಹಣವಾಗಬೇಕು. ಯಾಕೆಂದರೆ ನಮ್ಮ ಹಣ- ನಮ್ಮ ಹಕ್ಕು- ನಮ್ಮ ಅಭಿವೃದ್ಧಿ- ನಮ್ಮ ಸ್ವಾವಲಂಬನೆ.

(ಲೇಖಕರು ವಕೀಲರು ಹಾಗೂ ರಾಜ್ಯಾಧ್ಯಕ್ಷರು, ಬಿಪಿಎಸ್)