ಗಣತಂತ್ರ
ಗಣೇಶ್ ಭಟ್
ಸುಮಾರು 100 ಕೋಟಿ ಮತದಾರರು ಇರುವ, ಜಗತ್ತಿನ ಪ್ರಮುಖ ಧರ್ಮಗಳ ಜನರನ್ನು ಹೊಂದಿರುವ, ನೂರಾರು ಬುಡಕಟ್ಟು ಜನರು, ಜಾತಿ, ಭಾಷೆ, ಸಂಸ್ಕೃತಿ ವೈವಿಧ್ಯತೆಯ ದೇಶ ಒಂದು ಸಂವಿಧಾನದ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದರೆ ಅದು ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯ ಯಶಸ್ಸಲ್ಲದೇ ಮತ್ತೇನು?
ಈ ಜಗತ್ತಿನಲ್ಲಿ ಅನೇಕ ರೀತಿಯ ಆಡಳಿತ ವ್ಯವಸ್ಥೆಗಳು ಪ್ರಯೋಗಿಸಲ್ಪಟ್ಟಿವೆ, ಮತ್ತು ಮುಂದೆಯೂ ಪ್ರಯೋಗಿಸಲ್ಪಡುವುವು. ಪ್ರಜಾಪ್ರಭುತ್ವವು ಪರಿಪೂರ್ಣವಾದುದು ಅಥವಾ ಸರ್ವಜ್ಞವಾದುದು ಎಂದು ಯಾರೂ ಹೇಳುವುದಿಲ್ಲ. ವಾಸ್ತವವಾಗಿ, ಇಂದಿನವರೆಗೆ ಪ್ರಯೋಗಿಸಲ್ಪಟ್ಟ ಇತರ ಎಲ್ಲ ಆಡಳಿತ ವ್ಯವಸ್ಥೆಗಳೊಂದಿಗೆ ಹೋಲಿಸಿದರೆ, ಪ್ರಜಾಪ್ರಭುತ್ವವೇ ಕನಿಷ್ಠ ಕೆಟ್ಟ ವ್ಯವಸ್ಥೆಯಾಗಿದೆ ಎಂದು ಪ್ರಜಾರಭುತ್ವ ವ್ಯವಸ್ಥೆಯ ಕುರಿತು ‘ವಿನ್ಸ್ ಟನ್ ಚರ್ಚಿಲ್’ ಹೇಳಿದ ಮಾತು ಬಹಳ ಪ್ರಸಿದ್ಧ.
ಪ್ರಜಾಪ್ರಭುತ್ವದ ಹೊರತಾಗಿ ಜಗತ್ತಿನಲ್ಲಿ ರಾಜಪ್ರಭುತ್ವ, ಮಿತ ಜನತಂತ್ರ, ಏಕಪಕ್ಷ ಆಡಳಿತ, ಸರ್ವಾಧಿಕಾರ ಮೊದಲಾದ ರೀತಿಯ ಆಡಳಿತ ವ್ಯವಸ್ಥೆಗಳು ಇವೆ. ಸೌದಿ ಅರೇಬಿಯಾ, ಒಮಾನ್, ಬ್ರೂನೈ, ಜೋರ್ಡಾನ್, ಕುವೈತ್, ಭೂತಾನ್, ಕಾಂಬೋಡಿಯಾ, ಮಲೇಶಿಯಾ ಮೊದಲಾದ ದೇಶಗಳು ರಾಜಸತ್ತೆಯ ಅಡಿಯಲ್ಲಿ ಆಳಲ್ಪಡುತ್ತಿವೆ. ಈ ವ್ಯವಸ್ಥೆಯಡಿ ಆಡಳಿತದಲ್ಲಿ ರಾಜನ/ರಾಣಿಯ ತೀರ್ಮಾನವೇ ಅಂತಿಮ.
ವಂಶಪಾರಂಪರ್ಯವಾಗಿ ರಾಜಾಡಳಿತ ಮುಂದುವರಿಯುವುದು. ಯೋಗ್ಯತೆ ಹಾಗೂ ಸಾಮರ್ಥ್ಯ ಇಲ್ಲದಿದ್ದರೂ ಉತ್ತರಾಧಿಕಾರಿ ಅಧಿಕಾರಕ್ಕೆ ಏರುವುದು, ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳು ವುದು, ಜನಾಭಿಪ್ರಾಯಕ್ಕೆ ಮನ್ನಣೆ ಕೊಡದಿರುವುದು, ಅಧಿಕಾರಸ್ಥನ ಸ್ವೇಚ್ಛಾಚಾರ, ಸರ್ವಾಧಿಕಾರ ಮೊದಲಾದ ಅಪಾಯಗಳು ಈ ವ್ಯವಸ್ಥೆಯಲ್ಲಿದೆ.
ಬ್ರಿಟನ್, ಕೆನಡಾ, ಆಸ್ಟ್ರೇಲಿಯಾಗಳು ಸಾಂಕೇತಿಕವಾಗಿ ರಾಜಾಡಳಿತವನ್ನು ಹೊಂದಿzವೆಯಾದರೂ ರಾಜರಿಗೆ ಅಲ್ಲಿ ಇರುವ ಅಧಿಕಾರ ಬಹಳ ಸೀಮಿತ. ಮಿತ ಜನತಂತ್ರ, ಏಕಪಕ್ಷ ಆಡಳಿತ ಹಾಗೂ ಸರ್ವಾಧಿಕಾರಕ್ಕೆ ಚೀನಾವೇ ಅತ್ಯಂತ ಸಮರ್ಪಕ ಉದಾಹರಣೆ. ಚೀನಾದ ಏಕೈಕ ರಾಜಕೀಯ ಪಕ್ಷವಾದ ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯು ಸೂಚಿಸಿದ ಅಭ್ಯರ್ಥಿಯನ್ನು ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಅಧ್ಯಕ್ಷನಾಗಿ ನೇಮಕಾತಿ ಮಾಡುತ್ತದೆ.
ಇದನ್ನೂ ಓದಿ: Ganesh Bhat Column: ವಿದೇಶಿ ದೇಣಿಗೆಯ ಮೇಲೂ ನಿಯಂತ್ರಣ ಹೇರುವುದು ಎಷ್ಟು ಸರಿ ?
ಚೀನಾದ ಕಮ್ಯುನಿಸ್ಟ್ ಪಕ್ಷದ ಗಣ್ಯ ಸದಸ್ಯರು ಮಾತ್ರ ಅಧ್ಯಕ್ಷನ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಚೀನಾದಲ್ಲಿ ಜನರಿಗೆ ಅಭಿಪ್ರಾಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಡಿಜಿಟಲ್ ಸ್ವಾತಂತ್ರ್ಯ ಇಲ್ಲ. ಇನ್ನು ಉತ್ತರ ಕೋರಿಯಾದ ಸರ್ವಾಧಿಕಾರ ಆಡಳಿತದ ಬಗ್ಗೆ ಹೇಳುವುದೇ ಬೇಡ. ಅಲ್ಲಿನ ಈ ಹಿಂದಿನ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಮತ್ತು ಆತನ ಮಗ ಇಂದಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇವರಿಬ್ಬರು ಸೇರಿ ಅಲ್ಲಿನ ಪ್ರಜೆಗಳ ಪಾಲಿಗೆ ದೇಶವನ್ನು ಜೈಲ್ ಆಗಿ ಪರಿವರ್ತಿಸಿದ್ದಾರೆ. ಆಶ್ಚರ್ಯವೇನೆಂದರೆ ಜಗತ್ತಿನ ಶೇ.55ಕ್ಕಿಂತಲೂ ಹೆಚ್ಚು ಜನರು ಪ್ರಜಾಪ್ರಭುತ್ವರಹಿತ ಆಡಳಿತ ವ್ಯವಸ್ಥೆಯಡಿಯಲ್ಲಿ ಜೀವಿಸುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ತುಂಬಾ ಕುಂದುಕೊರತೆಗಳಿವೆ. ಇಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಬಹುಮತದ ಆಧಾರದಲ್ಲಿ ನಿರ್ಧಾರಗಳು ಕೈಗೊಳ್ಳಲ್ಪಡುತ್ತವೆ. ಇಲ್ಲಿ ಅಲ್ಪಮತ ಪಡೆದ ಅಭಿಪ್ರಾಯಗಳು ನಿರ್ಲಕ್ಷಿಸಲ್ಪಡುತ್ತವೆ ಎನ್ನುವ ಆರೋಪವಿದೆ. ಪ್ರತೀ ನಿರ್ಣಯಗಳು ಅಥವಾ ಕಾನೂನುಗಳನು ಜಾರಿಗೆ ತರಬೇಕಾದರೆ ಸುದೀರ್ಘವಾದ ಚರ್ಚೆಗಳು ನಡೆಯಬೇಕಾಗು ತ್ತದೆ.
ಇದರಿಂದಾಗಿ ಸರಕಾರಗಳು ನಿರ್ಧಾರಗಳನ್ನು ತೆಗದುಕೊಳ್ಳುವಾಗ ತುಂಬಾ ನಿಧಾನವಾಗುತ್ತದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೇರುವ ಉದ್ದೇಶದಿಂದ ದೇಶದ ಆರ್ಥಿಕತೆಗೆ ಮಾರಕವಾದರೂ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತವೆ. ಚುನಾವಣೆಗಳಲ್ಲಿ ಮತದಾರರ ಮನಗೆಲ್ಲಲು ಹಣ ಹೆಂಡಗಳೂ ಹೇರಳವಾಗಿ ಬಳಸಲ್ಪಡುತ್ತವೆ. ಇವುಗಳೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯ ಮಿತಿಗಳಾಗಿವೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 79 ವರ್ಷಗಳು ಸಂದರೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಪೂರ್ಣವಾಗಿದೆಯೇ ಎನ್ನುವುದು ಆಗಾಗ ಚರ್ಚೆಗೆ ಬರುವ ವಿಷಯ. ಯುನೈಟೆಡ್ ಕಿಂಗ್ಡಮ್ ಮೂಲದ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಹೆಸರಿನ ಸಂಸ್ಥೆಯು ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕವನ್ನು ಪ್ರಕಟಿಸುತ್ತದೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ಬಹುತ್ವ, ನಾಗರಿಕ ಸ್ವಾತಂತ್ರ್ಯ, ಚುನಾವಣಾ ಪ್ರಕ್ರಿಯೆ ಯಲ್ಲಿ ಜನರ ಭಾಗವಹಿಸುವಿಕೆಯ ಪ್ರಮಾಣ ಮೊದಲಾದ ವಿಷಯಗಳ ಆಧಾರದಲ್ಲಿ ಈ ಸೂಚ್ಯಂಕವನ್ನು ಇಐಯು ಸಂಸ್ಥೆಯು ಪ್ರಕಟಿಸುತ್ತದೆ. ಈ ಸಂಸ್ಥೆಯ ಪ್ರಕಾರ ನಾರ್ವೆ, ನ್ಯೂಜಿ ಲ್ಯಾಂಡ್, ಸ್ವೀಡನ್, ಐಸ್ಲ್ಯಾಂಡ್, ಡೆನ್ಮಾರ್ಕ್, ಆಸ್ಟ್ರೇಲಿಯಾ ಮೊದಲಾದ ದೇಶಗಳು ಪರಿಪೂರ್ಣ ಪ್ರಜಾಪ್ರಭುತ್ವ ದೇಶಗಳ ಅಡಿಯಲ್ಲಿ ಬರುತ್ತವೆ. ಅಮೆರಿಕ, ಭಾರತ, ಬ್ರೆಜಿಲ್ ಮೊದಲಾದ ದೇಶಗಳು ದೋಷಪೂರಿತ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಗುರುತಿಸಲ್ಪಟ್ಟಿವೆ.
ಪಾಕಿಸ್ತಾನ, ಬಾಂಗ್ಲಾದೇಶದಂತಹ ದೇಶಗಳು ಹೈಬ್ರಿಡ್ ಆಡಳಿತ ದೇಶಗಳ ವಿಭಾಗಕ್ಕೆ ಸೇರುತ್ತವೆ. ಚೀನಾ, ರಷ್ಯಾ, ಟರ್ಕಿ ಮೊದಲಾದ ದೇಶಗಳು ಸರ್ವಾಧಿಕಾರಿ ದೇಶಗಳ ಪಟ್ಟಿಗೆ ಸೇರಿಸಲ್ಪಟ್ಟಿವೆ.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಕೊರತೆಗಳಿಂದ ಹೊರತಾಗಿಲ್ಲ. ರಾಜಕೀಯ ಪಕ್ಷಗಳು ಮತದಾರರಿಗೆ ಹಣ, ಹೆಂಡಗಳನ್ನು, ಸೀರೆ, ಕುಕ್ಕರ್‌ಗಳನ್ನು ಹಂಚಿ ಮತ ಖರೀದಿ ಮಾಡುವುದು ಇಲ್ಲಿ ಹಿಂದಿನಿಂದಲೂ ನಡೆದುಕೊಂಡುಬಂದ ಪರಿಪಾಠ. ಇದಕ್ಕಾಗಿಯೇ ಚುನಾವಣೆಗಳಿಗಾಗಿ ಕಾಯುವ ಮತದಾರರಿದ್ದಾರೆ. ಇಂತಹ ಮತದಾರಿಗೆ ಅಭ್ಯರ್ಥಿಯ ಯೋಗ್ಯತೆ ಅಥವಾ ಅಯೋಗ್ಯತೆ ಪರಿಗಣನೆಗೆ ಬರುವುದೇ ಇಲ್ಲ.
ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡುವ ಮತದಾರ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯುವುದಾದರೂ ಎಂತು? ಇನ್ನು ಉಚಿತಗಳ ಭರವಸೆಗಳಿಗೆ ಬಲಿಯಾಗುವ ಮತದಾ ರರದ್ದು ಇನ್ನೊಂದು ಕಥೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಉಚಿತಗಳ ಭರವಸೆಯನ್ನು ನೀಡಿ ಮತದಾರರಿಗೆ ಆಮಿಷ ಒಡ್ಡುವುದು ಬಹಳ ಸರ್ವೇಸಾಮಾನ್ಯವಾದ ವಿಷಯ.
ಮಹಿಳೆಯರಿಗೆ ಪ್ರತೀ ತಿಂಗಳು ಹಣ ಕಳುಹಿಸುವುದು, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಇಂತಹ ಭರವಸೆಗಳಿಗೆ ಮತದಾರರು ಬಹಳ ಸುಲಭವಾಗಿ ಬಲಿಯಾಗುತ್ತಾರೆ. ಆದರೆ ಇಂತಹ ಉಚಿತ ಯೋಜನೆಗಳು ಸರಕಾರದ ಬೊಕ್ಕಸವನ್ನು ಬರಿದು ಮಾಡುವುದೇ ವಿನಃ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯಾವುದೇ ಸಹಾಯ ಮಾಡುವುದಿಲ್ಲ.
ಉದಾಹರಣೆಗೆ ಇತ್ತೀಚೆಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ಜೋಸೆಫ್ ವಿಜಯ್‌ನ ಪಕ್ಷ ನೀಡಿರುವ ಉಚಿತ ಭರವಸೆಗಳ ಪ್ರಮಾಣವನ್ನು ಗಮನಿಸಿದರೆ ಆ ಎಲ್ಲ ಭರವಸೆಗಳನ್ನು ಈಡೇರಿಸಲು ವಾಷಿ ಕವಾಗಿ ಸುಮಾರು 1.2 ಲಕ್ಷ ಕೋಟಿ ರುಪಾಯಿಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಮೊತ್ತ ತಮಿಳುನಾಡಿನ ವಾರ್ಷಿಕ ಆದಾಯದ ಮೂರನೇ ಒಂದರಷ್ಟಿದೆ!
ಉಚಿತಗಳಿಗಾಗಿ ತಮಿಳುನಾಡು ಸರಕಾರವು ಇಷ್ಟು ಮೊತ್ತವನ್ನು ವ್ಯಯಿಸಿದರೆ ಶಿಕ್ಷಣ, ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ಸಾಲುವುದಿಲ್ಲ. ರಾಜ್ಯದ ಸಾಲ ಇನ್ನಷ್ಟು ಹೆಚ್ಚಲಿದೆ. ಬಿಹಾರ, ಪಶ್ಚಿಮ ಬಂಗಾಳಗಳ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರತೀ ತಿಂಗಳು ಹಣ ಕೊಡುವ ಭರವಸೆಯನ್ನು ನೀಡಲಾಗಿತ್ತು.
ಉಚಿತಗಳ ಭರವಸೆ ಮತದಾರರನ್ನು ಮರುಳು ಮಾಡಬಲ್ಲವೇ ವಿನಃ ದೇಶ ಅಥವಾ ರಾಜ್ಯಗಳ ಅಭಿವೃದ್ಧಿಗೆ ಒಂದಿಷ್ಟೂ ಸಹಾಯಕವಾಗಲಾರವು. ಉಚಿತಗಳ ಭರವಸೆಯೊಂದಿಗೆ ಚುನಾವಣೆ ಗಳನ್ನು ಗೆಲ್ಲುವುದು ಆರೋಗ್ಯಯುತ ಪ್ರಜಾಪ್ರಭುತ್ವದ ಲಕ್ಷಣ ಅಲ್ಲವೇ ಅಲ್ಲ. ಇನ್ನು ಭಾರತದ ಚುನಾವಣೆಗಳಲ್ಲಿ ಜಾತಿ ಓಲೈಕೆ ಎನ್ನುವುದು ಹಾಸುಹೊಕ್ಕ ವಿಷಯವಾಗಿದೆ.
ಕ್ಷೇತ್ರಗಳಲ್ಲಿ ಯಾವ ಜಾತಿಯ ಜನಸಂಖ್ಯೆ ಹೆಚ್ಚಿರುತ್ತದೋ ಆ ಜಾತಿಯ ವ್ಯಕ್ತಿಗೇ ರಾಜಕೀಯ ಪಕ್ಷಗಳು ಚುನಾವಣಾ ಟಿಕೆಟ್ ಕೊಡುತ್ತವೆ. ಇದಕ್ಕೆ ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ, ಸೋಶಿಯಲ್ ಎಂಜಿನಿರಿಂಗ್ ಎಂದೆಲ್ಲ ವಿಶೇಷ ಪರಿಭಾಷೆಗಳನ್ನು ಕೊಟ್ಟರೂ, ಅದು ಓಟ್ ಬ್ಯಾಂಕ್ ರಾಜಕೀಯವಲ್ಲದೆ ಬೇರೆನೂ ಅಲ್ಲ.
ಜನರು ಅಭ್ಯರ್ಥಿಯ ಸಾಮರ್ಥ್ಯವನ್ನು ಗ್ರಹಿಸದೆ ಕೇವಲ ಜಾತಿ ನೋಡಿ ಮತದಾನ ಮಾಡಿ ಆಯ್ಕೆ ಮಾಡುತ್ತಾರೆ ಎಂದರೆ ಪ್ರಜಾಪ್ರಭುತ್ವದ ಗುಣಮಟ್ಟವು ಉಳಿಯುವುದಾದರೂ ಹೇಗೆ? ಇದೇ ರೀತಿ ಅಭ್ಯರ್ಥಿಯ ಧರ್ಮವೂ ಚುನಾವಣೆಗಳಲ್ಲಿ ಪ್ರಭಾವ ಬೀರುತ್ತದೆ. ತುಷ್ಟೀಕರಣ ರಾಜಕೀಯವು ಧಾರ್ಮಿಕ ವಿಭಜನೆಗೆ ಕಾರಣವಾಗುತ್ತದೆ. ವಂಶಾಡಳಿತ ನಡೆಸುವ ಹಲವು ರಾಜಕೀಯ ಪಕ್ಷಗಳು ದೇಶದಲ್ಲಿವೆ. ದೇಶದ ಶೇ.21ರಷ್ಟು ಎಂಪಿ, ಎಂಎಲ್‌ಎಗಳು ಸ್ವಜನ ಪಕ್ಷಪಾತದಿಂದಲೇ ಅಧಿಕಾರಕ್ಕೆ ಬಂದವರು. ರಾಜಕೀಯ ಪಕ್ಷಗಳಲ್ಲಿನ ವಂಶಪಾರಂಪರ್ಯ ನಾಯಕತ್ವ ವ್ಯವಸ್ಥೆ ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಒಂದು ಕಪ್ಪು ಚುಕ್ಕೆಯೇ ಸರಿ.
ಇಷ್ಟಲ್ಲ ಇದ್ದರೂ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊರತೆಗಳಿಂದಲೂ ಧನಾತ್ಮಕ ಅಂಶಗಳೇ ಹೆಚ್ಚಾಗಿವೆ. ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಸ್ವತಂತ್ರ ಚುನಾವಣಾ ಆಯೋಗವು ಭಾರತದಲ್ಲಿದೆ. ಜಗತ್ತಿನ ಅತೀ ದೊಡ್ಡ ಪ್ರಜಾ ಪ್ರಭುತ್ವದಲ್ಲಿ ಇಷ್ಟು ವ್ಯವಸ್ಥಿತವಾಗಿ ಚುನಾವಣೆಗಳು ನಡೆಯುವುದೇ ಒಂದು ದೊಡ್ಡ ಸಾಧನೆ. ಇಲ್ಲಿ ಮತದಾರನಿಗೆ ಭಯಮುಕ್ತ ವಾತಾವರಣವನ್ನು ನಿರ್ಮಿಸಲು ಆಯೋಗವು ಸದಾ ಕಟಿಬದ್ಧ.
ಇದು ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಮತದಾರರು ಮನೆಬಿಟ್ಟು ಮತಗಟ್ಟೆಗೆ ಬರಲು ಹೆದರುವ ವಾತಾವರಣವಿದ್ದ ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಪಡೆಯನ್ನು ನಿಯೋಜಿಸಿ ಸರಿ ಸುಮಾರು ಶೇ.93ರಷ್ಟು ಮತದಾನ ವಾಗುವಂತೆ ಮಾಡುವಲ್ಲಿ ಆಯೋಗವು ಯಶಸ್ವಿಯಾಗಿದೆ.
ವಿರೋಧ ಹಾಗೂ ಕಾನೂನು ಹೋರಾಟಗಳ ನಡುವೆಯೂ ಚುನಾವಣಾ ಆಯೋಗವು 10 ರಾಜ್ಯ ಗಳಲ್ಲಿ ಮತಪಟ್ಟಿಯನ್ನು ಎಸ್‌ಐಆರ್ ಮೂಲಕ ಪರಿಷ್ಕರಿಸಿ ನಕಲಿ ಮತದಾರರನ್ನು ಪಟ್ಟಿಯಿಂದ ಹೊರಹಾಕುವಲ್ಲಿ ಯಶಸ್ವಿಯಾಗಿದೆ. ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಭಾರತದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಬಹಳ ಸುಗಮವಾಗಿ ನಡೆಯುತ್ತದೆ. ಕೇಂದ್ರ ಸರಕಾರವಾಗಲಿ, ರಾಜ್ಯಸರಕಾರಗಳಾಗಲಿ, ಅಧಿಕಾರ ಕಳೆದುಕೊಂಡ ರಾಜಕೀಯ ಪಕ್ಷಗಳು ಯಾವುದೇ ತಗಾದೆಯನ್ನು ಮಾಡದೆ ಗೆದ್ದವರಿಗೆ ಅಧಿಕಾರವನ್ನು ಬಿಟ್ಟುಕೊಡುತ್ತವೆ. ಇಲ್ಲಿ ಕಡ್ಡಾಯವಾಗಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದೇ ನಡೆಯುತ್ತದೆ.
ಬಹುತೇಕ ಸಂದರ್ಭಗಳಲ್ಲಿ ಕೆಲಸ ಮಾಡದ ಅಭ್ಯರ್ಥಿಗಳನ್ನು ಅಥವಾ ಸರಕಾರಗಳನ್ನು ಮತದಾರರು ತಿರಸ್ಕರಿಸಿ ಕೆಳಗಿಳಿಸುತ್ತಾರೆ. ಉತ್ತಮವಾಗಿ ಕೆಲಸಮಾಡುವ ಪಕ್ಷಗಳನ್ನು ಹಲವು ಅವಧಿಗಳವರೆಗೆ ಮುಂದುವರಿಸುವ ಪ್ರಜ್ಞಾವಂತಿಕೆಯೂ ಭಾರತೀಯ ಮತದಾರನಲ್ಲಿದೆ.
ಎಲ್ಲದಕ್ಕಿಂತಲೂ ಮಿಗಿಲಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂವಿಧಾನದ ಚೌಕಟ್ಟಿ ನೊಳಗೆ ಭದ್ರವಾಗಿದೆ ಎನ್ನಬಹುದು. ಸ್ವತಂತ್ರವಾಗಿರುವ ನ್ಯಾಯಾಂಗ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದೇ ಕುಂದು ಉಂಟಾಗದಂತೆ ಕಣ್ಗಾವಲಿಡುತ್ತದೆ. ಎಲ್ಲೋ ಒಂದು ಕಡೆ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಕುಂದು ಉಂಟಾಗಿದೆ ಎಂದು ಯಾರಿಗಾದರೂ ಅನಿಸಿದರೆ ಅವರಿಗೆ ಅದನ್ನು ನ್ಯಾಯಾಲಯಗಳ ಮೂಲಕ ಪ್ರಶ್ನಿಸುವ ಹಾಗೂ ಸರಿಪಡಿಸಿಕೊಳ್ಳುವ ವ್ಯವಸ್ಥೆಯನ್ನು ನಮ್ಮ ನ್ಯಾಯಾಂಗವು ಕಲ್ಪಿಸಿದೆ.
ನಮ್ಮ ನೆರೆಹೊರೆಯ ದೇಶಗಳಲ್ಲಿ ದೇಶದ ಆಡಳಿತದಲ್ಲಿ ಆ ದೇಶಗಳ ಮಿಲಿಟರಿಯು ಸದಾ ಹಸ್ತಕ್ಷೇಪ ನಡೆಸುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಭಾರತದಲ್ಲಿ ಯಾವತ್ತೂ ಮಿಲಿಟರಿಯು ಆಡಳಿತದಲ್ಲಿ ತಲೆಹಾಕಲೇ ಇಲ್ಲ. ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿ ಆರಾಜಕತೆ ಯನ್ನು ಸೃಷ್ಟಿಸಿದ ಸಂದರ್ಭದಲ್ಲಿ ಮಿಲಿಟರಿಗೆ ಆಡಳಿತ ವ್ಯವಸ್ಥೆಯನ್ನು ತನ್ನ ಕೈಗೆ ತೆಗೆದುಕೊಳ್ಳ ಬಹುದಿತ್ತು.
90ರ ದಶಕದಲ್ಲಿ ಕೇಂದ್ರದಲ್ಲಿ 5 ಸರಕಾರಗಳು ಉರುಳಿ ಹೋಗಿ ಉಂಟಾದ ನಾಯಕತ್ವದ ನಿರ್ವಾತ ಹಾಗೂ ರಾಜಕೀಯ ಅಸ್ಥಿರಗಳು ಉಂಟಾದ ಸಂದರ್ಭದಲ್ಲಿ ಮಿಲಿಟರಿಗೆ ಮಧ್ಯ ಪ್ರವೇಶಿಸುವ ಅವಕಾಶವಿತ್ತು. ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರದ ಅವಧಿಯಲ್ಲಿ ಸಾಲು ಸಾಲು ಭ್ರಷ್ಟಾಚಾರ ನಡೆದು ಜನರು ಸರಕಾರದ ವಿರುದ್ಧ ದಂಗೆಯೆದ್ದ ಸಂದರ್ಭದಲ್ಲಿಯೂ ಮಿಲಿಟರಿಗೆ ಅವಕಾಶವಿತ್ತು. ಆದರೆ ಈ ಎಲ್ಲ ಸಂದರ್ಭಗಳಲ್ಲೂ ಸಂಯಮವನ್ನು ತೋರಿದ ಮಿಲಿಟರಿಯು ಅಧಿಕಾರದ ಪಡಸಾಲೆಗೆ ಪ್ರವೇಶಿಸುವ ಯಾವುದೇ ಪ್ರಯತ್ನವನ್ನು ಮಾಡದೆ ತನ್ನ ಸಾಂವಿಧಾನಿಕ ಬದ್ಧತೆಯನ್ನು ಮೆರೆಯಿತು.
ಇದು ಭಾರತದ ಪ್ರಜಾಪ್ರಭುತ್ವದ ಬದ್ಧತೆಯನ್ನು ತೋರುತ್ತದೆ. ಯಾವುದೋ ಒಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಹೆಸರಿನ ಸಂಸ್ಥೆಯು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸರಿ ಇಲ್ಲ ಎಂದು ಹೇಳಿದರೆ ನಾವು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಅಂತಹ ಸಂಸ್ಥೆಗಳು ಇಲ್ಲಿನ ಎನ್‌ಜಿಓಗಳು ಕೊಡುವ ನಕಾರಾತ್ಮಕ ವರದಿಗಳು, ವಿರೋಧ ಪಕ್ಷಗಳು ಮಾಡುವ ಸುಳ್ಳೇ ಸುಳ್ಳು ಆರೋಪಗಳು ಮೊದಲಾದವುಗಳ ಆಧಾರದಲ್ಲಿ ಸೂಚ್ಯಂಕಗಳನ್ನು ಕೊಡುತ್ತಾರೆ.
ಸರಿ ಸುಮಾರು 100 ಕೋಟಿ ಮತದಾರರು ಇರುವ, ಜಗತ್ತಿನ ಪ್ರಮುಖ ಧರ್ಮಗಳ ಜನರನ್ನು ಹೊಂದಿರುವ, ನೂರಾರು ಬುಡಕಟ್ಟು ಜನರು, ಜಾತಿ, ಭಾಷೆ, ಸಂಸ್ಕೃತಿ ವೈವಿಧ್ಯತೆಯ ದೇಶ ಒಂದು ಸಂವಿಧಾನದ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದರೆ ಅದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ಸಲ್ಲದೇ ಮತ್ತೇನು?