Lokesh Kayarga Column: ಕನ್ನಡಿಗರು ಇನ್ನೆಷ್ಟು ಉದಾರಿಗಳಾಗಬೇಕು ?
ಅನ್ಯರಾಜ್ಯಗಳ ವಿಚಾರದಲ್ಲಿ ನಾವು ಸಹೋದರತೆಯ ಭಾವದಿಂದ ವರ್ತಿಸದೆ, ರಾಜ್ಯದ ಹಿತಾಸಕ್ತಿ ಯೊಂದನ್ನೇ ಮುಂದಿಟ್ಟುಕೊಂಡು ಸಾಗಿದ್ದರೆ ಚೆನ್ನೈ ನಗರಕ್ಕೆ ಕುಡಿಯುವ ನೀರು ಕಲ್ಪಿಸಿದ ತೆಲುಗು-ಗಂಗಾ ಯೋಜನೆಗೆ ಕರ್ನಾಟಕ ಅಡ್ಡಗಾಲು ಹಾಕಬಹುದಿತ್ತು. ತಮಿಳುನಾಡಿನ ಹೊಗೇನಕಲ್ ಯೋಜನೆ ಯನ್ನು ತಡೆಯಬಹುದಿತ್ತು. ಆದರೆ ನಮ್ಮ ಅಮಾಯಕತನ ಮತ್ತು ಅಸಡ್ಡೆ ನೆರೆ ರಾಜ್ಯಗಳಿಗೆ ಅನುಕೂಲವಾಗಿದೆ.

ಕಾರ್ಯನಿರ್ವಾಹಕ ಸಂಪಾದಕ ಹಾಗೂ ಅಂಕಣಕಾರ ಲೋಕೇಶ್ ಕಾಯರ್ಗ

ಲೋಕಮತ
ಕಾವೇರಿ ವಿವಾದ ಮತ್ತೊಮ್ಮೆ ಭುಗಿಲೆದ್ದ ಕಾಲವದು. 2012ರಲ್ಲಿ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮಿಳುನಾಡಿಗೆ ದಿನಕ್ಕೆ 9,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದರು. ಇದನ್ನು ಒಪ್ಪದ ಕರ್ನಾಟಕ ಉನ್ನತ ಮಟ್ಟದ ಸಭೆಯಿಂದ ಹೊರ ನಡೆದಿತ್ತು. ಮುಂದೆ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗ, ನ್ಯಾಯಮೂರ್ತಿಯೊಬ್ಬರು, ‘‘ಕರ್ನಾಟಕ ತನ್ನ ನೆರೆಹೊರೆಯ ಎಲ್ಲ ರಾಜ್ಯಗಳೊಂದಿಗೆ ವಿವಾದ ಹೊಂದಿದೆ. ನಿಮ್ಮದು ಜಗಳಗಂಟಿ ರಾಜ್ಯ’ ಎಂದು ರಾಜ್ಯವನ್ನು ಪ್ರತಿನಿಧಿಸುವ ವಕೀಲರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇತಿಹಾಸದುದ್ದಕ್ಕೂ ತಮ್ಮ ಹೃದಯ ವೈಶಾಲ್ಯ ಮತ್ತು ಉದಾರತೆಗೆ ಹೆಸರಾದ ಕನ್ನಡಿಗರು ವಿನಾ ಕಾರಣ ಈ ರೀತಿಯ ಅಪವಾದ ಹೊತ್ತುಕೊಳ್ಳಬೇಕಾಯಿತು. ನೆಲ, ಜಲ, ಭಾಷೆಯ ವಿಚಾರದಲ್ಲಿ ಬಹುಶ: ಕರ್ನಾಟಕಕ್ಕೆ ಆಗಿರುವಷ್ಟು ಅನ್ಯಾಯ ಇನ್ನಾವುದೇ ರಾಜ್ಯಕ್ಕೆ ಆಗಿರುವ ಸಾಧ್ಯತೆ ಇಲ್ಲ. ಕಾವೇರಿ, ಕೃಷ್ಣಾ , ಮಹದಾಯಿ ಜಲವಿವಾದದಿಂದ ಹಿಡಿದು ಇತ್ತೀಚಿನ ಪಿನಾಕಿನಿ ನದಿ ನೀರು ಹಂಚಿಕೆ ವಿವಾದದವರೆಗೂ ನಾವು ಸಂತ್ರಸ್ತರು. ಇಲ್ಲಿ ನೆರೆ ರಾಜ್ಯಗಳ ಹಠಮಾರಿತನ ಮಾತ್ರವಲ್ಲ ನಮ್ಮ ಉದಾರ ಮತ್ತು ಉಡಾಫೆ ನೀತಿಯಿಂದಲೂ ನಾವು ಅನ್ಯಾಯಕ್ಕೆ ಒಳಗಾಗಿದ್ದೇವೆ.
ಇದನ್ನೂ ಓದಿ: Lokesh Kaayarga Column: ಅವರ ತೆಕ್ಕೆಯಲ್ಲಿ ಕರಗಿದ್ದು ನಮ್ಮ ಮಾನಧನ !
ನಮ್ಮ ನಾಯಕರ ಕಾರಣದಿಂದ ಮತ್ತೊಮ್ಮೆ ಈ ಅನ್ಯಾಯದ ಪರಂಪರೆ ಮುಂದುವರಿಯುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡುವ ವಿಚಾರದಲ್ಲಿ ನಮ್ಮ ನಾಯಕರು ನೀಡುತ್ತಿರುವ ಎಡಬಿಡಂಗಿ ಹೇಳಿಕೆಗಳನ್ನು ಗಮನಿಸಿದರೆ ಕೇರಳ ಲಾಬಿಗೆ ಮಣೆ ಹಾಕುವುದು ಖಚಿತವಾಗಿದೆ. ಇನ್ನೊಂದೆಡೆ ಛತ್ತೀಸ್‌ಗಢದ ತಮ್ಮಾರ್‌ನಿಂದ ಗೋವಾಕ್ಕೆ ವಿದ್ಯುತ್ ಪ್ರಸರಣಕ್ಕೆ ಅವಕಾಶ ನೀಡುವ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಕರ್ನಾಟಕದ 435 ಎಕರೆ ಅರಣ್ಯ ಪ್ರದೇಶ ಒದಗಿಸುವ ಪ್ರಸ್ತಾವವನ್ನು ಸರಕಾರ ಸದ್ದಿಲ್ಲದೆ ಒಪ್ಪಿಕೊಂಡಿದೆ. ರಾಜ್ಯ ಅರಣ್ಯಇಲಾಖೆ ಕಳೆದ ಮಾರ್ಚ್‌ನಲ್ಲಿ ತಿರಸ್ಕರಿಸಿದ್ದ ಈ ಯೋಜನೆಗೆ ಈಗ ಒಪ್ಪಿಗೆ ದೊರೆತಿರುವುದು ಹೇಗೆ ಎನ್ನುವುದು ಅಚ್ಚರಿಯ ಸಂಗತಿ.
ಹುಲಿ ಕಾಡೊಳಗೆ ವಿದ್ಯುತ್ ಲೈನ್
ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಉದ್ದೇಶಿಸಿರುವ ‘ಗೋವಾ-ತವ್ಮಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ಧಾರವಾಡ ಜಿಲ್ಲೆಯಲ್ಲಿ 4.70 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್, ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇರ್ ಅರಣ್ಯವನ್ನು ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಮಾರ್ಗವು ಭದ್ರಾ ಹುಲಿ ಕಾರಿಡಾರ್, ಕಾಳಿ ಹುಲಿ ಮೀಸಲಿನ ಪರಿಸರ ಸೂಕ್ಷ್ಮ ಪ್ರದೇಶ, ದಾಂಡೇಲಿ ಅಭಯಾರಣ್ಯ ಹಾಗೂ ದಾಂಡೇಲಿ ಆನೆಧಾಮದ ಮೂಲಕ ಹಾದುಹೋಗಲಿದ್ದು 72000 ಕ್ಕೂ ಹೆಚ್ಚಿನ ಮರಗಳನ್ನು ಬಲಿ ಪಡೆಯಲಿದೆ. ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ 177 ಹೆಕ್ಟೇರ್ ದಟ್ಟ ಕಾಡು ನಾಶವಾಗಲಿದೆ.

ಗೋವಾ ತವ್ಮಾರ್ ಯೋಜನೆಯು ರಾಷ್ಟ್ರೀಯ ವಿತರಣಾ ಜಾಲದ ಯೋಜನೆಯಾಗಿದ್ದು, ಇದಕ್ಕೆ ಸಹಕಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಮಹದಾಯಿ ಯೋಜನೆಗೆ ಅನುಮೋದನೆ ಕೊಟ್ಟರೆ ಗೋವಾ-ತವ್ಮಾರ್‌ಗೆ ಸಹಕಾರ ನೀಡುವುದಾಗಿ ಸಿಎಂ ಮರುಪತ್ರ ಬರೆದು ಸ್ಪಷ್ಟಪಡಿಸಿದ್ದರು. ಒಂದು ವೇಳೆ ಗೋವಾ ಪರಿಸರ ಹಾನಿ ನೆಪವನ್ನು ಮುಂದಿಟ್ಟುಕೊಂಡು ಕಳಸಾ ಯೋಜನೆಯನ್ನು ವಿರೋಧಿಸಿದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾದು ಹೋಗಲಿರುವ ಗೋವಾ-ತವ್ನಾರ್ ಪ್ರಸರಣ ಯೋಜನೆಗೆ ಕರ್ನಾಟಕ ಅನುಮೋದನೆ ನೀಡುವುದಿಲ್ಲ ಎಂದು ಈ ಪತ್ರದಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಆದರೆ ಮಹದಾಯಿ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯುವ ರಾಜ್ಯದ ಪ್ರಯತ್ನ ಇನ್ನೂ ಈಡೇರಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮಂಡಳಿಯ 79ನೇ ಸಭೆಯಲ್ಲಿ ಮಹದಾಯಿ ಯೋಜನೆಯ ಪ್ರಸ್ತಾಪವನ್ನು ಬದಿಗಿಟ್ಟು, ಗೋವಾ-ತವ್ಮಾರ್ ಯೋಜನೆಗೆ ಷರತ್ತುಬದ್ಧ ಅನುಮೋದನೆ ನೀಡಲಾಗಿದೆ. ಮಹದಾಯಿ ಜಲ ವಿವಾದ ನ್ಯಾಯ ಮಂಡಳಿ ಕಳಸಾ- ಬಂಡೂರಿ ನಾಲಾ ಮೂಲಕ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಲು 2018ರಲ್ಲಿಯೇ ಅನುಮೋದನೆ ನೀಡಿದೆ. ಆದರೆ ವನ್ಯಸಂಪತ್ತಿನ ನಷ್ಟ ವನ್ನು ಮುಂದಿಟ್ಟುಕೊಂಡು ಗೋವಾ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಉತ್ತರ ಕರ್ನಾಟಕ ಜನತೆಯ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಯೋಜನೆ ಇನ್ನೂ ಕನಸಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಕುಸಿತವಾಗುತ್ತಿದೆ ಎಂಬ ವರದಿಗಳ ನಡುವೆ ಹುಲಿ ಮೀಸಲು ಅರಣ್ಯದಲ್ಲಿ ಗೋವಾದ ಯೋಜನೆ ಜಾರಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ. ಈಗ ಹೇಳಿ ಕನ್ನಡಿಗರಷ್ಟು ಉದಾರಿಗಳು ಇನ್ನಾರಿದ್ದಾರೆ ?
ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿದ್ದ ಕಾರಣಕ್ಕೆ ಇವು ಕೇಂದ್ರದ ಮೇಲೆ ಒತ್ತಡ ಹೇರಿ ತಮ್ಮ ಯೋಜನೆಗಳಿಗೆ ಅನುಮತಿ ಪಡೆದುಕೊಳ್ಳುತ್ತಿವೆ ಎನ್ನುವುದು ಇಲ್ಲಿವರೆಗೆ ಕೇಳಿ ಬರುತ್ತಿರುವ ಮಾತಾಗಿತ್ತು. ಆದರೆ ಕೇವಲ ಇಬ್ಬರು ಲೋಕಸಭಾ ಸದಸ್ಯರನ್ನು ಹೊಂದಿರುವ ಗೋವಾ ಕೇಂದ್ರದ ಮೇಲೆ ಒತ್ತಡ ಹೇರಿ ತನ್ನ ಕಾರ್ಯ ಸಾಧಿಸಿಕೊಳ್ಳು ತ್ತಿದೆ. ಆದರೆ 28 ಸಂಸದರ ಬಲವಿದ್ದರೂ ಕರ್ನಾಟಕದ ಯಾವ ಯೋಜನೆಗಳಿಗೂ ಕೇಂದ್ರ ಮಟ್ಟದಲ್ಲಿ ಅನುಮತಿ ಸಿಗುತ್ತಿಲ್ಲ.
ಅನ್ಯರಾಜ್ಯಗಳ ವಿಚಾರದಲ್ಲಿ ನಾವು ಸಹೋದರತೆಯ ಭಾವದಿಂದ ವರ್ತಿಸದೆ, ರಾಜ್ಯದ ಹಿತಾಸಕ್ತಿ ಯೊಂದನ್ನೇ ಮುಂದಿಟ್ಟುಕೊಂಡು ಸಾಗಿದ್ದರೆ ಚೆನ್ನೈ ನಗರಕ್ಕೆ ಕುಡಿಯುವ ನೀರು ಕಲ್ಪಿಸಿದ ತೆಲುಗು-ಗಂಗಾ ಯೋಜನೆಗೆ ಕರ್ನಾಟಕ ಅಡ್ಡಗಾಲು ಹಾಕಬಹುದಿತ್ತು. ತಮಿಳುನಾಡಿನ ಹೊಗೇ ನಕಲ್ ಯೋಜನೆಯನ್ನು ತಡೆಯಬಹುದಿತ್ತು. ಹಿಂದೊಮ್ಮೆ ಇದೇ ಗೋವಾ ಮಹದಾಯಿ ಯೋಜನೆಗೆ ತನ್ನ ಅನುಮತಿ ನೀಡಿತ್ತು. ಉಲ್ಟಾ ಹೊಡೆಯುವ ಸಾಧ್ಯತೆ ತಿಳಿದಿದ್ದರೆ ಅಂದೇ ತ್ವರಿತವಾಗಿ ನಾಲಾ ಕೆಲಸ ಮುಗಿಸಿ ಬಿಡಬಹುದಿತ್ತು. ಆದರೆ ನಮ್ಮ ಅಮಾಯಕತನ ಮತ್ತು ಅಸಡ್ಡೆ ನೆರೆ ರಾಜ್ಯಗಳಿಗೆ ಅನುಕೂಲವಾಗಿದೆ.
ಸದ್ಯ ಕೇಂದ್ರದ ಅನುಮತಿ ಬಾಕಿ ಇರುವ, ಅನ್ಯ ರಾಜ್ಯಗಳು ತಗಾದೆ ತೆಗೆದಿರುವ ಯೋಜನೆಗಳನ್ನೇ ತೆಗೆದುಕೊಳ್ಳಿ. ಮೇಕೆದಾಟು ಹಲವು ದಶಕಗಳ ಹಿಂದೆಯೇ ಜಾರಿಯಾಗಬೇಕಿದ್ದ ಯೋಜನೆ. ಈ ಅಣೆಕಟ್ಟೆಯಿಂದ ನಮಗಿಂತಲೂ ತಮಿಳುನಾಡಿಗೆ ಹೆಚ್ಚು ಅನುಕೂಲ. ಆದರೆ ರಾಜಕೀಯ ಕಾರಣಗಳಿಗಾಗಿ ಅಲ್ಲಿನ ಸರಕಾರ ಈ ಯೋಜನೆಗೆ ಅಡ್ಡಗಾಲು ಹಾಕಿದೆ. ಆಲಮಟ್ಟಿ ಅಣೆಕಟ್ಟನ್ನು 524.25 ಮೀಟರ್‌ಗೆ ಎತ್ತರಿಸಲು ಸುಪ್ರೀಂಕೋರ್ಟ್ ಹಲವು ವರ್ಷಗಳ ಹಿಂದೆಯೇ ಅನುಮತಿ ನೀಡಿದೆ. ಇದರ ಗೆಜೆಟ್ ನೋಟಿಫಿಕೇಶನ್‌ಗೆ ಕೇಂದ್ರ ಸರಕಾರ ಇನ್ನೂ ಮನಸ್ಸು ಮಾಡಿಲ್ಲ. ಈಗ ಆಂಧ್ರಪ್ರದೇಶ, ಮಹಾರಾಷ್ಟ್ರದ ಜತೆ ತೆಲಂಗಾಣವೂ ಈ ವ್ಯಾಜ್ಯದಲ್ಲಿ ಭಾಗಿಯಾಗಿವೆ. ದಶಕಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಹಪಹಪಿಸುವ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಜನತೆಗೆ ಆಸರೆಯಾಗಬಹುದಾಗಿದ್ದ ದಕ್ಷಿಣ ಪಿನಾಕಿನಿ ಯೋಜನೆಗೂ ಈಗ ತಮಿಳುನಾಡು ತಕರಾರು ಎತ್ತಿದೆ.
ನೆರೆ ರಾಜ್ಯಗಳು ಬೆಳೆ ಸಂರಕ್ಷಣೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಕೇಳಿದಾಗ ಉದಾರವಾಗಿ ನೀರು ಕೊಟ್ಟವರು ನಾವು. ಆದರೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಬಿಡುಗಡೆ ಮಾಡಿಸಿಕೊಳ್ಳಲು ನಾವು ನೆರೆ ರಾಜ್ಯಕ್ಕೆ ಹಣ ತೆತ್ತಿರುವ ಉದಾಹರಣೆಗಳಿವೆ. ನಮ್ಮ ಉದಾರ ಚರಿತೆಯ ಬಗ್ಗೆ ಒಂದಿಷ್ಟು ಮಾಹಿತಿ ಇದ್ದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರು ಕರ್ನಾಟಕವನ್ನು ಜಗಳಗಂಟಿ ಎಂದು ಕರೆಯುತ್ತಿರಲಿಲ್ಲ. ಕಾಸರಗೋಡು ಅಪ್ಪಟ ಕನ್ನಡ ನೆಲವೆಂದು ಗೊತ್ತಿದ್ದರೂ, ನಾವು ಈ ಭಾಗವನ್ನು ಉಳಿಸಿಕೊಳ್ಳಲು ಹಠ ಹಿಡಿಯಲಿಲ್ಲ. ಬೆಂಗಳೂರು-ಮುಂಬೈ ನಡುವೆ ಸಂಪರ್ಕ ಸೇತುವಾಗಬೇಕಿದ್ದ ಕೊಂಕಣ ರೈಲ್ವೆಯನ್ನು ಕೇರಳ ಪೂರ್ತಿಯಾಗಿ ತನ್ನ ಅನುಕೂಲಕ್ಕೆ ಬಳಸಿಕೊಂಡರೂ ನಾವು ಕಮಕ್, ಕಿಮಕ್ ಅಂದಿಲ್ಲ. ಇನ್ನೊಂದೆಡೆ ನಮ್ಮದೇ ನೆಲ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೂ ಸಹಿಸಿ ಕೊಂಡು ಬಂದಿದ್ದೇವೆ. ನಮ್ಮ ರಾಜಧಾನಿ ಬೆಂಗಳೂರನ್ನೂ ಇಡಿಯಾಗಿ ಅಖಿಲ ಭಾರತೀಯರಿಗೆ ಬಿಟ್ಟುಕೊಟ್ಟಿದ್ದೇವೆ. ನಾವು ಇನ್ನೆಷ್ಟು ಉದಾರಿಗಳಾಗಲು ಸಾಧ್ಯ ?
ಬಂಡೀಪುರದಲ್ಲಿ ಕೇರಳ ಬಂಡಿ
ಬಂಡೀಪುರ ಅರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ದೊರೆತರೆ ನಮ್ಮ ನಮ್ಮ ಹೃದಯ ವೈಶಾಲ್ಯಕ್ಕೆ ಇನ್ನೊಂದು ಗರಿ ಮೂಡ ಬಹುದು. ವಯನಾಡು ಲೋಕಸಭೆ ಉಪ ಚುನಾವಣೆ ವೇಳೆ, ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ‘ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ವಿಚಾರ ನನಗೆ ಬಿಡಿ’ ಎಂದು ಹೇಳಿದ್ದರು. ಇಲ್ಲಿನ ಸಂಸದೆಯಾಗಿ ಆಯ್ಕೆಯಾದ ತಮ್ಮ ನಾಯಕಿಯ ಮಾತನ್ನು ನೆರವೇರಿಸಲು, ರಾಜ್ಯದ ನಾಯಕರು ಈ ವಿಚಾರ ನಮಗೆ ಬಿಡಿ ಎಂದಿದ್ದಾರೆ.
ಮೊನ್ನೆ ದಿಲ್ಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ, ಎರಡೂ ರಾಜ್ಯಗಳ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಬಂಡೀಪುರದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದ್ದರು. ಡಿಸಿಎಂ ಡಿಕೆ ಶಿವ ಕುಮಾರ್ ಅವರಂತೂ ವಯನಾಡಿನ ನೆಲದಲ್ಲಿಯೇ ವಾಹನ ಸಂಚಾರ ನಿಷೇಧ ತೆರವು ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದರು.
ಬಂಡೀಪುರ ಅಭಯಾರಣ್ಯ ದೇಶದಲ್ಲಿಯೇ ಅತಿ ಹೆಚ್ಚು ಹುಲಿ, ಆನೆಗಳು ಮತ್ತು ಇತರ ಸಸ್ತನಿಗಳ ಆವಾಸ ಸ್ಥಾನವಾಗಿರುವುದು ನಮ್ಮ ಸಚಿವರಿಗೆ ತಿಳಿಯದ ವಿಚಾರವೇನಲ್ಲ. ಈ ಅಭಯಾರಣ್ಯ ದೊಳಗೆ ಹಾದು ಹೋಗುವ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸುವ ಮುಂಚೆ 2004-2009ರ ನಡುವೆ 93 ವನ್ಯ ಪ್ರಾಣಿಗಳು ರಸ್ತೆ ಅವಘಡದಲ್ಲಿ ಮೃತಪಟ್ಟಿದ್ದವು. ನಿಷೇಧ ಹೇರಿದ ಬಳಿಕ 2010-2018ರಲ್ಲಿ ಈ ಸಂಖ್ಯೆ 34ಕ್ಕೆ ಇಳಿದಿತ್ತು. ಈ ಕಾರಣಕ್ಕಾಗಿಯೇ ಸುಪ್ರೀಕೋರ್ಟ್ ಸಂಚಾರ ನಿರ್ಬಂಧದ ರಾಜ್ಯದ ತೀರ್ಮಾನವನ್ನು ಎತ್ತಿ ಹಿಡಿದಿದೆ.
ಕೇರಳ ಸರಕಾರ ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಬಾಕಿ ಇರುವಾಗಲೇ ಎರಡೂ ರಾಜ್ಯಗಳ ಬಾಂಧವ್ಯದ ಮೇಲೆ ತೀರ್ಮಾನ ಕೈಗೊಳ್ಳಲು ರಾಜ್ಯಸರಕಾರ ಕ್ಕೂ ಅವಕಾಶವಿಲ್ಲ. ಆದರೆ ರಾಜ್ಯದ ನಾಯಕರು ತಮ್ಮ ನಾಯಕಿಯ ಮಾತನ್ನು ನೆರವೇರಿಸಲೇ ಬೇಕೆಂಬ ಹುಮ್ಮಸ್ಸು ತೋರಿದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯದ ವಾದವನ್ನು ದುರ್ಬಲ ಗೊಳಿಸಲು ಅವಕಾಶವಿದೆ. ಅರಣ್ಯ ನಾಶದ ನೆಪ ಇಟ್ಟುಕೊಂಡು ನಮ್ಮದೇ ರಾಜ್ಯದ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗಕ್ಕೆ, ಸಕಲೇಶಪುರ- ಸುಬ್ರಮಣ್ಯ ನಡುವೆ ದ್ವಿಹಳಿ ಪರಿವರ್ತನೆಗೆ ಒಂದಷ್ಟು ಅರಣ್ಯ ಪ್ರದೇಶ ಬಿಟ್ಟು ಕೊಡಲು ಒಪ್ಪದ ನಮ್ಮ ನಾಯಕರು ಅನ್ಯ ರಾಜ್ಯಗಳ ಕೋರಿಕೆಗೆ ಕ್ಷಿಪ್ರವಾಗಿ ಸ್ಪಂದಿಸುವ ಈ ಪರಿಯೇ ಸೋಜಿಗ.
ಸದ್ಯಕ್ಕೆ ನಮ್ಮ ಉದಾರ ಚರಿತೆಗೆ ಸ್ವಲ್ಪವಾದರೂ ಕಡಿವಾಣ ಹಾಕಿ ರಾಜ್ಯದ ನೆಲ, ಜಲ, ಭಾಷೆಯ ಸಂರಕ್ಷಣೆ ದೃಷ್ಟಿಯಿಂದ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಾದ ಕಾಲವಿದು. ಈ ನಿಟ್ಟಿನಲ್ಲಿ ನಾಯಕರ ಬದಲು ಪ್ರಭುಗಳಾದ ನಾವೇ ಧ್ವನಿ ಎತ್ತಬೇಕಾಗಿದೆ.