ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prof R G Hegde Column: ಜೆನ್ ಝೀಯನ್ನು ಸಂಭಾಳಿಸುವುದು ಹೇಗೆ ?

ಇತಿಹಾಸದ ಕಾಲಚಕ್ರವನ್ನು ನಾವು ಹಿಮ್ಮುಖವಾಗಿ ತಿರುಗಿಸಲಾಗುವುದಿಲ್ಲ. ಅಥವಾ ಒಂದು ಮಂತ್ರದಂಡವನ್ನು ತಿರುಗಿಸಿ ‘ಜೆನ್ ಝೀ’ ಮನಸ್ಸನ್ನು ಹಿಂದೆ ಕೊಂಡು ಹೋಗಲು, ತಿದ್ದಲು, ಆಗುವುದಿಲ್ಲ. ಆಗಿದ್ದು ಆಗಿಯೇ ಹೋಗಿದೆ. ಆದರೂ ಕೂಡ ಉತ್ತರಗಳನ್ನು ಹುಡುಕಿಕೊಳ್ಳಲೇ ಬೇಕು. ನಮಗೆ ಗೊತ್ತಿದೆ. ಒಂದು ದೊಡ್ಡ ಸೂಪರ್ ಪವರ್ ದೇಶ ನಮ್ಮ ದೇಶದ ರಾಜಕೀಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಬಯಸುತ್ತಿದೆ.

ಮಂಥನ

ಪ್ರೊ.ಆರ್.ಜೆ.ಹೆಗಡೆ

ಕೆಲ ದಿನಗಳ ಹಿಂದೆ ನನ್ನ ಬರಹ ‘ಮಧ್ಯರಾತ್ರಿಯ ಮಕ್ಕಳ ಮಕ್ಕಳ ಮೊಮ್ಮಕ್ಕಳು’ ವಿಶ್ವವಾಣಿಯಲ್ಲಿ ಪ್ರಕಟವಾಯಿತು. ಲೇಖನದಲ್ಲಿ ಹೇಳಲಾದ ವಿಷಯ: ಜೆನ್ ಝೀಯದು ಮೌಲ್ಯಗಳ, ಸಂಸ್ಕೃತಿಯ, ಇತಿಹಾಸದ ಚೌಕಟ್ಟಿನಿಂದ ಮುಕ್ತವಾದ ಮನಸ್ಥಿತಿ. ಬೇಲಿಗಳಿಲ್ಲದ ಮನಸ್ಸು. ಹಿಂದಿನ ಪೀಳಿಗೆಗೆ ಇರುವಂತೆ ಹಿರಿಯರ ಕುರಿತಾದ ಭಯ ಸಹನೆ, ಗೌರವ, ಇಂತಹ ಭಾವನೆಗಳ ನಿಯಂತ್ರಣದಲ್ಲಿ ಜೆನ್ ಝೀ ಕೆಲಸ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಮನೆಯಲ್ಲಿ ಜೆನ್ ಝೀ ತಂದೆ ತಾಯಿಗಳನ್ನು ನಿಯಂತ್ರಿಸುತ್ತದೆ. ಮಾತು ಕೇಳಿಸುತ್ತದೆ. ಅವರು ಕೇಳದಿದ್ದರೆ ತೀವ್ರ ಡಿಪ್ರೆಸ್ ಆಗುತ್ತದೆ. ಆತ್ಮಹತ್ಯೆ ಗೂ ಪ್ರಯತ್ನಿಸುತ್ತದೆ. ಅಥವಾ ಅಂತಹ ಧಮಕಿ ನೀಡಿ ಬಗ್ಗಿಸುತ್ತದೆ. ಹೊರಗಡೆಯೂ ಅದು ಅಂತಹುದೇ ವಾತಾವರಣವನ್ನು ಬಯಸುತ್ತದೆ. ಸುಖವನ್ನು ಬಯಸುತ್ತದೆ.

ತನಗೆ ಬೇಕಾದ್ದನ್ನು ಪಡೆಯಲು ಏನು ಬೇಕಾದರೂ ಮಾಡುತ್ತದೆ. ಬಹಳ ಭಾವನಾತ್ಮಕವಾಗಿ, ಅತಿರೇಕದಲ್ಲಿ ಯೋಚಿಸುತ್ತದೆ. ಅದರ ಚಿಂತನೆ ಒಳಗೆ ಕೆಲವು ವಿರೋಧಾಭಾಸಗಳು ಇದ್ದರೂ ಕೂಡ ಇಡೀ ಭಾರತದ (ಒಂದು ರೀತಿಯಲ್ಲಿ ಜಗತ್ತಿನ ಜೆನ್ ಝೀ) ಒಂದೇ ರೀತಿಯಲ್ಲಿ ಯೋಚಿಸು ತ್ತದೆ. ತನ್ನವರೊಡನೆ ತ್ವರಿತವಾಗಿ ಕಮ್ಯುನಿಕೇಟ್ ಮಾಡುತ್ತದೆ. ಯೋಚನೆಯಿಲ್ಲದ ಕ್ರಿಯೆಯಲ್ಲಿ ತೊಡಗಲೂ ಹಿಂದೆ ಮುಂದೆ ನೋಡುವುದಿಲ್ಲ. ಏನೇನೋ ಮಾಡಿಬಿಡುತ್ತದೆ. ಅಥವಾ ಆ ಸಂಭವಿರುತ್ತದೆ.

ಮುಗ್ಧ ಆದರ್ಶವಾದ ಕೂಡ ಅದಕ್ಕಿದೆ. ಹಾಗಾಗಿ ಸಾರ್ವಜನಿಕ ಹೋರಾಟಗಳಿಗಾಗಿ ಅದು ಬೀದಿಗಿಳಿದು ಬಿಡುತ್ತದೆ. ಹೋರಾಟವನ್ನು ಎಂಜಾಯ್ ಮಾಡುತ್ತದೆ. ಏನು ಬೇಕಾದರೂ ಮಾಡಿ ಬಿಡುತ್ತದೆ. ಆ ಮನಸ್ಸಿಗೆ ದೀರ್ಘಕಾಲೀನ, ದೂರಗಾಮಿ ಯೋಜನೆ ಇತ್ಯಾದಿ ಇಲ್ಲ. ಅದಕ್ಕೆ ಸಂವಿಧಾನ, ಪ್ರೊಸೀಜರ್ ಗಳು, ಪದ್ಧತಿಗಳು ಇಂಥವುಗಳ ಕುರಿತು ತಿರಸ್ಕಾರವಿದೆ.

ಇದನ್ನೂ ಓದಿ: Prof R G Hegde Column: ಮಧ್ಯರಾತ್ರಿಯ ಮಕ್ಕಳ ಮಕ್ಕಳ ಮೊಮ್ಮಕ್ಕಳು !

ಏಕೆಂದರೆ ವೇಗಕ್ಕೆ ಅದು ಬೆಲೆ ಕೊಡುತ್ತದೆ. ಅದರ ಯೋಚನೆಯ ದಾರಿಯಲ್ಲಿ ಅರಾಜಕತೆ ಸೃಷ್ಟಿಯಾಗಿ ಹೋಗಬಹುದು, ಇತ್ಯಾದಿ ಅದು ಯೋಚಿಸುವುದಿಲ್ಲ. ಹಿಂದಿಗಿಂತ ಕೆಟ್ಟ ಸರಕಾರಗಳು ಬಂದುಬಿಡ ಬಹುದು. ಬೇಡವಾದ ರೀತಿಯ ಸಮಾಜ ಸೃಷ್ಟಿಯಾಗಿ ಹೋಗಿ ಬಿಡಬಹುದು ಇತ್ಯಾದಿ ಅದರ ಖಬರಿಗಿಲ್ಲ. ಅದೆಲ್ಲಕ್ಕೆ ಅದಕ್ಕೆ ಪುರುಸೊತ್ತಿಲ್ಲ. ಇದನ್ನು ನಾವು ಶ್ರೀಲಂಕಾದ, ಬಾಂಗ್ಲಾ ದೇಶದ, ನೇಪಾಳದ ಯುವ ಕ್ರಾಂತಿಗಳಲ್ಲಿ ನೋಡಿದ್ದೇವೆ. ಒಟ್ಟಾರೆಯಾಗಿ, ಅದು ಅಮೆರಿಕನ್ ರೀತಿಯ ಜೀವನವನ್ನು ಬಯಸುವ, ಬಹಳ ದೊಡ್ಡ ಆಶೋತ್ತರಗಳಿರುವ, ಆಸೆ ಆಮಿಷಗಳಿರುವ, ಸಿಗದಿದ್ದರೆ ತೀವ್ರ ಸಿಟ್ಟಾಗುವ ಪೀಳಿಗೆ. ಈ ಬರಹ ಪ್ರಕಟವಾದ ನಂತರ ನನಗೆ ಬಂದ ಹಲವು ಸಂದೇಶಗಳು ಒಂದೇ ಪ್ರಶ್ನೆಯನ್ನು ಎತ್ತಿದವು.

ಹಾಗಾದರೆ ಇಂತಹ ಜೆನ್ ಝೀಯನ್ನು ಹ್ಯಾಂಡಲ್ ಮಾಡಲು ಸರಕಾರ, ಸಮಾಜ, ಕುಟುಂಬ ವ್ಯವಸ್ಥೆ ಏನು ಮಾಡಬಹುದು? ಮಾಡಬೇಕು? ಪ್ರಶ್ನೆ ಸರಳವಾದುದು. ಆದರೆ ಉತ್ತರ ಸರಳ ವಾದುದಲ್ಲ. ಏಕೆಂದರೆ ಈ ಮಾನಸಿಕತೆ ಸೃಷ್ಟಿಯಾಗಿದ್ದು ಹಲವು ಸಂಕೀರ್ಣ ರಾಜಕೀಯ, ಸಾಮಾಜಿಕ, ವೈಜ್ಞಾನಿಕ, ಮಹಿಳಾ ವಾದ ಇತ್ಯಾದಿ ಹಲವು ಸಮಕಾಲೀನ ಪ್ರಭಾವಗಳ ಎಳೆಗಳು ಸೇರಿ. ಈಗ ಇಂತಹ ಸಂಕೀರ್ಣ ಮನಸ್ಥಿತಿ ಸೃಷ್ಟಿಯಾಗಿಯೇ ಹೋಗಿದೆ.

ಇತಿಹಾಸದ ಕಾಲಚಕ್ರವನ್ನು ನಾವು ಹಿಮ್ಮುಖವಾಗಿ ತಿರುಗಿಸಲಾಗುವುದಿಲ್ಲ. ಅಥವಾ ಒಂದು ಮಂತ್ರದಂಡವನ್ನು ತಿರುಗಿಸಿ ‘ಜೆನ್ ಝೀ’ ಮನಸ್ಸನ್ನು ಹಿಂದೆ ಕೊಂಡು ಹೋಗಲು, ತಿದ್ದಲು, ಆಗುವುದಿಲ್ಲ. ಆಗಿದ್ದು ಆಗಿಯೇ ಹೋಗಿದೆ. ಆದರೂ ಕೂಡ ಉತ್ತರಗಳನ್ನು ಹುಡುಕಿಕೊಳ್ಳಲೇ ಬೇಕು. ನಮಗೆ ಗೊತ್ತಿದೆ. ಒಂದು ದೊಡ್ಡ ಸೂಪರ್ ಪವರ್ ದೇಶ ನಮ್ಮ ದೇಶದ ರಾಜಕೀಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಬಯಸುತ್ತಿದೆ.

ನಮ್ಮ ಜೆನ್ ಝೀ ಅದರ ಬಲೆಗೆ ಬೀಳಬಾರದು. ತಾಳ ತಪ್ಪಿ ನೇಪಾಳ, ಬಾಂಗ್ಲಾದೇಶ ರೀತಿಯಲ್ಲಿ ನಡೆದು ಬಿಡಬಾರದು. ಈ ಹಿನ್ನೆಲೆಯಲ್ಲಿ ನಾವು ಜೆನ್ ಝೀಯನ್ನು ಹೇಗೆ ‘ಮ್ಯಾನೇಜ್’ ಮಾಡಬಹುದು ಎಂದು ಯೋಚಿಸಬೇಕು. ಒಂದನೆಯ ವಿಷಯ. ಜೆನ್ ಝೀ ಹೇಗೆ ಯೋಚಿಸುತ್ತದೆ ಮತ್ತು ಏನು ಯೋಚಿಸುತ್ತಿದೆ ಎನ್ನುವ ವಿಷಯಗಳು ನಮಗೆ ಈಗ ತಿಳಿದಿವೆ. ಅದು ಪ್ರಗತಿ, ಸುಖ, ಸಂತೋಷ, ಸೌಲಭ್ಯ ಬಯಸುತ್ತದೆ. ತನ್ನ ದೇಶ ಬೇರೆ ದೇಶಗಳ ಹಾಗೆ ಪ್ರಬಲವಾಗಿ ಇರಬೇಕೆಂದೂ ಬಯಸುತ್ತದೆ.

ಹಾಗೆಯೇ ನಮಗೆ ಗೊತ್ತು. ಅದಕ್ಕೆ ಇಂದು ಯಾರ ಮೇಲೆಯೂ ನಂಬಿಕೆ ಇಲ್ಲ. ಮುಖ್ಯವಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ ನೇತಾರರ ಮೇಲೆ ಅದಕ್ಕೆ ಭರವಸೆ ಇಲ್ಲ. ನಂಬಿಕೆ ಇಲ್ಲ. ಈ ನಾಯಕರೇ ತನ್ನ ಪರಿಸ್ಥಿತಿಯನ್ನು ಇಲ್ಲಿಗೆ ತಂದಿಟ್ಟಿದ್ದು ಎಂದು ಅದು ಭಾವಿಸುತ್ತದೆ. ಇಲ್ಲವಾದರೆ ನಮ್ಮ ದೇಶ ಅಮೆರಿಕದ ರೀತಿಯಲ್ಲಿ ಬಲಿಷ್ಠ ದೇಶವಾಗಿರುತ್ತಿತ್ತು. ನಮ್ಮೆಲ್ಲರ ಬಳಿಯೂ ಅಮೆರಿಕದ ರೀತಿಯ ಸಾಧನಗಳು, ಸಂಪತ್ತು ಅನುಕೂಲತೆಗಳು ಇರುತ್ತಿದ್ದವು ಎಂಬ ಎಂಬುದು ಅದರ ಮನಸ್ಸಿನಲ್ಲಿದೆ.

ನಾವು, ಅಂದರೆ ಈಗಿನ ಹಿರಿಯ ನಾಗರಿಕರು ಒಪ್ಪಿಕೊಳ್ಳಬೇಕು. ಏನೆಂದರೆ ಜೆನ್ ಝೀಯ ವಿಚಾರಗಳು, ವಾದಗಳಲ್ಲಿ ಬಹಳ ತಪ್ಪೇನೂ ಇಲ್ಲ. ಅದು ಹೇಳುವುದರಲ್ಲಿ, ಭಾವಿಸುವುದರಲ್ಲಿ ಬಹಳ ಮಟ್ಟಿಗೆ ಸತ್ಯವಿದೆ. ನಮ್ಮ ಪೀಳಿಗೆ ಮತ್ತು ಹಿಂದಿನ ಪೀಳಿಗೆಗಳು ಹೆಚ್ಚು ಜವಾಬ್ದಾರಿಯುತ ವಾಗಿ ಕೆಲಸಮಾಡಿದ್ದರೆ ಜೆನ್ ಝೀಯ ಸಾರ್ವಜನಿಕ ಬದುಕು ಇನ್ನೂ ಹೆಚ್ಚು ಸುಗಮವಾಗಿರು ತ್ತಿತ್ತು. ಇದರಲ್ಲಿ ಮಾತಿಲ್ಲ. ವ್ಯಾಪಕವಾದ ರಾಜಕೀಯ ಭ್ರಷ್ಟಾಚಾರ, ಜವಾಬ್ದಾರಿರಹಿತ ರಾಜಕೀಯ ನಮ್ಮ ದೇಶವನ್ನು ಸುದೀರ್ಘ ಕಾಲ ಕಾಡಿವೆ. ಸಂಸತ್ತು, ವಿಧಾನಸಭೆಗಳು ಗದ್ದಲದ ಹೊಳೆಗಳಲ್ಲಿ ಕೊಚ್ಚಿ ಹೋಗುತ್ತಿವೆ.

ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ದಾಖಲೆಗಳಲ್ಲಿ ಇದ್ದರೂ ಕೂಡ ಅಂತಹ ರಾಜಕಾರಣಿ ಗಳಿಗೆ ಶಿಕ್ಷೆಯಾಗುವುದಿಲ್ಲ. ರಾಜಕಾರಣಿಗಳು, ರಾಜಕೀಯದ ಸುತ್ತಮುತ್ತ ಇರುವವರು ಅಕಸ್ಮಾತ್ ಅಂದರೆ ರಾತ್ರಿ ಬೆಳಗಾಗುವ ತನಕ ಭಾರಿ ಶ್ರೀಮಂತರಾಗಿ ಹೋಗುತ್ತಾರೆ. ಅವರಿಗೆಲ್ಲ ಇನ್ ಕಮ್ ಟ್ಯಾಕ್ಸ್ ಇತ್ಯಾದಿ ಕಾನೂನುಗಳು ಅನ್ವಯವಾಗುತ್ತಿರುವಂತಿಲ್ಲ. ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ದುಸ್ತಿತಿಯಲ್ಲಿವೆ. ಕುಡಿಯುವ ನೀರಿನ ಕೊಳವೆಗಳಿವೆ. ಆದರೆ ನೀರು ಬರುವುದಿಲ್ಲ.

ತುಂಬಿದ ಡ್ಯಾಮ್‌ನ ಗೇಟುಗಳು ಮಳೆಗಾಲಗಳಲ್ಲಿ ಕಿತ್ತು ಹೋಗುತ್ತವೆ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟತೆ ತಾಂಡವವಾಡುತ್ತಿವೆ. ಚಿಕ್ಕ ಚಿಕ್ಕ ವಿಷಯಗಳಿಗೆ ಅಲ್ಲಿಗೆ ಅಲೆದಾಡಿ ಜನ ಸೋತು ಹೋಗುತ್ತಾರೆ. ಭಾರಿ ಟಾಕ್ಸೇಶನ್ ಇದೆ. ಜಿಎಸ್‌ಟಿ ಕಾರಣ ಮನೆಯಿಂದ ಹೊರಬಿದ್ದರೆ ಟ್ಯಾಕ್ಸ್ ಬೀಳುತ್ತದೆ. ನಗರಗಳು ಗಲೀಜಿನಿಂದ ತುಂಬಿ ಹೋಗಿವೆ. ಐದು ಕಿಲೋಮೀಟರ್ ಹೋಗಲು ಎರಡು ತಾಸು ಬೇಕಾಗುತ್ತದೆ. ಶಿಕ್ಷಣ ವ್ಯವಸ್ಥೆಗೆ ನಿಜ ಜೀವನಕ್ಕೆ ಸಂಬಂಧವೇ ಇಲ್ಲ. ಸರಕಾರಿ ನೌಕರಿಗಳು ಇಲ್ಲ.

ಖಾಸಗಿಗಳಲ್ಲಿ ದೊಡ್ಡ ಸಂಬಳದ ನೌಕರಿಗಳು ಕಡಿಮೆಯಾಗುತ್ತಿವೆ. ಶೋಷಣೆ ಕೂಡ ಇದೆ. ಶ್ರೀಮಂತರಾದವರಿಗೆ ದೇಶದಲ್ಲಿ ಬೇರೆಯೇ ಒಂದು ವ್ಯವಸ್ಥೆ ಇದೆ. ಹಾಗಾಗಿ ನಮ್ಮ ಸಾಂವಿಧಾನಿಕ, ರಾಜಕೀಯ, ಆಡಳಿತ, ನ್ಯಾಯಾಂಗ ವ್ಯವಸ್ಥೆಯಲ್ಲಿ ಆಳವಾದ ದೋಷಗಳಿವೆ. ಈ ದೋಷಗಳನ್ನು ಸರಿಪಡಿಸಲು ಅಧಿಕಾರದಲ್ಲಿರುವವರಿಗೆ ಆಸಕ್ತಿ ಇಲ್ಲ. ಇವೆಲ್ಲವನ್ನೂ ಕಂಡಿರುವ ಜೆನ್ ಝೀ ಮತ್ತೆ ಕುದಿಯುತ್ತಿದೆ. ಹತ್ತು ವರ್ಷಗಳ ಹಿಂದೆ ಮೋದಿಯವರನ್ನು ಜೆನ್ ಝೀ ಭಾರಿ ಪ್ರಮಾಣದಲ್ಲಿ ಬೆಂಬಲಿಸಿತ್ತು. ಏಕೆಂದರೆ ದೇಶದ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯುವ ಶಕ್ತಿ ಮೋದಿಯವರಿಗಿದೆ ಎನ್ನುವ ನಂಬಿಕೆ ಅದಕ್ಕಿತ್ತು.

ಇಂದಿಗೂ ಆ ನಂಬಿಕೆ ಪೂರ್ತಿಯಾಗಿ ಹೋಗಿಯೇನೂ ಇಲ್ಲ. ಕಾರಣ ಸ್ಪಷ್ಟವಿದೆ. ಏನೆಂದರೆ ಮೋದಿ ದೇಶದಲ್ಲಿ ಜವಾಬ್ದಾರಿಯುತ ರಾಜಕೀಯದ ಒಂದು ಹೊಸ ಪರ್ವವನ್ನು ಹುಟ್ಟುಹಾಕಿದರು. ಹಾಗಾಗಿಯೇ ಕಳೆದ ಹತ್ತು ವರ್ಷಗಳಲ್ಲಿ ಯುವ ಚಳುವಳಿಗಳು ಹುಟ್ಟಿಕೊಳ್ಳಲಿಲ್ಲ. ಆದರೆ ಈಗ ಸಾವಕಾಶವಾಗಿ ಭಾರತೀಯ ಜನತಾ ಪಕ್ಷದ ಕುರಿತು ಕೂಡ ಜೆನ್ ಝೀಗೆ ಅನುಮಾನ, ಅಸಮಾಧಾನ ಉಂಟಾದಂತಿದೆ. ಹಾಗಾಗಿ ಅಪಸ್ವರಗಳು ಮತ್ತೆ ಆರಂಭವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಜೆನ್ ಝೀಯನ್ನು ಸಂಭಾಳಿಸಲು ಏನು ಮಾಡಬೇಕು ಎನ್ನುವುದು ಸ್ಪಷ್ಟವಿದೆ. ಈಗ ಯಾವ ಪಕ್ಷ ಜವಾಬ್ದಾರಿಯುತ ರಾಜಕೀಯ ಕೃತಿಯಲ್ಲಿ ತೊಡಗುತ್ತದೆಯೋ ಅದನ್ನು ಜೆನ್ ಝೀ ಮೆಚ್ಚಿಕೊಳ್ಳುತ್ತದೆ.

ಮಾತುಗಳನ್ನಲ್ಲ. ಕೃತಿಗಳನ್ನು. ಹಾಗಾಗಿ ಬದುಕಲಿಚ್ಛಿಸುವ ರಾಜಕೀಯ ಪಕ್ಷಗಳು ಗಟ್ಟಿಯಾದ ಬಿಗುವಾದ, ಜವಾಬ್ದಾರಿಯುತವಾದ ರಾಜಕೀಯದಲ್ಲಿ, ಆಡಳಿತದಲ್ಲಿ ತೊಡಗಬೇಕು. ಅನವಶ್ಯಕ ವಾಗಿರುವ ಕಾನೂನುಗಳನ್ನು ರದ್ದು ಪಡಿಸಬೇಕು. ಇರುವ ಕಾನೂನುಗಳನ್ನು ಬಿಗಿಯಾಗಿಡಬೇಕು. ಜನರಿಗೆ ದಿನ ದಿನದ ಬದುಕು ಸಲೀಸಾಗುವಂತಹ ಅವಶ್ಯಕತೆಗಳು ಕೃಷಿಗೆ, ಉದ್ಯಮಕ್ಕೆ ನೀರು, ವಿದ್ಯುತ್, ರಸ್ತೆ, ಶಾಲೆಗಳು, ಸರಕಾರಿ ಕಚೇರಿಗಳು, ಕಾನೂನು ಸುವ್ಯವಸ್ಥೆ, ಸ್ವಚ್ಛತೆ, ಇಂಥವನ್ನು ಸುಸ್ಥಿತಿಯಲ್ಲಿಡಬೇಕು.

ಸರಕಾರ ಎಲ್ಲದಲ್ಲಿಯೂ ಕೈ ಹಾಕುವುದನ್ನು ಬಿಡಬೇಕು. ಪ್ರತಿ ದಿನ ಕಚೇರಿಗಳಿಗೆ ಒಂದು ಸಣ್ಣ ಕೆಲಸಕ್ಕಾಗಿ ಅಡ್ಡಾಡುವುದನ್ನು ಕಡಿಮೆ ಮಾಡಬೇಕು. ಅಲ್ಲಿನ ನಿರಂತರ ಭ್ರಷ್ಟಾಚಾರವನ್ನು ಕಡಿಮೆ ಮಾಡಬೇಕು. ಇಷ್ಟನ್ನು ಗಟ್ಟಿಯಾಗಿ ನಿರ್ವಹಿಸಿದರೆ ಉದ್ಯೋಗಗಳೂ ಹುಟ್ಟಿಕೊಳ್ಳುತ್ತವೆ. ಒಟ್ಟಾರೆ ದಿನನಿತ್ಯದ ಬದುಕಿನ ಉತ್ತಮ ಗುಣಮಟ್ಟದ ನಿರ್ವಹಣೆಯಲ್ಲಿ ಜವಾಬ್ದಾರಿಯುತವಾಗಿ ಸರಕಾರ ತೊಡಗಬೇಕು. ಗಮನಿಸಬೇಕು.

1983ರಲ್ಲಿ ಕರ್ನಾಟಕದ ರಾಮಕೃಷ್ಣ ಹೆಗಡೆ ಕಾಲದಿಂದಲೂ ದೇಶದ ರಾಜಕೀಯದಲ್ಲಿ ಒಂದು ಸೂಕ್ಷ್ಮವಾದ ಎಳೆ ಬಂದಿದೆ. ಜನಪರ ರಾಜಕೀಯ ಮಾಡಿದವರು ಗೆದ್ದಿದ್ದಾರೆ. ನಂತರ ದೆಹಲಿಯಲ್ಲಿ ಆಪ್ ಎರಡು ಅವಧಿಗಳಿಗೆ ಗೆದ್ದಿತು. ಅಂದರೆ ಯಾವ ಪಕ್ಷ ಜನ ಪರವಾಗಿ ಕೆಲಸ ಮಾಡುತ್ತದೆ ಅದನ್ನು ಜೆನ್ ಝೀ ಮೆಚ್ಚಿಕೊಳ್ಳುತ್ತದೆ.

ಇದು ರಾಜಕೀಯದ ದ್ರಷ್ಟಿಯಿಂದ ಜೆನ್ ಝೀ ವಿಪರೀತಕ್ಕೆ ಹೋಗದಂತೆ ಮಾಡಲು ಏನು ಮಾಡಬಹುದು ಎನ್ನುವುದು. ಪಕ್ಷಗಳು ಜವಾಬ್ದಾರಿಯುತ ರಾಜಕೀಯದಲ್ಲಿ ತೊಡಗಬೇಕು. ಇಲ್ಲವಾದರೆ ಜೆನ್ ಝೀ ಸುಮ್ಮನಿರುವುದಿಲ್ಲ. ‘ಎಚ್ಚರವಿರಲಿ’ ಎಂಬ ಗೋಡೆ ಬರಹವನ್ನು ಅದು ತೂಗುಹಾಕಿಯೇ ಬಿಟ್ಟಿದೆ. ಯಾವ ಪಕ್ಷಗಳು ಬೇಜವಾಬ್ದಾರಿಯಿಂದ ವರ್ತಿಸುತ್ತವೆಯೋ ಅವು ಇತಿಹಾಸದ ಪುಟ ಸೇರಲಿವೆ. ಜಾತಿ, ಮತ, ಪುಷ್ಟೀಕರಣದ ರಾಜಕೀಯ ಮುಂದೆ ನಡೆಯುವುದಿಲ್ಲ. ಸಂಪೂರ್ಣವಾಗಿ ಹೊಸ ಪಕ್ಷಗಳು ಅಧಿಕಾರಕ್ಕೆ ಬಂದು ಬಿಡಬಹುದು.

ತಮಿಳುನಾಡಿನಲ್ಲಿ ಆದಂತೆ. ಟಿ.ವಿ.ಕೆ ಗೆಲುವಿನಲ್ಲಿ ಜೆನ್ ಝೀಯ ದೊಡ್ಡ ಪಾತ್ರವಿದೆ. ಇನ್ನೊಂದು ಪ್ರಶ್ನೆ ಈಗ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಾವು ಏನು ಮಾಡಬೇಕು ಎನ್ನುವುದು. ಗಮನಿಸ ಬೇಕು. ನಮ್ಮ ಸಮಾಜ ಸ್ಥೂಲವಾಗಿ ಭಾರತೀಯ ಸಂಸ್ಕೃತಿಯ ಸೊಗಡನ್ನು, ನೆನಪನ್ನು ಸ್ಥೂಲ ವಾಗಿ ಕಳೆದುಕೊಂಡು ಕುಳಿತಿದೆ.‘ಮನುವಾದದ’ ಮೇಲೆ ದಾಳಿ ನಡೆಸುವ ನಮ್ಮ ಅತಿ ಉತ್ಸುಕತೆ ಯಲ್ಲಿ ನಾವು ಒಂದು ಚರಿತ್ರೆಯ, ಸಂಸ್ಕೃತಿಯ ನೆನಪನ್ನು ಕಳೆದುಕೊಂಡು ಕುಳಿತಿದ್ದೇವೆ.

ಗಾಂಧಿಯನ್ನು ಕೂಡ ಗೇಲಿ ಮಾಡಿಬಿಟ್ಟಿದ್ದೇವೆ. ನಮ್ಮ ಇತಿಹಾಸದ ವೀರರು, ದಾರ್ಶನಿಕರು ನೆನಪಿನಿಂದ ಕಣ್ಮರೆಯಾಗಿ ಹೋಗಿದ್ದಾರೆ. ಸತ್ಯ ಹರಿಶ್ಚಂದ್ರ, ಧರ್ಮರಾಯ, ಕರ್ಣ, ರಾಮ, ಅಶೋಕ, ಬುದ್ಧ, ಮಹಾವೀರ, ಶಂಕರ, ಬಸವಣ್ಣ, ಭಕ್ತಿಪಂಥದ ಮಹಾಮಹಿಮರು, ಮಹಾನ್ ಸ್ವಾತಂತ್ರ್ಯದ ಹೋರಾಟಗಾರರು ಇವರ ನೆನಪನ್ನೆಲ್ಲ ನಾವು ಅಳಿಸಿ ಹಾಕಿದ್ದೇವೆ. ಹಾಗಾಗಿಯೇ ಸಮಾಜ ಮತ್ತು ಜೆನ್ ಝೀ ಸಾಂಸ್ಕೃತಿಕ (amnesia) ಮರೆವಿನಲ್ಲಿರುವುದು. ನಮ್ಮ ಸಂಸ್ಕೃತಿಯ ಮರೆತು ನೆನಪನ್ನು ಮತ್ತೆ ಸಮಾಜಕ್ಕೆ ಮರಳಿ ತಂದು ಕೊಡುವುದು ಮತ್ತು ನಮ್ಮ ಸಂಸ್ಕೃತಿಗಳ ಕುರಿತಾದ ಶ್ರೇಷ್ಠ ಕಥಾನಕಗಳನ್ನು ಮರಳಿಕಟ್ಟುವುದು ಇಂದು ಸಾಂಸ್ಕೃತಿಕವಾಗಿ ಸಮಾಜವನ್ನು, ಜೆನ್ ಝೀಯನ್ನು ಮರಳಿ ಕಟ್ಟುವ ದಾರಿ. ಎಂಭತ್ತರ ದಶಕದಲ್ಲಿ ಟಿವಿಯಲ್ಲಿ ಬಂದ ರಾಮಾಯಣ, ಮಹಾಭಾರತಗಳು ಮಾಡಿದ್ದು ಈ ರೀತಿಯ ಸಾಂಸ್ಕೃತಿಕ ನೆನಪನ್ನು ಮರಳಿ ಹುಟ್ಟು ಹಾಕಿ ಸಮಾಜವನ್ನು ಮರುಚೈತನ್ಯಗೊಳಿಸಿದ್ದು.

ಅದು ಒಂದು ಹೊಸ ರಾಜಕೀಯ ಚರಿತ್ರೆಯ ಆರಂಭಕ್ಕೆ ಕಾರಣವಾಯಿತು. ಈಗ ನಾವು ಮತ್ತೆ ಮಾಡಬೇಕಿರುವುದು ಅದೇ. ಅಂದರೆ ಮತ್ತೆ ವಿಸ್ಮೃತಿಯಲ್ಲಿರುವ ನಮ್ಮ ಸಂಸ್ಕ್ಕೃತಿಯ ಶ್ರೇಷ್ಠತೆ ಯನ್ನು ಸಾರುವ ಸಾಂಸ್ಕತಿಕ ಚಳುವಳಿಗಳನ್ನು ಪುನರುಜ್ಜೀವನಗೊಳಿಸಬೇಕು. ಇತಿಹಾಸದ ಕಥಾನಕಗಳನ್ನು ಮರಳಿ ಸೃಷ್ಟಿಗೊಳಿಸುವುದರ ಮೂಲಕ ಮತ್ತೊಂದು ಸಾಂಸ್ಕ್ಕೃತಿಕ ಪುನರು ತ್ಥಾನವನ್ನು ಸೃಷ್ಟಿಸಲು ನಾವು ಪ್ರಯತ್ನಿಸಬೇಕು. ದೇಶದ ಸಾಂಸ್ಕೃತಿಕ ಚಿಂತನೆಯಿಂದ ‘ಎಡ’ ಕದ್ದುಕೊಂಡು ಹೋಗಿರುವ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಭಾರತೀಯ ಸಾಂಸ್ಕ್ಕೃತಿಕ ಚಿಂತನೆಯ ಭಾಗವಾಗಿಸಬೇಕು.

ನಮ್ಮ ಹಬ್ಬ ಹರಿದಿನಗಳ ಆಚರಣೆ ಜೆನ್ ಝೀಯನ್ನು ಒಳಗೊಳ್ಳಬೇಕು. ಇನ್ನು ಕುಟುಂಬಗಳು ಏನು ಮಾಡಬೇಕು ಎಂಬ ಪ್ರಶ್ನೆ ಇದೆ. ಒಂದೇ ಮಾತಿನ ಉತ್ತರ. ಮಕ್ಕಳು ಕಾಟ ಕೊಡದಿರಲಿ ಎಂದು ಯೋಚಿಸಿ, ತಂದೆ ತಾಯಿ ಕಣ್ಣು ಮುಚ್ಚಿ ಭಾರಿ ಹಣವನ್ನು ಮಕ್ಕಳ ಕೈಯಲ್ಲಿ ಇಡುತ್ತಿರುವಂತಿದೆ. ಈ ಕುರಿತು ತಂದೆ ತಾಯಿ ಯೋಚಿಸಬೇಕು. ಮುಖ್ಯವಾಗಿ ಮಕ್ಕಳನ್ನು ಸಂಸ್ಕೃತಿಯ ಭಾಗವಾಗಿಸಲು ಪ್ರಯತ್ನಿಸಬೇಕು.