ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಕೊಳಕು, ಅಸಹ್ಯಗಳನ್ನು ಮೀರಿ ನಿಲ್ಲುವ ಮಾನವೀಯತೆ

ಎರಡು ಅಂಗಡಿಗಳ ನಡುವಿನ ಚಿಕ್ಕ ಬೀದಿ, ಅಲ್ಲೊಂದು ಅಡ್ಡ ಬಾಗಿಲು. ಬಾಗಿಲು ಸರಿಸಿ ಒಳಹೊಕ್ಕು ನೋಡುತ್ತಿದ್ದಂತೆ ಹತ್ತು ಬೈ ಹತ್ತರ ಕೋಣೆಯಲ್ಲಿ ಮೂರು ಜನ ಬೆವರಿಳಿಸಿ ಅಡುಗೆ ಮಾಡುತ್ತಿದ್ದರು. ಅವರ ಆಜುಬಾಜು ಒಂದೆರಡು ಲಕ್ಷ ನೊಣಗಳು ಹಾರಾಡುತ್ತಿದ್ದವು, ಅವರು ತಯಾರಿಸುವ ಪರೋಟಾ ಹಿಟ್ಟಿಗೆ ಮುತ್ತುತ್ತಿದ್ದವು. ಆ ಕೋಣೆಯಲ್ಲಿ ಗಾಳಿಯಾಡುತ್ತಿದ್ದುದೇ ನೊಣಗಳ ರೆಕ್ಕೆಗಳಿಂದ.

ಶಿಶಿರಕಾಲ

ಕೆಲಸಕ್ಕೆ ಸೇರಿದ ಹೊಸತರಲ್ಲಿ ಕೊಲ್ಕೊತಾದಲ್ಲಿ ಕೆಲವು ತಿಂಗಳು ಇರಬೇಕಾಗಿ ಬಂತು. ಆಗ ನಾವು ಪ್ರತಿ ಸಂಜೆ ಒಂದೇ ಜಾಗದಿಂದ ಊಟ ತರಿಸುತ್ತಿದ್ದೆವು. ಒಂದು ಫೋನ್ ಮಾಡಿದರೆ ಮಲಬಾರ್ ಪರೋಟ, ಬಿಸಿಬಿಸಿಯಾಗಿ, ತುಪ್ಪ- ಡಾಲ್ಡಾದಲ್ಲಿ ಇಂಗಿ ಪಾರದರ್ಶಕವಾದ ಕಾಗದದಲ್ಲಿ ಸುತ್ತಿ ಬರುತ್ತಿತ್ತು. ಜೊತೆಯಲ್ಲಿ ದಿನಕ್ಕೊಂದು ರೀತಿಯ ಬಾಜಿ. ಹುಡುಗ ಚೋಟು ಮನೆ ಬಾಗಿಲಿಗೆ ಬಂದು ಊಟ ಕೊಟ್ಟು ಹೋಗುತ್ತಿದ್ದ. ಒಂದು ವಾರಾಂತ್ಯದ ದಿನ ಮಧ್ಯಾಹ್ನ ನನಗೆ ಅದೇ ಬೀದಿಯ ಹತ್ತಿರ ಕೆಲಸವಿತ್ತು.

ಹೇಗಿದ್ದರೂ ಇಲ್ಲಿಯೇ ಹತ್ತಿರವಿದ್ದದ್ದರಿಂದ ಚೋಟುವಿನ ಒಂದು ತಿರುಗಾಟ ಉಳಿಸಿದರಾಯ್ತು ಮತ್ತು ಇಷ್ಟು ದಿನ ನನ್ನ ಹೊಟ್ಟೆ ತುಂಬಿಸಿದ ಜಾಗವನ್ನು ಒಮ್ಮೆ ನೋಡಿದಂತಾಯ್ತು ಎಂದು ಅಡ್ರೆಸ್ ಹುಡುಕಿ ಹೋಗಿಬಿಟ್ಟೆ !

ಎರಡು ಅಂಗಡಿಗಳ ನಡುವಿನ ಚಿಕ್ಕ ಬೀದಿ, ಅಲ್ಲೊಂದು ಅಡ್ಡ ಬಾಗಿಲು. ಬಾಗಿಲು ಸರಿಸಿ ಒಳ ಹೊಕ್ಕು ನೋಡುತ್ತಿದ್ದಂತೆ ಹತ್ತು ಬೈ ಹತ್ತರ ಕೋಣೆಯಲ್ಲಿ ಮೂರು ಜನ ಬೆವರಿಳಿಸಿ ಅಡುಗೆ ಮಾಡುತ್ತಿದ್ದರು. ಅವರ ಆಜುಬಾಜು ಒಂದೆರಡು ಲಕ್ಷ ನೊಣಗಳು ಹಾರಾಡುತ್ತಿದ್ದವು, ಅವರು ತಯಾರಿಸುವ ಪರೋಟಾ ಹಿಟ್ಟಿಗೆ ಮುತ್ತುತ್ತಿದ್ದವು. ಆ ಕೋಣೆಯಲ್ಲಿ ಗಾಳಿಯಾಡುತ್ತಿದ್ದುದೇ ನೊಣಗಳ ರೆಕ್ಕೆಗಳಿಂದ.

ಇಷ್ಟು ಕಾಲ ಅಮ್ಮನ ಅಡುಗೆಯನ್ನು ನೆನಪಿಸುವ ಆಹಾರ ತಯಾರಾಗುವ ಜಾಗ, ಒಂದೈನೂರು ಸಾವಿರ ನೊಣಗಳು ಎಲ್ಲೆಂದರಲ್ಲಿ ಸತ್ತು ಮಮ್ಮಿ ಗಳಾಗಿ ಬಿದ್ದಿದ್ದವು. ಅವನ್ನು ಗುಡಿಸಿ ಆಚೆ ಹಾಕುವ ಕನಿಷ್ಠ ಅಂತ್ಯ ಸಂಸ್ಕಾರ ಭಾಗ್ಯವೂ ಅವಕ್ಕೆ ಇದ್ದಂತಿರಲಿಲ್ಲ. ತಮ್ಮ ಪೂರ್ವಜರ ಹೆಣಗ ಳನ್ನು ಲೆಕ್ಕಿಸದ ಹೊಸ ತಲೆಮಾರಿನ ನೊಣಗಳು ಪಕ್ಕದಲ್ಲೇ ಹೂಗ್ಲಿ ನದಿಯನ್ನು ಸೇರಲು ಹೊರಟ ಬೃಹತ್ ಚರಂಡಿಯಿಂದ ಎದ್ದೆದ್ದು ಬರುತ್ತಲೇ ಇದ್ದುವು. ಯಕ್.. ಕೊಳಕಾತಿ ಕೊಳಕು !!

ಇದನ್ನೂ ಓದಿ: Shishir Hegde Column: ನ್ಯೂಯಾರ್ಕ್‌ನ ನಾಯಿ ಮರಿಗೂ ನಮಗೂ ಜಾಸ್ತಿ ವ್ಯತ್ಯಾಸವಿಲ್ಲ!

ನಾನು ಆ ದಿನ ಅಲ್ಲಿ ನಿಂತದ್ದು ಹತ್ತೇ ಹತ್ತು ಸೆಕೆಂಡು ಇರಬಹುದು. ಯಾರಿಗೂ ಏನೂ ಹೇಳಲಿಲ್ಲ. ಹೊರಗೋಡಿ ಬಂದುಬಿಟ್ಟೆ. ಮತ್ತೆಂದೂ ಅಲ್ಲಿಂದ ಊಟ ತರಿಸಲಿಲ್ಲ ಎನ್ನುವುದು ಆಯ್ತಲ್ಲ. ಆ ಕೆಲವೇ ಕ್ಷಣದ ಅನುಭವದಿಂದ ನನ್ನ ಅತ್ಯಂತ ಪ್ರೀತಿಯ ಮಲಬಾರ್ ಪರೋಟಾವನ್ನು ನಾನು ಸುಮಾರು ಆರು ವರ್ಷ ತಿನ್ನಲೇ ಇಲ್ಲ !! ತಿನ್ನಲಿಕ್ಕೆ ಆಗುತ್ತಲೇ ಇರಲಿಲ್ಲ.

ಈಗ ಅದಾಗಿ ಹಲವು ವರ್ಷಗಳೇ ಕಳೆದಿವೆ. ಅದೆಷ್ಟೋ ದೇಶ, ಅದೆಷ್ಟೋ ಊಟ. ಆದರೆ ಇವತ್ತಿಗೂ — ಥಳಥಳ ಹೊಳೆಯುವ ರೆಸ್ಟೋರೆಂಟಿನಲ್ಲಿ, ಗೆಳೆಯನ ಮನೆಯ ಸ್ವಚ್ಛ ಅಡುಗೆಮನೆಯಲ್ಲಿ, ಮೂವತ್ತು ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುವ ವಿಮಾನದಲ್ಲಿ — ಎದುರಿಗೆ ಮಲಬಾರ್ ಪರೋಟ ಬಂದು ಕೂತ ಕ್ಷಣ, ಕೆಲವೊಮ್ಮೆ ಅದೇ ಸನ್ನಿವೇಶ ನೆನಪಾಗಿಬಿಡುತ್ತದೆ. ತಿನ್ನಲಿಕ್ಕಾಗು ವುದಿಲ್ಲ. ಇಂತಹ ಮತ್ತು ಇದಕ್ಕಿಂತ ಅಸಹ್ಯಕರ - disgusting ಸನ್ನಿವೇಶಗಳು ನಮ್ಮೆಲ್ಲರ ಜೊತೆ ಯೂ ನಡೆದಿರುತ್ತದೆ. ಅವು ಸುಲಭಕ್ಕೆ ಮರೆಯಲಾಗುವುದಿಲ್ಲ. ಕೆಲವೊಮ್ಮೆ ನಮಗೇನು ಮಾನಸಿಕ ವೇ ಎಂದೆನ್ನಿಸುವಷ್ಟು ಅವು ನಮ್ಮೊಳಗೆ ಗಟ್ಟಿ ಕೂತು ಕಾಡುತ್ತವೆ. ‘ಕೊಳಕು ಅಸಹ್ಯ’ ಎನ್ನುವುದು ಸಾಮಾನ್ಯದ ತಿರಸ್ಕಾರವಲ್ಲ ನೋಡಿ. ಅದು ನಮ್ಮನ್ನು ಹಿಂದಕ್ಕೆಳೆ ದುಬಿಡುತ್ತದೆ !

ಇದು ‘ಭಯ’ ಅಥವಾ ‘ಆಘಾತ’ ರೀತಿಯದಲ್ಲ. ಭಯದ ಜೊತೆ ನಾವು ವಾದ ಮಾಡುತ್ತೇವೆ, ಭಯವನ್ನು ಮೀರುತ್ತೇವೆ. ಆದರೆ ಹೇವರಿಕೆಯ ಅನುಭವ ನಮ್ಮೊಳಗೆ ರಜಿಸ್ಟರ್ ಆಗುವ ರೀತಿಯೇ ಬೇರೆ !

Screenshot_5 ok

ಕಳೆದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಒಹಾಯೋ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದ. ಅಲ್ಲಿ ಹೈಟಿ ದೇಶದಿಂದ ವಲಸೆ ಬಂದು ನೆಲೆಸಿದವರೇ ತುಂಬಿರುವ ಊರೊಂದಿದೆ. ಹೀಗಿರುವಾಗ ಅಲ್ಲೊಂದು ವರ್ಣ ಸಂಘರ್ಷ ಅಲ್ಲಿ ಸುಪ್ತವಾಗಿದೆ. ಟ್ರಂಪಣ್ಣನ ಚುನಾವಣೆ ಪ್ರಚಾರದ ಭಾಷಣ ಎಂದರೆ ಕೇಳಬೇಕೆ !

ಹೇಳಿ ಕೇಳಿ ಟ್ರಂಪ್. ‘ಈ ಹೈಟಿ ದೇಶದಿಂದ ಬಂದವರಿದ್ದಾರಲ್ಲ, ಅವರು ನಿಮ್ಮ ಮನೆಯ ಸಾಕು ನಾಯಿಬೆಕ್ಕುಗಳನ್ನು ಹಿಡಿದು ತಿನ್ನುತ್ತಾರೆ’ ಎಂದುಬಿಟ್ಟ. ಹಾಗೆ ಹೇಳಿದ್ದೇ ತಡ, ಇಡೀ ಊರಿಗೆ ಊರೇ ಇಬ್ಬಾಗವಾಗಿ ಹೋಯ್ತು ! ಇಷ್ಟು ಕಾಲ ಹೊರಗಿನವರೆಂದು ದ್ವೇಷಿಸುತ್ತಿದ್ದ ಉಳಿದವರಿಗೆ ಹೈಟಿ ಮಂದಿ ಕೊಳಕು, ಅಸಹ್ಯ ಎಂದೆನಿಸಲು ಶುರುವಾಯಿತು. ಹೈಟಿ ಮಂದಿ ಇರುವ ಶಾಲೆ, ಕಾಲೇಜು ಗಳಿಗೆ, ಕಚೇರಿಗಳಿಗೆ ಥ್ರೆಟ್ ಕಾಲ್ - ಬೆದರಿಕೆ ಕರೆ ಬಂದುವು ಇತ್ಯಾದಿ. ಉಳಿದವರು ತಮ್ಮ ಇಡೀ ಸಾಮಾಜಿಕ ವ್ಯವಸ್ಥೆಯೇ ಮಾಲಿನ್ಯಗೊಂಡು ಬಿಟ್ಟಿದೆ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು !!

ಟ್ರಂಪ್ ಹೈಟಿ ದೇಶದ ವಲಸಿಗರ ಬಗ್ಗೆ ಹೇಳುವಾಗ ಅವರು ಡೇಂಜರ್, ಕೆಟ್ಟವರು ಅನ್ನಲಿಲ್ಲ, ಬದಲಿಗೆ ಅವರು ಸಾಕು ನಾಯಿ, ಬೆಕ್ಕನ್ನು ಹಿಡಿದು ತಿನ್ನುತ್ತಾರೆ ಎಂದದ್ದು ದ್ವೇಷವನ್ನು ಮೀರಿ ಪರಿಣಾಮ ಬೀರಿತು. ಉಳಿದವರಿಗೆ ಹೈಟಿ ಜನರು ಮಹಾ ಕೊಳಕರೆನಿಸಿಬಿಟ್ಟಿತು. ಟ್ರಂಪ್ ಒಬ್ಬನೇ ಅಲ್ಲ, ಬಹಳಷ್ಟು ರಾಜಕಾರಣಿಗಳು ಕೊಳಕನ್ನು ನಾನಾ ರೀತಿ ಬಳಸಿಕೊಳ್ಳುವವರಿದ್ದಾರೆ.

ಯಾರನ್ನು ಯಾರೇ ಕೆಟ್ಟವರು ಎನ್ನುವುದಕ್ಕಿಂತ ‘ಕೊಳಕರು’ ಎನ್ನುವುದು ಬೀರುವ ಪರಿಣಾಮ ಹೆಚ್ಚು. ಅವನು ’ಕೆಟ್ಟವನು’ ಎಂದರೆ ಅಲ್ಲಿ ಪರಾಮರ್ಶೆಯ ಸಾಧ್ಯತೆ ಇದೆ. ಆದರೆ ಒಬ್ಬ ‘ಕೊಳಕ’ ಎಂದರೆ ಅಲ್ಲಿ ಮರುಪ್ರಶ್ನೆಯಿಲ್ಲ. ಕೊಳಕಿನಿಂದ ದೂರವಿರಬೇಕು. ಅಮಿತ್ ಶಾ ಗಡಿ ರಾಜ್ಯಗಳಲ್ಲಿ ನುಸುಳುಕೋರರನ್ನು ‘ಗೆದ್ದಲು’ ಎಂದು ಆರೋಪಿಸುವುದಿದೆ.

ಬಾಳ್ ಠಾಕ್ರೆ ಕೂಡ ಟ್ರಂಪ್ ನಂತದ್ದೇ ಕೆಲಸ ಮಾಡಿದ್ದರು. ‘ಏಕ್ ಬಿಹಾರಿ, ಸೌ ಬಿಮಾರಿ’ ಒಬ್ಬ ಬಿಹಾರಿ - ನೂರು ಬಿಮಾರಿ (ರೋಗ). ಠಾಕ್ರೆ ಒಂದು ಹೆಜ್ಜೆ ಮುಂದೆ ಹೋಗಿ ‘ಪುಂಗಿ ಬಜಾವೋ, ಲುಂಗಿ ಭಗಾವೋ’ ಎಂದೆಲ್ಲ ಹೇಳಿಕೆ ಕೊಟ್ಟು ನಮ್ಮ ಉಡುಪಿ ಹೋಟೆಲ್ಲಿನವರು ಮಹಾ ಕೊಳಕರ ಪಟ್ಟಿಗೆ ಸೇರಿಸಿದ್ದರು. ಈಗ ಕಾಕ್ರೋಚ್ ಪಾರ್ಟಿ ಇಷ್ಟೆಲ್ಲಾ ಸದ್ದು ಗದ್ದಲ ಮಾಡುತ್ತಿರುವುದು ಕೂಡ ಜಿರಳೆಯೆಂಬ ‘ಅಸಹ್ಯ’ ರೂಪಕದಿಂದಲೇ ಅಲ್ಲವೇ? ಇವೆಲ್ಲ - ರಾಜಕಾರಣ ಉದ್ದೀಪಿಸುವ ಕೊಳಕಿನ ಪ್ರಭಾವಗಳು. ಇವು ಮಿತಿ ಮೀರಿದಾಗ ರಾಜಕಾರಣ, ರಾಜಕಾರಣಿಗಳೇ ಅಸಹ್ಯವೆನಿಸು ವುದು ತಪ್ಪೇನಲ್ಲ ಬಿಡಿ ! ಹೆದರಿಕೆ, ತಿರಸ್ಕಾರ, ದ್ವೇಷ ಇತ್ಯಾದಿ ಎಲ್ಲವನ್ನೂ ಮೀರಿ ನಿಲ್ಲುತ್ತದೆ ಅಸಹ್ಯ - ಹೇವರಿಕೆ ! ಏಕಿದು?

ಅಸಹ್ಯ ಎನ್ನುವುದು ವಿಕಸನ (Evolution) ಮಾನವನಿಗೆ ನೀಡಿದ ಅತ್ಯಂತ ಹಳೆಯ ಜೀವ ರಕ್ಷಣಾ ವ್ಯವಸ್ಥೆಗಳಲ್ಲಿ ಒಂದು. ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಸೂಕ್ಷ್ಮಜೀವಿಗಳ ಅಸ್ತಿತ್ವದ ಬಗ್ಗೆ ಮನುಷ್ಯನಿಗೆ ಯಾವುದೇ ವೈಜ್ಞಾನಿಕ ಅರಿವು ಮೂಡುವುದಕ್ಕೂ ಮುಂಚೆ ನಮ್ಮನ್ನು ಬದುಕಿಸಿದ ಗುಣ ಇದು. ಕೊಳೆತ ಮಾಂಸ, ವಾಸನೆ, ವಾಂತಿ, ಮಲ, ಹಾಳಾದ ಆಹಾರ, ಕಲುಷಿತ ನೀರು, ಸಾಂಕ್ರಾ ಮಿಕ ರೋಗಗಳು ಅಥವಾ ಸೋಂಕು ಹರಡಬಹುದಾದ ಶವಗಳು - ಇವೆಲ್ಲವೂ ‘ಅಸಹ್ಯ’. ಸೂಕ್ಷ್ಮ ಜೀವಿಗಳ ಅಸ್ತಿತ್ವವನ್ನು ವಿಜ್ಞಾನ ಕಂಡುಹಿಡಿಯುವ ಮುನ್ನವೇ, ವಿಕಸನ ಸೋಂಕುಗಳಿಂದ ನಮ್ಮನ್ನು ರಕ್ಷಿಸುವ ಪರಿಹಾರವನ್ನು ಕಂಡುಕೊಂಡಿತ್ತು. ಅಸಹ್ಯ ಎನ್ನುವುದು ಕಣ್ಣಿಗೆ ಕಾಣದ ಅಪಾಯಗಳನ್ನು ಗುರುತಿಸಿ ನಮ್ಮನ್ನು ರಕ್ಷಿಸುವ ದೇಹದ ಮೊದಲ ಎಚ್ಚರಿಕೆಯ ಗಂಟೆಯಾಗಿ ರೂಪುಗೊಂಡಿತು. ಇವತ್ತಿಗೂ ‘ಅಸಹ್ಯಕರ’ ಸನ್ನಿವೇಶಗಳು ಅಷ್ಟು ಅಚ್ಚೊತ್ತಿ ನಿಲ್ಲುವುದು, ಪ್ರಭಾವ ಬೀರುವುದು ಆ ಕಾರಣಕ್ಕೆ !

ಸುಮ್ಮನೆ ನಿಮ್ಮ ಸುತ್ತಮುತ್ತ ಒಮ್ಮೆ ಗಮನಿಸಿ. ಮನೆಯೊಳಗೆ - ಯಾವುದೇ ಕೊಳಕು, ಕೊಳೆಯುವ ವಸ್ತು ಅಲ್ಲಿರುವುದಿಲ್ಲ. ಸತ್ತ ಇಲಿ ಜಿರಳೆಗಳನ್ನು ಯಾರೂ ಮನೆಯೊಳಗೆ ಬಿಟ್ಟಿರುವುದಿಲ್ಲ. ಹೊರಗೆ - ಕೇರಿ, ಬೀದಿ, ಬಡಾವಣೆ. ಕೊಳಕುಗಳನ್ನು ನಮ್ಮ ಕಣ್ಣಿಂದಾಚೆ ಇಡುವ ವ್ಯವಸ್ಥೆಯನ್ನೇ ನಾವು ರೂಪಿಸಿಕೊಂಡಿದ್ದೇವೆ. ನಗರಗಳಂತೂ ಈ ಕೊಳಕುಗಳನ್ನು ಹೊರಗಿಡಲು ಸುಸ್ತಾಗಿ ಸೋಲುತ್ತವೆ. ಮನುಷ್ಯ ಸಾಂದ್ರತೆ ಹೆಚ್ಚಿದಂತೆ ಕೊಳಕು ಹೆಚ್ಚುತ್ತದೆ, ಕೊಳಕನ್ನು ಇನ್ನಷ್ಟು ದೂರ ಸಾಗಿಸಬೇಕು.

ಕಸ, ಒಣಕಸ, ಮ, ಮೂ, ಸತ್ತ ದೇಹ, ವೈದ್ಯಕೀಯ ತ್ಯಾಜ್ಯ - ನಾಗರಿಕತೆ ಎಂದರೆ ಇದೆಲ್ಲ ಕೊಳೆಯು ವುದನ್ನು, ಅಸಹ್ಯವನ್ನು ಹೊರಗಿಡುವ ಬೃಹತ್ ಯಂತ್ರ. ನಮ್ಮ ಊರಿನಿಂದ, ಹಳ್ಳಿಯಿಂದ ಬಂದವರಿಗೆ ಬೆಂಗಳೂರು ಅತ್ಯಂತ ಕೊಳಕೆನ್ನಿಸುತ್ತದೆ.

ಏಕೆಂದರೆ ಅಲ್ಲಿ ಎಲ್ಲೆಂದರಲ್ಲಿ ಕೊಳಕು ಕಾಣಿಸುತ್ತದೆ. ಇಷ್ಟಾಗಿ - ಬೆಂಗಳೂರಿಂದ ಊರಿಗೆ ರಜೆಗೆ ಹೋದವನಿಗೆ ಅಲ್ಲೆಲ್ಲೋ ರಸ್ತೆಯಲ್ಲಿ ಮಳೆಯಿಂದ ಹರಡಿದ ಸಗಣಿ ಕಂಡು ದೂರದಿಂದ ಸರಿಯು ವಾಗ ಚಪ್ಪಲಿಯೊಳಗೆ ಕಾಲು ಜುಮ್ ಅನಿಸುತ್ತದೆ ! ಕೊಳಕು ಕೂಡ ಬಿಟ್ಟರೆ ಕ್ರಮೇಣ ಅಭ್ಯಾಸ ವಾಗುತ್ತದೆ, ಹೊಸ ಕೊಳಕು ಇನ್ನಷ್ಟು ಅಸಹ್ಯವೆನಿಸುತ್ತದೆ. ವಿಚಿತ್ರ.

ಆದರೆ ಜೀವನ ಈ ಕೊಳಕಿನ ಪರದೆಯನ್ನು ಸರಿಸಿ, ಅಸಹ್ಯದ ಪರಿಧಿಯನ್ನು ಮೀರುವ ಸನ್ನಿವೇಶ ವನ್ನು ಸೃಷ್ಟಿಸಿ ಬಿಡುತ್ತದೆ. ತಂದೆ, ತಾಯಿ ಹಾಸಿಗೆ ಹಿಡಿದು ಬಿಡುತ್ತಾರೆ. ಜೀವನ ಸಂಗಾತಿಗೆ ಕ್ಯಾನ್ಸರ್, ಅಥವಾ ಇನ್ನೇನೋ ಅನಾರೋಗ್ಯ ಬಂದು ಬಿಡುತ್ತದೆ. ವಯಸ್ಸಾದ ಅಜ್ಜ ಅಜ್ಜಿ ದೇಹದ ಅತ್ಯವಶ್ಯ ನಿಯಂತ್ರಣವನ್ನೇ ಕಳೆದುಕೊಂಡುಬಿಡುತ್ತಾರೆ. ಆಸ್ಪತ್ರೆಯ ವಾಸನೆ, ಗಾಯ, ಔಷಧಿ, ಕೊಳಕಾದ ಹಾಸಿಗೆ - ಇವೆಲ್ಲ ಇಷ್ಟು ಕಾಲ ಆಸ್ಪತ್ರೆಯ ಗೋಡೆಯಾಚೆ ಮರೆಯಲ್ಲಿದ್ದವು ಮನೆಯ ಭಾಗವಾಗಿಬಿಡುತ್ತವೆ ! ಯಾವುದೇ ಕುಟುಂಬ ಎದುರಿಸಬಹುದಾದ ಅತ್ಯಂತ ಕಷ್ಟದ ಸನ್ನಿವೇಶ ಇದು. ಒಂದು ಕಡೆ ಕೊಳಕು - ಅಸಹ್ಯ, ಇನ್ನೊಂದು ಕಡೆ ಪ್ರೀತಿ ಕರ್ತವ್ಯ. ಇವೆರಡರ ಮುಖಾಮುಖಿ. ಹಸೆಯಾಳು - ಹಾಸಿಗೆ ಹಿಡಿದವರನ್ನು ನೋಡಿಕೊಳ್ಳುವ ಕೆಲಸವಿದೆಯಲ್ಲ, ಅದು ನಾನಂದು ಕೊಂಡಂತಹ ಅತ್ಯಂತ ಕಷ್ಟದ ಕೆಲಸ.

ಒಬ್ಬ ವ್ಯಕ್ತಿ ಈ ಅಸಹ್ಯವನ್ನು ಮೀರುವುದಿದೆಯಲ್ಲ, ಅದು ಲಕ್ಷಾಂತರ ವರ್ಷದ ವಿಕಸನವನ್ನು ಮೀರುವ ಕೆಲಸ. ಅದನ್ನು ದಿನ, ತಿಂಗಳು, ವರ್ಷಾನುಗಟ್ಟಲೆ ಮಾಡಿದವರು ಬೇರಿನ್ನೆಲ್ಲೋ ಅಲ್ಲ, ನಮ್ಮ ಕುಟುಂಬ - ಸಂಬಂಧಿಕರಲ್ಲೇ ಸಿಕ್ಕಿಬಿಡುತ್ತಾರೆ.

ವಯಸ್ಸಾದ ತಂದೆಯ, ಮಾವನ ದೇಹವನ್ನು ಮೃದುವಾಗಿ ಶುಚಿಗೊಳಿಸುವ ಮಗಳು, ಸೊಸೆ, ತಾಯಿಯ ಮಲಿನವಾದ ಬಟ್ಟೆಗಳನ್ನು ಯಾವುದೇ ಅಸಹ್ಯವಿಲ್ಲದೆ ಬದಲಾಯಿಸುವ ಮಗ, ತಿಂಗಳುಗಟ್ಟಲೆ ಕೀಮೋಥೆರಪಿ ಪಡೆಯುತ್ತಿರುವ ಹೆಂಡತಿಗೆ ತಾಳ್ಮೆಯಿಂದ ಆಹಾರ ತಿನ್ನಿಸುವ ಗಂಡ, ವರ್ಷಗಳ ಕಾಲ ಹಾಸಿಗೆ ಹಿಡಿದ ಗಂಡನ ಆರೈಕೆಯನ್ನು ನಿಸ್ವಾರ್ಥವಾಗಿ ಮಾಡುವ ಹೆಂಡತಿ — ಇವರು ಹೊರಗಿನವರಿಗೆ ಸಾಮಾನ್ಯರು. ಇವರ ಹೆಸರುಗಳು ಯಾವತ್ತೂ ಸುದ್ದಿಯಾಗುವುದಿಲ್ಲ; ಇವರಿಗೆ ಪ್ರಶಸ್ತಿಗಳೂ ಸಿಗುವುದಿಲ್ಲ.

ಮಾನವೀಯತೆಯ ಅತ್ಯುನ್ನತ ಸ್ಥಿತಿ ಪ್ರಕಟವಾಗುವುದು ಇಂತಹ ಸಣ್ಣ ಕೊಠಡಿಗಳಲ್ಲಿ. ಅಸಹ್ಯ ಎಂಬ ನಮ್ಮ ಅತ್ಯಂತ ಆಳವಾದ ಸಹಜ ಪ್ರವೃತ್ತಿಯನ್ನು ಪ್ರೀತಿಯ ಬಲದಿಂದ ಮೀರಿ ನಿಲ್ಲುವುದು, ಕರುಣೆಯ ಶ್ರೇಷ್ಠ ರೂಪ. ಆ ವ್ಯಕ್ತಿ ಮಾನವೀಯತೆಯ ಶಿಖರವನ್ನು ಮುಟ್ಟುತ್ತಾನೆ.

ನಿಮಗೇ ನೇರ ಅನುಭವಿದ್ದರೆ ಸರಿ, ಇಲ್ಲದಿದ್ದರೆ ನಿಮಗೆ ಹೇಳಲೇ ಬೇಕು. ಕೆಲ ವರ್ಷದ ಹಿಂದೆ ಹೊರ ದೇಶದಲ್ಲಿ ನನ್ನ ಸ್ನೇಹಿತನೊಬ್ಬ ಅನಾರೋಗ್ಯಕ್ಕೆ ಒಳಗಾದ. ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಹಗಲಲ್ಲಿ ಆಫೀಸ್ ಮುಗಿಸಿ, ರಾತ್ರಿ ಅವನ ಜೊತೆ ಆಸ್ಪತ್ರೆಗೆ ಹೋಗಿ ಮಲಗುತ್ತಿದ್ದೆ. ಅವನ ದೇಹತ್ಯಾಜ್ಯವನ್ನು ದಾದಿಯರೇ ತೆಗೆಯುತ್ತಿದ್ದರು.

ಆದರೆ ಕೆಲವೊಮ್ಮೆ ರಾತ್ರಿ ಮೂತ್ರದ ಚೀಲ ತುಂಬಿಬಿಡುತ್ತಿತ್ತು. ಅದನ್ನು ಅಪರೂಪಕ್ಕೆ ನಾವೇ ಖಾಲಿಮಾಡಬೇಕಿತ್ತು. ಇದನ್ನು ನನ್ನ ಹೆಚ್ಚುಗಾರಿಕೆಗೆ ಹೇಳುತ್ತೇನೆಂದು ತಪ್ಪಾಗಿ ತಿಳಿಯಬೇಡಿ. ಜಗತ್ತಿನ ಅತ್ಯಂತ ಕಷ್ಟದ ಕೆಲಸ ಇದು. ತಮಾಷೆಯ ವಿಷಯವೇ ಅಲ್ಲ. ಮೊದಲ ಬಾರಿ ಮಾಡು ವಾಗಲಂತೂ, ಸಾಧ್ಯವೇ ಇಲ್ಲವೆನಿಸಿಬಿಡುತ್ತದೆ ! ಯಾರೇ ತಮ್ಮ ಆಪ್ತರು ಹಸೆಯಾಳಾದಾಗ ನೋಡಿಕೊಳ್ಳುತ್ತಾರಲ್ಲ, ಅವರ ಈ - ಅಸಹ್ಯವನ್ನು ಮೀರುವ ಪ್ರಕ್ರಿಯೆ - ಅದೊಂದು ಅತಿಮಾನುಷ ಮಾನವೀಯತೆ. ವಿವೇಕ.

ಆದರೆ ಅಂತಹ ಸನ್ನಿವೇಶದಲ್ಲಿ ಆ ಕೋಣೆಯಲ್ಲಿ ಅತ್ಯಂತ ದೊಡ್ಡ ‘ಅಸಹ್ಯ’ ಅನುಭವಿಸುತ್ತಿರು ವವರು ಆರೈಕೆ ಮಾಡುತ್ತಿರುವವರಷ್ಟೇ ಆಗಿರುವುದಿಲ್ಲ. ಹಾಸಿಗೆಯ ಮೇಲೆ ಮಲಗಿರುವವರು ಅದಕ್ಕಿಂತ ಹೆಚ್ಚಿನ ಒತ್ತಡದಲ್ಲಿರುತ್ತಾರೆ. ಅವರಿಗೆ ಕೂಡ ಎಲ್ಲವೂ ಕಾಣಿಸುತ್ತಿರುತ್ತದೆ. ವಾಸನೆ ಗೊತ್ತಾಗುತ್ತದೆ. ಮಗಳು ಬಾಗಿಲಲ್ಲಿ ಒಂದರೆಕ್ಷಣ ನಿಂತು ಉಸಿರೆಳೆದುಕೊಂಡು ಒಳಬಂದದ್ದೂ ಗೊತ್ತಾಗುತ್ತದೆ. ಇಷ್ಟು ವರ್ಷ ಈ ಮನೆಯನ್ನು ಕಟ್ಟಿದ ದೇಹ ಇವತ್ತು ಈ ಮನೆಯ ಕೊಳಕಿನ ಮೂಲವಾಗಿಬಿಟ್ಟಿದೆ ಎನ್ನುವುದೂ ತಿಳಿದಿರುತ್ತದೆ.

ಕೊನೆಯ ದಿನಗಳಲ್ಲಿ ಮನುಷ್ಯನನ್ನು ಕಾಡುವುದು ಸಾವಿನ ಭಯವಲ್ಲ, ‘ನಾನು ಇವರಿಗೆ ಅಸಹ್ಯ ವಾಗಿಬಿಟ್ಟೆ’ ಎಂಬ ಯೋಚನೆ. ಅದೇ ಕಾರಣಕ್ಕೆ ಅಪ್ಪ ‘ಬೇಡ ಬಿಡು, ನಾನೇ ಮಾಡಿಕೊಳ್ಳುತ್ತೇನೆ’ ಎಂದು ಆಗದ ಕೈಯನ್ನು ಎತ್ತಲು ಹೋಗುತ್ತಾನೆ. ಅದೇ ಕಾರಣಕ್ಕೆ ಅಮ್ಮ ‘ಇವತ್ತು ನೀನು ಬರುವುದು ಬೇಡ, ಸುಸ್ತಾಗಿರುತ್ತೀಯ’ ಎನ್ನುತ್ತಾಳೆ. ಅದೆಷ್ಟೋ ಬಾರಿ ಮಗಳು, ಸೊಸೆ ಬರೀ ಶುಚಿ ಗೊಳಿಸುವ ಕೆಲಸವನ್ನಷ್ಟೇ ಮಾಡಿರುವುದಿಲ್ಲ. ಹೆಚ್ಚಿನ ಮಾತಾಡದೆ, ಮುಖ ಕಿವುಚದೆ, ಸಹಜವಾಗಿ ಕೆಲಸ ಮುಗಿಸಿ, ದಿಂಬು ಸರಿಮಾಡಿ ಹೊರಡುವ ಆ ಒಂದು ಕ್ರಿಯೆಯ ಮೂಲಕ ಅವಳು ‘ನೀವು ಕೊಳಕಲ್ಲ’ ಎನ್ನುವುದನ್ನು ವ್ಯಕ್ತಪಡಿಸಲು ಹೆಣಗಾಡುತ್ತಾಳೆ.

ಆ ಕಾರಣಕ್ಕೆ ಆಸ್ಪತ್ರೆಯ ನರ್ಸ್, ಮರಣಶಯ್ಯೆಯಲ್ಲಿರುವವರನ್ನು ನೋಡಿಕೊಳ್ಳುವ ದಾದಿಯರು ಇವರೆಲ್ಲರದ್ದು ಉದ್ಯೋಗವಲ್ಲ, ಸೇವೆ.

ಶಿಶಿರ್‌ ಹೆಗಡೆ

View all posts by this author