ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಗಂಗಾಸ್ನಾನಂ ತುಂಗಾಪಾನಂ, ಪಾಪನಾಶಿನಿ ʼಗಂಗೆʼ

ನನ್ನ ಪತಿ ಯಾವುದೇ ಪಾಪ ಮಾಡದ ಮಹಾ ಪುಣ್ಯವಂತ. ಅವರನ್ನು ಮುಟ್ಟುವವರು ಸಂಪೂರ್ಣ ವಾಗಿ ಪಾಪರಹಿತರಾಗಿರಬೇಕು. ಒಂದು ವೇಳೆ ನಿಮ್ಮಲ್ಲಿ ಸಣ್ಣ ಪಾಪವಿದ್ದರೂ ನೀವು ಅವರನ್ನು ಮುಟ್ಟಿದ ತಕ್ಷಣ ಭಸ್ಮವಾಗಿ ಹೋಗುವಿರಿ! ಎಂದು ನಿಬಂಧನೆಯನ್ನು ವಿಧಿಸಿದಳು. ಈ ಮಾತನ್ನು ಕೇಳಿದ ತಕ್ಷಣ ಬಂದವರೆಲ್ಲರೂ ಹೆದರಿ ಹಿಂದೆ ಸರಿದರು. ತಾವ್ಯಾರೂ ನಿಷ್ಪಾಪರಲ್ಲ ಎಂಬ ಅರಿವು ಅವರಿಗಿತ್ತು.

ಒಂದೊಳ್ಳೆ ಮಾತು

ಒಮ್ಮೆ ದೇವದೇವನಾದ ಪರಶಿವ ಮತ್ತು ಜಗನ್ಮಾತೆ ಪಾರ್ವತಿಯು ಗಗನಮಾರ್ಗದಲ್ಲಿ ವಿಹರಿಸುತ್ತಾ ಹರಿದ್ವಾರದ ಪುಣ್ಯಕ್ಷೇತ್ರದ ಮೇಲಿಂದ ಸಾಗುತ್ತಿದ್ದರು. ಕೆಳಗೆ ಕಣ್ಣು ಹಾಯಿಸಿದಾಗ ಅವರಿಗೆ ಪರಮ ಪಾವನೆ ಗಂಗೆಯ ಒಡಲಿನಲ್ಲಿ ಮುಳುಗೇಳುತ್ತಿದ್ದ ಭಕ್ತರ ಸಾಗರವೇ ಕಂಡುಬಂದಿತು. ಸಾವಿರಾರು ಜನ ನದಿಯಲ್ಲಿ ಸ್ನಾನ ಮಾಡಿ, ಧಾವಿಸುತ್ತಿದ್ದರು. ಆದರೆ, ಈ ಭಕ್ತರ ಮುಖದಲ್ಲಿ ಸಂತೃಪ್ತಿ ಆನಂದ ಕಾಣುತ್ತಿರಲಿಲ್ಲ ಬದಲಾಗಿ ಅದೊಂದು ರೀತಿಯ ದುಗುಡವಿತ್ತು.

ಇದನ್ನು ಕಂಡು ಆಶ್ಚರ್ಯಗೊಂಡ ಪಾರ್ವತಿಯು ಶಿವನನ್ನು ಕುರಿತು, ಸ್ವಾಮಿ, ಪಾಪನಾಶಿನಿ ಯಾದ ಗಂಗೆಯಲ್ಲಿ ಇಷ್ಟೊಂದು ಜನ ದಿನವೂ ಸ್ನಾನ ಮಾಡುತ್ತಿದ್ದರೂ ಇವರ ದುಃಖ ಮತ್ತು ಪಾಪಗಳು ಏಕೆನಾಶವಾಗುತ್ತಿಲ್ಲ? ಹಾಗಾದರೆ ಗಂಗೆಗೆ ಪಾಪ ಕಳೆಯುವ ಶಕ್ತಿ ಇಲ್ಲವೇ? ಎಂದು ಸಂಶಯದಿಂದ ಕೇಳಿದಳು.

ಅದಕ್ಕೆ ಈಶ್ವರನು ಮುಗುಳ್ನಗುತ್ತಾ, ದೇವಿ, ಗಂಗೆಗೆ ಪಾಪ ತೊಳೆಯುವ ಸಾಮರ್ಥ್ಯ ಖಂಡಿತ ಇದೆ. ಆದರೆ, ಈ ಜನರೆಲ್ಲರೂ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಿಲ್ಲ, ಕೇವಲ ನೀರಿನಲ್ಲಿ ಮುಳುಗೇ ಳುತ್ತಿದ್ದಾರೆ. ಹಾಗಾಗಿ ಇವರ ಪಾಪಗಳು ಕರಗುತ್ತಿಲ್ಲ ಎಂದನು. ಪಾರ್ವತಿಗೆ ಇದು ಮತ್ತಷ್ಟು ಗೊಂದಲ ಮೂಡಿಸಿತು. ಅದು ಹೇಗೆ ಸಾಧ್ಯ ಪ್ರಭು? ಅವರ ಶರೀರದಿಂದ ಇನ್ನೂ ನೀರು ಇಳಿಯು ತ್ತಿದೆಯಲ್ಲವೇ? ಎಂದಳು. ಶಿವನು ನಕ್ಕು, ಇದಕ್ಕೆ ಉತ್ತರವನ್ನು ನಿನಗೆ ನಾಳೆ ಪ್ರತ್ಯಕ್ಷವಾಗಿ ತೋರಿ ಸುವೆ ಎಂದನು.

ಇದನ್ನೂ ಓದಿ: Roopa Gururaj Column: ಶೂನ್ಯದಿಂದ ಕೋಟಿಗಳ ಸಾಮ್ರಾಜ್ಯ: ಚೋಬಾನಿ ಮೊಸರಿನ ಯಶೋಗಾಥೆ

ಮರುದಿನ ಶಿವನು ತನ್ನ ಲೀಲೆಯಿಂದ ವೃದ್ಧ ಬ್ರಾಹ್ಮಣನ ವೇಷ ಧರಿಸಿದನು. ಅವನೇ ಗಂಗಾ ನದಿಯ ಸ್ನಾನಕ್ಕೆ ಇಳಿದು, ಆಯತಪ್ಪಿ ಆಳವಾದ ಒಂದು ನೀರಿನ ಗುಂಡಿಯಲ್ಲಿ ಬಿದ್ದನು. ಮುದುಕ ನಿಗೆ ಮೇಲೆ ಬರಲು ಶಕ್ತಿ ಇರಲಿಲ್ಲ. ಆಗ ಶಿವನು ಪಾರ್ವತಿಗೆ ಕಿವಿಯಲ್ಲಿ ಉಪಾಯ ವೊಂದನ್ನು ಹೇಳಿ, ಸಹಾಯಕ್ಕಾಗಿ ಜನರನ್ನು ಕರೆಯಲು ಸೂಚಿಸಿದನು.

ಪಾರ್ವತಿಯು ತಕ್ಷಣವೇ ಅಲ್ಲಿದ್ದ ಜನರ ಗುಂಪನ್ನು ನೋಡಿ, ದಯವಿಟ್ಟು ಯಾರಾದರೂ ಸಹಾಯ ಮಾಡಿ! ನನ್ನ ವಯಸ್ಸಾದ ಪತಿ ನೀರಿನ ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಅವರನ್ನು ಮೇಲೆತ್ತಲು ನನಗೂ ಶಕ್ತಿಯಿಲ್ಲ, ದಯವಿಟ್ಟು ಬನ್ನಿ ಎಂದು ಕೂಗಿದಳು. ಅವಳ ಕರುಣಾಜನಕ ಕರೆಯನ್ನು ಕೇಳಿ ಕೆಲವರು ಸಹಾಯ ಮಾಡಲು ಓಡಿ ಬಂದರು. ಆಗ ಪಾರ್ವತಿಯು ಅವರನ್ನು ತಡೆದು, ನಿಲ್ಲಿಸಿ!

ನನ್ನ ಪತಿ ಯಾವುದೇ ಪಾಪ ಮಾಡದ ಮಹಾ ಪುಣ್ಯವಂತ. ಅವರನ್ನು ಮುಟ್ಟುವವರು ಸಂಪೂರ್ಣ ವಾಗಿ ಪಾಪರಹಿತರಾಗಿರಬೇಕು. ಒಂದು ವೇಳೆ ನಿಮ್ಮಲ್ಲಿ ಸಣ್ಣ ಪಾಪವಿದ್ದರೂ ನೀವು ಅವರನ್ನು ಮುಟ್ಟಿದ ತಕ್ಷಣ ಭಸ್ಮವಾಗಿ ಹೋಗುವಿರಿ! ಎಂದು ನಿಬಂಧನೆಯನ್ನು ವಿಧಿಸಿದಳು. ಈ ಮಾತನ್ನು ಕೇಳಿದ ತಕ್ಷಣ ಬಂದವರೆಲ್ಲರೂ ಹೆದರಿ ಹಿಂದೆ ಸರಿದರು. ತಾವ್ಯಾರೂ ನಿಷ್ಪಾಪರಲ್ಲ ಎಂಬ ಅರಿವು ಅವರಿಗಿತ್ತು.

ಶಿವನು ಪಾರ್ವತಿಯನ್ನು ನೋಡಿ, ನೋಡಿದೆಯಾ ದೇವಿ, ಇವರಲ್ಲಿ ಒಬ್ಬನಿಗೂ ತಾನು ಗಂಗೆಯಲ್ಲಿ ಸ್ನಾನ ಮಾಡಿ ಪವಿತ್ರನಾಗಿದ್ದೇನೆ ಎಂಬ ನಂಬಿಕೆ ಇಲ್ಲ ಎನ್ನುತ್ತಿರುವಾಗಲೇ, ಒಬ್ಬ ಯುವಕ ಮುಗುಳ್ನಗುತ್ತಾ ಮುದುಕನ ರಕ್ಷಣೆಗೆ ಧಾವಿಸಿದನು. ಪಾರ್ವತಿ ಅವನನ್ನೂ ತಡೆದು ಅದೇ ನಿಬಂಧನೆ ಯನ್ನು ನೆನಪಿಸಿದಳು.

ಆಗ ಆ ಯುವಕನು ಧೃತಿಗೆಡದೆ ದೃಢಸ್ವರದಲ್ಲಿ, ಅಮ್ಮಾ, ನಾನೂ ಮನುಷ್ಯನೇ, ನನ್ನಿಂದಲೂ ಅರಿತೋ ಅರಿಯದೆಯೋ ತಪ್ಪುಗಳಾಗಿವೆ. ಆದರೆ, ನಾನು ಈಗ ತಾನೇ ಈ ಪವಿತ್ರ ಪಾಪನಾಶಿನಿ ಗಂಗೆಯಲ್ಲಿ ಭಕ್ತಿಯಿಂದ ಮುಳುಗಿ ಸ್ನಾನ ಮಾಡಿ ಬಂದಿದ್ದೇನೆ. ಗಂಗೆಯಲ್ಲಿ ಸ್ನಾನ ಮಾಡಿದ ಮೇಲೂ ನನ್ನ ಪಾಪಗಳು ಉಳಿಯಲು ಹೇಗೆ ಸಾಧ್ಯ? ಗಂಗೆಯ ಮೇಲೆ ನನಗೆ ಪೂರ್ಣ ನಂಬಿಕೆ ಯಿದೆ.

ನಾನು ನಿಮ್ಮ ಪತಿಯನ್ನು ರಕ್ಷಿಸುತ್ತೇನೆ ಎಂದು ಹೇಳಿ, ಧೈರ್ಯದಿಂದ ಹೊಂಡಕ್ಕೆ ಇಳಿದು ವೃದ್ಧ ನನ್ನು ದಡಕ್ಕೆ ತಂದು ನಿಲ್ಲಿಸಿದನು.ತಕ್ಷಣವೇ ವೃದ್ಧ ಬ್ರಾಹ್ಮಣ ಮಾಯವಾಗಿ ಶಿವ-ಪಾರ್ವತಿ ಯರು ತಮ್ಮ ನಿಜರೂಪದಲ್ಲಿ ದರ್ಶನ ನೀಡಿ ಮನುಷ್ಯನಾದ ಮೇಲೆ ತಪ್ಪು-ಒಪ್ಪುಗಳು ಸಹಜ. ಇದಕ್ಕಾ ಗಿಯೇ ‘ಗಂಗಾ ಸ್ನಾನಂ ತುಂಗಾಪಾನಂ’ ಎಂಬ ನಾಣ್ನುಡಿ ಬಂದಿದೆ. ʼ

ನಾವು ಮಾಡುವ ಪೂಜೆ, ವ್ರತ, ದಾನ ಅಥವಾ ಸ್ನಾನ ಏನೇ ಇರಲಿ, ಅದರಲ್ಲಿ ದೃಢವಾದ ‘ನಂಬಿಕೆ’ ಇರಬೇಕು. ಶುದ್ಧ ಮನಸ್ಸಿನಿಂದ ಭಗವಂತನನ್ನು ಸ್ಮರಿಸಿದರೆ ಅಂತರಂಗ ಮತ್ತು ಬಹಿರಂಗ ಎರಡೂ ಶುದ್ಧಿಯಾಗುತ್ತದೆ. ನಂಬಿಕೆಯೇ ನಿಜವಾದ ಶಕ್ತಿ ಎಂದು ಆಶೀರ್ವದಿಸಿದರು.

ನಾವು ಮಾಡಿದ ಪುಣ್ಯಕಾರ್ಯಗಳು ಫಲ ನೀಡದಿದ್ದಾಗ ತಾಳ್ಮೆಯಿಂದ ಕಾಯಬೇಕು ಮತ್ತು ಮಾಡುವ ಕರ್ತವ್ಯದಲ್ಲಿ ಅಚಲವಾದ ವಿಶ್ವಾಸವಿರಬೇಕು ಎಂಬ ಸತ್ಯ ನಮಗೆ ಅರಿವಿದ್ದರೆ ಜೀವನದಲ್ಲಿ ಎಂದೂ ಧೈರ್ಯ ಕಳೆದುಕೊಳ್ಳುವುದಿಲ್ಲ.

ರೂಪಾ ಗುರುರಾಜ್

View all posts by this author