ತುಂಟರಗಾಳಿ
ಸಿನಿಗನ್ನಡ
ಇತ್ತೀಚೆಗೆ ಕೆಲವರು ಸಿನಿಮಾ ಆಡಿಷನ್‌ಗೆ ಅಂತ ಕರೆದು ಅಲ್ಲಿಗೆ ಅವಕಾಶಕ್ಕಾಗಿ ಬರುವವರನ್ನು ಬಕ್ರಾ ಮಾಡುತ್ತಿರುವ ಘಟನೆಗಳು ವರದಿಯಾಗಿವೆ. ಹಾಗೆ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕೆ ಅಂತ ಬಂದವರ ಬಳಿ, ‘ನೀವು ಕಲಾವಿದರ ಸಂಘದ ಕಾರ್ಡ್ ಮಾಡಿಸಿಕೊಳ್ಳಬೇಕು. ಅದಕ್ಕೆ ಇಷ್ಟು ಖರ್ಚಾಗುತ್ತೆ, ಅದೆ ನಾವೇ ಮಾಡಿಸಿಕೊಡ್ತೀವಿ’ ಅಂತ ದುಡ್ಡು ಪೀಕುತ್ತಿರೋ ಇವರನ್ನು ನೋಡಿದ ಮೇಲೆ ಯಂಡಮೂರಿ ವೀರೇಂದ್ರನಾಥ್ ಅವರು ‘ದುಡ್ಡು ಮಾಡುವುದು ಹೇಗೆ?’ ಎಂಬ ತಮ್ಮ ಪುಸ್ತಕದಲ್ಲಿ ಬರೆದ ಒಂದು ವಿಷಯ ನೆನಪಾಯಿತು.
ಯಂಡಮೂರಿ ಇದನ್ನ ಎಷ್ಟು ಜಾಣ್ಮೆಯಿಂದ ಬರೆದಿದ್ದಾರೆ ಅಂದ್ರೆ ಯಾರೂ ಈ ರೀತಿ ಮೋಸ ಮಾಡುವವರ ಮೇಲೆ ಕೇಸು ಹಾಕುವಂತಿಲ್ಲ. ಆ ಪ್ಲ್ಯಾನ್ ಏನಪ್ಪಾ ಅಂದ್ರೆ, ‘ನಾವು ಸಿನಿಮಾ ಮಾಡ್ತಾ ಇದ್ದೀವಿ, ಕಲಾವಿದರು ಬೇಕಾಗಿದ್ದರೆ’ ಅಂತ ಕಾಲ್ ಮಾಡೋದು.
ಅಲ್ಲಿಗೆ ಬರುವವರಿಗೆಲ್ಲ, ‘ನಿಮಗೆ ನಮ್ಮ ಸಿನಿಮಾದಲ್ಲಿ ಅಭಿನಯಿಸೋಕೆ ತರಬೇತಿ ಕೊಡ್ತೀವಿ, ತರಬೇತಿ ಮುಗಿದ ಮೇಲೆ ನಾವು ಸಿನಿಮಾ ಮಾಡುವಾಗ ನಿಮ್ಮನ್ನ ಕರೆದು 100 ಪರ್ಸೆಂಟ್ ಅವಕಾಶ ಕೊಡುತ್ತೇವೆ ಅಂತ ಅಗ್ರಿಮೆಂಟ್ ಮಾಡಿಕೊಡ್ತೀವಿ. ಆದ್ರೆ ತರಬೇತಿಗೆ ಅಂತ ನೀವು 25 ಸಾವಿರ ರುಪಾಯಿ ಕೊಡಬೇಕು’ ಅಂತ ಎಲ್ಲರಿಂದ 25 ಸಾವಿರ ರುಪಾಯಿ ತಗೊಂಡು, ಅದರಲ್ಲಿ ಒಂದೆರಡು ಸಾವಿರ ಖರ್ಚು ಮಾಡಿ, ಯಾವುದೋ ಕೆಲಸಕ್ಕೆ ಬಾರದ ಕೆಲವು ತರಬೇತಿ ಕೊಟ್ಟಂತೆ ಮಾಡಿ ಕಳಿಸೋದು.
ಇವರ ಪ್ಲ್ಯಾನ್ ಏನಪ್ಪಾ ಅಂದ್ರೆ ಕಥೆ ಅಲ್ಲಿಗೇ ಮುಗೀತು. ಅವರು ಯಾವತ್ತೂ ಸಿನಿಮಾ ಮಾಡೋ ದೇ ಇಲ್ಲ. ಅವರು ಅಗ್ರಿಮೆಂಟ್‌ನಲ್ಲಿ ಹೇಳಿರೋದು ‘ನಾವು ಸಿನಿಮಾ ಮಾಡುವಾಗ 100 ಪರ್ಸೆಂಟ್ ನಿಮ್ಮನ್ನು ಕರೆದು ಅವಕಾಶ ಕೊಡ್ತೀವಿ’ ಅಂತ. ಸಿನಿಮಾ ಮಾಡೇ ಮಾಡ್ತೀವಿ ಅಂತೇನೂ ಹೇಳಿಲ್ಲ. ಅಲ್ಲಿಗೆ ಅವರು ಸಿನಿಮಾ ಮಾಡಲ್ಲ, ಇವರಿಗೆ ಅವಕಾಶ ಸಿಗಲ್ಲ. ಆದರೆ, ಅವರಿಗೆ ಮಾತ್ರ ಪ್ರತಿಯೊಬ್ಬ ರಿಂದ ಕಮ್ಮಿ ಅಂದ್ರೂ 20 ಸಾವಿರ ರುಪಾಯಿ ಉಳಿಯುತ್ತೆ. ಪುಣ್ಯಕ್ಕೆ ಸ್ಯಾಂಡಲ್ ವುಡ್‌ನಲ್ಲಿ ಇಂಥ ಕೆಲಸ ಇನ್ನೂ ಯಾರೂ ಮಾಡಿಲ್ಲ.
ಇದನ್ನೂ ಓದಿ: Hari Paraak Column: ಎವ್ವೆರಿ ಡೇ ಈಸ್ ನಾಟ್ ಫ್ರೈಡೇ
ಲೂಸ್ ಟಾಕ್-ಸಿ.ಡಿ. ರಾಜಕಾರಣಿ
ಸರ್, ನಿಮ್ದೊಂದ್ ಸಿಡಿ ಬರುತ್ತೆ ಅಂತ ಸುದ್ದಿ ಇತ್ತಲ್ಲ, ಏನಾಯ್ತು ಸರ್, ರಿಲೀಸ್ ಆಗ್ಲೇ ಇಲ್ಲ?
- ಡಿಸೆಂಬರ್ ತಿಂಗಳಲ್ಲಿ ದೊಡ್ ದೊಡ್ ಸಿನಿಮಾ ಇದ್ವಲ್ಲ, ಅದಕ್ಕೆ ರಾಂಗ್ ರಿಲೀಸ್ ಆಗುತ್ತೆ ಅಂತ ಸುಮ್ನೆ ಆದ್ರು ಅನ್ಸುತ್ತೆ. ಹೋಗ್ರಿ, ಹೋಗ್ರಿ.
ಬೇಜಾರ್ ಮಾಡ್ಕೊಬೇಡಿ ಸರ್, ಆದ್ರೂ ಬಹಳ ಜನ ಕಾಯ್ತಾ ಇದ್ರು ಆ ಸಿ.ಡಿ.ಗೋಸ್ಕರ..
- ಯಾರ್ ಕಾಯ್ತಾ ಇದ್ರೋ ಇಲ್ವೋ, ನೀವ್ ಮೀಡಿಯಾದೋರ್ ಮಾತ್ರ ಬರ‘ಸಿಡಿ’ಲಿನಂಥ ಸುದ್ದಿ ಅಂತ ಹಾಕೋಕೆ ಬರಗೆಟ್ಟುಕೊಂಡು ಕಾಯ್ತಾ ಇದ್ರಿ ಅನ್ನೋದ್ ಮಾತ್ರ ನಿಜ.
ಹಂಗೆಲ್ಲ ಏನಿಲ್ಲ ಬಿಡಿ. ಸರಿ, ಆದ್ರೂ ನೀವು ರಾಜಕಾರಣಿಗಳಿಗೆ ಈ ಸಿ.ಡಿ. ಅನ್ನೋದು ಬಹಳ ಹೆದರಿಸುತ್ತೆ ಅಲ್ವಾ ಸರ್?
- ಯಾವ್ ಹೆದ್ರಿಕಿನೂ ಇಲ್ಲ, ನಾವು ಈ ಸಿ.ಡಿ.ಗಳಿಗೆ ಉತ್ರ ಕೊಡೋಕೆ ಅಂತನೇ, ಉಪೇಂದ್ರಂದು ‘ಬುದ್ಧಿವಂತ’ ಸಿನಿಮಾ ಸಿ.ಡಿ. ಕೈಯಲ್ ಇಟ್ಕೊಂಡೇ ಅಡ್ಡಾಡ್ತೀವಿ. ಸಿ.ಡಿ. ಬಂದ ತಕ್ಷಣ ‘ನಾನವನಲ್ಲ’ ಅಂತ ಹೇಳೋಕೆ.
ಅದ್ ನಿಜ ಬಿಡಿ, ಆದ್ರೆ ನಿಮ್ಗೆ ಭಯ ಆಗಿತ್ತಾ ಸರ್, ನಿಜ ಹೇಳಿ?
- ಅಯ್ಯೋ, ನಂಗ್ಯಾಕ್ರೀ ಭಯ?, ಇಂಥವೆಲ್ಲ ‘ಹೊರಗೆ ಬರ್ತಾವೆ’ ಅಂತಾನೇ ನಾನು ಮೊದ್ಲೇ ಕೋರ್ಟಿಂದ ‘ಸ್ಟೇ ಆನ್’ ತಂದಿದ್ದೆ.
ಸರ್, ಅದು ‘ಸ್ಟೇ ಆನ್’ ಅಲ್ಲ, ‘ಸ್ಟೇ ಆರ್ಡರ್. ಅರ್ಥ ಬೇರೆ ಆಗುತ್ತೆ. ಹೋಗ್ಲಿಬಿಡಿ, ಅಂದ್ರೆ ನೀವು ಈಗ ಅದರ ಬಗ್ಗೆ ಚಿಂತೆ ಮಾಡ್ತಿಲ್ಲ ಅಂತಾಯ್ತು.
-ಚಿಂತೆ ಮಾಡ್ತಿಲ್ಲ ಅಂತ ಹೇಳೋಕಾಗಲ್ಲ, ಯಾಕಂದ್ರೆ ಭೂಮಿ ಗುಂಡಗಿದೆ, ಸಿ.ಡಿ.ನೂ ಗುಂಡಗಿದೆ. ಮತ್ತೆ ತಿರುಗಿಕೊಂಡು ಅಲ್ಲಿಗೇ ಬಂದ್ರೂ ಬರಬಹುದು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಚರ್ಚ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಡ್ರೋನ್ ಪ್ರದೀಪ ತಾನು ಮಾಡಿದ ತಪ್ಪನ್ನು ಕನ್ ಫ್ಯೂಸ್ ಮಾಡಿಕೊಳ್ಳಲು ಚರ್ಚಿಗೆ ಹೋದ. ಅಲ್ಲಿ ಫಾದರ್ ಅವರನ್ನು ಕಂಡು “ಫಾದರ್ ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಈಗ ನಾನು ಅದನ್ನು ಕನ್ ಫ್ಯೂಸ್ ಮಾಡಿಕೊಳ್ಳುತ್ತಿದ್ದೇನೆ" ಅಂದ. ಕನ್ ಫ್ಯೂಷನ್ ಫಾರ್ಮಾಲಿಟಿ ಗಳನ್ನೆ ಮುಗಿಸುವ ಮುಂಚೆ ಫಾದರ್ “ಸರಿ ಪ್ರದೀಪ್, ನಿನ್ನ ಕನ್ ಫ್ಯೂಷನ್‌ಗೆ ವ್ಯವಸ್ಥೆ ಮಾಡು ತ್ತೇನೆ. ಆದರೆ ನೀನು ಸಂಬಂಧ ಬೆಳೆಸಿದ ಆ ಹುಡುಗಿಯ ಹೆಸರೇನು?" ಅಂತ ಕೇಳಿದರು. ಅದಕ್ಕೆ ಡ್ರೋನ್ ಪ್ರದೀಪ ಉತ್ತರಿಸಿದ “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ". ಫಾದರ್ ಕೇಳುತ್ತಲೇ ಹೋದರು, ಪ್ರದೀಪ ಉತ್ತರಿಸುತ್ತಲೇ ಹೋದ.
“ಅದ್ಸರಿ, ನಮ್ಮ ಏರಿಯಾದಲ್ಲಿ ಅಂಥ ಹುಡುಗಿಯರು ಯಾರಿದ್ದಾರೆ?"
“ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋ ಕಾಗಲ್ಲ"
“ಚರ್ಚ್ ಹಿಂದಿನ ರೋಡಿನ ತೆರೆಸಾನಾ?"
“ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ"
“ಲೈಬ್ರೆರಿಯನ್ ಕ್ಯಾಥಿನಾ?"
“ಸಾರಿ ಫಾದರ್, ನಾನು ಅದನ್ನು ಡಿಸ್ ಸ್ ಮಾಡೋಕಾಗಲ್ಲ"
“ಫ್ಲವರ್ ಶಾಪ್‌ನಲ್ಲಿ ಕೆಲಸ ಮಾಡೋ ರೋಸಿ?"
“ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ"
ಸರಿ, ಫಾದರ್‌ಗೆ ಇವನು ಬಾಯಿಬಿಡಲ್ಲ ಅಂತ ಗೊತ್ತಾಯ್ತು. ಕನ್ ಫ್ಯೂಷನ್ ಮುಗಿಸಿ, “ನೀನು ಯಾರ ಹೆಸರನ್ನೂ ಹೇಳಲಿಲ್ಲ. ಅದನ್ನು ನಾನು ಮೆಚ್ಚಿದ್ದೇನೆ. ಆದರೆ ತಪ್ಪಿಗೆ ಶಿಕ್ಷೆ ಆಗಲೇಬೇಕು. ಹಾಗಾಗಿ ನೀನು 4 ವಾರಗಳ ಕಾಲ ಚರ್ಚಿಗೆ ಬರುವಂತಿಲ್ಲ" ಅಂತ ಹೇಳಿ ಕಳುಹಿಸಿದರು. ಹೊರಗೆ ಬಂದ ಪ್ರದೀಪನನ್ನು ಅವನ ಸ್ನೇಹಿತ ಕೇಳಿದ, “ನೋಡಿದ್ಯಾ, ಸತ್ಯ ಹೇಳಿದ್ದಕ್ಕೆ ನಿಂಗೆ ಏನು ಸಿಕ್ತು?". ಅದಕ್ಕೆ ಪ್ರದೀಪ ತುಂಟತನದಿಂದ ಹೇಳಿದ- “ನಾಲ್ಕು ವಾರಗಳ ರಜೆ ಮತ್ತು ನನ್ನಂಥ ಹುಡುಗರ ಬಲೆಗೆ ಬೀಳುವಂಥ ೩ ಹುಡುಗಿಯರ ಡೀಟೇಲ್ಸ್".
ಲೈನ್ ಮ್ಯಾನ್
ಧೂಮಪಾನ ವಿರೋಧಿ ಸ್ಲೋಗನ್
- ಮಾಸ್: ಸ್ವಲ್ಪ ದಿನ ಹೊಗೆ ಬಿಟ್ಟ, ಆಮೇಲೆ ಹೋಗೇ ಬಿಟ್ಟ
- ಕ್ಲಾಸ್: ಸಿಗರೇಟನ್ನು ‘ಆರಿಸಿ’, ಆರೋಗ್ಯವನ್ನು ‘ಆರಿಸಿ’.
ಹಾಡಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ ಏನಂತ ಹೇಳ್ತಾರೆ?
- ‘ಸಾಂಗೋ’ಪಾಂಗವಾಗಿ ನೆರವೇರಿತು.
ರೋಡ್ ಮೂವೀಸ್‌ನ ಕನ್ನಡದಲ್ಲಿ ಏನಂತಾರೆ?
- ‘ರೋಡಿಸಂ’ ಮೂವೀಸ್ ಎಟಿಎಂ ಕಾರ್ಡ್ ಎಟಿಎಂ ಮಷಿನ್‌ನ ಸಿಕ್ಕಿ ಹಾಕಿಕೊಂಡ್ರೆ ಅದು
- ಕಾರ್ಡಿಯಾಕ್ ಅರೆಸ್ಟ್
ಸದಾ ಧೋತಿ ಉಡೋನಿಗೆ ಪ್ಯಾಂಟ್ ಹಾಕೋ ಆಸೆ ಬಂದರೆ ಅದು
- ‘ಪ್ಯಾಂಟ’ಸಿ
ಔಷಧಿಯ ಸಸ್ಯಗಳನ್ನು ಬೆಳೆಯುವ ರೈತನ ಕೆಲಸ
- ‘ಫಾರ್ಮ’ಸಿ
ಟೊಬ್ಯಾಕೋ ಫಿಲಾಸಫಿ
- ಬೀಡಿ ಸೇದೋರಿಗೆಲ್ಲ ‘ಫಿಲ್ಟರ್’ ಇಲ್ದೆ ಮಾತಾಡೋ ‘ದಮ್’ ಬರಲ್ಲ
ಡ್ರಗ್ಸ್ ತಗೋತಾನೆ ಅಂತ ಸುಮ್ ಸುಮ್ನೆ ಆರೋಪ ಬಂದಾಗ ಸೆಲೆಬ್ರಿಟಿಗಳು ಏನು ಹೇಳ್ತಾರೆ?
- ನಾನ್ ಇದಕ್ಕೆಲ್ಲ ‘ಸೊಪ್ಪು’ ಹಾಕಲ್ಲ
ಆಗ ತಾನೇ ಹುಟ್ಟಿದ ಹಸುವಿನ ಕರು
- ‘ಹಸು’ ಗೂಸು