ತಿಳಿರುತೋರಣ
ಅಮಟೆ, ಆಮ್ಟೆ, ಅಂಬಟೆ, ಅಂಬಾಡೆ ಮುಂತಾಗಿ ಅಲ್ಪಸ್ವಲ್ಪ ವ್ಯತ್ಯಾಸದ ಬೇರೆ ಬೇರೆ ಹೆಸರುಗಳಿದ್ದರೂ ಬಹುತೇಕ ಕನ್ನಡಿಗರೆಲ್ಲರಿಗೂ ಈ ಹಣ್ಣು ಗೊತ್ತಿರುತ್ತದೆ. ಹಣ್ಣಲ್ಲ ತರಕಾರಿ ಎನ್ನುತ್ತೀರಾದರೂ ಸರಿಯೇ, ಆಕ್ಷೇಪವೇನಿಲ್ಲ, ಏಕೆಂದರೆ ಇದು ತರಕಾರಿಯ ರೂಪದಲ್ಲೇ ಹೆಚ್ಚಾಗಿ ಬಳಕೆಯಾಗುವುದು. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಪ್ರದೇಶದವರಿಗೆ ಬಲುನೆಚ್ಚಿನದು.
ಉಪ್ಪಿನಕಾಯಿ, ಕಾಯಿರಸ(ಮೆಣಸ್ಕಾಯಿ), ಚಟ್ನಿ, ತಂಬುಳಿ, ಗೊಜ್ಜು ಇತ್ಯಾದಿ ವಿವಿಧ ಪದಾರ್ಥಗಳ ರೂಪದಲ್ಲಿ ಅಮಟೆಕಾಯಿಯ ಸೇವನೆಯಾಗುತ್ತದೆ. ಸುಮಾರು 10-12 ವರ್ಷ ಗಳ ಹಿಂದೊಮ್ಮೆ ಫೇಸ್‌ಬುಕ್‌ನಲ್ಲಿ ನಾನೊಮ್ಮೆ ‘ಅಮೆರಿಕದಲ್ಲಿ ಆಮ್ಟೆಕಾಯಿ’ ಎಂಬ ತಲೆಬರಹದ ಸಚಿತ್ರ ಪೋಸ್ಟ್ ಹಾಕಿದ್ದೆ.
ಇಲ್ಲಿ ನಾನಿರುವ ವಾಷಿಂಗ್ಟನ್ ಡಿಸಿ ಪ್ರದೇಶದ ಕೊರಿಯನ್ ಗ್ರೋಸರಿ ಅಂಗಡಿ ಯೊಂದ ರಲ್ಲಿ ಬುಟ್ಟಿಗಟ್ಟಲೆ ಆಮ್ಟೆಕಾಯಿಗಳನ್ನು ನೋಡಿ ಖುಷಿಯಾಗಿ ಅಲ್ಲೇ ಒಂದು ಫೋಟೊ ಕ್ಲಿಕ್ಕಿಸಿ ಹಾಕಿದ್ದ ಪೋಸ್ಟ್ ಅದು. ‘ನಿಮಗೆ ಅಲ್ಲಿ ಊರಿನ ತರಕಾರಿ ಅಥವಾ ಹಣ್ಣುಗಳೆಲ್ಲ ಸಿಗುತ್ತವೆಯೇ?’ ಎಂದು ಆಗಾಗ ಎದುರಾಗುವ ಸಾಮಾನ್ಯ ಪ್ರಶ್ನೆಗೆ ನನ್ನ ಉತ್ತರವೆಂಬಂತೆ ಇಲ್ಲಿಯ ಗ್ರೋಸರಿ ಸ್ಟೋರ್‌ಗಳಲ್ಲಿ ದಿವಿಹಲಸು, ಬಾಳೆದಿಂಡು, ಬಾಳೆ ಹೂ, ಕಳಲೆ (ಎಳೆಬಿದಿರು), ಕೆಸುವಿನೆಲೆ ಮುಂತಾದ ಟಿಪಿಕಲ್ ‘ಊರ ಮಣ್ಣಿನವಾಸನೆ ನೆನಪಿಸುವಂಥ’ ತರಕಾರಿಗಳು ನೋಡಲಿಕ್ಕೆ ಸಿಕ್ಕಾಗೆಲ್ಲ (ಕೊಂಡುಕೊಂಡಾಗೆಲ್ಲ ಎಂದು ಬೇರೆ ಹೇಳ ಬೇಕಿಲ್ಲ ವಷ್ಟೆ?) ಅಂಥದೊಂದು ಸಚಿತ್ರ ಪೋಸ್ಟ್ ಹಾಕುತ್ತಿದ್ದೆ. ಆ ಸರಣಿಯಲ್ಲೇ ಆಮ್ಟೆ ಕಾಯಿಯೂ ಕಂಗೊಳಿಸಿತ್ತು.
‘ಆಮ್ಟೆಕಾಯಿಯನ್ನು ಇಲ್ಲಿ June Plum ಎನ್ನುತ್ತಾರೆ. ಇಲ್ಲಿಗೆ ಅದು ಜಮೈಕಾ ಮತ್ತು ಬರ್ಮುಡಾ ಪ್ರದೇಶಗಳಿಂದ ಆಮದಾಗಿ ಬರುತ್ತದೆ. ಫ್ಲೋರಿಡಾ, ಟೆಕ್ಸಸ್, ಅರಿಝೋನಾ ಮುಂತಾದ ಉಷ್ಣವಲಯ ರಾಜ್ಯಗಳಲ್ಲಿ ಬೆಳೆಸುತ್ತಾರೆಂದೂ ಕಾಣುತ್ತದೆ. ಇಲ್ಲಿನವರು ಮತ್ತು ಇತರ ದೇಶದವರು ಅದನ್ನು ಅಡುಗೆಯಲ್ಲಿ ಯಾವ ರೀತಿಯಲ್ಲಿ ಬಳಸುತ್ತಾರೆಂದು ನನಗೆ ಗೊತ್ತಿಲ್ಲ. ಆದರೆ ಆಮ್ಟೆಕಾಯಿಯ ಪರಿಚಯವಿರುವ ಭಾರತೀಯರು (ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಕನ್ನಡಿಗರು) ಆಮ್ಟೆಕಾಯಿಯಾಗಿಯೇ ಬಳಸುತ್ತೇವೆ.
ಇದನ್ನೂ ಓದಿ: Srivathsa Joshi Column: ಸು+ಅಸ್ತಿ+ಕ ಒಳ್ಳೆಯದಾಗಿ ಇರುವುದರ ಪ್ರತೀಕವೇ ಸ್ವಸ್ತಿಕ
ಊರಲ್ಲಿ ಸಿಗುವಂತೆಯೇ ಕಂದುಮಿಶ್ರಿತ ಹಸಿರು ಬಣ್ಣದ ದುಂಡನೆಯ ಕಾಯಿಗಳು. ಕಾಯಿ ಯಿದ್ದಾಗ ತಿನ್ನಲು ತುಂಬಾ ಹುಳಿ. ಮಾವಿನ ಮಿಡಿಯಂತೆ, ಒಳಗೆ ಚಿಕ್ಕದೊಂದು ಗೆರಟೆ (ಚರಟ) ಇರುತ್ತದೆ. ಹಣ್ಣಾದರೆ ಸ್ವಲ್ಪ ಸಿಹಿಯಂಶ ಬರುತ್ತದಾದರೂ ಮಾವಿನ ಹಣ್ಣಿನಂತೆ ‘ಹಣ್ಣು’ ಎಂದು ಪರಿಗಣಿಸಲಿಕ್ಕಾಗದು.
ಒಟ್ಟಿನಲ್ಲಿ ಹಣ್ಣು ಎನ್ನುವುದಕ್ಕಿಂತ ತರಕಾರಿ ಎನ್ನುವುದೇ ಸೂಕ್ತ. ಹಾಗಲಕಾಯಿ ಮತ್ತು ಆಮ್ಟೆಕಾಯಿ ಹಾಕಿ ಮಾಡಿದ ಕಾಯಿರಸ ಎಂಬ ಪದಾರ್ಥವು (ಗೊಜ್ಜಿನಂತೆಯೇ, ಆದರೆ ತೆಂಗಿನಕಾಯಿ, ಹುರಿದ ಎಳ್ಳು, ಕೆಂಪುಮೆಣಸು ರುಬ್ಬಿ ಹಾಕುವುದಿದೆ) ಒಂದಿದ್ದರೆ ಬೇರೆ ಯಾವ ಪಲ್ಯ-ಹುಳಿ-ಗೊಜ್ಜುಗಳೂ ಅದಕ್ಕೆ ಸಾಟಿಯಾಗಲಾರವು.
ಅಷ್ಟೂ ರುಚಿಕರ! ಕಾಯಿರಸದ ಹೊರತಾಗಿ ಆಮ್ಟೆಕಾಯಿಯ ಉಪ್ಪಿನಕಾಯಿ ಹಾಕುತ್ತಾರೆ. ತಂಬುಳಿ ಸಹ ಮಾಡುತ್ತಾರೆ. ಬೇಸಿಗೆಯಲ್ಲಿ ಕೊಯ್ದು ಭರಣಿಯಲ್ಲಿ ಉಪ್ಪು ನೀರಿನಲ್ಲಿ ಶೇಖರಿಸಿಟ್ಟು ಮಳೆಗಾಲದಲ್ಲಿ ಅಡುಗೆಗೆ ಉಪಯೋಗಿಸುವುದೂ ಇದೆ. ತುಳು ಭಾಷೆಯಲ್ಲಿ ಇದಕ್ಕೆ ‘ಅಂಬಡೆ’ ಎಂದು ಹೆಸರು.
ಅಂಬಡೆಯ ಗೆರಟೆಯನ್ನು ‘ಅಂಬಡೆ ಕೊರಾಂಟ್’ ಎನ್ನುತ್ತಾರೆ. ಆ ಪದಪುಂಜವು ಗ್ರಾಮ್ಯ ಭಾಷೆಯಲ್ಲಿ ಸೊನ್ನೆ ಅಥವಾ ಏನೂ ಇಲ್ಲ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ‘ನಿಕ್ಕ್ ಎಂಚಿನ ಗೊತ್ತಿಪ್ಪುನೆ? ಅಂಬಡೆ ಕೊರಾಂಟ್!’ (ನಿನಗೇಗು ಗೊತ್ತಿರುವುದು? ಆಮ್ಟೆಕಾಯಿ ಗೊರಟೆ ಅಷ್ಟೇ ಎಂದು). ಆಮ್ಟೆಕಾಯಿ ಮತ್ತದರ ವಿಶೇಷ ಅಡುಗೆಗಳು, ಹೊಸರುಚಿಗಳು ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ.’- ಇದು ನನ್ನ ಫೇಸ್‌ಬುಕ್ ಪೋಸ್ಟ್‌ನ ಒಕ್ಕಣೆಯಾಗಿತ್ತು.
ಪ್ರತಿಕ್ರಿಯೆಯಾಗಿ ತುಂಬ ಜನ ಆಮ್ಟೆಕಾಯಿಯ ಗುಣಗಾನ ಮಾಡಿದರು. ರುಚಿಕರ ಪದಾರ್ಥಗಳನ್ನು ನೆನಪಿಸಿಕೊಂಡರು. ರೆಸಿಪಿಗಳನ್ನು ಬರೆದರು. ಬೇರೆಯವರಿಗೂ ಬಾಯಿ ಯಲ್ಲಿ ನೀರೂರುವಂತೆ ಮಾಡಿದರು. ಪ್ರಾದೇಶಿಕ ಆಚರಣೆಗಳಲ್ಲಿ ಆಮ್ಟೆಕಾಯಿಯ ಪಾತ್ರ ವನ್ನೂ ಕೆಲವರು ದಾಖಲಿಸಿದರು.
‘ಗೌರಿ ಹಬ್ಬದಂದು ಗೌರಿ ದೇವಿಯನ್ನು ಪೂಜಿಸಲು ಹಸಿರು ಎಲೆಗಳು ಮತ್ತು ಕಾಡಿನ ವಿಶೇಷ ಹಣ್ಣುಗಳನ್ನು ಬಳಸಲಾಗುತ್ತದೆ. ಇದರಲ್ಲಿ ಆಮ್ಟೆಕಾಯಿಯೂ ಇರುತ್ತದೆ. ಗೌರಿಯ ಪಾದಗಳಿಗೆ ಅರ್ಪಿಸಲಾಗುತ್ತದೆ. ಇದು ಪ್ರಕೃತಿ ಆರಾಧನೆಯ ಸಂಕೇತವಾಗಿದೆ. ಮಕ್ಕಳ ಆರೋಗ್ಯ-ಆಯುಷ್ಯ ವೃದ್ಧಿಸುವ ನಂಬಿಕೆಯೂ ಇದರ ಹಿಂದಿದೆ’ ಎಂದು ಒಬ್ಬರು ಬರೆದಿದ್ದರೆ, ‘ಭೂಮಿ ಹುಣ್ಣಿಮೆಯಂದು ಪೈರಿನ ಮೇಲೆ ಚರಗ ಎರಚುವ, ಆ ಚರಗಕ್ಕೆ ಆಮ್ಟೆಕಾಯಿಯನ್ನು ಬಳಸುವ ಕ್ರಮವಿದೆ.
ಚರಗಕ್ಕೆ ಬಳಸಿದ ತರುವಾಯವೇ ಇನ್ನಿತರ ಅಡುಗೆಗಳಲ್ಲಿ ಬಳಸುತ್ತಾರೆ. ಅಲ್ಲಿಯವರೆಗೆ ಈ ಕಾಯಿಯ ಉಸಾಬರಿಗೂ ಹೋಗೋದಿಲ್ಲ. ಅಮಟೆಕಾಯಿಯನ್ನು ಎಳತಿರುವಾಗ ತಿಂದ್ರೆ ಬಹುಬೇಗ ಶೀತ ಆಗುತ್ತೆ, ಗಂಟಲು ಕಟ್ಟುತ್ತೆ. ಹಾಗಾಗಿ ತಿನ್ನಬಾರದು ಎನ್ನುತ್ತಾರೆ’ ಎಂದು ಇನ್ನೊಬ್ಬರು ತಿಳಿಸಿದ್ದರು. ‘ನನ್ನ ತವರುಮನೆಯಲ್ಲಿ ಗಣೇಶ ವಿಸರ್ಜನೆ ದಿನ ಎಳೆ ಬಿದಿರು ಮತ್ತು ಅಮಟೆಕಾಯಿ ಹಾಕಿ ಮಾಡಿದ ಸಾರು ಮೈನ್ ಮೆನು. ಹಬ್ಬದಡುಗೆ ಉಂಡು ಸುಸ್ತಾ ದವರಿಗೆ ಚಪ್ಪರಿಸಲು ‘ಕಿಲೂರ್ ಅಂಬಾಡೊ ರೋಸು’ (ಕೊಂಕಣಿಯಲ್ಲಿ ಹಾಗೆನ್ನುತ್ತೇವೆ).
ನಾನು ಅಮಟೆಕಾಯಿಯ ದೊಡ್ಡ ಫ್ಯಾನ್. ಉಪ್ಪಿನಲ್ಲಿ ಹಾಕಿ ವರ್ಷವಿಡೀ ಇಟ್ಟು ಚಟ್ನಿ, ತಂಬುಳಿ ಹೀಗೆ ಪರಿಪರಿಯಾಗಿ ಸಂಹಾರ ಮಾಡುತ್ತೇನೆ’ ಎಂದು ಮಗದೊಬ್ಬರು ಅಭಿಮಾನ ಮೆರೆದಿದ್ದರು. ಸೊನ್ನೆ ಅಥವಾ ಏನೂ ಇಲ್ಲ ಎಂಬರ್ಥದಲ್ಲಿ ‘ಅಂಬಾಡೆ ಕೊರಾಂಟ್’ ಎನ್ನುವುದರ ಬಗ್ಗೆಯೂ ಒಬ್ಬಿಬ್ಬರು ದನಿಗೂಡಿಸಿದ್ದರು.
‘ನಾವು ಚಿಕ್ಕವರಿರುವಾಗ ಯಾರಾದ್ರೂ ಜೋರಾಗಿ ತಮ್ಮನ್ನೇ ಹೊಗಳಿಕೊಳ್ತಾ ಇದ್ರೆ, ಹೌದ್ಹೌದು... ಇವನೊಬ್ಬ ದೊಡ್ಡ ಅಮ್ಟೇಕಾಯ್ ಅಂತ ಛೇಡಿಸ್ತಾ ಇದ್ದದ್ದೂ ನೆನಪಾಗಿ ನಗು ಬಂತು’ ಎಂದು ಒಬ್ಬರೆಂದರೆ ‘ಅಂಬಟೆಯ ಖಾದ್ಯಗಳ’ ವಿಚಾರಗಳಿಗಿಂತಲೂ ನನಗೆ ಸ್ವಾರಸ್ಯಕರವಾಗಿ ಕಾಣುವುದು ಇದರ ಗೊರಟು(ಕೊರಂಟ್) ಇಷ್ಟೊಂದು ಸಾರ್ವತ್ರಿಕ ಮೌಲ್ಯವನ್ನು ಪಡೆದ ಬಗೆ!
ನಮ್ಮಲ್ಲಿ ಇದು ‘ಅಂಬಟೆಕಾಯಿ ತೊಪ್ಪಟೆ’ ಅನ್ನುವ ರೂಪ ಪಡೆದಿದೆ. ಚಿಕ್ಕ ಮಕ್ಕಳಿಗಂತೂ ಇದು ಎದುರಾಳಿಯ ಜಂಬವನ್ನು ಮಾತಿನಿಂದ ಖಂಡಿಸುವುದಕ್ಕೆ ಇರುವ ಬ್ರಹ್ಮಾಸ್ತ್ರ! ಅವನಲ್ಲಿರುವ ವಸ್ತುವನ್ನು ‘ಅಂಬಟೆಕಾಯಿ ತೊಪ್ಪಟೆ’ಗೆ ಹೋಲಿಸಿದರೆ ಮುಗಿದೇ ಹೋಯ್ತು- ಅದು ಈ ಬ್ರಹ್ಮಾಂಡದೊಳಗಿನ ಅತ್ಯಂತ ನಿಕೃಷ್ಟ ವಸ್ತು ಅಂತ ಸರ್ಟಿಫಿಕೇಟ್ ಕೊಟ್ಟ ಹಾಗೆ’ ಎಂದು ಮತ್ತೊಬ್ಬ ಓದುಗಮಿತ್ರರು ರಸವತ್ತಾಗಿ ಬಣ್ಣಿಸಿದ್ದರು.
ನಾನೂ ಕೆಲವೊಮ್ಮೆ ಆ ಬಗ್ಗೆ ಯೋಚಿಸುವುದಿದೆ. ನಿಕೃಷ್ಟತೆಯನ್ನು ಪ್ರತಿಬಿಂಬಿಸಲಿಕ್ಕೆ ಆಮ್ಟೆಕಾಯಿ ಅಥವಾ ಅದರ ಗೊರಟೆಯನ್ನೇ ರೂಪಕವಾಗಿಸುವುದೇಕೆ? ಈ ಜಿಜ್ಞಾಸೆಗೆ ಪಂಜೆ ಮಂಗೇಶರಾಯರ ಲಲಿತಪ್ರಬಂಧವೊಂದರಲ್ಲಿ ಅತ್ಯಂತ ಸಮಂಜಸ ವಿವರಣೆ ಯಿದೆ. ನನಗಿದು ಸಿಕ್ಕಿದ್ದು ‘ಶ್ರೀ ಪಂಜೆಯವರ ನೆನಪಿಗಾಗಿ’ ಎಂಬ ಸ್ಮರಣಗ್ರಂಥದಲ್ಲಿ. ಎಂ. ಗೋವಿಂದ ಪೈ, ವೀ. ಸೀತಾರಾಮಯ್ಯ, ಮತ್ತು ಶಿವರಾಮ ಕಾರಂತ- ಈ ಮೂವರ ಸಂಪಾ ದಕತ್ವದಲ್ಲಿ 1952ರಲ್ಲಿ ಪ್ರಕಟವಾದ ಗ್ರಂಥವದು. ಪಂಜೆಯವರ ಬಗೆಗೆ ಆಪ್ತರಿಂದ ಬರಹ ಗಳು ಅದರ ಮೊದಲ ಭಾಗದಲ್ಲಿ; ಪಂಜೆಯವರದೇ ಕೆಲ ಪ್ರಸಿದ್ಧ ಬರಹಗಳು ಎರಡನೆಯ ಭಾಗದಲ್ಲಿ ಅದರ ಪೈಕಿ ‘ಪದಾರ್ಥವೇನು?’ ಎಂಬ ಶೀರ್ಷಿಕೆಯ ಮನೋಜ್ಞವಾದ ಸುದೀರ್ಘ ಲಲಿತಪ್ರಬಂಧದಲ್ಲಿ ಅಮಟೆಕಾಯಿಯ ಪ್ರಸ್ತಾವ ಬರುತ್ತದೆ.
ಅದರ ಎರಡು ಪ್ಯಾರಗ್ರಾಫ್ʼಗಳನ್ನು ಇಲ್ಲಿ ನಿಮ್ಮ ಓದಿಗೆಂದು ಯಥಾವತ್ತಾಗಿ ಎತ್ತಿಕೊಂಡಿ ದ್ದೇನೆ. ಪಂಜೆಯವರ ಗದ್ಯ ಹೇಗಿರುತ್ತಿತ್ತು ಎಂದು ರುಚಿ ನೋಡಿದಂತೆಯೂ ಆಗುತ್ತದೆಂಬ ಕಾರಣಕ್ಕೆ. ‘ಈ ಪದಾರ್ಥಕ್ಕೆ ಚಿಕ್ಕಾಸೂ ಬೇಡ’, ‘ಆ ಮನುಷ್ಯ ಮೂರು ಕಾಸಿನವನು’ ಇಂಥ ವಾಕ್ಯಗಳಲ್ಲಿಯ ಕಾಸು ಶಬ್ದವು ಒಂದು ಪದಾರ್ಥದ ಕ್ಷುಲ್ಲಕತೆ ಯನ್ನಾಗಲಿ ಒಬ್ಬ ಮನುಷ್ಯನ ಅಯೋಗ್ಯತೆಯನ್ನಾಗಲಿ ತೂಗಿ ನೋಡುವುದಕ್ಕೆ ಇಟ್ಟಿರುವ ಒಂದು ಪ್ರಮಾಣ.
ಕನ್ನಡದ ಪುಡಿ ಕಾಸು ಹೇಗೋ ಹಾಗೆಯೇ, ಇಂಗ್ಲಿಷ್‌ನಲ್ಲಿ Damn ಎಂಬ ನುಡಿಯಿದೆ. I care damn for him ಎಂಬ ಇಂಗ್ಲಿಷ್ ವಾಕ್ಯಕ್ಕೆ ‘ಆತ ಕಾಸಿಗಿಂತ ಕಡೆ’ ಎಂಬ ಅಭಿಪ್ರಾಯವಷ್ಟೆ? ಇಲ್ಲಿಯ Damn ಶಬ್ದವು ಒಂದು ಕಾಲದಲ್ಲಿ ಹಿಂದುಸ್ಥಾನದಲ್ಲಿದ್ದ ದಾಮ ಎಂಬ ನಾಣ್ಯದ ಹೆಸರಿನ ಅಪಭ್ರಂಶವೆಂದು ಕೆಲವರ ಹೇಳಿಕೆ; ಹಾಗಲ್ಲ ಅದು ಅರಬಿ ಮಾತಿನ ಬಾದಾಮ ಎಂಬುದರ ಒಂದು ತುಂಡು ಎಂದು ಬೇರೆ ಕೆಲವರ ಹೇಳಿಕೆ.
ಯಥಾರ್ಥವಾಗಿ ಹೇಳುವುದಾದರೆ, Damn ಎಂಬುದು ಇಂಗ್ಲಿಷ್ ಭಾಷೆಯಲ್ಲಿ ಈಗ ಇರುವ condemn ಎಂಬ ಶಬ್ದದ ಮೂಲಪದವು. ಅದು ಹೇಗೂ ಇರಲಿ. ಇದೇ ಅರ್ಥವನ್ನು ಹೇಳುವ ಬೇರೆ ಇಂಗ್ಲಿಷ್ ವಾಕ್ಯಗಳನ್ನು ನೋಡೋಣ. I care a tuppence for him, I care a fig for him... ಈ ವಾಕ್ಯಗಳಲ್ಲಿ tuppence ಎಂದರೆ ಎರಡು ಕಾಸು; ಮತ್ತು Fig ಎಂದರೆ ಅಂಜೂರದ ಹಣ್ಣು.
‘ಆತ ಎರಡು ಕಾಸಿಗಿಂತ ಕಡೆ’, ‘ಆತ ಅಂಜೂರಕ್ಕಿಂತ ಕೀಳು’ ಎಂಬುದೇ ಆ ವಾಕ್ಯಗಳ ಅರ್ಥ. ಹೀಗೆ ಇಂಗ್ಲಿಷಿನ ಟಪೆನ್ಸ್ ನಮ್ಮ ‘ಮೂರು ಕಾಸಿನ’ ಭಾವವನ್ನೇ ಹೇಳುತ್ತದೆ; ಮತ್ತು ಆ ಅಭಿಪ್ರಾಯವನ್ನು ತೋರಿಸಲಿಕ್ಕೆ ಇಂಗ್ಲಿಷ್‌ನಲ್ಲಿ ಫಿಗ್ ಎಂಬ ಅಂಜೂರವು ಇರುವಂತೆ, ನಮ್ಮ ಭಾಷೆಯಲ್ಲಿ ಬೇರೆಬೇರೆ ಪದಾರ್ಥಗಳಿವೆ.
ಒಂದು ಭಾಷೆಯನ್ನು ಆಡುವವರು ತಮ್ಮ ಮನಸ್ಸಿಗೆ ಒಲ್ಲದ ಯಾವುದೊಂದು ವಸ್ತು ವನ್ನು ದುರ್ಲಕ್ಷ್ಯಿಸಿ ಮಾತಾಡುವಾಗ, ಆ ವಸ್ತುವನ್ನು ತಮ್ಮ ಅನುಭವದಲ್ಲಿ ಅತ್ಯಂತ ಕ್ಲುಲ್ಲಕವೆಂದು ತೋರಿದ ಬೇರೆ ಪದಾರ್ಥಕ್ಕಿಂತ ಕೀಳಾಗಿ ಗಣಿಸುವುದು ಎಲ್ಲೆಲ್ಲಿಯೂ ವಾಡಿಕೆಯಾಗಿದೆ.
ಅಂಥ ಸಂದರ್ಭಗಳಲ್ಲಿ ಇಂಗ್ಲಿಷ್ ಭಾಷೆಯು ಫಿಗ್ ಎಂದು ಅಂಜೂರವನ್ನು ಪ್ರಸ್ತಾವಿಸುವ ಹಾಗೆ ನಮ್ಮ ಜಿಲ್ಲೆಯ ಮೂರು ಭಾಷೆಗಳು ಯಾವ ಹಣ್ಣುಗಳ ಹೆಸರು ಹೇಳುತ್ತವೆ ನೋಡೋಣ! ನಮ್ಮ ಜಿಲ್ಲೆ ಬಡ ಜಿಲ್ಲೆ. ಇಲ್ಲಿ ‘ದಾಮ’ ಕಡಮೆ, ಕಾಸಿನ ಮಾತೇ ಹೆಚ್ಚು. ‘ಮೂರು ಕಾಸಿನವನು’, ‘ಕಾಸಿಗೂ ಬೇಡವಾದದ್ದು’, ‘ತಾಮ್ರಕ್ಕೆ ಹುಟ್ಟಿದ ಕಾಸಿಲ್ಲದವ’ ಇಂಥ ಮಾತುಗಳು ಕಿವಿಗೆ ಬೀಳುತ್ತವೆ.
ಇಂಗ್ಲಿಷ್ ಅಂಜೂರವೂ ಇಲ್ಲಿಲ್ಲ; ಆದುದರಿಂದ ಇಲ್ಲಿಯ ಕೊಂಕಣಿ, ತುಳು, ಕನ್ನಡಗಳು ಇಲ್ಲಿಯ ಪದಾರ್ಥಗಳನ್ನೇ ಹೋಲಿಕೆಗೆ ಆಯ್ದುಕೊಂಡುವು. ಈ ಪದಾರ್ಥಗಳಲ್ಲಿ ಮುಖ್ಯ ವಾದುವು ಮೂರು- ಅಮಟೆ ಕಾಯಿ, ಗೇರುಬೀಜ, ಗೋಟು ಅಡಕೆ. ಇವುಗಳ ಮೂಲಕವಾಗಿ ನಮ್ಮಲ್ಲಿಯ ಮೂರು ಭಾಷೆಗಳನ್ನು ಆಡುವವರು ತಮ್ಮ ಮನಸ್ಸಿನಲ್ಲಿದ್ದ ನಿರಾಕರಣ ಭಾವವನ್ನೊ ದುರಭಿಮಾನವನ್ನೊ ತಿರಸ್ಕರಣೆಯನ್ನೊ ತೋರಿಸುವರು.
ಪ್ರಶ್ನೆ: ತಾವು ಮದ್ರಾಸಿಗೆ ಹೋದದ್ದು ಯಾಕೆ?
ಕೊಂಕಣಿ ಉತ್ತರ: ಕುಸಲ್ಯಾ ಆಂಬಾಡ್ಯ ಕಾ ತ್ಯಾಕ; ತುಕ್ಕಾ ಇತ್ಯಾಕ (ಕೊಳೆತ ಅಮಟೆಕಾಯಿ ಗೊರಟೆಗೆ; ನಿನಗೆ ಯಾಕೆ)?
ತುಳು ಉತ್ತರ: ಕೊರಂಟ್‌ದ ಚೋಲಿಗ್, ನಿಕ್ ದಾಯೆಗ್ (ಗೇರುಸಪ್ಪಿನ ಬೀಜದ ಓಡಿಗೆ, ನಿನಗೆ ಯಾಕೆ)? ಕನ್ನಡ ಉತ್ತರ: ಗೋಟು ಅಡಕೆಗೆ; ನಿನಗೆ ಯಾಕೆ? ಹುಲು ಪದಾರ್ಥವೆಂಬ ಅರ್ಥದಲ್ಲಿ ಅಡಕೆ ಶಬ್ದವು ಗಟ್ಟದ ಮೇಲಣ ಹೊಸಗನ್ನಡದಲ್ಲಿ ಪ್ರಯೋಗವಾಗುವುದಿಲ್ಲ. ದರೆ ಹಳೆಗನ್ನಡದಲ್ಲಿ ಅದಕ್ಕೆ ಈ ಅರ್ಥವುಳ್ಳ ಉದಾಹರಣೆ ಇದೆ. ಪರಶುರಾಮನು ದ್ರವ್ಯಾರ್ಥಿಯಾಗಿ ಬಂದ ದ್ರೋಣನಿಗೆ ಹೇಳುವ ಮಾತುಗಳಲ್ಲಿರುವ ಅಡಕೆ ಶಬ್ದವನ್ನು ನೋಡಿ! ಪಂಪ ಭಾರತ ಕೃತಿಯಲ್ಲಿ ಆ ಸಂಭಾಷಣೆಯನ್ನು ಹೀಗೆ ಬರೆಯಲಾಗಿದೆ.
‘ಒಡಮೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂದಡಕೆಯುಮಿಲ್ಲ ಕೈಯೊಳ್...’ ಮೇಲೆ ಕಾಣುವ ಬೆಲೆಯಿಲ್ಲದ ಅಲ್ಪ ವಸ್ತುವೆಂಬ ಅಭಿಪ್ರಾಯವು ಕನ್ನಡ ಗಾದೆಯಲ್ಲಿ ಇನ್ನೂ ಉಳಿದಿದೆ. ‘ಆದರೆ ಒಂದು ಅಡಕೆ ಮರ, ಹೋದರೆ ಒಂದು ಗೋಟು ಅಡಕೆ.’
ಹೌದಲ್ಲವೇ? ತೀರ ಪರಿಚಿತ ವಸ್ತುವನ್ನು ಅಗ್ಗದ್ದೆಂಬಂತೆ ನೋಡುವ ಚಾಳಿ ಎಲ್ಲ ಭಾಷೆ ಗಳಲ್ಲೂ ಇದೆ ಅಂತಾಯ್ತು. ತುಳು, ಕೊಂಕಣಿಗಳು ಅದಕ್ಕೆ ಅಮಟೆಕಾಯಿಯನ್ನೇ ಆಯ್ದು ಕೊಂಡಿವೆ ಅಷ್ಟೇ. ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದಾಗಿದೆ. ಅದೇನೆಂದರೆ ಮಾವಿನಹಣ್ಣಿಗೂ ಅಮಟೆಕಾಯಿಗೂ ಹೋಲಿಕೆ.
ಬಣ್ಣ, ಗಾತ್ರ, ಆಕಾರ, ರುಚಿಗಳಲ್ಲಿ ಅಲ್ಲ. ಜನರು ಕೊಡುವ ಘನತೆ-ಗೌರವಗಳಲ್ಲಿ! ‘ದೂರದ ಮಾವಿಗಿಂತ ಹತ್ತಿರದ ಅಂಬಟೆ ಲೇಸು’ ಎಂಬ ಗಾದೆಯಲ್ಲಿ ಅದು ನಮಗೆ ಚೆನ್ನಾಗಿ ಗೊತ್ತಾ ಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಅಂಬಟೆ/ಅಂಬಾಡೆ/ಅಮಟೆ ಪದದ ಅರ್ಥ ವಿವರಣೆಯಲ್ಲಿ ಈ ಗಾದೆ ಮಾತನ್ನೂ ಸೇರಿಸಿದ್ದಾರೆ.
ಗಾದೆಯ ಭಾವಾರ್ಥ ಇಷ್ಟೇ: ಮಾವಿನಹಣ್ಣು ನಿಸ್ಸಂಶಯವಾಗಿ ಶ್ರೇಷ್ಠ. ಆದರೆ ಅದು ಸುಲಭದಲ್ಲಿ ದಕ್ಕದಿದ್ದರೆ ಏನು ಮಾಡಲಿಕ್ಕಾಗುತ್ತದೆ? ಹತ್ತಿರದಲ್ಲಿರುವ, ಸುಲಭವಾಗಿ ಕೈಗೆಟ ಕುವ ಅಮಟೆಕಾಯಿಯನ್ನೇ ಮಾವು ಎಂದು ತಿಳಿದು ಆಸ್ವಾದಿಸಬೇಕಷ್ಟೇ. ಇದು ಒಂಥರ ದಲ್ಲಿ ಕಡ್ಲೆಕಾಯಿಯನ್ನು ಬಡವರ ಬಾದಾಮಿ ಎಂದಂತೆಯೇ. ಸ್ವಾರಸ್ಯವೆಂದರೆ ‘ದೂರದ ಮಾವಿಗಿಂತ ಹತ್ತಿರದ ಅಂಬಟೆ ಲೇಸು’ ಎಂಬ ಈ ಗಾದೆಮಾತು ಪದಶಃ ಅನುವಾದ ವೆಂಬಂತೆ ತುಳು ಭಾಷೆಯಲ್ಲೂ ಇದೆ: ‘ದೂರೊದ ಕುಕ್ಕುಡ್ದ್ ಮುಟ್ಟೊದ ಅಂಬಡೆ ಎಡ್ಡೆ’ ಎಂದು.
ಅಮಟೆಕಾಯಿಯನ್ನು ತೆಲುಗಿನಲ್ಲಿ ‘ಅಡವಿ ಮಾಮಿಡಿ’ ಎನ್ನುತ್ತಾರಂತೆ. ಇದೂ ಒಂದು ನಮೂನೆಯಲ್ಲಿ ತಾರತಮ್ಯದ ಹುನ್ನಾರವೇ. ಮಾವು ಸರ್ವಶ್ರೇಷ್ಠ ಮತ್ತು ಗೌರವಾರ್ಹ, ಅಮಟೆಕಾಯಿ ಏನಿದ್ದರೂ ‘ಕಾಡಿನ ಮಾವು’ ಅಷ್ಟೇ. ’the ambarella has suffered by comparison with the mango and by repetition in literature of its inferior quality' ’ . ಎಂದು ಇಂಗ್ಲಿಷ್ ವೆಬ್‌ಪುಟ ವೊಂದರಲ್ಲೂ ಓದಿದೆ.
ambarella ಅಂದರೆ ಅಮಟೆಕಾಯಿ. ಲ್ಯಾಟಿನ್ ಅಮೆರಿಕದ ಕೆರೀಬಿಯನ್ ಪ್ರದೇಶಗಳಲ್ಲಿ ಆ ಹೆಸರಿನಿಂದ ಕರೆಯಲಾಗುತ್ತದೆ. ‘ಅಂಬರೆಲ್ಲಾ ಹಣ್ಣು ಸಾಮಾನ್ಯವಾಗಿ ಮಾವಿನ ಹಣ್ಣಿ ನೊಂದಿಗೆ ಹೋಲಿಸಿದಾಗ ಕಡಿಮೆ ಗುಣಮಟ್ಟದ್ದು’ ಎಂಬ ಭಾವನೆ ಸಾಹಿತ್ಯದಲ್ಲಿ ಪದೇ ಪದೆ ಹೇಳಲ್ಪಟ್ಟಿದೆ. ಆದರೆ ಸರಿಯಾದ ಹಂತದಲ್ಲಿ- ಇನ್ನೂ ಗಟ್ಟಿಯಾಗಿರುವಾಗ- ಇದನ್ನು ಬಹಳ ಜನರು ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ.
ಇದರಿಂದ ತಯಾರಿಸಿದ ರಸವು ತಂಪಾದ ಪಾನೀಯಗಳಿಗೆ ಅತ್ಯಂತ ರುಚಿಕರವಾಗಿರುತ್ತದೆ. ಈ ಹಣ್ಣಿನ ತುಂಡುಗಳನ್ನು ಸ್ವಲ್ಪ ನೀರು ಮತ್ತು ಸಕ್ಕರೆಯೊಂದಿಗೆ ಬೇಯಿಸಿ, ಜರಡಿಯಲ್ಲಿ ಹರಿಸಿದರೆ, ಅದು ಸಾಂಪ್ರದಾಯಿಕ ಸೇಬು ಸಾಸ್ ಅನ್ನು ಹೋಲುವಂತಹ, ರುಚಿಕರ ಪದಾರ್ಥವಾಗುತ್ತದೆ. ಅದಕ್ಕೆ ದಾಲ್ಚೀನಿ ಮತ್ತಿತರ ಮಸಾಲೆಗಳನ್ನು ಸೇರಿಸಿ ನಿಧಾನವಾಗಿ ಕುದಿಸಿದರೆ ದಪ್ಪವಾಗುತ್ತದೆ. ಅದನ್ನು ಜಾಮ್‌ನಂತೆ ಬಳಸಬಹುದಾಗಿದೆ.
ಪಕ್ವವಾಗದ ಹಣ್ಣುಗಳನ್ನು ಜೆಲ್ಲಿ, ಉಪ್ಪಿನಕಾಯಿ ಅಥವಾ ರುಚಿಕರ ಪದಾರ್ಥಗಳಾಗಿ ಮಾಡಬಹುದು. ಅಂಬರೆಲ್ಲಾ ಮರದ ಕಿರಿದಾದ ಎಲೆಗಳು ಸ್ವಲ್ಪ ಹುಳಿ ರುಚಿಯನ್ನು ಹೊಂದಿದ್ದು, ದಕ್ಷಿಣ ಪೂರ್ವ ಏಷ್ಯಾದಲ್ಲಿ ತಿನ್ನುತ್ತಾರೆ. ಇಂಡೋನೇಷ್ಯಾದಲ್ಲಿ ಅವನ್ನು ಬೇಯಿಸಿ, ಮೀನು ಮತ್ತು ಅನ್ನದ ಜತೆ ತರಕಾರಿಯಂತೆ ತಿನ್ನುತ್ತಾರೆ.
ವಿವಿಧ ಅಡುಗೆಗಳಲ್ಲಿ ರುಚಿಗಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಮಾಂಸವನ್ನು ಮೃದು ವಾಗಿಸಲು ಅದನ್ನು ಮಾಂಸದೊಂದಿಗೆ ಬೇಯಿಸುತ್ತಾರೆ’ ಎಂದು ಆ ವೆಬ್ʼಪುಟದಲ್ಲಿ ಅಮಟೆಕಾಯಿಯ ಗುಣಗಾನ ನೋಡಿದಾಗ ನನಗೆ ಸ್ವಲ್ಪ ಸಮಾಧಾನವಾಯಿತು.
ಅದಕ್ಕಿಂತಲೂ ಹೆಚ್ಚು ಸಮಾಧಾನದ ಸಂಗತಿಯೆಂದರೆ ಸಂಸ್ಕೃತ ಭಾಷೆಯಲ್ಲಿ ಅಮಟೆ ಕಾಯಿಯನ್ನು ತುಚ್ಛವಾಗಿ ಕಂಡಿಲ್ಲದಿರುವುದು. ಮಾವಿನಷ್ಟು ಹೊಗಳಿ ಅಟ್ಟಕ್ಕೇರಿಸ ದಿದ್ದರೂ ಸಂಸ್ಕೃತ ವ್ಮಾಯದಲ್ಲಿ ಅಮಟೆಕಾಯಿಯ ಉಲ್ಲೇಖ ಗೌರವಯುತವಾಗಿಯೇ ಆಗಿರುವಂತಿದೆ.
ಅಷ್ಟೇ ಅಲ್ಲ, ಅಮಟೆಕಾಯಿ ಎಂಬರ್ಥದಲ್ಲಿ ‘ಆಮ್ರಾತಕ’ ಎಂಬೊಂದು ಪದದ ಜತೆಗೆ ಹಲವಾರು ಚಂದಚಂದದ ಪರ್ಯಾಯ ಪದಗಳೂ ಸಂಸ್ಕೃತದಲ್ಲಿವೆ: ಪೀತನ, ಕಪೀತನ, ವರ್ಷಪಾಕೀ, ಪೀತನಕ, ಅಭ್ರವಾಟಿಕ, ಭೃಂಗೀಫಲ, ರಸಾಢ್ಯ, ತನುಕ್ಷೀರ, ಕಪಿಪ್ರಿಯ, ಅಂಬರಾತಕ, ಅಂಬರೀಯ, ಮತ್ತು ಕಪಿಚೂಡ! ಕಾಯಿಯಾಗಿದ್ದಾಗಿನ ಚೊಗರು, ಹುಳಿ ರುಚಿ; ಹಣ್ಣಾದಾಗಿನ ಮಧುರಾಮ್ಲತ್ವ, ಸ್ನಿಗ್ಧತ್ವ, ಪಿತ್ತಕ-ನಾಶಿತ್ವ, ವಾತಘ್ನ, ಜೀರ್ಣಕಾರಿತ್ವ ಮುಂತಾದ ಔಷಧಿಯ ಗುಣಗಳ ಬಣ್ಣನೆಯೂ ಇದೆ.
ಸುಶ್ರುತಸಂಹಿತೆ, ಮಾರ್ಕಂಡೇಯ ಪುರಾಣ ಮುಂತಾದವುಗಳಲ್ಲಷ್ಟೇ ಅಲ್ಲ, ರಾಮಾಯಣ ಮಹಾಭಾರತ ಕಾವ್ಯಗಳಲ್ಲೂ ಅಮಟೆಕಾಯಿಯ ಪ್ರಶಂಸೆಯಾಗಿದೆ. ಅಂದರೆ ಒಟ್ಟಾರೆ ಯಾಗಿ ಸಂಸ್ಕೃತದ ಮಟ್ಟಿಗೆ ಅಮಟೆಕಾಯಿಯು ರಾಜಕುಮಾರನಲ್ಲದಿದ್ದರೂ ದಾಸೀಪುತ್ರ ನೆಂಬ ಭಾವವಂತೂ ಎಲ್ಲಿಯೂ ಇಲ್ಲ.
ಅಷ್ಟಾಗಿ, ಮಹಾಭಾರತದಲ್ಲೂ ಧೃತರಾಷ್ಟ್ರ ಮತ್ತು ಪಾಂಡುವಿಗಿಂತ ಹೆಚ್ಚಿನ ಅಂತಃಸತ್ತ್ವ ವಿದ್ದದ್ದು ವಿದುರನಲ್ಲೇ ಅಲ್ಲವೇ?