ಕಾಡುದಾರಿ
ರಸ್ತೆ ದಾಟುವಾಗ, ಬೆಂಗಳೂರಿನ ಕಿತ್ತೋದ ಫುಟ್ಪಾತ್ಗಳಲ್ಲಿ ನಡೆಯುವಾಗ ಅಂಧರು ಪಡುವ ಪಾಡನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಕೈ ಹಿಡಿದು ದಾಟಿಸಿರುತ್ತೀರಿ. ಆಗೆಲ್ಲ, ಕಣ್ಣು, ಕಿವಿ ಇರುವ ನಾವು ಪಡುವ ಎಷ್ಟೋ ಸುಖಗಳಿಂದ ಇವರು ವಂಚಿತರಾಗಿದ್ದಾರಲ್ಲ ಅಂತ ನಿಮಗೆ ಅನಿಸಿರಬಹುದು. ನನಗಂತೂ ಅನ್ನಿಸಿದೆ.
ಹೆಲೆನ್ ಕೆಲ್ಲರ್ ಹೆಸರು ನೀವು ಕೇಳಿರುತ್ತೀರಿ. ಅಮೆರಿಕದ ಲೇಖಕಿ. 19 ತಿಂಗಳ ಬಾಲೆಯಾಗಿದ್ದಾಗಲೇ ತೀವ್ರವಾದ ಕಾಯಿಲೆಯಿಂದ ಸಂಪೂರ್ಣವಾಗಿ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಕಳೆದು ಕೊಂಡಳು. ಏಳು ವರ್ಷದ ಬಳಿಕ ಕರುಣಾಳು ಟೀಚರ್ ಒಬ್ಬಳ ನೆರವಿನಿಂದ ಸ್ಪರ್ಶದ ಮೂಲಕ ಬರೆಯುವಿಕೆ, ಭಾಷೆ, ಮಾತು ಎಲ್ಲ ಕಲಿತಳು. ಅವಳ ಮುಂದೆ ಜಗತ್ತಿನ ಹೊಸ ಬಾಗಿಲುಗಳು ತೆರೆದುಕೊಂಡವು. ಅಮೆರಿಕದ ರಾಡ್ಕ್ಲಿ- ಕಾಲೇಜಿನಿಂದ ಪದವಿ ಪಡೆದಳು. ಅನೇಕ ಪುಸ್ತಕಗಳನ್ನು ಬರೆದಳು. ಹಲವು ದೇಶಗಳಿಗೆ ಪ್ರಯಾಣಿಸಿದಳು, ಭಾಷಣ ಮಾಡಿದಳು, ಡಾಕ್ಟರೇಟ್ಗಳನ್ನು ಹೊಂದಿದಳು.
ಅಂಥ ಹೆಲೆನ್, ‘ನನಗೆ ಮೂರು ದಿನ ಕಣ್ಣುಗಳು ಕಾಣಿಸಿದ್ದರೆ’ ಎಂಬ ಪ್ರಬಂಧವೊಂದನ್ನು ಬರೆದಿದ್ದಾರೆ. ಏಕಕಾಲಕ್ಕೆ, ಕುರುಡರಿಗೆ ಆಗಿರುವ ಅನ್ಯಾಯವನ್ನೂ, ನಮ್ಮಂಥ ಸಾಮಾನ್ಯರ ದಿವ್ಯ ಸುಖಗಳನ್ನೂ ಅದು ಕಾಣಿಸುತ್ತದೆ. ಮುಂದಿರುವುದು ಅದರ ಅನುವಾದ. ಪ್ರತಿಯೊಬ್ಬ ಮನುಷ್ಯ ನೂ ತನ್ನ ಯೌವನದಲ್ಲಿ ಕೆಲವು ದಿನ ಕಾಲ ಕುರುಡನೋ ಕಿವುಡನೋ ಆಗಿದ್ದರೆ, ಅದು ಅವನಿಗೆ ಒಂದು ವರದಾನವೇ ಆಗಿರುತ್ತಿತ್ತು ಎಂದು ನಾನು ಆಗಾಗ ಯೋಚಿಸುತ್ತೇನೆ.
ಇದನ್ನೂ ಓದಿ: Harish Kera Column: ಕವಿತೆ ನವರಸ, ದಸರಾ ಕವಿಗೋಷ್ಠಿ ಗರಗಸ
ಕತ್ತಲೆಯಲ್ಲಿದ್ದಾಗ ಕಣ್ಣುಗಳ ಬೆಲೆ ಏನೆಂಬುದು ಹೆಚ್ಚು ಅರ್ಥವಾಗುತ್ತದೆ. ಮೌನದಲ್ಲಿ ಶಬ್ದಗಳ ಸಂತೋಷ ಅರ್ಥವಾಗುತ್ತದೆ. ಕೆಲವೊಮ್ಮೆ, ಕಣ್ಣು ಕಾಣುವ ಸ್ನೇಹಿತರನ್ನು, ನೀವು ಏನನ್ನು ನೋಡುತ್ತೀರಿ ಹೇಗೆ ಎಂದೆಲ್ಲ ತಿಳಿಯಲು ಪ್ರಶ್ನೆ ಕೇಳುತ್ತೇನೆ. ಇತ್ತೀಚೆಗೆ ನನ್ನ ಒಬ್ಬ ಸ್ನೇಹಿತೆ ಕಾಡಿನಲ್ಲಿ ಬಹಳ ಹೊತ್ತು ನಡೆದು ಬಂದಿದ್ದಳು. ಅವಳನ್ನು, ಕಾಡಿನಲ್ಲಿ ಏನೆಲ್ಲ ನೋಡಿದೆ? ಎಂದು ಕೇಳಿದೆ. ಅಂಥ ವಿಶೇಷವಾದದ್ದೇನೂ ಇಲ್ಲ ಎಂದಳು.
ಒಂದು ಗಂಟೆ ಕಾಡಿನಲ್ಲಿ ನಡೆದರೂ, ಗಮನಿಸಬೇಕಾದ ಒಂದೇ ಒಂದು ವಿಷಯವೂ ಕಾಣಿಸಲಿಲ್ಲವೇ ಅಂತ ನನಗೆ ಆಶ್ಚರ್ಯವಾಯಿತು. ನನಗೆ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆದರೆ ಕೇವಲ ಸ್ಪರ್ಶದಿಂದಲೇ ನೂರಾರು ವಿಷಯಗಳಲ್ಲಿ ಆಸಕ್ತಿ ಕಂಡುಕೊಳ್ಳುತ್ತೇನೆ. ಒಂದು ಎಲೆಯನ್ನು ಮುಟ್ಟಿದಾಗ ಅದರ ಸುಂದರವಾದ ಆಕಾರವನ್ನು ಅರಿಯುತ್ತೇನೆ. ಬೆಳ್ಳಿಯಂತೆ ಹೊಳೆಯುವ ಬರ್ಚ್ ಮರದ ನಯವಾದ ಕಾಂಡವನ್ನು ಪ್ರೀತಿಯಿಂದ ಮುಟ್ಟುತ್ತೇನೆ.
ಪೈನ್ ಮರದ ಒರಟಾದ ತೊಗಟೆಯನ್ನೂ ಸ್ಪರ್ಶಿಸುತ್ತೇನೆ. ವಸಂತಕಾಲ ಬಂದಾಗ ಮರಗಳ ಕೊಂಬೆ ಗಳನ್ನು ಮೆತ್ತಗೆ ಮುಟ್ಟುತ್ತೇನೆ. ಚಳಿಗಾಲದ ನಿದ್ರೆಯಿಂದ ಪ್ರಕೃತಿ ಎಚ್ಚರಗೊಳ್ಳುತ್ತಿದೆ ಎಂಬುದನ್ನು ತಿಳಿಸುವ ಮೊದಲ ಮೊಗ್ಗುಗಳನ್ನು ಹುಡುಕುತ್ತೇನೆ. ಕೆಲವೊಮ್ಮೆ ನನ್ನ ಅದೃಷ್ಟ ಚೆನ್ನಾಗಿದ್ದರೆ, ಒಂದು ಪುಟ್ಟ ಗಿಡದ ಮೇಲೆ ಕೈಯಿಡಬ. ಆಗ ಅಲ್ಲಿ ಕೂತು ಹಾಡುವ ಹಕ್ಕಿಯ ದೇಹದಲ್ಲಿ ಉಂಟಾಗುವ ಪುಟ್ಟ ಕಂಪನವನ್ನು ಅನುಭವಿಸಬ. ಇವೆಲ್ಲವನ್ನೂ ನನ್ನ ಕಣ್ಣುಗಳಿಂದ ನೋಡಬೇಕು ಎಂಬ ಆಸೆ ಕೆಲವೊಮ್ಮೆ ನನ್ನ ಹೃದಯವನ್ನು ಕಾಡುತ್ತದೆ. ಕೇವಲ ಸ್ಪರ್ಶದಿಂದಲೇ ನನಗೆ ಇಷ್ಟೊಂದು ಸಂತೋಷ ಸಿಗುವುದಾದರೆ, ಕಣ್ಣುಗಳಿಂದ ನೋಡಿದಾಗ ಇನ್ನೆಷ್ಟು ಸೌಂದರ್ಯ ಕಾಣಿಸಬಹುದು!
ನನಗೆ ಕೇವಲ ಮೂರು ದಿನಗಳ ಕಾಲ ಕಣ್ಣುಗಳಿಂದ ನೋಡುವ ಅವಕಾಶ ಸಿಕ್ಕರೆ, ಏನೆಲ್ಲ ನೋಡ ಬೇಕು ಎಂದು ನಾನು ಆಗಾಗ ಕಲ್ಪಿಸಿಕೊಳ್ಳುತ್ತೇನೆ. ಆ ಮೂರು ದಿನಗಳನ್ನು ಮೂರು ಭಾಗಗಳಾಗಿ ಹಂಚಿಕೊಳ್ಳು ತ್ತೇನೆ. ಮೊದಲ ದಿನ, ನನ್ನ ಬದುಕನ್ನು ಸುಂದರಗೊಳಿಸಿದ ಜನರನ್ನು ನೋಡಲು ಬಯಸುತ್ತೇನೆ. ನನ್ನ ಜೀವನಕ್ಕೆ ಅರ್ಥ ನೀಡಿದವರು, ಪ್ರೀತಿ ತೋರಿದವರು, ನನ್ನ ಜೊತೆಗಿದ್ದು ನನ್ನನ್ನು ಸಂತೋಷವಾಗಿರಿಸಿ ದವರು, ನನ್ನ ಸ್ನೇಹಿತರು. ಅವರ ಮುಖಗಳನ್ನು ಬಹಳ ಹೊತ್ತು ನೋಡುತ್ತೇನೆ.
ಕಣ್ಣುಗಳ ಮೂಲಕ ಸ್ನೇಹಿತನ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬುದು ನನಗೆ ತಿಳಿದಿಲ್ಲ. ಕಣ್ಣುಗಳನ್ನು ಆತ್ಮದ ಕಿಟಕಿ ಎಂದು ಕರೆಯುತ್ತಾರೆ. ಆ ಕಿಟಕಿಯ ಮೂಲಕ ಒಬ್ಬ ವ್ಯಕ್ತಿಯ ಹೃದಯವನ್ನು ನೋಡುವ ಅನುಭವ ನನಗಿಲ್ಲ. ನನ್ನ ಬೆರಳುಗಳಿಂದ ಅವರ ಮುಖದ ಆಕಾರವನ್ನು ಮಾತ್ರ ಅರಿಯಬ. ಅವರ ನಗು, ದುಃಖ ಮತ್ತು ಇತರ ಭಾವನೆಗಳನ್ನು ಮುಖವನ್ನು ಮುಟ್ಟುವ ಮೂಲಕ ಗುರುತಿಸಬ. ನನ್ನ ಸ್ನೇಹಿತರನ್ನು ಅವರ ಮುಖಗಳನ್ನು ಸ್ಪರ್ಶಿಸುವ ಮೂಲಕವೇ ಗುರುತಿಸುತ್ತೇನೆ. ಆದರೆ ನಿಮಗೆ ಕಣ್ಣುಗಳಿವೆ. ಒಬ್ಬ ವ್ಯಕ್ತಿಯ ಮುಖದಲ್ಲಿನ ಸಣ್ಣ ಬದಲಾವಣೆಗಳನ್ನು ಗಮನಿಸಿ, ಅವರ ಗುಣಗಳನ್ನು ಎಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು!
ಮುಖದ ಸ್ನಾಯುಗಳಲ್ಲಿ ಆಗುವ ಸಣ್ಣ ಬದಲಾವಣೆ, ಕೈಗಳ ಚಲನೆ, ಕಣ್ಣಿನ ನೋಟ ಇವೆಲ್ಲವೂ ಒಬ್ಬ ವ್ಯಕ್ತಿಯ ಭಾವನೆಗಳನ್ನು ತಿಳಿಸಬಹುದು. ಆದರೆ ನಿಮ್ಮ ಸ್ನೇಹಿತನ ಮುಖವನ್ನು ನೋಡುವಾಗ, ಅವನ ಒಳಗಿನ ವ್ಯಕ್ತಿತ್ವ ಅರ್ಥಮಾಡಿಕೊಳ್ಳಲು ಎಂದಾದರೂ ಪ್ರಯತ್ನಿಸಿದ್ದೀರಾ? ನಿಮ್ಮಲ್ಲಿ ಹೆಚ್ಚಿನವರು ಮುಖದ ಹೊರಗಿನ ಆಕಾರವನ್ನು ನೋಡಿ ಸುಮ್ಮನಾಗುತ್ತೀರೇನೋ! ಉದಾಹರಣೆಗೆ, ನಿಮ್ಮ ಐವರು ಆಪ್ತ ಸ್ನೇಹಿತರ ಮುಖಗಳನ್ನು ಸರಿಯಾಗಿ ವಿವರಿಸಬಲ್ಲಿರಾ? ನಾನು ಒಂದು ಪ್ರಯೋಗವಾಗಿ ಕೆಲವು ಗಂಡಸರನ್ನು ಅವರ ಪತ್ನಿಯರ ಕಣ್ಣಿನ ಬಣ್ಣ ಯಾವುದು ಎಂದು ಕೇಳಿದ್ದೇನೆ. ಅನೇಕರು ಗೊಂದಲ ಕ್ಕೀಡಾಗಿ, ತಮಗೆ ಗೊತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಅಯ್ಯೋ! ನನಗೆ ಕೇವಲ ಮೂರು ದಿನಗಳ ಕಾಲ ನೋಡುವ ಶಕ್ತಿ ಸಿಕ್ಕರೆ, ಎಷ್ಟೆಲ್ಲ ನೋಡಬಹುದು! ಮೊದಲ ದಿನ ಬಹಳ ಕೆಲಸಗಳಿರುತ್ತವೆ. ನನ್ನ ಪ್ರೀತಿಯ ಸ್ನೇಹಿತರೆಲ್ಲರನ್ನೂ ನನ್ನ ಬಳಿಗೆ ಕರೆಸಿಕೊಳ್ಳು ತ್ತೇನೆ. ಅವರ ಮುಖಗಳನ್ನು ಬಹಳ ಹೊತ್ತು ನೋಡುತ್ತೇನೆ. ಅವರೊಳಗಿರುವ ಸೌಂದರ್ಯವನ್ನು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುತ್ತೇನೆ. ಒಂದು ಪುಟ್ಟ ಮಗುವಿನ ಮುಖವನ್ನೂ ನೋಡುತ್ತೇನೆ. ಬದುಕಿನ ಕಷ್ಟಗಳು, ಜಗಳಗಳು ಮತ್ತು ಸಂಘರ್ಷಗಳ ಅರಿವು ಮೂಡುವುದಕ್ಕೂ ಮುನ್ನ ಮಗುವಿನಲ್ಲಿರುವ ಮುಗ್ಧತೆ, ಕುತೂಹಲ ಮತ್ತು ಸೌಂದರ್ಯವನ್ನು ಕಣ್ಣಾರೆ ಆಸ್ವಾದಿಸುತ್ತೇನೆ.
ನನಗೆ ಓದಿ ಕೇಳಿಸಿರುವ ಪುಸ್ತಕಗಳನ್ನು ನೋಡಲು ಬಯಸುತ್ತೇನೆ. ಅವು ಮಾನವ ಬದುಕಿನ ಆಳವಾದ ಸತ್ಯಗಳನ್ನು ನನಗೆ ಪರಿಚಯಿಸಿವೆ. ನನ್ನ ನಾಯಿಗಳನ್ನೂ ನೋಡಬೇಕು. ನನ್ನ ಪುಟ್ಟ ಸ್ಕಾಟಿ ನಾಯಿ ಮತ್ತು ಬಲಿಷ್ಠ ಗ್ರೇಟ್ ಡೇನ್ ನಾಯಿಗಳ ನಿಷ್ಠಾವಂತ, ನಂಬಿಕೆಯ ಕಣ್ಣುಗಳನ್ನು ನೋಡಬೇಕು. ಮಧ್ಯಾಹ್ನ ಕಾಡಿನಲ್ಲಿ ಬಹಳ ದೂರ ನಡೆಯುತ್ತೇನೆ. ಪ್ರಕೃತಿಯ ಸೌಂದರ್ಯವನ್ನು ಕಣ್ಣುಗಳಿಂದ ಆಸ್ವಾದಿಸುತ್ತೇನೆ. ಅದರ ಮುಳುಗಿಹೋಗುತ್ತೇನೆ. ಬಣ್ಣಬಣ್ಣದ ಸೂರ್ಯಾಸ್ತವನ್ನು ಕಾಣಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ರಾತ್ರಿ ನನಗೆ ನಿದ್ರೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ!
ಎರಡನೇ ದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು, ರಾತ್ರಿಯ ಕತ್ತಲೆ ಹಗಲಿನ ಬೆಳಕಾಗಿ ಬದಲಾಗುವ ಅದ್ಭುತವನ್ನು ನೋಡುತ್ತೇನೆ. ನಿದ್ರಿಸುತ್ತಿರುವ ಭೂಮಿಯನ್ನು ಸೂರ್ಯನ ಬೆಳಕು ಎಚ್ಚರಿಸುವ ಆ ಸುಂದರ ದೃಶ್ಯವನ್ನು ಬೆರಗಿನಿಂದ ನೋಡುತ್ತೇನೆ. ಈ ದಿನವನ್ನು ಜಗತ್ತಿನ ಹಿಂದಿನ ಮತ್ತು ಇಂದಿನ ಇತಿಹಾಸವನ್ನು ಸಾಧ್ಯವಾದಷ್ಟು ಬೇಗ ನೋಡಲು ಮೀಸಲಿಡುತ್ತೇನೆ. ಮಾನವ ನಾಗರಿಕತೆಯ ಬೆಳವಣಿಗೆಯನ್ನು ನೋಡಬೇಕೆಂಬ ಆಸೆಯಿಂದ ವಸ್ತುಸಂಗ್ರಹಾಲಯಗಳಿಗೆ ಹೋಗುತ್ತೇನೆ. ಅಲ್ಲಿ ಭೂಮಿಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಕಾಣಬಹುದು. ಪ್ರಾಣಿಗಳು ಮತ್ತು ವಿವಿಧ ಮಾನವ ಸಮುದಾಯಗಳು ತಮ್ಮ ನೈಸರ್ಗಿಕ ಪರಿಸರದಲ್ಲಿ ಹೇಗೆ ಬದುಕಿದ್ದವು ಎಂಬುದನ್ನು ನೋಡಬಹುದು.
ಮಾನವನು ಭೂಮಿಯ ಮೇಲೆ ಕಾಣಿಸಿಕೊಳ್ಳುವುದಕ್ಕೂ ಮುನ್ನ ಇಲ್ಲಿ ಸಂಚರಿಸಿದ್ದ ಬೃಹತ್ ಡೈನೋಸಾರ್ಗಳು ಮತ್ತು ಮ್ಯಾಸ್ಟೊಡಾನ್ಗಳ ಅಸ್ಥಿಪಂಜರಗಳನ್ನು ನೋಡುತ್ತೇನೆ. ಚಿಕ್ಕ ದೇಹ ಹೊಂದಿದ್ದರೂ, ಅಪಾರ ಬುದ್ಧಿಶಕ್ತಿಯಿಂದ ಪ್ರಾಣಿಜಗತ್ತನ್ನು ತನ್ನ ಅಽನಕ್ಕೆ ತಂದುಕೊಂಡ ಮಾನವನ ಇತಿಹಾಸವನ್ನೂ ಅರಿಯಲು ಪ್ರಯತ್ನಿಸುತ್ತೇನೆ. ನನ್ನ ಮುಂದಿನ ನಿಲ್ದಾಣ ಕಲಾ ವಸ್ತುಸಂಗ್ರಹಾಲಯ. ಪ್ರಾಚೀನ ಈಜಿಪ್ಟ್ನ ದೇವರು ಮತ್ತು ದೇವತೆಗಳ ಶಿಲ್ಪಗಳನ್ನು ನಾನು ಕೈಗಳಿಂದ ಮುಟ್ಟಿ ಅರಿತಿದ್ದೇನೆ. ಪಾರ್ಥಿನಾನ್ ದೇವಾಲಯದ ಶಿಲ್ಪಗಳ ಪ್ರತಿಗಳನ್ನು ಸ್ಪರ್ಶಿಸಿದ್ದೇನೆ. ಯುದ್ಧಕ್ಕೆ ಧಾವಿಸುವ ಅಥೆನ್ಸ್ ಯೋಧರ ಶಿಲ್ಪಗಳಲ್ಲಿರುವ ಸುಂದರ ಚಲನೆಯ ಭಾವವನ್ನು ಅನುಭವಿಸಿದ್ದೇನೆ. ಗಡ್ಡಧಾರಿಯಾದ ಹೋಮರ್ನ ಮುಖದ ಆಕಾರ ನನಗೆ ಬಹಳ ಪ್ರಿಯ. ಏಕೆಂದರೆ ಅವರೂ ಕುರುಡರಾಗಿದ್ದರು.
ಹೀಗಾಗಿ ನನ್ನ ಎರಡನೇ ದಿನವನ್ನು ಮಾನವನ ಕಲೆಯ ಮೂಲಕ ಅವನ ಮನಸ್ಸನ್ನು ಅರಿಯಲು ಮೀಸಲಿಡುತ್ತೇನೆ. ನಾನು ಸ್ಪರ್ಶದಿಂದ ಅರಿತಿದ್ದ ಕಲಾಕೃತಿಗಳನ್ನು ಈಗ ಕಣ್ಣಾರೆ ನೋಡುತ್ತೇನೆ. ಇನ್ನೂ ಅದ್ಭುತವಾದ ಸಂಗತಿಯೆಂದರೆ, ಚಿತ್ರಕಲೆಯ ಸಂಪೂರ್ಣ ಜಗತ್ತು ನನ್ನ ಮುಂದೆ ತೆರೆದುಕೊಳ್ಳುತ್ತದೆ. ಆದರೆ ಚಿತ್ರಕಲೆಯ ಆಳವಾದ ಸೌಂದರ್ಯವನ್ನು ಕೇವಲ ನೋಡಿದರೆ ಅರ್ಥ ಮಾಡಿಕೊಳ್ಳಲು ಸಾಕಾಗದು. ಚಿತ್ರದಲ್ಲಿರುವ ರೇಖೆಗಳು, ಆಕಾರಗಳು, ಬಣ್ಣಗಳು ಮತ್ತು ಅವುಗಳನ್ನು ಜೋಡಿಸಿರುವ ರೀತಿಯನ್ನು ಅರ್ಥಮಾಡಿಕೊಳ್ಳಲು ಕಣ್ಣುಗಳಿಗೆ ತರಬೇತಿ ನೀಡಬೇಕು. ಅನುಭವದ ಮೂಲಕ ಕಲೆಯನ್ನು ಆಸ್ವಾದಿಸುವುದನ್ನು ಕಲಿಯಬೇಕು. ನನಗೆ ಕಣ್ಣುಗಳಿದ್ದರೆ, ಇಂಥ ಆಕರ್ಷಕ ಕಲೆಯನ್ನು ಕಲಿಯಲು ಎಷ್ಟು ಸಂತೋಷದಿಂದ ಮುಂದಾಗುತ್ತಿದ್ದೆ!
ಎರಡನೇ ದಿನದ ಸಂಜೆ ನಾಟಕಮಂದಿರಕ್ಕೆ ಅಥವಾ ಸಿನಿಮಾ ನೋಡಲು ಹೋಗುತ್ತೇನೆ. ಹ್ಯಾಮ್ಲೆಟ್ನ ಆಕರ್ಷಕ ಪಾತ್ರವನ್ನು ನೋಡಬೇಕು. ಬಣ್ಣಬಣ್ಣದ ಹಳೆಯ ಕಾಲದ ವೇಷಭೂಷಣಗಳ ನಡುವೆ ಫಾಲ್ ಸ್ಟಾಫ್ʼನ ಹಾಸ್ಯಮಯ ವ್ಯಕ್ತಿತ್ವವನ್ನು ಕಣ್ಣಾರೆ ಆಸ್ವಾದಿಸಬೇಕು. ಕೈಗಳ ಸ್ಪರ್ಶದ ಆಚೆಗೆ, ಲಯಬದ್ಧ ಚಲನೆಯ ಸೌಂದರ್ಯವನ್ನು ನಾನು ಅನುಭವಿಸಲು ಸಾಧ್ಯವಿಲ್ಲ. ಪ್ರಸಿದ್ಧ ನೃತ್ಯಗಾರ್ತಿ ಪಾವ್ಲೋವಾ ಅವರ ನೃತ್ಯದ ಸೊಬಗನ್ನು ಸ್ವಲ್ಪಮಟ್ಟಿಗೆ ಮಾತ್ರ ಕಲ್ಪಿಸಿಕೊಳ್ಳಬಲ್ಲೆ. ಆದರೆ ಲಯದ ಸಂತೋಷ ನನಗೆ ಗೊತ್ತಿದೆ. ಸಂಗೀತದ ಕಂಪನ ನೆಲದ ಮೂಲಕ ನನ್ನ ದೇಹಕ್ಕೆ ತಲುಪಿದಾಗ, ಅದರ ತಾಳವನ್ನು ನಾನು ಅನುಭವಿಸು ತ್ತೇನೆ. ಲಯಬದ್ಧವಾದ ಚಲನೆ ಜಗತ್ತಿನ ಅತ್ಯಂತ ಸುಂದರ ದೃಶ್ಯಗಳಲ್ಲಿ ಒಂದಾಗಿರಬಹುದು ಎಂದು ನನಗೆ ಅನಿಸುತ್ತದೆ. ಶಿಲೆಯಲ್ಲಿ ಕೆತ್ತಿರುವ ರೇಖೆಗಳನ್ನು ಬೆರಳುಗಳಿಂದ ಸ್ಪರ್ಶಿಸುವ ಮೂಲಕ ಈ ಸೌಂದರ್ಯದ ಸ್ವಲ್ಪ ಅನುಭವ ನನಗೆ ಸಿಕ್ಕಿದೆ. ಚಲನೆಯಿಲ್ಲದ ಶಿಲ್ಪದ ಇಷ್ಟು ಸೌಂದರ್ಯವಿದ್ದರೆ, ಚಲಿಸುವ ದೇಹದ ಸೊಬಗನ್ನು ನೋಡುವಾಗ ಇನ್ನೆಷ್ಟು ಸಂತೋಷವಾಗ ಬಹುದು!
ಮೂರನೇ ದಿನ ಬೆಳಗ್ಗೆ ಮತ್ತೆ ಸೂರ್ಯೋದಯವನ್ನು ಸ್ವಾಗತಿಸುತ್ತೇನೆ. ಹೊಸ ಸಂತೋಷಗಳನ್ನು, ಹೊಸ ಸೌಂದರ್ಯವನ್ನು ಕಂಡುಕೊಳ್ಳುವ ಕುತೂಹಲದಿಂದ ದಿನವನ್ನು ಆರಂಭಿಸುತ್ತೇನೆ. ಈ ದಿನವನ್ನು ಜನರ ದಿನನಿತ್ಯದ ಬದುಕನ್ನು ನೋಡಲು ಮೀಸಲಿಡುತ್ತೇನೆ. ನಗರವೇ ನನ್ನ ಗುರಿ. ಮೊದಲು ಜನನಿಬಿಡ ರಸ್ತೆಯ ಒಂದು ಮೂಲೆಯಲ್ಲಿ ನಿಂತು, ಜನರನ್ನು ನೋಡುತ್ತೇನೆ. ಅವರ ಮುಖಗಳನ್ನು ಗಮನಿಸುವ ಮೂಲಕ ಅವರ ದಿನನಿತ್ಯದ ಬದುಕನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಜನರ ಮುಖದಲ್ಲಿ ನಗು ಕಾಣಿಸಿದರೆ ನನಗೆ ಸಂತೋಷವಾಗುತ್ತದೆ. ಅವರ ಗಂಭೀರವಾದ ನಿರ್ಧಾರಶಕ್ತಿ ಕಂಡರೆ ಹೆಮ್ಮೆ ಮೂಡುತ್ತದೆ. ಅವರ ನೋವು ಕಂಡರೆ ಕರುಣೆ ಉಂಟಾಗುತ್ತದೆ.
ನ್ಯೂಯಾರ್ಕ್ ನಗರದ ಫಿಫ್ತ್ ಅವೆನ್ಯೂ ರಸ್ತೆಯಲ್ಲಿ ನಡೆಯುತ್ತೇನೆ. ನನ್ನ ಕಣ್ಣುಗಳನ್ನು ಸ್ವಲ್ಪ ಮಬ್ಬಾಗಿಸಿ, ಯಾವುದೇ ನಿರ್ದಿಷ್ಟ ವಸ್ತುವಿನ ಮೇಲೆ ಗಮನ ಹರಿಸದೆ, ಬಣ್ಣಗಳ ಸುಂದರ ಚಲನವಲನ ವನ್ನು ಮಾತ್ರ ನೋಡುತ್ತೇನೆ. ಜನಸಂದಣಿಯಲ್ಲಿ ಮಹಿಳೆಯರ ಬಣ್ಣಬಣ್ಣದ ಉಡುಪುಗಳು ಚಲಿಸುವ ದೃಶ್ಯ ಎಷ್ಟು ಅದ್ಭುತವಾಗಿರಬಹುದು! ಅದನ್ನು ನೋಡುತ್ತಲೇ ಇರಬೇಕೆನಿಸಬಹುದು. ಆದರೆ ನನಗೆ ಕಣ್ಣುಗಳಿದ್ದರೆ, ಇತರ ಮಹಿಳೆಯರಂತೆ ಉಡುಪುಗಳ ವಿನ್ಯಾಸದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿ, ಬಣ್ಣಗಳ ಸೌಂದರ್ಯವನ್ನು ಗಮನಿಸದೆ ಬಿಡುತ್ತಿದ್ದಾ ನೇನೋ!
ಫಿಫ್ತ್ ಅವೆನ್ಯೂನಿಂದ ನಗರದ ವಿವಿಧ ಭಾಗಗಳಿಗೆ ಹೋಗುತ್ತೇನೆ. ಬಡವರ ವಸತಿಗಳು, ಕಾರ್ಖಾನೆ ಗಳು, ಮಕ್ಕಳು ಆಟವಾಡುವ ಉದ್ಯಾನಗಳು ಎಲ್ಲವನ್ನೂ ನೋಡುತ್ತೇನೆ. ವಿದೇಶಿ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ, ಮನೆಯಿಂದ ಹೊರಹೋಗದೆ ಜಗತ್ತಿನ ವಿವಿಧ ಭಾಗಗಳನ್ನು ಸುತ್ತಿದ ಅನುಭವ ಪಡೆಯುತ್ತೇನೆ. ಜನರ ಸಂತೋಷ ಮತ್ತು ದುಃಖ ಎರಡನ್ನೂ ಕಣ್ಣಾರೆ ನೋಡಲು ನನ್ನ ಕಣ್ಣುಗಳು ಸದಾ ತೆರೆದಿರುತ್ತವೆ. ಜನರು ಹೇಗೆ ಕೆಲಸ ಮಾಡುತ್ತಾರೆ, ಹೇಗೆ ಬದುಕುತ್ತಾರೆ ಎಂಬುದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ನನ್ನ ಮೂರನೇ ದಿನದ ದೃಷ್ಟಿಯೂ ನಿಧಾನವಾಗಿ ಮುಗಿಯುತ್ತಿರುತ್ತದೆ. ಉಳಿದ ಕೆಲವೇ ಗಂಟೆಗಳಲ್ಲಿ ಗಂಭೀರವಾದ ಹಲವು ಕೆಲಸಗಳನ್ನು ಮಾಡಬೇಕೆಂದುಕೊಳ್ಳಬಹುದು. ಆದರೆ ಕೊನೆಯ ದಿನದ ಸಂಜೆ ಮತ್ತೊಮ್ಮೆ ನಾಟಕ ಮಂದಿರಕ್ಕೆ ಓಡಿಹೋಗುತ್ತೇನೆ ಎಂದು ನನಗೆ ಅನಿಸುತ್ತದೆ. ಅಲ್ಲಿ ಹೊಟ್ಟೆ ಹುಣ್ಣಾಗು ವಂತೆ ನಗಿಸುವ ಹಾಸ್ಯನಾಟಕವನ್ನು ನೋಡುತ್ತೇನೆ. ಮಾನವನ ಮನಸ್ಸಿನಲ್ಲಿರುವ ಹಾಸ್ಯಪ್ರಜ್ಞೆಯ ಸೂಕ್ಷ್ಮತೆಯನ್ನು ಕಣ್ಣಾರೆ ಆಸ್ವಾದಿಸುತ್ತೇನೆ. ಅಂದು ಮಧ್ಯರಾತ್ರಿ ಮತ್ತೆ ನನ್ನ ಸುತ್ತಲೂ ಶಾಶ್ವತ ಕತ್ತಲೆ ಆವರಿಸುತ್ತದೆ.
ಆ ಮೂರು ದಿನಗಳಲ್ಲಿ ನಾನು ನೋಡಬೇಕೆಂದುಕೊಂಡಿದ್ದ ಎಲ್ಲವನ್ನೂ ನೋಡಲು ಸಾಧ್ಯ ವಾಗಿರುವುದಿಲ್ಲ, ಅದು ಸಹಜ. ಆದರೆ ಕತ್ತಲೆ ಮತ್ತೆ ಆವರಿಸಿದಾಗ, ನಾನು ನೋಡದೆ ಬಿಟ್ಟಿದ್ದ ಸಂಗತಿಗಳು ಎಷ್ಟೋ ಇವೆ ಎಂಬುದು ನನಗೆ ಅರಿವಾಗುತ್ತದೆ. ನನ್ನ ಈ ಮೂರು ದಿನಗಳ ಯೋಜನೆ, ನಿಮಗೆ ದೃಷ್ಟಿ ಕಳೆದುಕೊಳ್ಳುವ ಸಮಯ ಹತ್ತಿರದಲ್ಲಿದೆ ಎಂದು ತಿಳಿದರೆ ನೀವು ರೂಪಿಸಿಕೊಳ್ಳುವ ಯೋಜನೆಗೆ ಹೊಂದಿಕೆಯಾಗದೇ ಇರಬಹುದು. ಆದರೆ ಒಂದು ವಿಷಯದಲ್ಲಿ ನನಗೆ ಖಚಿತತೆ ಇದೆ. ನೀವು ಆ ಪರಿಸ್ಥಿತಿಯನ್ನು ಎದುರಿಸಬೇಕಾದರೆ, ಹಿಂದೆಂದಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ನಿಮ್ಮ ಕಣ್ಣುಗಳನ್ನು ಬಳಸುತ್ತೀರಿ.
ನೀವು ನೋಡುವ ಪ್ರತಿಯೊಂದು ವಸ್ತುವೂ ನಿಮಗೆ ಅಮೂಲ್ಯವಾಗುತ್ತದೆ. ನಿಮ್ಮ ದೃಷ್ಟಿಗೆ ಸಿಗುವ ಪ್ರತಿ ವಸ್ತುವನ್ನೂ ನಿಮ್ಮ ಕಣ್ಣುಗಳು ಪ್ರೀತಿಯಿಂದ ಸ್ಪರ್ಶಿಸುತ್ತವೆ. ಆಗ ಮಾತ್ರ ನೀವು ನಿಜವಾಗಿ ಯೂ ನೋಡಲು ಆರಂಭಿಸುತ್ತೀರಿ. ನಾನು ಕುರುಡಳಾಗಿದ್ದರೂ, ಕಣ್ಣುಗಳಿಂದ ನೋಡುವವರಿಗೆ ಒಂದು ಸಲಹೆ ನೀಡಬ. ನಾಳೆಯೇ ನಿಮಗೆ ದೃಷ್ಟಿ ಕಳೆದುಹೋಗಬಹುದು ಎಂಬಂತೆ ನಿಮ್ಮ ಕಣ್ಣುಗಳನ್ನು ಬಳಸಿ. ಇದೇ ಮಾತನ್ನು ಇತರ ಇಂದ್ರಿಯಗಳಿಗೂ ಅನ್ವಯಿಸಬಹುದು.
ನಾಳೆಯೇ ಕಿವುಡರಾಗಬಹುದು ಎಂಬಂತೆ, ಮನುಷ್ಯರ ಧ್ವನಿಯ ಸಂಗೀತವನ್ನು, ಹಕ್ಕಿಗಳ ಹಾಡನ್ನು, ಸಂಗೀತ ವಾದ್ಯವೃಂದದ ಗಂಭೀರ ನಾದವನ್ನು ಆಲಿಸಿ. ನಾಳೆಯೇ ಸ್ಪರ್ಶದ ಅನುಭವ ಕಳೆದುಹೋಗಬಹುದು ಎಂಬಂತೆ ಪ್ರತಿಯೊಂದು ವಸ್ತುವನ್ನೂ ಮುಟ್ಟಿ ಅನುಭವಿಸಿ. ನಾಳೆಯೇ ವಾಸನೆಯ ಶಕ್ತಿ ಕಳೆದುಹೋಗಬಹುದು ಎಂಬಂತೆ, ಹೂವುಗಳ ಪರಿಮಳವನ್ನು ಆಘ್ರಾಣಿಸಿ. ನೀವು ತಿನ್ನುವ ಪ್ರತಿಯೊಂದು ತುತ್ತನ್ನೂ ಸಂತೋಷದಿಂದ ಸವಿಯಿರಿ. ಪ್ರಕೃತಿ ನಿಮಗೆ ನೀಡಿರುವ ಪ್ರತಿಯೊಂದು ಇಂದ್ರಿಯವನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಿ. ಜಗತ್ತು ನಿಮಗೆ ನೀಡುವ ಸಂತೋಷ ಮತ್ತು ಸೌಂದರ್ಯದ ಪ್ರತಿಯೊಂದು ರೂಪವನ್ನೂ ಮನಸಾರೆ ಅನುಭವಿಸಿ. ಆದರೆ ಎಲ್ಲ ಇಂದ್ರಿಯಗಳಿ ಗಿಂತಲೂ ದೃಷ್ಟಿಯೇ ಅತ್ಯಂತ ಸಂತೋಷದಾಯಕವಾದದ್ದು ಎಂಬುದು ನನ್ನ ನಂಬಿಕೆ.