ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Harish Kera Column: ಕವಿತೆ ನವರಸ, ದಸರಾ ಕವಿಗೋಷ್ಠಿ ಗರಗಸ

ಕವಿಗಳು ಅಗ್ಗದ ಸಂಭಾವನೆಗೆ ಸಿಗುತ್ತಾರೆ ಎಂದು ಹೇಳಿದರೆ ಅವರನ್ನು ಲಘು ಮಾಡಿದೆ ಎಂದು ದಯವಿಟ್ಟು ತಿಳಿಯಬೇಡಿ. ನಿಜವಾಗಿ ಇದು ಕವಿಗಳ ದೊಡ್ಡ ಗುಣ. ತಮ್ಮದೊಂದು ಕವಿತೆ ವಾಚಿಸಲು ಅವರು ಎಲ್ಲಿಂದ ಎಲ್ಲಿಗೆ ಹೋಗಲು ಬೇಕಿದ್ದರೂ ತಯಾರು. ಸಾವಿರಾರು ಕಿಲೋ ಮೀಟರ್ ಪ್ರಯಾಣಿಸಿ ಬಂದಾರು. ಆದರೆ ಸಂಭಾವನೆಯ ವಿಷಯ ಅವರು ಮಾತೇ ಆಡರು. ಒಂದು ಒಣ ಸೇಬು ಹಣ್ಣು, ಮುಖ ಒರೆಸಲು ಸಹ ಲಾಯಕ್ಕಿಲ್ಲದ ಒಂದು ಶಾಲು ಕೊಟ್ಟರೂ ಅವರು ತೃಪ್ತರು.

ಕವಿತೆ ನವರಸ, ದಸರಾ ಕವಿಗೋಷ್ಠಿ ಗರಗಸ

-

ಹರೀಶ್‌ ಕೇರ
ಹರೀಶ್‌ ಕೇರ Oct 15, 2026 8:49 AM

ಕಾಡುದಾರಿ

ದಸರಾದಲ್ಲಿ ಅತ್ಯಂತ ‘ಅಗ್ಗ’ದ ಕಾರ್ಯಕ್ರಮ ಅಂದರೆ ಕವಿಗೋಷ್ಠಿ. ಇಲ್ಲಿ ಬರುವ ಕವಿಗಳಿಗೆ, ಜನಪದ ಕಾರ್ಯಕ್ರಮಕ್ಕೆ ಬರುವ ಕಲಾವಿದರಷ್ಟು ಸಂಭಾವನೆ ಕೊಡಬೇಕಿಲ್ಲ. ಐನೂರೋ ಸಾವಿರವೋ ಕೊಟ್ಟರೆ ಕವಿಗಳು ತೃಪ್ತರಾಗುತ್ತಾರೆ. ಮೊದಲಿನಿಂದಲೂ ಕವಿಗಳು ಅಲ್ಪತೃಪ್ತರೇ. ಶತಮಾನಗಳಿಂದಲೂ ಕವಿಗಳು ನಾಡಿನ ಜನತೆಯನ್ನು ರಂಜಿಸುತ್ತಲೇ ಬಂದಿದ್ದಾರೆ. ಏನು, ‘ಅಂಜಿಸುತ್ತ’ ಎಂದು ಓದಿಕೊಂಡಿರಾ? ನಿಮ್ಮದೂ ತಪ್ಪಲ್ಲ.

ಯಾವುದೋ ಕವಿಗೋಷ್ಠಿಗೆ ಹೋಗಿ ಕವಿತೆಗಳು ಬಾಣಗಳಂತೆ ನಿಮ್ಮ ಮೇಲೆ ಎರಗುತ್ತಿರಲು, ಅವುಗಳಿಂದ ಪಾರಾಗಲು ನೀವು ಅಲ್ಲಿಂದ ಪರಾರಿ ಆಗಿರಬಹುದು. ಆದ್ದರಿಂದ ನಿಮ್ಮ ಅಂಜಿಕೆ ಯನ್ನು ಗೌರವಿಸಬೇಕಾದುದು ನನ್ನ ಕರ್ತವ್ಯ. ನಾಡಿನಲ್ಲಿ ನಡೆಯುವ ಎಲ್ಲ ಕವಿಗೋಷ್ಠಿಗಳಿಗೂ ಮಿಗಿಲು ಈ ದಸರಾದ ಕವಿಗೋಷ್ಠಿ. ವೇದಿಕೆಯ ಮೇಲೆ ಕನಿಷ್ಠ 85 ಜನ ಇರಬೇಕಾದುದು ಕಡ್ಡಾಯ. ಕೆಳಗೆ ಸಭೆಯಲ್ಲಿ ಅಷ್ಟು ಕೇಳುಗರು ಇರಬೇಕಾಗಿಲ್ಲ. ಇರುವುದೇ ಇಲ್ಲ.

ಮೈಕ್ ಸೆಟ್ ಮಾಡುವವರು, ಲೈಟಿಂಗ್ಸ್‌ನವರು ಮತ್ತು ಈ ಕವಿಗೋಷ್ಠಿಯನ್ನು ಅನಿವಾರ್ಯವಾಗಿ ವರದಿ ಮಾಡಬೇಕಾದ ಕರ್ಮ ಹೊತ್ತ ಮುದ್ರಣ ಮಾಧ್ಯಮದ ಪತ್ರಕರ್ತರು ಮಾತ್ರ ಅಲ್ಲಿರುವುದು. ಟಿವಿಯವರು ಅತ್ತ ತಲೆ ಹಾಕುವುದಿಲ್ಲ. ಯಾರಾದರೂ ವಿವಾದಿತ ಕವಿ ಅಥವಾ ಕವಯತ್ರಿ ಅಲ್ಲಿದ್ದರೆ ಮಾತ್ರ ಟಿವಿಯವರು ಅಲ್ಲಿಗೆ ಪಾದ ಬೆಳೆಸುವುದು. ಹಾಗಾದರೆ 85 ಕವಿಗಳ ಮನೆಯವರು, ಮಕ್ಕಳು ಮರಿ ಬಂದರೂ ನೂರಾರು ಮಂದಿ ಆಗಬೇಕಲ್ಲವೇ ಎಂದು ನೀವು ಕೇಳಿಯೇ ಕೇಳುತ್ತೀರಿ. ನಿಜವೆಂದರೆ ಅವರು ಕೂಡ ಬೇರೆ ಬೇರೆ ಕಾರಣ ಹೇಳಿ ತಪ್ಪಿಸಿಕೊಂಡಿರುತ್ತಾರೆ.

ಇದನ್ನೂ ಓದಿ: Harish Kera Column: ನೊಬೆಲ್‌ ಪ್ರಶಸ್ತಿ ಮತ್ತು ಗಾಯತ್ರಿ ಮಂತ್ರ

ಮಕ್ಕಳಿಗೆ ಅಂದು ಜ್ವರ ಬಂದಿರುತ್ತದೆ. ಹೆಂಡತಿ ಅಥವಾ ಗಂಡನಿಗೆ ಅರ್ಜೆಂಟ್ ಆಫೀಸ್ ಮೀಟಿಂಗ್ ಇರುತ್ತದೆ. ಆದರೆ ಪರವಾಗಿಲ್ಲ. ಈ ಕವಿ ತನ್ನ ಮೊಬೈಲನ್ನು ಪಕ್ಕದವರ ಕೈಗೆ ಕೊಟ್ಟು ಕಾವ್ಯ ವಾಚನವನ್ನು ವಿಡಿಯೋ ಮಾಡಲು ಹೇಳಿ, ಮನೆಗೆ ಬಂದ ನಂತರ ಅದನ್ನು ಮನೆಯವರಿಗೆ ಫುಲ್ ವಾಲ್ಯೂಮ್‌ನಲ್ಲಿ ಹಾಕಿ ತೋರಿಸಿಯೇ ಸಿದ್ಧ. ಈ ಮಾಘಮಾಸದ ತಣ್ಣೀರ ಸ್ನಾನದಿಂದ ತಪ್ಪಿಸಿ ಕೊಳ್ಳಲು ಬ್ರಹ್ಮನಿಂದಲೂ ಸಾಧ್ಯವಿಲ್ಲ.

ಕವಿಗಳು ಅಗ್ಗದ ಸಂಭಾವನೆಗೆ ಸಿಗುತ್ತಾರೆ ಎಂದು ಹೇಳಿದರೆ ಅವರನ್ನು ಲಘು ಮಾಡಿದೆ ಎಂದು ದಯವಿಟ್ಟು ತಿಳಿಯಬೇಡಿ. ನಿಜವಾಗಿ ಇದು ಕವಿಗಳ ದೊಡ್ಡ ಗುಣ. ತಮ್ಮದೊಂದು ಕವಿತೆ ವಾಚಿಸಲು ಅವರು ಎಲ್ಲಿಂದ ಎಲ್ಲಿಗೆ ಹೋಗಲು ಬೇಕಿದ್ದರೂ ತಯಾರು. ಸಾವಿರಾರು ಕಿಲೋ ಮೀಟರ್ ಪ್ರಯಾಣಿಸಿ ಬಂದಾರು. ಆದರೆ ಸಂಭಾವನೆಯ ವಿಷಯ ಅವರು ಮಾತೇ ಆಡರು. ಒಂದು ಒಣ ಸೇಬು ಹಣ್ಣು, ಮುಖ ಒರೆಸಲು ಸಹ ಲಾಯಕ್ಕಿಲ್ಲದ ಒಂದು ಶಾಲು ಕೊಟ್ಟರೂ ಅವರು ತೃಪ್ತರು.

ಸಹಸ್ರಾರು ಕನ್ನಡಿಗರ ಮುಂದೆ ತನ್ನದೊಂದು ಕವಿತೆಯನ್ನು ಫಳಫಳನೆ ಝಳಪಿಸುವ ಅವಕಾಶ ವನ್ನು ಯಾರು ತಾನೇ ಬಿಟ್ಟುಕೊಟ್ಟಾರು. ವೇದಿಕೆಯ ಮೇಲೆ ಎಂಬತ್ತೈದು ಅಥವಾ ನೂರು ಮಂದಿ ಕವಿಗಳು ಇರಬೇಕು ಎಂದರೆ ಅಷ್ಟು ಮಂದಿಯನ್ನು ಹುಡುಕಾಡಿ ಆಯ್ಕೆ ಮಾಡುವುದು ಕಷ್ಟ ಅಂದುಕೊಂಡಿರ? ಏನೂ ಕಷ್ಟವಿಲ್ಲ. ದಸರಾ ಕವಿಗೋಷ್ಠಿಗೆ ಒಂದು ಸಲ ಸರಕಾರ ಪ್ರಕಟಣೆ ನೀಡಿದರೆ, ಲಕ್ಷಾಂತರ ಸಂಖ್ಯೆಯ ಅರ್ಜಿಗಳು ಬರುತ್ತವೆ.

ಲಕ್ಷ ಅಲ್ಲದಿದ್ದರೂ ಕೆಲವು ಸಾವಿರವಂತೂ ಖಾತ್ರಿ. ತಾನು ಕವಿ ಎಂದು ಭಾವಿಸಿಕೊಂಡವರೆಲ್ಲರೂ ಅರ್ಜಿ ಹಾಕುತ್ತಾರೆ. ದಸರಾ ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆ ಮಾಡುವ ಒಂದು ಸಮಿತಿ ಇದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಸಮಿತಿ ಇದ್ದರೂ ಅದರಲ್ಲಿ ಕವಿಗಳೇ ಅಥವಾ ಕವಿತೆ ಬಲ್ಲವರೇ ಇರುತ್ತಾರೆ ಎಂಬುದೂ ಖಾತ್ರಿಯಿಲ್ಲ. ಇದ್ದರೂ ಆ ಸಮಿತಿಯ ಕೈಯಲ್ಲೇ ಕವಿಗಳ ಆಯ್ಕೆ ಇರುತ್ತದೆ ಎಂಬುದೂ ಖಚಿತವಿಲ್ಲ.

dasara

ಸ್ಥಳೀಯ ಶಾಸಕರು, ಸಚಿವರು, ಅಧಿಕಾರಿಗಳು ಎಲ್ಲರೂ ತಮ್ಮ ಕಡೆಯಿಂದ ಕೆಲವಷ್ಟು ಇನ್ʼಫ್ಲು ಯೆನ್ಸ್ ಸೀಟುಗಳನ್ನೂ ಪೇಮೆಂಟ್ ಸೀಟುಗಳನ್ನೂ ಬುಕ್ ಮಾಡಿದರೆ ತಪ್ಪು ಎನ್ನಲಾಗುವುದಿಲ್ಲ. ಎಷ್ಟೆಂದರೂ ಇದು ಪ್ರಜಾಪ್ರಭುತ್ವ. ಎಲ್ಲರಿಗೂ ಸಮಾನ ಹಕ್ಕು ದೊರೆಯತಕ್ಕದ್ದು, ಲಾಬಿ ಮಾಡುವವರಿಗೂ. ಆಮಂತ್ರಣ ಪತ್ರಿಕೆಯಲ್ಲಿ ಹೆಸರೇ ಇಲ್ಲದಿದ್ದರೂ ಆ ಕ್ಷಣ ನುಗ್ಗಿ ಬಂದು ಆಶುಕವಿತೆ ಓದುವವರಿಗೂ ಜಾಗವಿರಬೇಕು. ಕೆಲವೊಮ್ಮೆ ಬಹುಭಾಷಾ ಕವಿಗೋಷ್ಠಿ ನಡೆಯುತ್ತದೆ. ಕನ್ನಡ ಕವಿಗೋಷ್ಠಿಯ ಕವಿತೆಗಳು ಕನ್ನಡದಲ್ಲಿರಬೇಕು ಎಂಬುದು ಗ್ರಹಿಕೆ. ಹಾಗಂತ ನಿಯಮ ವೇನೂ ಇಲ್ಲ. ಆದರೆ ದಸರಾ ಕವಿಗೋಷ್ಠಿಯ ಕವಿತೆಗಳನ್ನು ಕನ್ನಡದಲ್ಲಿ ಬಂದ ಹೊಸದೊಂದು ಬಗೆಯ ಕಾವ್ಯ ಚಳುವಳಿ ಎಂದೇ ಹೇಳಬಹುದು.

ನವೋದಯ, ನವ್ಯ, ಬಂಡಾಯ, ದಲಿತದ ಬಳಿಕ ಉಂಟಾಗಿರುವ ಹೊಸ ಚಳುವಳಿ ಇದು. ಇದನ್ನು ಇನ್ನೂ ವಿಮರ್ಶಕರು ಗುರುತಿಸಿಲ್ಲ ಹಾಗೂ ಇದಕ್ಕೆ ಹೆಸರನ್ನೂ ಇಟ್ಟಿಲ್ಲ. ಅದರ ಲಕ್ಷಣಗಳು ಸಾಮಾನ್ಯ ವಾಗಿ ಹೀಗೆ: ಈ ಕವಿತೆಗೆ ವ್ಯಾಕರಣ ಇರಬೇಕಿಲ್ಲ. ಅರ್ಥವಾಗಲೀ ಧ್ವನಿಯಾಗಲೀ ಇರಲೇಕೂಡದು. ಕವಿತೆ ಐವತ್ತು ಸಾಲುಗಳಿಗಿಂತ ಕಡಿಮೆ ಇರತಕ್ಕದ್ದಲ್ಲ. ಕವಿ ಹಿಂದಿನ ಕವಿಗಳನ್ನು ಓದಿರಬೇಕಿಲ್ಲ. ಯಾಕೆಂದರೆ, ಓದಿದ್ದರೆ ಅವರ ಪ್ರಭಾವ ಇವರ ಮೇಲೆ ಉಂಟಾಗುವುದು ಸಾಧ್ಯ. ಪ್ರಭಾವ ಒಳ್ಳೆಯದಲ್ಲ. ಕವಿತೆಯ ಸಾಲುಗಳನ್ನು ಎರಡೆರಡು ಬಾರಿ ಓದಬೇಕು. ಯಾಕೆಂದರೆ ಒಂದೇ ಸಲ ಓದಿದರೆ ಕೇಳುಗರಿಗೆ ಅರ್ಥವಾಗದು (ಕೇಳುಗರು ಇದ್ದಾರೆ ಎಂದು ಭಾವಿಸಿಕೊಳ್ಳಬೇಕು).

ಇನ್ನೊಂದು ಮುಖ್ಯ ಲಕ್ಷಣ- ಆಗ ಯಾರು ಮುಖ್ಯಮಂತ್ರಿಯಾಗಿದ್ದಾರೋ ಅಥವಾ ಜಿಲ್ಲೆಯಿಂದ ಸಚಿವರಾಗಿದ್ದಾರೋ ಅವರನ್ನು ವಾಚಾಮಗೋಚರ ಹೊಗಳಿ ವಾಚಿಸಬೇಕು. ಹೊಗಳಿಕೆ ಅದ್ಭುತ ವಾಗಿದ್ದಷ್ಟೂ ಚಪ್ಪಾಳೆ ಜಾಸ್ತಿ. ಆದರೆ ಚಪ್ಪಾಳೆಗಳಿಗಾಗಿ ಕವಿ ಕವಿತೆ ಬರೆಯುವುದಿಲ್ಲ, ಬರೆಯ ಬಾರದು. ಕೇಳುಗರು ಆಕಳಿಸಿದರೆ ಅದು ತನಗೆ ಸಿಕ್ಕ ಪ್ರಶಸ್ತಿ ಎಂದು ಕವಿ ತಿಳಿಯಬೇಕು. ವಾಚ್ ನೋಡಿಕೊಂಡರೆ ಪದ್ಮಶ್ರೀ ಪ್ರಶಸ್ತಿ ಬಂದಂತೆ ತಿಳಿಯಬೇಕು. ಆಗಸ್ಟೋ ಮೊಂತೆರ್ರೇಸೋ ಎಂಬವನ ಒಂದು ಜನಪ್ರಿಯ ಅತಿ ಸಣ್ಣ ಕತೆಯಿದೆ. ಕತೆಯ ಹೆಸರು ‘ಡೈನೋಸಾರ್’.

ಕತೆ ಇಷ್ಟೆ- ‘ಅವನು ನಿದ್ದೆಯಿಂದ ಎಚ್ಚೆತ್ತಾಗ, ಡೈನೋಸಾರ್ ಇನ್ನೂ ಅಲ್ಲೇ ಇತ್ತು.’ ಕವಿ ಹೀಗೇ ಇರಬೇಕು. ಓದುಗ ನಿದ್ದೆಯಿಂದ ಎಚ್ಚೆತ್ತಾಗಲೂ ಕವಿ ಮೈಕಿನ ಮುಂದೇ ಇರಬೇಕು. ನಿಜಕ್ಕೂ ಕವಿ ಕ್ರಾಂತಿಕಾರಿ. ಸಮಾಜದಲ್ಲಿ ನಿದ್ರೆ ಹೋದವರನ್ನು ಎಚ್ಚರಿಸುವ ಹೊಣೆ ಕವಿಯದು. ಆದರೆ ಕವಿಗೋಷ್ಠಿಯಲ್ಲಿ ಕುಳಿತ ಕವಿಗೆ, ತನ್ನ ಅಕ್ಕಪಕ್ಕದಲ್ಲಿ ಕುಳಿತವರ ಕವಿತಾ ವಾಚನ ಆಲಿಸುವ ರೂಢಿ ಇಲ್ಲ. ಹಾಗೆ ಆಲಿಸಬೇಕೆಂದು ನಿರೀಕ್ಷಿಸಲೂಬಾರದು.

ಆತ ತನ್ನ ಸರದಿಗಾಗಿ ಅಲರ್ಟ್ ಆಗಿ ಕಾಯುತ್ತಿರಬೇಕು. ತಪ್ಪಿಹೋದರೆ ಕಾರ್ಯಕ್ರಮದ ನಿರೂಪಕರೇ ಈ ಕವಿ ಗೈರಾಗಿದ್ದಾರೆ ಎಂದು ಭಾವಿಸಿ ಮುಂದಿನ ಕವಿಯನ್ನು ಕರೆಯಬಹುದು ಅಥವಾ ತಾವೇ ಒಂದು ಕವಿತೆ ಓದಲೂಬಹುದು. ತನ್ನ ವಾಚನ ಮುಗಿಸಿ ಬಂದ ಬಳಿಕ ಆತ/ಕೆ ಸೆಲಿ ತೆಗೆದುಕೊಳ್ಳುವುದು ಬಿಟ್ಟು ಇನ್ನೊಬ್ಬರ ಕವಿತೆ ಕೇಳಬೇಕೆಂದು ನಿರೀಕ್ಷಿಸುವುದು ತಪ್ಪು. ಅಥವಾ ಗದ್ದಕ್ಕೆ ಒಂದು ಕೈಯನ್ನು ಊರಿ ಜಗತ್ತಿನ ಸ್ಥಿತಿಗತಿಯ ಕುರಿತು ಚಿಂತಾ ಸಮುದ್ರದಲ್ಲಿ ಮುಳುಗಿರ ತಕ್ಕದ್ದು.

ಎಲ್ಲವನ್ನೂ ಹೇಳಿ, ಕವಿತೆಯ ವಸ್ತುವಿನ ಬಗ್ಗೆ ಮಾತನಾಡದೇ ಹೋದರೆ ತಪ್ಪಾಗುತ್ತದೆ. ಈ ಕವಿತೆಗಳು ಭೂಲೋಕದಿಂದ ಚಂದ್ರಲೋಕದವರೆಗೂ ಚಾಚಿಕೊಂಡಿರಬಹುದು. ಪ್ರೇಮ, ಹಸಿವು, ಸಾವು, ಶೋಷಣೆಗಳು ಕವಿತೆಯ ವಸ್ತು ಎಂದು ನೀವಂದುಕೊಂಡಿದ್ದರೆ ನೀವು ಹಳೆಗಾಲದವರು ಎಂದರ್ಥ. ಇಲ್ಲಿ ದಿನಸಿ ಬೆಲೆ ಏರಿಕೆ, ರಸ್ತೆ ಗುಂಡಿ, ಕರೆಂಟ್ ಕೈಕೊಡುವಿಕೆ, ರೈತರನ್ನು ಕಾಡುತ್ತಿರುವ ಬರಗಾಲ ಹೀಗೆ ನಮ್ಮ ಕಣ್ಣ ಮುಂದಿನ ಸಂಗತಿಗಳಾಗಿದ್ದಷ್ಟೂ ಹೆಚ್ಚು ಪರಿಣಾಮ. ಕವಿತೆ ಓದುಗನನ್ನು ಮುಟ್ಟಬೇಕು, ಮುಟ್ಟಬೇಕಿದ್ದರೆ ಅದು ಆತನ ದೈನಂದಿನ ಸಂಗತಿಗಳ ಬಗೆಗೇ ಆಗಿರಬೇಕು.

ಅಷ್ಟಲ್ಲದೇ ಕವಿಗಳು ಸುಮ್ಮನೆ ಹೇಳುತ್ತಾರಾ, ‘ಬೀದಿಗೆ ಬರಲಿ ಕವಿತೆ’ ಅಂತ. ಸಾಮಾನ್ಯವಾಗಿ ಒಂದೇ ಕವಿತೆಗೆ ಅವಕಾಶ. ಆದರೆ ಕೆಲವರು ಸೀಮೋಲ್ಲಂಘನೆಯಲ್ಲಿ ನಿಷ್ಣಾತರು. ‘ಇನ್ನೊಂದು ಕವಿತೆ ಓದ್ತೀನಿ’ ಎಂದು ಶುರು ಹಚ್ಚುತ್ತಾರೆ. ಕವಿಗೋಷ್ಠಿಯ ಮೊದಲ ಕವಿಯೇ ಹೀಗೆ ಮಾಡಿದರೆ ಇನ್ನುಳಿದ ಕವಿಗಳೂ ಹಾಗೇ ಮಾಡುವುದು ಖಾತ್ರಿ. ಇದೊಂದು ರೀತಿಯಲ್ಲಿ ಸಮೂಹ ಸನ್ನಿ. ಚಿತ್ತಾ ನಕ್ಷತ್ರದ ಮಳೆಯನ್ನಾದರೂ ನಂಬಬಹುದು, ಈ ‘ಇನ್ನೊಂದು’ ಕವಿತೆಯ ಕವಿಗಳನ್ನಲ್ಲ. ಇದು ‘ಎರಡನೇ’ ಕವಿತೆ ಅಲ್ಲ, ‘ಇನ್ನೊಂದು’ ಕವಿತೆ ಎಂಬುದನ್ನು ನೆನಪಿಡಿ.

‘ಇನ್ನೊಂದು’ ಎಂಬುದಕ್ಕೆ ಎಂದೂ ಕೊನೆಯಿಲ್ಲ. ಅದು ಪುಷ್ಪಕ ವಿಮಾನ ಇದ್ದಂತೆ. ಪುಷ್ಪಕ ವಿಮಾನದಲ್ಲಿ ಎಷ್ಟು ಜನರನ್ನು ತುಂಬಿದರೂ ‘ಇನ್ನೊಬ್ಬ’ನನ್ನು ತುಂಬಿಸಲು ಸ್ಥಳ ಇರುತ್ತಿತ್ತಂತೆ. ನೂರು ಜನ ತುಂಬಿದರೆ ಇನ್ನೊಬ್ಬ, ಸಾವಿರ ಜನ ತುಂಬಿದರೂ ಇನ್ನೊಬ್ಬನಿಗೆ ಜಾಗವಿರುತ್ತದೆ. ಈ ಕವಿಗಳು ಹಾಗೆ ತಮ್ಮಲ್ಲಿ ಎಷ್ಟು ಕವಿತೆಗಳನ್ನು ಇಟ್ಟುಕೊಂಡಿರುತ್ತಾರೋ ಗೊತ್ತೇ ಆಗುವುದಿಲ್ಲ. ‘ಇನ್ನೊಂದು’ ಎಂಬುದು ಈ ಕವಿತೆಗಳ ಪೆಂಡಿಯನ್ನು ಬಿಚ್ಚಲು ಅವರಿಗೆ ಒಂದು ರಹದಾರಿ ಇದ್ದಂತೆ. ಮೀಸೆ ನುಸುಳುವಷ್ಟೇ ಜಾಗದಲ್ಲಿ ಬೆಕ್ಕು ತೂರಿಹೋಗುವಂತೆ, ‘ಇನ್ನೊಂದು’ ಕವಿತೆ ತೂರಿಹೋಗುವ ಜಾಗದಲ್ಲಿ ಕವಿಗಳು ತಮ್ಮ ನೂರೊಂದು ಕವಿತೆಗಳನ್ನಾದರೂ ನುಸುಳಿಸಲು ಶಕ್ತರು.

ಕಾನೂನಿನಲ್ಲಿ ಒಂದು ಮಾತಿದೆ- ಒಂದು ಅಪರಾಧಕ್ಕೆ ಒಂದೇ ಶಿಕ್ಷೆ. ಒಂದು ಕೊಲೆ ಮಾಡಿದವನಿಗೆ ಒಮ್ಮೆ ಮಾತ್ರ ಮರಣದಂಡನೆ ವಿಧಿಸಲು ಸಾಧ್ಯ. ಹತ್ತು ಕೊಲೆ ಮಾಡಿzನೆ ಎಂದು ಹತ್ತು ಸಲ ಗಲ್ಲಿಗೆ ಹಾಕಲು ಸಾಧ್ಯ ಇಲ್ಲವಲ್ಲ. ಆದರೂ, ಹೇಗೂ ಕೊಲೆ ಮಾಡಿದ್ದೇನೆ, ಮರಣದಂಡನೆ ಖಚಿತ, ಇನ್ನೊಂದೆರಡು ಕೊಲೆ ಮಾಡಿಬಿಡೋಣ ಎಂದು ಯಾವುದೇ ಪಾತಕಿಯೂ ಅಂದುಕೊಳ್ಳುತ್ತಾನೆಂದು ಅನಿಸುವುದಿಲ್ಲ. ಆದರೆ ಕವಿಗಳು ಮಾತ್ರವೇ, ಕವಿಗೋಷ್ಠಿಗೆ ಕರೆದಿದ್ದಾರೆ, ಒಂದೈದಾರು ಕವಿತೆ ಚಚ್ಚಿಬಿಡೋಣ ಎಂದು ಹೊಂಚುಹಾಕುತ್ತಾರೆ ಎಂದು ಕಾಣುತ್ತದೆ.

ಕವಿಗೋಷ್ಠಿಯ ಸಂಘಟಕರು ಕೂಡ ‘ಒಂದೇ ಕವಿತೆ ಓದುತ್ತೇನೆ. ಎರಡನೇ ಕವಿತೆ ಓದುವುದಿಲ್ಲ’ ಎಂದು ಬಾಂಡ್ ಪೇಪರ್‌ನಲ್ಲಿ ಕವಿಗಳ ಘೋಷಣಾಪತ್ರ ಬರೆಸಿಕೊಳ್ಳುವುದು ಒಳ್ಳೆಯದು. ನಾನು ಈ ಸಲಹೆಯನ್ನು ಒಬ್ಬ ಸಂಘಟಕರಿಗೆ ಕೊಟ್ಟೆ. ಅವರು ಹೀಗೆಂದರು- ‘ಇದೆಲ್ಲ ವರ್ಕೌಟ್ ಆಗುವುದಿಲ್ಲ. ಆಗ ಕವಿಗಳು ರಂಗೋಲಿ ಕೆಳಗೆ ನುಸುಳುತ್ತಾರೆ. ಎರಡನೇ ಕವಿತೆ ಎಂದು ಹೇಳದೇ, ಅದರ ಶೀರ್ಷಿಕೆ ಉಲ್ಲೇಖಿಸದೇ ಓದಿಬಿಡುತ್ತಾರೆ. ಕೇಳುಗರಿಗೆ ಹೇಗೂ ಗೊತ್ತಾಗುವುದಿಲ್ಲ. ಇನ್ನು ಕೆಲವು ಮಂದಿ ಹತ್ತುಸಾವಿರ ಸಾಲುಗಳ ಕವಿತೆ ಕೆತ್ತಿ ತಂದಿರುತ್ತಾರೆ. ಅವರನ್ನಂತೂ ಅರ್ಧದಲ್ಲಿ ನಿಲ್ಲಿಸಲು ಆಗುವುದೇ ಇಲ್ಲ’ ಎಂದರು.

‘ಎರಡನೇ ಕವಿತೆ’ ಎಂಬುದರ ಕಸಿನ್ ಇನ್ನೊಂದಿದೆ. ಅದು ಒಂದೇ ಕವಿತೆಯ ಸಾಲುಗಳನ್ನು ಎರಡನೇ ಸಲ ಓದುವುದು. ಇದಂತೂ ಇನ್ನೂ ಅನಾಹುತಕಾರಿ. ಹೆಚ್ಚು ಹೊತ್ತು ಮೈಕ್ ಮುಂದೆ ನಿಲ್ಲುವ ಅವಕಾಶ ಸೃಷ್ಟಿಸಿಕೊಳ್ಳುವ ಖತರ್ನಾಕ್ ಉಪಾಯ ಇದು. ಇದನ್ನು ಕೇಳುವಾಗ ನನಗೆ ಗರಗಸವೇ ನೆನಪಾಗುವುದು. ಗರಗಸ ಹೋಗುತ್ತಲೂ ಕುಯ್ಯುತ್ತದೆ, ಬರುತ್ತಲೂ ಕುಯ್ಯುತ್ತದೆ. ಅದೇ ಕವಿ, ಅದೇ ಕವಿತೆ, ಅದೇ ಸಾಲು, ಕೇಳುಗನ ತಲೆಗೆ ಕವಿ ಇಡುವ ಗರಗಸ. ಆದರೂ, ಜನಮನ ರಂಜಿಸಲು ಸದಾ ಮುಂಗಾಲು ಪುಟಿಕೆಯಲ್ಲಿರುವ ಕವಿಗಳೆಂದರೆ ನನಗೆ ಇಷ್ಟ. ಅವರು ಎಂಥ ಲೇವಡಿ ಮಾಡಿದರೂ, ವ್ಯಂಗ್ಯದಿಂದ ಕುಯ್ದರೂ ಅಂಜರು, ಅಳುಕರು. ತಮ್ಮ ಕವಿತೆ ಓದಿಯೇ ವಿರಮಿಸುವವರು.

ನಿಜಕ್ಕೂ ಇವರನ್ನು ಪಾಕಿಸ್ತಾನ ಅಥವಾ ಚೀನಾ ಬಾರ್ಡರಿಗೆ ಕಳುಹಿಸುವುದು ಉಚಿತ ಎಂದು ಯಾರೋ ಸಲಹೆ ಕೊಟ್ಟರು. ಯಾಕೆ ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ.