ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ನೆಲ ಕುಸಿಯೆ ಪದವಿಹುದೆ ಮಂಕುತಿಮ್ಮ ?

ಸುಳ್ಯ- ಪುತ್ತೂರಿನಲ್ಲಿ ಆಗುತ್ತಿದ್ದ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಹಾಜರಾತಿ ಇರುತ್ತಿತ್ತು. ಸದಾ ಒಂದು ಮುಗುಳುನಗೆ ಇಟ್ಟುಕೊಂಡೇ ಮಾತನಾಡಿಸುತ್ತಿದ್ದ ಈ ನಿಗರ್ವಿ ಎಷ್ಟು ದೊಡ್ಡ ವ್ಯಕ್ತಿ ಎಂಬ ಖಬರೂ ಇಲ್ಲದೇ ಅವರ ಜೊತೆ ಒಡನಾಡಿದ ನೆನಪು ನನಗಿದೆ. 1989ರಿಂದ ಅವರ ತೂಗುಸೇತುವೆ ಕಟ್ಟುವ ಕಾಯಕ ಆರಂಭವಾಯಿತು, 2017ರಲ್ಲಿ ಪದ್ಮಶ್ರೀ ಬಂತು. ಅವರು ಎಂದಿನಂತೆ ಸರಳವಾಗಿಯೇ ಇದ್ದರು.

ಕಾಡುದಾರಿ

ನಿನ್ನೆಯ ಪತ್ರಿಕೆಯಲ್ಲಿ ಗಮನ ಸೆಳೆದ ಎರಡು ಸುದ್ದಿ- ನೂರಾರು ತೂಗುಸೇತುವೆಗಳನ್ನು ಕಟ್ಟಿ ದಡಗಳ ನಡುವೆ ಸಂಬಂಧ ಬೆಸೆದ ‘ಸೇತುಬಂಧು’ ಗಿರೀಶ್ ಭಾರದ್ವಾಜ್ ಕೆಲಸ ಮುಗಿಸಿ ಹೊರಟು ಬಿಟ್ಟಿದ್ದಾರೆ. ಇನ್ನೊಂದು ಸುದ್ದಿ, ವಯನಾಡಿನಲ್ಲಿ ಮತ್ತೆ ಭೂಕುಸಿತ ಉಂಟಾಗಿ ಐದು ಮಂದಿ ಬಲಿಯಾದದ್ದು. ಅರ್ಥಾರ್ಥ ಸಂಬಂಧವಿಲ್ಲದಂತೆ ಕಾಣಿಸುವ ಈ ಎರಡಕ್ಕೂ ಆಳವಾಗಿ ನೋಡಿ ದರೆ ನಂಟು ಇರುವುದು ಗೊತ್ತಾಗುತ್ತದೆ. ಅದೇನು ಅಂತ ಮುಂದೆ ನೋಡೋಣ. ಗಿರೀಶ್ ಭಾರದ್ವಾಜ್ ನಮ್ಮೂರು ಸುಳ್ಯದವರು.

ಸುಳ್ಯದ ಗಾಂಧಿನಗರದಲ್ಲಿದ್ದ ‘ಅಯಶ್ಶಿಲ್ಪ’ ಎಂಬ ಹೆಸರಿನ ಅವರ ವರ್ಕ್‌ಶಾಪ್ ಬಳಿ ಹೋದರೆ ಯಾರು ಬೇಕಾದರೂ ಅವರನ್ನು ಕಾಣಬಹುದಿತ್ತು. ಪದ್ಮಶ್ರೀ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದ ಬಳಿಕವೂ ಹಮ್ಮುಬಿಮ್ಮು ಯಾವುದೂ ಇಲ್ಲದ ಸಾದಾಸೀದಾ ಮನುಷ್ಯರಾಗಿ ಅವರಿದ್ದರು.

ಸುಳ್ಯ- ಪುತ್ತೂರಿನಲ್ಲಿ ಆಗುತ್ತಿದ್ದ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಹಾಜರಾತಿ ಇರುತ್ತಿತ್ತು. ಸದಾ ಒಂದು ಮುಗುಳುನಗೆ ಇಟ್ಟುಕೊಂಡೇ ಮಾತನಾಡಿಸುತ್ತಿದ್ದ ಈ ನಿಗರ್ವಿ ಎಷ್ಟು ದೊಡ್ಡ ವ್ಯಕ್ತಿ ಎಂಬ ಖಬರೂ ಇಲ್ಲದೇ ಅವರ ಜೊತೆ ಒಡನಾಡಿದ ನೆನಪು ನನಗಿದೆ. 1989ರಿಂದ ಅವರ ತೂಗುಸೇತುವೆ ಕಟ್ಟುವ ಕಾಯಕ ಆರಂಭವಾಯಿತು, 2017ರಲ್ಲಿ ಪದ್ಮಶ್ರೀ ಬಂತು. ಅವರು ಎಂದಿನಂತೆ ಸರಳವಾಗಿಯೇ ಇದ್ದರು.

ಇದನ್ನೂ ಓದಿ: Harish Kera Column: ಮಳೆ ನಿಂತು ಹೋದ ಮೇಲೆ, ಕಣ್ಣ ಹನಿ ಮೂಡಿದೆ

ಪಯಸ್ವಿನಿ ನದಿ ಕೊಡಗಿನ ಸಂಪಾಜೆ ಘಾಟಿಯ ಬೆಟ್ಟಗಳ ನಡುವೆ ಎಲ್ಲೋ ಹುಟ್ಟಿ, ಸುಳ್ಯ ಪೇಟೆಯನ್ನೂ ತಾಗಿಕೊಂಡೇ ಹರಿದು, ಕಾಸರಗೋಡಿನ ಬಳಿ ಚಂದ್ರಗಿರಿ ನದಿಯೊಂದಿಗೆ ಸೇರಿ, ಸಾಗರವನ್ನು ಸೇರುತ್ತದೆ. ಬೇಸಿಗೆಯಲ್ಲಿ ತೆಳ್ಳಗೆ ಹರಿಯುವ ಈಕೆ ಮಳೆಗಾಲ ಬಂದರೆ ರುದ್ರರಮ ಣೀಯೆ, ಕೆಂಪುನೀರಿನ ಮಹಾಪೂರೆ. ಪಯಸ್ವಿನಿಯ ಆಚೆಗಿರುವ ಹಲವು ಗ್ರಾಮಗಳು ನಗರದ ನಂಟು ಕಳೆದುಕೊಂಡು ದ್ವೀಪವಾಗುತ್ತವೆ. ಮಳೆಗಾಲದಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ ಅಧೋಗತಿ.

ನಿತ್ಯದ ಕೆಲಸಗಳಿಗೆ ಹೋಗುವವರು ಸುತ್ತಿ ಬಳಸಿ ಹೋಗಬೇಕು. ಕೆಲವೇ ಸಾವಿರ ಜನಸಂಖ್ಯೆ ಇರುವ ಈ ಹಳ್ಳಿಗಳಿಗೆ ಸೇತುವೆ ಕಟ್ಟಿಸುವುದು ವೇಸ್ಟ್ ಎಂಬ ಮನೋಭಾವ ಸರಕಾರದ್ದು. ಪಯಸ್ವಿನಿ ಎಂದಲ್ಲ, ದೇಶದುದ್ದಕ್ಕೂ ಹಲವು ನದಿ ಪಕ್ಕದ ಹಳ್ಳಿಗಳ ಕತೆ ಹೀಗೇ. ಗಿರೀಶರು ಪಯಸ್ವಿನಿಯಿಂದ, ತಮ್ಮ ಹುಟ್ಟೂರಿನಿಂದಲೇ ಆರಂಭಿಸಿದರು.

ಇಂದು ಗಿರೀಶರು ರಚಿಸಿದ ಆರು ಸೇತುವೆಗಳನ್ನು ಪಯಸ್ವಿನಿ, ಏಳು ಸೇತುವೆಗಳನ್ನು ಚಂದ್ರಗಿರಿ ನದಿ ಕಂಠಾಭರಣಗಳಂತೆ ಧರಿಸಿಕೊಂಡು ಹರಿಯುತ್ತಿವೆ. ಕಾವೇರಿ, ನೇತ್ರಾವತಿ, ತುಂಗೆ, ಘಟಪ್ರಭೆಯಂಥ ದೊಡ್ಡ ನದಿಗಳ ದಡಗಳಿಗೂ ಅವರು ಸೇತು ಬೆಸೆದಿದ್ದಾರೆ. 60 ವರ್ಷವಾದ ಬಳಿಕ ಅವರಿಗೆ ಈ ಕೆಲಸದಿಂದ ನಿವೃತ್ತಿ ತೆಗೆದುಕೊಳ್ಳೋಣ ಅನಿಸಿತಂತೆ. ಆದರೆ ಅಮಿತಾಭ್ ಬಚ್ಚನ್ ಆಡಿದ ಒಂದು ಮಾತು, ಅವರನ್ನು ಮತ್ತೆ ಕಾಯಕಕ್ಕೆ ಹಚ್ಚಿತು. ಉಸಿರು ಇರುವವರೆಗೂ ಕೆಲಸ ಮಾಡುತ್ತಿರುತ್ತೇನೆ ಎಂದುಕೊಂಡು ಮುಂದುವರಿದರು. ಸೇತುಬಂಧದ ಬಳಿಕ ಗ್ರಾಮಸ್ಥರಲ್ಲಿ ಮೂಡುವ ನೆಮ್ಮದಿ ಹಾಗೂ ನಿಟ್ಟುಸಿರು ಅವರ ಎನರ್ಜಿಯ ಮೂಲಶಕ್ತಿಯಾಗಿತ್ತು.

Screenshot_8 ok

ಗಿರೀಶರ ರಚನೆಗಳು ತೀರಾ ಪರಿಸರ ಸ್ನೇಹಿ ರಚನೆಗಳು. ಮೊದಮೊದಲು ಅವರು ದಡಗಳಲ್ಲಿ ನಿಂತಿರುವ ದೊಡ್ಡ, ಗಟ್ಟಿಯಾದ ಮರಗಳಿದ್ದರೆ ಅವುಗಳನ್ನೇ ಸೇತುವೆಯ ಕಂಬಗಳಾಗಿ (ಪೈಲನ್) ಬಳಸುತ್ತಿದ್ದರು. ಕೊಡಗಿನ ಕುಶಾಲನಗರದಲ್ಲಿ ಕಾವೇರಿ ನಿಸರ್ಗಧಾಮದಲ್ಲಿ ಅವರು ಕಟ್ಟಿದ ಸೇತುವೆ ಹೀಗಿತ್ತು. ನಂತರ ಹೆಚ್ಚು ಕಾಲ ಬಾಳಿಕೆ ಬರುವ ಹಿನ್ನೆಲೆಯಲ್ಲಿ ಕಾಂಕ್ರೀಟ್ ಕಂಬಗಳನ್ನು ಬಳಸಲು ಶುರು ಮಾಡಿದರು. ಹಲವು ಉಕ್ಕಿನ ತಂತಿಗಳನ್ನು ಕಂಬದ ಮೇಲ್ಭಾಗದಲ್ಲಿರುವ ರೋಲರ್‌ಗಳ ಮೂಲಕ ಹಾಯಿಸುತ್ತಿದ್ದರು. ಈ ತಂತಿಗಳನ್ನು ಸೇತುವೆಯ ಎರಡೂ ಬದಿಗಳಲ್ಲಿ ನಿರ್ಮಿಸಿದ ಬಲವಾದ ಆಂಕರ್‌ಗಳಿಗೆ ಬಿಗಿಯಾಗಿ ಕಟ್ಟಲಾಗುತ್ತಿತ್ತು. ಈ ತಂತಿಗಳಿಂದ ನಿಗದಿತ ಅಂತರದಲ್ಲಿ ಕಬ್ಬಿಣದ ರಾಡ್‌ಗಳನ್ನು (ಸಸ್ಪೆಂಡರ್) ಕೆಳಕ್ಕೆ ನೇತುಹಾಕಲಾಗುತ್ತದೆ.

ಈ ರಾಡ್‌ಗಳನ್ನು ಅಡ್ಡದಂಡಗಳ ಜೊತೆ ಜೋಡಿಸಲಾಗುತ್ತದೆ. ನಂತರ ಎಲ್ಲ ಅಡ್ಡದಂಡಗಳನ್ನು ಸಂಪರ್ಕಿಸುವ ಉದ್ದವಾದ ನೆಲದ ಭಾಗದ ಅಳವಡಿಕೆ. ಈ ಕೆಲಸ ಮುಗಿಯುವ ಮೊದಲು ಗಿರೀಶರ ವರ್ಕ್‌ಶಾಪ್ ಹುಡುಗರು ಸರ್ಕಸ್ ಕಲಾವಿದರಂತೆ ಆ ಅಡ್ಡದಂಡಗಳನ್ನು ಹಿಡಿದುಕೊಂಡೇ ಸೇತುವೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೌಶಲ್ಯದಿಂದ ಹೋಗುತ್ತಾರೆ. ಇದು ರಿಸ್ಕೀ ಕೆಲಸ. ಕೊನೆಯಲ್ಲಿ ಉಕ್ಕಿನ ಚೌಕಟ್ಟಿನೊಳಗೆ ಅಳವಡಿಸಿದ ಫೆರೋ-ಸಿಮೆಂಟ್ ಫಲಕಗಳನ್ನು ಸೇತುವೆಯ ನೆಲದ ಮೇಲೆ ಅಳವಡಿಸಲಾಗುತ್ತದೆ.

ಹಿಂದೆ ಫೆರೋ-ಸಿಮೆಂಟ್ ಫಲಕಗಳ ಬದಲು ಮರದ ಹಲಗೆಗಳನ್ನು ಬಳಸುತ್ತಿದ್ದರು. ಸೇತುವೆಯ ಎರಡೂ ಬದಿಗಳಲ್ಲಿ ಸೊಂಟದ ಎತ್ತರದವರೆಗೆ ಪಿವಿಸಿ ಲೇಪಿತ ಚೈನ್-ಲಿಂಕ್ ಜಾಲರಿ. ವರ್ಷ ಗಳಿಂದ ಈ ಸೇತುವೆಗಳ ವಿನ್ಯಾಸದಲ್ಲಿ ಹಲವು ಬದಲಾವಣೆ ಆಗುತ್ತಲೇ ಬಂದಿದೆ. ಮೊದಲು ಆಯತಾಕಾರದ ಕಂಬಗಳನ್ನು ಬಳಸಲಾಗುತ್ತಿತ್ತು. ನಂತರ ವೃತ್ತಾಕಾರ ತಂದರು. ನಾಲ್ಕು ಕಂಬಗಳನ್ನು ಬಳಸುತ್ತಿದ್ದರು. ಈಗ ಕೇವಲ ಎರಡು ಕಂಬಗಳೇ ಸಾಕಾಗುತ್ತವೆ. ಒಂದೇ ಪೈಲನ್ ಬಳಸುವ ಯೋಜನೆಯೂ ಗಿರೀಶ್ ಅವರಲ್ಲಿತ್ತು. ಈ ಯಾವ ಕೆಲಸದಲ್ಲೂ ಅವರು ಭೂಮಿಗಾಗಲೀ ನದಿಗಾಗಲೀ ಸುತ್ತಮುತ್ತಲಿನ ಮರಗಿಡಗಳಿಗಾಗಲೇ ಯಾವುದೇ ಹಾನಿ ಮಾಡುವುದಿಲ್ಲ. ಅದನ್ನೆಲ್ಲ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಯತ್ನಿಸುತ್ತಾರೆ.

ಭೂಮಿ ಬಗೆಯುವುದು ನಾಲ್ಕು ಪೈಲನ್‌ಗಳಿಗಾಗಿ ಮಾತ್ರ. ಅವು ಭದ್ರವಾಗಿ ನಿಂತರೆ ಉಳಿದದ್ದೆಲ್ಲ ಸುಲಭ. ನದಿಗೂ ಸಿಕ್ಕಾಪಟ್ಟೆ ಕಾಂಕ್ರೀಟ್, ಅದರ ಕಸಗಳನ್ನು ಚೆಲ್ಲುವ ಪ್ರಮೇಯವಿಲ್ಲ. ಇನ್ನು ಕಾಮಗಾರಿಯಲ್ಲಿ, ಸೇತುವೆಯಿಂದ ಪ್ರಯೋಜನ ಪಡೆಯಲಿರುವ ಹಳ್ಳಿಗಳ ಜನರನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಲೇಬರ್ ವೆಚ್ಚ ಉಳಿತಾಯವಾಗುತ್ತದೆ. ಗಿರೀಶರಿಗೆ ಸರಕಾರದಿಂದ ದೊರೆತ ಕಾಮಗಾರಿಗಳಲ್ಲೂ ಲಾಭಾಂಶ ಸಿಕ್ಕಿದ್ದೇ ಕಡಿಮೆ. ಅದರಲ್ಲೂ ಹಲವಷ್ಟು ಪಾಲು ಕೆಂಪು ಪಟ್ಟಿ, ಅಧಿಕಾರಿಗಳ ಅಸಡ್ಡೆ, ನಿಧಾನದ್ರೋಹದಿಂದಾಗಿ ಮಂಗಮಾಯವಾಗಿವೆ. ಅದನ್ನೆಲ್ಲ ನುಂಗಿಕೊಂಡು ‘ಗಿರೀಶ’ರು ನಂಜುಂಡರಾಗಿದ್ದಾರೆ. ಇದನ್ನೆಲ್ಲ ಯಾರ ಬಳಿಯೂ ಅವರು ಹೇಳಿಕೊಳ್ಳಲಿಲ್ಲ.

ಹಳ್ಳಿಗರ ಕಣ್ಣ ಬೆಳಕು ನೋಡುವುದಕ್ಕಾಗಿ ಅವರು ತಮ್ಮ ಹಣವನ್ನೇ ವ್ಯಯಿಸಿ, ಸಾಮಗ್ರಿಗಳ ವೆಚ್ಚವನ್ನೂ ಕೆಲವೊಮ್ಮೆ ಕೈಬಿಟ್ಟು, ತಮಗಾಗಿ ಏನನ್ನೂ ಪಡೆಯದೆ ಕೆಲಸ ಮುಗಿಸಿಕೊಟ್ಟಿದ್ದಾರೆ. ಈಗ ವಯನಾಡಿನ ದುರಂತವನ್ನಿಷ್ಟು ನೋಡೋಣ. ಇದೇನೂ ಹೊಸದಲ್ಲ. ಕಣ್ಣಿಗೆ ಕೈಹಾಕಿದಂತೆ ಹೇಳುವುದಾದರೆ, ಇದು ಕೊನೆಯದೂ ಅಲ್ಲ. ಇಂಥ ಘಟನೆಗಳೂ ಈ ವರ್ಷವೂ, ಇನ್ನು ಮುಂದೆ ಯೂ ಘಟಿಸಲಿವೆ. ನೂರಾರು ಜೀವಗಳನ್ನು ಬಲಿ ಪಡೆಯಲಿವೆ.

2018ರಲ್ಲಿ ಭೀಕರ ಪ್ರವಾಹ ಬಂದು ಅರ್ಧ ಕೇರಳ ಮುಳುಗಿತ್ತು. 2024ರಲ್ಲಿ ವಯನಾಡಿನಲ್ಲಿ ಭಯಾನಕ ಭೂಕುಸಿತವಾಗಿ ಪಂಜಿರಿಮಟ್ಟಂ, ಚೂರುಲ್ಮಲ, ಮುಂಡಕ್ಕೈ ಎಂಬ ಮೂರು ಗ್ರಾಮಗಳು ನಾಮಾವಶೇಷವಾಗಿದ್ದವು. ಸತ್ತವರ ನಿಖರ ಸಂಖ್ಯೆ ಇನ್ನೂ ಅಂತಿಮವಾಗಿಲ್ಲ. ನಮ್ಮ ಕೊಡಗು ಕೂಡ ಸುರಕ್ಷಿತ ಏನಲ್ಲ. ಅಲ್ಲೂ 2019ರಲ್ಲಿ ನೆಲ ಮುನಿದು ಹಲವು ಜೀವಗಳನ್ನು ಬಲಿ ಪಡೆದಿದೆ. ಆದರೆ ನಾವು ಪಾಠ ಕಲಿತಿದ್ದೇವಾ? ರಮ್ಯ ಪ್ರವಾಸಿ ತಾಣ ವಯನಾಡಿನಲ್ಲಿ ಇನ್ನೊಮ್ಮೆ ಭೂಮಿ ಆರ್ಭಟಿಸಲು ಕಾರಣ ಏನು ಎಂಬುದು ಸ್ಪಷ್ಟವಾಗಿದೆ. ಅಲ್ಲಿನ ರಾಜಕಾರಣಿಗಳ, ಲಾಭ ಬಡುಕರ ಒತ್ತಡದಿಂದ ನಿರ್ಮಾಣ ಆಗುತ್ತಿರುವ ಸುರಂಗ ರಸ್ತೆ. ವಯನಾಡ್ ಮತ್ತು ಕೋಝಿಕ್ಕೋಡ್‌ಗಳನ್ನು ಸಂಪರ್ಕಿಸುವ ಈ ಹೆzರಿ ಯೋಜನೆಯಲ್ಲಿ 8.7 ಕಿಮೀ ಉದ್ದದ ಜೋಡಿ ಸುರಂಗವೊಂದು ವಯನಾಡಿನ ಸೂಕ್ಷ್ಮ ಗುಡ್ಡಗಳನ್ನು ಅಷ್ಟುದ್ದಕ್ಕೆ ಬಗೆದುಹಾಕುತ್ತದೆ.

ಅನಕ್ಕಂಪೊಯಿಲ-ಕಡಿ-ಮೆಪ್ಪಾಡಿ ಸಂಪರ್ಕ ಕ್ಕಾಗಿ ನಿರ್ಮಾಣವಾಗುತ್ತಿರುವ ಈ ಸುರಂಗ, ಸದಾ ವಾಹನ ದಟ್ಟಣೆ ಇರುವ ತಾಮರಶ್ಶೇರಿ ಘಾಟ್ ರಸ್ತೆಗೆ ಪರ್ಯಾಯ. ಇದನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ನಿರ್ವಹಿಸುತ್ತಿದೆ. ಅಂದಾಜು ವೆಚ್ಚ 213.4 ಕೋಟಿ ರೂ. ಈ ಸುರಂಗ ರಸ್ತೆ ಯೋಜನೆಗೆ ಅನುಮೋದನೆ ನೀಡಿದ್ದ ತಜ್ಞರ ಸಮಿತಿಗಳೇ, ಈ ಪ್ರದೇಶ ಭೂಕುಸಿತದ ಅಪಾಯ ಹೆಚ್ಚು ಇರುವ ಪರಿಸರ ಸೂಕ್ಷ ಪ್ರಾಂತ್ಯ ಎಂದು ಎಚ್ಚರಿಕೆ ನೀಡಿದ್ದವು. ಸುರಂಗ ಆರಂಭವಾಗುವ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಲ್ಲಿ ಅನೇಕ ಭೂಕುಸಿತಗಳು ಸಂಭವಿಸಿವೆ. 2024ರ ಚೂರುಲ್ಮಲಾ- ಮುಂಡಕ್ಕೈ ಭೂಕುಸಿತ ಅವುಗಳಲ್ಲಿ ಹೆಚ್ಚು ಭೀಕರವಾದದ್ದು. 2025ರ ಮಾರ್ಚ್‌ನಲ್ಲಿ ಕೇರಳ ಸರಕಾರದ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಬಿಡುಗಡೆ ಮಾಡಿದ ವರದಿಯಲ್ಲಿ, ಸುರಂಗದ ಮಾರ್ಗ ಭೂಕುಸಿತಕ್ಕೆ ಅತೀ ಹೆಚ್ಚು ಒಳಗಾಗುವ ದುರ್ಬಲ ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದಿತ್ತು.

2019 ಮತ್ತು 2024ರಲ್ಲಿ ಇಲ್ಲಿ ಭಾರಿ ಭೂಕುಸಿತಗಳು ಸಂಭವಿಸಿದ್ದರಿಂದ, ನಿರ್ಮಾಣದ ವೇಳೆ ಉಂಟಾಗುವ ಕಂಪನಗಳಿಂದ ಹೊಸ ಭೂಕುಸಿತಗಳು ಸಂಭವಿಸಬಹುದು, ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದಿತ್ತು. ಎಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆಯೋ ತಿಳಿಯದು. ನಮಗೆ ದೊಡ್ಡ ದೊಡ್ಡ ರಸ್ತೆಗಳು, ಸೇತುವೆಗಳು, ಸುರಂಗ ಹೆದ್ದಾರಿಗಳು ಬೇಕು. ಪ್ರತಿ ಕ್ಷಣವೂ ಜನರು ಎಲ್ಲಿಂದ ಎಲ್ಲಿಗೋ ತೀವ್ರ ವೇಗದಲ್ಲಿ ಧಾವಿಸುತ್ತಿರಬೇಕು. ಗುಡ್ಡ ಬೆಟ್ಟಗಳಲ್ಲಿ ಹೋಂಸ್ಟೇಗಳು, ರೆಸಾರ್ಟ್‌ಗಳು ನಿರ್ಮಾಣ ಆಗುತ್ತಿರಬೇಕು. ಅವುಗಳಿಗಾಗಿ ಕಾಡುಗಳು ನೆಲಸಮ ಆಗಬೇಕು. ಅಲ್ಲಿಗೆ ಕಾಡು ಹುಡುಕಿಕೊಂಡು ಪಟ್ಟಣದ ಜನ ಬರಬೇಕು. ಪಟ್ಟಣದಲ್ಲಿ ವಾರದ ಐದು ದಿನ ದುಡಿದು ಗುಡ್ಡೆಹಾಕಿದ ದುಡ್ಡನ್ನು ಖರ್ಚು ಮಾಡಲು ನಿಸರ್ಗ ರಮಣೀಯ ತಾಣಗಳು ಬೇಕು. ನಮ್ಮ ಕೊಡಗು, ಚಿಕ್ಕಮಗಳೂರು ಅಂಥ ಜಾಗಗಳು.

ಮೊದಮೊದಲು ಅಲ್ಲಿನ ಜನರೂ ಹೋಂಸ್ಟೇ, ರೆಸಾರ್ಟ್ ಕಟ್ಟಿ ಬನ್ನಿ ಬನ್ನಿ ಎಂದು ಕರೆದರು. ಈಗ ಈ ಪ್ರವಾಸೋದ್ಯಮದ ಕರಾಳ ರೂಪ ಕಂಡು ಅವರೂ ಸಾಕಿನ್ನು ಇಲ್ಲಿಗೆ ಬರಬೇಡಿ ಎಂದು ಅಲವತ್ತು ಕೊಳ್ಳುತ್ತಿದ್ದಾರೆ. ಹಿಮಾಚಲ ಪ್ರದೇಶದ ಹಿಲ್‌ಸ್ಟೇಶನ್‌ಗಳು, ನಮ್ಮ ಊಟಿ- ಕೊಡೈಕೆನಾಲ್ ಗಳು ವಾರಾಂತ್ಯದಲ್ಲಿ ಒಳಬರುವ ವಾಹನಗಳ ಸಂಖ್ಯೆಯನ್ನು 8000ಕ್ಕೆ ಮಿತಿ ಗೊಳಿಸಿವೆ. ಇದು ನಮ್ಮ ಅಭಿವೃದ್ಧಿಯ ರುದ್ರನೋಟ. ನಮ್ಮಲ್ಲೂ ಆಗುಂಬೆಯ ಹೊಟ್ಟೆ ಬಗಿದು ಸುರಂಗ ಮಾಡುವ ಯೋಜನೆ ಸ್ಕೆಚ್ ಹಾಕಲಾಗಿದೆ. ಡಿಪಿಆರ್ ರೆಡಿ ಮಾಡಲು ಆಗಲೇ 2.3 ಕೋಟಿ ಎತ್ತಿಡಲಾಗಿದೆ. ಇದೂ ಉಡುಪಿ- ಶಿವಮೊಗ್ಗ ಸಂಪರ್ಕ ಸುಗಮಕ್ಕಾಗಿಯಂತೆ. ಆದರೆ ಆಗುಂಬೆ ಯಂತ ಜೀವವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಇದರ ಪರಿಣಾಮ ಏನಾದೀತು ಎಂಬ ಬಗ್ಗೆ ಆಳುವವ ರಿಗೆ ಖಬರಿಲ್ಲ. ಇನ್ನು ಆಳುವವರಿಗೆ ಕಣ್ಣ ಮುಂದೆ ಕಾಂಚಾಣ ಗಿಲಿಗಿಲಿ ಎಂದು ಕುಣಿಸುತ್ತಿರುವ ಸುರಂಗರಸ್ತೆಯ ಸಾಧ್ಯತೆ ಎಂದರೆ ಶಿರಾಡಿ. 29 ಕಿಮೀ ಉದ್ದದ ಈ ಸುರಂಗ ಏನಿಲ್ಲಾ ಅಂದರೂ 15000 ಕೋಟಿಗಳ ಬಾಬ್ತು. ಇನ್ನು ಎತ್ತಿನಹೊಳೆ ಎಂಬ ವಿಕೃತ, ಹಾಸ್ಯಾಸ್ಪದ ಯೋಜನೆಯ ಬಗ್ಗೆ ಟೀಕಿಸಿ ಟೀಕಿಸಿ ತಜ್ಞರೂ ಸುಸ್ತಾಗಿ ಮೌನವಾಗಿದ್ದಾರೆ. ಈ ಎಲ್ಲವೂ ಮತ್ತೊಂದೊಂದು ವಯನಾಡ್ ಆಗುವತ್ತ ದಾಪುಗಾಲು ಹಾಕುತ್ತಿವೆ.

ಈ ದುರಂತಗಳ ಹಿನ್ನೆಲೆಯಲ್ಲಿ ಗಿರೀಶರ ಕಾಯಕವನ್ನು ನೋಡಿದರೆ ಏನನ್ನಿಸುತ್ತದೆ? ಅವರು ಇಂಜಿನಿಯರಿಂಗ್ ಮಾಡಿದ ಬಳಿಕ, ತಂದೆಯ ಇಚ್ಛೆಯಂತೆ ತಮ್ಮ ಹಳ್ಳಿಯಲ್ಲೇ ಉಳಿದರು. ಅಲ್ಲೇ ಬದುಕು ಕಟ್ಟಿಕೊಂಡರು, ಇತರರಿಗೂ ಕೆಲಸ ಕೊಟ್ಟರು. ನಗರಕ್ಕೆ ಧಾವಿಸಲಿಲ್ಲ. ಸಾಧ್ಯವಾದಷ್ಟು ಪರಿಸರ ಸ್ನೇಹಿ ಯಾದ ಸೇತುವೆಗಳನ್ನು ಕಟ್ಟಿದರು. ಅವರು ಕಟ್ಟಿದ ಸೇತುಗಳಲ್ಲಿ ಬೈಕುಗಳು ನಿಧಾನವಾಗಿ ಚಲಿಸಬಹುದಿ ತ್ತು. ಕಾಲ್ನಡಿಗೆಯೇ ಮುಖ್ಯವಾಗಿತ್ತು. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು, ಹೆದ್ದಾರಿಗಳು ಒಂದು ಕಡೆ. ಹೀಗೆ ಹಸುರು ನೆಮ್ಮದಿ ನೀರು ಎಲ್ಲ ಉಳಿಸಿಕೊಂಡು ಬದುಕನ್ನು ಚೂರು ಚೂರೇ ಸುಧಾರಿಸುತ್ತ ಹೋಗುವವರು ಒಂದು ಕಡೆ. ಗಿರೀಶರ ನಿರ್ಗಮನದೊಂದಿಗೆ ಅಂಥ ಒಂದು ಕೊಂಡಿ ಕಳಚಿದೆ. ಪದಕುಸಿಯೆ ನೆಲವಿಹುದು ಎಂದಿದ್ದರು ಡಿವಿಜಿ. ನೆಲ ಕುಸಿಯೆ ಪದವಿಹುದೆ?

ಹರೀಶ್‌ ಕೇರ

View all posts by this author