Harish Kera Column: ಮಳೆ ನಿಂತು ಹೋದ ಮೇಲೆ, ಕಣ್ಣ ಹನಿ ಮೂಡಿದೆ
ಮನುಷ್ಯನಷ್ಟೇ ಅಲ್ಲ ಮಳೆಗಾಗಿ ಕಾಯುವುದು. ಅಥವಾ ಹೀಗೆ ಹೇಳೋಣ- ಮಳೆಗಾಗಿ ಮನುಷ್ಯ ಕಾಯದಿದ್ದರೂ ಸಕಲ ಜೀವಜಾತಿಗಳು ತಮ್ಮದೇ ಆದ ರೀತಿಯಲ್ಲಿ ಕಾಯುತ್ತವೆ. ಸಣ್ಣ ಕ್ರಿಮಿ ಕೀಟ ಗಳಿಂದ ಹಿಡಿದು ಭವ್ಯ ಜೀವಿ ಆನೆಯವರೆಗೂ. ಮಳೆ ಸರಿಯದ ಪ್ರಮಾಣದಲ್ಲಿ ಸುರಿದರೆ ಅವುಗಳ ಜೀವನ ಚಲನೆ ಸರಾಗ. ಉದಾಹರಣೆಗೆ ಮೀನಿನ ಈ ಜೀವಚಕ್ರವನ್ನು ನೋಡಿ.
-
ಕಾಡುದಾರಿ
ಪಶ್ಚಿಮ ಘಟ್ಟದ ಕಾಡುಗಳ ನಡುವೆ ವಾಸಿಸುವ ಮಿತ್ರನೊಬ್ಬ ಫೋನ್ ಮಾಡಿದ್ದ. ಇಷ್ಟು ಹೊತ್ತಿಗೆ ಹಗಲೆನ್ನದೆ ರಾತ್ರಿ ಎನ್ನದೆ ಮಳೆ ಸುರಿಯುತ್ತಿರಬೇಕಿತ್ತು. ಕೊಡೆಯಿಲ್ಲದೆ ಆಚೆ ಹೊರಡಲೇ ಆಗುತ್ತಿರ ಲಿಲ್ಲ. ಬಾನಿನಲ್ಲಿ ಸೂರ್ಯನ ದರ್ಶನವೇ ಆಗದೆ ವಾರಗಟ್ಟಲೆ ಕಳೆದುದು ಉಂಟು. ರಾತ್ರಿ ಯಾಗುವುದಕ್ಕೂ ಮೊದಲೇ ಕಪ್ಪೆಗಳು ವಟರ್ ವಟರ್ ಆರಂಭಿಸುತ್ತಿದ್ದವು. ರಾತ್ರಿಯಿಡೀ ಈ ಸಂಗೀತ ಕಛೇರಿ ನಡೆಯುತ್ತಿತ್ತು. ಕೆಲವೊಮ್ಮೆ ತುಂಬಾ ತಂಪಿನ ತಾಣಗಳಲ್ಲಿ, ಕೆರೆ ತೋಡುಗಳ ಬಳಿಯಲ್ಲಿ ಹಗಲೆನ್ನದೆ ಈ ಭಜನೆ ಮುಂದುವರಿಯುತ್ತಿತ್ತು. ಕಾಡಿನ ನಡುವೆ ಹೋದರೆ ಮರಗಪ್ಪೆ ಗಳು ಮೈಮೇಲೇ ಜಿಗಿದುಬಿಡುತ್ತಿದ್ದವು. ಎಲ್ಲೆಂದರಲ್ಲಿ ಓಡಾಡುವ, ಎಣೆಯಾಡುವ ಹಾವುಗಳು ಕಾಣಿಸುತ್ತಿದ್ದವು. ಜಿಗಣೆಗಳು ರಾಶಿರಾಶಿಯಾಗಿ ಮೈಗೆ ಹತ್ತಿಕೊಂಡು ನೆತ್ತರೋಕುಳಿ ಮಾಡಿ ಬಿಡುತ್ತಿದ್ದವು. ಆ ದೃಶ್ಯಗಳೆಲ್ಲ ಈಗ ಕಾಣಿಸುತ್ತಲೇ ಇಲ್ಲ. ಪ್ರಕೃತಿಗೆ ಏನೋ ಆಗಿದೆ ಎಂದು ಗೋಳು ತೋಡಿಕೊಂಡ.
ಈ ವರ್ಷದ ಮಳೆಗಾಲ ಪಶ್ಚಿಮ ಘಟ್ಟ, ಬಯಲುಸೀಮೆ, ರಾಜಧಾನಿ ಎನ್ನದೆ ಎಲ್ಲರನ್ನೂ ಬಾಯಾರಿ ಬೆಂಡಾಗುವಂತೆ ಮಾಡಿದೆ. ರಾಯಚೂರಿನ ರೈತರು ಹೊಲಗಳನ್ನು ಸಿದ್ಧ ಮಾಡಿಕೊಂಡು ಬಿತ್ತನೆ ಗಾಗಿ ಮಳೆಗೆ ಕಾದು ಕೂತಿದ್ದಾರೆ. ಸುಳ್ಯದ ಅಡಕೆ ಕೃಷಿಕರು ಕೊಳೆರೋಗ ಎದುರಿಸಲು ಬೋರ್ಡೋ ಮಿಕ್ಸ್ ಸಿದ್ಧಪಡಿಸಿಕೊಂಡು ಕಾಯುತ್ತಿದ್ದಾರೆ. ಹಾಸನದಲ್ಲಿ, ಚಿಕ್ಕಮಗಳೂರಿನಲ್ಲಿ ಆಗುವ ಕಾಲಕ್ಕೆ ಮಳೆ ಬಂದರೆ ಮಾತ್ರ ಮುಂದಿನ ಸಲದ ಕಾಫಿ ಬೆಳೆ ಸರಾಗ. ಬೆಟ್ಟದೂರುಗಳಲ್ಲಿ ಮಳೆ ನೋಡ ಲೆಂದೇ ಬಂದು ಹೋಂಸ್ಟೇಗಳಲ್ಲಿ ಝಂಡಾ ಊರಿದವರಿಗೆ ನಿರಾಸೆ. ಕಳೆದ ವರ್ಷ ಸಾಕುಸಾಕೆನ್ನು ವಷ್ಟು ಮಳೆ ಸುರಿದಿತ್ತು.
ಮನುಷ್ಯನಷ್ಟೇ ಅಲ್ಲ ಮಳೆಗಾಗಿ ಕಾಯುವುದು. ಅಥವಾ ಹೀಗೆ ಹೇಳೋಣ- ಮಳೆಗಾಗಿ ಮನುಷ್ಯ ಕಾಯದಿದ್ದರೂ ಸಕಲ ಜೀವಜಾತಿಗಳು ತಮ್ಮದೇ ಆದ ರೀತಿಯಲ್ಲಿ ಕಾಯುತ್ತವೆ. ಸಣ್ಣ ಕ್ರಿಮಿ ಕೀಟಗಳಿಂದ ಹಿಡಿದು ಭವ್ಯ ಜೀವಿ ಆನೆಯವರೆಗೂ. ಮಳೆ ಸರಿಯದ ಪ್ರಮಾಣದಲ್ಲಿ ಸುರಿದರೆ ಅವುಗಳ ಜೀವನ ಚಲನೆ ಸರಾಗ. ಉದಾಹರಣೆಗೆ ಮೀನಿನ ಈ ಜೀವಚಕ್ರವನ್ನು ನೋಡಿ.
ಇದನ್ನೂ ಓದಿ: Harish Kera Column: ಮುದ್ದು ಪರ್ವತ ಪಿಶಾಚಿಗಳು ಕರೆಯುತ್ತಿವೆ!
ಪಶ್ಚಿಮ ಘಟ್ಟಗಳಲ್ಲಿ ಅಬ್ಬರದ ವರ್ಷಧಾರೆ ಒಂದು ತಿಂಗಳು ಸುರಿದರೆ, ದಟ್ಟ ಕಾಡುಗಳ ತಪ್ಪಲಿ ನಲ್ಲಿರು ಹೊಳೆ ನದಿ ತೋಡುಗಳಲ್ಲಿರುವ ಮೀನುಗಳಿಗೆ ಸಂತೊಷವೋ ಸಂತೋಷ. ಅವು ಇದೇ ಸಂದರ್ಭದಲ್ಲಿ ಮಿಲನಕ್ರಿಯೆ ಪೂರೈಸಿಕೊಳ್ಳುತ್ತವೆ. ಮರಿಯಿಡಲು ಸೂಕ್ತ ತಾಣ ಹುಡುಕಿಕೊಂಡು ಅವು ಧಾವಿಸುವುದು ನೀರಿನಲ್ಲಿ ಮೇಲ್ಮುಖವಾಗಿ, ನೀರಿನ ಪ್ರವಾಹ ಹೆಚ್ಚಿಲ್ಲದ ಕಡೆಗೆ. ಜಲಮೂಲ ಗಳ ಎಡೆಗೆ. ತಪ್ಪಲಿನಿಂದ ಮೇಲಕ್ಕೆ, ಹೊಲಗದ್ದೆಗಳಿಗೆ. ಹಿಂಚಲಿಸಿ ಗದ್ದೆಗಳಲ್ಲಿ, ನಿಂತ ನೀರಿನಲ್ಲಿ ಮೊಟ್ಟೆಯಿಟ್ಟು ಮತ್ತೆ ಕೆಳಮುಖವಾಗಿ ಚಲಿಸುವುದು ಅವುಗಳ ಅಜೆಂಡಾ. ಇದೊಂಥರ ಹೆರಿಗೆಗೆ ತವರುಮನೆಗೆ ಹೋದ ಹಾಗೆ.
ಮೀನಿನ ರುಚಿ ಬಲ್ಲವರು ಇದೇ ಸಂದರ್ಭವನ್ನು ಕಾಯುತ್ತಾರೆ. ತೊರೆಗಳ ಹರಿವು ಅಗಲವಾಗಿಲ್ಲದ ಕಡೆಗಳಲ್ಲಿ ಅವರು ಬಲೆ, ಗೂಡು ಹಿಡಿದು ಕಾಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಾವಿರಾರು ಮೀನುಗಳು ಪ್ರವಾಹದಂತೆ ನುಗ್ಗಿಕೊಂಡು, ಸಣ್ಣ ಜಲಪಾತಗಳಲ್ಲಿ ಮೇಲಕ್ಕೆ ಹಾರುತ್ತ ಧಾವಿಸು ತ್ತವೆ. ಅಲ್ಲಿ ಬಲೆ ಹಾಕಿದರೆ ನೂರಾರು ಒಂದೇಟಿಗೆ ಸಿಕ್ಕಿಬೀಳುತ್ತವೆ. ಮಲೆನಾಡಿನಲ್ಲಿ ಇದು ಈ ಸಮಯದಲ್ಲಿ ರಾತ್ರಿ ವೇಳೆಯ ಸಾಮಾನ್ಯ ಚಟುವಟಿಕೆ. ಆದರೆ ಈ ಸಲ ಇದು ಕಾಣಿಸುತ್ತಿಲ್ಲ. ಮೀನುಗಳು ಮರಿಯಿಡಲು ಹೊರಟೇ ಇಲ್ಲ. ಅದರರ್ಥ ಮುಂದಿನ ವರ್ಷ ಮತ್ಸ್ಯಕ್ಷಾಮ ಖಚಿತ.
ಈ ಬಾರಿ ಇನ್ನೊಂದು ವಿಶೇಷ ಘಟಿಸಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಹಾಗೂ ಕಾಡುಗಳಲ್ಲಿ ಹಣ್ಣುಗಳು ಈ ಬೇಸಿಗೆಯಲ್ಲಿ ಹೇರಳವಾಗಿ ಕಾಣಿಸಿಕೊಂಡಿವೆ. ಹಲಸು, ಕಾಡುಮಾವು, ನೇರಳೆ, ಹೆಬ್ಬಲಸು ಹಾಗೂ ಕಾಡುಹಣ್ಣುಗಳು ಪುಷ್ಕಳವಾಗಿ ದೊರೆತಿರುವುದರಿಂದ ಮಂಗಗಳ ಕಾಟ ಅಷ್ಟಾಗಿ ರೈತರಿಗೆ ಕಾಡಿಲ್ಲ. ನೇರಳೆ ಮಾತ್ರವಲ್ಲ, ಎಲ್ಲ ಮರಗಳೂ ಸಿಕ್ಕಾಪಟ್ಟೆ ಫಲ ಬಿಟ್ಟಿರುವುದು ಮುಂಬರುವ ಬರದ ದ್ಯೋತಕ ಎಂಬುದರಲ್ಲಿ ಅನುಮಾನವಿಲ್ಲ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ತಜ್ಞರಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯ ಇದೆ. ಹಲಸು ಸಾಮಾನ್ಯವಾಗಿ ಜುಲೈ ತಿಂಗಳಲ್ಲೂ ಫಲ ಬಿಡುತ್ತದೆ. ಆದರೆ ಅದರಲ್ಲಿ ಮಳೆ ನೀರು ಸೇರಿಕೊಳ್ಳುವುದರಿಂದ ಮನುಷ್ಯರು ಸೇವಿಸುವು ದಿಲ್ಲ. ಇವೇ ಮರದಿಂದ ಬಿದ್ದು, ಆನೆಗಳಿಗೆ ಹೇರಳ ಆಹಾರವಾಗಿದೆ. ಕಾಫಿ- ಟೀ ತೋಟಗಳ ಪಕ್ಕ ದಲ್ಲಿರುವ ಹಲಸಿನ ಮರಗಳ ಬಳಿ ಈಗ ಆನೆಗಳ ಗುಂಪಿದೆ. ಈ ಎಲ್ಲ ಹಣ್ಣುಗಳ ಬೀಜ, ಗೊರಟು ನೆಲ ಸೇರಿ ದೊಡ್ಡ ಪ್ರಮಾಣದಲ್ಲಿ ಮೊಳಕೆ ಒಡೆಯಬೇಕಲ್ಲವೆ? ಇದು ಬರಕ್ಕೆ ಪ್ರಕೃತಿಯೇ ಒಡ್ಡುತ್ತಿರುವ ಸವಾಲು ಇರಬಹುದು. ಆದರೆ ಮೊಳಕೆಗೆ ಮಳೆ ಬೇಕಲ್ಲ.
ಪಶ್ಚಿಮ ಘಟ್ಟಗಳ ಒಡಲಿನಲ್ಲಿರುವ ಕೆಲವು ಜಾತಿಯ ಚಿಟ್ಟೆಗಳು ಜೀವನಚಕ್ರವನ್ನು ಒಂದು ಕ್ಷಣ ನೋಡಿ. ಈ ಅದ್ಭುತ ಚಿಟ್ಟೆಗಳು ದೂರದ ವಲಸೆ ಪ್ರಯಾಣಕ್ಕೂ ಪ್ರಸಿದ್ಧ. ದಕ್ಷಿಣ ಭಾರತದಲ್ಲಿ ಎರಡು ಮುಂಗಾರುಗಳು ಬೀಳುತ್ತವೆ- ನೈರುತ್ಯ ಮತ್ತು ಆಗ್ನೇಯ ಮುಂಗಾರು. ಪರಿಣಾಮ ಡೇನೈನ್ ಜಾತಿಯ ಚಿಟ್ಟೆಗಳು ವರ್ಷಕ್ಕೆ ಎರಡು ಬಾರಿ ಪಶ್ಚಿಮ ಘಟ್ಟದ ಮಳೆಕಾಡುಗಳು ಮತ್ತು ಪೂರ್ವ ಘಟ್ಟ ಹಾಗೂ ಡೆಕ್ಕನ್ ಪ್ರದೇಶಗಳ ನಡುವೆ ವಲಸೆ ಹೋಗುತ್ತವೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಬಿಸಿಲಿನಿಂದ ಕಾದ ಪಶ್ಚಿಮ ಘಟ್ಟಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿದ ಬಳಿಕ ಕಾಡು ಹೂಗಳು ಅರಳುತ್ತವೆ. ಆಗ ಹೊಸದಾಗಿ ಬೆಳೆದ ಟೈಗರ್ ಮತ್ತು ಕ್ರೋ ಜಾತಿಯ ಚಿಟ್ಟೆಗಳು ಹೂಗಳ ಮಕರಂದ ಕುಡಿದು ತಮ್ಮ ಪ್ರಯಾಣಕ್ಕೆ ಬೇಕಾದ ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತವೆ. ನಂತರ ಪಶ್ಚಿಮ ಘಟ್ಟದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಭಾರಿ ನೈರುತ್ಯ ಮುಂಗಾರು ಮಳೆಯ ಕಾಲ. ಈ ಕಾಲದಲ್ಲಿ ಅವು ಅಲ್ಲಿರುವುದಿಲ್ಲ. ಅಲ್ಲಿಂದ ಪೂರ್ವದ ಒಣ ಪ್ರದೇಶಗಳ ಕಡೆಗೆ ಹಾರುತ್ತವೆ.
ಡೇನೈನ್ ಚಿಟ್ಟೆಗಳ ವಲಸೆ ಮಾರ್ಗದ ಬಗ್ಗೆ ಪ್ರಕೃತಿ ತಜ್ಞರು ನೀಡುವ ವಿವರ ಸೊಗಸಾಗಿದೆ. ಈ ಚಿಟ್ಟೆಗಳ ಪ್ರಯಾಣ ಶೃಂಗೇರಿ ಸಮೀಪದ ಕಾಡುಗಳಿಂದ ಆರಂಭವಾಗುತ್ತದೆ. ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಮಡಿಕೇರಿ ತಲುಪಿದ ನಂತರ ಅವು ಎರಡು ಗುಂಪುಗಳಾಗಿ ವಿಭಜನೆ ಯಾಗುತ್ತವೆ. ಒಂದು ಗುಂಪು ಹಾಸನ, ಬೆಂಗಳೂರು ಹೊರವಲಯ, ಮಲೆ ಮಹದೇಶ್ವರ ಬೆಟ್ಟ ಮೂಲಕ ಸಾಗುತ್ತಾ ತಮಿಳುನಾಡಿನ ಏರ್ಕಾಡ್ ತಲುಪುತ್ತದೆ. ಇನ್ನೊಂದು ಗುಂಪು ಬ್ರಹ್ಮಗಿರಿ ಬೆಟ್ಟಗಳು, ವಯನಾಡು, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ನೀಲಗಿರಿ, ಅನಮಲೈ ಬೆಟ್ಟಗಳು ಹಾಗೂ ಕೊಯಮತ್ತೂರು ಕಡೆಗೆ ಹಾರುತ್ತದೆ. ಕೆಲವು ಚಿಟ್ಟೆಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮೂಲಕ ಬಿಳಿಗಿರಿರಂಗನ ಬೆಟ್ಟ ತಲುಪುತ್ತವೆ.
ಏಪ್ರಿಲ್‌ನಿಂದ ಜೂನ್‌ವರೆಗೆ, ನೈರುತ್ಯ ಮುಂಗಾರು ಚೆನ್ನಾಗಿ ಸುರಿಯಲು ಆರಂಭಿಸುವ ಮುನ್ನ, ಈ ಅದ್ಭುತ ಚಿಟ್ಟೆಗಳ ವಲಸೆಯನ್ನು ಬೆಂಗಳೂರಿನ ಹೊರವಲಯದ ಜನರು ಕಣ್ತುಂಬಿಕೊಳ ಬಹುದು. ಪೂರ್ವದ ಗಮ್ಯಸ್ಥಾನ ತಲುಪಿದ ನಂತರ ಈ ಚಿಟ್ಟೆಗಳು ಅಲ್ಲಿ ಸಂತಾನೋತ್ಪತ್ತಿ ಮಾಡಿ ತಮ್ಮ ಜೀವನ ಮುಗಿಸುತ್ತವೆ. ಅವುಗಳ ಮರಿಗಳು ಅಥವಾ ಕೆಲವೊಮ್ಮೆ ಮೂರನೇ ತಲೆಮಾರಿನ ಚಿಟ್ಟೆಗಳು, ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಈಶಾನ್ಯ ಮುಂಗಾರು ಆರಂಭವಾಗುವ ಸಮಯ ದಲ್ಲಿ ಮತ್ತೆ ಪಶ್ಚಿಮ ಘಟ್ಟದತ್ತ ಹಿಂದಿರುಗುತ್ತವೆ.
ಆದರೆ ಈ ಬಾರಿ ಈ ಚಿಟ್ಟೆಗಳ ವಲಸೆ ಅಂಥ ಪ್ರಮಾಣದಲ್ಲಿ ಕಾಣಿಸಲಿಲ್ಲ. ಕಾರಣ, ಮಳೆಯೇ ಬರೊಲ್ಲ ಎಂದರೆ ಚಿಟ್ಟೆಗಳಾದರೂ ಯಾಕೆ ಅಲ್ಲಿಂದ ಹೊರಡಬೇಕು. ಇದರಿಂದ ಅವುಗಳ ವಲಸೆ ಚಕ್ರವೂ ಅಸ್ತವ್ಯಸ್ತವಾಗಿದೆ. ಇದಲ್ಲದೆ ಅವುಗಳ ವಲಸೆ ಮಾರ್ಗಗಳನ್ನು ಹಾದು ಹೋಗುವ ಅಗಲದ ಹೆzರಿಗಳ ಭಯವೂ ಇದೆ. ಅಲ್ಲಿ ಸಾವಿರಾರು ಚಿಟ್ಟೆಗಳು ವಾಹನಗಳಿಗೆ ಸಿಲುಕಿ ಸಾಯುತ್ತವೆ. ಜತೆಗೆ ಕೀಟನಾಶಕಗಳ ಅತಿಯಾದ ಬಳಕೆಯಿಂದ ಡೇನೈನ್ ಚಿಟ್ಟೆಗಳ ಮರಿಗಳು ಬೆಳೆಯಲು ಅಗತ್ಯವಾದ ಎಕ್ಕದ ಜಾತಿಯ ಸಸ್ಯಗಳು ನಾಶವಾಗುತ್ತಿವೆ. ಹೀಗಾಗಿ ಇದರಿಂದ ಅವುಗಳ ವಲಸೆ ಮತ್ತು ಸಂತಾ ನೋತ್ಪತ್ತಿಯ ಚಕ್ರಕ್ಕೂ ಗಂಭೀರ ಅಪಾಯ ಬಂದಿದೆ. ಈ ಚಿಟ್ಟೆಗಳು ಇಲ್ಲದೆ ಹೋದರೆ ಈ ಜಾತಿಯ ಸಸ್ಯಗಳೂ ಮುಂದೊಂದು ದಿನ ಅಳಿಸಿ ಹೋಗುತ್ತವೆ.
ಬಿಸಿಲೆ ಘಾಟಿಯಲ್ಲಿ ಮಳೆಗಾಲದಲ್ಲಿ ‘ಕಪ್ಪೆ ಶಿಬಿರ’ ನಡೆಯುತ್ತದೆ. ಇಲ್ಲಿ ಕಪ್ಪೆಗಳ ಜಾತಿ ಹೇರಳ. ಈ ಪ್ರದೇಶದಲ್ಲಿ ಮಾತ್ರ ಕಾಣಸಿಗುವ (ಎಂಡೆಮಿಕ್) ಕಪ್ಪೆಗಳೂ ಬಹಳಷ್ಟಿವೆ. ಬಿಸಿಲೆಯ ಮಳೆಗಾಲದ ರಾತ್ರಿಗಳೆಂದರೆ ಕಪ್ಪೆಗಳ ಜೋಗುಳರವ ಎಂದೇ ಅರ್ಥ. ಆಗುಂಬೆ, ಉತ್ತರಕನ್ನಡ, ಕೊಡಗಿನ ಕಾಡು ಗಳಿಗೂ ಇದು ನಿಜ. ಕಪ್ಪೆಗಳನ್ನು ಜೈವ ಸೂಚಕಗಳು ಎಂದೇ ಕರೆಯಲಾಗುತ್ತದೆ. ಕಾರಣ, ಪರಿಸರ ದಲ್ಲಿ ಏನಾದರೂ ಬದಲಾವಣೆ ಅಥವಾ ಹಾನಿ ಆದರೆ ಅದರ ಪರಿಣಾಮ ಮೊದಲು ಕಾಣಿಸಿ ಕೊಳ್ಳುವ ಜೀವಿ ಕಪ್ಪೆ. ಇವು ಆಹಾರ ಸರಪಳಿಯಲ್ಲಿ ಬಹಳ ಮುಖ್ಯ. ಅವು ಕೀಟಗಳನ್ನು ತಿನ್ನುವ ಪರಭಕ್ಷಕ, ಹಾವುಗಳಿಗೆ ಆಹಾರ. ಈ ಬಾರಿ ಅವುಗಳ ಕರೆಯೂ ಕಡಿಮೆ.
ಇಷ್ಟು ಹೊತ್ತಿಗೆ ಸಾಮಾನ್ಯವಾಗಿ ಕಪ್ಪೆಗಳು ಸಂತಾನೋತ್ಪತ್ತಿ ಮಾಡುವ ಅನೇಕ ಸ್ಥಳಗಳು ಈ ಬಾರಿ ಸಂಪೂರ್ಣ ನಿಶ್ಶಬ್ದವಾಗಿವೆ. ವರ್ಷಪೂರ್ತಿ ನೀರು ಹರಿಯುವ ಹೊಳೆಗಳು ಹಲವು ಜಾತಿಯ ಕಪ್ಪೆಗಳ ಜೀವನಚಕ್ರದಲ್ಲಿ ಪ್ರಮುಖ. ಇವು ಹರಿಯುವ ನೀರಿನ ಅಥವಾ ಅದರ ಸುತ್ತಮುತ್ತ ಮೊಟ್ಟೆ ಇಡುತ್ತವೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ನೀರಿನ ಮಟ್ಟ ಇಳಿದಿದ್ದು, ಇಲ್ಲಿನ ಅಪರೂಪದ ಕಪ್ಪೆಗಳ ಸಂತಾನೋತ್ಪತ್ತಿಗೆ ಏಟು ಬಿದ್ದಿದೆ. ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆಯೂ ವರ್ಷದಿಂದ ವರ್ಷಕ್ಕೆ ಅಸ್ಥಿರವಾಗುತ್ತಿರುವುದರಿಂದ, ಕಳೆದ ನಾಲ್ಕು ವರ್ಷಗಳಿಂದ ಕಪ್ಪೆಜಾತಿಗೆ ಬಹಳ ಕಷ್ಟವಾಗಿದೆ.
ಭಾರತದ ಅತಿ ದೊಡ್ಡ ಕಪ್ಪೆ ಜಾತಿಗಳಲ್ಲಿ ಒಂದಾದ ಡೋಂಕುರು ಕಪ್ಪೆ ಅಥವಾ ಇಂಡಿಯನ್ ಬುಲ್-ಗ್ ಸಾಮಾನ್ಯವಾಗಿ ಮುಂಗಾರು ಆರಂಭವಾದ ಕೂಡಲೇ ಮೊದಲು ಸಂತಾನೋತ್ಪತ್ತಿ ಮಾಡುತ್ತದೆ. ಆದರೆ ಈ ವರ್ಷ ಹಲವು ಪ್ರದೇಶಗಳಲ್ಲಿ ಅವುಗಳ ಚಟುವಟಿಕೆ ಕಾಣುತ್ತಿಲ್ಲ. ಈ ಕಪ್ಪೆಗಳು ಮೊಟ್ಟೆ ಇಡಲು ಕನಿಷ್ಠ ಒಂದರಿಂದ ಎರಡು ಇಂಚು ನೀರು ನಿಂತಿರಬೇಕು. ಈ ಕಪ್ಪೆಗಳ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡಾ 10ಕ್ಕಿಂತಲೂ ಕಡಿಮೆಯಾಗಿದೆ. ಕೆಲವು ಸಾಮಾನ್ಯ ಕಪ್ಪೆಗಳು ಮೊಟ್ಟೆ ಇಟ್ಟಿವೆ. ಆದರೆ ನೀರಿನ ಪ್ರದೇಶಗಳು ಬೇಗ ಒಣಗುತ್ತಿರುವುದರಿಂದ ಆ ಮೊಟ್ಟೆಗಳು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ.
ಮಲಬಾರ್ ಟ್ರೀ ಟೋಡ್, ನೈಟ್ ಫ್ರಾಗ್, ಬುಷ್ ಫ್ರಾಗ್ ಮೊದಲಾದ ಸಣ್ಣ ಕಪ್ಪೆಗಳು ಇಷ್ಟು ಹೊತ್ತಿಗಾಗಲೇ ಜೋರು ಜೋರು ಗಲಾಟೆ ಮಾಡುತ್ತ ಸಂಗಾತಿಗಳನ್ನು ಹುಡುಕಿಕೊಂಡು ಮಿಲನ ಕ್ರಿಯೆಯಲ್ಲಿರಬೇಕಿತ್ತು. ಆದರೆ ಅವುಗಳ ಮೇಟಿಂಗ್ ಕಾಲ ಬಹಳಷ್ಟು ಕಡಿಮೆಯಾಗಿವೆಯಂತೆ. ಕಪ್ಪೆಗಳು ಕೀಟಗಳನ್ನು ತಿನ್ನುವ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸುವುದು ನಿಮಗೆ ಗೊತ್ತು. ಕಪ್ಪೆಗಳಿಲ್ಲದಿದ್ದರೆ ಕ್ರಿಮಿಕೀಟಗಳು ಹೆಚ್ಚುವುದು ಖಚಿತ.
ಮತ್ತೊಂದೆಡೆ ಹಾವುಗಳಿಗೆ ಕಪ್ಪೆಗಳೇ ಪ್ರಮುಖ ಆಹಾರ. ನಾಗರ, ಕನ್ನಡಿ ಮೊದಲಾದ ಹಾವುಗಳು ಕಪ್ಪೆಗಳನ್ನೇ ಅವಲಂಬಿಸಿವೆ. ಕನ್ನಡಿ ಹಾವುಗಳು ಏಪ್ರಿಲ್- ಮೇ ತಿಂಗಳಲ್ಲಿ ಮರಿ ಇಡುತ್ತವೆ. ಆ ಪುಟ್ಟ ಹಾವುಗಳಿಗೆ ಸಣ್ಣ ಕಪ್ಪೆ- ಗೊದ್ದಗಳೇ ಮುಖ್ಯ ಆಹಾರ. ಈಗ ಕಪ್ಪೆಗಳಿಲ್ಲದೆ ಹಾವುಗಳೂ ಸಂತಾನೋತ್ಪತ್ತಿ ಮಾಡುವುದಿಲ್ಲ. ಮಾಡಿದರೂ ಬದುಕುಳಿಯುವುದಿಲ್ಲ. ಹಾವುಗಳಿಲ್ಲದೆ ಇಲಿಗಳ ಸಂಖ್ಯೆ ಹೆಚ್ಚಬಹುದು. ಬರಗಾಲದಲ್ಲಿ ಇಲಿಗಳ ಸಂಖ್ಯೆ ಹೆಚ್ಚು ಯಾಕೆ ಎಂಬುದು ಗೊತ್ತಾಯಿತೆ?