ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Thimmanna Bhagwath Column: ತಾಳಮದ್ದಳೆ ʼಅಧಿಕ ಪ್ರಸಂಗʼ ವಾದರೆ, ಪ್ರೇಕ್ಷಕರು ಯಾಕೆ ಮೂಕರಾಗಿರಬೇಕು ?

ಮಾತಿನಲ್ಲೇ ಮಂಟಪ ಕಟ್ಟಿ ಪ್ರೇಕ್ಷಕರನ್ನು ರಂಜಿಸುವ ಕಲೆ ಸುಲಭ ಸಾಧ್ಯವಲ್ಲ. ಕೇವಲ ಭಾಷಣ, ಉಪನ್ಯಾಸ ಮಾಡುವವರಿಗೆ ಪ್ರಸಂಗದ ಅರ್ಥಗಾರಿಕೆ ಸಾಧ್ಯವಿಲ್ಲ. ಅದಕ್ಕೆ ಶೃತಿಬದ್ಧ ಮಾತು, ಸಮಯ ಪ್ರಜ್ಞೆ, ಪ್ರತ್ಯುತ್ಪನ್ನಮತಿತ್ವ ಮುಂತಾದವು ಮಹತ್ವದ್ದಾಗುತ್ತವೆ. ಅಂಥ ಅರ್ಥಗಾರಿಕೆಯಲ್ಲಿ ಅಪಸವ್ಯ ಗಳು ಸೇರಿಕೊಂಡರೆ ಅದು ‘ಅಧಿಕ ಪ್ರಸಂಗ’ವಾಗುತ್ತದೆ.

ತಪ್ಪಿದ ತಾಳ

ತಿಮ್ಮಣ್ಣ ಭಾಗ್ವತ್

ಇತ್ತೀಚೆಗಂತೂ ಅರ್ಥಗಾರಿಕೆಯೆಂದರೆ ಹೇಗೆ ಬೇಕಾದರೂ ಆಡಬಹುದು ಎಂಬಲ್ಲಿಗೆ ಬಂದಿದೆ. ಈಗಾಗಲೇ ಕೆಲವರು ಪ್ರಸ್ತಾಪಿಸಿದಂತೆ ಅಂತಾರಾಷ್ಟ್ರೀಯದಿಂದ ಸ್ಥಳೀಯ ರಾಜಕೀಯದವರೆಗಿನ ವಿಷಯಗಳು, ಸಿನಿಮಾದ ಡೈಲಾಗ್‌ಗಳು, ಮಠ ಮತ್ತು ಸನ್ಯಾಸಿಗಳ ವಿಷಯಗಳನ್ನು ಅನಗತ್ಯವಾಗಿ ತುರುಕಿಸಿ ಚಪ್ಪಾಳೆ ಗಿಟ್ಟಿಸುವುದೇ ಅರ್ಥಗಾರಿಕೆಯ ಹೆಚ್ಚುಗಾರಿಕೆಯಾಗಿದೆ. ಸಮಯಪ್ರಜ್ಞೆ ಇಲ್ಲದೇ ಮಾತು ಬೆಳೆಸುವುದು, ವೈಯಕ್ತಿಕ ಟೀಕೆ ಮುಂತಾದವು ಸಾಮಾನ್ಯವಾಗಿವೆ. ಆ ಕಾರಣಕ್ಕೇ ಕೆಲವು ಅರ್ಥಧಾರಿಗಳನ್ನು ಯಾರಾದರೂ ಅವಿವೇಕಿಗಳೆಂದು ಕರೆದರೆ ಅಧಿಕ ಪ್ರಸಂಗವೆನಿಸುವುದಿಲ್ಲ.

ಉತ್ತರಕನ್ನಡದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ತಾಲೂಕುಗಳಲ್ಲಿ ತಾಳಮದ್ದಳೆಯನ್ನು ‘ಪ್ರಸಂಗ’ವೆಂದು ಕರೆಯುತ್ತಾರೆ. ಆಟದ ವಿಷಯ ಮಾತನಾಡುವಾಗ ‘ಪ್ರಸಂಗ’ವೆಂದರೆ ಆ ದಿನದ ಆಖ್ಯಾನ. ಯಕ್ಷಗಾನದ ಹಾಡುಗಳ ಪುಸ್ತಕವನ್ನು ಪ್ರಸಂಗ ಅಥವಾ ಪ್ರಸಂಗ ಪಟ್ಟಿ ಎಂದು ಕರೆಯು ವುದು ವಾಡಿಕೆ. ಆಟ ಮತ್ತು ಪ್ರಸಂಗಗಳೆರಡಕ್ಕೂ ಒಂದೇ ಪ್ರಸಂಗವಾದರೂ ಆಟದಲ್ಲಿ ಹೇಳಬೇಕಾದ ಪದ್ಯಗಳನ್ನು ಆಯ್ಕೆ ಮಾಡುವಾಗ ನೃತ್ಯ ಮತ್ತು ಅಭಿನಯಕ್ಕೆ ಪ್ರಾಶಸ್ತ್ಯ ಕೊಟ್ಟರೆ ತಾಳಮದ್ದಳೆಯಲ್ಲಿ ಮಾತು, ಚರ್ಚೆ ಮತ್ತು ಭಾವನೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ.

ಇದನ್ನು ಸಮಯದ ಲಭ್ಯತೆ ಮತ್ತು ಪಾತ್ರಧಾರಿಗಳ ಅಥವಾ ಭಾಗವತರ ಕಸರತ್ತಿಗೆ ಅನುಕೂಲ ವಾಗುವಂತೆ ಭಾಗವತರ ಜತೆ ಮಾತನಾಡಿ ಮೊದಲೇ ಅಂತಿಮಗೊಳಿಸುವುದು ಸಾಮಾನ್ಯ ಕ್ರಮ ಆಟದಲ್ಲಿ ಗಾನ, ತಾಳ, ಅಭಿನಯ, ನೃತ್ಯ ಇವುಗಳ ಜತೆಗೆ ಮಾತುಗಾರಿಕೆಯಿರುತ್ತದೆ. ಆದರೆ ತಾಳ ಮದ್ದಳೆಯಲ್ಲಿ ಹಿಮ್ಮೇಳ ಅದೇ ಇದ್ದರೂ ಮುಮ್ಮೇಳದಲ್ಲಿ ಕೇವಲ ಮಾತುಗಾರಿಕೆ.

ಮಾತಿನಲ್ಲೇ ಮಂಟಪ ಕಟ್ಟಿ ಪ್ರೇಕ್ಷಕರನ್ನು ರಂಜಿಸುವ ಕಲೆ ಸುಲಭ ಸಾಧ್ಯವಲ್ಲ. ಕೇವಲ ಭಾಷಣ, ಉಪನ್ಯಾಸ ಮಾಡುವವರಿಗೆ ಪ್ರಸಂಗದ ಅರ್ಥಗಾರಿಕೆ ಸಾಧ್ಯವಿಲ್ಲ. ಅದಕ್ಕೆ ಶೃತಿಬದ್ಧ ಮಾತು, ಸಮಯ ಪ್ರಜ್ಞೆ, ಪ್ರತ್ಯುತ್ಪನ್ನಮತಿತ್ವ ಮುಂತಾದವು ಮಹತ್ವದ್ದಾಗುತ್ತವೆ. ಅಂಥ ಅರ್ಥಗಾರಿಕೆ ಯಲ್ಲಿ ಅಪಸವ್ಯಗಳು ಸೇರಿಕೊಂಡರೆ ಅದು ‘ಅಧಿಕ ಪ್ರಸಂಗ’ವಾಗುತ್ತದೆ.

ತಾಳಮದ್ದಳೆಯಲ್ಲಿ ‘ತೆಂಕಿನ’ ಅಂದರೆ ಅವಿಭಜಿತ ದಕ್ಷಿಣ ಕನ್ನಡದ ಕಲಾವಿದರು ಪ್ರಸಿದ್ಧರು ಎಂಬುದು ಪ್ರತೀತಿ. ವಿಶೇಷವಾಗಿ ಕಡತೋಕಾ, ಹೊನ್ನಾವರ, ಶಿರಸಿಯಂಥ ಕೇಂದ್ರಗಳಲ್ಲಿ ಶೇಣಿ, ಸಾಮಗರುಗಳು, ಆನಂದರಾವ್ ಮಾಸ್ತರ್, ಮೂಡಂಬೈಲ್, ಪೆರ್ಲ ಕೃಷ್ಣ ಭಟ್ಟರಂಥ ಅಗ್ರಗಣ್ಯ ಕಲಾವಿದರ ಕೂಡುವಿಕೆಯ ಪ್ರಸಂಗಗಳು ಕಣ್ಣು, ಕಿವಿಗಳಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.

ಇದನ್ನೂ ಓದಿ: ‌Thimmanna Bhagwat Column: ದ್ವೇಷ ಭಾಷಣ ವಿಧೇಯಕ: ದ್ವೇಷ ಸಾಧನೆಯ ಸಾಧನವಾಗಬಾರದು

ಕಡತೋಕರಂಥ ಭಾಗವತರು, ದುರ್ಗಪ್ಪ ಅಥವಾ ಶಂಕರ ಭಾಗವತರ ಮೃದಂಗದ ಜತೆಗೆ ಇಡಗುಂಜಿ ಕೃಷ್ಣ ಯಾಜಿ ಅಥವಾ ಗಜಾನನ ಭಂಡಾರಿಯಂಥವರ ಚಂಡೆಯೂ ಇದ್ದರೆ ಕೇವಲ ಹಿಮ್ಮೇಳವನ್ನೇ ಆಸ್ವಾದಿಸಬಹುದು. ಅಂಥ ಪ್ರಸಂಗಳನ್ನು ನೋಡಲು (ಅಥವಾ ಕೇಳಲು) 10-15 ಮೈಲುಗಳಷ್ಟು ದೂರದಿಂದಲೂ ಸೈಕಲ್ ಸವಾರಿ ಮಾಡಿ ರಾತ್ರಿಯಿಡೀ ಪ್ರಸಂಗವನ್ನು ಆನಂದಿಸಿ ಮರುದಿನ ಬೆಳಗ್ಗೆ ಪುನಃ ಅಷ್ಟೇ ಸೈಕಲ್ ಹೊಡೆದು ಬಂದು ತಮ್ಮ ದೈನಂದಿನ ಕಾರ್ಯ ಮಾಡು ವುದು ಉತ್ತರ ಕನ್ನಡದಲ್ಲಿ ಸರ್ವೇಸಾಮಾನ್ಯ ಸಂಗತಿಯಾಗಿತ್ತು.

ಹಾಗಂತ ಉತ್ತರ ಕನ್ನಡದಲ್ಲಿ ತಾಳಮದ್ದಳೆ ಕಲಾವಿದರು ಇರಲಿಲ್ಲವೆಂದಲ್ಲ. ಹುಳಸೆಮಕ್ಕಿ ಮಾಸ್ತರರು, ಮೂರೂರು ದೇವರು ಹೆಗಡೆಯವರು, ಹೈಗುಂದ ಡಾಕ್ಟರರು, ಮೂರೂರು ಈಶ್ವರ ಹೆಗಡೆಯವರು, ಕಟ್ಟೆ ಭಟ್ಟರು, ಬುಚ್ಚನ್ ಶಾಸ್ತ್ರಿಗಳು, ಹೊಸತೋಟ ಮಂಜುನಾಥ ಭಾಗವತರು, ನೀಲಕೋಡು ವಿಷ್ಣುಭಟ್ಟರು, ಕೆರೆಮನೆ ವೆಂಕಟಾಚಲ ಭಟ್ಟರು, ಕೆರೆಕೈ ಕೃಷ್ಣ ಭಟ್ಟರು, ಹಸರಗೋಡು ಲಕ್ಕಣ್ಣರಂಥ ಅನೇಕ ಪ್ರಬುದ್ಧ, ಸಮರ್ಥ ಕಲಾವಿದರಿದ್ದರು.

ಅವರೆಲ್ಲ ಸಾಕಷ್ಟು ಅಧ್ಯಯನ ಮಾಡಿ, ಭಾಷೆ ಮತ್ತು ಶೈಲಿಯ ವೈಶಿಷ್ಟ್ಯವನ್ನು ಹೊಂದಿದವ ರಾಗಿದ್ದರು. ಆದರೂ ಅದೇಕೋ ಬಹಳ ಹಿಂದಿನಿಂದಲೂ ತೆಂಕಿನಿಂದ ಕಲಾವಿದರನ್ನು ಕರೆಸಿ ಪ್ರಸಂಗ ಮಾಡಿಸುವ ಚಟ ಉತ್ತರ ಕನ್ನಡ ಜಿಲ್ಲೆಯ ಸಂಘಟಕರಿಗೆ ಇತ್ತು. ಕಲಾವಿದರಿಗೆ ಸಂಭಾವನೆ, ಆದರಾತಿಥ್ಯ, ಗೌರವಗಳನ್ನು ನೀಡುವಾಗ ಕೂಡಾ ಅವರಿಗೆ ವಿಶೇಷ ಮನ್ನಣೆ ನೀಡುವುದು ಸ್ಥಳಿಯ ಕಲಾವಿದರಿಗೆ ಅಪಮಾನವೆನಿಸುವಷ್ಟು ಅತಿಯಾಗಿತ್ತು.

ಅವರ ಜತೆ ಸ್ಥಳೀಯ ಕಲಾವಿದರಿಗೆ ಸಣ್ಣ ಪಾತ್ರಗಳನ್ನು ನೀಡಲಾಗುತ್ತಿತ್ತು. ತೆಂಕಿನ ಕಲಾವಿದರಿಂದ ಪ್ರಸಂಗ ಮಾಡಿಸುವ ಹವ್ಯಾಸ ಎಷ್ಟರ ಮಟ್ಟಿಗೆ ಬೆಳೆದಿತ್ತೆಂದರೆ ಅವರ ಜತೆ ಸ್ಥಳೀಯ ಕಲಾವಿದರ ಅರ್ಥ ಹೇಳಿಸಿ ಸ್ಥಳೀಯ ಕಲಾವಿದರು ಸೋಲುವ ಚಂದ ನೋಡುವವರೂ ಇದ್ದರು.

Talamaddale

ಅಂಥದ್ದೇ ಒಂದು ಪ್ರಸಂಗ ಮೂರೂರಿನಲ್ಲಿ ನಡೆದಿದ್ದು ನೆನಪಿದೆ. ಪ್ರಸಿದ್ಧ ಕಲಾವಿದರೊಬ್ಬರು ವಾಲಿವಧೆಯ ರಾಮನ ಪಾತ್ರದಲ್ಲಿ ತುಂಬಾ ಮಾತನಾಡುತ್ತಾ ಸುಗ್ರೀವನ ಪಾತ್ರವಹಿಸಿದ್ದ ಸ್ಥಳೀಯ ಕಲಾವಿದರೊಬ್ಬರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸಿದ್ದರು. ಇದರಿಂದ ನೊಂದ ಹುಳಸೆ ಮಕ್ಕಿ ವೆಂಕಟ್ರಮಣ ಮಾಸ್ತರರು ವಾಲಿಯ ಪಾತ್ರದ ಅರ್ಥದಲ್ಲಿ ಅವರ ರಾಮನನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದರು.

ಆ ಬಳಿಕ ಆ ಕಲಾವಿದರು ಮೂರೂರಿಗೆ ಬರುವಾಗ ಯಾರ‍್ಯಾರು ಕಲಾವಿದರಿದ್ದಾರೆ ಎಂದು ವಿಚಾರಿ ಸದೆ ಬರುತ್ತಿರಲಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದರು. ಇದು ಕೇವಲ ಉದಾಹರಣೆಯಷ್ಟೆ. ಉತ್ತರ ಕನ್ನಡದಾದ್ಯಂತ ಅನೇಕ ಉತ್ತಮ ಅರ್ಥಧಾರಿಗಳಿದ್ದರೂ ದಕ್ಷಿಣ ಕನ್ನಡದ ಕಲಾವಿದರನ್ನು ಕರೆಸುವುದು ಮತ್ತು ಆ ಮೂಲಕ ಜಿಲ್ಲೆಯ ಕಲಾವಿದರನ್ನು ಕಡೆಗಣಿಸುವುದು ಇಲ್ಲಿನ ಸಂಘಟಕರ ದೊಡ್ಡ ದೋಷವೆಂದೇ ಹೇಳಬೇಕಾಗುತ್ತದೆ.

ಬಹುಶಃ ಮಹಾಬಲ ಹೆಗಡೆ, ಶಂಭು ಹೆಗಡೆ, ಪಿ.ವಿ.ಹಾಸ್ಯಗಾರರಂಥ ಪ್ರಬುದ್ಧ ಕಲಾವಿದರನ್ನು ಕೂಡಾ ತಾಳಮದ್ದಳೆಗೆ ಹೆಚ್ಚು ಕರೆಯುತ್ತಿರಲಿಲ್ಲ. ಅರ್ಥ ಹೇಳುವಲ್ಲಿ ಉತ್ತರ ಕನ್ನಡದ ಕಲಾವಿದ ರದ್ದು ವಿಶಿಷ್ಟ ಶೈಲಿ. ಇಲ್ಲಿಯ ಹಳೆಯ ಕಲಾವಿದರು ಇಲ್ಲಿಯದ್ದೇ ವಿಶಿಷ್ಟ ಭಾಷೆಯಲ್ಲಿ ಅರ್ಥ ಹೇಳುತ್ತಿದ್ದರು.

ಭಾವನೆ, ಆಂಗಿಕ ಅಭಿನಯ ಮತ್ತು ಪ್ರಸಂಗದ ಚೌಕಟ್ಟಿನಲ್ಲಿ ಸಹಜವಾಗಿ ಚುಟುಕಾದ ಅರ್ಥ ಹೇಳುವುದು ಇಲ್ಲಿನ ಕ್ರಮ. ಹುಳಸೆಮಕ್ಕಿ ಮಾಸ್ತರರು ಕೃಷ್ಣ ಸಂಧಾನದ ಕೃಷ್ಣನಾಗಿ ದ್ರೌಪದಿ ಯನ್ನು ‘ತಂಗೀ’ ಎಂದು ಕರೆದಾಗ ಅಲ್ಲಿಯೇ ಇದ್ದ ಅವರ ತಂಗಿ, ಅಂದರೆ ನನ್ನ ಆಯಿ, ‘ಓ’ ಎಂದದ್ದು ಸಹಜ ಶೈಲಿಯ ಉದಾಹರಣೆ.

ಅಂದರೆ ಇಲ್ಲಿನ ಅರ್ಥಧಾರಿಕೆ ಅತ್ಯಂತ ಸರಳ ಆಡುಭಾಷೆಯಲ್ಲಿ ಇರುತ್ತಿತ್ತು. ಅದೇನೋ ಆವೇಶ ಬಂದವರ ಹಾಗೆ ಏರುಸ್ವರದಲ್ಲಿ ದುರುಗುಟ್ಟಿ ನೋಡುತ್ತಾ ಯುದ್ಧ ಮಾಡುವವರ ಹಾಗೆ ಅರ್ಥ ಹೇಳುತ್ತಿರಲಿಲ್ಲ.

‘ದನುಜಾರಿ ದ್ರೌಪತಿಯ ಸಂತೈಸಲನ್ನೆಗಂ’ ಎಂಬ ಪದದ ಅರ್ಥದಲ್ಲಿ ದ್ರೌಪದಿ ಪಟ್ಟ ಬವಣೆ, ಅವಮಾನಗಳು ಮತ್ತು ಅವಳ ಮುಡಿ ಕಟ್ಟಿಸುವ ಭಾಷೆ ಕೊಟ್ಟದ್ದನ್ನು ವಿವರಿಸುವಾಗ ಕೃಷ್ಣನಾಗಿ ಅರ್ಥ ಹೇಳುವ ಜಿ.ವಿ.ಹೆಗಡೆಯವರು ಸ್ವತಃ ಭಾವುಕರಾಗಿದ್ದರು.

ಮೂರೂರು ದೇವರು ಹೆಗಡೆಯವರ ಪಟ್ಟಾಭಿಷೇಕದ ರಾಮನ ಅರ್ಥದಲ್ಲಿ ಶ್ರೀರಾಮನ ಆದರ್ಶ ಕಣ್ಣಿಗೆ ಕಟ್ಟುತ್ತಿತ್ತು. ಅಡಕೋಳಿ ಮಧುಕೇಶ್ವರ ಭಟ್ಟರು ಕರ್ಣನ ಅರ್ಥ ಹೇಳುವಾಗ ತಾವೇ ಕರ್ಣ ನಾಗಿ ಪ್ರೇಕ್ಷಕರಿಗೆ ಕಣ್ಣೀರು ಬರಿಸುತ್ತಿದ್ದರು. ಕಟ್ಟೆ ಭಟ್ಟರು, ಬುಚ್ಚನ್ ಶಾಸ್ತ್ರಿಗಳಂಥವರು ಅರ್ಥ ಹೇಳುವಾಗ ಧರ್ಮ, ಶಾಸ್ತ್ರ, ಕರ್ಮ, ವಿಧಿ-ವಿಧಾನಗಳ ಕುರಿತು ಅವರಿಗಿದ್ದ ಪ್ರಕಾಂಡ ಪಾಂಡಿತ್ಯದ ಅನಾವರಣವಾಗುತ್ತಿತ್ತು.

ಪಿ.ವಿ. ಹಾಸ್ಯಗಾರರ ಸಂಧಾನದ ಕೌರವ ಕೂಡಾ ಅತ್ಯಂತ ಉನ್ನತ ಮಟ್ಟದ್ದೇ. ಅವರೆಲ್ಲರೂ ಸ್ಥಳೀಯ ಭಾಷೆಯಲ್ಲಿಯೇ ಅರ್ಥ ಹೇಳುತ್ತಿದ್ದರು ಮತ್ತು ಯಾವ ದೃಷ್ಟಿಯಲ್ಲೂ ಅದೊಂದು ಕೊರತೆಯೆಂದೆನಿಸಲಿಲ್ಲ. ಈಗಲೂ ಮೋಹನ ಹೆಗಡೆ ಹೆರವಟ್ಟಾ, ನಾರಾಯಣ ಯಾಜಿ ಸಾಲೆಬೈಲ್, ಜಿ.ಕೆ.ಹೆಗಡೆ, ದಿವಾಕರ ಹೆಗಡೆಯವರಂಥ ಅರ್ಥದಾರಿಗಳು ಉತ್ತಮ ಮಟ್ಟವನ್ನು ಕಾಯ್ದುಕೊಂಡಿ ದ್ದಾರೆ.

ಬರುಬರುತ್ತಾ ದಕ್ಷಿಣ ಕನ್ನಡದ ಶೈಲಿಯ ಕನ್ನಡದಲ್ಲಿ ಅರ್ಥ ಹೇಳುವುದೇ ತಾಳಮದ್ದಳೆಯ ಒಂದು ಪ್ರಮಾಣಿತ ಕ್ರಮ ಎಂಬುದು ಪ್ರಚಲಿತವಾಯಿತು. ಹಾಗೆ ಹೇಳದಿದ್ದರೆ ಅವನ ಅರ್ಥಗಾರಿಕೆಯ ಮಟ್ಟ ಕೆಳಗಿನದ್ದು ಎಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ ಇತ್ತೀಚಿಗಿನ ಉತ್ತರ ಕನ್ನಡದ ಕೆಲವು ಅರ್ಥಧಾರಿಗಳು ಆ ಶೈಲಿಯನ್ನು ಅನುಕರಿಸ ಹೋಗಿ ಸ್ವಂತಿಕೆ ಕಳಕೊಂಡಿದ್ದು ಕಂಡುಬರುತ್ತದೆ. ಮಹಾಬಲ ಹೆಗಡೆ, ಶಂಭು ಹೆಗಡೆಯವರಂಥ ಮೇರು ಕಲಾವಿದರು ಎಂದೂ ಸ್ವಂತಿಕೆ ಕಳೆದು ಕೊಂಡಿಲ್ಲ. ಅಂದ ಮಾತ್ರಕ್ಕೆ ಅವರ ಅರ್ಥವೇನೂ ಶೃತಿ ತಪ್ಪುತ್ತಿರಲಿಲ್ಲ ಅಥವಾ ಅವರ ಅರ್ಥದ ಮೌಲ್ಯ ಕಡಿಮೆಯಾಗುತ್ತಿರಲಿಲ್ಲ.

ದಕ್ಷಿಣ ಕನ್ನಡದ ಅನೇಕ ಕಲಾವಿದರು ಉತ್ತಮ ಅರ್ಥಧಾರಿಗಳಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಜತೆ ಸಮರ್ಥವಾಗಿ ಅರ್ಥ ಹೇಳುವ ಯೋಗ್ಯತೆ ಇದ್ದರೂ ಸ್ಥಳೀಯ ಕಲಾ ವಿದರನ್ನು ಕಡೆಗಣಿಸಿ ಅವರಿಗೆ ಅವಕಾಶ ನೀಡದಿದ್ದರಿಂದ ಉತ್ತರ ಕನ್ನಡದ ತಾಳಮದ್ದಳೆಯ ಪರಂಪರೆ ನಿರೀಕ್ಷಿತ ಮಟ್ಟ ತಲುಪಲಿಲ್ಲವೆಂಬುದು ವಿಷಾದದ ಸಂಗತಿ. ಈ ಚಾಳಿ ಈಗಲೂ ಮುಂದುವರಿದಿರುವ ದುರದೃಷ್ಟಕರ.

ದಕ್ಷಿಣ ಕನ್ನಡದ ಅರ್ಥದಾರಿಗಳ ವೈಶಿಷ್ಟ್ಯವೆಂದರೆ ಬಹು ವಿಸ್ತಾರವಾದ ಪೀಠಿಕೆಯನ್ನು ಹೇಳು ವುದು. ಅತ್ಯಂತ ಹೆಸರಾಂತ ಕೆಲವು ಅರ್ಥಧಾರಿಗಳು ಗಂಟೆಗಟ್ಟಲೆ ದೀರ್ಘವಾದ ಪೀಠಿಕೆ ಹೇಳುತ್ತಿದ್ದರು. ಅವರು ಕಥೆಯ ಮುಂದಿನ ಪದ್ಯಗಳಿಗೆ ಅರ್ಥ ಹೇಳುವಾಗಲೂ ಸಾಕಷ್ಟು ವಿಸ್ತಾರ ವಾಗಿ ಹೇಳುತ್ತಿದ್ದುದರಿಂದ ಕೆಲವು ಸಲ ಪ್ರಸಂಗದ ಮುಖ್ಯಭಾಗಕ್ಕೇ ಹೆಚ್ಚಿನ ಸಮಯ ಉಳಿಯು ತ್ತಿರಲಿಲ್ಲ.

ಕೃಷ್ಣ ಸಂಧಾನದ ಕೃಷ್ಣ, ಭೀಮ, ದೌಪದಿ, ವಿದುರರ ಜತೆಯ ಸಂಭಾಷಣೆಯಲ್ಲೇ ಸಮಯ ಕಳೆದು ಕೌರವನ ಪ್ರವೇಶವಾಗುವಾಗಲೇ ಬೆಳಗಾಗುವ ಸನ್ನಿವೇಶಗಳೂ ಇದ್ದವು. ಇದು ಕೇವಲ ಪಾಂಡಿತ್ಯದ ಪ್ರದರ್ಶನವಾಗಬಹುದು ಅಥವಾ ಕೆಲವು ಸಲ ಪ್ರೇಕ್ಷಕರ ಮನರಂಜನೆಗೂ ಕಾರಣವಾಗಬಹುದು. ಆದರೆ ಒಟ್ಟಾರೆ ಪ್ರಸಂಗದ ವೈಫಲ್ಯವಾಗುವುದಲ್ಲದೇ ಇತರ ಕಲಾವಿದರಿಗೆ ಮುಜುಗರವಾಗುತ್ತದೆ.

ಇನ್ನೊಂದು ವಿಷಯವೆಂದರೆ ಪ್ರಸಂಗದ ಚೌಕಟ್ಟು ಮೀರಿ ಮಾತನಾಡುವುದು ಮತ್ತು ಪಾತ್ರ ಗಳನ್ನು ಅನವಶ್ಯಕವಾಗಿ ವಿಜೃಂಭಿಸುವುದು. ರಾವಣನ ಅರ್ಥ ಹೇಳುವ ಕಲಾವಿದ ಅವನನ್ನು ರಾಮನಿಗಿಂತ ಎತ್ತರದ ವ್ಯಕ್ತಿಯಾಗಿ ಬಿಂಬಿಸಿದರೆ ಅದು ಪ್ರಸಂಗದ ಔಚಿತ್ಯಕ್ಕೆ ಅಪಚಾರ. ಭೀಷ್ಮನ ಪಾತ್ರಧಾರಿಯ ಎದುರು ಪರಶುರಾಮನ ಅರ್ಥ ಹೇಳಿದವರು ದುರ್ಬಲರಾದರೆ, ಪರಶುರಾಮರ ಜತೆ ಭೀಷ್ಮನ ಯುದ್ಧವೇ ಬೇಡ ಎಂಬ ಹಂತಕ್ಕೆ ಮಾತುಗಳು ಬಂದು ನಿಂತಾಗ ಪ್ರೇಕ್ಷಕರು ದಂಗಾಗು ವುದೇ ಬಾಕಿ.

ಆದರೆ ಮಹಾಬಲ ಹೆಗಡೆಯವರ ‘ಭೀಷ್ಮವಿಜಯ’ದ ಭೀಷ್ಮ ಅತ್ಯಂತ ಶಿಸ್ತುಬದ್ಧ. ಪ್ರಸಂಗದ ಚೌಕಟ್ಟು ಮತ್ತು ಔಚಿತ್ಯವನ್ನು ಮೀರದೆ ಅಂಬೆಯ ಜತೆಗೋ, ಪರಶುರಾಮರ ಜತೆಗೋ ಅವರು ನಡೆಸುವ ವಾಗ್ಯುದ್ಧ ಅತ್ಯಂತ ಪ್ರಬುದ್ಧವೆನಿಸುತ್ತದೆ. ಅವರ ಗತ್ತು, ಗಾಂಭೀರ್ಯ ಇವೆಲ್ಲ ತಾಳ ಮದ್ದಳೆಯಲ್ಲೂ ವಿಜೃಂಭಿಸುತ್ತಿತ್ತು.

ಶಂಭು ಹೆಗಡೆಯವರ ಸಂಧಾನದ ಕೃಷ್ಣನ ಪಾತ್ರದಲ್ಲಿ ಸಮಯಪ್ರe, ಪ್ರಸಂಗದ ಚೌಕಟ್ಟು, ಭಾವನೆಯ ಜತೆಗೆ ಕೃಷ್ಣನ ಪಾತ್ರಕ್ಕಿರಬೇಕಾದ ಚುರುಕುತನ ಕಾಣುತ್ತಿತ್ತು. ಇತ್ತೀಚೆಗಂತೂ ಅರ್ಥಗಾರಿಕೆಯೆಂದರೆ ಹೇಗೆ ಬೇಕಾದರೂ ಆಡಬಹುದು ಎಂಬಲ್ಲಿಗೆ ಬಂದಿದೆ. ಈಗಾಗಲೇ ಕೆಲವರು ಪ್ರಸ್ತಾಪಿಸಿದಂತೆ ಅಂತಾರಾಷ್ಟ್ರೀಯದಿಂದ ಸ್ಥಳೀಯ ರಾಜಕೀಯದವರೆಗಿನ ವಿಷಯಗಳು, ಸಿನಿಮಾದ ಡೈಲಾಗ್‌ಗಳು, ಮಠ ಮತ್ತು ಸನ್ಯಾಸಿಗಳ ವಿಷಯಗಳನ್ನು ಅನಗತ್ಯವಾಗಿ ತುರುಕಿಸಿ ಚಪ್ಪಾಳೆ ಗಿಟ್ಟಿಸುವುದೇ ಅರ್ಥಗಾರಿಕೆಯ ಹೆಚ್ಚುಗಾರಿಕೆಯಾಗಿದೆ.

ಸಮಯಪ್ರಜ್ಞೆ ಇಲ್ಲದೇ ಮಾತು ಬೆಳೆಸುವುದು, ವೈಯಕ್ತಿಕ ಟೀಕೆ ಮುಂತಾದವು ಸಾಮಾನ್ಯವಾಗಿವೆ. ಆ ಕಾರಣಕ್ಕೇ ಕೆಲವು ಅರ್ಥಧಾರಿಗಳನ್ನು ಯಾರಾದರೂ ಅವಿವೇಕಿಗಳೆಂದು ಕರೆದರೆ ಅಧಿಕ ಪ್ರಸಂಗವೆನಿಸುವುದಿಲ್ಲ. ಸಿನಿಮಾಗಳಲ್ಲಿ ಐಟಮ್ ಸಾಂಗ್‌ಗಳಿಗೆ ಕಥಾನಾಯಕಿಯರೇ ಡ್ಯಾನ್ಸ್ ಮಾಡುವಂತೆ ನಮ್ಮ ಯಕ್ಷಗಾನದಲ್ಲೂ ನಾಯಕ ಪಾತ್ರಧಾರಿಗಳೇ ವಿದೂಷಕರ ಪಾತ್ರಧಾರಿಗಳಂತೆ ವರ್ತಿಸುವುದು ಅವರ ಹಾಗೂ ಯಕ್ಷಗಾನದ ಘನತೆಗೆ ಖಂಡಿತ ತಕ್ಕುದಲ್ಲ.

ಯಕ್ಷಗಾನದ ಪ್ರದೇಶವಾಗಿರುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತಾಳಮದ್ದಳೆ ಅರ್ಥಧಾರಿಗಳೆಂದರೆ ಮೊದಲಿನಿಂದಲೂ ವಿಶೇಷ ಗೌರವ ಇದೆ. ಆದರೆ ಆ ಭವ್ಯ ಪರಂಪರೆ ಹೊಂದಿರುವ ಈ ರಂಗದಲ್ಲಿ ಕಲಾವಂತಿಕೆ ಜೀವಂತವಾಗಿರಬೇಕು. ಅದು ಪರಂಪರೆಯ ಚೌಕಟ್ಟಿ ನಲ್ಲೇ ಬೆಳೆಯಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ನಿಜವಾದ ಪಾರಂಪರಿಕ ಕಲೆ ಹಸ್ತಾಂತರ ವಾಗಬೇಕು. ಇಲ್ಲವಾದಲ್ಲಿ ಕಲಬೆರಕೆಯ ಸೋಂಕು ತಾಳಮದ್ದಳೆಗೂ ಅಂಟುವುದರಿಂದ, ಮೂಲ ಕಲೆ ನಶಿಸಿ, ತಾಳಮದ್ದಳೆಯೆಂದರೆ ಅದೇ ಅಥವಾ ಅಷ್ಟೇ ಎಂದು ತಿಳಿಯುವಂತಾಗುತ್ತದೆ.

(ಲೇಖಕರು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)