ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Jagadeesh Maane Column: ಲೋಕ ಗೆದ್ದು ಮನಸ್ಸು ಸೋತರೆ, ಅದು ಯಾವ ಗೆಲುವು ?

ಆತ್ಮವಿಶ್ವಾಸ ಮತ್ತು ಧೈರ್ಯ: ಆತ್ಮವಿಶ್ವಾಸ ಎನ್ನುವುದು ಹೊರಗಿನಿಂದ ಬೇರಾರೂ ಕೊಡುವ ಶಕ್ತಿ ಅಲ್ಲ. ಅದು ನಮ್ಮೊಳಗೇ ಬೆಳೆಯುವ ದಿವ್ಯ ಜ್ಯೋತಿ. ಸೋಲು ಎನ್ನುವುದು ಅಂತ್ಯವಲ್ಲ, ಅದು ಹೊಸ ಯುಗದ ಆರಂಭ. ಒಂದೆರಡು ಬಾರಿ ಸೋತರೆ ಜೀವನವೇ ಮುಗಿದು ಹೋಗುವುದಿಲ್ಲ. ಪ್ರತಿ ಸೋಲು ನಮ್ಮನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.

ಜೀವನ್ಮುಖಿ

ಡಾ.ಜಗದೀಶ್‌ ಮಾನೆ

ಭಗವಂತನ ಸೃಷ್ಟಿಯಲ್ಲಿನ ಎಲ್ಲ ಜೀವಿಗಳ ಪೈಕಿ ಮನುಷ್ಯ ಅತ್ಯಂತ ಶ್ರೇಷ್ಠ ಜೀವಿ. ಆತನ ಬದುಕು ಕೇವಲ ದಿನಗಳನ್ನು ಕಳೆಯುವ ಪ್ರಯಾಣವಲ್ಲ; ಅದು ಅರ್ಥವನ್ನು ಹುಡುಕುವ ಆತ್ಮಯಾತ್ರೆ. ಇವತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ಸೌಲಭ್ಯಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿವೆ. ಆದರೆ, ಮನುಷ್ಯನ ಹೃದಯದ ಅನೇಕ ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.

ಉದಾಹರಣೆಗೆ ನಾನು ಯಾರು? ನನ್ನ ಬದುಕಿನ ಉದ್ದೇಶವೇನು? ನಿಜವಾದ ಸಂತೋಷ ಎಲ್ಲಿದೆ? ಎಂಬಿತ್ಯಾದಿ ಪ್ರಶ್ನೆಗಳು ಪ್ರತಿಯೊಬ್ಬರೊಳಗೂ ಮೌನವಾಗಿ ಮೂಡುತ್ತಲೇ ಇವೆ. ಈ ಸಂದರ್ಭದಲ್ಲಿ ನಮಗೆ ಮಾಹಿತಿಯ ಯಾವುದೇ ಕೊರತೆಗಳಿಲ್ಲ. ಆದರೆ, ಮನಶಾಂತಿಯ ಕೊರತೆಯಂತೂ ಹೆಚ್ಚಿದೆ. ಮೊದಲಿಗಿಂತ ಈಗ ಸಂಬಂಧಗಳು ದುಪ್ಪಟ್ಟಾಗಿವೆ ಆದರೆ ಆತ್ಮೀಯತೆಯ ಪ್ರಮಾಣ ಕಡಿಮೆ ಯಾಗಿದೆ. ಜನರು ಒಂದರೊಂದಿಗೆ ಸಂಪರ್ಕದಲ್ಲಿದ್ದಾರೆ, ಆದರೆ ಹೃದಯಗಳು ದೂರವಾಗುತ್ತಿವೆ.

ಈ ವೇಗದ ಬದುಕಿನಲ್ಲಿ ನಾವು ಬಹಳಷ್ಟು ವಿಷಯಗಳನ್ನು ಗಳಿಸಿದ್ದೇವೆ. ಆದರೆ ಕೆಲವೊಮ್ಮೆ ನಮ್ಮನ್ನೇ ನಾವು ಕಳೆದುಕೊಂಡಿದ್ದೇವೆ. ಕಾರಣ ಅದು ಕೇವಲ ಒಣ ಪ್ರತಿಷ್ಠೆ ಹಾಗೂ ಯಶಸ್ಸಿಗಾಗಿ. ಹೊರಗಿನ ಈ ಪ್ರಗತಿಯ ನಡುವೆ ನಮ್ಮೊಳಗಿನ ಖಾಲಿತನ ಮನುಷ್ಯನನ್ನು ಸದಾ ಕಾಡುತ್ತಿದೆ. ಅದು ಪ್ರೀತಿ ಕಡಿಮೆಯಾಗಿದ್ದರಿಂದಲ್ಲ; ಬದಲಿಗೆ ದುರಹಂಕಾರ ಹೆಚ್ಚಾದುದ್ದರ ಪರಿಣಾಮ. ಮೊದಲು ಅವನೇ ಮಾತಾಡಲಿ! ನಾನ್ಯಾಕೆ ಕ್ಷಮೆ ಕೇಳಬೇಕು? ಬೇಕಾದರೆ ಅವನೇ ನನ್ನ ಬಳಿ ಬರಲಿ!

ಎಂಬಿತ್ಯಾದಿ ನಮ್ಮೊಳಗಿನ ಈ ಚಿಕ್ಕ-ಚಿಕ್ಕ ಅಹಂಕಾರಗಳೇ ನಮ್ಮ ನಡುವೆ ದೊಡ್ಡ ಅಂತರಗಳನ್ನು ಸೃಷ್ಟಿಸುತ್ತಿವೆ. ನಿಜವಾದ ಸಂಬಂಧಗಳು ಗೆಲವು-ಸೋಲಿನ ಲೆಕ್ಕಾಚಾರದಿಂದ ಯಾವತ್ತೂ ಉಳಿಯು ವುದಿಲ್ಲ. ಬದಲಿಗೆ ಪರಸ್ಪರ ಅರ್ಥೈಸಿಕೊಳ್ಳುವಿಕೆಯಿಂದ ಮಾತ್ರ ಉಳಿಯುತ್ತವೆ. ಒಮ್ಮೆ ಒಂದು ಮರದ ಕೆಳಗೆ ಸ್ನೇಹಿತರಿಬ್ಬರು ಜಗಳ ಮಾಡಿಕೊಂಡರು. ಆಗ ಒಬ್ಬ ಕೋಪದಲ್ಲಿ ಮತ್ತೊಬ್ಬನ ಕೆನ್ನೆಗೆ ಹೊಡೆಯುತ್ತಾನೆ.

ಇದನ್ನೂ ಓದಿ: Dr Jagadeesh Maane Column: ಕಪ್ಪು ಕೋಟಿನ ಹಿಂದೆ ಅಂಕಗಳಿಲ್ಲ, ನ್ಯಾಯದ ಪ್ರತಿಜ್ಞೆ ಇದೆ !

ನೋವಾದ ಸ್ನೇಹಿತ ಮರಳಿನ ಮೇಲೆ ‘ಇಂದು ನನ್ನ ಸ್ನೇಹಿತ ನನಗೆ ನೋವು ಕೊಟ್ಟನು’ ಎಂದು ಬರೆದನು. ಬಳಿಕ ಇಬ್ಬರೂ ನದಿಯನ್ನು ದಾಟುವಾಗ ಹೊಡೆದ ಸ್ನೇಹಿತನೇ ಅವನನ್ನು ಮುಳುಗುವ ಅಪಾಯದಿಂದ ರಕ್ಷಿಸಿದನು. ಆಗ ಆತ ಕಲ್ಲಿನ ಮೇಲೆ ‘ಇಂದು ನನ್ನ ಸ್ನೇಹಿತ ನನ್ನ ಪ್ರಾಣ ಉಳಿಸಿದ’ ಎಂದು ಬರೆದನು.

ಯಾಕೆ ಎಂದು ಕೇಳಿದಾಗ, ‘ನೋವುಗಳನ್ನು ಮರಳಿನ ಮೇಲೆ ಬರೆಯಬೇಕು, ಕ್ಷಮೆಯ ಗಾಳಿ ಅದನ್ನು ಅಳಿಸಿ ಬಿಡುತ್ತದೆ ಮತ್ತು ಉಪಕಾರಗಳನ್ನು ಕಲ್ಲಿನ ಮೇಲೆ ಬರೆಯಬೇಕು’ ಎಂದನು. ನಮ್ಮ ಬದುಕಿನ ಶಾಂತಿಯೂ ಕೂಡಾ ಇದೇ ಮನೋಭಾವದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ನಮ್ಮ ಮನಸ್ಸು ವಿವೇಕವನ್ನು ಹಿಡಿತದಲ್ಲಿ ಇಡಲು ಈ ಅಂಶಗಳು ಬಹಳ ಮುಖ್ಯವಾಗಿವೆ.

ಆತ್ಮವಿಶ್ವಾಸ ಮತ್ತು ಧೈರ್ಯ: ಆತ್ಮವಿಶ್ವಾಸ ಎನ್ನುವುದು ಹೊರಗಿನಿಂದ ಬೇರಾರೂ ಕೊಡುವ ಶಕ್ತಿ ಅಲ್ಲ. ಅದು ನಮ್ಮೊಳಗೇ ಬೆಳೆಯುವ ದಿವ್ಯ ಜ್ಯೋತಿ. ಸೋಲು ಎನ್ನುವುದು ಅಂತ್ಯವಲ್ಲ, ಅದು ಹೊಸ ಯುಗದ ಆರಂಭ. ಒಂದೆರಡು ಬಾರಿ ಸೋತರೆ ಜೀವನವೇ ಮುಗಿದು ಹೋಗುವುದಿಲ್ಲ. ಪ್ರತಿ ಸೋಲು ನಮ್ಮನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಕತ್ತಲೆಯ ರಾತ್ರಿ ಎಷ್ಟು ದೀರ್ಘವಾಗಿದ್ದರೂ, ಬೆಳಗಿನ ಸೂರ್ಯೋದಯವನ್ನು ತಡೆಯಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ನಮ್ಮ ಬದುಕಿ ನಲ್ಲಿ ಅದೆಷ್ಟೇ ಸಂಕಷ್ಟಗಳು ಬಂದರೂ, ದೃಢವಾದ ಆತ್ಮವಿಶ್ವಾಸ ಹೊಂದಿದ ಮನಸ್ಸನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.

ಧೈರ್ಯ ಎಂದರೆ ಭಯವಿಲ್ಲದಿರುವುದಲ್ಲ; ಭಯ ಇದ್ದರೂ ಮುಂದೆ ಹೆಜ್ಜೆ ಇಡುವ ಶಕ್ತಿಯಾಗಿದೆ. ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ ಪ್ರತಿಯೊಬ್ಬರ ಹಿಂದೆ ಅನೇಕ ಸಂಕಷ್ಟಗಳು, ಟೀಕೆಗಳು ಮತ್ತು ನಿರಾಶೆಗಳ ಕಥೆಗಳಿರುತ್ತವೆ. ಆದರೆ ಅವರು ಪರಿಸ್ಥಿತಿಗೆ ಶರಣಾಗಲಿಲ್ಲ, ತಮ್ಮ ಮೇಲಿನ ನಂಬಿಕೆಯನ್ನು ಮತ್ತಷ್ಟು ದೃಢವಾಗಿಸಿಕೊಂಡು ನಿರಂತರ ಪ್ರಯತ್ನದ ಪರಿಣಾಮ ಅವರಿಂದು ಇತಿಹಾಸ ನಿರ್ಮಿಸಿದರು.

Screenshot_4

ಹಾಗಾಗಿ ಮನುಷ್ಯನ ನಿಜವಾದ ಶಕ್ತಿ ಅವನ ದೇಹದಲ್ಲಿರುವುದಿಲ್ಲ, ಅವನ ಮನಸ್ಸಿನೊಳಗಿರುತ್ತದೆ. ಆತ್ಮವಿಶ್ವಾಸ ಸದೃಢವಾಗಿದ್ದರೆ ಅಸಾಧ್ಯವಾಗಿರುವುದೂ ಸಾಧ್ಯವಾಗುತ್ತದೆ. ಬದುಕಿನಲ್ಲಿ ಕೆಲ ವೊಮ್ಮೆ ಎಲ್ಲ ಬಾಗಿಲುಗಳು ಮುಚ್ಚಿದರೂ, ಆತ್ಮ ವಿಶ್ವಾಸ ಹಾಗೂ ಧೈರ್ಯದಿಂದ ಮುನ್ನಡೆದರೆ ಅದೇ ಜೀವನ ಹೊಸ ಕಿಟಕಿಯನ್ನು ತೆರೆದಿಡುತ್ತದೆ. ಹೀಗಾಗಿ ಎಷ್ಟೇ ಕಷ್ಟ ಬಂದರೂ ಮನಸ್ಸು ಕುಗ್ಗಿಸಿಕೊಳ್ಳಬಾರದು.

‘ಈ ದಿನವೂ ಕಳೆಯುತ್ತದೆ, ನಾಳೆ ನನ್ನದು’ ಎನ್ನುವ ಆತ್ಮವಿಶ್ವಾಸವಿಟ್ಟುಕೊಂಡು ಮುಂದೆ ಸಾಗಬೇಕು. ಏಕೆಂದರೆ ಆತ್ಮವಿಶ್ವಾಸದಿಂದ ನಡೆದ ಹೆಜ್ಜೆ ಯಾವತ್ತೂ ವ್ಯರ್ಥವಾಗುವುದಿಲ್ಲ. ವಿಫಲತೆಯೊಳಗಿನ ಅವಕಾಶ: ಒಂದು ಬೀಜವನ್ನು ನೆಲದಲ್ಲಿ ಬಿತ್ತಿದ ತಕ್ಷಣಕ್ಕೆ ಅದು ಮರವಾಗುವು ದಿಲ್ಲ. ಮೊದಲು ಮಣ್ಣಿನೊಳಗೆ ಮೌನವಾಗಿ ಬೇರು ಬಿಡುತ್ತದೆ. ಹೊರಗಡೆ ಏನೂ ಕಾಣದಿದ್ದರೂ ಒಳಗೆ ಅದರ ಬೆಳವಣಿಗೆ ಆಗುತ್ತಿರುತ್ತದೆ.

ಮನುಷ್ಯನ ಜೀವನದಲ್ಲಿಯೂ ಇದೇ ಸತ್ಯ. ಕೆಲವೊಮ್ಮೆ ನಮ್ಮ ಪರಿಶ್ರಮಕ್ಕೆ ತಕ್ಷಣದ ಮೆಚ್ಚುಗೆ ಸಿಗದಿರಬಹುದು, ಆದರೆ ಅದು ನಮ್ಮ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತಿರುತ್ತದೆ. ಸೋಲು ನಮಗೆ ಎರಡು ಮಹತ್ವದ ಪಾಠಗಳನ್ನು ಕಲಿಸುತ್ತದೆ.

ಯಾವ ದಾರಿಯಲ್ಲಿ ನಡೆಯಬೇಕು ಮತ್ತು ಯಾವ ತಪ್ಪುಗಳನ್ನು ಮರುಕಳಿಸಬಾರದು ಎಂಬು ದನ್ನು. ಕತ್ತಲನ್ನು ಅನುಭವಿಸಿದವನಿಗೆ ಬೆಳಕಿನ ಮೌಲ್ಯವು ತಿಳಿಯುತ್ತದೆ. ಆದ್ದರಿಂದ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಅಡೆತಡೆಗೂ ‘ಇದು ನನ್ನನ್ನು ಇನ್ನಷ್ಟು ಬಲಿಷ್ಠನಾಗಿಸಲು ಬಂದ ಪಾಠ’ ಎಂಬ ದೃಷ್ಟಿಯಿಂದ ನೋಡಬೇಕು. ಆಗ ಅಸಾಮಾನ್ಯರಾಗುತ್ತೇವೆ. ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ ಬಹುತೇಕ ಜನರು ಅನೇಕ ಸೋಲುಗಳನ್ನು ಕಂಡವರೇ, ಆದರೆ ಅವರು ಸೋಲನ್ನು ಕಾರಣವನ್ನಾಗಿಸದೆ ಅದನ್ನು ಪಾಠವನ್ನಾಗಿಸಿದರು.

ಯಶಸ್ಸಿನ ನಿಜವಾದ ಅರ್ಥ: ಇಂದಿನ ಸಮಾಜ ಯಶಸ್ಸನ್ನು ಹೆಚ್ಚಾಗಿ ಹಣ, ಹುದ್ದೆ ಮತ್ತು ಪ್ರಸಿದ್ಧಿಯ ಆಧಾರದ ಮೇಲೆ ಅಳೆಯುತ್ತದೆ. ಆದರೆ ನಿಜವಾದ ಯಶಸ್ಸು ಹೊರಗಿನ ಕೀರ್ತಿ ಯಲ್ಲಷ್ಟೇ ಇಲ್ಲ. ನಿಮ್ಮೊಳಗಿನ ತೃಪ್ತಿಯಲ್ಲಿ ಅಡಗಿದೆ. ದುಡ್ಡು ಬದುಕನ್ನು ಸುಲಭ ಗೊಳಿಸ ಬಹುದು, ಆದರೆ ಅದಕ್ಕೆ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಮನಸ್ಸಿನ ಶಾಂತಿ ಸಂಬಂಧ ಗಳಲ್ಲಿ, ಪ್ರೀತಿ ಬದುಕಿನಲ್ಲಿ ಅರ್ಥಪೂರ್ಣತೆ ಇವೇ ಶಾಶ್ವತ ಯಶಸ್ಸಿನ ಗುರುತುಗಳಾಗಿವೆ.

ಕೆಳಗಿದ್ದವರನ್ನು ಮೇಲೆತ್ತುವ ಕೈ ನಮ್ಮದಾದರೆ, ನಿರಾಶೆಯಲ್ಲಿದ್ದವರಿಗೆ ಧೈರ್ಯ ತುಂಬುವಂತಾದರೆ ಅದು ದೊಡ್ಡ ಸಾಧನೆಗಿಂತಲೂ ಮಹತ್ತರವಾದ ಯಶಸ್ಸು. ವ್ಯಕ್ತಿಯ ಮಹತ್ವ ಅವನ ಸಂಪತ್ತಿನಲ್ಲಿ ಅಲ್ಲ, ಅವನ ಸ್ಪರ್ಶದಿಂದ ಬದಲಾಗಿರುವ ಹೃದಯಗಳಲ್ಲಿ ಅಳೆಯಲ್ಪಡುತ್ತದೆ. ಯಾಕೆಂದರೆ ಜೀವನದ ಕೊನೆಯಲ್ಲಿ ಸಮಾಜ ನಮ್ಮ ಬ್ಯಾಂಕ್ ಖಾತೆಯನ್ನು ನೆನಪಿಸಿಕೊಳ್ಳುವುದಿಲ್ಲ! ನಮ್ಮ ಒಳ್ಳೆಯತನ, ಮಾಡಿದ ಸಹಾಯ ಮತ್ತು ಮಾನವೀಯತೆಯನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ಅದೇ ನಿಜವಾದ ಯಶಸ್ಸು.

ಮಾತಿನ ಶಕ್ತಿ ಮತ್ತು ಮೌನದ ಮೌಲ್ಯ: ಮನುಷ್ಯನ ವ್ಯಕ್ತಿತ್ವವನ್ನು ಅವನ ಸಂಪತ್ತಿಗಿಂತ ಹೆಚ್ಚಾಗಿ ಅವನ ಮಾತುಗಳು ಪರಿಚಯಿಸುತ್ತವೆ. ಸೌಮ್ಯವಾದ ಮಾತಿನಲ್ಲಿ ಮುಚ್ಚಿದ ಹೃದಯದ ಬಾಗಿಲನ್ನೂ ತೆರೆಯಬಲ್ಲ ಶಕ್ತಿ ಇರುತ್ತದೆ. ಕೋಪದಿಂದ ಹೇಳಿದ ಒಂದು ವಾಕ್ಯ ಸಂಬಂಧಗಳನ್ನು ಒಡೆದರೆ, ಅದೇ ಪ್ರೀತಿಯ ಮಾತು ಮುರಿದ ಮನಸ್ಸನ್ನು ಜೋಡಿಸಬಲ್ಲದು.

ಹಾಗಾಗಿ ಮಾತನಾಡುವ ಮೊದಲು ‘ಈ ಮಾತು ಸತ್ಯವೇ? ಅಗತ್ಯವೇ? ಉಪಯುಕ್ತವೇ?’ ಎಂದು ಯೋಚಿಸುವುದು ಬಹಳ ಮುಖ್ಯ. ಜೀವನದಲ್ಲಿ ಅನೇಕ ಸಮಸ್ಯೆಗಳು ತಪ್ಪು ಮಾತುಗಳಿಂದಲೇ ಆರಂಭವಾಗುತ್ತವೆ. ಸ್ವಾರ್ಥಿಗಳು ಗೆಲ್ಲಲು ಮಾತನಾಡಿದರೆ ಜ್ಞಾನಿಗಳು ಅರ್ಥವಾಗಲು ಮಾತನಾಡು ತ್ತಾರೆ. ಮಾತಿನ ಉದ್ದಕ್ಕಿಂತ ಅದರ ಅರ್ಥದ ಆಳವೇ ಮನುಷ್ಯನ ಮಹತ್ವವನ್ನು ತೋರಿಸುತ್ತದೆ. ಮಧುರವಾದ ಮಾತು ಹಣ ಖರ್ಚಿಲ್ಲದೆ ಕೊಡುವ ಅತ್ಯಂತ ಅಮೂಲ್ಯ ಉಡುಗೊರೆಯಾಗಿದೆ. ಇನ್ನು ಮೌನ ಎಂದರೆ ದುರ್ಬಲತೆ ಅಲ್ಲ; ಅದು ಆತ್ಮನಿಯಂತ್ರಣದ ಸಂಕೇತ. ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಪ್ರೌಢತೆ ಅಲ್ಲ, ಯಾವ ಪ್ರಶ್ನೆಗೆ ಉತ್ತರ ಕೊಡಬಾರದು ಎಂಬುದನ್ನು ಅರಿಯುವುದೇ ನಿಜವಾದ ಪ್ರೌಢತೆ. ಹಾಗಾಗಿ ಅದನ್ನು ಬೆಳೆಸಿಕೊಳ್ಳಬೇಕು. ಕೆಲವೊಮ್ಮೆ ಮೌನವು ಜಗಳವನ್ನು ನಿಲ್ಲಿಸಿ, ಕೋಪವನ್ನೂ ತಣಿಸಿ ಕೊನೆಗೆ ಸಂಬಂಧಗಳನ್ನು ಉಳಿಸುತ್ತದೆ. ಹಾಗಾಗಿ ಜೀವನದಲ್ಲಿ ಮಾತನಾಡುವ ಸಮಯ ಅದೆಷ್ಟು ಮುಖ್ಯವೋ, ಮೌನವಾಗಿರುವ ಸಮಯವೂ ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ.

ಸರಿಯಾದ ಸಮಯದಲ್ಲಿ ಹೇಳಿದ ಪ್ರೋತ್ಸಾಹದ ಮಾತುಗಳು ಅನೇಕರ ಬದುಕನ್ನೇ ಬದಲಾಯಿಸು ತ್ತವೆ. ಹಾಗೇ ಸಮಯಕ್ಕನುಗುಣವಾಗಿ ಪಾಲಿಸಿದ ಮೌನವು ಕೆಲವೊಮ್ಮೆ ದೊಡ್ಡ ಅನಾಹುತ ಗಳನ್ನು ತಪ್ಪಿಸುತ್ತದೆ. ಹಾಗಾಗಿ ಈ ಮಾತುಗಳು ಬೀಜಗಳಂತೆ, ನಾವು ಬಿತ್ತಿದ ಮಾತುಗಳು ಒಂದು ದಿನ ಸಂಬಂಧಗಳ ರೂಪದಲ್ಲಿ ಬೆಳೆದು ಬರುತ್ತವೆ. ಆದ್ದರಿಂದ ನಮ್ಮ ಮಾತುಗಳಲ್ಲಿ ದಯೆ, ವಿನಯ ಸತ್ಯ ಇರಬೇಕು.

ಓದು ಮತ್ತು ಚಿಂತನೆಯ ಶಕ್ತಿ: ಉತ್ತಮ ಪುಸ್ತಕಗಳು ಮೌನಗುರುಗಳಿದ್ದಂತೆ. ಅವು ನಮ್ಮ ಜೀವನ ವನ್ನು ಸದಾ ಮಾರ್ಗದರ್ಶನ ಮಾಡುತ್ತವೆ. ಒಂದು ಒಳ್ಳೆಯ ಪುಸ್ತಕ ನಮ್ಮ ಚಿಂತನೆಯನ್ನು ಬದಲಾಯಿಸಿದರೆ ಆ ಚಿಂತನೆ ನಮ್ಮ ಇಡೀ ಬದುಕನ್ನೇ ಬದಲಾಯಿಸುತ್ತದೆ. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯವನ್ನು ಉತ್ತಮ ಸಾಹಿತ್ಯ, ಮಹನೀಯರ ಜೀವನಚರಿತ್ರೆ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಮೀಸಲಿಡಬೇಕು.

ನಿತ್ಯ ಓದುವವರು ಎಂದಿಗೂ ಏಕಾಂಗಿಗಳಾಗುವುದಿಲ್ಲ. ಸಂಕಷ್ಟದ ಸಮಯದಲ್ಲಿ ಆ ಪುಸ್ತಕಗಳೇ ಸ್ನೇಹಿತರಂತೆ ನಮ್ಮೊಳಗೆ ಧೈರ್ಯ ತುಂಬುತ್ತವೆ. ಮತ್ತು ಗೊಂದಲದ ಕ್ಷಣಗಳಲ್ಲಿ ದಾರಿ ದೀಪ ವಾಗುತ್ತವೆ. ಉತ್ತಮ ಚಿಂತನೆಗಳು ಮನಸ್ಸಿನ ಅಶಾಂತಿಯನ್ನು ಕಡಿಮೆ ಮಾಡಿ ಜೀವನದ ಗುರಿ ಯನ್ನು ಸ್ಪಷ್ಟಗೊಳಿಸುತ್ತವೆ.

ಪ್ರಕೃತಿಯಿಂದ ಕಲಿಯುವ ಜೀವನಜ್ಞಾನ: ಈ ಪ್ರಕೃತಿಯೂ ಕೂಡಾ ಪುಸ್ತಕದಂತೆ ಮೌನಗುರು. ಯಾವುದೇ ಮರ ತನ್ನ ಫಲವನ್ನು ತಾನೇ ತಿನ್ನುವುದಿಲ್ಲ; ನದಿ ತನ್ನ ನೀರನ್ನು ತಾನೇ ಕುಡಿಯುವು ದಿಲ್ಲ; ಆ ಸೂರ್ಯ ಚಂದ್ರರೂ ತನಗಾಗಿ ಯಾವತ್ತೂ ಬೆಳಗುವುದಿಲ್ಲ. ಗಾಳಿಯು ಕಾಣಿಸದಿದ್ದರೂ ಅದರ ಸ್ಪರ್ಶ ಅನುಭವವಾಗುತ್ತದೆ. ಸಮುದ್ರ ಸಾವಿರಾರು ನದಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ, ಏಕೆಂದರೆ ಅದು ಅಹಂಕಾರದಿಂದ ಎತ್ತರವಾಗಿಲ್ಲ ಬದಲಿಗೆ ವಿನಯದಿಂದ ತಗ್ಗಿದೆ.

ಪರ್ವತ ಎಷ್ಟೇ ಎತ್ತರದಲ್ಲಿದ್ದರೂ ತನ್ನ ಬೇರುಗಳನ್ನು ಭೂಮಿಯ ಇಟ್ಟುಕೊಳ್ಳುತ್ತದೆ. ಮಳೆ ಬಿzಗ ಭೂಮಿ ಸುಗಂಧ ನೀಡುತ್ತದೆ. ಹೀಗೆ ಪ್ರಕೃತಿಯ ಪ್ರತಿಯೊಂದು ಅಂಶವೂ ಮನುಷ್ಯನಿಗೆ ಪರೋಪ ಕಾರದ ಪಾಠಗಳನ್ನು ಕಲಿಸುತ್ತವೆ. ಈ ಪಾಠವನ್ನು ಮನುಷ್ಯ ಕಲಿಯಬೇಕಿದೆ. ಒಂದು ಬೀಜ ಮಣ್ಣಿನೊಳಗೆ ಮೌನವಾಗಿ ಕರಗಿದಾಗಲೇ ಮೊಳಕೆಯಾಗಿ ಬೆಳೆಯುತ್ತದೆಯೋ, ಹಾಗೆಯೇ ಜೀವನದಲ್ಲೂ ತ್ಯಾಗ ಮತ್ತು ಸಹನೆಯ ಮೂಲಕವೇ ನಮ್ಮ ವ್ಯಕ್ತಿತ್ವವು ಅರಳುತ್ತದೆ, ಅದರ ಒಳ್ಳೆಯತನವೂ ಪ್ರಚಾರವಿಲ್ಲದೇ ಜನರ ಹೃದಯವನ್ನು ತಲುಪುತ್ತದೆ.

ಹಾಗಾಗಿ ಪ್ರಕೃತಿಯನ್ನು ಗಮನಿಸಿದಷ್ಟು ನಮಗೆ ಜೀವನದ ಅರ್ಥ ಸ್ಪಷ್ಟವಾಗುತ್ತದೆ. ಮೌನದಲ್ಲೂ ಅದು ಮಾತನಾಡುತ್ತದೆ; ಸರಳತೆಯಲ್ಲೂ ಅದು ಮಹತ್ವವನ್ನು ತೋರಿಸುತ್ತದೆ. ಈ ಪ್ರಕೃತಿ ಯೊಡನೆ ಬೆರೆತು ಬದುಕುವವರು ಜೀವನದ ನಿಜವಾದ ಜ್ಞಾನಿಗಳು.

ಸಣ್ಣ ಸಂತೋಷಗಳನ್ನು ಅರಿಯೋಣ: ಬಹಳಷ್ಟು ಜನ ದೊಡ್ಡ ಸಾಧನೆ ಮಾಡಿದರಷ್ಟೇ ಸಂತೋಷವಾಗಿರುತ್ತೇವೆ ಅಂತ ಅಂದುಕೊಳ್ಳುತ್ತಾರೆ. ಆದರೆ, ಬದುಕು ಕೇವಲ ದೊಡ್ಡ ಯಶಸ್ಸು ಗಳಿಂದಷ್ಟೇ ಅಲ್ಲ. ಬೆಳಗಿನ ಸೂರ್ಯೋದಯ, ತಾಯಿಯ ನಗು, ಸ್ನೇಹಿತನ ಪ್ರಾಮಾಣಿಕ ಮಾತು, ಮಳೆಯ ಸದ್ದು, ಮಗುವಿನ ನಿಷ್ಕಪಟತೆ, ಇವೆಲ್ಲವೂ ಬದುಕಿನ ನಿಜವಾದ ಸಂಪತ್ತು.

ಇಂದಿನ ವೇಗದ ಬದುಕಿನಲ್ಲಿ ಜನರು ದೊಡ್ಡ ಕನಸುಗಳ ಹಿಂದೆ ಓಡುತ್ತಾ, ತಮ್ಮ ಸುತ್ತಲಿರುವ ಸಣ್ಣ ಸಂತೋಷಗಳನ್ನು ಮರೆತಿದ್ದಾರೆ. ಆದರೆ ಮನಸ್ಸಿಗೆ ಹೆಚ್ಚು ಶಾಂತಿ ನೀಡುವುದು ಆ ಸಣ್ಣ ಅನುಭವಗಳು. ಜೀವನದಲ್ಲಿ ಎಲ್ಲವೂ ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ.

ಕೆಲವೊಮ್ಮೆ ಸೋಲು, ನಿರಾಸೆ, ಒತ್ತಡಗಳು ಬರುತ್ತವೆ. ಅಂಥ ಸಮಯದಲ್ಲಿ ದೊಡ್ಡ ಸಾಧನೆ ಗಳಿಗಿಂತಲೂ ಸಣ್ಣ ಸಂತೋಷಗಳೇ ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಒಂದು ಪ್ರೋತ್ಸಾಹದ ಮಾತು, ಯಾರಾದರೂ ತೋರಿಸುವ ಕಾಳಜಿ, ಪ್ರಕೃತಿಯ ಮೌನ, ಇವು ಮನದ ಗಾಯಗಳನ್ನು ನಿಧಾನವಾಗಿ ಗುಣಪಡಿಸುತ್ತವೆ. ಹಾಗಾಗಿ ಈ ಸಣ್ಣ ಸಂತೋಷಗಳನ್ನು ಅನುಭವಿಸುವ ವ್ಯಕ್ತಿಯು ತನ್ನ ಜೀವನವನ್ನು ಹೆಚ್ಚು ಸುಂದರವಾಗಿರಿಸುತ್ತಾನೆ.

ಯಾಕೆಂದರೆ ಅವನು ‘ಇನ್ನೇನೂ ಇಲ್ಲ’ ಎಂದು ಕೊರಗುವುದಕ್ಕಿಂತ, ಇದ್ದುದರಲ್ಲಿ ಏನು ಅಮೂಲ್ಯವಿದೆ ಎಂದು ಅರಿತಿರುತ್ತಾನೆ. ಒಂದು ಹೂವಿನ ಸೌಂದರ್ಯ, ಪಕ್ಷಿಗಳ ಕೂಗು, ಯಾರಾದರೂ ಹೇಳುವ ಧನ್ಯವಾದ, ಇವೆಲ್ಲವೂ ಬದುಕನ್ನು ಹಗುರವಾಗಿಸುತ್ತವೆ. ಹಾಗಾಗಿ ಈ ಸಂಗತಿಗಳನ್ನು ಅರಿತು ಬದುಕೋಣ.

ಸರಳ ಬದುಕಿನ ಸೌಂದರ್ಯ: ಇಂದು ಮನುಷ್ಯನ ಮನೆ ದೊಡ್ಡದಾಗುತ್ತಿದೆ, ಮನಸ್ಸು ಚಿಕ್ಕದಾ ಗುತ್ತಿದೆ. ವಸ್ತುಗಳು ಹೆಚ್ಚಾಗುತ್ತಿವೆ, ನೆಮ್ಮದಿ ಕಡಿಮೆಯಾಗುತ್ತಿದೆ. ಅನೇಕ ಸೌಲಭ್ಯಗಳ ಮಧ್ಯೆಯೂ ಆತಂಕ, ಹೋಲಿಕೆ ಮತ್ತು ಅಸಮಾಧಾನ ಮನುಷ್ಯನನ್ನು ಹೆಚ್ಚಾಗಿ ಕಾಡುತ್ತಿದೆ. ಇಂತಹ ಸಮಯದಲ್ಲಿ ಸರಳ ಬದುಕು ಮನಸ್ಸಿಗೆ ಒಂದು ಶಾಂತಿಯ ಆಶ್ರಯವಾಗುತ್ತದೆ.

ಸರಳವಾಗಿ ಬದುಕುವ ವ್ಯಕ್ತಿಗೆ ತೋರಿಕೆಯ ಭಾರ ಇರುವುದಿಲ್ಲ, ಕಾರಣ ಆತ ಇತರರ ಮೆಚ್ಚುಗೆಗಿಂತ ತನ್ನ ಆತ್ಮತೃಪ್ತಿಗಾಗಿ ಬದುಕುತ್ತಾನೆ. ಆತನ ಸಂತೋಷ ದುಬಾರಿ ವಸ್ತುಗಳಲ್ಲಿರದೆ, ಕುಟುಂಬದ ಪ್ರೀತಿಯಲ್ಲಿ, ಸತ್ಯವಾದ ಸಂಬಂಧಗಳಲ್ಲಿ, ಮನಸ್ಸಿನ ನೆಮ್ಮದಿಯಲ್ಲಿ ಇರುತ್ತದೆ. ತೃಪ್ತಿ ಇಲ್ಲದವನಿಗೆ ಎಷ್ಟೇ ಸಿಕ್ಕರೂ ಅವನಲ್ಲಿ ಮತ್ತಷ್ಟು ಕೊರತೆಯೇ ಕಾಣುತ್ತದೆ; ತೃಪ್ತಿಯಿರುವವನಿಗೆ ಕಡಿಮೆಯಲ್ಲೂ ಸಮೃದ್ಧಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಎಲ್ಲರೂ ತಮ್ಮ ಜೀವನವನ್ನು ಅಲಂಕರಿಸಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಿಜವಾದ ಸಂತೋಷ ಕ್ಯಾಮೆರಾಕ್ಕೆ ಕಾಣಿಸುವ ನಗುವಿನಲ್ಲಿ ಅಲ್ಲ; ಮನಸ್ಸಿಗೆ ಕಾಣಿಸುವ ನೆಮ್ಮದಿಯಲ್ಲಿ ಇರುತ್ತದೆ.

ಕಡಿಮೆ ಆಸೆ, ಹೆಚ್ಚು ಪ್ರೀತಿ, ಕಡಿಮೆ ಪ್ರದರ್ಶನ, ಹೆಚ್ಚು ಮಾನವೀಯತೆ ಈ ನೈಜ ಸುಖದ ಜೀವನದ ಆಧಾರಗಳನ್ನು ಅನುಸರಿಸಿದರೆ ಅವು ಮನಸ್ಸಿನ ಪರಿಪಕ್ವತೆ ಮತ್ತು ಆತ್ಮಶಾಂತಿಗೆ ದಾರಿ ಮಾಡಿ ಕೊಡುತ್ತವೆ. ಲೋಕವನ್ನು ಗೆದ್ದು ತನ್ನ ಮನಸ್ಸನ್ನು ಗೆಲ್ಲದಿದ್ದರೆ ಗೆಲವು ಅಪೂರ್ಣ. ಜೀವನದಲ್ಲಿ ಪ್ರತಿಯೊಬ್ಬರೂ ಯಾವುದೋ ಒಂದು ಹಂತದಲ್ಲಿ ನೋವು, ವಿಫಲತೆ, ಏಕಾಂತ ಮತ್ತು ಗೊಂದಲ ಎದುರಿಸುತ್ತಾರೆ. ಅವೇ ಅನುಭವಗಳು ಮನುಷ್ಯನನ್ನು ಪರಿಪಕ್ವಗೊಳಿಸುತ್ತವೆ.

ಕತ್ತಲೆ ಇಲ್ಲದೆ ಬೆಳಕಿನ ಮೌಲ್ಯ ಗೊತ್ತಾಗುವುದಿಲ್ಲ. ದುಃಖ ಇಲ್ಲದೆ ಸಂತೋಷದ ಆಳ ಅರ್ಥ ವಾಗುವುದಿಲ್ಲ. ಆದ್ದರಿಂದ ಬದುಕಿನ ಪ್ರತಿಯೊಂದು ಅನುಭವವನ್ನೂ ಪಾಠವಾಗಿ ಸ್ವೀಕರಿಸಿದಾಗ ಮಾತ್ರ ಜೀವನ ಜ್ಞಾನವಾಗುತ್ತದೆ.