ಪೌರಪರೀಕ್ಷೆ
ವಿವೇಕ್ ಭಟ್
ನಾವು ಬೇರೆ ದೇಶಗಳ ಬಗ್ಗೆ ಮಾತಾಡುತ್ತೇವೆ. ಆದರೆ ನಮ್ಮ ದೇಶದ ಬಗ್ಗೆ ನಮಗೆ ಎಷ್ಟು ಗೊತ್ತು? ಪ್ರತಿ ಆಗ 15ಕ್ಕೆ ವಾಟ್ಸ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಕಳಿಸಿ ಜೈ ಹಿಂದ್ ಹಾಕುತ್ತೇವೆ. ದೇಶಭಕ್ತಿ ಅಂದರೆ ವಾಟ್ಸ್ಯಾಪ್ ಸ್ಟೇಟಸ್ ಅಲ್ಲ. ದೇಶಭಕ್ತಿ ಅಂದರೆ ನಮ್ಮ ದೇಶವನ್ನು ತಿಳಿದುಕೊಳ್ಳುವುದು. ಒಂದು ಕನಿಷ್ಠ ಕುತೂಹಲ ನಮ್ಮ ದೇಶದ ಬಗ್ಗೆ ಇರಲಿ. ಅಷ್ಟು ಇದ್ದರೆ ಸಾಕು.
ಒಂದು ಸಣ್ಣ ಟೆಸ್ಟ್. ಪೆನ್-ಪೇಪರ್ ಬೇಡ. ಸುಮ್ಮನೆ ಮನಸ್ಸಲ್ಲಿ ಉತ್ತರಿಸಿ. ಭಾರತದ ರಾಷ್ಟ್ರ ಪ್ರಾಣಿ ಯಾವುದು? ಹುಲಿ ಅಂದಿರಾ? ಸರಿ. ಬೆಂಗಾಲ್ ಟೈಗರ್, ರಾಯಲ್ ಬೆಂಗಾಲ್ ಟೈಗರ್ ಅಂತ ಸೇರಿಸಿದ್ರೆ ಎಕ್ಸ್‌ಟ್ರಾ ಮಾರ್ಕ್. ಈಗ ಇನ್ನೊಂದು- ಭಾರತದ ರಾಷ್ಟ್ರ ಪ್ರಾಣಿ ಹುಲಿ ಆಗಿದ್ದು ಯಾವಾಗಿನಿಂದ? ಮೊದಲು ಏನಿತ್ತು? ಗೊತ್ತಿಲ್ಲ ಅಲ್ಲವಾ? 1948ರಲ್ಲಿ ಗುಜರಾತ್ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಅಭಿಯಾನ ದಿಂದಾಗಿ, ಪ್ರಧಾನಿ ಜವಾಹರಲಾಲ್ ನೆಹರು ಅವರ ಮೇಲೆ ಪ್ರಭಾವ ಬೀರಿದ ಕಾರಣ, ಸ್ವಾತಂತ್ರ್ಯದ ನಂತರ ಏಷ್ಯಾಟಿಕ್ ಸಿಂಹವು ಭಾರತದ ಮೊದಲ ರಾಷ್ಟ್ರೀಯ ಪ್ರಾಣಿಯಾಗಿತ್ತು. 1972ರಲ್ಲಿ ಅದನ್ನು ಬಂಗಾಲ ಹುಲಿಯೆಂದು ಬದಲಾಯಿಸ ಲಾಯಿತು. 16 ರಾಜ್ಯಗಳಲ್ಲಿ ಹುಲಿಗಳು ವಾಸಿಸುತ್ತಿದ್ದ ಕಾರಣ (ಸಿಂಹಗಳು ಗುಜರಾತ್‌ನ ಗಿರ್‌ಗೆ ಸೀಮಿತವಾಗಿದ್ದವು). ಸರಿ. ಮುಂದೆ ಹೋಗೋಣ.
ಅಮೆರಿಕ, ಆಸ್ಟ್ರೇಲಿಯಾ, ಕೆನಡಾ- ಈ ದೇಶಗಳಲ್ಲಿ ಪೌರತ್ವ ಪಡೆಯಬೇಕಾದರೆ ಒಂದು ಪರೀಕ್ಷೆ ಬರೆಯಬೇಕು. ಆ ದೇಶದ ಇತಿಹಾಸ, ಸಂವಿಧಾನ, ರಾಷ್ಟ್ರಗೀತೆ, ಭೂಗೋಳ- ಎಲ್ಲ ಕೇಳುತ್ತಾರೆ. ಭಾರತದಲ್ಲಿ ಅಂಥ ಪರೀಕ್ಷೆ ಇಲ್ಲ. ಭಾರತದಲ್ಲೂ ಒಂದು ಪೌರತ್ವ ಟೆಸ್ಟ್ ಇದೆ ಅಂತ ಊಹಿಸಿ ಕೊಳ್ಳಿ. ನೀವು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಿ ನೋಡೋಣ.
ಪ್ರಶ್ನೆ 1: ನಮ್ಮ ರಾಷ್ಟ್ರ ಲಾಂಛನದಲ್ಲಿ ಎಷ್ಟು ಸಿಂಹಗಳಿವೆ? ಮೂರು ಸಿಂಹ ಅಂದಿರಾ? ತಪ್ಪು. ನಾಲ್ಕು ಸಿಂಹಗಳು. ಅಶೋಕ ಸ್ತಂಭದ ಮೇಲೆ ನಾಲ್ಕು ಸಿಂಹಗಳಿವೆ- ನಾಲ್ಕೂ ದಿಕ್ಕಿಗೆ ಮುಖ ಮಾಡಿ ನಿಂತಿವೆ. ನಮಗೆ ಮೂರು ಕಾಣಿಸುತ್ತವೆ. ಯಾಕೆಂದರೆ ಒಂದು ಹಿಂಭಾಗಕ್ಕೆ ಇದೆ. ಚಿತ್ರದಲ್ಲಿ ಕಾಣಿಸು ವುದಿಲ್ಲ. ಪ್ರತಿ ರೂಪಾಯಿ ನೋಟು, ಪ್ರತಿ ಸರಕಾರಿ ಕಾಗದ, ಪ್ರತಿ ಪಾಸ್‌ಪೋರ್ಟ್ ಮೇಲೆ ಈ ಲಾಂಛನ ಇದೆ- ಆದರೆ ಎಷ್ಟು ಸಿಂಹ ಅಂತ ಗೊತ್ತಿಲ್ಲ.
ಪ್ರಶ್ನೆ 2: ಭಾರತದ ಸಂವಿಧಾನದಲ್ಲಿ ರಾಷ್ಟ್ರ ಭಾಷೆ ಅಂತ ಯಾವ ಭಾಷೆಗೆ ಹೇಳಲಾಗಿದೆ? ಹಿಂದಿ ಅಂದಿರಾ? ತಪ್ಪು. ಭಾರತಕ್ಕೆ ರಾಷ್ಟ್ರ ಭಾಷೆ ಅಂತ ಯಾವುದೂ ಇಲ್ಲ, ಹಿಂದಿ ಮತ್ತು ಇಂಗ್ಲಿಷ್ ಕೇವಲ Official Language ಮಾತ್ರ- ರಾಷ್ಟ್ರ ಭಾಷೆ ಅಲ್ಲ. ಭಾರತದ ಸಂವಿಧಾನವು 22 ಭಾಷೆ ಗಳನ್ನು ಅಧಿಕೃತ ಭಾಷೆಗಳೆಂದು ಗುರುತಿಸುತ್ತದೆ. ಈ ಭಾಷೆಗಳು ಅಧಿಕೃತ ಬೆಂಬಲ ಮತ್ತು ಪ್ರಾತಿ ನಿಧ್ಯವನ್ನು ಪಡೆಯುತ್ತವೆ. ಇದು ಬಹಳ ಜನಕ್ಕೆ ಗೊತ್ತಿಲ್ಲ. ಗೊತ್ತಿದ್ದರೂ ಒಪ್ಪುವುದಿಲ್ಲ- ಮುಖ್ಯ ವಾಗಿ ಉತ್ತರ ಭಾರತದವರು.
ಪ್ರಶ್ನೆ 3: ರಾಷ್ಟ್ರಗೀತೆ ಜನ ಗಣ ಮನ ಯಾರು ಬರೆದದ್ದು? ರವೀಂದ್ರನಾಥ ಟ್ಯಾಗೋರ್. ಇದು ಸುಲಭ. ಆದರೆ- ಅದು ಮೂಲತಃ ಯಾವ ಭಾಷೆಯಲ್ಲಿ ಬರೆದಿದ್ದು? ಹಿಂದಿ ಅಲ್ಲ. ಬೆಂಗಾಲಿ ಅಲ್ಲ. ಸಂಸ್ಕೃತಮಯ ಬೆಂಗಾಲಿ- ಸಾಧು ಭಾಷಾ ಎಂಬ ಶೈಲಿಯಲ್ಲಿ. ಹಾಗಾಗಿ ಬಹುತೇಕ ಭಾರತೀಯರಿಗೆ ಅದರ ಪ್ರತಿ ಪದದ ಅರ್ಥ ಗೊತ್ತಿಲ್ಲ. ಆದರೂ ಹಾಡುತ್ತೇವೆ. ಅಧಿನಾಯಕ ಅಂದರೆ ಏನು? ವಿಂಧ್ಯ ಹಿಮಾಚಲ ಯಮುನಾ ಗಂಗಾ ಬಿಟ್ಟರೆ ಮುಂದೆ ಏನಿದೆ ಹೇಳಿ? ನಾವು ಹಾಡುತ್ತಿರುವುದು ಕವಿತೆಯ ಕೇವಲ ಒಂದು ಚರಣ. ಹೆಚ್ಚಿನ ಭಾರತೀಯರಿಗೆ ತಿಳಿದಿರದ ಇನ್ನೂ 4 ಚರಣಗಳಿವೆ.
ಪ್ರಶ್ನೆ 4: ಭಾರತಕ್ಕೆ ಎಷ್ಟು ದೇಶಗಳ ಜೊತೆ ಗಡಿ ಇದೆ? ಅದರಲ್ಲಿ ಅತಿ ಉದ್ದದ ಗಡಿ ಯಾವ ದೇಶದ ಜೊತೆ? 5 ದೇಶಗಳು ಅಂದಿರಾ? 7 ಅಂದಿರಾ? ತಪ್ಪು. ನಾವು 9 ದೇಶಗಳೊಂದಿಗೆ ಗಡಿಯನ್ನು ಹಂಚಿ ಕೊಂಡಿದ್ದೇವೆ. 7 ಭೂ ಗಡಿಗಳು (ಪಾಕಿಸ್ತಾನ, ಚೀನಾ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಆಫ್ಘಾನಿಸ್ತಾನ) ಮತ್ತು 2 ಕಡಲ ಗಡಿಗಳು (ಶ್ರೀಲಂಕಾ ಮತ್ತು ಮಾಲ್ಡೀವ್ಸ್). ಅತಿ ಉದ್ದದ ಗಡಿ? ಪಾಕಿಸ್ತಾನ ಅಥವಾ ಚೀನಾ ಅಂದಿರಾ? ತಪ್ಪು. ಬಾಂಗ್ಲಾದೇಶ. ಭಾರತ- ಬಾಂಗ್ಲಾದೇಶ ಗಡಿ 4096 ಕಿ.ಮೀ., ಪಾಕಿಸ್ತಾನದ ಜೊತೆ 3323 ಕಿ.ಮೀ., ಚೀನಾ ಜೊತೆ 3488 ಕಿ.ಮೀ.
ಪ್ರಶ್ನೆ 5: ಭಾರತದ ಅತಿ ಉದ್ದದ ಕರಾವಳಿ ಯಾವ ರಾಜ್ಯಕ್ಕೆ ಸೇರಿದ್ದು? ತಮಿಳುನಾಡು? ಮಹಾ ರಾಷ್ಟ್ರ? ಆಂಧ್ರ ಪ್ರದೇಶ? ಎಲ್ಲವೂ ತಪ್ಪು. ಗುಜರಾತ್. 1600 ಕಿ.ಮೀ. ಕರಾವಳಿ. ಭಾರತದ ಒಟ್ಟು ಕರಾವಳಿಯ ಸುಮಾರು 20% ಒಂದೇ ರಾಜ್ಯಕ್ಕೆ. ಯಾಕೆ ಗೊತ್ತಿಲ್ಲ ಅಂದರೆ ನಮಗೆ ಕಡಲು ಅಂದ ಕ್ಷಣ ಗೋವಾ, ಕೇರಳ, ನೆನಪಾಗುತ್ತದೆ. ಪ್ರವಾಸೋದ್ಯಮ= ಕಡಲು ಅಂತ ಯೋಚಿಸುತ್ತದೆ. ಆದರೆ ಗುಜರಾತಿನ ಕಡಲು ತೀರವನ್ನು ಹೆಚ್ಚಾಗಿ ವ್ಯಾಪಾರಕ್ಕೆ ಬಳಸಲಾಗುತ್ತದೆ.
ಪ್ರಶ್ನೆ 6: ಭಾರತ- ಪಾಕಿಸ್ತಾನದ ಗಡಿ ಎಳೆದವರು ಯಾರು? ಸಿರಿಲ್ ರ್ಯಾಡ್‌ಕ್ಲಿಫ್. ಒಬ್ಬ ಬ್ರಿಟಿಷ್ ವಕೀಲ. ಆ ಮನುಷ್ಯ ಅದಕ್ಕಿಂತ ಮುಂಚೆ ಭಾರತಕ್ಕೆ ಬಂದಿರಲೇ ಇಲ್ಲ. ಒಂದು ಮ್ಯಾಪ್ ನೋಡಿ, 5 ವಾರದಲ್ಲಿ ಗೆರೆ ಎಳೆದು ಎರಡು ದೇಶ ಮಾಡಿಬಿಟ್ಟ. ಆ ಒಂದು ಪೆನ್ಸಿಲ್ ಗೆರೆಯ ಬೆಲೆ? ಲಕ್ಷಾಂತರ ಜನ ಮನೆ ಬಿಟ್ಟರು, ಜೀವ ಕಳೆದುಕೊಂಡರು, ಕುಟುಂಬಗಳು ಇಬ್ಭಾಗವಾದವು. ಆ ಗೆರೆ ಇನ್ನೂ ರಕ್ತ ಹರಿಸುತ್ತಿದೆ. ಹೆಚ್ಚಿನವರಿಗೆ ಗೊತ್ತಿಲ್ಲ, ಲಾಹೋರ್ ಮೂಲ ಯೋಜನೆಯ ಪ್ರಕಾರ ಭಾರತಕ್ಕೆ ಸೇರಬೇಕಿತ್ತು. ಅಲ್ಲಿ ಹಿಂದೂಗಳು ಮತ್ತು ಸಿಖ್ಖರ ಗಣನೀಯ ಸಂಖ್ಯೆ ಇತ್ತು. ಆದರೆ ಪಾಕಿಸ್ತಾನಕ್ಕೆ ಒಂದೂ ದೊಡ್ಡ ನಗರ ಇರಲಿಲ್ಲ. ಹಾಗಾಗಿ ಲಾಹೋರ್ ಅವರಿಗೆ ಹೋಯಿತು.
ಪ್ರಶ್ನೆ 7: ಭಾರತದಲ್ಲಿ ಎಷ್ಟು ರಾಜ್ಯಗಳಿವೆ? ಎಲ್ಲ ಹೆಸರಿಸಿ. 28 ರಾಜ್ಯಗಳು ಎಂದಿರಾ? ಸರಿ. ಹೆಸರಿಸಿ ಅಂದರೆ? ಪ್ರಯತ್ನಿಸಿ. ಬಹುಶಃ 22-23ರಲ್ಲಿ ನಿಂತುಬಿಡುತ್ತೀರಿ. ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ- ಈ 5ರಲ್ಲಿ ಒಂದಾದರೂ ಮರೆಯುತ್ತೀರಿ. ಈಶಾನ್ಯ ಭಾರತದ ರಾಜ್ಯಗಳು ನಮಗೆ ಯಾವಾಗಲೂ ಸೆವೆನ್ ಸಿಸ್ಟರ್ಸ್ ಅಂತ ಒಟ್ಟಿಗೆ ನೆನಪಾಗುತ್ತದೆ- ಒಂದೊಂದಾಗಿ ಅಲ್ಲ. ಅದೇ ನಮ್ಮ ಸಮಸ್ಯೆ. ದೇಶ ಅಂದರೆ ನಮಗೆ ನಮ್ಮ ರಾಜ್ಯ + ದೆಹಲಿ ಅಷ್ಟೇ.
ಪ್ರಶ್ನೆ 8: ಚಹಾ- ಭಾರತದ ರಾಷ್ಟ್ರೀಯ ಪಾನೀಯವೇ? ಅಲ್ಲ. ಚಹಾ ಭಾರತಕ್ಕೆ ಬಂದಿದ್ದು ಬ್ರಿಟಿಷ ರಿಂದ. ಅವರು ಅಸ್ಸಾಂನಲ್ಲಿ ಚಹಾ ತೋಟ ಶುರು ಮಾಡಿದರು. ಇಂಗ್ಲೆಂಡ್ ಗೆ ರಫ್ತು ಮಾಡುವು ದಕ್ಕಾಗಿ, ಭಾರತೀಯರಿಗೆ ಕುಡಿಸಲು ಅಲ್ಲ. ನಂತರ ಭಾರತೀಯರು ಅದನ್ನು ಅಪ್ಪಿಕೊಂಡು ಅದ್ಭುತ ಸೃಷ್ಟಿಸಿದೆವು. ಮಸಾಲೆ ಚಹಾ, ಕಟ್ಟಿಂಗ್ ಚಾಯ, ಇರಾನಿ ಚಾಯ, ಸುಲೈಮಾನಿ... ಬ್ರಿಟಿಷರ ಶೋಷಣೆಯ ಸಸ್ಯ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಆಯಿತು.
ಪ್ರಶ್ನೆ 9: ಎಸ್.ಆರ್.ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ- ಈ ಪ್ರಕರಣದ ಬಗ್ಗೆ ಗೊತ್ತಾ? ಗೊತ್ತಿಲ್ಲ ಅಂದಿರಾ? ಇದು ಭಾರತೀಯ ಪ್ರಜಾಪ್ರಭುತ್ವದ ಅತಿ ಮುಖ್ಯ ನ್ಯಾಯಾಂಗ ತೀರ್ಪುಗಳಲ್ಲಿ ಒಂದು. 1994ರ ಈ ಪ್ರಕರಣದಿಂದಲೇ ಆರ್ಟಿಕಲ್ 356- ರಾಷ್ಟ್ರಪತಿ ಆಳ್ವಿಕೆಯ (President Rule) ದುರ್ಬಳಕೆ ನಿಂತಿತು. ಕೇಂದ್ರ ಸರಕಾರ ಇಷ್ಟ ಬಂದಾಗ ರಾಜ್ಯ ಸರಕಾರವನ್ನು ಕಿತ್ತುಹಾಕುವುದನ್ನು ಸರ್ವೋಚ್ಚ ನ್ಯಾಯಾಲಯ ತಡೆಯಿತು.
ಪ್ರಶ್ನೆ 10: ಭಾರತ ಸರಕಾರ ಅಧಿಕೃತವಾಗಿ ಬಳಸುವ ರಾಷ್ಟ್ರೀಯ ಕ್ಯಾಲೆಂಡರ್ ಯಾವುದು? ಇಂಗ್ಲಿಷ್ ಅಥವಾ ಗ್ರೆಗೋರಿಯನ್ ಅಂದಿರಾ? ಅರ್ಧ ಸರಿ. ಗ್ರೆಗೋರಿಯನ್ ಬಳಸುತ್ತೇವೆ ಹೌದು. ಆದರೆ ಅದರ ಜೊತೆಗೆ ಇನ್ನೊಂದು ಕ್ಯಾಲೆಂಡರ್ ಕೂಡ ಅಧಿಕೃತವಾಗಿ ಬಳಕೆಯಲ್ಲಿದೆ. ಭಾರತದ ಗೆಝೆಟ್ (Gazette of India) ನೋಡಿದ್ದೀರಾ? ಅಲ್ಲಿ ಎರಡೂ ದಿನಾಂಕ ಇರುತ್ತವೆ. ಅದು ಶಕ ಪಂಚಾಂಗ. ಶಕ ಯುಗ ಆಧಾರಿತ. ಮೊದಲ ತಿಂಗಳು ಚೈತ್ರ- ಮಾರ್ಚ್ 22ಕ್ಕೆ ಶುರುವಾಗುತ್ತದೆ.
ನಮ್ಮ ಸರಕಾರ ಪ್ರತಿದಿನ ಈ ಕ್ಯಾಲೆಂಡರ್ ಬಳಸುತ್ತದೆ. ನಮಗೆ ಅದರ ಹೆಸರೇ ಗೊತ್ತಿಲ್ಲ. ಜನವರಿ 1ಕ್ಕೆ ಹೊಸ ವರ್ಷದ ಶುಭಾಶಯಗಳು ಹೇಳುತ್ತೇವೆ. ಆದರೆ ನಮ್ಮ ನಿಜವಾದ ಹೊಸ ವರ್ಷ ಚೈತ್ರ ಶುಕ್ಲ ಪ್ರತಿಪದ ಅಂತ ಗೊತ್ತಿಲ್ಲ. 5000 ವರ್ಷದ ಖಗೋಳಶಾಸ್ತ್ರ ಪರಂಪರೆ ನಮ್ಮದು. ಆದರೆ ಇಂದು ಶಕ ವರ್ಷ ಎಷ್ಟು? ಅಂತ ಕೇಳಿದರೆ ನಮ್ಮಲ್ಲಿ 90% ಜನಕ್ಕೆ ಉತ್ತರ ಗೊತ್ತಿರಲ್ಲ.
ಪ್ರಶ್ನೆ 11: ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು? ಹಾಕಿ ಅಂದಿರಾ? ತಪ್ಪು. ಭಾರತಕ್ಕೆ ಅಧಿಕೃತ ವಾಗಿ ಯಾವುದೇ ರಾಷ್ಟ್ರೀಯ ಕ್ರೀಡೆ ಇಲ್ಲ. ಸರಕಾರ ಯಾವುದೇ ಕ್ರೀಡೆಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿಲ್ಲ. ಎಲ್ಲ ಕ್ರೀಡೆಗಳನ್ನು ಸಮಾನವಾಗಿ ಬೆಂಬಲಿಸುವುದು ಉದ್ದೇಶ. ಶಾಲೆಯಲ್ಲಿ ಪುಸ್ತಕ ಓದಿ ‘ಹಾಕಿ’ ಅಂತ ಬರೆದಿದ್ದೀರಿ. ಟೀಚರ್ ಕೂಡ ಸರಿ ಅಂತ ಹಾಕಿದ್ದಾರೆ. ಆದರೆ ಅದು ಯಾವ ಕಾಗದದಲ್ಲೂ ಅಧಿಕೃತವಾಗಿ ಬರೆದಿಲ್ಲ. ಈಗ ನಿಮಗೇ ಕೇಳಿಕೊಳ್ಳಿ - ಎಷ್ಟು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದಿರಿ? 7 ಕ್ಕಿಂತ ಹೆಚ್ಚು? ಅಭಿನಂದನೆ. 5ಕ್ಕಿಂತ ಕಡಿಮೆ? ಬಹುತೇಕ ಭಾರತೀಯರು ಇದೇ ವರ್ಗ. ಆದರೆ ಯೋಚಿಸಿ. ನಾವು ಬೇರೆ ದೇಶಗಳ ಬಗ್ಗೆ ಮಾತಾಡುತ್ತೇವೆ. ಆದರೆ ನಮ್ಮ ದೇಶದ ಬಗ್ಗೆ ನಮಗೆ ಎಷ್ಟು ಗೊತ್ತು? ನಮ್ಮ ಸಂವಿಧಾನ ಓದಿಲ್ಲ.
ನಮ್ಮ ರಾಷ್ಟ್ರಗೀತೆಯ ಅರ್ಥ ಗೊತ್ತಿಲ್ಲ. ನಮ್ಮ ಅಕ್ಕಪಕ್ಕದ ದೇಶಗಳ ಹೆಸರು ಮರೆತಿದ್ದೇವೆ. ನಮ್ಮ ಅತಿ ಉದ್ದ ಗಡಿ ಯಾರ ಜೊತೆ ಅಂತ ಗೊತ್ತಿಲ್ಲ. ನಮ್ಮ ರಾಷ್ಟ್ರ ಲಾಂಛನದಲ್ಲಿ ಎಷ್ಟು ಸಿಂಹ ಅಂತ ಗೊತ್ತಿಲ್ಲ. ಚಹಾ ಎಲ್ಲಿಂದ ಬಂತು ಗೊತ್ತಿಲ್ಲ. ಲಾಹೋರ್ ನಮ್ಮದಾಗಬೇಕಿತ್ತು ಅಂತ ಗೊತ್ತಿಲ್ಲ. ಆದರೆ ಪ್ರತಿ ಆಗ 15ಕ್ಕೆ ವಾಟ್ಸ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಕಳಿಸಿ ಜೈ ಹಿಂದ್ ಹಾಕುತ್ತೇವೆ.
ದೇಶಭಕ್ತಿ ಅಂದರೆ ವಾಟ್ಸ್ಯಾಪ್ ಸ್ಟೇಟಸ್ ಅಲ್ಲ. ದೇಶಭಕ್ತಿ ಅಂದರೆ ನಮ್ಮ ದೇಶವನ್ನು ತಿಳಿದು ಕೊಳ್ಳುವುದು. ಭಾರತ ಅಂದರೆ ಒಂದು ಪರೀಕ್ಷೆಯಲ್ಲಿ ಹಿಡಿಯಲಾಗದ ದೇಶ. 28 ರಾಜ್ಯ, 22 ಅಧಿಕೃತ ಭಾಷೆ, 60 ಧರ್ಮ, 10000+ ವರ್ಷದ ಇತಿಹಾಸ. ಯಾವ ಪರೀಕ್ಷೆಯೂ ಇದನ್ನು ಅಳೆಯ ಲಾರದು. ಆದರೆ ಒಂದು ಕನಿಷ್ಠ ಕುತೂಹಲ ನಮ್ಮ ದೇಶದ ಬಗ್ಗೆ ಇರಲಿ. ಅಷ್ಟು ಇದ್ದರೆ ಸಾಕು.