ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಲಾವೋಸ್‌ನಲ್ಲಿ 1953ರಿಂದ 1975ರವರೆಗೆ ಹಲವು ವಿಧದಲ್ಲಿ ಭೀಕರವಾದ ಯುದ್ಧಗಳು ನಡೆದವು. ಅದರಲ್ಲೂ 1964ರಿಂದ 1973ರವರೆಗೆ ಅಮೆರಿಕ ಲಾವೋಸ್ ಮೇಲೆ ಭೀಕರವಾದ ಬಾಂಬ್ ದಾಳಿ ಮಾಡಿತ್ತು. ಆ ಕಾಲದಲ್ಲಿ ಪಕ್ಕದಲ್ಲಿಯೇ ಇರುವ ವಿಯಟ್ನಾಂನಲ್ಲಿ ಯುದ್ಧ ನಡೆಯುತ್ತಿದ್ದ ಕಾರಣ, ಲಾವೋಸ್ ಮೇಲೆ ಅಂದು ಅಮೆರಿಕ ಮಾಡಿದ ದಾಳಿ ಆ ಕಾಲದಲ್ಲಿ ಸುದ್ದಿ ಆಗಲೇ ಇಲ್ಲ.

ವಿದೇಶವಾಸಿ

dhyapaa@gmail.com

ಯುದ್ಧ ಅಪಾಯಕಾರಿ, ವಿನಾಶಕಾರಿ. ಯುದ್ಧ ಎಂದರೆ ಕೇವಲ ಎರಡು ದೇಶಗಳ ನಡುವೆ ಮಾತ್ರ ನಡೆಯುವಂಥದ್ದು ಎಂದು ತಿಳಿದರೆ ಮೂರ್ಖತನವಾದೀತು. ಯುದ್ಧ ಎಂದರೆ ಅಕ್ಕಪಕ್ಕದ ದೇಶಗಳ ಮೇಲೆಯೂ. ಕೆಲವೊಮ್ಮೆ ಪ್ರಪಂಚದಾದ್ಯಂತ ಪರಿಣಾಮ ಬೀರುವಂಥ ಸಂಗತಿ. ಯುದ್ಧ ಕೇವಲ ಸೈನಿಕರನ್ನು ಆ ದೇಶದ ಜನರನ್ನು ಮಾತ್ರ ಗಾಯಗೊಳಿಸುವು ದಿಲ್ಲ, ಆ ದೇಶದ ಭೂಮಿಯನ್ನೂ ಘಾಸಿಗೊಳಿಸುತ್ತದೆ.

ಯಾರಾದರೂ ನಮ್ಮ ಮೇಲೆ ಕಲ್ಲು ಎಸೆದರೆ ಏನು ಮಾಡಬೇಕು? ಬೇಸರ ಮಾಡಿಕೊಳ್ಳಬಾರದು, ಅದನ್ನೆಲ್ಲ ಹೆಕ್ಕಿ ಮನೆ ಕಟ್ಟಿಕೊಳ್ಳಬೇಕು" ಎಂಬ ಉಪದೇಶ ಇದೆ. ಸರಿ, ಯಾರಾದರೂ ನಮ್ಮ ಮೇಲೆ ಬಾಂಬ್ ಎಸೆದರೆ ಏನು ಮಾಡಬೇಕು...? ಲಾವೋಸ್ ದೇಶದ ‘ಲುವಾಂಗ್ ಪ್ರಬಾಂಗ್’ನಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ‘ಕುವಾನ್ ಸಿ’ ಜಲಪಾತಕ್ಕೆ ಇತ್ತೀಚೆಗೆ ಹೋಗಿದ್ದೆ.

ಅದೊಂದು ಅದ್ಭುತವಾದಂಥ ಜಲಪಾತ. ಸುಮಾರು ಎರಡು ನೂರು ಅಡಿ (ಅರವತ್ತು ಮೀಟರ್) ಎತ್ತರದಿಂದ ನಾಲ್ಕು ಸ್ತರದಲ್ಲಿ ನೀರು ಹರಿದು ಕೆಳಗೆ ಬರುವ ರಮಣೀಯ ದೃಶ್ಯ. ಆ ಒಂದು ಜಲಪಾತದ ಸನ್ನಿಧಿಯಲ್ಲಿ ಗಂಟೆಗಳನ್ನೇ ಕಳೆಯಬಹುದು. ಅದು ನಮ್ಮ ಜೋಗ ಜಲಪಾತದಷ್ಟು ದೊಡ್ಡದಲ್ಲ, ಅಷ್ಟು ಎತ್ತರದಿಂದ ನೀರು ಧುಮುಕುವುದಿಲ್ಲ. ಕುವಾನ್ ಸಿ ಜಲಪಾತವು ಜೋಗ ಜಲಪಾತದ ಕಾಲುಭಾಗ ಮಾತ್ರವಿದೆ.

ಆದರೂ ನಯನ ಮನೋಹರವಾಗಿರುವುದಂತೂ ನಿಜ. ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣ ಮಿಶ್ರಿತವಾದಂತೆ ಇರುವ ಬಣ್ಣ, ಸುತ್ತಲೂ ಕತ್ತಲ ಕಾನನ. ಜಲಪಾತ ಚಿಕ್ಕದಾದದ್ದರಿಂದ ಜಲಪಾತದ ಆಚೆ ಈಚೆ ದಾಟಿ ಹೋಗುವಂತೆ ನಿರ್ಮಿತವಾದ ಸಣ್ಣ ಸೇತುವೆ. ಆ ಸೇತುವೆ ಮೇಲೆಯೇ ನಿಂತು ನೀವು ಇಡೀ ಜಲಪಾತದ ಚಿತ್ರವನ್ನು, ವಿಡಿಯೋವನ್ನು ತೆಗೆದುಕೊಳ್ಳಬಹುದು. ಆ ಜಲಪಾತದ ಸಾನ್ನಿಧ್ಯದಲ್ಲಿ ಒಂದು ಗಂಟೆ ಕಳೆದದ್ದೇ ತಿಳಿಯಲಿಲ್ಲ. ಜಲಪಾತವಂತೂ ಗಮನ ಸೆಳೆಯುವಂಥದ್ದೇ ಬಿಡಿ. ಆದರೆ ಅದಕ್ಕಿಂತ ಹೆಚ್ಚಾಗಿ ಅಲ್ಲಿ ನನ್ನ ಗಮನ ಸೆಳೆದಿದ್ದು ಒಂದು ಮರ, ಜಲಪಾತದ ಮಧ್ಯದಲ್ಲಿ ಒಂಟಿಯಾಗಿ ನಿಂತ ಮರ!

ಇದನ್ನೂ ಓದಿ: Kiran Upadhyay Column: ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

ಅಂಥ ನಾಲ್ಕಾರು ಮರಗಳು ಆ ಜಲಪಾತದಲ್ಲಿವೆ. ಅವುಗಳ ವಿಶೇಷತೆ ಎಂದರೆ, ಅವು ರಭಸದಲ್ಲಿ ಧುಮುಕುವ ನೀರಿನ ಮಧ್ಯೆ ಕಲ್ಲಿನ ಮೇಲೆ ನಿಂತಂಥ ಮರಗಳು. ಅದರಲ್ಲೂ ಒಂದು ಮರದ ಗಾತ್ರ ನೋಡಿದರೆ, ಏನಿಲ್ಲವೆಂದರೂ ಇಪ್ಪತ್ತೈದು-ಮೂವತ್ತು ವರ್ಷದಿಂದ ನಿಂತಿದೆ ಎಂದು ಹೇಳ ಬಹುದು. ಆ ಒಂದು ದೃಶ್ಯ ನನ್ನ ಕಣ್ಣಿಗೆ ಕಟ್ಟಿ, ಮನಸ್ಸಿಗೆ ಅಚ್ಚೊತ್ತಿದ್ದಷ್ಟೇ ಅಲ್ಲ, ಹೃದಯಾಂತ ರಾಳದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಜಲತರಂಗಗಳು ಭಾವತರಂಗವನ್ನು ಕದಡಿ ದ್ದವು. ಇತ್ತೀಚೆಗಂತೂ ಸಣ್ಣಪುಟ್ಟ ಮಳೆಗೇ ಗಿರಿಯು ಧರೆಗೆ ಉರುಳುವುದನ್ನು ನಾವು ನೋಡು ತ್ತಿದ್ದೇವೆ.

ಮುಗಿಲೆತ್ತರಕ್ಕೆ ಬೆಳೆದು ನಿಂತ ದಷ್ಟಪುಷ್ಟ ಮರಗಳು ಧರಾಶಾಹಿಯಾಗುವುದನ್ನು ಕಾಣುತ್ತಿದ್ದೇವೆ. ಇಂದಿನ ದಿನಗಳಲ್ಲಿ ಪ್ರವಾಹ, ಭೂಕುಸಿತ, ಮರ ಉರುಳುವುದು ಸರ್ವೇಸಾಮಾನ್ಯ ಎನ್ನುವಂತಾ ಗಿದೆ. ಇದಕ್ಕೆ ಉದಾಹರಣೆ ಎಂಬಂತೆ, ‘ವಾಂಗ್ ವಿಯಾನ್’ ಹೆಸರಿನ ಊರಿನಿಂದ ನಾವು ‘ಲುವಾಂಗ್ ಪ್ರಬಾಂಗ್’ ಪಟ್ಟಣಕ್ಕೆ ಹೋಗುವಾಗ, ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿದ ಕಾರಣದಿಂದ ಕೆಲವು ಗಂಟೆ ರಸ್ತೆಯಲ್ಲಿಯೇ ಕಳೆಯಬೇಕಾದ ಪ್ರಸಂಗವೂ ಒದಗಿ ಬಂದಿತ್ತು.

ಅಂಥದ್ದರಲ್ಲಿ, ಶೈಲ ಶಿಖರದ ಮೇಲೆ, ನಿತ್ಯಪ್ರವಾಹದ ಮಧ್ಯದಲ್ಲಿ, ಜಲಧಾರೆಗೆ ಎದೆಯೊಡ್ಡಿ ನಿಂತಿದೆ ಎಂದಾದರೆ, ಆ ಏಕಪಾದುವಿನ ತಂತು ಎಷ್ಟು ಸದೃಢವಾಗಿರಬೇಕು? ಎಂದೆನಿಸಿತು.

ಲಾವೋಸ್ ದೇಶದಲ್ಲಿ ಇಂಥ ಒಂದು ಪವಾಡ ಅಥವಾ ಕಾರ್ಯ ಸಾಧ್ಯ ಎಂದು ಮನದಟ್ಟಾಗಲು ಬಹಳ ಸಮಯ ಬೇಕಾಗಲಿಲ್ಲ. ಬಹುಶಃ ಆ ಮರ ಇಡೀ ಲಾವೋಸ್ ದೇಶಕ್ಕೆ ಮಾದರಿಯಾಗಿರ ಬಹುದು, ಅಥವಾ ಲಾವೋಸ್ ದೇಶವೇ ಆ ಮರಕ್ಕೆ ಉದಾಹರಣೆಯಾಗಿ, ಸ್ಪೂರ್ತಿ ಯಾಗಿರಲೂ ಬಹುದು.

ಏಕೆ ಎಂದು ಅರ್ಥವಾಗಬೇಕಾದರೆ, ಲಾವೋಸ್ ದೇಶದ ಇತಿಹಾಸ, ಅನುಭವಿಸಿದ ನಷ್ಟ, ಇಂದಿಗೂ ಪಡುತ್ತಿರುವ ಕಷ್ಟದ ಕತೆಯನ್ನು ನೀವು ಕೇಳಬೇಕು. ಲಾವೋಸ್ ಕೂಡ ಒಂದು ಕಾಲದಲ್ಲಿ ಯುದ್ಧ ಮಾಡಿದ, ಬಾಂಬ್ ದಾಳಿಗೆ ಒಳಗಾದ ದೇಶವೇ. ಆದರೆ ತಾನು ಅನುಭವಿಸಿದ ಅಂತರ್ಯುದ್ಧಕ್ಕಿಂತ ಅಮೆರಿಕ ಸುರಿಸಿದ ಬಾಂಬ್ ದಾಳಿಗೆ ಘಾಸಿಗೊಂಡದ್ದೇ ಹೆಚ್ಚು.

ಲಾವೋಸ್‌ನಲ್ಲಿ 1953ರಿಂದ 1975ರವರೆಗೆ ಹಲವು ವಿಧದಲ್ಲಿ ಭೀಕರವಾದ ಯುದ್ಧಗಳು ನಡೆದವು. ಅದರಲ್ಲೂ 1964ರಿಂದ 1973ರವರೆಗೆ ಅಮೆರಿಕ ಲಾವೋಸ್ ಮೇಲೆ ಭೀಕರವಾದ ಬಾಂಬ್ ದಾಳಿ ಮಾಡಿತ್ತು. ಆ ಕಾಲದಲ್ಲಿ ಪಕ್ಕದಲ್ಲಿಯೇ ಇರುವ ವಿಯಟ್ನಾಂನಲ್ಲಿ ಯುದ್ಧ ನಡೆಯುತ್ತಿದ್ದ ಕಾರಣ, ಲಾವೋಸ್ ಮೇಲೆ ಅಂದು ಅಮೆರಿಕ ಮಾಡಿದ ದಾಳಿ ಆ ಕಾಲದಲ್ಲಿ ಸುದ್ದಿ ಆಗಲೇ ಇಲ್ಲ. ಇಲ್ಲದಿ ದ್ದರೆ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಮೇಲೆ ನಡೆದ ದಾಳಿಗಿಂತಲೂ ಭೀಕರವಾದ ದಾಳಿ ಲಾವೋಸ್ ಮೇಲೆ ನಡೆದಿತ್ತು. ಅದೂ ತನ್ನದಲ್ಲದ ತಪ್ಪಿಗಾಗಿ!

ಹೋಗಲಿ, ಒಂದೆರಡು ವರ್ಷವೇ ಅಂದರೆ ಅದೂ ಅಲ್ಲ. ಸತತ ಒಂಬತ್ತು ವರ್ಷ, ಪ್ರತಿನಿತ್ಯ, ಸರಾಸರಿ ಪ್ರತಿ ಎಂಟು ನಿಮಿಷಕ್ಕೆ ಒಮ್ಮೆ ಒಂದು ವೈಮಾನಿಕ ದಾಳಿ! ಲಾವೋಸ್‌ನ ಯಾವುದಾ ದರೂ ಒಂದು ಭೂಭಾಗದ ಮೇಲೆ ವೈಮಾನಿಕ ದಾಳಿ ನಡೆಯುತ್ತಿತ್ತು. ದಾಖಲೆಗಳ ಪ್ರಕಾರ, ಒಟ್ಟೂ ಆರು ಲಕ್ಷ ಬಾರಿ ಲಾವೋಸ್ ಮೇಲೆ ವೈಮಾನಿಕ ದಾಳಿಯಾಗಿದ್ದು ಇಪ್ಪತ್ತು ಲಕ್ಷ ಟನ್‌ಗಿಂತಲೂ ಹೆಚ್ಚು ಬಾಂಬ್ ಸುರಿದಿದೆ.

ಅದರಲ್ಲಿ ಕೆಲವು ಸಿಡಿದಿದ್ದರೂ ಸಿಡಿಯದೆ ಉಳಿದದ್ದೇ ಹೆಚ್ಚು. ಆಗ ಸಿಡಿಯದೆ ಉಳಿದಿದ್ದ ಬಾಂಬು ಗಳು ಕಾಲಾನಂತರ, ಇಂದಿನವರೆಗೂ ಆಗಾಗ ಸಿಡಿಯುತ್ತಿವೆ. ನಾನು ಲಾವೋಸ್‌ಗೆ ಹೋದಾಗ ನೋಡಿದಂತೆ, ಈ ದೇಶದ ಬಹುಭಾಗ ಪರ್ವತಗಳಿಂದ ಆವರಿಸಿಕೊಂಡಿದೆ. ನನಗೆ ಸಿಕ್ಕ ಮಾಹಿತಿಯ ಪ್ರಕಾರ, ಅಮೆರಿಕ ಸುರಿಸಿದ ಬಾಂಬ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪರ್ವತದ ಮೇಲೆ ಬಿದ್ದಿವೆ. ವಿಮಾನ ಮತ್ತು ಪರ್ವತದ ನಡುವೆ ಅಂತರ ಕಡಿಮೆ ಇದ್ದ ಕಾರಣ, ಬಹುತೇಕ ಬಾಂಬ್‌ ಗಳು ಸಿಡಿಯದೆ, ಹಾಗೆಯೇ ಅಲ್ಲಲ್ಲಿ ಉಳಿದುಕೊಂಡಿವೆ.

ಕೆಲವಷ್ಟು ಬಾಂಬ್‌ಗಳು ಕೆಳಗೆ ಉರುಳಿ ಯಾವುದೋ ಮರದ ಬುಡದ, ಹೊಂಡದ ಸಿಕ್ಕಿ ಹಾಕಿ ಕೊಂಡಿವೆ. ಕ್ರಮೇಣ ಅವುಗಳ ಮೇಲೆ ಮಣ್ಣು ಮುಚ್ಚಿಕೊಂಡಿದೆ. ಇಂಥ ಬಾಂಬ್‌ಗಳ ಸಂಖ್ಯೆಯೇ ಲಕ್ಷದಷ್ಟಿದೆ, ಈಗ ಅದನ್ನೆಲ್ಲ ಹುಡುಕುವ ಕಾರ್ಯ ಇನ್ನೂ ಜಾರಿಯಲ್ಲಿದೆ. ಅಮೆರಿಕ ಸುರಿಸಿದ ಒಂದೊಂದು ಕ್ಲಸ್ಟರ್‌ನಲ್ಲಿನಲ್ಲಿ 600 ರಿಂದ 700 ಸಣ್ಣ ಸಣ್ಣ ಬಾಂಬುಗಳು ಇದ್ದ ದಾಖಲೆ ಇದೆ.

ವಿಪರ್ಯಾಸ ಎಂದರೆ, ಯುದ್ಧದ ನಂತರದ ಬಾಂಬ್ ಸಿಡಿದು ಮೃತರಾದವರಲ್ಲಿ ಹೆಚ್ಚಿನವರು ಮಕ್ಕಳು. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ಕಳೆದುಕೊಂಡವರೂ ಮಕ್ಕಳೇ. ಅದರಲ್ಲಿ ಬಹುತೇಕ ಮಕ್ಕಳು ಆಟ ಆಡಲು ಹೋದವರು. ಇನ್ನು ದೊಡ್ಡವರಲ್ಲಿ, ಕೃಷಿ ಮಾಡಲು ತೆರಳಿದವರು. ನಾವು ಚಿಕ್ಕವರಿದ್ದಾಗ, ಸಣ್ಣ ಜಾಗದಲ್ಲಿ ಕ್ರಿಕೆಟ್ ಆಡುವುದು ಮಾಮೂಲಾಗಿತ್ತು. ಆಗೆಲ್ಲ ಚೆಂಡು ದೂರ ಹೋದರೆ, ಗಿಡಗಂಟಿಗಳ ಮಧ್ಯದಿಂದ ಅದನ್ನು ಅರಸಿ, ಹೆಕ್ಕಿಕೊಂಡು ಬರುತ್ತಿದ್ದೆವು.

ಲಾವೋಸ್‌ನಲ್ಲಿ ಇದೇ ರೀತಿ ಮಟ್ಟಿಯಲ್ಲಿ ಚೆಂಡು ಹುಡುಕಲು ಹೋಗಿ ಪ್ರಾಣ ಕಳೆದುಕೊಂಡ ಮಕ್ಕಳಿದ್ದಾರೆ. ಶಾಲೆಗೆ ಹೋಗುವ ದಾರಿಯಲ್ಲಿ ವಿಚಿತ್ರವಾದ ಏನೋ ಒಂದು ಲೋಹದ ವಸ್ತು ಕಾಣುತ್ತಿದೆ ಎಂದು ಕುತೂಹಲಕ್ಕೆ ಕೈಗೆತ್ತಿಕೊಂಡಾಗ ಸಿಡಿದು ಸತ್ತ ಮಕ್ಕಳಿದ್ದಾರೆ, ಕೈ ಕಳೆದುಕೊಂಡ ವರೂ ಇದ್ದಾರೆ.

ಎಷ್ಟೋ ಜನ ಕೃಷಿಕರು ಹೊಸ ಭೂಮಿಯಲ್ಲಿ ಕೃಷಿ ಮಾಡಲೆಂದು ಭೂಮಿ ಅಗೆಯುವಾಗ ಸಿಡಿದು ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ಕೆಲವೊಮ್ಮೆ ಸೂರ್ಯನ ಶಾಖ ಹೆಚ್ಚಾದಾಗ ಕೆಲವು ಬಾಂಬ್‌ ಗಳು ತಮ್ಮಷ್ಟಕ್ಕೆ ತಾವೇ ಸಿಡಿಯುತ್ತವೆ.

ಲಾವೋಸ್‌ನ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಮೊದಲ ಪಾಠ ಭಾಷೆಯೂ ಅಲ್ಲ, ಲಿಪಿಯೂ ಅಲ್ಲ, ಸಂಖ್ಯೆಯೂ ಅಲ್ಲ. ಬದಲಾಗಿ, ಅವರ ಸುತ್ತಮುತ್ತ ಯಾವುದಾದರೂ ವಸ್ತು ಕಂಡಾಗ ಏನು ಮಾಡಬೇಕು ಎಂದು ಹೇಳಿಕೊಡುವುದು. ಯಾವುದನ್ನು ಮುಟ್ಟಬೇಕು, ಮುಟ್ಟಬಾರದು ಎಂದು ತಿಳಿಸಿಕೊಡುವುದು.

ಇನ್ನೂ ನೇರಾನೇರ ಹೇಳುವುದಾದರೆ, ಬಾಂಬ್ ಹೇಗಿರುತ್ತದೆ, ಬಾಂಬ್ ಕಂಡರೆ ಏನು ಮಾಡಬೇಕು?ಯಾರನ್ನು ಸಂಪರ್ಕಿಸಬೇಕು? ಯಾರಿಗೆ ಹೇಳಬೇಕು? ಇತ್ಯಾದಿ, ಇತ್ಯಾದಿ ವಿಷಯಗಳೇ ಮೊದಲ ಮತ್ತು ಪ್ರಮುಖ ಪಾಠ. ಜೀವ ಉಳಿದರೆ ತಾನೆ ಇತರ ಪಾಠಗಳು?

ಲಾವೋಸ್‌ನ ಆಂತರಿಕ ಯುದ್ಧದ ಸಂದರ್ಭದಲ್ಲಿ, ಅಮೆರಿಕ ಲಾವೋಸ್ ಮೇಲೆ ಬಾಂಬ್ ಸುರಿಸಿದ ಸಂದರ್ಭದಲ್ಲಿ ಆದ ಜೀವಹಾನಿ ಒಂದು ಕಡೆ ಇರಲಿ. ಅಮೆರಿಕದ ಕಾರ್ಯಾಚರಣೆ ಮುಗಿದು ಇಂದಿಗೆ ಐವತ್ತು ವರ್ಷ ಕಳೆದಿದೆ. ಈ ಅವಧಿಯಲ್ಲಿ, ಭೂಮಿಯಲ್ಲಿ ಆಲ್ಲಲ್ಲಿ ಹೂತು ಬಿದ್ದ ಬಾಂಬ್ ಸಿಡಿದು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ಕೈ, ಕಾಲು, ಕಣ್ಣು ಕಳೆದುಕೊಂಡವರು ಅದೆಷ್ಟೋ ಜನ. ಲಾವೋಸ್ ದೇಶದ ಜನರು ಕಳೆದ ಐದು ದಶಕದಿಂದ ಕೇವಲ ಮೂವತ್ತು ಪ್ರತಿಶತದಷ್ಟು ಭೂಮಿಯನ್ನು ಮಾತ್ರ ಹುಡುಕಿ, ಹೂತು ಹೋದ ಬಾಂಬ್ ಹುಡುಕಿ ನಿಷ್ಕ್ರಿಯಗೊಳಿಸುವಲ್ಲಿ ಸಫಲರಾಗಿದ್ದಾರೆ. ಉಳಿದ ಎಪ್ಪತ್ತು ಪ್ರತಿಶತ ದಷ್ಟು ಭೂಮಿಯನ್ನು ಹುಡುಕಲು ಇನ್ನೂ ನೂರು ವರ್ಷ ಬೇಕಂತೆ!

ಇಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಬೊಗಳೆ ಬಿಡುವ ಶಕ್ತಿಶಾಲಿ ದೇಶಗಳೆಲ್ಲ ಒಮ್ಮೆ ಲಾವೋಸ್ ಕಡೆಗೂ ತಿರುಗಿ ನೋಡಬೇಕು. ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿ ಕೊಳ್ಳಬೇಕು. ಉಳಿದವರು ಸಹಾಯ ಮಾಡಲಿ, ಬಿಡಲಿ, ಲಾವೋಸ್ ದೇಶದ ಜನರಂತೂ ಕಷ್ಟ ಪಡುತ್ತಿದ್ದಾರೆ. ತಮ್ಮದೇ ದೇಶದ ಭೂಮಿಯಲ್ಲಿ ತಮ್ಮ ಉಳಿವಿಗಾಗಿ ಅಷ್ಟೇ ಅಲ್ಲ, ಮುಂದಿನ ಪೀಳಿಗೆಗಾಗಿ ಇಂದಿಗೂ ಹೋರಾಟ ನಡೆಸಿದ್ದಾರೆ. ಕುವಾನ್ ಸಿ ಜಲಪಾತದಲ್ಲಿ ಪ್ರವಾಹಕ್ಕೆ ಮೈ ಒಡ್ಡಿ ನಿಂತ ಮರದಂತೆ!

ಯುದ್ಧ ಅಪಾಯಕಾರಿ, ವಿನಾಶಕಾರಿ. ಯುದ್ಧ ಎಂದರೆ ಕೇವಲ ಎರಡು ದೇಶಗಳ ನಡುವೆ ಮಾತ್ರ ನಡೆಯುವಂಥದ್ದು ಎಂದು ತಿಳಿದರೆ ಮೂರ್ಖತನವಾದೀತು. ಯುದ್ಧ ಎಂದರೆ ಅಕ್ಕಪಕ್ಕದ ದೇಶ ಗಳ ಮೇಲೆಯೂ. ಕೆಲವೊಮ್ಮೆ ಪ್ರಪಂಚದಾದ್ಯಂತ ಪರಿಣಾಮ ಬೀರುವಂಥ ಸಂಗತಿ. ಯುದ್ಧ ಕೇವಲ ಸೈನಿಕರನ್ನು ಆ ದೇಶದ ಜನರನ್ನು ಮಾತ್ರ ಗಾಯಗೊಳಿಸುವುದಿಲ್ಲ, ಆ ದೇಶದ ಭೂಮಿ ಯನ್ನೂ ಘಾಸಿಗೊಳಿಸುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕು. ಲಾವೋಸ್ ನಲ್ಲಿರುವ ‘ಖಮೌನೆ’ ಪ್ರದೇಶ ಕೂಡ ಇಂಥ ಒಂದು ಭೀಕರ ಬಾಂಬ್ ದಾಳಿಗೆ ಒಳಗಾಗಿತ್ತು. ಯುದ್ಧ ಮುಗಿದ ನಂತರ ಈ ಪ್ರದೇಶದಲ್ಲಿ ಬಿದ್ದ ಬಾಂಬ್‌ನ ಪಳೆಯುಳಿಕೆಗಳನ್ನು ಸ್ವಚ್ಛ ಮಾಡುವುದಾದರೂ ಹೇಗೆ? ಅದನ್ನು ಕೊಂಡು ಹೋಗಿ ಒಂದು ಕಡೆ ರಾಶಿ ಹಾಕಬೇಕು ಎಂದರೂ ಸಾಕಷ್ಟು ಖರ್ಚಾಗುತ್ತದೆ. ಹಾಗೆಯೇ ಎಕರೆಗಟ್ಟಲೆ ಭೂಮಿಯೂ ಗುಜರಿಯ ಕೊಪ್ಪೆಯಾಗುತ್ತದೆ. ಅದಕ್ಕೆ ಉಪಾಯವನ್ನು ಕಂಡುಕೊಂಡ ಖಮೌನೆ ಪ್ರದೇಶದ ಜನ ಬಾಂಬ್‌ನ ಪಳೆಯುಳಿಕೆಗಳನ್ನು ತಮ್ಮ ಮನೆಗಳಿಗೆ ಅಥವಾ ಸಾರ್ವಜನಿಕರಿಗೆ ಉಪಯೋಗವಾಗುವ ವಸ್ತುಗಳನ್ನು ತಯಾರಿಸಲು ಆರಂಭಿಸಿದರು. ಆ ಪ್ರದೇಶದಲ್ಲಿ ಇಂದಿಗೂ ಬಾಂಬ್ ನಿಂದ ತಯಾರಿಸಿದ ಸಾಕಷ್ಟು ವಸ್ತುಗಳನ್ನು ಕಾಣಬಹುದು. ಅದು ಗೃಹೋಪಯೋಗಿ ಆಗಿರಬಹುದು, ಹೂವಿನ ಕುಂಡ ಇರಬಹುದು, ನೀರನ್ನು ಶೇಖರಿಸುವ ತೊಟ್ಟಿಯಾಗಿರಬಹುದು ಅಥವಾ ಅಲಂಕಾರಕ್ಕಾಗಿ ಬಳಸುವ ವಸ್ತುವೇ ಆಗಿರಬಹುದು.

ಅಷ್ಟೇ ಅಲ್ಲದೆ, ಸಾರ್ವಜನಿಕರ ಉಪಯೋಗಕ್ಕೆ ಬರುವಂಥ ಸಣ್ಣ ದೋಣಿ, ಮಾರ್ಗದ ಬದಿಯಲ್ಲಿನ ಆಸನ ಇತ್ಯಾದಿ. ನಮ್ಮಲ್ಲಿ ತಮಾಷೆಗಾಗಿ ಒಂದು ಮಾತು ಹೇಳುತ್ತಾರೆ- “ನಿಮಗರಿವಿಲ್ಲದಂತೆಯೇ ಹಿಂದಿನಿಂದ ಯಾರಾದರೂ ನಿಮ್ಮನ್ನು ಕೆರೆಗೆ ತಳ್ಳಿದರೆ ಭಯಪಡಬೇಡಿ, ಒಂದು ನಾಲ್ಕು ಮೀನು ಹಿಡಿದುಕೊಂಡು ಬನ್ನಿ" ಎಂದು.

ಖಮೌನೆ ಪ್ರದೇಶದ ಜನರು ಇದನ್ನು ಪ್ರತ್ಯಕ್ಷವಾಗಿ ಅನುಕರಿಸಿದ್ದಾರೆ ಎಂದೆನಿಸುತ್ತದೆ. ತಮ್ಮ ಊರಿನ ಮೇಲೆ ಬಿದ್ದ ಬಾಂಬ್‌ಗಳನ್ನೇ ಬಳಸಿ ಬಳಸಿ ಮನೆ ಕಟ್ಟಿಕೊಂಡಿದ್ದಾರೆ, ಊರು ಕಟ್ಟಿಕೊಂಡಿ ದ್ದಾರೆ. ಹಾಗಾಗಿ, “ಯಾರಾದರೂ ನಮ್ಮ ಮೇಲೆ ಬಾಂಬ್ ಎಸೆದರೆ ಏನು ಮಾಡಬೇಕು...?" ಎಂಬ ಪ್ರಶ್ನೆಗೆ ಉತ್ತರ, “ಅದನ್ನೆಲ್ಲ ಆರಿಸಿ, ಖಮೌನೆಯಂಥ ಊರು ಕಟ್ಟಿಕೊಳ್ಳಬೇಕು. ಅಲ್ಲ, ಲಾವೋಸ್‌ ನಂತೆ ದೇಶ ಕಟ್ಟಿಕೊಳ್ಳಬೇಕು...!" ಅಷ್ಟಕ್ಕೂ ಲಾವೋಸ್ ಮೇಲೆ ಒಂಬತ್ತು ವರ್ಷ ಅಮೆರಿಕ ನಿರಂತರ ಬಾಂಬ್ ದಾಳಿ ಮಾಡಿದ್ದೇಕೆ...!?

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author