Rangaswamy Mookanahalli Column: ನಿರ್ವೀಯತೆಯೇ ಸಾವು, ಆತ್ಮಾಭಿಮಾನವೇ ಬದುಕು !
ಸ್ವಾಭಿಮಾನ ಎಂಬುದು ಒಂದು ಅನನ್ಯ ಆಸ್ತಿ ಹಾಗೂ ಗುಣ-ವೈಶಿಷ್ಟ್ಯ. ಇದನ್ನು ಕಲಿಸದೆ, ಬೆಳೆಸದೆ, ಏನೇ ಮಾಡಿದರೂ ಈ ದೇಶದ ಉದ್ಧಾರ ಅಸಾಧ್ಯ. ಜಗತ್ತಿನಾದ್ಯಂತ ಭಾರತದ ಅಸ್ಮಿತೆಯನ್ನು, ಭಾರತದ ‘ನಾನು’ ಅಂದರೆ ಸ್ವಾಭಿಮಾನವನ್ನು ಎತ್ತಿಹಿಡಿಯುವ ಕೆಲಸವನ್ನು ಪ್ರಧಾನ ಸೇವಕರು ಮಾಡುತ್ತಿzರೆ. ಆದರೇನು? ದೇಶದ ಜನರಲ್ಲಿ, ಅವರ ಪಕ್ಷದ ನೇತಾರರಲ್ಲಿ ನಾನು ಎನ್ನುವ ಸ್ವಾಭಿಮಾನ ತುಂಬದ ಹೊರತು ಬೇರೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ.


ವಿಶ್ವರಂಗ
mookanahalli@gmail.com
ದೇಶ, ಭಾಷೆಗಳಿಗೆ ಹೇಗೆ ಅಸ್ಮಿತೆ ಎನ್ನುವುದನ್ನ ನಾವು ಕಟ್ಟಿಕೊಂಡಿದ್ದೇವೆ ಹಾಗೆಯೇ ‘ನಾನು’ ಎನ್ನುವ ಬಗ್ಗೆ ಗೌರವ, ಅಸ್ಮಿತೆ ಬೆಳೆಸಿಕೊಳ್ಳಬೇಕು. ‘ನಾನು’ ಎನ್ನುವುದು ‘ಅಹಂ’ ಆಗಿ ಉಳಿದು ಕೊಂಡರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಾನು ಎನ್ನುವುದು ಸ್ವಾಭಿಮಾನ ವಾಗಬೇಕು, ಅಂತಃಸತ್ವವನ್ನ ವೃದ್ಧಿಸಬೇಕು, ಸ್ವಕಲ್ಯಾಣಕ್ಕೆ, ಲೋಕಕಲ್ಯಾಣಕ್ಕೆ ಸ್ವಲ್ಪವಾದರೂ ಕಾಣಿಕೆ ನೀಡುವಂತಿರಬೇಕು. ನಾನು ಎನ್ನುವುದು ಇತರರ ‘ನಾನು’ವಿನೊಂದಿಗೆ ಎಂದಿಗೂ ಗುದ್ದಾಟಕ್ಕೆ ಇಳಿಯಬಾರದು.
‘ನಾನು ಏನು?’ ಎನ್ನುವ ಪ್ರಶ್ನೆ ಆತ್ಮ ಸಾಕ್ಷಾತ್ಕಾರಕ್ಕೆ ದಾರಿಯಾಗಬೇಕು. ನಾನು ಎನ್ನುವ ಗರಿಮೆ, ಹಿರಿಮೆಗಳಿಲ್ಲದ ಮನುಷ್ಯ ಬದುಕಿದ್ದೂ ಸತ್ತಂತೆ! ಬನ್ನಿ, ಒಂದಷ್ಟು ಘಟನೆಗಳನ್ನು ನೋಡೋಣ. ನಾನು ಎನ್ನುವ ಗರಿಮೆಯಿಲ್ಲದ ಜನರಿಂದ ತುಂಬಿದ ದೇಶ ಎಂದಿಗೂ ವಿಶ್ವಗುರುವಾಗಲು ಸಾಧ್ಯ ವಿಲ್ಲ. ಜನರಲ್ಲಿ ಆತ್ಮಾಭಿಮಾನ ಬೆಳೆದ ದಿನ ದೇಶ ವಿಶ್ವಗುರುವಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ.
ಘಟನೆ ೧: ಜಗತ್ತಿನ ಯಾವುದೇ ಏರ್‌ಪೋರ್ಟ್‌ನಲ್ಲಿ ಇಳಿದು ಟಾಯ್ಲೆಟ್ ಪ್ರವೇಶಿಸಿ, ಅವು ಸ್ವಚ್ಛ ವಾಗಿರುತ್ತವೆ. ಅ ಕುಳಿತು ಊಟ ಮಾಡಲು ಯೋಗ್ಯ ಎನ್ನುವಷ್ಟು ಸ್ವಚ್ಛ! ಅದನ್ನ ಶುಚಿಗೊಳಿಸಿ ದವರು ನಿಮ್ಮ ಕಣ್ಣಿಗೂ ಬೀಳುವುದಿಲ್ಲ. ಸಿಂಗಪೂರ್ ಏರ್‌ಪೋರ್ಟ್ ಟಾಯ್ಲೆಟ್‌ಗಳು ಇನ್ನೊಂದು ಹೆಜ್ಜೆ ಮುಂದೆ!
ಇದನ್ನೂ ಓದಿ: Rangaswamy Mookanahalli Column: ನಮ್ಮ ಉದ್ಯಮಿಗಳಿಗೂ ಬೇಕು ಹೆಚ್ಚಿನ ಸವಲತ್ತು !
ಶೌಚಾಲಯದಲ್ಲಿ ಇರಿಸಿರುವ ಕನ್ನಡಿಗೆ ಸಮೀಪ ಹೋದರೆ ಸಾಕು ಅದು ‘ಟಚ್ ಸ್ಕ್ರೀನ್’ನಂತೆ ಬದಲಾಗುತ್ತದೆ. ಅಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯ ಹೆಸರು, ವಯಸ್ಸು, ಎಷ್ಟು ವರ್ಷದಿಂದ ಈ ಕೆಲಸ ಮಾಡುತ್ತಿzರೆ ಎನ್ನುವ ಮಾಹಿತಿ ಜತೆಗೆ ಕೊನೆಯಲ್ಲಿ ‘ಇಲ್ಲಿನ ಶೌಚಾಲಯದ ಸ್ವಚ್ಛತೆ ಬಗ್ಗೆ ಎಷ್ಟು ಅಂಕ ನೀಡುವಿರಿ?’ ಎನ್ನುವ ಸಣ್ಣ ಪ್ರಶ್ನೆ, ರೇಟಿಂಗ್ ನೀಡಲು ಅನುಕೂಲವಾಗುವಂತೆ ನಾಲ್ಕೈದು ಆಯ್ಕೆಗಳು.
ಕೈ ತೊಳೆಯುವ ವೇಳೆ ನೀವು ರೇಟಿಂಗ್ ಕೂಡ ನೀಡಿ ಬರಬಹುದು. ಜಗತ್ತಿನ ಬಹುಭಾಗ, ಅದರಲ್ಲೂ ಮುಂದುವರಿದ ದೇಶಗಳಲ್ಲಿ ಇದು ತೀರಾ ಸಾಮಾನ್ಯ. ಇಂಥ ಒಂದು ಅನುಭವ ಕಟ್ಟಿಕೊಂಡು ನೀವು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಇಳಿದು ಟಾಯ್ಲೆಟ್ ಪ್ರವೇಶಿಸಿ ಸಾಕು. ಸ್ವಚ್ಛತೆ ಬಗ್ಗೆ ದೂರು ವಂತಿಲ್ಲ. ತೀರಾ ಜಪಾನಿನ ಮಟ್ಟಕ್ಕೆ ಅಲ್ಲದಿದ್ದರೂ ಯುರೋಪಿಯನ್ ಮಟ್ಟದ ಸ್ವಚ್ಛತೆ ಖಂಡಿತ ಕಾಣಸಿಗುತ್ತದೆ. ಆದರೆ ಅದನ್ನ ಶುದ್ಧಗೊಳಿಸುವವನ ಗುಲಾಮಗಿರಿ, ಕಾಕಾ ಹಿಡಿಯುವಿಕೆ ಬೇಸರ ಗೊಳಿಸದಿದ್ದರೆ ಹೇಳಿ!
ಕೈಗೆ ಟಿಶ್ಯೂ ಇಡುವುದಕ್ಕೆ ಬರುವುದು, ಇಲ್ಲಿ ಹೋಗಿ ಎನ್ನುವುದು, ಬೇಡವೆಂದರೂ ‘ಐ ಕಾಂಟ್ಯಾಕ್ಟ್’ ಬೆಳೆಸಿ ನಮಸ್ಕಾರ, ಗುಡ್ ಮಾರ್ನಿಂಗ್ ಹೇಳುವುದು ಇವೆಲ್ಲ ಏಕೆ ಗೊತ್ತೇ? ಕೈಗೆ 10/20 ರುಪಾಯಿ ಕೊಡಲಿ ಎನ್ನುವುದಕ್ಕೆ ಮಾತ್ರ. ಈ ರೀತಿಯ ಸ್ವಾಭಿಮಾನ ಬಿಟ್ಟವರನ್ನ ಬೇರೆಲ್ಲೂ ಕಂಡ ನೆನಪು ನನಗಿಲ್ಲ. ಅನ್ಯದೇಶಗಳಲ್ಲಿ ಸ್ವಚ್ಛಗೊಳಿಸುವ ಸಮಯದಲ್ಲಿ ‘ಶೌಚಾಲಯ ಮುಚ್ಚಿದೆ, ಬೇರೆ ಉಪಯೋಗಿಸಿ’ ಎನ್ನುವ ಫಲಕ ಕಾಣುತ್ತದೆ.

ಆಗಲೂ ನಮಗೆ ಸ್ವಚ್ಛಗೊಳಿಸುವ ವ್ಯಕ್ತಿ ಕಣ್ಣಿಗೆ ಬೀಳುವುದಿಲ್ಲ. ಆದರೆ ನಮ್ಮಲ್ಲಿ ಪೂರ್ಣಾವಧಿ ಸ್ವಚ್ಛಗೊಳಿಸುವವರು ಅ ಇರುತ್ತಾರೆ. ಎ ವ್ಯಕ್ತಿಗಳೊಡನೆ ‘ಐ ಕಾಂಟ್ಯಾಕ್ಟ್’ ಬೆಳೆಸಲು ಪ್ರಯತ್ನಿಸು ತ್ತಾರೆ. ಮಾಡುವ ಕೆಲಸಕ್ಕೆ ವೇತನ ಸಿಕ್ಕ ಮೇಲೂ ಮೇಲಾದಾಯಕ್ಕೆ ಅವರ ಮನಸ್ಸು ಸದಾ ಹಂಬಲಿಸುತ್ತಿರುತ್ತದೆ.
ಘಟನೆ 2: ಸೆಕ್ಯುರಿಟಿ ನಂತರ ನೀರಿನ ಬಾಟಲಿ ಬಿಡುವುದಿಲ್ಲ, ಇದು ಜಗತ್ತಿನಾದ್ಯಂತ ಪಾಲಿಸುವ ನಿಯಮ. ಇದರ ಬಗ್ಗೆ ಯಾವುದೇ ಮಾತಿಲ್ಲ. ಮುಚ್ಚಳದ ಸೀಲ್ ಕೂಡ ಓಪನ್ ಆಗದ ನೀರಿನ ಬಾಟಲಿಯನ್ನು ಕಸದ ಬುಟ್ಟಿಗೆ ಹಾಕುವುದಕ್ಕೆ ಮನಸ್ಸಾಗದೆ ಅದನ್ನ ತೆಗೆದು ಇಟ್ಟುಕೊಳ್ಳಿ ಬಿಸಾಡಬೇಡಿ ಎನ್ನುವ ರಿಕ್ವೆ ಮಾಡಿದರೆ, ಯುರೋಪಿನಲ್ಲಿ ಯಾವುದೇ ಭಾವುಕತೆಗೆ ಒಳಗಾಗದೆ ಅದನ್ನ ಬಿಸಾಕುತ್ತಾರೆ. ನಮ್ಮಲ್ಲಿ ಕೇಳುವುದೇ ಬೇಡ, ಅದನ್ನ ಹಕ್ಕು ಎನ್ನುವಂತೆ ತೆಗೆದಿಟ್ಟು ಕೊಳ್ಳುತ್ತಾರೆ. ನೀರಿನ ಬಾಟಲಿ ವಿಷಯದಲ್ಲಿ ಸಂಪನ್ಮೂಲ ಹಾಳಾಗುವುದು ಬೇಡ ಎನ್ನುವ ಅಂಶವನ್ನು ಮುಂದೆ ಮಾಡಿ ಅದನ್ನು ನಾವು ಕಡೆಗಣಿಸಬಹುದು. ಆದರೆ ಲಗೇಜ್ ಮೇಲೆ ಚಾಕ್‌ಪೀಸ್‌ನಿಂದ ಗುರುತು ಮಾಡುತ್ತಾರೆ.
ಏರ್‌ಪೋರ್ಟ್‌ನಿಂದ ಹೊರಬರುವ ಸಮಯದಲ್ಲಿ ಇರುವ ಕಸ್ಟಮ್ಸನವರು ಈ ರೀತಿ ಗುರುತು ಹಾಕಿದ ಲಗೇಜ್‌ಗಳನ್ನು ತೆರೆಸುತ್ತಾರೆ. ತಂತ್ರಜ್ಞಾನದ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿರುವ ಬೆಂಗಳೂರು ನಗರದ ಏರ್‌ಪೋರ್ಟ್ ಸ್ಥಿತಿಯಿದು.
ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಸಂಪಾದನೆಯಿದ್ದರೂ ‘ನಾನು’ ಎನ್ನುವ ಗರಿಮೆ ಮಾತ್ರ ಶೂನ್ಯ. ನನ್ನದಲ್ಲದ ವಸ್ತುವನ್ನು ತೆಗೆದುಕೊಳ್ಳುವುದು ತಪ್ಪು ಎನ್ನುವುದು ನಮ್ಮ ಜನರಿಗೆ ಅರಿವಾಗುವುದಿಲ್ಲ. ನನ್ನ ವಸ್ತುವೆಲ್ಲವೂ ನನ್ನದೇ, ಹಾಗೆ ಪರರ ವಸ್ತು ಕೂಡ ನನ್ನದೇ ಎನ್ನುವ ಧೋರಣೆ ಬದಲಾಗದೆ, ಮನಸ್ಥಿತಿ ಬದಲಾಗದೆ ದೇಶದ ಪರಿಸ್ಥಿತಿ ಬದಲಾಗುವುದಾದರೂ ಹೇಗೆ?
ಘಟನೆ 3: ಸ್ವಿಸ್ ದೇಶದಲ್ಲಿ ಪ್ರಾಯೋಗಿಕವಾಗಿ ಬೇಸಿಕ್ ಯೂನಿವರ್ಸಲ್ ಇನ್‌ಕಮ್ ಜಾರಿಗೆ ತರುವುದಾಗಿ ಸರಕಾರ 2018ಕ್ಕೂ ಮುಂಚೆ ಘೋಷಣೆ ಮಾಡಿತ್ತು. ಅಂದರೆ ಯಾರಿಗೆ ಕೆಲಸವಿರಲಿ ಬಿಡಲಿ, ಸರಕಾರ ಪ್ರತಿಯೊಬ್ಬ ಪ್ರಜೆಯ ಅಕೌಂಟ್‌ಗೆ ಮಾಸಿಕ 1800 ಸ್ವಿಸ್ ಫ್ರಾಂಕ್ ಹಾಕುವುದಾಗಿ ಹೇಳಿತ್ತು. ಅಲ್ಲಿನ ಜನ ತಕ್ಷಣ ಇದರ ವಿರುದ್ಧ ಪ್ರತಿಭಟನೆಗೆ ಇಳಿದರು. ತಿಂಗಳು ದೊಡ್ಡ ಮಾತು, ದಿನದಲ್ಲಿ ಸರಕಾರ ತನ್ನ ಆದೇಶ ವಾಪಸ್ಸು ಪಡೆಯಿತು.
ಜನರಲ್ಲಿರುವ ನಾನು ಎನ್ನುವ ಹಿರಿಮೆ ಅಂಥದ್ದು. ‘ಆ ದೇಶದ ಪ್ರಜೆಗಳಲ್ಲಿ ಬಹುತೇಕರು ಕೋಟ್ಯಧಿ ಪತಿಗಳು, ಹೀಗಾಗಿ ಅವರಿಗೆ ಸರಕಾರದ ಪುಕ್ಕಟೆ ಹಣ ಬೇಕಿಲ್ಲ, ನಿರಾಕರಿಸಿದ್ದಾರೆ. ನಮ್ಮದು ಬಡದೇಶ, ಅದನ್ನು ಹೇಗೆ ಹೋಲಿಕೆ ಮಾಡುವುದು?’ ಎನ್ನುವ ಪ್ರಶ್ನೆ ನಿಮ್ಮದಾಗಿರಬಹುದು. ಬಡತನ ಬೇರೆ, ಆತ್ಮಗೌರವ ಬೇರೆ. ಆತ್ಮಗೌರವವಿರುವ ಯಾರೊಬ್ಬರೂ ಪುಕ್ಕಟೆ ಸಿಗಲಿ ಎಂದು ಬಯಸುವುದಿಲ್ಲ. ದುಡಿವ ಕೈಗೆ ಕೆಲಸ ಬೇಕು ಎಂದ್ದಷ್ಟೇ ಅವರು ಬಯಸುತ್ತಾರೆ.
ಘಟನೆ ೪: ಸ್ಪೇನ್ ಸೇರಿದಂತೆ ಬಹಳಷ್ಟು ಯುರೋಪಿಯನ್ ದೇಶಗಳು ಆರ್ಥಿಕವಾಗಿ ಜರ್ಜರಿತ ವಾಗಿದ್ದ ಕಾಲಘಟ್ಟವದು. 2009ರಿಂದ 2014ರವರೆಗಿನ 5 ವರ್ಷ ಜನರ ಬದುಕಿನಲ್ಲಿ ಬಹಳಷ್ಟು ನೋವುಂಟು ಮಾಡಿದ ಅವಧಿ. ಆರ್ಥಿಕವಾಗಿ ತೀರಾ ನಿಶ್ಶಕ್ತರಾಗಿದ್ದ ಜನರು ಬೇರೆ ದಾರಿಯಿಲ್ಲದೆ ‘ಕಮ್ಯುನಿಟಿ ಕಿಚನ್’ನಲ್ಲಿ ಆಹಾರವನ್ನ ಪಡೆದುಕೊಳ್ಳುತ್ತಿದ್ದರು. ಆರ್ಥಿಕವಾಗಿ ಉಳ್ಳವರು ಮತ್ತು ಸರಕಾರ ಹೀಗೆ ಜಂಟಿಯಾಗಿ ಪುಕ್ಕಟೆ ಊಟ ನೀಡುವ ಜಾಗಕ್ಕೆ ಕಮ್ಯುನಿಟಿ ಕಿಚನ್ ಎನ್ನಲಾಗುತ್ತದೆ. ಯಾರ ಬಳಿ ಕೆಲಸವಿಲ್ಲ, ಆದಾಯವಿಲ್ಲ ಅಂಥವರು ಇಲ್ಲಿ ಬಂದು ನಿತ್ಯವೂ ಆಹಾರ ಸೇವಿಸ ಬಹುದು. ಎಷ್ಟು ದಿನ ಬೇಕಾದರೂ ಬರಬಹುದು.
ಎಲ್ಲರನ್ನೂ ಗೌರವದಿಂದ ಕಂಡು ಆಹಾರವನ್ನು ನೀಡಲಾಗುತ್ತದೆ. ಬಹಳಷ್ಟು ಜನ ಇಲ್ಲಿ ಆಹಾರ ತಿಂದರೂ ಅದನ್ನ ತಾವೇ ಲೆಕ್ಕವಿಟ್ಟುಕೊಳ್ಳುತ್ತಿದ್ದರು. ಪುಕ್ಕಟೆ ಎನ್ನುವುದು ಮಾರಕ ಎನ್ನುವುದು ಅವರಿಗೆ ಗೊತ್ತಿದೆ. ಹಣವೇ ಇಲ್ಲದ ಮೇಲೆ ಲೆಕ್ಕವಿಟ್ಟುಕೊಂಡು ಏನು ಪ್ರಯೋಜನ ಎನ್ನುವ ಪ್ರಶ್ನೆಗೆ ‘ಇವತ್ತಿಗೆ ಇಲ್ಲ, ನಾಳೆ ಹಣ ಬಂದ ತಕ್ಷಣ ಇದನ್ನ ಹಿಂತಿರುಗಿಸುವೆ’ ಎನ್ನುವ ಮಾತುಗಳನ್ನ ಕೇಳಿದಕ್ಕೆ ಸಾಕ್ಷಿಯಾಗಿದ್ದೇನೆ.
ಕಮ್ಯುನಿಟಿ ಕಿಚನ್ ನಡೆಯುವುದೇ ಹೀಗೆ. ನಮ್ಮಲ್ಲಿ ದೇವಸ್ಥಾನಗಳು ಬಹಳಷ್ಟು ಹಸಿವನ್ನು ನೀಗಿಸುತ್ತಿವೆ. ಆದರೆ ಕಮ್ಯುನಿಟಿ ಕಿಚನ್ ನಮ್ಮಲ್ಲಿ ಬರಬಹುದೇ? ಹಾಗೊಮ್ಮೆ ಬಂದರೂ ಅದನ್ನು ನಾವು ಯಾವ ಮಟ್ಟಕ್ಕೆ ಉಳಿಸಿಕೊಂಡೇವು? ಸರಕಾರ ಮಧ್ಯೆ ಪ್ರವೇಶಿಸಿದರೆ ಅಲ್ಲೂ ಭ್ರಷ್ಟಾಚಾರ ಶುರುವಾಗುತ್ತದೆ ಅಲ್ಲವೇ?
ಘಟನೆ 5: ಕರ್ನಾಟಕದಲ್ಲಿ ಬಸ್ ಫ್ರೀ ಎಂದದ್ದೇ ಕಾರಣ ಮಾಡಿಕೊಂಡು ಅದೆಷ್ಟು ಟ್ರೋಲ್‌ಗಳು, ಬಸ್ ಕಿಟಕಿಯಲ್ಲಿ ಹತ್ತುವುದು, ಬಾಗಿಲು ಮುರಿಯುವುದು ಒಂದೇ ಎರಡೇ? ಅದೆಷ್ಟು ಪ್ರಹಸನಗಳು. ಬಿಟ್ಟಿ ಎಂದ ತಕ್ಷಣ ನನಗೂ ಇರಲಿ ಸತ್ತಪ್ಪನಿಗೂ ಇರಲಿ, ಹುಟ್ಟದಿರುವ ಮಗುವಿಗೂ ಇರಲಿ ಎನ್ನುವ ಗುದ್ದಾಟಕ್ಕೆ ಜನ ಬೀಳುತ್ತಾರೆ. ಬಿಸ್ಕೆಟ್ ಪ್ಯಾಕೆಟ್ ಎಸೆದರೂ ಕ್ಯಾಚ್ ಹಿಡಿಯುತ್ತಾರೆ. ಫ್ರೀ ಬಸ್ ನಲ್ಲಿ ಆರಂಭದಲ್ಲಿದ್ದ ಹೊಡೆದಾಟ ಇಂದಿಗೂ ಮುಂದುವರಿದಿದೆ.
ಅಸಹಾಯಕರಿಗೆಂದು, ನಿಜವಾಗಿಯೂ ಆರ್ಥಿಕವಾಗಿ ದುರ್ಬಲರಿಗೆಂದು ನೀಡುವ ಸೌಲಭ್ಯವನ್ನು ಕೂಡ ನಾವು ಉಪಯೋಗಿಸಿಕೊಳ್ಳುತ್ತೇವೆ. ನಮಗೆ ಅದು ತಪ್ಪು ಎನ್ನಿಸುವುದೇ ಇಲ್ಲ. ಕರೋನ ಕಾಲಘಟ್ಟದಲ್ಲಿ ನಾನಿನ್ನೂ ಬೆಂಗಳೂರು ವಾಸಿಯಾಗಿದ್ದೆ. ನಾನಿದ್ದ ಬಡಾವಣೆಯಲ್ಲಿ ಪ್ರತಿ ಮನೆಯೂ 3 ಕೋಟಿಗೆ ಕಡಿಮೆಯಿಲ್ಲ. ಇಂಥ ಬೆಲೆಬಾಳುವ ಮನೆಯ ಒಡೆಯರು ಸರದಿಯಲ್ಲಿ ನಿಂತು ಕೋವಿಡ್ ಫುಡ್‌ಕಿಟ್ ಪಡೆಯುವುದನ್ನು ಕಣ್ಣಾರೆ ಕಂಡಿದ್ದೇನೆ.
ಒಂದೇಮನೆಯಿಂದ ಇಬ್ಬರು, ಮೂವರು ನಿಂತದ್ದನ್ನು ನೋಡಿದ್ದೇನೆ. ನಿಜವಾದ ಸ್ವಾಭಿಮಾನ ಉಳ್ಳವರು ಹಸಿವಿನಲ್ಲಿ ಇರುತ್ತಾರೆ, ಬೇಡುವುದಿಲ್ಲ. ಕಲಾವಿದರೊಬ್ಬರು ವಾರದಿಂದ ಸರಿಯಾಗಿ ಊಟ ಮಾಡಿಲ್ಲ ಎನ್ನುವ ವಿಷಯ ಕಿವಿಗೆ ಬಿದ್ದಿತು. ಅದನ್ನು ನನ್ನ ಆರ್ ಎಸ್‌ಎಸ್ ಮಿತ್ರರೊಬ್ಬರ ಕಿವಿಗೆ ಹಾಕಿದೆ. ಅವರ ಮನೆ ಬಾಗಿಲಿಗೆ ಅವರು ಫುಡ್‌ಕಿಟ್ ತಲುಪಿಸಿ ಬಂದಿದ್ದರು.
ಬಡತನ-ಸಿರಿತನ ಮತ್ತು ಆತ್ಮಗೌರವ ಬೇರೆ ಬೇರೆ ಅಂಶಗಳು ಅಂತ ಹೇಳುವುದು ಈ ಘಟನೆಯನ್ನು ನಿರೂಪಿಸಿದ ಉದ್ದೇಶ. ನಾನು= ಸ್ವಾಭಿಮಾನ, ಇದನ್ನ ಬೆಳೆಸದೆ ಕಲಿಸದೇ ಏನೇ ಮಾಡಿದರೂ ಈ ದೇಶದ ಉದ್ಧಾರ ಅಸಾಧ್ಯ. ಜಗತ್ತಿನಾದ್ಯಂತ ಭಾರತದ ಅಸ್ಮಿತೆಯನ್ನ, ಭಾರತದ ‘ನಾನು’ ಅಂದರೆ ಸ್ವಾಭಿಮಾನವನ್ನ ಎತ್ತಿಹಿಡಿಯುವ ಕೆಲಸವನ್ನ ಪ್ರಧಾನ ಸೇವಕರು ಮಾಡುತ್ತಿದ್ದಾರೆ. ಆದರೇನು ದೇಶದ ಜನರಲ್ಲಿ, ಆತನ ಪಕ್ಷದ ನೇತಾರರಲ್ಲಿ ನಾನು ಎನ್ನುವ ಸ್ವಾಭಿಮಾನ ತುಂಬದ ಹೊರತು ಬೇರೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ.
‘ದೇಶದ ಜನರಲ್ಲಿ ಆತ್ಮಾಭಿಮಾನವಿಲ್ಲ’ ಎಂದು ನಾವು ಸುಲಭವಾಗಿ ಹೇಳಿಬಿಡಬಹುದು. ಆದರೆ ಒಂದು ದೇಶದ ಜನರಲ್ಲಿ ಒಂದೇ ದಿನದಲ್ಲಿ ದೇಶದ ಬಗ್ಗೆ, ತಮ್ಮ ಬಗ್ಗೆ ಆತ್ಮಾಭಿಮಾನ ಹುಟ್ಟುವು ದಿಲ್ಲ. ಎರಡನೇ ಮಹಾಯುದ್ಧದಲ್ಲಿ ಜರ್ಜರಿತವಾಗಿದ್ದ ಜಪಾನ್ ಇಂದು ವಿಶ್ವದ ಅಗ್ರದೇಶಗಳ ಸಾಲಿನಲ್ಲಿ ನಿಲ್ಲಲು ಹೇಗೆ ಸಾಧ್ಯವಾಯ್ತು? 1985/90ರವರೆಗೂ ನಮಗೂ ಚೀನಾ ದೇಶದ ಆರ್ಥಿಕತೆಗೂ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ.
ಇಂದಿಗೆ ಅವರದು 20 ಟ್ರಿಲಿಯನ್ ಆರ್ಥಿಕತೆ, ನಾವಿನ್ನೂ 4 ಟ್ರಿಲಿಯನ್ ನಲ್ಲಿ ತೆವಳುತ್ತಿದ್ದೇವೆ. ಚೀನಾದಲ್ಲಿ ಕೂಡ ನಮ್ಮ ದೇಶದಷ್ಟೇ ಜನಸಂಖ್ಯೆ ಇದೆಯಲ್ಲ! ಹೀಗಿದ್ದೂ ಅದು ಅಷ್ಟೊಂದು ಮುಂದುವರಿದಿದೆ ಅಲ್ಲವೇ? ‘ನಾವು ಜನಸಂಖ್ಯೆ ಹೆಚ್ಚು’ ಎಂದು ಎಷ್ಟು ದಿನ ನಮಗೆ ನಾವೇ ಮೋಸ ಮಾಡಿಕೊಳ್ಳಲು ಸಾಧ್ಯ? ಒಟ್ಟಾರೆ ದೇಶದ ಮನಸ್ಥಿತಿ ಬದಲಾಗದೆ, ದೇಶ ಬದಲಾಗದು.
ಹೋಗುವ ಮುನ್ನ: ನಿಜವಾದ ಅಶಕ್ತರಿಗೂ ಪುಕ್ಕಟೆ ಎನ್ನುವುದು ಅಭ್ಯಾಸವಾಗಬಾರದು. ಒಂದಷ್ಟು ಸಹಾಯ ನೀಡಿ ಅವರನ್ನ ಕೂಡ ಮುಂಚೂಣಿಗೆ ತರುವ ಕೆಲಸವಾಗಬೇಕು. ಪುಕ್ಕಟೆ ನೀಡಿ ಬರ್ಬಾದ್ ಆದ ದೇಶಗಳು ಬಹಳಷ್ಟಿವೆ, ಉzರವಾದವು ಯಾವುದೂ ಇಲ್ಲ. ನಾನು ಎನ್ನುವ ಆತ್ಮಾಭಿ ಮಾನವಿಲ್ಲದ ಜೀವ, ದೇಹ ಎರಡೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.
ದೇಶದ ಜನರಲ್ಲಿ ತನ್ನ ಬಗ್ಗೆ ಗೌರವ ಬಾರದ ಹೊರತು ಭಾರತವು ಲೇಖನದಲ್ಲಿ, ಪೇಪರ್ ಹೆಡ್‌ಲೈನ್‌ಗಳಲ್ಲಿ ಮಾತ್ರ ವಿಶ್ವಗುರುವಾಗಲು ಸಾಧ್ಯ. ಜಗತ್ತು ಪೂಜಿಸುವ ಶಕ್ತಿಶಾಲಿಯಾಗಬೇಕು, ನಾನು ಎನ್ನುವ ಆತ್ಮಾಭಿಮಾನ ಬೆಳಸಿಕೊಳ್ಳಬೇಕು. ನಿರ್ವೀಯತೆಯೇ ಸಾವು, ಆತ್ಮಾಭಿಮಾನವೇ ಬದುಕು.