ಜನಜಾಗೃತಿ
ಶ್ರೀಕಾಂತ್ ಸಜ್ಜನ್
ವ್ಯಕ್ತಿಗಳ ಕಳ್ಳಸಾಗಣೆ ಅಥವಾ ಹ್ಯೂಮನ್ ಟ್ರಾಫಿಕಿಂಗ್ ಎಂಬುದು ಸಣ್ಣ ಸಮಸ್ಯೆಯೇನಲ್ಲ. ಎಲ್ಲ ದೇಶಗಳೂ ಈ ಸಮಸ್ಯೆಯಿಂದ ತತ್ತರಿಸುತ್ತಿವೆ. ಇದರ ವಿರುದ್ಧ ಜಾಗೃತಿ ಮೂಡಿಸಲು ಒಂದು ದಿನವನ್ನೂ ‘ಮಾನವ ಕಳ್ಳಸಾಗಣೆ ವಿರುದ್ಧ ವಿಶ್ವ ದಿನ’ (ಜು.30) ಎಂದು ಆಚರಿಸುತ್ತವೆ. ಆ ದಿನವನ್ನು ಸಂಯುಕ್ತ ರಾಷ್ಟ್ರ ಸಂಸ್ಥೆ 2013ರಲ್ಲಿ ಘೋಷಿಸಿತು ಮತ್ತು 2014ರಿಂದ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ದಿನದ ಮುಖ್ಯ ಉದ್ದೇಶ ಮಾನವ ಕಳ್ಳಸಾಗಣೆಯಂತಹ ಅಮಾನವೀಯ ಅಪರಾಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವುದು, ಅಪರಾಧಿಗಳನ್ನು ಕಾನೂನಿನ ಮುಂದೆ ತರುವುದು ಮತ್ತು ಸಮಾಜವನ್ನು ಕಳ್ಳಸಾಗಣೆ ಮುಕ್ತವಾಗಿಸಲು ಸರಕಾರ ಹಾಗೂ ನಾಗರಿಕರ ಸಹಭಾಗಿತ್ವ ವನ್ನು ಹೆಚ್ಚಿಸುವುದು. ಆದರೆ ಎಷ್ಟು ಜಾಗೃತಿ ಮೂಡಿಸಿದರೂ, ಎಷ್ಟು ಕಾನೂನುಗಳಿದ್ದರೂ ಈ ಸಮಸ್ಯೆ ಜ್ವಲಂತವಾಗಿಯೇ ಇದೆ.
ಮಾನವ ಕಳ್ಳಸಾಗಣೆ ಇಂದು ವಿಶ್ವದ ಮೂರನೇ ಅತಿ ದೊಡ್ಡ ಸಂಘಟಿತ ಅಪರಾಧವೆಂದು ಪರಿಗಣಿಸಲಾಗಿದೆ. 2000ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯು ಪಾಲೆರ್ಮೊ ಪ್ರೋಟೋಕಾಲ್ ಅನ್ನು ಅಂಗೀಕರಿಸಿತು. ಇದರ ಉದ್ದೇಶ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವುದು, ಅಪರಾಧಿಗಳನ್ನು ಶಿಕ್ಷಿಸುವುದು ಹಾಗೂ ಸಂತ್ರಸ್ತರಿಗೆ ರಕ್ಷಣೆ ಒದಗಿಸುವುದಾಗಿತ್ತು. ನಂತರ 2013ರ ಡಿಸೆಂಬರ್ 18ರಂದು ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜುಲೈ 30 ಅನ್ನು ಇದರ ಕುರಿತು ಜಾಗೃತಿ ಮೂಡಿಸುವ ದಿನವಾಗಿ ಘೋಷಿಸಲಾಯಿತು.
ಇದನ್ನೂ ಓದಿ: Shashidhara Halady Column: ಹಳ್ಳಿಯಲ್ಲಿ ಪ್ರಕಟಗೊಂಡ ನೂರಾರು ಕನ್ಡಡ ಪುಸ್ತಕ !
ಅಂದಿನಿಂದ ಪ್ರತಿ ವರ್ಷ ಈ ದಿನದಂದು ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಬೀದಿ ನಾಟಕಗಳು, ವಿದ್ಯಾರ್ಥಿ ಚಟುವಟಿಕೆಗಳು ಮತ್ತು ಸಾರ್ವಜನಿಕ ಅಭಿಯಾನ ಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಅದು ತಲುಪಬೇಕಾದವರಿಗೆ ಸಾಕಷ್ಟು ತಲುಪುತ್ತಿಲ್ಲ.
ಉದ್ಯೋಗ, ಉತ್ತಮ ಸಂಬಳ, ವಿದೇಶ ಪ್ರವಾಸ, ಶಿಕ್ಷಣ, ಮದುವೆ ಅಥವಾ ಉತ್ತಮ ಜೀವನದ ಹೆಸರಿ ನಲ್ಲಿ ಕೆಳವರ್ಗದ, ಬಡ ಜನರನ್ನು ಮೋಸಗೊಳಿಸಿ, ಬೆದರಿಕೆ ಅಥವಾ ಬಲವಂತದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಲೈಂಗಿಕ ಶೋಷಣೆ, ಬಲವಂತದ ದುಡಿಮೆ, ಬಾಲ ಕಾರ್ಮಿಕತೆ, ಭಿಕ್ಷಾಟನೆ, ಅಂಗಾಂಗ ಕಳ್ಳಸಾಗಣೆ ಅಥವಾ ಬಲವಂತದ ಮದುವೆಗಾಗಿ ಬಳಸುವು ದನ್ನು ವ್ಯಕ್ತಿಗಳ ಕಳ್ಳಸಾಗಣೆ ಎಂದು ಕರೆಯಲಾಗುತ್ತದೆ. ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ.
ಇದನ್ನು ತಡೆಗಟ್ಟಲು ಕೇವಲ ಜಾಗೃತಿ ಸಾಲದು, ಮಾನವೀಯ ಮೌಲ್ಯಗಳನ್ನು ಕಾಪಾಡುವ ಸಂಕಲ್ಪ ಬೇಕು. ಸರಕಾರ, ಪೊಲೀಸ್ ಇಲಾಖೆ, ನ್ಯಾಯಾಂಗ, ಶಿಕ್ಷಣ ಸಂಸ್ಥೆಗಳು, ಸಮಾಜ ಕಾರ್ಯ ಕರ್ತರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಈ ಅಪರಾಧವನ್ನು ತಡೆಗಟ್ಟಲು ಸಾಧ್ಯ. ಸಂತ್ರಸ್ತರಿಗೆ ಗೌರವಯುತ ಜೀವನವನ್ನು ಮರಳಿ ನೀಡುವ ಸಂಕಲ್ಪ ಬೇಕು. ಭಾರತದಲ್ಲಿ ಮಾನವ ಕಳ್ಳಸಾಗಣೆ ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ವಲಸೆ, ಮಹಿಳೆಯರ ಮೇಲಿನ ಅಸಮಾನತೆ ಹಾಗೂ ಉದ್ಯೋಗದ ಸುಳ್ಳು ಭರವಸೆಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತಿವೆ.
ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಾಗೂ ಕೆಲವು ಸಂದರ್ಭಗಳಲ್ಲಿ ವಿದೇಶಗಳಿಗೂ ಕಳ್ಳಸಾಗಣೆ ನಡೆಯುತ್ತಿದೆ. ಮಹಿಳೆಯರು, ಮಕ್ಕಳು, ವಲಸೆ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸದಸ್ಯರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಗಳ ಪುಕಾರ ಭಾರತದಲ್ಲಿ ಪ್ರತಿವರ್ಷ ಸುಮಾರು 2000-2500 ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗುತ್ತವೆ. 2022ರ ಎನ್‌ಸಿಆರ್‌ಬಿ ವರದಿಯ ಪ್ರಕಾರ 2250ಕ್ಕೂ ಹೆಚ್ಚು ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ. 6500ಕ್ಕೂ ಹೆಚ್ಚು ಸಂತ್ರಸ್ತರನ್ನು ಗುರುತಿಸಿ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಂಡು ಮಕ್ಕಳಿಗಿಂತ ಹೆಚ್ಚಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ಆರೋಪಿಗಳನ್ನು ಬಂಧಿಸಲಾಗಿದೆ. ತಜ್ಞರ ಅಭಿಪ್ರಾಯ ದಂತೆ, ಅನೇಕ ಪ್ರಕರಣಗಳು ದಾಖಲಾಗದೇ ಉಳಿಯುವುದರಿಂದ ನೈಜ ಸಂಖ್ಯೆ ಇನ್ನೂ ಹೆಚ್ಚಿರಬಹುದು.
ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಕರ್ನಾಟಕ ಹಾಗೂ ದೆಹಲಿಯಲ್ಲಿ ಮಾನವ ಕಳ್ಳಸಾಗಣೆಯ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಈ ಪ್ರದೇಶಗಳಲ್ಲಿ ಬಡತನ, ವಲಸೆ ಮತ್ತು ಉದ್ಯೋಗದ ಕೊರತೆ ಪ್ರಮುಖ ಕಾರಣಗಳಾಗಿವೆ. ನಿರುದ್ಯೋಗ, ಶಿಕ್ಷಣದ ಕೊರತೆ, ಉದ್ಯೋಗದ ಸುಳ್ಳು ಭರವಸೆ, ಬಾಲ್ಯ ವಿವಾಹ, ಕುಟುಂಬದ ಸಮಸ್ಯೆಗಳು, ಲಿಂಗ ಅಸಮಾನತೆ, ಆನ್‌ಲೈನ್ ಮೋಸ, ಸಾಮಾಜಿಕ ಜಾಲತಾಣಗಳ ದುರುಪಯೋಗ, ಪ್ರಕೃತಿ ವಿಕೋಪಗಳು ಹಾಗೂ ವಲಸೆ ಇವುಗಳು ಕೂಡಾ ಪ್ರಮುಖ ಕಾರಣಗಳಾಗಿವೆ.
ಲೈಂಗಿಕ ಶೋಷಣೆ, ಬಲವಂತದ ದುಡಿಮೆ, ಬಾಲಕಾರ್ಮಿಕತೆ, ಭಿಕ್ಷಾಟನೆ, ಬಾಲ್ಯದಲ್ಲಿಯೇ ಮದುವೆ, ಅಂಗಾಂಗ ಕಳ್ಳಸಾಗಣೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸುವುದು ಕಳ್ಳಸಾಗಣೆಯ ಉದ್ದೇಶಗಳಾಗಿರಬಹುದು.
WOOD FOR Immoral Traffic (Prevention) Act 1956, POCSO Act 2012, Bonded Labor System (Abolition) Act 1976 ಹಾಗೂ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita) ಸೇರಿದಂತೆ ವಿವಿಧ ಕಾನೂನುಗಳ ಮೂಲಕ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುತ್ತಿದೆ. ರಾಜ್ಯ ಗಳಲ್ಲಿ Anti Human Trafficking Units (AHTUs) ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಸಹಾಯ ವಾಣಿ 1098 ಸೇರಿದಂತೆ ವಿವಿಧ ವ್ಯವಸ್ಥೆ ಗಳ ಮೂಲಕ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರತಿಯೊಬ್ಬರೂ ಉದ್ಯೋಗದ ಹೆಸರಿನಲ್ಲಿ ಬರುವ ಅಪರಿಚಿತರ ಆಮಿಷಗಳಿಗೆ ಒಳಗಾಗಬಾರದು. ಉದ್ಯೋಗದ ಮಾಹಿತಿಯನ್ನು ಪರಿಶೀಲಿಸಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ಪೊಲೀಸರಿಗೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಬೇಕು. ಗ್ರಾಮ, ಶಾಲೆ, ಕಾಲೇಜು ಹಾಗೂ ಸಮುದಾಯಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು.
ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ಎಂಬುದು ಸರ್ವಜ್ಞನ ತ್ರಿಪದಿ. ಇದರಂತೆ ಬೇರೆಯವರನ್ನು ನಮ್ಮಂತೆಯೇ ಭಾವಿಸುವ ಗುಣದಿಂದ ಮುಕ್ತಿ ಅಥವಾ ಕೈಲಾಸ ನಮ್ಮ ಕೈಗೆ ಬಂದಂತೆ ಸುಲಭವಾಗುತ್ತದೆ. ಮಾನವ ಕಳ್ಳಸಾಗಣೆ ಸಮಾಜದ ಅಭಿವೃದ್ಧಿಗೆ ದೊಡ್ಡ ಸವಾಲಾಗಿದೆ. ಇದನ್ನು ತಡೆಗಟ್ಟಲು ಸರಕಾರ, ಪೊಲೀಸ್ ಇಲಾಖೆ, ನ್ಯಾಯಾಂಗ, ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆ ಗಳು, ಸಮಾಜ ಕಾರ್ಯಕರ್ತರು ಮತ್ತು ಪ್ರತಿಯೊಬ್ಬ ನಾಗರಿಕರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು.
ಮಾನವನು ಮಾರಾಟದ ವಸ್ತುವಲ್ಲ. ಗೌರವಯುತ ಬದುಕುವ ಹಕ್ಕು ಹೊಂದಿರುವ ವ್ಯಕ್ತಿ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಕಳ್ಳಸಾಗಣೆ ಮುಕ್ತ ಭಾರತ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.